ಅಂಕಣಗಳು

Subscribe


 

ಶತಾವಧಾನಿ ಡಾ | ಆರ್ ಗಣೇಶ್

Posted On: Thursday, November 6th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಶತಾವಧಾನಿ ಡಾ | ಆರ್ ಗಣೇಶ್ ಅವರನ್ನು ಯಾರಿಗೆ ತಾನೇ ತಿಳಿದಿಲ್ಲ? ಸಮಕಾಲೀನ ಯುಗದಲ್ಲಿ ಯಾವುದೇ ವಿಷಯದ ಕುರಿತಾಗಿ ಪ್ರಬುದ್ಧವಾಗಿ, ಪ್ರಗತಿಪರ ದೃಷ್ಟಿಯಿಂದ ಮಾತನಾಡಬಲ್ಲ ವಾಗ್ಮಿ. ದರ್ಶಿಸಿ-ಸಂದರ್ಶಿಸಿದ ಹೊತ್ತಿನಲ್ಲಿ ಅವರ ಮಾತಿನ ಕೆಲವು ನೆನಪುಗಳು ವಿಶೇಷ ಸಂಚಿಕೆಯ ಈ ಹೊತ್ತಿಗೆ ನಿಮಗಾಗಿ ಇಲ್ಲಿವೆ. ಬದಲಾವಣೆಗಳ ಪ್ರಸ್ತುತತೆ ಮತ್ತು ಪರಿಣಾಮಕಾರಿ ಸಂವಹನ ಎಂಬ ಪ್ರಶ್ನೆಗೆ ಅವರಿತ್ತ ಉತ್ತರ ರೂಪದ ಸಂವಾದ ನಿಮ್ಮ ಮುಂದೆ.

…ಆಯಾಯ ಸಂಪ್ರದಾಯಕ್ಕೆ ತಕ್ಕಂತೆ ಅರ್ಥ ವ್ಯತ್ಯಾಸವಾಗುತ್ತದೆ. ಯಾವುದು ಲೋಕಧರ್ಮಿಗೆ ನಿಕಟವಾಗಿಯೂ, ಆಕರ್ಷಕವಾಗಿಯೂ ತೋರುತ್ತದೋ ಅದು ಬೇಗನೆ ಅರ್ಥವಾಗಬಲ್ಲದು. ಇನ್ನು ಸಂವಹನದ ಸೌಲಭ್ಯಕ್ಕೆ ಅಂತ ಬದಲಾಯಿಸುತ್ತಾ ಅಥವಾ ಬಹಳಷ್ಟು ಸರಳಗೊಳಿಸುತ್ತಾ ಹೋದರೆ ಅದರಿಂದ ಅಪಾಯಗಳು ಇಲ್ಲದಿಲ್ಲ. ಹಾಗಾಗಿಯೇ ಅದಕ್ಕೊಂದು ಆರೋಗ್ಯಕರವಾದ ಬಂಧ ಇರುತ್ತದೆ. ಉದಾ: ಹಾಲಿಗೆ ನೀರು ಎಷ್ಟು ಹಾಕಬಹುದು ಎಂಬ ಹದದ ಅರಿವು ಹಾಕುವವರಿಗೆ ಆಗುತ್ತದೆ. ಹಾಗೆಯೇ ಯಾವುದು ನಮ್ಮೊಳಗೆ ಸೊಗಸಿನ ಕಲೆಯೆಂಬುದಿದೆಯೋ ಮತ್ತು ನೈಜಕಲೆ ಎಂಬುದಿದೆಯೋ ಅದರ ಮಧ್ಯೆ ಇರುವ ವ್ಯತ್ಯಾಸಕ್ಕೆ ಒಂದು ಅಳತೆಯೆಂಬುದಿದೆ. ಅದು ನಮ್ಮೊಳಗೇ ಇರುತ್ತದೆ ಮತ್ತು ಗೊತ್ತಾಗಬಲ್ಲುದೂ ಕೂಡಾ! ಒಬ್ಬ ಸಂಸ್ಕಾರ ಸಂಪನ್ನ ಕಲಾವಿದನಿಗೆ ಅದು ತಿಳಿಯುತ್ತದೆ. ಆಗ ಬದಲಾವಣೆ ಮಾಡಿಕೊಳ್ಳಬಹುದು. ಆದರೆ ಪ್ರಾಚೀನವಾದದ್ದು, ಪರಂಪರೆ ಶಾಸ್ತ್ರಗಳಿಂದ ಬಂದಿರುವುದರಿಂದ ಕಾಯ್ದುಕೊಳ್ಳಬೇಕು ಎಂದು ಹೊರಟರೆ, ಬಹಳ ವ್ಯವಸ್ಥಿತ, ಶ್ರಮದಿಂದ ಅದನ್ನು ಮಾಡಲು ಹೊರಟರೂ, ಶಸ್ತ್ರಚಿಕಿತ್ಸೆ ಯಶಸ್ವಿ, ಆದರೆ ರೋಗಿ ಮಾತ್ರ ಸತ್ತ ಎಂದಾಗಬಹುದು. ಆಗ ಕಲೆಯ ಶವವನ್ನು ಕಾಣಬೇಕೇ ವಿನಃ ಕಲಾನುಭವ ಅಲ್ಲ. ಲೆಕ್ಕಾಚಾರವಾಗಿ ಮಾಡಲು ಹೊರಟರೆ ನೃತ್ಯ ಭಾವ-ರಸ ಕಳೆದುಕೊಂಡು ಯಾಂತ್ರಿಕವಾಗುತ್ತ ಸಾಗುತ್ತದೆ. ಹಾಗಾಗಿ ರಸ-ಭಾವಗಳಿಂದ ಮಾಡುವಾಗ ಕೆಲವೊಂದು ವಿವರಣೆಗಳು ಇಲ್ಲದೇ ಇದ್ದರೂ ಕೂಡಾ, ಸಂವಹನವಾಗಬಲ್ಲದು. ಆದ್ದರಿಂದ ಯಾವಾಗಲೂ ವಿವರಣೆಗಳು ರಸ-ಭಾವಗಳಿಗೆ ಅಂಗಭೂತ (ಅಥವಾ ಪೂರಕ) ವಾಗಿರಬೇಕು.

