ಅಂಕಣಗಳು

Subscribe


 

ಅಲರಿಪು

Posted On: Thursday, November 6th, 2008
1 Star2 Stars3 Stars4 Stars5 Stars (No Ratings Yet)
Loading...

Author: ವೈಷ್ಣವೀ ಮಂಗಳೂರು

ಭರತನಾಟ್ಯದಲ್ಲಿ ರಂಗದ ಮೇಲೆ ಪ್ರದರ್ಶಿಸುವ ಪ್ರಥಮ ಅವಾಹನಾ ನೃತ್ಯವೇ ಅಲರಿಪು. ಸಾಂಪ್ರದಾಯಿಕ ಭರತನಾಟ್ಯ ಕಾರ್ಯಕ್ರಮದ ಆರಂಭವೇ ಅಲರಿಪುವಿನಿಂದ. ಇದು ನೃತ್ತಕ್ಕೆ ಅಂದರೆ ಅಭಿನಯರಹಿತವಾದ ಹರ್ಷದಾಯಕ ಭಾಗಕ್ಕೆ ಪ್ರಾಧಾನ್ಯತೆ ಕೊಡುವ ಒಂದು ನೃತ್ಯಬಂಧ. ಮನಮೈಗಳು ಅರಳಿ ನರ್ತಕಿಯು ತನ್ನ ಮುಂದಿನ ಕಾರ್ಯಕ್ರಮಕ್ಕೆ ಸಜ್ಜಾಗಲು ಈ ಅಲರಿಪು ಉಪಯುಕ್ತವಾಗಿದೆ.

ಅಲರಿಪು ಎಂಬ ಶಬ್ಧ ಅಥವಾ ಸಮೀಪವಾಗಿರುವ ಪದ ನಾಟ್ಯ ಶಾಸ್ತ್ರದಲ್ಲಿ ಎಲ್ಲೂ ಕಂಡುಬರುವುದಿಲ್ಲ. ಆದ್ದರಿಂದ ಈ ಶಬ್ಧವು ಸಾಂಪ್ರದಾಯಿಕವಾಗಿ ರೂಢಿಯಲ್ಲಿ ಬಂದಿದೆ ಎನ್ನುತ್ತಾರೆ ವಿದ್ವಾಂಸರು. ಅಲರ್ ಎಂದರೆ ಹೂವು, ಅರಳು ಎಂದರ್ಥ. ಜೊತೆಗೆ ವ್ಯಾಪಿಸು, ವಿಸ್ತರಿಸು, ಪ್ರಾರಂಭಿಸು ಎಂದೂ; ತೆಲುಗಿನಲ್ಲಿ ಅಲರು ಎಂಬ ಶಬ್ಧಕ್ಕೆ ಪುಷ್ಪ ಅರಳುವುದನ್ನು, ಹಿಗ್ಗುವುದನ್ನು, ಪ್ರಕಾಶಿಸುವ, ಹೊಳೆಯುವ, ಸಂತಸ ಕೊಡುವ ಮತ್ತು ಹೊಂದುವ ಎಂದೂ; ತಮಿಳಿನಲ್ಲಿ ಸುಂದರ ಎಂದೂ ವ್ಯಾಖ್ಯಾನಿಸಬಹುದು. ಅಲರಿಂಚು ಎಂಬ ಶಬ್ದದ ಕ್ರಿಯಾಪದ ಅಲರಿಂಪು. ಇದರಿಂದ ಅನುನಾಸಿಕ ಅಕ್ಷರ ತೆಗೆದಾಗ ಅಲರಿಪು ಎಂದಾಗುತ್ತದೆ. ಈ ಶಬ್ಧದ ಉಚ್ಚಾರಣೆಯಲ್ಲಿಯೂ ಕೂಡಾ ಹಲವು ವಿಧ :- ಅಲರಿಪು, ಅಲರಿಪ್ಪು, ಅಲಾರಿಪು, ಅಲರುಪು, ಅಲಾರಿ, ಅಲರಿ, ಅಲೈರಿಪ್ಪು…….ಇತ್ಯಾದಿ. ನೃತ್ತಭಾಗದಲ್ಲಿ ಈ ಅರ್ಥಕ್ಕೆ ಪುಷ್ಟಿಕೊಡುವ ಯಾವುದೇ ಚಲನವಲನ ಕಂಡುಬರದಿದ್ದರೂ, ಸರಳವಾದ ವಿವಿಧ ಚಲನೆಗಳಿಂದ ನೃತ್ಯ ಕಾರ್ಯಕ್ರಮಕ್ಕೆ ದೇಹವನ್ನು ಹೂವಿನಂತೆ ಅರಳಿಸುವುದು ಎಂಬ ಅರ್ಥವಿರಬಹುದು. ಜೊತೆಯಲ್ಲಿ ಪ್ರಾರ್ಥನಾರೂಪದ ಈ ನೃತ್ಯದಲ್ಲಿ ಸಾಂಕೇತಿಕವಾಗಿ ಪೂಜಿಸಿ, ಗುರುಹಿರಿಯರಿಗೆ ವಂದಿಸಿ ನೃತ್ಯ ಕಾರ್ಯಕ್ರನುಕ್ಕೆ ಶುಭಕೋರುವುದು ಇದರ ಹಿಂದಿನ ಉದ್ದೇಶವಾಗಿದೆ ಎನ್ನಲಾಗಿದೆ.

