ಅಂಕಣಗಳು

Subscribe


 

ಶಬ್ದ

Posted On: Thursday, November 6th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


– ವೈಷ್ಣವಿ . ಎನ್

ಜತಿಸ್ವರವಾದ ನಂತರ ಕ್ಲಿಷ್ಟವಾದ ವರ್ಣವನ್ನು ನರ್ತಿಸುವ ಮೊದಲು, ಕಲಾವಿದೆಯು ತನ್ನ ಅಭಿನಯ ಚಾತುರ್ಯ ಪ್ರಸ್ತುತಪಡಿಸಲು ಅನುವು ಮಾಡಿಕೊಡುವ ಮೂರನೇಯ ಅಂಗವೇ ಶಬ್ದಂ. ಇದು ಮೃದಂಗದ ನುಡಿಕಾರಗಳಿಗೆ ಹೆಣೆದ ಜತಿಗಳು ಮತ್ತು ಸಾಹಿತ್ಯಗಳ ಸಮ್ಮಿಶ್ರಣದಿಂದ ಕೂಡಿದ್ದು, ಜತಿಗಳಿರುವಲ್ಲಿ ನೃತ್ತವೂ, ವರ್ಣನಾತ್ಮಕವಾದ ಸಾಹಿತ್ಯದಲ್ಲಿ ಅಭಿನಯವೂ ಕೂಡಿರುತ್ತದೆ. ಮೃದಂಗದ ನಾದದಂತೆ ಸಾಹಿತ್ಯವೂ ಪ್ರಾಸ-ಅನುಪ್ರಾಸದಿಂದ ಕೂಡಿದ್ದು ಆಕರ್ಷಕವಾಗಿರುತ್ತದೆ.

ಪುರಾಣಗಳಲ್ಲಿ ತಿಳಿಸಿರುವ ಕಥೆಗಳಿಂದ ಆರಿಸಿದುದೇ ಶಬ್ದವೆಂಬ ನೃತ್ಯ. ಇದರಲ್ಲಿ ಅಭಿನಯಿಸುವ ಸಾಹಿತ್ಯವು ಸಂಗೀತದ ನೆರವಲ್ ಪದ್ಧತಿಯನ್ನು ಅನುಸರಿಸುತ್ತದೆ. ಅಲರಿಪು ಸರಳವಾದ ಚಲನೆಯಿಂದ ಕೂಡಿದ ತಾಳ-ಲಯ ಆಶ್ರಯವಿರುವ ನೃತ್ತ. ಜತಿಸ್ವರದಲ್ಲಿ ರಾಗ ಮತ್ತು ತಾಳಲಂiiಗಳು ಮಿಳಿತವಾಗಿದ್ದರೆ, ಶಬ್ದದಲ್ಲಿ ಸಾಹಿತ್ಯಕ್ಕೆ ಅನುಗುಣವಾದ ಅಭಿನಯ, ಹೆಸರಿಗಷ್ಟೇ ಚಿಕ್ಕದಾದ ಜತಿಗಳು ಇರುತ್ತವೆ.

ಅಭಿನಯವನ್ನು ಪ್ರಪ್ರಥಮವಾಗಿ ನರ್ತನಕ್ಕೆ ಸೇರಿಸಿದ ನೃತ್ಯಬಂಧವೇ ಶಬ್ದ. ಚಿಕ್ಕ ಚಿಕ್ಕ ಶೊಲ್ಕಟ್ಟುಗಳು, ನಾಲ್ಕು ಚರಣಗಳು, ಪ್ರತೀ ಚರಣದ ಅಂತ್ಯಭಾಗಕ್ಕೆ ಸಂಚಾರೀ ಭಾವಗಳು, ಒಂದೊಂದು ನುಡಿಯಲ್ಲಿ ಬರುವ ಕೊನೆಯ ಸಾಲನ್ನು ಮೂರು ಮೂರು ಬಾರಿ ಹಾಡಿ ನರ್ತಿಸುವುದು ಇದರ ಗುಣಗಳು. ಈಚೆಗೆ ಒಂದೊಂದು ಸಾಲುಗಳನ್ನು ಒಂದೊಂದು ರಾಗದಲ್ಲಿ ಹಾಡುವ ರಾಗಮಾಲಿಕೆ ಪದ್ಧತಿ ಜನರಂಜನೆಯ ದೃಷ್ಟಿಯಿಂದ ಅಗತ್ಯವೆನಿಸಿದೆ. ತಾಳವನ್ನು ಅಭಿನಯಕ್ಕೆ ಅನುಕೂಲವಾಗಿ ಹೊಂದಿಸಲು ಮಿಶ್ರಛಾಪು ತಾಳ ಬಳಸುತ್ತಾರೆ.