ಆನಂದ ಎಂದರೆ mಚಿಣeಡಿiಚಿಟism ಕಡಿಮೆ ಆಗುವುದು. ಎಲ್ಲವೂ ಎಲ್ಲರಿಗೂ ಅಲ್ಲ; ಎಲ್ಲರ ಹಣೆಗೆ ತಿಕ್ಕಬೇಕಾಗಿಯೂ ಇಲ್ಲ. ಅರ್ಥವಾಗುವ ದೃಷ್ಟಿಯಿಂದ ಪ್ರಮುಖವಾಹಿನಿಗೆ ತರಬೇಕೆಂದು ಹೊರಟರೆ ಅದು ಚರಂಡಿ ಪಾಲಾಗುವುದು ಖಂಡಿತ. ಆದ್ದರಿಂದಲೇ ಹೇಳುವುದು. ಸಂವೇದನಾ ಶೀಲನಾದ ವ್ಯುತ್ಪನ್ನನಿಗೆ ಯಾವುದೂ ಕೂಡಾ ಅರ್ಥವಾಗುತ್ತದೆ. ನಿಜವಾಗಿಯೂ ಸಂಸ್ಕಾರಸಂಪನ್ನ, ಕಲಾವಂತ ರಸಿಕನಿಗೆ ಕಲಾವಿದನಿಗೆ ಒಬ್ಬರು ರಸಭಾವ ತತ್ಪರತೆಯಿಂದ ನೃತ್ಯ ಮಾಡುವಾಗ ಎಲ್ಲವೂ ಕಲಾತ್ಮಕವಾಗಿ, ಶಾಸ್ತ್ರೀಯವಾಗಿಯೇ ಕಾಣಲ್ಪಡುತ್ತದೆ.

