ಅಂಕಣಗಳು

Subscribe


 

ಸಂಪಾಜೆ ಯಕ್ಷೋತ್ಸವ- ೨೦೦೮

Posted On: Monday, December 15th, 2008
1 Star2 Stars3 Stars4 Stars5 Stars (No Ratings Yet)
Loading...

Author: ನಾರಾಯಣ ಭಟ್-’ನೂಪುರ ಭ್ರಮರಿ’ ಪ್ರತಿಷ್ಠಾನ ಸಂಸ್ಥಾಪನಾಧ್ಯಕ್ಷರು-ಮಡಿಕೇರಿ-ಕೊಡಗು.


ಕ್ಷಿಣ ಕನ್ನಡದ ಸಂಪಾಜೆಯಲ್ಲಿ ಅಕ್ಟೋಬರ್-ನವೆಂಬರ್ ಬಂದಿತೆಂದರೆ ಸಾಕು, ಪ್ರತಿವರ್ಷ ಕಲ್ಲುಂಗುಂಡಿ ಶಾಲಾ ವಠಾರ ಜಾತ್ರೆಯಂತಾಗುತ್ತದೆ. ಆ ಒಂದು ದಿನದ ಬೆಳಗಿನಿಂದ ಮತ್ತೊಂದು ದಿನದ ಬೆಳಗಿನವರೆಗೆ ಪುಟ್ಟ ಊರಿಗೆ ಊರೇ ಜಾತ್ರೆಯಾಗಿಬಿಡುತ್ತದೆ. ಹಳ್ಳಿ, ನಗರಗಳ ಬೇಧವಿಲ್ಲದೆ ಊರೂರುಗಳಿಂದ ಜನ ತಂಡೋಪತಂಡವಾಗಿ ಬಂದು ರಾತ್ರೆಯಿಡೀ ಕುಳಿತು ಆ ಉತ್ಸವವನ್ನು ಆಸ್ವಾದಿಸುತ್ತಾರೆ. ಅಷ್ಟಕ್ಕೂ ಇದು ಯಾವುದೋ ದೇವರ ಉತ್ಸವವಲ್ಲ. ಬದಲಾಗಿ ಆರಾಧನೆ. ಹಳ್ಳಿಯೊಂದರ ಶಾಲಾ ವಠಾರದಲ್ಲೂ ಸುಮಾರು ೧೦ ವರ್ಷಗಳಿಂದಲೂ ಇಂತಹ ಒಂದು ದಿವ್ಯ ಕ್ಷಣಕ್ಕೆ ವೇದಿಕೆ ಕಲ್ಪಿಸಿಕೊಡುವ ಆ ಕ್ಷಣವೇ ಯಕ್ಷೋತ್ಸವ. ತೆಂಕು ಮತ್ತು ಬಡಗು ತಿಟ್ಟುಗಳ ಸಮಸ್ತ ಕಲಾವಿದರ ಕೂಡುವಿಕೆಯಲ್ಲಿ ಕರಾವಳಿಯ ಸುಂದರ ಸಂಸ್ಕೃತಿ ಯಕ್ಷಗಾನದ ಪರಂಪರೆ ಮತ್ತು ನೂತನ ಅಭಿವ್ಯಕ್ತಿಗಳು ಬಹುದೊಡ್ಡ ಪ್ರತಿರೂಪವನ್ನು ತಾಳುವ ಘಟ್ಟ.

ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಪ್ರಯತ್ನವಾಗಿ, ಒಂದಿಡೀ ದಿನದ ಅದ್ಧೂರಿ ಯಕ್ಷಗಾನ ಬಯಲಾಟವೇ ಯಕ್ಷೋತ್ಸವ. ಸುಮಾರು ೩೦ ಲಕ್ಷಕ್ಕಿಂತಲೂ ಅಧಿಕ ಮೊತ್ತವನ್ನು ಯಕ್ಷಗಾನಕ್ಕೆ ಮೀಸಲಿಟ್ಟು ಪ್ರೋತ್ಸಾಹಿಸುತ್ತಿದೆ ಈ ಪ್ರತಿಷ್ಠಾನ. ಪ್ರತೀ ವರ್ಷ ಯಕ್ಷಗಾನದ ಸಾಧಕರಿಗೆ, ಕಲಾವಿದರಿಗೆ, ಪುರೋಹಿತ ವಿದ್ವನ್ಮಣಿಗಳಿಗೆ ಯಾವ ರಾಷ್ಟ್ರ ಪ್ರಶಸ್ತಿಗಳಿಗೂ ಕಡಿಮೆಯಿಲ್ಲದಂತೆ ಪ್ರಶಸ್ತಿ, ಪುರಸ್ಕಾರವನ್ನಿತ್ತು ಸನ್ಮಾನಿಸಿ ಅಭಿನಂದಿಸುವುದು ಕಲೆಗೆ ಸಂಬಂಧಿಸಿದಂತೆ ಅಭೂತಪೂರ್ವ ಬೆಳವಣಿಗೆಯೇ ಹೌದು. ಅಷ್ಟು ಮಾತ್ರವಲ್ಲ, ಈ ಅಪೂರ್ವ ಕ್ಷಣದಲ್ಲಿ ಸುಮಾರು ೧೫ ಲಕ್ಷಕ್ಕೂ ಮಿಗಿಲು ವಿದ್ಯಾರ್ಥಿ ವೇತನ ಮತ್ತು ಪುರಸ್ಕಾರ ನೀಡುವುದೂ ಮಹತ್ವದ ಸಂಗತಿ.

ಪ್ರತಿವರ್ಷದಂತೆ ಈ ವರ್ಷವೂ ಪ್ರಧಾನ ಶೀರ್ಷಿಕೆಯಡಿ ಪ್ರಸಂಗಗಳನ್ನು ಆಯ್ದುಕೊಳ್ಳಲಾಗಿತ್ತು. ಈ ವರ್ಷದ ಶ್ರೀಕೃಷ್ಣ ಜನ್ಮ, ಪೂತನಿ ಸಂಹಾರ, ಕಾಳಿಂಗ ಮರ್ದನ, ಶ್ರೀಕೃಷ್ಣ ಲೀಲೆ, ಗೋವರ್ಧನ ಉದ್ಧರಣ, ಕಂಸ ವಧೆ, ಗುರುದಕ್ಷಿಣೆ, ಭೌಮಾಸುರ ವಧೆ, ವೀರವರ್ಮ ಕಾಳಗ ಮುಂತಾದ ೮ ಪ್ರಸಂಗಗಳು ’ಲೀಲಾಮೂರ್ತಿ ಶ್ರೀಕೃಷ್ಣ’ನದ್ದು. ಕಲಾವಿದರ ಅಪೂರ್ವ ಕೂಡುವಿಕೆ ಮತ್ತು ಪ್ರದರ್ಶನ ಕಲಾಸಕ್ತರಿಗೆ ರಸದೌತಣ.

ಈ ಬಾರಿ ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿಗೆ ಶೇಣಿ ಪ್ರಶಸ್ತಿ, ಕಲಾವಿದರಾದ ಪುತ್ತೂರು ಶ್ರೀಧರ ಭಂಡಾರಿ, ವಿಟ್ಲ ಶಂಭು ಶರ್ಮ, ನೂತನವಾಗಿ ಆರಂಭಿಸಲಾದ ಯಕ್ಷಗಾನ ಅಕಾಡೆಮಿಯ ಪ್ರಥಮ ಅಧ್ಯಕ್ಷ ಕುಂಬ್ಳೆ ಸುಂದರ್ ರಾವ್ ಅವರಿಗೆ ಸನ್ಮಾನ ಅಭಿನಂದನೆ. ಜೊತೆಗೆ ಪ್ರತಿಷ್ಠಾನದ ಪ್ರಥಮ ಕೃತಿಯಾಗಿ ಮೇರು ಕಲಾವಿದ ಕೆ. ಗೋವಿಂದ ಭಟ್ಟರ ಆತ್ಮಕ ಥನ ’ಯಕ್ಷೋಪಾಸನೆ’ ಕೃತಿಯ ಅನಾವರಣ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರಿಂದ. ಇಂತಹ ಕಲಾ ಪೋಷಕರ ಪ್ರೋತ್ಸಾಹ ಕಲಾವಿದರಿಗೆ ನಿರಂತರವಿರಲಿ.