ಜತಿಗಳನ್ನು ಕೇಳುವಾಗ ಹಸ್ತ ಪಾದ ಚಲನೆಗಳು ನರ್ತಕಿಯ ಶರೀರದ ಚೇಷ್ಟೆಗಳೆನಿಸಿಕೊಳ್ಳಬಹುದು. ಆದರೆ ಸಾಹಿತ್ಯಕ್ಕೆ ಅಭಿನಯದಲ್ಲಿ ಮನಸ್ಸಿನ ಭಾವಗಳನ್ನು ಮುಟ್ಟಿಸುವುದು ಮುಖ್ಯವಾಗುತ್ತದೆ. ಈ ಮೂಲಕ ಸಂಯುತ ಮತ್ತು ಅಸಂಯುತ ಹಸ್ತಗಳ ಪರಿಚಯವಾಗುವುದರೊಂದಿಗೆ ಭಾವಾಭಿನಯದ ಆರಂಭವೂ ಆಗುತ್ತದೆ. ಸಾಹಿತ್ಯವನ್ನು ರಚಿಸಿದ ಕವಿಯ ಇಂಗಿತಕ್ಕೂ, ಆ ಭಾವಕ್ಕೆ ತಕ್ಕ ಮುದ್ರೆಗೂ ಒಂದೊಕ್ಕೊಂದು ಪೋಷಕವಾಗಿ ಮನಸ್ಸಿನ ಪ್ರಬುದ್ಧತೆಯ ಹಂತಕ್ಕೇರುವುದು ಶಬ್ದ ಎಂಬ ಉದ್ದೇಶವನ್ನು ವಿದ್ವಾಂಸರು ಕಟ್ಟಿಕೊಡುತ್ತಾರೆ. ಶರಣಾಗತಿಯ ಅಂಶ ಇಲ್ಲಿ ವಿಶೇಷವಾಗಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ.

ಮೊದಲು ಶಬ್ದಗಳಿಗೆ ಯಶೋಗೀತ ಮತ್ತು ವರ್ಣನಗೀತವೆಂಬ ಹೆಸರಿದ್ದಿತು. ೧೪೦೦ರಲ್ಲಿ ದೇವೇಂದ್ರ ತನ್ನ ಸಂಗೀತ ಮುಕ್ತಾವಳಿಯಲ್ಲಿ ದೇಶೀ ಶೈಲಿಯ ಶಬ್ದನೃತ್ತ, ಶಬ್ದ ಜಾಲಿ ಮತ್ತು ಸೂಡ ಶಬ್ದಗಳನ್ನು ತಿಳಿಸಿದ್ದಾನೆ. ೧೬೦೦- ೧೬೩೦ ರಲ್ಲಿ ರಘುನಾಯಕ ಮತ್ತು ೧೬೩೩-೧೬೭೩ ರಲ್ಲಿ ವಿಜಯರಾಘವ ನಾಯಕನ ಕಾಲದಲ್ಲಿ ಶಬ್ದಪ್ರಬಂಧ ಹೆಚ್ಚಾಗಿ ಬಳಕೆಯಲ್ಲಿತ್ತು. ಆಗ ಶಬ್ದಾಭಿನಯದಲ್ಲಿ ನಿಪುಣೆಯರಾದ ಚಂಪಕವಲ್ಲಿ ಮತ್ತು ಚಂದ್ರಲೇಖಾ ಎಂಬಿಬ್ಬರು ಕಲಾವಿದೆಯರಿಗೆ ಶಬ್ದಚೂಡಾಮಣಿ ಮತ್ತು ಶಬ್ದ ಚಿಂತಾಮಣಿ ಎಂಬ ಬಿರುದುಗಳೂ ಇತ್ತು.