ಟಿ. ವಿ. ಬರುವುದಕ್ಕಿಂತ ಮುಂಚೆ ದೂರದರ್ಶನ ಎಂಬ ಶಬ್ದ ಇತ್ತೇ? ಇರಲಿಲ್ಲ. ನಂತರ ದೂರ ಮತ್ತು ದರ್ಶನ ಈ ಎರಡೂ ಶಬ್ದ ಸೇರಿಸಿ ದೂರದರ್ಶನ ಎಂದು ಮಾಡಿದರು. ರೇಡಿಯೋ ಬರುವುದಕ್ಕಿಂತ ಮುಂಚೆ ಬಾನು ಮತ್ತು ‘ಉಲಿ ಎರಡೂ ಬೇರೆ ಶಬ್ದಗಳು. ಬಾನುಲಿ, ಆಕಾಶವಾಣಿ ಎಂಬ ಶಬ್ದಗಳು ಹೊಸತಾಗಿ ರೂಪ ಪಡೆದವುಗಳಲ್ಲವೇ? ಹಾಗೆಯೇ ಪ್ರತಿಭಾಶಾಲಿಯಾದವನು ಶಾಸ್ತ್ರಕ್ಕೆ ವಿರುದ್ಧವಾಗದಂತೆ ಶಾಸ್ತ್ರವನ್ನು ಬೆಳೆಸುತ್ತಾನೆ, ತಾನೂ ಬೆಳೆಯುತ್ತಾನೆ. ಹಾಗೆಂದು ಶಾಸ್ತ್ರವನ್ನು ಮೀರಿ ಹೋಗಬಾರದೆನ್ನುವ ನಿಯಮ ಮಾಡುವವರು ಶಾಸ್ತ್ರವು ರಕ್ಷಣೆಗೆ ಬೇಕು ಎನ್ನುವ ಕಾಳಜಿ ಇರುವವರು. ಆದರೆ ಶಾಸ್ತ್ರ ರಕ್ಷಣೆ ಮಾಡಬೇಕೆಂದುಕೊಂಡು ಶಾಸ್ತ್ರವನ್ನೇ ಕೊಳೆಯಿಸುವುದು ತಪ್ಪಲ್ಲವೇ? ಹೀಗೆಂದು ಶಾಸ್ತ್ರರಕ್ಷಣೆಯ ಸಮರ್ಥನೆ ಮಾಡುವವರು ಹಲವಾರು ಮಂದಿ ಶಾಸ್ತ್ರದ ಪೂರ್ಣ ಅರಿವನ್ನು ಪಡೆದುಕೊಳ್ಳದೇ ಹೋಗುವವರೇ ಆಗಿದ್ದಾರೆ. ಅವರು ಓದಿರುವ ಅಂಶಗಳೇ ಕಡಿಮೆ. ಅದರಲ್ಲೂ ಇಂದು ಕರ್ನಾಟಕದಲ್ಲಿ ನಾಟ್ಯಶಾಸ್ತ್ರ, ಅಭಿನಯದರ್ಪಣ, ಭರತಾರ್ಣವ ಎಂದು ಪುಟ-ಪುಟವೂ ಓದಿರುವವರು ಯಾರೂ ಇಲ್ಲ. ಹಾಗಿರುವಾಗ ಇಂತವರು ತಾವು ಮಾಡಿದ್ದೇ ಶಾಸ್ತ್ರ ಎಂದು ತೇಪೆ ಹಾಕುವವರೂ ಆಗುತ್ತಾರೆ.