ಅಸ್ವರ ತಾಳಬದ್ಧ ಪಾಠಾಕ್ಷರಗಳಿರುವ, ತ್ರಿಕಾಲಗತಿಯ ನರ್ತನವನ್ನು ಒಳಗೊಂಡಿರುವ ಅಲಾರಿಪುವಿನಲ್ಲಿ ಮೂರುಭಾಗಗಳಿವೆ. ಸಂಗೀತದಲ್ಲಿ ಕಾಣುವ ಆರೋಹಣ, ಅವರೋಹಣದಂತೆಯೇ, ಅಲರಿಪುವಿನಲ್ಲಿ ಮೂಲಭೂತ ಆಂಗಿಕ ಚಲನೆಯಿದೆ. ಅಂಜಲಿ ಹಸ್ತದ ವಿನ್ಯಾಸದಿಂದ ತೊಡಗಿ ಸಮ, ಅರೆಮಂಡಿ, ಪೂರ್ಣಮಂಡಿ ಎಂಬ ಸ್ಥಾನಕಗಳನ್ನು ಬಳಸಿ ಕತ್ತು, ಕಣ್ಣು, ಕೈಕಾಲುಗಳ ಸರಳ ನಿರೂಪಣೆಯೊಂದಿಗೆ ನರ್ತಿಸಲಾಗುತ್ತದೆ. ಹೀಗೆ ಮೊದಲ ಭಾಗವು ಸಮಭಂಗಿಯಲ್ಲಿ ಆರಂಭ, ಅರ್ಧಮಂಡಿಯಲ್ಲಿ ಸರಳ ಅಡವುಗಳು. ಎರಡನೇ ಭಾಗದಲ್ಲಿ ಮೊದಲನೆಯ ಭಾಗದ ಪುನರಾವರ್ತನೆಯು ಪೂರ್ತಿ ಮಂಡಿ ಅಥವಾ ಮುಳುಮಂಡಿಯಲ್ಲಿ ಆಗುತ್ತದೆ. ಇಲ್ಲಿ ಪ್ರೇರಿತ, ಮೋಠಿತ, ವಿಷಮ ಸೂಚಿ ಮಂಡಲಗಳನ್ನು ಬಳಸುತ್ತಾರೆ. ಮೂರನೆಯ ಭಾಗದಲ್ಲಿ ಕೆಲವು ಸರಳ ಅಡವುಗಳ ಜೋಡಣೆ ಹಾಗೂ ಮುಕ್ತಾಯದಲ್ಲಿ ಕೊನೆಗೊಳ್ಳುವಿಕೆ. ಈ ಮೂರು ಭಾಗಗಳ ಚಲನೆಗಳು ಒಂದು, ಎರಡು, ಮೂರನೆಯ ಕಾಲಗಳಿಗೆ ಸಂಯೋಜಿತವಾಗಿರುತ್ತದೆ. ಅಲರಿಪುವಿನಲ್ಲಿ ಮತ್ತೊಂದು ಗಮನಾರ್ಹ ಅಂಶವೆಂದರೆ ನೃತ್ಯ ಬಂಧದ ಪ್ರಾರಂಭದಲ್ಲಿ ಗ್ರೀವ ಚಲನೆ (ಮುಖಭಾಗ), ಎರಡನೆಯದು ಭುಜಗಳ ಚಲನೆ, ಮೂರನೆಯದು ಮಂಡಿಚಲನೆ (ಮೊಣಕಾಲು), ನಾಲ್ಕನೆಯದು ಪಾದಗಳು ಅಥವಾ ಅಡವುಗಳ ಚಲನೆ… ಹೀಗೆ ಶಿರಸ್ಸಿನಿಂದ ಪ್ರಾರಂಭವಾಗಿ ಕ್ರಮೇಣ ಪಾದಚಲನೆಗಳಲ್ಲಿ ಮುಕ್ತಾಯಗೊಳ್ಳುತ್ತದೆ. ಮುಂದಿನ ನೃತ್ಯಬಂಧವಾದ ಜತಿ ಸ್ವರಕ್ಕೆ ಪೂರ್ವಭಾವಿಯಾಗಿರುವ ಅಡವುಗಳ ಲಕ್ಷಣ ಇಲ್ಲಿ ಕಂಡುಬರುತ್ತದೆ. ಮೈಯ್ಯ ಸಮತೋಲನ, ಅಂಗಶುದ್ಧಿ ರೇಖೆ, ತಾಳದ ಶುದ್ಧತೆ ಇವು ಅಲರಿಪುವಿನಲ್ಲಿ ಕಂಡುಬರುವ ಅಂಶಗಳು. ನೃತ್ತದ ವಿನ್ಯಾಸ ತೋರುವಲ್ಲಿ ಸಹಾಯಕವಾಗುವ ಅಲರಿಪು ಖಚಿತವಾದ ನಿರೂಪಣೆ, ಬಿಕ್ಕಟ್ಟಾದ ಸಂಯೋಜನೆಯನ್ನು ಅವಲಂಬಿಸಿರುತ್ತದೆ. ಹಾಗಾಗಿ ಕ್ರಮಪ್ರಕಾರವಾಗಿ ಶುದ್ಧರೀತಿಯಲ್ಲಿ ನರ್ತಿಸಿದರೆ ನರ್ತಕರ ವಿದ್ಯಾಸಾಮರ್ಥ್ಯವನ್ನು ಸುಲಭವಾಗಿ ಕಂಡುಹಿಡಿಯಬಹುದು.