ಶಬ್ದದ ಸಾಹಿತ್ಯವು ನಾಯಿಕೆಯ ವಿರಹವೇದನೆ, ನಾಯಕನ ಗುಣಕಥನ, ಭಗವಂತನ ನಿಂದಾ-ಸ್ತುತಿ, ಆಶ್ರಯದಾತನ ಗುಣಗಾನ, ಕೋಪ-ಛಲವುಳ್ಳ ವಾಕ್ಯಗಳಿಂದ ಕೂಡಿದ ನಾನಾ ಭಾವನೆಗಳನ್ನು ವ್ಯಕ್ತಪಡಿಸುವ ಸನ್ನಿವೇಶ… ಇತ್ಯಾದಿಗಳನ್ನು ಒಳೆಗೊಂಡಿರುತ್ತದೆ. ಇದಕ್ಕೆ ಪೂರಕವಾಗಿ ಕಥಾವಸ್ತುವೊಂದರ ಸಂಚಾರಿ ಭಾವಗಳು ಅಭಿನಯವನ್ನು, ಸನ್ನಿವೇಶಗಳನ್ನೂ ಪುಷ್ಟೀಕರಿಸುತ್ತವೆ. ಕಡೆಯ ಸಾಲಿನ ಸಾಹಿತ್ಯದಲ್ಲಿ ಮುಸಲ್ಮಾನ, ಮರಾಠಾ ದೊರೆಗಳನ್ನು ಮೆಚ್ಚಿಸಲು ಇದ್ದ ಸಲಾಮುರೇ ಅಥವಾ ಈಗಿನವರು ಬದಲಾಯಿಸಿಕೊಂಡತೆ ನಮೋಸ್ತುತೇ, ಪ್ರಣಾಮುರೇ ಎಂಬ ನುಡಿಗಟ್ಟುಗಳೂ ರೂಢಿಯಲ್ಲಿವೆ. ಸಂಗೀತಗಾರರಿಗೆ ತಮ್ಮ ಪಾಂಡಿತ್ಯ ಪ್ರದರ್ಶಿಸುವುದರ ಜೊತೆಗೆ ಅಪೂರ್ವ ಸೌಂದರ್ಯಾನುಭವದ ದೃಷ್ಟಿ ಇದರಲ್ಲಿದೆ.

ಶಬ್ದ ಎಂದರೆ ಸಾಮಾನ್ಯ ಅರ್ಥದಲ್ಲಿ ಕೂಗು, ಗಲಾಟೆ, ಸದ್ದು-ಗದ್ದಲ ಇತ್ಯಾದಿ. ಹಾಗಾದರೆ ನೃತ್ಯಬಂಧವೊಂದಕ್ಕೆ ಶಬ್ದ ಎಂದು ಹೆಸರಿಡಲು ಕಾರಣವೇನು?

ಶಬ್ದ ಎಂಬ ಪದದ ವಿವಿಧ ಸಂದರ್ಭಗಳ ಅರ್ಥವು ಧ್ವನಿ, ಅಕ್ಷರ, ಕೀರ್ತಿ, ಗಾನ, ವಾಕ್ಯ, ಆಕಾಶ, ಶಾಸ್ತ್ರದಲ್ಲಿ ಹೇಳುವಂತ ಶಬ್ದ ಎಂಬ ಏಳು ಪ್ರಕಾರಗಳಲ್ಲಿವೆ ಎಂದು ವಿ. ಎಸ್. ಕೌಶಿಕ್ ಹೇಳುತ್ತಾರೆ.

‘ ಶಬ್ದೋಕ್ಷರೇ ಯಶೋಗೀತೇ

ವ್ಯೋಮ ವಾಕ್ಯ ಧ್ವನಿಷ್ಟಪಿ

-ನಾನಾರ್ಥ ರತ್ನಮಾಲೆ

೧. ಉಪನಿಷತ್ತಿನ ತದ್ದ ತದ್ವನ ಎಂಬ ಶಬ್ದವನ್ನು ಮತ್ತು ನ್ಯಾಯ ಶಾಸ್ತ್ರೋಕ್ತ ಶಬ್ದಾರ್ಥವನ್ನು ಸಾರ್ಥಕಪಡಿಸಿರುವುದು

೨. ಶ್ರೀಕರ, ಸುಗುಣಾಕರ- ಇತ್ಯಾದಿ ಭಗವಂತನ ಕೀರ್ತಿಯನ್ನು ಹೇಳುವುದು

೩. ನಾಯಿಕೆಯು ತನ್ನ ನಿರ್ದಿಷ್ಟ ಮನೋಭಾವ-ಭಂಗಿಯನ್ನು ಧ್ವನಿಸಿರುವುದು.