ಅಲ್ಲಿ ಅರಳಿದ ಕೆಲವು ಅಭಿಪ್ರಾಯಗಳು…

ಜಾನಪದಕ್ಕೆ ಶಾಸ್ತ್ರೀಯಕ್ಕಿಂತಲೂ ಹೆಚ್ಚಿನ ಆಕರ್ಷಣೆ ಇದೆ. ಆದ್ದರಿಂದಲೇ ಯಕ್ಷಗಾನದಂತಹ ಕಲೆಗಳನ್ನು ದಿನವಿಡೀ ಪ್ರೇಕ್ಷಕರು ಕುಳಿತು, ನಿದ್ದೆಗೆಟ್ಟು ನೋಡುತ್ತಾರೆ.

-ಡಾ| ಡಿ. ವೀರೇಂದ್ರ ಹೆಗ್ಗಡೆ

 

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಿ.ಎ ವ್ಯಾಸಂಗಕ್ಕೆ ಕನ್ನಡ, ಯಕ್ಷಗಾನ, ಭೂತಾರಾಧನೆಯನ್ನು ಐಚ್ಚಿಕ ವಿಷಯವನ್ನಾಗಿ ಮಾಡಿದರೆ ನಮ್ಮ ನಾಡಿನ ಸಂಸ್ಕೃತಿಯ ಬಗ್ಗೆ ಯುವಕರಲ್ಲಿ ಆಸಕ್ತಿ, ಸಂಶೋಧನೆ ಬೆಳೆದೀತು.

-ಕೆ. ಗೋವಿಂದ ಭಟ್ಟರು, ಯಕ್ಷಗಾನದ ಹಿರಿಯ ಕಲಾವಿದ

 

ಣೇಶೋತ್ಸವದಲ್ಲಿ ಒಮ್ಮೆ ಬೆಲ್ಲದ ಗಣಪತಿಯನ್ನು ಕೂರಿಸಿದ್ದರಂತೆ. ಕೊನೆಯ ದಿನ ಪ್ರಸಾದ ಕೊಡುವ ಹೊತ್ತಿಗೆ ಪ್ರಸಾದ ಖಾಲಿಯಾಯ್ತು. ಏನು ಮಾಡೋಣ, ಬೆಲ್ಲದ ಗಣಪತಿಯ ಬೆಲ್ಲವನ್ನೇ ಪ್ರಸಾದವಾಗಿ ಕೊಡಲು ಪ್ರಾರಂಭಿಸಿದರಂತೆ ! ಕೊನೆಗೆ ಗಣಪತಿ ಬಿಡುವ ಹೊತ್ತಿಗೆ ಗಣಪತಿ ಕಾಣೆ ? ಕಾರಣ, ಆತ ಇದ್ದದ್ದು ತಿಂದವರ ಹೊಟ್ಟೆಯಲ್ಲಿ! ಅದೇ ರೀತಿ ಇಂದಿನ ಅಕಾಡೆಮಿಗಳೂ ಕೂಡಾ ! ನಿರ್ವಹಿಸುವುದು ಸವಾಲಿನ ಕೆಲಸ.

– ಕುಂಬ್ಳೆ ಸುಂದರ್ ರಾವ್, ಯಕ್ಷಗಾನ ಅಕಾಡೆಮಿ ಅಧ್ಯಕ್ಷರು

 

ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ತಿಂದು ಬದುಕುತ್ತವೆ. ಅದೇ ಪರಿಸ್ಥಿತಿ ಕಲೆಯಲ್ಲೂ ಮುಂದುವರೆದಿದೆ.

-ವಿಟ್ಲ ಶಂಭು ಶರ್ಮ, ಹಿರಿಯ ಅರ್ಥಧಾರಿ.

 

-ವರದಿ : ವೇದ ಮೂರ್ತಿ ಬಿ. ಜಿ. ನಾರಾಯಣ ಭಟ್

(ಲೇಖಕರು ಮಡಿಕೇರಿಯಲ್ಲಿ ಪುರೋಹಿತರು, ಕಲಾಸಕ್ತರು )

1 Response to ಸಂಪಾಜೆ ಯಕ್ಷೋತ್ಸವ- ೨೦೦೮

  1. Abhilash,N

    For ur schlorship I can continue my higher studies

Leave a Reply

*

code