ಅಂಕಣಗಳು

Subscribe


 

ಅಭಿನಯ ಭಾರತೀ- ಆವೇದನೆ

Posted On: Thursday, August 20th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 86ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ  : ತನ್ನ ಅನುಪಸ್ಥಿತಿಯಲ್ಲಿ ಪತಿಯ ಮನೆವಾಳ್ತೆಯ ಕಾರುಬಾರುಗಳು ಹೇಗೆ ನಡೆಯುವುದೋ ಎಂದು ಚಿಂತಿಸಿ ಆತನ ನಿತ್ಯದ ಚರ್ಯೆಗಳನ್ನು ನೆನೆಯುತ್ತಾ ಸಖಿಯಲ್ಲಿ ತನ್ನ ಬೇಗುದಿಯನ್ನು ತೋಡಿಕೊಂಡಿದ್ದಾಳೆ. ಎಂದೆಂದಿಗೂ ಸುಖಿಯಾಗಿಯೇ ಇದ್ದು ಕೆಲಸಗಳೆಲ್ಲವನ್ನೂ ಮಾಡಿಸಿಕೊಂಡವನು ಇದೀಗ ಅಡುಗೆ, ಶುಚಿತ್ವ, ಊಟ, ನಿದ್ರೆ ಹೀಗೆ ಬಗೆಬಗೆಯಾಗಿ ಆತನ ಮೇಲಿರುವ ಜವಾಬ್ದಾರಿಯನ್ನು, ಒಂಟಿತನವನ್ನು ಹೇಗೆ ನಿರ್ವಹಿಸುವನೋ ಎಂದು ಚಿಂತಿಸಿಯೇ ಹೈರಾಣಾಗಿದ್ದಾಳೆ.

ಆವೇದನೆ

ರಾಗ:ಯಮನ್ ಕಲ್ಯಾಣಿ ; ತಾಳ : ಆದಿ

ನಾನಿಲ್ಲದಿರಲೆನ್ನ ಕಾಂತನ ಮನೆವಾಳ್ತೆ |

ಏನೇನಪ್ಪುದೊ ಪೇಳ್ವೆನಿಲ್ಲಾಂ ||  ||

 

ಆ ನವಮೋಹನರಸಿಕನ ಚರ್ಯೆಯ-

ನ್ನೇನೆನ್ನಲಿ ನಾಂ ಪ್ರಿಯಸಖೀ ! || ಅ.ಪ ||

 

ಹೊತ್ತು ಮೂಡದ ಮುನ್ನ ಏಳದ ಸುಖನಿದ್ರ-

ನೆತ್ತಲಿಂ ಪಾಲ್ತಂದು ಸವರಿಪನೋ ?

ಹೊತ್ತಿಸಲರಿಯನು ಒಲೆಯನ್ನಿನ್ನೆಂತು

ತುತ್ತನ್ನೆತ್ತುವನೋ ಕಾಣೆನಲ್ಲಾಂ ||೧ ||

 

ಒಪ್ಪವ ಗೆಯ್ಯಲಿನ್ನೆಂತಪ್ಪನೋ ಚೆಲ್ವಂ

ತಪ್ಪದ ಗೃಹಕಾರ್ಯಭಾರದೊಳು |

ಸುಪ್ಪತ್ತಿಗೆಯೊಳಿದ್ದು ಮಾಡಿಸಿಕೊಂಡಾತ-

ನೊಪ್ಪೊತ್ತಾದೊಡಂ ನಿಲ್ಲುವನೇಂ ||೨ ||

 

ನಾನಿರೆ ಮನೆಯೊಳಿನ್ನೆನ್ನೊಡನೆಲ್ಲಕ್ಕಂ

ತಾನು ನಾನೆಂದೆದ್ದು ಬರುತಿರ್ದಂ |

ಏನನಿಂಗೈವನೋ ಸೆಜ್ಜೆಯುಂ ಬರಿದಿರೆ

ಹಾ! ನಳಿನಾಕ್ಷಿ ! ನಾಂ ತಾಳಲೊಲ್ಲೆಂ ||೩ ||

 

Leave a Reply

*

code