ಅಂಕಣಗಳು

Subscribe


 

ನೃತ್ಯ ರಂಗದ ಅನಭಿಷಿಕ್ತ ರಾಣಿ: ರುಕ್ಮಿಣಿ- ಭಾಗ4

Posted On: Wednesday, April 15th, 2009
1 Star2 Stars3 Stars4 Stars5 Stars (1 votes, average: 4.00 out of 5)
Loading...

Author: ಮನೋರಮಾ. ಬಿ.ಎನ್

…… ಈವರೆಗೆ
ನೃತ್ಯದ ಬಗೆಗಿನ ತುಡಿತ ರುಕ್ಮಿಣಿಯರನ್ನು ಕರೆ ತಂದದ್ದು ಸಾದಿರ್ ನೃತ್ಯಾಭ್ಯಾಸಕ್ಕೆ. ತಂಜಾವೂರ್ ಸಹೋದರರ ಮೊಮ್ಮಗ ಮೀನಾಕ್ಷಿ ಸುಂದರಂ ಪಿಳ್ಳೈ ಅವರ ಮಾರ್ಗದರ್ಶನದಲ್ಲಿ ರುಕ್ಮಿಣಿಯವರ ನೃತ್ಯ ಕಲಿಕೆ ಸಾಗುತ್ತದೆ. ೧೯೩೫, ಡಿಸೆಂಬರ್. ಥಿಯೋಸೋಫಿಕಲ್ ಸೊಸೈಟಿಯ ವಜ್ರ ಮಹೋತ್ಸವ ವರ್ಷ.. ರುಕ್ಮಿಣಿಯವರ ಮೊದಲ ಸಾದಿರ್ ನೃತ್ಯ ಪ್ರದರ್ಶನವದು..! ಒಂದರ್ಥದಲ್ಲಿ ಅವರು ಮೊದಲು ರಂಗಪ್ರವೇಶ ಮಾಡಿದ್ದು..)rukmini devi arundale