ಭತ್ತದ ಬೀಜವೊಂದನ್ನು ಕೊಟ್ಟು ನೂರು ವರ್ಷ ಉಳಿಸಿಕೊಳ್ಳಬೇಕು ಎಂದರೆ ಹೇಗೆ ಉಳಿಸಿ ಕೊಳ್ಳಬಹುದು? ಬಿತ್ತಿಯೇ ಬೆಳೆಸಿ ಉಳಿಸಿಕೊಳ್ಳಬೇಕಲ್ಲವೇ? ಅಂತೆಯೇ ಶಾಸ್ತ್ರವನ್ನು ನಮ್ಮ ಅನುಭವದ ನೆಲದಲ್ಲಿ ಬಿತ್ತಿ, ಮತ್ತೆ ಅದನ್ನೇ ಬೆಳೆದು ನಂತರ ಅದನ್ನು ಇನ್ನೊಂದು ಅನುಭವದ ನೆಲದಲ್ಲಿ ಬೆಳೆಯುತ್ತಾ ಹೋಗಬೇಕು. ಪ್ರಯೋಗಗಳು ಶಾಸ್ತ್ರವಿರೋಧವಾಗಬಾರದು, ಆದರೆ ಶಾಸ್ತ್ರವೇ ಪ್ರಯೋಗವಿರೋಧವಾಗಬಾರದೂ ಕೂಡಾ. ರಾಜಾಜಿಯವರು ಹೇಳುವಂತೆ ಅಡಿiಣiಛಿism shouಟಜ ಟಿoಣ beಛಿome ಣhe ಛಿoಟಿಣಡಿಚಿsಛಿeಠಿಣive oಜಿ ಛಿಡಿeಚಿಣiviಣಥಿ. ಭರತನೇ ನಾಟ್ಯಶಾಸ್ತ್ರದಲ್ಲಿ ಹೇಳಿರುವಂತೆ ತಮ್ಮ ಅನುಭವದಿಂದ ಮುಂದೆ ಅದನ್ನು ವಿಸ್ತರಿಸಿಕೊಳ್ಳಿರಿ ಎಂದು! ಪರಂಪರೆಯಿಂದ ಮುಂದುವರೆಸಿಕೊಂಡು ಬಂದದ್ದನ್ನು ಮತ್ತಷ್ಟು ಬೆಳೆಸಬೇಕು!

ಶಾಸ್ತ್ರದ ವಿವರಣೆ ಬದಲಾಗುತ್ತಿರುತ್ತದೆ. ಸತ್ವ, ತತ್ವ ಒಂದೇ ಆಗಿರುತ್ತದೆ. ಉದಾ: ಬಾ‌ಎಂದು ಕರೆಯುವ ಹಸ್ತವನ್ನು ಹೋಗು ಎಂದು ಮಾಡಿ ಬಾ ಎನ್ನಲು ಸಾಧ್ಯವೇ? ಕಿರೀಟ ಎಂದು ಕಾಲಮೇಲೆ ತೋರಿಸಿದರೆ ಆಗುತ್ತದೆಯೇ? ಸಾಧ್ಯವಿಲ್ಲ. ಹಾಗಾಗಿ ಹಳೆಯ ಮತ್ತು ಹೊಸತರ ನಡುವಿನಲ್ಲಿ ಒಂದು ಸ್ವಾರಸ್ಯಕರವಾದ ಸ್ಥಾನ ಇರುತ್ತದೆ. ಹಳತರ ಸ್ಫೂರ್ತಿಯಿಂದಲೇ ಹೊಸತರ ಜನನ. ಆದರೆ ಈಗಿನ ನೂತನ ಪ್ರಯೋಗಗಳೆಲ್ಲದರ ಉದ್ದೇಶ ಸಾಮಾನ್ಯವಾಗಿ ಒಂದೇ ಆಗಿರುತ್ತದೆ; ಹಳತೆಲ್ಲವನ್ನು ತೊಳೆದು ಒರೆಸಿ, ಬೆಂಕಿಗಿಕ್ಕಬೇಕು ಎಂದೇ! ಆದರೆ ನೆನಪಿನಲ್ಲಿಡಬೇಕಾದದ್ದು, ಹೊಸ ವಾಕ್ಯಗಳನ್ನು ರಚಿಸಬಹುದು. ಆದರೆ ಹೊಸ ಅಕ್ಷರಗಳನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ. ಅಕ್ಷರ-ಪದಗಳು ಪ್ರಾಚೀನ, ವಾಕ್ಯರಚನೆ ನವನವೀನ, ವಾಕ್ಯರಚನೆಯ ಹಿಂದಿನ ವ್ಯಾಕರಣವೂ ತಕ್ಕ ಮಟ್ಟಿಗೆ ಪ್ರಾಚೀನವೇ ಸರಿ!