೪. ಕಾಂಭೋಜಿ, ಕಲ್ಯಾಣಿ- ಇತ್ಯಾದಿ ರಾಗದಲ್ಲಿ ಗಾನ ಮಾಡುವುದು

೫. ಒಂದೊಂದು ಸಾಲಿನಲ್ಲಿಯೂ ಒಂದೊಂದು ವಾಕ್ಯಗಳು ತಕ್ಕ ಸನ್ನಿವೇಶಗಳೊಡನೆ ಪೂರ್ಣಗೊಳ್ಳುವುದು

೬. ಅಕ್ಷರಗಳ ಪ್ರತ್ಯೇಕತಾ ಸೌಕರ್ಯ

ಹೀಗೆ ಆರು ಅಂಶಗಳು ಸೇರಿರುವ ಕಾರಣ ಶಬ್ದ ಎಂಬ ಹೆಸರು ಅನ್ವರ್ಥವಾಗಿದೆ ಎಂದು ವಿದ್ವಾಂಸರು ಸಿದ್ಧಾಂತಿಸಿದ್ದಾರೆ.

ಶಬ್ದವೇ ಆಕಾಶದ ಗುಣವಾಗಿರುವುದರಿಂದ ಆಕಾಶವೆಂಬ ಅರ್ಥವೊಂದನ್ನು ಬಿಟ್ಟು, ಉಳಿದ ಆರು ಅರ್ಥಗಳೂ ಈ ನೃತ್ಯದಲ್ಲಿ ಸಾರ್ಥಕತೆ ಪಡೆಯುತ್ತವೆ. ಆದ್ದರಿಂದ ಸಾಂಪ್ರದಾಯಿಕರು ಈ ನೃತ್ಯಕ್ಕೆ ಶಬ್ದ ಎಂಬ ಹೆಸರನ್ನಿರಿಸಿರುವುದು ಯಾದೃಚ್ಛಿಕವಲ್ಲ; ಪೂರ್ವಾಲೋಚನೆಯಿರುವಂತದ್ದು ಎನ್ನುತ್ತಾರೆ ವಿದ್ವಾಂಸರು.

ಆದರೆ ಕೆಲವು ವಿದ್ವಾಂಸರು ಇದನ್ನು ಬೇರೆಯದೇ ರೀತಿಯಲ್ಲಿ ಅರ್ಥೈಸುತ್ತಾರೆ. ಸಂಸ್ಕೃತದಲ್ಲಿ ಶಬ್ದ ಎಂದರೆ ಪ್ರೌಢ ಪ್ರಾಚೀನ ಶೈಲಿಯಲ್ಲಿ ಗುಣಗಾನ ಮಾಡುವ ಕ್ರಮ. ದೇವಾಲಯದ ದೇವತೆ, ಊರಿನ ಹಿರಿಯ ವೀರ, ರಾಜ ಮೆರವಣಿಗೆಯಲ್ಲಿ ಬರುತಿರುವಾಗ ಅಥವಾ ಸಭೆಯಲ್ಲಿರುವಾಗ ವಂಧಿಮಾಗಧರು ಅವರ ಗುಣವಿಶೇಷಗಳನ್ನು ಶ್ಲಾಘಿಸುವ ಸ್ತುತಿ. ದಿನ ಕಳೆದಂತೆ ಇಂಥ ಸ್ತುತಿಗಳು ಕಾವ್ಯಮಯವಾದವು. ಕೊನೆಗೆ ಪ್ರೇಮ ಪ್ರಸಂಗಗಳನ್ನು ಕಲ್ಪಿಸಿಕೊಂಡು ವಿವರಿಸುವ ಮಟ್ಟಕ್ಕೆ ಬಂತು. ನಾಯಕನಿಗಾಗಲೀ, ರಾಜನಿಗಾಗಲೀ, ದೇವರಿಗಾಗಲೀ ಎಲ್ಲರೂ ಶರಣಾಗುವಂತೆ ಪ್ರಣಾಮ ಶಬ್ದಗಳು ಸೇರಿಕೊಂಡವು.