ಅಲರಿಪುವನ್ನು ನರ್ತಿಸುವಾಗ ಸೊಂಟದಿಂದ ಮೇಲಿನ ದೇಹದ ಭಾಗವನ್ನು ಸ್ವಲ್ಪ ಮುಂದಕ್ಕೆ ಬಾಗಿಸಿ ನರ್ತಿಸುವುದು ರೂಢಿ. ಇದು ಸಮರ್ಪಣಾ ಭಾವವನ್ನು ಸಂಕೇತಿಸುತ್ತದೆ. ಎರಡೂ ಕೈಗಳನ್ನು ಪ್ರಾರಂಭದಲ್ಲಿ ಜೋಡಿಸಿ ತಲೆಯ ಮೇಲೆ ಅಂಜಲಿಹಸ್ತ ಎಂಬುದಾಗಿ ಹಿಡಿದು, ಆ ಕೈಗಳನ್ನು ಮುಖದ ಮುಂಭಾಗದಿಂದ ಎದೆಯ ಮುಂದಕ್ಕೆ ತಂದು, ಪಾರ್ಶ್ವಗಳಿಗೆ ಭುಜದ ನೇರಕ್ಕೆ ನಾಟ್ಯಾರಂಭದಲ್ಲಿ ಚಾಚಲಾಗುತ್ತದೆ. ಇದರಲ್ಲಿ ಕೈಗಳನ್ನು ತಲೆಯ ಮೇಲೆ ಇರಿಸಿದಾಗ ದೇವತೆಗಳಿಗೂ, ಹಣೆಯ ಮುಂದೆ ಗುರುಗಳಿಗೂ, ಎದೆಯ ಮುಂದಿರಿಸಿದಾಗ ಸಭೆಗೂ ನಮಸ್ಕರಿಸುವುದು ಎಂದರ್ಥ.

ನೃತ್ತ ಸೌಂದರ್ಯದ ಪರಾಕಾಷ್ಟೆಯೆನಿಸಿರುವ ಆಲರಿಪು ಕರ್ನಾಟಕ ಸಂಗೀತ ಸಂಪ್ರದಾಯದಲ್ಲಿನ ಅಲಂಕಾರಕ್ಕೂ ,ಗೀತಕ್ಕೂ ಸಂವಾದಿ ಎನ್ನಲಾಗಿದೆ. ಆದರೆ ರಂಗಮಂದಿರದ ದೇವತೆಗಳಿಗಾಗಲಿ, ಸಭೆಗಾಗಲಿ ನಮಸ್ಕರಿಸುವ ಮುದ್ರೆಗಳು ಇಲ್ಲಿಲ್ಲ. ದೇವತೆಗಳಿಗೆ ಸಂಬಂಧಿಸಿದ ಸ್ತ್ರೋತ್ರಗಳು, ಶ್ಲೋಕಗಳು, ಸಭೆಯ ಲಕ್ಷಣ ಕುರಿತಾದ ಸಾಹಿತ್ಯಕ್ಕೆ ಅಭಿನಯಗಳೂ ಇಲ್ಲಿಲ್ಲ. ಹಾಗಾಗಿ ಈಗಾಗಲೇ ನಂಬಲಾಗುತ್ತಿರುವ ಎಲ್ಲಾ ನಿರೂಪಣೆಗಳನ್ನು ಕೆಲವು ವಿದ್ವಾಂಸರು ನಿರಾಕರಿಸುತ್ತಾ ಪ್ರಶ್ನಿಸುತ್ತಾರೆ. ಅವರು ಕೊಡುವ ಕಾರಣಗಳು ಹೀಗಿವೆ…

೧. ಶರೀರವನ್ನು ದೇವರಿಗೆ ಸಮರ್ಪಿಸಿವುದರ ಎಂಬ ಮಾತೇ ನಿಜವಾದರೆ ನಂತರ ಮುಂದಿನ ನೃತ್ಯಕಾರ್ಯಕ್ರಮವೇ ನಿಂತು ಹೋಗುವುದಲ್ಲ ?

೨. ಅಲರ್ ಎಂದರೆ ಹೂ ಎಂಬ ಅಭಿಪ್ರಾಯವನ್ನು ಪುಷ್ಟಿಕರಿಸಲು ಅಗತ್ಯವಾದ ಮುದ್ರೆಗಳ ಬಳಕೆ (ಉದಾ:- ಮುಕುಳ, ಪದ್ಮಕೋಶ, ಅಲಪಲ್ಲವ ಹಸ್ತಗಳು) ಇಲ್ಲಿಲ್ಲ.

