ಅಂಕಣಗಳು

Subscribe


 

ಹಂಸಾಸ್ಯ ಹಸ್ತ

Posted On: Friday, October 15th, 2010
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಲಕ್ಷಣ: ತೋರು ಮತ್ತು ಹೆಬ್ಬೆರಳ ತುದಿ ಸೇರಿಸಿ ಉಳಿದ ಮೂರು ಬೆರಳುಗಳನ್ನು ದೂರದೂರವಾಗಿ ನೀಡಿದಾಗ ಹಂಸಾಸ್ಯ. ಹಂಸಾಸ್ಯ ಎಂದರೆ ಹಂಸದ ಮುಖ ಎಂದರ್ಥ. ನಾಟ್ಯ ಶಾಸ್ತ್ರದಲ್ಲಿ ಹಂಸವಕ್ತ್ರ ಎಂದು ಹೆಸರು. ಹಸ್ತ ಮುಕ್ತಾವಳಿಯಲ್ಲಿ ತೋರು, ಹೆಬ್ಬೆರಳು, ಮಧ್ಯ ಬೆರಳನ್ನು ಸೇರಿಸಿ ಕಟಕಾಮುಖದಂತೆ ಹಿಡಿಯುವುದು ಕ್ರಮ. ಇದೇ ಕ್ರಮ ನಾಟ್ಯಶಾಸ್ತ್ರದಲ್ಲೂ ಇದ್ದು, ಬೆರಳುಗಳು ಒಂದನ್ನೊಂದು ಮುಟ್ಟದಂತೆ ವಿರಳವಾಗಿರಬೇಕು.
ದಕ್ಷಿಣಾಮೂರ್ತಿ ಸ್ವಾಮಿಯು ತತ್ವಪದ್ಧತಿಯನ್ನು ಋಷಿ-ಮುನಿಗಳಿಗೆ ನ್ಯಗ್ರೋಧ ವೃಕ್ಷದಡಿಯಲ್ಲಿ ಕುಳಿತು ಹೇಳಿಕೊಡುವಾಗ ಉಂಟಾದ ಹಸ್ತವಿದು. ಬ್ರಾಹ್ಮಣ ವರ್ಣ, ಶ್ವೇತ ಬಣ್ಣ, ಋಷಿ : ಶುಕ, ಅಧಿದೇವತೆ : ಬ್ರಹ್ಮ. ಇದು ಮಿಶ್ರಹಸ್ತ ಪ್ರಕಾರಕ್ಕೆ ಸೇರಿದ್ದು ಅಭಿನಯ ದರ್ಪಣ ನಿವೇದಿಸಿದ ನೃತ್ತ ಹಸ್ತಗಳಲ್ಲೂ ಒಂದೆನಿಸಿದೆ.
ಈ ಹಸ್ತ ಯೋಗಶಾಸ್ತ್ರದಲ್ಲಿ, ಪ್ರತಿಮಾಶಾಸ್ತ್ರದಲ್ಲಿ ಪ್ರಚಲಿತದಲ್ಲಿದ್ದು ಮುಖ್ಯವಾದ ಮುದ್ರೆಗಳಲ್ಲೊಂದೆನಿಸಿದೆ. ಇದನ್ನು ವ್ಯಾಖ್ಯಾನ ಮುದ್ರೆ, ಜ್ಞಾನ ಮುದ್ರೆ, ಸಂದರ್ಶನ ಮುದ್ರೆ ಮುಂತಾಗಿ ಕರೆಯಲಾಗಿದ್ದು; ದಕ್ಷಿಣಾಮೂರ್ತಿ, ಶಂಕರ-ರಾಮಾನುಜ-ಮಧ್ವ ಮುಂತಾದ ಆಚಾರ್ಯರ ಮುದ್ರೆಗಳಲ್ಲಿ ಬಹುಮುಖ್ಯವಾಗಿ ಕಾಣಸಿಗುತ್ತದೆ. ಶಾಸ್ತ್ರೀಯ ಮುದ್ರೆಗಳ ವಿಭಾಗದಲ್ಲಿ ಹಂಸಾಸ್ಯವನ್ನು ತತ್ವಜ್ಞಾನ ಮುದ್ರಾ ಎನ್ನಲಾಗಿದ್ದರೆ ಅಭಯ ಮುದ್ರೆಯ ಒಂದು ಬಗೆಯಲ್ಲಿ ಎರಡೂ ಕೈಯಲ್ಲಿ ಹಂಸಾಸ್ಯ ಹಸ್ತದ ಸೂಚನೆಯಿದೆ. ಪೂಜಾಮುದ್ರೆಗಳಲ್ಲೊಂದೆನಿಸಿದ ಘಂಟಾ ಮುದ್ರೆಯು ಹಂಸಾಸ್ಯ ಹಸ್ತವೇ ಆಗಿದ್ದು ಶಿಸ್ತಿನ ಸಂಕೇತವನ್ನೀಯುತ್ತದೆ.