ಗಿನ ಕಾಲದಲ್ಲಿ ನೃತ್ಯವನ್ನು ನಡೆಸಿಕೊಳ್ಳಲಾಗುತ್ತಿದ್ದ ಕ್ರಮಕ್ಕೆ ಮತ್ತು ನೃತ್ಯ ಪ್ರದರ್ಶಿಸುವ ಪದ್ಧತಿ ನೋಡಿ ಹಲವು ಮಡಿವಂತರು, ಕಲಾಸಕ್ತರು ಸಾದಿರ್ ಎಂದರೆ ಸಾಕು, ಮೂಗು ಮುರಿಯುತ್ತಿದ್ದರು. ಆಗಿನ ಕಾಲದ ಶ್ರೀನಿವಾಸ ಶಾಸ್ತ್ರಿ, ಸಿ.ಪಿ. ರಾಮಸ್ವಾಮಿ ಅಯ್ಯರ್, ಪಿ. ಶಿವಸಾಮಿ ಅಯ್ಯರ್ ಅವರಂತಹ ವಿದ್ವನ್ಮಣಿಗಳು ನೃತ್ಯದ ಅವಸ್ಥೆ ಕಂಡು ಯಾವುದೇ ಪ್ರದರ್ಶನಕ್ಕೂ ಕಾಲಿಡುತ್ತಿರಲಿಲ್ಲ. ಇಂತಹುದೇ ಒಂದು ಸಂದರ್ಭದಲ್ಲಿ ರುಕ್ಮಿಣಿಯವರ ಮೊದಲ ರಂಗಪ್ರವೇಶ. ಕಲಾಸಕ್ತರನ್ನು ಸೆಳೆಯುವುದು ಅಷ್ಟು ಸುಲಭದ ಮಾತೇ?
ರುಕ್ಮಿಣಿ ಅರುಂಡೇಲ್ ಅವರು ಇಂತಹ ವಿದ್ವನ್ಮಣಿಗಳನ್ನು ಬೇಡಿ ಕರೆಸಿಕೊಂಡಿದ್ದರು. ಅಂದು ರುಕ್ಮಿಣಿ ಅವರೇ ಹೆಣೆದ ಶೈಲಿಯಲ್ಲಿ ಮಾರ್ಗ ಪದ್ಧತಿ ಅಂದರೆ ಸಿದ್ಧಪಡಿಸಿದ ನೃತ್ಯ ಕ್ರಮದ ಮೂಲಕ ಸಾದಿರ್‌ನ್ನು ಪ್ರದರ್ಶನ. ಆದರೆ ಕಾಲ-ಸಮಯವನ್ನು ಮೀರಿ ನೆರೆದವರನ್ನು ಭಾವಪರವಶಗೊಳಿಸಿದ್ದು ಈಗ ಇತಿಹಾಸ. ನೃತ್ಯವೂ ಅಂತದ್ದೊಂದು ದೈವಿಕ ಅನುಭೂತಿಯನ್ನು ನೀಡಬಲ್ಲುದು ಎಂಬ ಸನಾತನ ನುಡಿಗೆ ಸಾಕ್ಷಿಯೆನಿಸಿತು.
ರುಕ್ಮಿಣಿಯವರ ನೃತ್ಯಕ್ಕೆ ಬೆರಗಾಗದವರು ಯಾರು? ಐರಿಶ್ ಕವಿ ಜೇಮ್ಸ್ ಕಸಿನ್ಸ್ ನಿಂದ ಮೊದಲ್ಗೊಂಡು ಹಲವು ವಿದೇಶಿ ಪಂಡಿತರೂ ಕೂಡಾ ಭಾರತೀಯ ನೃತ್ಯಕ್ಕೆ ಮನಸೋತರು, ರೋಮಾಂಚನಗೊಂಡರು.
ಈ ಪ್ರದರ್ಶನ ಕಲಾಸಕ್ತರಿಗಿಂತಲೂ ಹುರುಪು ತಂದಿತ್ತದ್ದು ರುಕ್ಮಿಣಿ ಮತ್ತು ಅವರ ಪತಿ ಅರುಂಡೇಲ್ ಅವರಿಗೆ. ಇಂಥಹ ಕಾರ್ಯಕ್ರಮಗಳ ಮೂಲಕ ಮತ್ತಷ್ಟು ಸುಧಾರಣೆಗಳನು ಮಾಡುವ ಉತ್ತೇಜನ ದೊರೆತಿತ್ತು. ಒಳ್ಳೆಯ ವಿಷಯಗಳನ್ನು ಒಳ್ಳೆಯ ರೀತಿಯಲ್ಲಿ ಒಳೆಯ ವೇದಿಕೆಯಲ್ಲಿ ಹೇಳಿದರೆ ಉತ್ತಮ ಬದಲಾವಣೆಗಳನ್ನು ನಿರೀಕ್ಷಿಸಲು ಸಾಧ್ಯ ಎಂದು ಅನಿಸಿತ್ತು. ಹೀಗಾಗಿ ಅವರ ಯೋಚನೆ ರೂಪ ತಾಳಿದ್ದು ಇಂಟರ್ ನ್ಯಾಷನಲ್ ಅಕಾಡೆಮಿ ಆಫ್ ಆರ್ಟ್ಸ್  ಎಂಬ ಸಂಸ್ಥೆಯ ಮೂಲಕ.