ಮನುಷ್ಯರ ಚರ್ಮದ ಪದರ ಏಳೇಳು ದಿವಸಗಳಿಗೊಂದಾವರ್ತಿ ಬದಲಾಗುತ್ತಿರುತ್ತವೆ. ಹಾಗಂತ ಹೊಸತು ಶರೀರ ಎಂದು ಹೇಳಲಾಗುವುದಿಲ್ಲ. ಶರೀರ ಪ್ರಾಚೀನವೇ ಆಗಿದ್ದು, ಅದರ ಮೇಲಿರುವ ಚರ್ಮ ಆಗಾಗ ಬದಲಾಗುತ್ತಿರುವುದರಿಂದ ಅದರಲ್ಲಿ ನೂತನವನ್ನು ಕಂಡುಕೊಳ್ಳಬಹುದು. ಹಾಗಾಗಿ ಇದರಲ್ಲಿ ಅನಿರ್ವಚನೀಯತೆಯೇ ಹೆಚ್ಚು. ಮಾಧ್ಯಮದ ಸೌಂದರ್ಯತೆಯನ್ನು ಅದರ ಅಸ್ತಿತ್ವದಲ್ಲೇ ಕಂಡುಕೊಳ್ಳಬೇಕು. ಆಗ ಸಂವಹನ ಸುಲಭ.

ಬದಲಾವಣೆಗಳ ಬಗ್ಗೆ ಹೇಳುವುದಾದರೆ, ನೋಡುವವರ್‍ಯಾರು ಎನ್ನುವುದರ ಮೇಲೆ ಎಲ್ಲವೂ ಅವಲಂಬಿಸಿರುತ್ತದೆ. ನೋಡುವವರು ಆಯಾಯ ಪ್ರದೇಶದವರಾದರೆ ತೊಂದರೆಯಿಲ್ಲ. ಬೇರೆಯವರಾದಾಗ ಮುಜುಗರವಾಗುತ್ತದೆ. ಅಷ್ಟಕ್ಕೂ ಶಾಸ್ತ್ರದ ಸ್ವರೂಪ ಎನ್ನುವುದು ಅದರ ಪ್ರಸ್ತುತತೆಗೇ (ಚಿಛಿಛಿeಠಿಣಚಿbiಟiಣಥಿ). ನಂತರ ಅದರ ಬಣ್ಣ, ತೂಕ ನಿರ್ಧರಿತವಾಗಿ ಕರಡು ಪ್ರತಿ ಉಳಿದುಕೊಳ್ಳುತ್ತದೆ. ಪ್ರಸ್ತುತತೆ ಎನ್ನುವುದು ಮಾತ್ರ ಮುಖ್ಯ.

ಲೋಕಕ್ಕೆ ನಿಕಟವಾಗಿರುವುದು ಹೆಚ್ಚು ಅರ್ಥವಾಗುತ್ತದೆ. ಭರತನು ಹೇಳುವಂತೆ ನಾಟ್ಯಶಾಸ್ತ್ರಕ್ಕೆ ಮೂರು ಪ್ರಮಾಣಗಳಿವೆ- ವೇದ ಲೋಕ, ಆಧ್ಯಾತ್ಮ. ವೇದ ಎಂದರೆ ಜ್ಞಾನದ ಕೀಲಿಕೈ, ಪರಂಪರೆ. ಲೋಕ ಎಂದರೆ ನಿತ್ಯ ಜೀವನದ ಹೊಳಹುಗಳು, ಆಧ್ಯಾತ್ಮ ಎಂದರೆ ನಮ್ಮ ಅನುಭವ. ಹಾಗಾಗಿ ಒಂದು ದೇಶದಲ್ಲಿರುವ ಸಾಮಾನ್ಯ ಜನರ ವರ್ತನೆ ಅಲ್ಲಿನ ಗುಣವನ್ನು ಅವಲಂಬಿಸಿ ಅರ್ಥವಾಗುತ್ತದೆ. ಉದಾ: (ಅಭಿನಯ ಮಾಡುವಾಗ) ಉತ್ತರ ಕನ್ನಡದಲ್ಲಿ ನೆಲ ಸಾರಿಸುವಾಗ ಅಡಿಕೆ ತಟ್ಟೆಯನ್ನು ತೆಗೆದುಕೊಂಡು ನೆಲ ಸಾರಿಸುತ್ತಾರೆ. ಅದೇ ಬೇರೆ ಕಡೆ ಅದು ಅರ್ಥವಾಗಲಿಕ್ಕಿಲ್ಲ. ಬೇರೆ ಕಡೆ ಸಾಮಾನ್ಯವಾಗಿ ಕೈಯಲ್ಲಿ ಉಜ್ಜುವಂತದ್ದು ರೂಢಿ. ಹೀಗೆ ಲೋಕ ಗ್ರಹಿಸುವ ಪ್ರಕಾರ ಅದರ ಅರ್ಥ ನಿರ್ಧರಿತ. ಶಾಸ್ತ್ರದಲ್ಲಿಯೂ ವ್ಯತ್ಯಾಸಗಳಿದ್ದು ಭಾವಗಳು ಅನುಭವದ ನೆಲೆಯಲ್ಲಿ ವಿಸ್ತರಿಸಿಕೊಳ್ಳುತ್ತವೆ.