ಯೋಗಮುದ್ರೆಗಳ ಪೈಕಿ ಪದ್ಮಾಸನದಲ್ಲಿ, ಸುಖಾಸನದಲ್ಲಿ ಎರಡೂ ಕೈಗಳಲ್ಲಿ ಹಂಸಾಸ್ಯ ಹಸ್ತ ಅಂದರೆ ಜ್ಞಾನಮುದ್ರೆಗಳನ್ನು ಹಿಡಿದರೆ ಅದು ಧ್ಯಾನ ಜ್ಞಾನ ಯೋಗ ಮುದ್ರೆಯೆನಿಸುತ್ತದೆ. ಮಾನಸಿಕ ಶಾಂತಿ, ಏಕಾಗ್ರತೆ, ದೈಹಿಕ ಕಾಂತಿ, ಆಧ್ಯಾತ್ಮಿಕ ಭಾವನೆಗಳು, ಶುದ್ಧ ಮನಸ್ಥಿತಿ-ಭಾವನೆಗಳು, ಆತ್ಮಸಾಕ್ಷಾತ್ಕಾರ, ಸ್ನಾಯು-ಹೃದಯ- ಥೈರಾಡ್ಸ್ ಸಂಬಂಧೀ ಬಲಕ್ಕೆ, ಬ್ರಹ್ಮಾನಂದ ಸ್ಥಿತಿ ಮತ್ತು ಸಮಾಧಿ ಸ್ಥಿತಿ ತಲುಪಲು ಸಹಕಾರಿ. ಅಷ್ಟಾಂಗಯೋಗದ ಧ್ಯಾನ ಕ್ರಿಯೆಯಲ್ಲಿ ಇದು ಮುಖ್ಯ ಮತ್ತು ಲಾಭಕಾರಿ ಮುದ್ರೆ. ಪದ್ಮಾಸನ ಅಥವಾ ಸುಖಾಸನ, ಸ್ವಸ್ತಿಕಾಸನದಲ್ಲಿ ಕುಳಿತು ಮಾಡುವುದರಿಂದ ಇದನ್ನು ಸಹಜಧ್ಯಾನ ಮುದ್ರೆ ಎಂದೂ ಕರೆಯುತ್ತಾರೆ. ಇದು ಮಾನಸಿಕ ಶಾಂತಿಗೆ, ದೈಹಿಕ ಕಾಂತಿಗೆ, ಸ್ನಾಯುಬಲಕ್ಕೆ, ಸತ್ವಯುತ ವಿಚಾರಗಳ ಉದ್ಭವಕ್ಕೆ, ಆತ್ಮಸಾಕ್ಷಾತ್ಕಾರಕ್ಕೆ, ನೆಮ್ಮದಿಗೆ, ಏಕಾಗ್ರತೆ, ಅಧಿಕ ರಕ್ತದೊತ್ತಡ ನಿವಾರಣೆಗೆ, ಹೃದಯಾಘಾತದ ಸಂಭವನೀಯತೆ ಕಡಿಮೆಗೊಳಿಸಲು ಅನುಕೂಲ.
ಅದರಂತೆಯೇ ಎರಡೂ ಕೈಗಳಲ್ಲಿ ಹಂಸಾಸ್ಯ ಹಸ್ತಗಳನ್ನು ಹಿಡಿದು ಎಡಹಸ್ತದ ಅಂಗೈ ಹೃದಯಾಭಿಮುಖವಾಗಿದ್ದು, ಬಲಕೈಯ್ಯ ಹಿಂಭಾಗವು ಹೃದಯಾಭಿಮುಖವಾಗಿದ್ದು ಎಡಹಸ್ತದ ಮಧ್ಯದ ಬೆರಳನ್ನು ಸ್ಪರ್ಶಿಸುವುದು ದ್ವಿಜನ್ಮ ಚಕ್ರ ಮುದ್ರೆಯೆನಿಸಿಕೊಳ್ಳುತ್ತದೆ. ಜೀವನ ಧೈರ್ಯವನ್ನು ನೀಡುವ ಮುದ್ರೆಯಿದು.