ಅನಿ ಬೆಸೆಂಟ್ ಅವರ ಕನಸಿನ ಕೂಸು ಇದು. ಭಾರತೀಯ ಕಲೆಗಳಿಗೆ ಮೋಂಟೆಸ್ಸರಿ ಪದ್ಧತಿಯ ಶಿಕ್ಷಣವನ್ನು ವಿಸ್ತರಿಸಿ, ಅಕಾಡೆಮಿಕ್ ಮಾನ್ಯತೆ ನೀಡಿ ಸಮಾಜದ ಪ್ರಮುಖ ವಾಹಿನಿಯಲ್ಲಿ ತಂದಿರಿಸಬೇಕೆಂಬ ಧ್ಯೇಯ ಹೊತ್ತು ಹೊರಟ ಸಂಸ್ಥೆ. ಪ್ರಾಥಮಿಕ, ಮಾಧ್ಯಮಿಕ, ಕಾಲೇಜು ವಿದ್ಯಾಭ್ಯಾಸದೊಂದಿಗೆ ಸುಸಜ್ಜಿತ ಗ್ರಂಥಾಲಯ, ಕರಕುಶಲ ವಸ್ತು ತರಬೇತಿ ಸಂಸ್ಥೆ, ಗೃಹ ಕೈಗಾರಿಕೆ.., ಹೀಗೆ ಹತ್ತು ಹಲವು ಕೋರ್ಸ್‌ಗಳು ಸಣ್ಣ ಮಟ್ಟಿಗೆ ಪ್ರಾರಂಭವಾದವು. ಭಾರತದಲ್ಲಿ ಮೊದಲ ಬಾರಿಗೆ ಪತ್ರಿಕೋದ್ಯಮ ಶಿಕ್ಷಣ ನೀಡುವ ಡಿಪ್ಲೊಮಾ ಪದವಿ ಪ್ರಾರಂಭವಾದದ್ದೂ ಇಲ್ಲಿಯೇ ! ರುಕ್ಮಿಣಿ ಅರುಂಡೇಲ್, ಅವರ ಪತಿ ಜಾರ್ಜ್ ಅರುಂಡೇಲ್, ಇ. ಕೃಷ್ಣ ಅಯ್ಯರ್ ಅವರಂತಹ ಹಲವು ಮಹನೀಯರನ್ನು ಬಗಲಿಗಿರಿಸಿಕೊಂಡು ೧೯೩೬ರಲ್ಲಿ ತಮಿಳುನಾಡಿನ ಅಡೆಯಾರ್ ಗ್ರಾಮದಲ್ಲಿ ಸ್ಥಾಪನೆಗೊಂಡಿತು.ruk1
ಸ್ಥಾಪನೆಗೊಂಡರೆ ಸಾಕೇ ! ಸಕಾಲಿಕವಾದ ಪದ್ಧತಿಗಳು ಬೇಡವೇ? ಹೀನಾಯ ಸಂಪ್ರದಾಯಗಳನ್ನು, ಕಳಂಕಗಳನ್ನು ತೊಡೆಯಬೇಡವೇ? ಹಲವು ಸಂಕಟ, ಸಂಕಷ್ಟ, ಮೂದಲಿಕೆಗಳ ನಡುವೆಯೇ ರುಕ್ಮಿಣೀದೇವಿ, ಕೃಷ್ಣ ಆಯ್ಯರ್, ಕುಂಭಕೋಣಂ ಕೆ. ಭಾನುಮತಿ ಮತ್ತು ಟಿ. ಬಾಲಸರಸ್ವತಿ ಹೀಗೆ ನೃತ್ಯ ಕ್ಷೇತ್ರದ ವಿದ್ವಾಂಸರು ಸಾದಿರ್‌ನ್ನು ಪರಿಷ್ಕರಿಸಲು ಮುಂದಾದರು. ರುಕ್ಮಿಣೀ ಅವರ ಪ್ರಥಮ ಗುರು ಮುತ್ತುಕುಮಾರ ಪಿಳ್ಳೈ ಅವರನ್ನೂ ಸೇರಿದಂತೆ ಮೀನಾಕ್ಷಿ ಸುಂದರಂ ಪಿಳ್ಳೈ, ಚೊಕ್ಕಲಿಂಗಂ ಪಿಳ್ಳೈ, ಕಾರೈಕ್ಕಲ್ ಶಾರದಾಂಬಳ್ ಅಮ್ಮಳ್, ದಂಡಾಯುಧಪಾಣಿ ಪಿಳ್ಳೈ, ಮೈಲಾಪುರ ಗುರೀ ಅಮ್ಮಳ್ ಮುಂತಾದ ನಟ್ಟುನ್ನಾರ್‌ಗಳು, ಗುರುಗಳೂ ಕೈಜೋಡಿಸಿದರು. ಅದರ ಫಲವೇ ಭರತನಾಟ್ಯ.