೩. ಸಭೆಗೂ ರಂಗಮಂದಿರಕ್ಕೂ ನಮಸ್ಕರಿಸಿ ಪ್ರಾರ್ಥಿಸುವುದು ಎಂದಾದರೆ ಮೊದಲೇ ತಿಳಿಸಿದಂತೆ ಶ್ಲೋಕ, ಸ್ತ್ರೋತ್ರ , ಸಾಹಿತ್ಯಾಭಿನಯ ಇಲ್ಲಿಲ್ಲ.

೪. ಮುಂದಿನ ಕಾರ್ಯಕ್ರಮಕ್ಕೆ ಶರೀರದ ಅಂಗಾಂಗಳು ಬಲಗೊಳ್ಳಲು ಮಾಡುವ ವ್ಯಾಯಾಮ ಎಂದಾದರೆ ಇದು ಕೃತಕ ಅಭಾಸಕರ ಹೇಳಿಕೆ. ವ್ಯಾಯಮ ಎನ್ನುವುದಾದರೆ ತ್ರಿಕಾಲಗಳೇಕೇ ಬೇಕು? ಮತ್ತು ಹಲವು ವರ್ಷಗಳ ನಿರಂತರ ಅಭ್ಯಾಸದಿಂದ ರಂಗಮಂದಿರದಲ್ಲಿ ಪ್ರದರ್ಶನಕ್ಕೆ ಸಿದ್ದಳಾಗಿ ಬಂದಿರುವ ಕಲಾವಿದೆಯು ಸಭಾಸದರ ಎದುರಿನಲ್ಲಿ ವ್ಯಾಯಾಮ ಪ್ರಾರಂಭಿಸುತ್ತಾಳೆ ಎಂಬ ವಿವರಣೆಯು ಅಪಹಾಸ್ಯಕ್ಕೆ ದಾರಿಮಾಡಿಕೊಡುತ್ತದೆಯಲ್ಲವೇ?..ಹೀಗೆ..

ಆದ್ದರಿಂದ ವಿದ್ವಾಂಸರು ಬೇರೆಯೇ ಆದ ಅಭಿಪ್ರಾಯ ಕೊಡುತ್ತಾರೆ. ಅಲರಿಪು ಎಂಬುದು ಪ್ರಾರ್ಥನಾ ರೂಪದ ನೃತ್ಯವಾದರೂ, ಪ್ರಯೋಗದ ಪ್ರಾರಂಭದಲ್ಲಿ ಎಂಟು ವಿಧವಾದ ಪದಗಳಿಂದ ಕೂಡಿದ, ವಿಚಿತ್ರವಾದ ವೇದವಾಕ್ಯಗಳಿಂದ ಸಮ್ಮಳಿತಗೊಂಡ ನಾಟ್ಯವು ಇಂದ್ರನ ಸಭೆಯಲ್ಲಿ ನಡೆಯಿತಂತೆ. ನಾಟ್ಯ ಪ್ರಾರಂಭದಲ್ಲಿ ಪ್ರಾರ್ಥನೆಯು ಮಂಗಳಕರವಾಗಬೇಕೆಂಬ ಉದ್ದೇಶವೂ ಮತ್ತು ಆ ಉದ್ದೇಶವು ಇಲ್ಲವಾದಲ್ಲಿ ಅದು ವೇದವಿರುದ್ದವೂ ಎಂದು ಕಾಣಿಸಿಕೊಡಲಾಯಿತಂತೆ. ಮಂಗಲಾಚರಣವೆಂದರೆ ಪಕ್ಷಪಾತ ರಹಿತವೂ, ನ್ಯಾಯವೂ, ಸತ್ಯವೂ, ಶ್ರುತಿಸಮ್ಮತವೂ ಆದ ಆಜ್ಞೆಯನ್ನು ಯಥಾವತ್ತಾಗಿ ಸದಾ ಆಚರಿಸುವುದು ಕ್ರಮ. ನೃತ್ಯಸಂಯೋಜನೆಯು ಭರತಾಚರ್ಯನು ತಿಳಿಸಿದಂತೆ