ಆದರೆ ಈ ವಾದಕ್ಕೆ ಮತ್ತೊಂದು ಪ್ರತಿವಾದವಿದೆ. ಅವರ ಪ್ರಕಾರ ಶಬ್ದದ ನಟ್ಟುವಾಂಗ ಮಾಡುವವರು ಹಿಮ್ಮೇಳದಲ್ಲಿ ಹಾಡುವ ‘ತದ್ಧನ ತಂದನ || ತದ್ಧಿಮಿ ದಿಂದಿಮಿ‌ಇತ್ಯಾದಿ… ಶೊಲ್ಕಟ್ಟಿನಲ್ಲಿ ಪ್ರಾಚೀನರು ಉಪನಿಷತ್ತಿನಲ್ಲಿ ಹೇಳಿರುವ ವಾಕ್ಯವು ಸಮ್ಮಿಳಿತವಾಗಿದೆ ಎನ್ನುವುದು .

ತದ್ಧ ತದ್ವನಂ ನಾಮ ತದ್ವನಮಿತ್ಯು ಪಾಸಿತವ್ಯಂ

ಸ ಯ ಏತದೇವಂ ವೇದಾಭಿಹೈನಂ ಸರ್ವಾಣಿ

ಭೂತಾನಿ ಸಂವಾಂಚಂತಿ

– ಕೇನೋಪನಿಷತ್ತು ೪-೬

ಮತ್ತು ನ್ಯಾಯ ಶಾಸ್ತ್ರದಲ್ಲಿ ಹೇಳುವ ೮ ಬಗೆಯ ಪ್ರಮಾಣಗಳಲ್ಲಿ ಶಬ್ದಪ್ರಮಾಣದ ವಿವರಣೆಯು ಈ ನೃತ್ಯಕ್ಕೆ ಹೊಂದಿಕೊಳ್ಳುತ್ತದೆ ಎನ್ನಲಾಗಿದೆ.

‘ಆಪ್ತೋಪದೇಶಃ ಶಬ್ದಃ

ಆದರೆ ಅಲರಿಪು, ಜತಿಸ್ವರ ಶರೀರಕ್ಕೆ ಸಂಬಂಧಿಸಿದುದು. ಆದರೆ ಶಬ್ದ ನೃತ್ಯವು ಶರೀರದ ಕ್ರಿಯೆಯಿಂದ ಮನಸ್ಸಿನ ಕ್ರಿಯೆಗೆ ಹತ್ತುವ ಮೆಟ್ಟಿಲಿನಂತೆ ಎನ್ನುತ್ತಾರೆ ನಾಟ್ಯ ಪ್ರಯೋಗಶೀಲ ವಿದ್ವಾಂಸರು.

ಇದನ್ನು ನೃತ್ಯ ಕಾರ್ಯಕ್ರಮದಲ್ಲಿ ಮೂರನೇಯ ನೃತ್ಯಬಂಧವಾಗಿ ಇಟ್ಟುಕೊಳ್ಳಲು ಮುಖ್ಯವಾಗಿ ಮೂರು ಉದ್ದೇಶಗಳಿವೆ.

೧ ಅಲರಿಪು ಮತ್ತು ಜತಿಸ್ವರಗಳಲ್ಲಿ ತಾಳ-ಲಯ ಪ್ರಧಾನವಾದ ಆಂಗಿಕಾಭಿನಯಗಳು ಇದ್ದು, ಮಧ್ಯೆ ಶರೀರಕ್ಕೆ ಕಿಂಚಿತ್ ವಿರಾಮ ಕೊಡಬೇಕು.