ಚಿಕಿತ್ಸಾ ಮುದ್ರೆಗಳ ಪೈಕಿ ಹಂಸಾಸ್ಯ ಹಸ್ತಕ್ಕೆ ಅಗ್ರ ಸ್ಥಾನವಿದೆ. ಇದನ್ನು ಮುದ್ರೆಗಳ ರಾಜವೆನ್ನುತ್ತಾರೆ. ಅಂಗೈ ಮೇಲ್ಮುಖವಾಗಿರಿಸಿ ಹೆಬ್ಬೆರಳು ಮತ್ತು ತೋರುಬೆರಳ ತುದಿಗಳನ್ನು ಕೂಡಿಸುವುದು ಜ್ಞಾನಮುದ್ರೆಯೆನಿಸಿಕೊಂಡರೆ ಅಂಗೈ ಕೆಳಮುಖವಾಗಿದ್ದಾಗ ಅದನ್ನು ಚಿನ್ಮುದ್ರೆಯೆನ್ನುತ್ತಾರೆ. ಈ ಮುದ್ರೆಗೆ ಸಮಯದ ಬಂಧನವಿಲ್ಲ. ಹೆಬ್ಬೆರಳು ಅಗ್ನಿ ತತ್ತ್ವವನ್ನು ಪ್ರತಿನಿಧಿಸಿದ್ದು ; ಮನಸ್ಸಿಗೆ ಕಾರಕವಾಗಿದ್ದು, ಶಿರಸ್ಸಿಗೂ ಸಂಬಂಧ ಹೊಂದಿದೆ. ತೋರುಬೆರಳಿಗೆ ಸಂಬಂಧಿಸಿದ ವಾಯುತತ್ತ್ವದ್ದು ಚಂಚಲ ಮನೋವೃತ್ತಿ. ಇವೆರಡರ ಸಂಯೋಜನೆಯು ಸಮತೋಲನ ಮತ್ತು ಸ್ಥಿರತೆಯನ್ನು ನೀಡುತ್ತದೆ. ಇದನ್ನು ಸಂಯಮ ಮುದ್ರೆಯೆಂದು ಕರೆಯುವ ಪರಿಪಾಠವೂ ಇದೆ. ಇದು ಮನಃಶಾಂತಿಗೆ, ಏಕಾಗ್ರತೆ, ಪಿಟ್ಯುಟರಿ ಪೀನಿಯಲ್ ಮತ್ತು ಮೆದುಳಿನ ಗ್ರಂಥಿ, ಸ್ವರ ಯಂತ್ರದ ಸುಸ್ಥಿತಿಗೆ, ಅಧ್ಯಯನಶೀಲತೆಗೆ, ದಕ್ಷತೆಗೆ, ಜ್ಞಾನ ತಂತುಗಳ ಮೇಲೆ ಪರಿಣಾಮ. ಸ್ಮರಣಶಕ್ತಿ ವೃದ್ಧಿ, ನರ ದೌರ್ಬಲ್ಯ- ನಿದ್ರಾಹೀನತೆ, ಮಾನಸಿಕ ವೇದನೆಗೆ ಪರಿಹಾರ. ವಿದ್ಯುದಯಸ್ಕಾಂತೀಯ ಅಲೆಗಳಲ್ಲಿ ಬಲವಾದ ಸಂವಹನ. ಹುಚ್ಚು-ಉನ್ಮಾದ-ರೇಗುವಿಕೆ-ಹಟಮಾರಿತನ, ತಲೆನೋವು-ನಿದ್ರಾಹೀನತೆ, ನರಗಳ ಬಾವು- ಬೆನ್ನುಹುರಿ ರೋಗ-ತೊದಲು-ಕಣ್ಣಿನ ತೊಂದರೆ-ಶರೀರ ಚಲನೆಯಲ್ಲಿ ಅಸ್ಥಿರತೆ-ದುಷ್ಚಟ-ಭಯ-ಸಂಶಯಗಳ ನಿವಾರಣೆಗೆ, ಕ್ರೋಧ ಶಮನಕ್ಕೆ, ಆಜ್ಞಾಚಕ್ರದ ಜಾಗೃತಿ, ಉದ್ವೇಗ, ಚಂಚಲತೆ, ಆಲಸ್ಯಕ್ಕೆ ಔಷಧಿ. ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ, ಬುದ್ಧಿ ಮಾಂದ್ಯ ಮಕ್ಕಳ ಬೆಳವಣಿಗೆ ಇತ್ಯಾದಿಗಳ ಪರಿಹಾರಕ್ಕೆ ಉಪಯೋಗ. ಒಟ್ಟಿನಲ್ಲಿ ಸೊಂಟದ ಕೆಳಗಿನಿಂದ ಕಾಲ್ಬೆರಳಿನ ತುದಿಯವರೆಗಿನ ತೊಂದರೆಗಳ ನಿವಾರಣೆಗೆ ಸಹಕಾರಿ.