ಶಾಸ್ತ್ರೀಯವಾಗಿದೆ ಎನ್ನುವ ಕಾರಣಕ್ಕೆ ಅರ್ಥವಾಗುವುದಿಲ್ಲ ಎನ್ನುವುದು ಸುಳ್ಳು… ಪದ್ಮಾ ಸುಬ್ರಹ್ಮಣ್ಯಂ ಒಂದೆಡೆ ಹೇಳುತ್ತಾರೆ… ‘ಅಪ್ಪ ಹಾಕಿದ ಆಲದ ಮರ ಎಂದು ಮಾಡಲು ಹೊರಟರೆ ಏನೂ ತಿಳಿಯಲಾರದು… ಓರ್ವ ದಾರಿಹೋಕನನ್ನು ಕರೆತನ್ನಿ… ತಾನು ಶಂಕರಾದ್ವೈತವನ್ನೇ ಅರ್ಥ ಮಾಡಿಸಬಲ್ಲೆ ಎಂದು!… ಆದ್ದರಿಂದ ಸಮರಸವಾಗಿ ಸೇರಿಕೊಳ್ಳುವುದು ಮುಖ್ಯ ಎಂದರ್ಥ. ಕಲಿತದ್ದನ್ನಷ್ಟೂ ಮರೆತು ರಂಗಕ್ಕೆ ಹೋದರೆ ಮಾತ್ರ ನಿಜವಾಗಿ ಸಂವಹನದ ಸಾಧ್ಯತೆ ಸಾಧ್ಯ. ಹಾಗಂತ ಕಲಿತದ್ದನ್ನು ಬಿಡಬೇಕೆಂದು ಅರ್ಥವಲ್ಲ.

ಉದಾ: ಲೋಕವ್ಯವಹಾರದಲ್ಲಿ ನಾವು ಪಠ್ಯದಲ್ಲಿರುವಂತೆಯೇ ಮಾತನಾಡುತ್ತೇವೆಯೇ? ಇಲ್ಲಿ ಪಠ್ಯದ ಸಂಸ್ಕಾರ ಉಳಿಸಿಕೊಂಡು ಅದರ ರೂಪವನ್ನು ಬಿಡುತ್ತೇವೆ… ಹಾಗೆಯೇ ನೃತ್ಯವೂ ಕೂಡಾ! ಯಾವುದನ್ನೂ ಕಚ್ಚಾವಸ್ತುವಾಗಿ ತೆಗೆದುಕೊಳ್ಳುವುದಿಲ್ಲ. ಅದನ್ನು ಜೀರ್ಣಿಸಿಕೊಂಡು ಸೂಕ್ತವಾದ ರೀತಿಯಲ್ಲಿ ಪ್ರಸರಣಗೊಳ್ಳುವಂತಾಗಬೇಕು. ಈಗಿನ ಕಲಾವಿದರು ರಸ-ಭಾವಗಳ ತಾತ್ಪರ್ಯವಿಲ್ಲದೆ ರಂಗಸ್ಥಳದ ಮೇಲೆ ಹಸಿ ಹಸಿಯಾಗಿ ನಿರ್ಜೀವವಾಗಿ ನೃತ್ಯವನ್ನು ವಾಂತಿ ಮಾಡಿಕೊಳ್ಳುವುದರಿಂದಲೇ ಸಂವಹನ ಕಷ್ಟಕರ. ಜೊತೆಗೆ ಪ್ರೇಕ್ಷಕರೂ ಕೂಡಾ ಭರತನಾಟ್ಯ ನೋಡಬೇಕೆಂದು ಹೋಗುತ್ತಾರೆಯೇ ವಿನಃ ನಾಟ್ಯ ನೋಡಬೇಕೆಂದು ಹೋಗುವುದಿಲ್ಲ. ಹೀಗಿದ್ದಾಗರ್ಥ ವಾಗುವುದು ಅಥವಾ ಸಂವಹನ ಸಾಧಿತವಾಗುವುದಾದರೂ ಹೇಗೆ?