೧) ವೇದವಿದ್ಯೆಯಾಗಿರಬೇಕು

೨) ಕ್ರೀಡೆಯಾಗಿರಬೇಕು

೩) ಮನೋರಂಜನೆಯಾಗಿರಬೇಕು

೪) ದೃಶ್ಯವಾಗಿರಬೇಕು

೫) ಶ್ರಾವ್ಯವಾಗಿರಬೇಕು

೬) ಸಾರ್ವಜನಿಕವಾಗಿರಬೇಕು

ಎಂಬ ಈ ಆರು ಅಂಶಗಳನ್ನು ಗಮನದಲ್ಲಿರಿಸಿ, ಸಾಂಪ್ರದಾಯಿಕ ಆಚಾರ್ಯ ಶ್ರೇಷ್ಟರು ನೃತ್ಯವನ್ನು ರೂಪಿಸಬೇಕಾದ ಜವಾಬ್ದಾರಿಯನ್ನು ಹೊತ್ತರು. ಅಂತೆಯೇ ಅಲಂಕಾರ, ಗೀತೆಯ ಸ್ವರಸ್ಥಾನದಲ್ಲಿ ಲಯಗತಿ ಪ್ರಧಾನವಾದ ತತ್ ತಳಾಂಗು ತಧಿಗಿಣತೊಂ ಈ ಮೊದಲಾದ ತತ್ಕಾರಪೂರ್ವಕವಾದ ಶಬ್ಧಗಳನ್ನು ಉಚ್ಛರಿಸುತ್ತಾ ಕ್ರೀಡೆ೦iiಂತೆ ಪ್ರಸ್ತುತಪಡಿಸುವುದು ಉದ್ದೇಶವಾಗಿತ್ತು. ನೃತ್ಯಾರಂಭದಲ್ಲಿ ತತ್ ಎಂಬ ಶಬ್ಧೋಚ್ಚಾರಣೆಗೂ ಅರ್ಥವಿದೆ. ಸಾಮಾನ್ಯವಾಗಿ ಭಾರತದ ಇತರ ನೃತ್ಯಪ್ರಕಾರಗಳೂ ಸಹ ನೃತ್ಯದ ಪ್ರಾರಂಭವನ್ನು ತತ್ಕಾರಪೂರ್ವಕವಾಗಿಯೇ ಆರಂಭಿಸುತ್ತಾರೆ. ಯಾವುದೇ ಶುಭಕರ್ಮಗಳೂ ಯಜ್ಞಭಾವನೆಯಿಂದ ಕೂಡಿದ್ದಲ್ಲಿ ಆ ಕರ್ಮವನ್ನು ತತ್ಕಾರಪೂರ್ವಕವಾಗಿಯೇ ಆರಂಭಿಸತಕ್ಕದೆಂದು ಶಾಸ್ತ್ರವಾಕ್ಯ. ತತ್ ಬ್ರಹ್ಮವಾಚಕ ಶಬ್ಧ, ನಾಟ್ಯವೆಂಬುದು ಯಜ್ಞಸದೃಶ ಕರ್ಮ ಎನ್ನಲಾಗಿದೆ. ಬ್ರಹ್ಮವಸ್ತುವನ್ನು ಕುರಿತಾದ ಶಬ್ಧದಿಂದ ಆರಂಭವಾಗುವ ನಾಟ್ಯಯಜ್ಞದ ಅಂಗವಿನ್ಯಾಸಗಳು ಆಧ್ಯಾತ್ಮ ಅನುಭಾವವನ್ನು ಪ್ರತಿನಿಧಿಸುತ್ತದೆ. ಉಳಿದಂಶಗಳು ಪ್ರೇಕ್ಷಕರ ರಂಜನಾರ್ಥವಾಗಿ ಸೇರಿಸಿರುವ ಕ್ರೀಡಾಕೌಶಲ ಭಾಗಗಳು.

ವಿಮರ್ಶಕರು ಅಲರಿಪುವಿನ ಬಗೆಗೆ ೨ ರೀತಿಯಲ್ಲಿ ಹೇಳಿಕೆ ಕೊಡುತ್ತಾರೆ:

೧. ರಂಗಸ್ಥಳದ ಮಧ್ಯದಲ್ಲಿ ಸ್ವಯಂಬ್ರಹ್ಮನೇ ಸ್ಥಿತನಾಗಿರುವ ಕಾರಣದಿಂದ ರಂಗಸ್ಥಳ ಮಧ್ಯದಲ್ಲಿ ಪುಷ್ಪವೃಷ್ಟಿ ಕ್ರಿಯೆಯು ಮಾಡಬೇಕೆಂಬ ನಾಟ್ಯಶಾಸ್ತ್ರದ ಸೂಚನೆಯನ್ನು ಗಮನದಲ್ಲಿರಿಸಿದರೆ ಅಲರ್ ಎಂಬ ಶಬ್ದವು ಪುಷ್ಪಮೋಕ್ಷಣವೆಂಬ ಅರ್ಥವನ್ನು ಸೂಚಿಸಲು ಬಳಸಿಕೊಂಡಿರುವ ಮಾತು.

೨. ಮಂಗಲಾಚರಣೆಯನ್ನು ನಾಂದೀರೂಪದಲ್ಲಿ ಪ್ರದರ್ಶಿಸಬೇಕಾಗಿರುವುದರಿಂದ ಪುಷ್ಪಮೋಕ್ಷಣೆಯ ನಂತರ ನೃತ್ಯವು ನಾಂದೀ ರೂಪದ ಶ್ರುತಿಸಮ್ಮತವಾದ ಪ್ರಾರ್ಥನೆಯನ್ನು ಉದ್ದೇಶವಾಗಿಟ್ಟು ರಚಿಸಿರುವ ಕ್ರೀಡೆ.