ಹಂಸಾಸ್ಯ ಹಸ್ತದ ಮತ್ತೊಂದು ಬಗೆಯ ಬಳಕೆ ಧಾರಣಾ ಶಕ್ತಿ ಮುದ್ರೆಯೆನಿಸಿಕೊಳ್ಳುತ್ತದೆ. ಇದರಲ್ಲಿ ೩ ಹಂತಗಳಿದ್ದು ಎರಡನೇ ಬಾರಿಗೆ ತೋರುಬೆರಳನ್ನು ಹೆಬ್ಬೆರಳ ಮಧ್ಯಗೆರೆಗೆ, ನಂತರ ಅಡಿಗೆರೆಗೆ ಮುಟ್ಟಿಸಬೇಕು. ಈ ಮುದ್ರೆಯನ್ನು ಪ್ರಾಣಾಯಾಮದ ಪೂರಕ, ಕುಂಭಕ ಮಾಡುವಲ್ಲಿ ಬಳಸಿದರೆ ಶ್ವಾಸಕೋಶಗಳಿಗೆ ಹೆಚ್ಚು ಪ್ರಾಣಾಯಾಮ ಸಂಚಾರ, ಶ್ವಾಸಗಳ ಸಂಖ್ಯೆ ಕಡಿಮೆಯಾಗಿ ಆಯುಷ್ಯ ವೃದ್ಧಿ, ರಕ್ತ ಶುದ್ಧಿಗೆ, ಕಲ್ಮಷ ನಿವಾರಣೆಗೆ, ಶರೀರ ಬಲ ವೃದ್ಧಿಗೆ ಸಹಕಾರ.
ವಿನಿಯೋಗ : ಮಂಗಳಸೂತ್ರವನ್ನು ಕಟ್ಟುವುದು, ಉಪದೇಶ, ನಿಶ್ಚಯವಾಗಿ ಎಂಬಂತೆ, ರೋಮಾಂಚನಗೊಳ್ಳುವುದು, ಮುತ್ತಿನ ಮಾಲೆ, ಚಿತ್ರವನ್ನು ಬಿಡಿಸುವುದು, ಕಚ್ಚುವುದು, ನೀರಿನಹನಿ, ದೀಪದ ಬತ್ತಿಯನ್ನು ಸರಿಮಾಡುವುದು, ಒರೆಹಚ್ಚುವಿಕೆ, ಶೋಧಿಸುವುದು, ಮಲ್ಲಿಗೆ ಮೊದಲಾದ ಹೂ, ಗೆರೆ ಎಳೆಯುವಿಕೆ, ಪುಷ್ಪ ಹಾರ ಹಿಡಿಯುವುದು, ‘ನಾನೇ ಬ್ರಹ್ಮ’ ಎಂಬುದನ್ನು ಸೂಚಿಸುವುದು, ಇಲ್ಲವೆನ್ನುವುದು, ಒರೆ ಹಚ್ಚುವ ವಸ್ತು ವೀಕ್ಷಣೆ, ಕೃತಕೃತ್ಯತೆ, ಶುಭಸೂಚಕ ಸಂದರ್ಭ, ಚಿತ್ರ ಬರೆಯುವುದು.