ಅರ್ಥಮಾಡಿಕೊಳ್ಳುವುದು ಮುಖ್ಯವೇ ಹೊರತು ಅದನ್ನು ಹೊತ್ತು ತರುವ ಭಾಷೆ ಅಷ್ಟು ಪ್ರಮುಖವಾದುದಲ್ಲ. ‘ಅರ್ಥಮಾಡಿಕೊಳ್ಳಬೇಕು’ ಎನ್ನುವ ಆಸಕ್ತಿ ಇದ್ದಾಗ ಪ್ರೇಕ್ಷಕರಿಗೂ ಅರ್ಥವಾಗುತ್ತದೆ. ಕಲಾವಿದರು ಶ್ರದ್ಧೆಯಿಂದ ಅರ್ಥ ಮಾಡಿಸುತ್ತಾರೆ. “ಸಾಂಪ್ರದಾಯಿಕ ಗುರುಪರಂಪರೆಗೆ ಬದ್ಧನಾಗಿ ಮಾಡುತ್ತೇನೆ ಎಂದು ಹೊರಡುವ ಕಲಾವಿದರನೇಕರು ಮಾಡುವುದು ಕಲೆಗೆ ತರ್ಪಣ ಬಿಡುವ ಕೆಲಸವನ್ನೇ ಹೊರತು ಬೇರೇನಲ್ಲ. ಸತ್ವಶುದ್ಧಿಯಿರುವ ಕಲಾವಿದನಿಗೆ ಪರಂಪರೆಯ ಬಗ್ಗೆ ನಮ್ರತೆಯೂ ಇರುತ್ತದೆ; ಸ್ವಾನುಭವ ನಿಷ್ಟವಾಗಿ ಮಾಡಬೇಕೆನ್ನುವುದರ ಬಗ್ಗೆ ಆತ್ಮವಿಶ್ವಾಸವೂ ಇರುತ್ತದೆ.

ಹಾಗೆಂದಮಾತ್ರಕ್ಕೆ ಕಲೆ ಅರ್ಥಮಾಡಿಕೊಳ್ಳುವವರಿಗೆ ಮಾತ್ರ ಎನ್ನುವುದನ್ನೂ ಒಪ್ಪಲೇಬೇಕಾಗುತ್ತದೆ. ಆದರೆ ಸರಳವಾದ ಕನ್ನಡದಲ್ಲಿ ಬರೆದ ಮಾತ್ರಕ್ಕೆ ಮಂಗೋಲಿಯನ್ನನಿಗೂ ಅರ್ಥವಾಗಬೇಕು ಎಂದರೆ ಅದು ಮೂರ್ಖತನ. ಹಾಗೆಯೇ ಒಬ್ಬ ತಕ್ಕ ಮಟ್ಟಿಗೆ ವ್ಯುತ್ಪನ್ನನಾದ ರಸಿಕನಿಗೆ ಕಲೆ ಅರ್ಥವಾಗುವುದಿಲ್ಲ, ಆನಂದ ತರುವುದಿಲ್ಲ, ಎಂದಾದರೆ ಅದು ಕಲೆಯಾಗಿರುವುದಿಲ್ಲ. ಆದ್ದರಿಂದ ಶಾಸ್ತ್ರ, ವೇದ, ಅನುಭವಗಳಲ್ಲೂ ಪರಿಣತನಾದವನಿಗೆ ಅರ್ಥ ಮಾಡಿಸಲು ವಿಫಲವಾಗುತ್ತಾನೆಂದರೆ ಅದು ಹಸ್ತಗಳ ಶಾಸ್ತ್ರೀಯತೆಯ ಬಗೆಗಿನ ದೂರು ಅಲ್ಲ. ಬದಲಾಗಿ ಕಲಾವಿದನ ವೈಫಲ್ಯತೆ. ಇದಕ್ಕೆ ಕಾರಣವೂ ಇದೆ. ಬಹುಪಾಲು ಕಲಾವಿದರು ಸುರಕ್ಷಿತ ಜಾಗದಲ್ಲಿ ನಿಲ್ಲಲು ಬಯಸುತ್ತಾರೆ. ಅಂದರೆ ಪ್ರೇಕ್ಷಕರಿಗೆ ಅರ್ಥವಾಗದಿದ್ದರೂ ಪರವಾಗಿಲ್ಲ…! ಅಶಾಸ್ತ್ರೀಯ ಎಂದು ಹೇಳಬಾರದು ಎನ್ನುವ ಆತಂಕ, ಅಸ್ತಿತ್ವ ಸಮಸ್ಯೆ.