ಈ ನಿಟ್ಟಿನಲ್ಲಿ ವಿಮರ್ಶಕ ವಿ.ಎಸ್. ಕೌಶಿಕ್‌ರು ಈ ಅಭಿಪ್ರಾಯಕ್ಕೆ ಬರುತ್ತಾರೆ ಅಲರಿಪು ಎಂಬ ನೃತ್ಯವು ಪುಷ್ಪಮೋಕ್ಷಣವೆಂಬ ಅರ್ಥವನ್ನು ಮಾತ್ರ ಸೂಚಿಸಿ, ಅನಂತರದಲ್ಲಿ ನರ್ತಕರು ಮಾಡುವ ನೃತ್ಯವಿನ್ಯಾಸಗಳು ನಾಟ್ಯಪ್ರಾರಂಭದಲ್ಲಿ ಮಂಗಲಾಚರಣೆಗಾಗಿ ಅಧ್ಯಾತ್ಮ ದೇವತೆಗಳ ಪ್ರಾರ್ಥನೆಯಿಂದ ಕೂಡಿದ ಶಿಕ್ಷಾವಲ್ಲಿಯ ಶಾಂತಿಮಂತ್ರವನ್ನು ಅನುಕರಣೆ ಮಾಡುವ ನೃತ್ಯ

ಅಲರಿಪುವಿನಲ್ಲಿ ಬಳಸುವ ಚಲನೆಗಳು ಮತ್ತು ದೇವತಾಶಕ್ತಿಗಳು

೧. ಅಂಜಲಿ ಮುದ್ರೆಯಿಂದ ನಮಸ್ಕಾರ ಮತ್ತು ಕಣ್ಣು ಬಲ ಮತ್ತು ಎಡಕ್ಕೆ ಚಲಿಸುವುದು -> ಸೂರ್ಯ ಚಂದ್ರರಿಗೆ ವಂದಿಸಿದಂತೆ

೨. ಪಾರ್ಶ್ವಗಳಲ್ಲಿ ವಿನ್ಯಾಸ ಮಾಡುವ ಮುಕುಳ ಹಸ್ತ -> ವರುಣನಿಗೆ ವಂದಿಸಿದಂತೆ

೩. ಭುಜದ ಚಲನೆ ಅಥವಾ ಬಲಶಕ್ತಿ -> ಇಂದ್ರನಿಗೆ ವಂದನೆ

೪. ಭುಜಪ್ರದೇಶದ ಸುತ್ತಲೂ ಕೈಗಳು ಚಲಿಸುವುದು -> ಗುರುವಿಗೆ ಅಥವಾ ಬೃಹಸ್ಪತಿಗೆ ವಂದನೆ

೫. ವಿಸ್ತೀರ್ಣವಾಗಿ ಹೆಜ್ಜೆಯಿಡುವ ಪಾದ ಅರ್ಧಪತಾಕ ಹಸ್ತಮುದ್ರೆ ಹಿಡಿದು ದಿಧಿತೈ, ಧಿದಿತೈ ಅಡವು ಉರುಕ್ರಮಗಳು -> ವಿಷ್ಣುವಿಗೆ ವಂದನೆ

೬. ಮೂರನೆಯ ಕಾಲದಲ್ಲಿ ತಾಂದಿತ್ತಾತೈತತೈ ಎಂಬ ಜತಿಗೆ ಚಲಿಸುವ ಹಸ್ತ -> ವಾಯುವಿಗೆ ವಂದನೆ

೭. ನಿಂತು ಮತ್ತು ಕುಳಿತು ಭುಜದ ಸುತ್ತಲೂ ಅಲಪದ್ಮ ಹಸ್ತವನ್ನು ಹೃದಯದ ಸಮೀಪದಿಂದ ಚಲಿಸುವುದು -> ಬ್ರಹ್ಮನ ವಿಶ್ವವ್ಯಾಪಕತೆಗೆ ನಮನ

ಅಲರಿಪುವನ್ನು ೫ ಜಾತಿಗಳಲ್ಲಿ ಅಂದರೆ ಚತುರಶ್ರ, ತಿಶ್ರ, ಮಿಶ್ರ, ಖಂಡ ಹಾಗೂ ಸಂಕೀರ್ಣಗಳಲ್ಲಿ ಮಾಡುವ ರೂಢಿ. ಮೊದಲು ಅಲರಿಪು ಚತುರಶ್ರ ಜಾತಿಯ ರೂಪಕತಾಳದಲ್ಲಿ ಇತ್ತೆನ್ನಲಾಗಿದೆ. ಆದರೆ ಮಾಡಿದ್ದನ್ನೇ ಮಾಡುವ ಬದಲು ನವ್ಯತೆಯನ್ನು ಅನುಸರಿಸಿ ಆಲರಿಪುವಿನಲ್ಲೇ ಗತಿಭೇದಗಳು ಪ್ರಯೋಗಿಸಲ್ಪಟ್ಟು, ಹೆಚ್ಚು ಕಮ್ಮಿ ಆ ಚಲನ ವಲನಗಳನ್ನು ಅನುಸರಿಸುತ್ತಾ ಅಲ್ಪಸ್ವಲ್ಪ ಬದಲಾವಣೆಗಳನ್ನು ಮಾಡಿಕೊಂಡು ಬೇರೆಬೇರೆ ಜಾತಿಗಳಲ್ಲಿ ನಡೆಸಿದ್ದರಿಂದ ಇತರ ಜಾತಿಯ ಅಲರಿಪು ಪ್ರಯೋಗವಾಯಿತೆನ್ನಲಾಗಿದೆ. ಇತ್ತೀಚೆಗೆ ಕೆಲವರು ಈ ಅಲರಿಪುವಿನ ಹಿನ್ನೆಲೆಗೆ ವಿಶಿಷ್ಟ ರೀತಿಯೆಂದು ತಾಳ ರಾಗಕ್ಕೆ ಹೊಂದುವ ಬೇರೆ ಬೇರೆ ಹಾಡುಗಳನ್ನು ಜೋಡಿಸಿ ನರ್ತಿಸುತ್ತಾರೆ.