ಇತರೇ ವಿನಿಯೋಗ : ‘ಅವನೇ ನಾನು’ ಮತ್ತು ‘ಅಹಂಬ್ರಹ್ಮಾಸ್ಮಿ’, ‘ತಾನೇ ದೇವರು’, ‘ಅಲ್ಲಿದೆ’ ಎಂಬ ಭಾವನೆ, ಧ್ಯಾನ, ಸ್ವಲ್ಪ ಎಂಬ ಅರ್ಥ, ಕ್ರಿಯೆ ಅಥವಾ ಆರಾಧನೆ, ಮಾತನಾಡುವುದು, ಓದುವುದು, ಹಾಡುವುದು, ಧ್ಯಾನ, ಭಾವ ವ್ಯಕ್ತಪಡಿಸುವುದು, ಕೆಂಪುಬಣ್ಣವನ್ನು ಲೇಪಿಸುವುದು, ಎಳ್ಳಿನ ಬೀಜವನ್ನು ಕೊಡುವುದು, ತಲೆಯ ಹೊಟ್ಟು ಅಥವಾ ಚರ್ಮದಲ್ಲಿನ ದದ್ದು, ಸುವಾಸನೆ, ಹನಿ, ನಿರ್ಧಾರ, ಕೊಳಲನ್ನೂದುವುದು, ಕುರಿಮಂದೆ, ಬಾಣ ಹಿಡಿದ ಭಾವ, ಪಾರಿವಾಳದ ಗೂಡು, ಗೌಪ್ಯ ಸಂಭಾಷಣೆ, ನೂಲುವುದು, ಪೂಜೆ, ಮೃದುತ್ವ, ಹಗುರ, ಶೈಥಿಲ್ಯ, ಸೂಕ್ಷ್ಮತ್ವ, ಮಾರ್ದವ, ನಿಸ್ಸಾರ, ಪ್ರತಿಜ್ಞೆ ಸ್ವೀಕಾರ, ಬ್ರಾಹ್ಮಣ ಜಾತಿ, ಬಿಳಿ, ಮುದ್ರಾ ಉಂಗುರ, ನುಣುಪು ಮಾಡುವುದು, ರೇಖೆಗಳ ಪ್ರತ್ಯೇಕ, ಸ್ವಲ್ಪ, ಹಗುರ ಮತ್ತು ಸಡಿಲ, ಹೂ ಬಿಡಿಸುವುದು, ಸಡಿಲ, ಚಿಕ್ಕದು, ನಿರ್ಗಮನ, ನಿರೂಪಕ.
ಕೆಳತುಟಿ, ಮುತ್ತನ್ನೀಯುವುದು, ಕುಡಿಯುವುದು, ಲೇಪನ, ಅಗರವೆಂಬ ಕಟ್ಟಿಗೆ, ಕಸ್ತೂರಿ, ಕರ್ಪೂರ, ಕೇಸರಿ, ಹಾಲು, ಬೆಣ್ಣೆ, ತುಪ್ಪ, ಎಣ್ಣೆ, ಪರಿಮಳ, ಶ್ವಾಸ, ನಸ್ಯ ಸೇವನೆ, ಬಣ್ಣ ಲೇಪನ, ಚೂರ್ಣಗಳು, ಧೂಳು, ತಿಕ್ತ ರುಚಿ, ಗ್ರಂಥಿಪರ್ಣವೆಂಬ ಸುವಾಸಿತ ವಸ್ತು, ಚಂಪಕ-ಮಾಲತಿ-ಮಲ್ಲಿಕಾಗಳೆಂಬ ಹೂವುಗಳು, ಸಿಂಧೂರ, ಕಾಡಿಗೆ, ನೋಡುವುದು, ತ್ವರಿತ, ಕಿವಿಗಳು, ಕಾಗೆಗಳ ಸಂಕುಲ, ಪಾರಿವಾಳ-ಪಿಕಗಳ ಕೊಕ್ಕು, ಹಂಸ, ಗರುಡ, ನವಿಲು, ಸಾರಿಕ ಪಕ್ಷಿ, ಗಿಳಿ, ಚಕ್ರವಾಕ, ಚಕೋರ, ಕಂಜನ ಪಕ್ಷಿ, ಸಾರಸ ಪಕ್ಷಿ, ಕಲಹಂಸ ಪಕ್ಷಿ, ರಾಜಹಂಸ ಮುಂತಾದ ಪಕ್ಷಿಗಳು, ಇರುವೆ, ಕೀಟ, ಸೊಳ್ಳೆ, ಕಾಡುನೊಣ, ಇಲಿ, ಚೇಳು, ಬೆಂಕಿ, ತುರಿಕೆ, ಮಗು, ಲಘುವಸ್ತುಗಳು, ವೃಕ್ಷದ ಹೃದಯ ಭಾಗ, ಆಭರಣ, ಆನಂದ, ಕೆಮ್ಮು, ಧಾನ್ಯದ ಹೊಟ್ಟು, ದ್ರವೌಷಧಿ, ಮೇಣದಿಂದ ಮಾಡಿದ ವಸ್ತು, ಪಾದರಸದಿಂದಾದ ವಸ್ತು, ಹಳದಿ ವಿಷವಸ್ತು, ವರ್ಣಮಯ ವಸ್ತು, ಕೋಮಲ ವಸ್ತು, ಶಿಥಿಲತೆ, ನಾಡಿಮಿಡಿತ, ಸಣ್ಣ ಪ್ರಮಾಣ, ಹಂಸಮುಖ, ಭಾವುಕತೆ, ವಿಷಯದ ಮುಖ್ಯಭಾಗ, ಉತ್ಸವ, ಮನಸು, ಹೃದಯ, ಜೀವನ, ಹಣ, ವಚನ, ತತ್ವಸಾರ ಇತ್ಯಾದಿ.
