ಅಂಕಣಗಳು

Subscribe


 

ಬೆಂಗಳೂರು ಅಂತರ್ರಾಷ್ಟ್ರೀಯ ಕಲಾ ಉತ್ಸವ

Posted On: Saturday, October 15th, 2011
1 Star2 Stars3 Stars4 Stars5 Stars (1 votes, average: 5.00 out of 5)
Loading...

Author: ಮನೋರಮಾ. ಬಿ.ಎನ್

(೧೫ ಸೆಪ್ಟೆಂಬರ್-೨೫ ಸೆಪ್ಟೆಂಬರ್ )

aruna mohanti and troupe


ವೈಭವೋಪೇತ ಆರಂಭ ಮತ್ತು ಅಂತ್ಯ ಕಂಡ ಈ ಉತ್ಸವ ಹಿಂದೂಸ್ಥಾನಿ, ಕರ್ನಾಟಕ ಸಂಗೀತ, ವಾದ್ಯಸಂಗೀತ ಜಾಜ್, ಸಮಕಾಲೀನ, ನಾಟಕ, ಜಾನಪದ ..ಹೀಗೆ ಹತ್ತು ಹಲವು ದಿಕ್ಕುಗಳನ್ನು ಸ್ಪರ್ಶಿಸಿದೆ. ಈ ಹಿನ್ನಲೆಯಲ್ಲಿ ಕಲಾ ಉತ್ಸವದ ಅಂಗವಾಗಿ ಜರುಗಿದ ನೃತ್ಯಪ್ರದರ್ಶನಗಳು ಪಾರಂಪರಿಕ ಮತ್ತು ಸಮಕಾಲೀನ ಸ್ಪರ್ಶವನ್ನು ಜೊತೆಜೊತೆಗೇ ಇತ್ತಿದೆ. ಸೆಪ್ಟೆಂಬರ್ ೨೪ರಂದು ಬೆಂಗಳೂರಿನ ಬ್ರಿಗೇಡ್ ಮಿಲೇನಿಯಂ ಆವರಣದಲ್ಲಿ ಪದ್ಮಿನಿ ರವಿ ಅವರ ಭರತನಾಟ್ಯ, ಅನುಜ್ ಮಿಶ್ರಾ ಅವರ ಕಥಕ್ ಆಯೋಜನೆಗೊಂಡು ಗಮನ ಸೆಳೆದರೆ; ಚೌಡಯ್ಯ ಸಂಸ್ಮರಣಾ ಭವನದಲ್ಲಿ ಅರುಣಾ ಮೊಹಾಂತಿ ಮತ್ತು ತಂಡ ಪ್ರಸ್ತುತಪಡಿಸಿದ ಒಡಿಸ್ಸಿ ಸಮೂಹ ನೃತ್ಯ ಸಂಯೋಜನೆ ಚಿತ್ತಾಕರ್ಷಕವಾಗಿ ಹೊರಹೊಮ್ಮಿತ್ತು. ಪುರಿ ಜಗನ್ನಾಥನ ಉತ್ಸವದ ಕುರಿತಾಗಿ ಪ್ರಸ್ತುಪಡಿಸಿದ ಸಮೂಹ ಸಂಯೋಜನೆಯು ಸೂಕ್ತ ಪರಿಕರ, ಲಾಲಿತ್ಯ, ವೇಗ, ಭಾವತನ್ಮಯತೆಯಿಂದೊಡಗೂಡಿ ಪ್ರೇಕ್ಷಕರನ್ನು ಕ್ಷಣಾರ್ಧದಲ್ಲಿ ತನ್ನ ತೆಕ್ಕೆಗೆ ಸೆಳೆದರೆ ನಂತರ ಪ್ರದರ್ಶಿತಗೊಂಡ ವಂದೇ ಮಾತರಂ- ಭಾರತಮಾತೆ ಮತ್ತು ಒರಿಸ್ಸಾದ ಉತ್ಕಲ ದೇವಿಯರ ವರ್ಣನೆಯಲ್ಲಿ ಉದ್ದೇಶಿತಾರ್ಥವನ್ನು ಸಮರ್ಥವಾಗಿ ನಿರೂಪಿಸಿ ಉತ್ತಮ ಮುಕ್ತಾಯವನ್ನು ಕೊಟ್ಟಿತು. ಹಿನ್ನಲೆ ಸಂಗೀತಕ್ಕೆ ಬಳಸಲಾದ ರೆಕಾರ್ಡೆಡ್ ಆಡಿಯೋ ಪ್ರಸ್ತುತಿಯಲ್ಲಿ ಅಲ್ಲಲ್ಲಿ ನುಸುಳಿದ ತೊಂದರೆಗಳು ಮತ್ತು ವೀಡಿಯೋ ಸ್ಕ್ರೀನ್‌ನ ಹೊಂದಾಣಿಕೆ ಇರಿಸುಮುರಿಸನ್ನಿತ್ತು ಅಡಚಣೆ ಮಾಡಿದ್ದನ್ನು ಹೊರತುಪಡಿಸಿದರೆ ನೃತ್ಯ ಪ್ರಸ್ತುತಿಯ ರಂಜನೀಯತೆಯಲ್ಲಿ ಎರಡು ಮಾತಿಲ್ಲ.

aditi mangaladas

ನಂತರ ಅದಿತಿ ಮಂಗಲ್ ದಾಸ್ ಮತ್ತು ತಂಡ ಪ್ರಸ್ತುತಪಡಿಸಿದ ಕಥಕ್ ನೃತ್ಯ ಹೊಸ ಬಗೆಯ ಬೆಡಗನ್ನಿತ್ತಿದಾದರೂ ಭಾವ ಸ್ಫುಟತೆಯ ಕೊರತೆ ಎದ್ದು ಕಾಣುತ್ತಿತ್ತು. ಒಂದರ್ಥದಲ್ಲಿ ರಭಸದ ಚಕ್ಕರ್, ರಂಗಸಜ್ಜಿಕೆ, ಬೆಳಕಿನ ಸಂಯೋಜನೆಯ ಸೊಗಸಿಗೆ ಇತ್ತ ಮಹತ್ತ್ವದ ಮುಂದೆ ನೃತ್ಯ ತನ್ನ ಉದ್ದೇಶಿತ ನಿಲುವನ್ನು ಸಂವಹಿಸುವಲ್ಲಿ ಹಿನ್ನಡೆ ಅನುಭವಿಸಿತು. ಎಷ್ಟೇ ಭವ್ಯವಾಗಿದ್ದರೂ; ಭಾವವಿಹೀನತೆ ಮತ್ತು ನೃತ್ಯವನ್ನು ಆನಂದಿಸುವ ಕ್ರಿಯೆಯಿಲ್ಲದಿರುವಿಕೆಯು ರಸದೃಷ್ಟಿಯನ್ನು ಕಾಣುವಲ್ಲಿ ಖಂಡಿತಾ ಸೋಲುತ್ತದೆ.


1 Response to ಬೆಂಗಳೂರು ಅಂತರ್ರಾಷ್ಟ್ರೀಯ ಕಲಾ ಉತ್ಸವ

  1. Kaa.Vee.Krishnadas

    Good Effort from Team Noopura Bhramari.Thanks.

Leave a Reply

*

code