ಅಲಂಕಾರದ ಏಳು ತಾಳಗಳಲ್ಲಿ, ಐದು ಜಾತಿಯಲ್ಲಿ ಅಂದರೆ ಒಟ್ಟು ೩೫ ಬಗೆಗಳಲ್ಲಿ ಯಾವುದಾದರೊಂದರ ಅಡಿಪಾಯದ ಮೇಲೆ ಅಲರಿಪುವನ್ನು ಸಂಯೋಜಿಸಬಹುದು. ಹೆಚ್ಚಾಗಿ ಪ್ರಚಲಿತವಿರುವ ಅಲಾರಿಪುಗಳೆಂದರೆ ತಿಶ್ರ, ಚತುರಶ್ರ, ಮಿಶ್ರ, ಜಾತಿಯವು. ಸಾರಂಗದೇವ ತನ್ನ ಸಂಗೀತರತ್ನಾಕರ (೧೨೩೦)ದಲ್ಲಿ ಹತ್ತು ದೇಶಿಲಾ ಸ್ಯಾಂಗಗಳನ್ನು ತಿಳಿಸುವಾಗ, ಮೊದಲನೆಯದಾಗಿ ಚಲಿ ಅಂದರೆ ಚಲನ ಎಂಬ ಶಬ್ಧವನ್ನು ಉಪಯೋಗಿಸುತ್ತಾನೆ. ದೇಹಾಂಗಗಳ ಚಲನೆಗಳು ಲಾಲಿತ್ಯ ಪೂರ್ಣವಾಗಿ ಮೃದು ಮಧುರವಾಗಿ ತ್ರಶ್ಯ ಗತಿಯಲ್ಲಿರತಕ್ಕುದು. ಇದು ಅಲರಿಪುವಿನೊಂದಿಗೆ ಹೊಂದುತ್ತದೆ ಎಂಬ ಅಭಿಪ್ರಾಯ ಅವನದ್ದು. ಮೇಲತ್ತೂರಿನ ಭರತಂ ಕಾಶೀನಾಥಯ್ಯ (೧೬೯೦-೧೭೬೪) ಅವರು ೯ ಅಲರಿಪುಗಳನ್ನು ಬೇರೆ ಬೇರೆ ತಾಳಗಳಲ್ಲಿ ಬರೆದಿದ್ದಾರೆ ಎನ್ನಲಾಗಿದೆ. ಅವುಗಳಲ್ಲಿ ದ್ವಿರಾಜಶೇಖರ, ಶಶಾಂಕ, ಮತ್ತು ಮದನಕುಂಜಿರವೆಂಬ ಹೆಸರುಗಳೂ ಮತ್ತು ತ್ರಿಪುಟ, ಅಟ್ಟ, ಝುಂಫೆ, ಆದಿತಾಳಗಳಲ್ಲೂ ಇವೆ. ಇವೆಲ್ಲವೂ ತಾಳದ ಮೂರು ನಡೆಗಳಲ್ಲಿ ಮುಕ್ತಾಯ ಸಹಿತವಾಗಿವೆ.

ಸಾಮಾನ್ಯವಾಗಿ ಒಂದು ವರ್ಷಗಳ ಕಾಲದ ಪ್ರಾರಂಭಿಕ ಅಡವುಗಳ ಪಾಠ ಮುಗಿದ ನಂತರ ವಿದ್ಯಾರ್ಥಿ ಅಲರಿಪುವನ್ನು ಕಲಿಯಲು ತಯಾರಾಗುತ್ತಾರೆ. ಇತ್ತೀಚೆಗಿನ ದಿನಗಳಲ್ಲಿ ಕೆಲವು ಕಲಾವಿದರು ಅಲರಿಪುವನ್ನು ಮತ್ತಷ್ಟು ಶೃಂಗರಿಸುವ ಉದ್ದೇಶದಿಂದಲೋ ಏನೋ ಅಡವುಗಳನ್ನು ತೆಗೆದು ಅನಾವಶ್ಯಕವಾದ ನೃತ್ಯ ಭಂಗಿಗಳನ್ನು ಕೂಡಿಸುತ್ತಿದ್ದಾರೆ. ಇಂತಹ ಪ್ರಯತ್ನಗಳು ಅಲಂಕಾರ ಪ್ರಾಯವಾದರೂ ನೃತ್ಯದ ಮೂಲ ಉದ್ದೇಶವನ್ನು ಸಾಧಿಸುವಲ್ಲಿ ಖಂಡಿತಾ ವಿಫಲಗೊಳ್ಳುತ್ತವೆ.