ನೃತ್ಯಕ್ಕೆ ಮನ್ನಣೆ ನೀಡುವಲ್ಲಿ ಸೂಕ್ತವಾದ, ಪೂಜನೀಯವೆನಿಸುವ ಹೆಸರೊಂದು ಬೇಕು ಎಂದು ಅವರಿಗೆ ಅನ್ನಿಸಿದ್ದೇ ತಡ, ನಾಟ್ಯಶಾಸ್ತದ ಪ್ರವರ್ತಕನೆನಿಸಿದ ಭರತ ಮತ್ತು ಆತನ ಗ್ರಂಥದ ಹೆಸರಿನಿಂದ ಮೊದಲ್ಗೊಳ್ಳುವ ನಾಮಧೇಯವೇ ಸಮಂಜಸವೆನಿಸಿತು. ಮಾತ್ರವಲ್ಲ ಭರತ ಎಂಬ ಮೂರಕ್ಷರದ ಪದದಲ್ಲಿ ಅಭಿವ್ಯಕ್ತಿಯ ಅವಶ್ಯಕ ಅಂಶಗಳಾದ ಭಾವ, ರಾಗ, ತಾಳವನ್ನು ಸಂಯೋಜನೆ ದೊರೆಯುತ್ತದೆ ಎಂದಾದ ಮೇಲೆ ಅದಕ್ಕಿಂತ ಸೂಕ್ತ ಇನ್ಯಾವುದಿದೆ? ಮಾತ್ರವಲ್ಲ, ಶತಶತಮಾನಗಳಿಂದಲೂ ಚಾಲ್ತಿಯಲ್ಲಿದ್ದರೂ ಹಲವು ಬದಲಾವಣೆಗಳಿಗೆ ಸಾಕ್ಷಿಯಾಗಿ ದುರಂತ ಅಂತ್ಯ ಎದುರಿಸಲಿದ್ದ ಕಲಾಪ್ರಕಾರಕ್ಕೆ, ಅದರ ಸನಾತನ ಭವ್ಯತೆಯನ್ನು ಮತ್ತೆ ಪ್ರತಿಷ್ಠಾಪಿಸಲು ಭರತನಾಟ್ಯ ಎಂಬ ಹೆಸರಿಗಿಂತ ಮತ್ಯಾವ ಹೆಸರು ಸರಿಯೆನ್ನಿಸೀತು ? ಹಾಗಾಗಿ ನಂತರದ ವರುಷಗಳಲ್ಲಿ ಸಾದಿರ್, ಕೂತ್ತು, ದಾಸೀ ಆಟ್ಟಂ ಎಂದೆಲ್ಲಾ ಕರೆಸಿಕೊಂಡ ನೃತ್ಯಪ್ರಕಾರ ಭರತನಾಟ್ಯವೆಂಬ ಹೆಸರಿನಿಂದ ಪ್ರಸಿದ್ಧವಾಯಿತು.
ಇಂದಿಗೂ ಭರತನಾಟ್ಯ ಎಂಬ ಪದದ ಬಳಕೆಯ ಬಗೆಗೆ ಸಾಕಷ್ಟು ಜಿಜ್ಞಾಸೆಗಳಿವೆ. ನಾಟ್ಯಕ್ಕಿಂತಲೂ ನೃತ್ಯಕ್ಕೆ ಹತ್ತಿರವಾದ ಈ ಪ್ರಕಾರಕ್ಕೆ  ಭರತನಾಟ್ಯ ಎಂಬ ಪದಕ್ಕಿಂತಲೂ ಭರತನೃತ್ಯ ಎಂಬ ಪದವೇ ಹೆಚ್ಚು ಸೂಕ್ತ ಎಂಬುದು ಒಂದು ವಾದವಾದರೆ, ಭಾರತದಲ್ಲಿ ಪ್ರಚಲಿತದಲ್ಲಿರುವ ಎಲ್ಲಾ ನಾಟ್ಯಗಳು ಭರತನ ನಾಟ್ಯಶಾಸ್ತ್ರವನ್ನು ಆಧರಿಸಿರುವುದರಿಂದ ಎಲ್ಲಾ ನೃತ್ಯಪದ್ಧತಿಗಳೂ ಭರತನಾಟ್ಯವೇ ಹೌದು; ಮೊದಲ್ನೋಟಕ್ಕೆ ಭರತನು ಆಡಿದ ನಾಟ್ಯವೇ ಇದು, ನಾಟ್ಯಶಾಸ್ತ್ರ ಈ ನೃತ್ಯದ ಮೇಲೆಯೇ ಹೆಣೆದಿರುವ ಗ್ರಂಥ ಎಂಬ ತಪ್ಪು ಅಭಿಪ್ರಾಯಕ್ಕೆ ಪುಷ್ಠಿ ದೊರೆಯುತ್ತದೆ ; ಹಾಗಾಗಿ ಇದು ಸಾದಿರ್ ಎನ್ನಲಷ್ಟೇ ಸಮಂಜಸ ಎಂಬುದು ಮತ್ತೊಂದು ಬಗೆಯದು. ಏನೇ ಇರಲಿ, ದೇವದಾಸಿಗೆ ಅಂಟಿದ್ದ ಸಾದಿರ್ ಆಗಿದ್ದ ಪದ್ಧತಿ ಭರತನಾಟ್ಯವಾಗಿತ್ತು.
