ಅಂಕಣಗಳು

Subscribe


 

ಅಭಿನಯಭಾರತೀ- ವಿದಗ್ಧಮುಗ್ಧೆ

Posted On: Thursday, December 3rd, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 119ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಪ್ರಕೃತ, ನಾಯಿಕೆಯರಿಗೆ ಸಮದಂಡಿಯೋ ಎಂಬಂತೆ ಬರೆಯಲಾದ ನಾಯಕಾವಸ್ಥೆಗಳ ಪದ್ಯಗಳು ಪ್ರಕಟವಾಗುತ್ತಿದೆ. ಅಷ್ಟನಾಯಿಕೆಯರಿಗೆ ಪ್ರತಿಸ್ಪಂದಿಯಾಗುವ ಅಷ್ಟಾವಸ್ಥೆಗಳ ನಾಯಕರ ಶ್ರೇಣಿ ಶ್ರೀಯುತ ಗಣೇಶರದ್ದೇ ಕೊಡುಗೆ. ಆ ಲಕ್ಷಣಗಳ ಜೊತೆಜೊತೆಗೆ ಆ ನಾಯಕರ ಸ್ವಾರಸ್ಯವನ್ನು ಬಣ್ಣಿಸುವಂತೆ ನೃತ್ಯಾನುಕೂಲಿಯಾದ ಅನೇಕ ರಚನೆಗಳನ್ನು ಮಾಡಿದ್ದಾರೆ. 

ಇಂದಿನ ನಾಯಕಾಭಿವ್ಯಕ್ತಿ :  ಮುಗ್ಧೆಯೆಂದು ನಂಬಿದ ನಾಯಕನ ಗ್ರಹಿಕೆಗಳು ತಲೆಕೆಳಗಾದ ಸಂಗತಿಗಳನ್ನು ಉಲ್ಲೇಖಿಸುತ್ತಾ, ಆಕೆ ಎಷ್ಟರಮಟ್ಟಿಗೆ ರತಿಚೇಷ್ಟೆಗಳನ್ನರಿತವಳು, ಬುದ್ಧಿವಂತಳು, ರಸಿಕಳು ಎನ್ನುವುದನ್ನು ಸಂದರ್ಭಗಳ ಸಹಿತ ಅಚ್ಚರಿಯಿಂದ ವಿವೇಚಿಸಿದ್ದಾನೆ ಈ ನಾಯಕ.  ಹಾಗೆಂದೇ ನಾಯಕನ ಮಾತಿನಲ್ಲಿ, ನೋಟದಲ್ಲಿ ಇಲ್ಲಿ ನಾಯಿಕೆಯ ಸೂಕ್ಷ್ಮ  ನಡವಳಿಕೆ  ರಚನೆಯಲ್ಲಿ ಮೈಗೂಡಿದೆ.  ಇಂಥವಳಲ್ಲಿ ಅನುರಾಗವಶನಾಗಿರುವ ನಾಯಕ ಆಕೆಯನ್ನು ಮೆಚ್ಚಿ ಮಾತಾಡುವುದು ಸಹಜವಷ್ಟೇ. 

ವಿದಗ್ಧಮುಗ್ಧೆ

ರಾಗ: ಚಿತ್ತರಂಜನೀ; ತಾಳ : ಆದಿ

ಮುಗ್ಧೆಯೆಂದರಿತಿದ್ದೆವಿವಳನ್ನು ವಿ-

-ದಗ್ಧೆಯೆ ತಾನಾಗಿಹಳೀಕೆ ||  ||

 

ಹರೆಯದ ಹೂಟಗಳಿಗೆ ಹೊಗರಿಂ

ಚುರುಕಿನ ತಂತ್ರಗಳಿಟ್ಟಿಹಳು |

ಹೊರಗಡೆ ಕಾಣದವೊಲು ಸತತಂ

ಚರಿತವನೀಕೆ ನಿಗೂಹಿಪಳು ||೧ ||

 

ಎತ್ತಲೊ ಕಣ್ಣನು ಸಾಗಿಸುತ ಮ-

ತ್ತಿತ್ತಲೆ ಮನವನು ನೆಟ್ಟಿಹಳು |

ಚಿತ್ತಜವಾರ್ತೆಯನೆಲ್ಲವನೂ ನಾ-

ವೆತ್ತಿರಲಾಲಿಸಿ ನಲಿಯುವಳು ||  ೨||

 

ತರುಣರನೆದುರೊಳು ಕಂಡರೂ

ಬೆರಗಿನ ನೋಟವ ಬೀರುತಲಿ |

ಸ್ಮರನ ವಿಕಾರವನಡಗಿಸುತ

ಚಿರಬಾಲಿಕೆಯೊಲು ನಟಿಸುವಳು ||೩ ||

 

ಮನದೊಳು ಮಂಡಿಗೆ ಮೆಲ್ಲುತಲಿ

ದಿನದಿನ ಹಗಲುಗನಸಿನಲ್ಲಿ |

ಅನುರಾಗವ ಪರಿವರ್ಧಿಸುತ

ಜನರನು ಮರೆಯಿಪಳತಿಚತುರೆ  ||೪ ||

Leave a Reply

*

code