ಪ್ರತಿಭಾಹೀನರಿಗೆ ಶಾಸ್ತ್ರ ಒಂದು ರಕ್ಷಣೆ, ಹಾಗೇನೆ ಪ್ರತಿಭಾಹೀನರಿಗೆ ಪ್ರಯೋಗವೂ ಒಂದು ರಕ್ಷಣೆ. ಇದೊಂದು ವಂಚನೆ ಆದರೆ, ಇನ್ನೊಂದು ಬಗೆಯ ವಂಚನೆ ಎಂದರೆ ಇದನ್ನು ಸಮರ್ಥಿಸಿಕೊಳ್ಳುತ್ತಾ ನೂತನ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಾ ಜನರಿಗೆ ಅರ್ಥ ಮಾಡಿಸುವುದು ಮುಖ್ಯವಾಗಬೇಕು ಎನ್ನುವ ಸೋಗು ಹಾಕಿಕೊಳ್ಳುವುದು. ಕಣ್ಣೀರು ಎಂದರೆ ಖಾರ, ಸಿಹಿ ಎಂಬ ವ್ಯತ್ಯಾಸವಿದೆಯೇ? ದ್ರೌಪದಿಯದ್ದು ಬೇರೆ, ಸೀತೆಯದ್ದು ಬೇರೆ ಎನ್ನಲಿಕ್ಕಾಗುತ್ತದೆಯೇ? ಎಲ್ಲಾ ಕಾಲದಲ್ಲೂ ನಗು, ಅಳುವಿನ ಮೂಲ ಅಸ್ತಿತ್ವ ಒಂದೇ ಅಲ್ಲವೇ…? ಅಂತೆಯೇ ರಸಭಾವಗಳ ಸ್ಥಿತಿಗೆ ಬಂದಾಗ ಹೊಸತು ಎನ್ನುವುದು ಇಲ್ಲ. ಅದರ ಅಸ್ತಿತ್ವಗಳಲ್ಲಿ ನೂತನ ವಿಧಾನಗಳು ಸಾಧ್ಯವಿಲ್ಲ. ಕಲೆ ಎನ್ನುವುದು ಅನುಭವ ಆಗಿರುವುದರಿಂದ ಅನುಭವಕ್ಕೆ ಹಳತಿಲ್ಲ. ಅದು ವರ್ತಮಾನಕಾಲದಲ್ಲಿಯೇ ಇರುತ್ತದೆ. ಕೆಲವೊಂದು ಬದಲಾವಣೆಗಳು ಬೇಡ ಅಂತಲ್ಲ. ಆದರೆ ಅದಕ್ಕಾಗಿಯೇ ವಾಚಿಕ, ಸಾತ್ವಿಕಗಳು ಇರುವಾಗ ಸರಿಯಾಗಿ ಮಾಡಿದರೆ, ಸಂವಹನ ವಾಗಲೇಬೇಕು. ನಿಜವಾದ ಪ್ರತಿಭಾಶಾಲಿ ಪ್ರಯೋಗಕ್ಕೂ, ಶಾಸ್ತ್ರಕ್ಕೂ, ಒಂದು ಯುಕ್ತವಾದ ಬೆಲೆ ಕೊಟ್ಟು ಅನುಭವದಲ್ಲಿ ನೆಲೆಯೂರುತ್ತಾನೆ.

Leave a Reply

*

code