2 Responses to ಅಲರಿಪು

  1. ramakrishna

    ಅಲರಿಪು ಎನ್ನುವುದಾಗಿ ಈಗ ಯಾವುದನ್ನು ನಾವು ಹೇಳುತ್ತೆವೆಯೋ ಅದು ನಮ್ಮ ಕರ್ನಾಟಕದಲ್ಲಿ ಅದಕ್ಕೆ “ಅಲರಿ” ಎಂದು ಹಿರಿಯ ನಾಟ್ಯಾಚಾರ್ಯರು ಕಂಡುಕೊಂಡಿದ್ದಾರೆ. “ಅಲರಿ” ಎಂದರೆ ಹೂ ಅರಳುವುದು ಎಂಬ ಅರ್ಥ ಸರಿಯಾದುದಲ್ಲ. ಹೆಚ್ಚಾಗಿ ನಾಟ್ಯದ ವಿಷಯದಲ್ಲಿ ಹೆಚ್ಚು ಶಬ್ದಗಳನ್ನು ಸಂಸ್ಕೃತ ಪದಗಳನ್ನು ಬಳಸಿರುವುದನ್ನು ನಾವೆಲ್ಲಾ ಕಾಣುತ್ತೇವೆ. ಹಾಗೆಯೇ “ಅಲರಿ” ಎಂಬ ಶಬ್ದ ಸಂಸ್ಕೃತ ಪದ ಎಂದು ತಿಳಿದು ವಿಚಾರ ಮಾಡಿದಾಗ ಸರಿಯಾದ ಅರ್ಥ ತಿಳಿಯುತ್ತದೆ.

  2. Savithri

    ಅಲರಿಪು ಸಂಸ್ಕೃತಪದ ಖಂಡಿತಾ ಅಲ್ಲ. ದ್ರಾವಿಡ ಭಾಷೆಯ ಶಬ್ದವದು. ಕನ್ನಡಕ್ಕೆ ಸೀಮಿತವಾದುದೂ ಅಲ್ಲ. ಸಂಸ್ಕೃತದ ಹಿನ್ನೆಲೆ ನೀಡುವ ಭ್ರಮೆ ತಪ್ಪು. ರಾಮಕೃಷ್ಣ ಅವರ ಅಭಿಪ್ರಾಯದ ಹಿಂದೆ ಇಂದಿನ ನೃತ್ಯಕಾರ್ಯಕ್ರಮಗಳ ತಪ್ಪು ತಪ್ಪಾದ ನಿರೂಪಣೆಯ ಪ್ರಭಾವ ಎದ್ದು ಕಾಣುತ್ತದೆ. ನೃತ್ಯ ಕಾರ್ಯಕ್ರಮಗಳ ನಿರೂಪಣೆಯಲ್ಲಿ ನಿರೂಪಕರು ತಮ್ಮ ಅಪಸವ್ಯಗಳನ್ನು ತಿದ್ದಿಕೊಂಡರೆ ಇಂತಹ ಅಪಕಲ್ಪನೆಗಳು ಏಳುವುದಿಲ್ಲ ಎನಿಸುತ್ತದೆ.
    ಅಷ್ಟಕ್ಕೂ ಅಲರಿಪು ಎನ್ನುವ ಶಬ್ದ ಮರಾಠ ರಾಜನು ಮರಾಠೀಯಲ್ಲಿ ಬರೆದ 7 ನಿರೂಪಣಗಳಲ್ಲಿ (೧೯ನೇ ಶತಮಾನದ ಪೂರ್ವಾರ್ಧ) ಮೊದಲಬಾರಿಗೆ ಕಂಡೂ ಬರುತ್ತದೆ. ಅದನ್ನು ಆಧರಿಸಿಯೇ ತಂಜಾವೂರು ಸಹೋದರರು ಅಲರಿಪುವನ್ನು ಸದಿರ್ ಕಾರ್ಯಕ್ರಮದ ನೃತ್ತಬಂಧವಾಗಿ ರಚಿಸಿದರು. ಅದಕ್ಕೂ ಹಿಂದೆ ಅಲರಿಪ್ಪುವಿನ ಕುರಿತಾಗಿ ಯಾವ ಶಾಸ್ತ್ರಗ್ರಂಥಗಳೂ ಉಲ್ಲೇಖಿಸಿಲ್ಲ. ಈ ಲೇಖನಕ್ಕಿಂತಲೂ ಮನೋರಮಾ ಅವರ ನೃತ್ಯಮಾರ್ಗ ಮುಕುರ ಎಂಬ ಭರತನಾಟ್ಯದ ಕೃತಿಯು ಅಲರಿಪುವನ್ನೂ ಒಳಗೊಂಡಂತೆ ಹಲವು ನೃತ್ಯಬಂಧಗಳ ಸಾಧ್ಯತೆ, ಇತಿಹಾಸವನ್ನು ವಸ್ತುನಿಷ್ಠವಾಗಿ ವಿವೇಚಿಸಿದ್ದು ಅದನ್ನು ಗಮನಿಸುವುದು ಒಳಿತು ಎಂಬುದು ನನ್ನ ಅನಿಸಿಕೆ. ವೈಷ್ಣವಿ ಅವರ ಲೇಖನದಲ್ಲಿ ವಿ.ಎಸ್.ಕೌಶಿಕ್ ಅವರ ಅಭಿಪ್ರಾಯಗಳೇ ಹೆಚ್ಚು ಕಾಣುತ್ತದೆ.

Leave a Reply

*

code