೨ ನಿರ್ವೇದ, ಗ್ಲಾನಿ, ಅನುಮಾನ, ಅಸೂಯಾದಿ ನಾನಾ ಭಾವಾಭಿನಯಗಳನ್ನು ಪ್ರವೇಶ ಮಾಡಿಸಿ, ವ್ಯಾಯಾಮ ಮಾದರಿಯ ನೃತ್ತದ ವಾತಾವರಣದಿಂದ, ಅದರ ರಭಸದಿಂದ ಮನಸ್ಸನ್ನು ಸ್ವಲ್ಪ ವಿಮುಖಗೊಳಿಸುವುದು.

೩ ನಾಲ್ಕನೇಯ ಅಂಗವಾದ ವರ್ಣದಲ್ಲಿ ಶರೀರ ವ್ಯಾಯಾಮವು ಅಧಿಕವಾಗಿರುವುದರಿಂದ, ನೃತ್ತ ಮತ್ತು ಜತಿಗಳನ್ನು, ಅಭಿನಯದ ನಿರೂಪಣೆಯನ್ನು ಪ್ರದರ್ಶಿಸಲು ಬೇಕಾಗಿರುವ ಶಾರೀರಿಕ ಸಿದ್ಧತೆ.

ಶಬ್ದದ ಮೂಲ ಸಾಹಿತ್ಯವು ತೆಲುಗು ಭಾಷೆಯಲ್ಲಿ ಇತ್ತೆನ್ನಲು ಸಾಕ್ಷಿಗಳಿವೆ. ಆದರೆ ನಂತರದ ಕಾಲಗಳಲ್ಲಿ ತಮಿಳು ಭಾಷೆಯಲ್ಲಿ ಶಬ್ದ ರಚನೆಗಳಾಗಿ, ಇತ್ತಿಚೆಗೆ ಕನ್ನಡದಲ್ಲಿಯೂ ರಚಿಸಲ್ಪಟ್ಟಿವೆ. ಕನ್ನಡ ಶಬ್ದಗಳಲ್ಲಿ ದ್ವಾರಕೀ ಕೃಷ್ಣಸ್ವಾಮಿಯವರ ಶಬ್ದಗಳು ಜನಪ್ರಿಯ. ಮೇಲತ್ತೂರಿನ ಭಾಗವತರಾದ ೧೬೯೦ ರಿಂದ ೧೭೬೪ರ ವರೆಗೂ ಜೀವಿಸಿದ್ದ ಭರತಂ ಕಾಶೀನಾಥಯ್ಯ, ತಂಜಾವೂರು ಸಹೋದರರು ಶಬ್ದಗಳಿಗೆ ಪ್ರಖ್ಯಾತರು.

ಭರತಂ ಕಾಶೀನಾಥಯ್ಯ ಅವರ ಶಬ್ದಗಳು ಉತ್ತಮ ಶೈಲಿಯಿಂದ ಕೂಡಿದ್ದು, ಭಾಗವತ ಮೇಳ ನಾಟಕವನ್ನು ಕೂಚಿಪುಡಿ ಸಂಪ್ರದಾಯದಲ್ಲಿ ಕಾಣಿಸುತ್ತಾರೆ. ತಂಜಾವೂರು ಸಹೋದರರ ಶಬ್ದಗಳು ಕಾಂಭೋಜಿರಾಗ, ಮಿಶ್ರಛಾಪು ತಾಳಗಳಲ್ಲಿವೆ. ಗಜೇಂದ್ರಮೋಕ್ಷ, ಮಂಡೂಕಶಬ್ದ, ಭಾಮಾ ಕಲಾಪದಲ್ಲಿ ದಶಾವತರ ಶಬ್ದ ಕೆಲವು ಪ್ರಖ್ಯಾತ ಶಬ್ದಗಳು. ಕೃಷ್ಣ ಶಬ್ದ, ರಾಮಾಪಟ್ಟಾಭಿಶೇಕ ಶಬ್ದ, ಶರಭೋಜ ಶಬ್ದ(೧೭೯೮-೧೮೩೨), ಶಿವಾಜಿ ಶಬ್ದ(೧೮೩೨-೧೮೫೫), ತುಲಜಾಜಿ ಶಬ್ದ (೧೭೬೫-೧೭೮೩) ಇತ್ಯಾದಿಗಳು ದರ್ಬಾರಿನಲ್ಲಿ ಅಭಿನಯಿಸಲ್ಪಡುತ್ತಿದ್ದವುಗಳು.

Leave a Reply

*

code