ಸಾದಿರ್‌ನ್ನು ಭರತನಾಟ್ಯ ಎಂದಾಕ್ಷಣ ಎಲ್ಲವೂ ಮಾನ್ಯಗೊಳ್ಳುತ್ತದೆಯೇ ? ರುಕ್ಮಿಣೀದೇವಿ ಪ್ರಯತ್ನಕ್ಕೆ ಶುರುವಿಟ್ಟರು. ಸಾದಿರ್‌ನಲ್ಲಿ ಇದ್ದ ಅತಿರಂಜಿತ, ನಿಕೃಷ್ಟವೆನಿಸುವ ಶೃಂಗಾರದ ಬದಲು, ಭಕ್ತಿಯನ್ನು ಹೆಚ್ಚಾಗಿ ತುಂಬಿದರು. ಅತೀ ಎನಿಸುವ ಶೃಂಗಾರವನ್ನು ತೆಗೆದು ಹಾಕಿ ಅಂತಹ ಭಾವಗಳಿಗೆ ಗುಣಮಟ್ಟದ ಅಭಿನಯ ತಂದರು. ದೇವದಾಸಿಯರು ವೇಶ್ಯೆಯರು ಬಳಸುತ್ತಿದ್ದ ಸಂಗೀತ, ಸಾಹಿತ್ಯಗಳಿಗೆ ಬದಲಾಗಿ ಸಾಂಪ್ರದಾಯಿಕ ಜನಪದ ನೃತ್ಯಗಳನ್ನು, ಭಕ್ತಿಪ್ರಧಾನ ಕಥೆಗಳನ್ನು ಉಪಯೋಗಿಸಿದರು. ನೃತ್ಯದ ಶೈಲಿಗಳಲ್ಲಿ ಒಂದೆನಿಸಿದ್ದ ಪಂದನಲ್ಲೂರು ಶೈಲಿಯನ್ನು ಪರಿಷ್ಕರಿಸಿದರು. rukminidevi
ನೃತ್ಯಕ್ಕೆ ಅಗತ್ಯವೆನಿಸುವ ಅಡವು-ಹೆಜ್ಜೆಗಳನ್ನು ವ್ಯಾಪಕವಾಗಿ ಬಳಸಲು ಆರಂಭಿಸಿದರು. ನಾಟ್ಯಶಾಸ್ತ್ರ, ಅಭಿನಯ ದರ್ಪಣ ಮುಂತಾದ ಗ್ರಂಥಗಳಲ್ಲಿ ಕಂಡುಬರುವ ಹಸ್ತ ಮುದ್ರಾ ವಿನ್ಯಾಸಗಳನ್ನು ಕ್ರಮವತ್ತಾಗಿ ಜಾರಿಗೆ ತಂದರು. ಮುಖ್ಯವಾಗಿ ನೃತ್ಯದ ಪ್ರತೀ ನಡೆ-ನುಡಿಯಲ್ಲೂ ತಾಳ-ಲಯಗಳಿಗೆ ತಕ್ಕುದಾಗಿ ನರ್ತಿಸುವ ಕ್ರಮಬದ್ಧತೆಯನ್ನು ಅಳವಡಿಸಿದರು. ಹೀಗೆ ಪಂದನಲ್ಲೂರು ಶೈಲಿಯಿಂದ ವಿಭಿನ್ನ ಆಯಾಮ ಪಡೆದ ಈ ಶೈಲಿ ಕಲಾಕ್ಷೇತ್ರ ಶೈಲಿಯೆಂದು ಪ್ರಸಿದ್ಧವಾಯಿತು. ಕ್ರಮೇಣ ಇಂಟರ್ ನ್ಯಾಷನಲ್ ಅಕಾಡೆಮಿ ಆಫ್ ಆರ್ಟ್ಸ್  ಎಂಬ ಸಂಸ್ಥೆ ಕಲೆಗಳಿಗೆಲ್ಲಾ ಮನ್ನಣೆ ನೀಡುವ ಕ್ಷೇತ್ರವಾಗಿ, ಅಂತರಾಷ್ಟ್ರೀಯ ಕಲಾ ಅಕಾಡೆಮಿಯಾಗಿ ಕಲಾಕ್ಷೇತ್ರವೆಂದು ಕರೆಸಿಕೊಂಡಿತು. ಮುಖ್ಯವಾಗಿ ಕಲಾಕ್ಷೇತ್ರ ಎಂಬ ಹೆಸರನ್ನಿಡಲು ಪ್ರೇರಣೆ ದೊರೆತದ್ದು ಪಂಡಿತ ಎಸ್. ಸುಬ್ರಹ್ಮಣ್ಯ ಶಾಸ್ತ್ರಿಗಳಿಂದ !
ಸಣ್ಣ ಕನಸು. ಆದರೆ ಇಷ್ಟು ದೊಡ್ಡದಾಗಿ ಬೆಳೆಯಹುದೆಂಬ ನಿರೀಕ್ಷೆಯೇ ಯಾರಿಗೂ ಇರಲಿಲ್ಲವಂತೆ. ಆದರೆ ಜನ ಈ ಸುಧಾರಣೆಗಳನ್ನು ಸ್ವೀಕರಿಸಿದರೇ? ಆಡೆಯಾರ್‌ನ ಕಲಾಕ್ಷೇತ್ರ ಅಲ್ಲಿಯೇ ಮುಂದುವರೆ ಯುವಂತಾಯಿತೇ?

Leave a Reply

*

code