ಸಂಕರ ಹಸ್ತ ವಿಭಾಗದಲ್ಲಿ ಹಂಸಾಸ್ಯ ಹಸ್ತವನ್ನು ಕಿವಿಯಲ್ಲಿ ಹಿಡಿದರೆ ಕಿವಿಯಲ್ಲಿಟ್ಟಿರುವ ಹೂವು ಎಂದು, ಮೂಗಿನಬಳಿ ಹಿಡಿದರೆ ಮೂಗಿನಲ್ಲಿ ಧರಿಸಿದ ಪುಷ್ಪವೆಂದೂ, ಎಡಕಿವಿಯಿಂದ ಬಲಕಿವಿಯವರೆಗೆ ತಿರುಗಿಸಿ ಹಿಡಿದರೆ ಮುಂಗುರುಳೆಂದೂ, ಸೊಂಟದ ಎರಡೂ ಪಾರ್ಶ್ವಗಳಲ್ಲಿ ಹಿಡಿದರೆ ವಸ್ತ್ರಧಾರಣೆಯೆಂದೂ, ಬೈತಲೆಯ ಪ್ರದೇಶದಿಂದ ಹಣೆಯವರೆಗೂ ಇಳಿಸಿದರೆ ಬೈತಲೆ ಬೊಟ್ಟು ಎಂದೂ, ಹಸ್ತವನ್ನು ಚಲಿಸಿದರೆ ಯೌವನವೆಂದೂ, ಎಡಭುಜದಿಂದ ವಕ್ಷಸ್ಥಲವನ್ನು ಆಶ್ರಯಿಸುವಂತೆ ಹಿಡಿದರೆ ಯಜ್ಞೋಪವೀತವೆಂದೂ, ಕತ್ತಿನಿಂದ ವಕ್ಷಸ್ಥಲದಲ್ಲಿ ಅಡ್ಡವಾಗಿ ಚಾಲಿಸಿದರೆ ಹಾರವೆಂದೂ, ಒಂದು ಬಗೆಯ ಯಾತ್ರೆಯೆಂದೂ, ತುಟಿಯ ಬಳಿ ಹಿಡಿದರೆ ಚುಂಬನ ಅಥವಾ ಮಿಲನವೆಂದೂ ಅರ್ಥ.
ನಾನಾರ್ಥ ಹಸ್ತ ವಿಭಾಗದಲ್ಲಿ ಒಂದು ಯಾಮವೆಂದು ಸೂಚಿಸಲು ಹಸ್ತವಾಗಿ ಅಡ್ಡಲಾಗಿಯೂ, ‘ಕರ್ಮಣೀ ಪ್ರಯೋಗಕ್ಕಾಗಿ ಕೆಳಗಾಗಿಯೂ ಉಪಯೋಗಿಸಲಾಗಿದೆ. ಕೆಳಗೆ ಹಿಡಿದರೆ ‘ತತ್ ಪ್ರತ್ಯಯಾಂತ’ ವ್ಯಾಕರಣಕ್ಕೂ ಬಳಸಬಹುದು. ಎರಡೂ ಹಂಸಾಸ್ಯಗಳನ್ನು ಮೂಗಿನ ತುದಿಯಲ್ಲಿ ಹೊಳ್ಳೆಗಳಿಗೆ ಹಿಡಿದರೆ ಉಸಿರಾಟ ಅಥವಾ ಒಳ ಭಾವನೆ, ಸಮಾಧಾನ, ನಿತ್ರಾಣ, ಇನ್ನೊಬ್ಬರಲ್ಲಿ ಆತ್ಮವಿಶ್ವಾಸ ಮೂಡಿಸುವುದು, ಸಂತೋಷವೆಂದೂ ಅರ್ಥ.
ಎಡಗೈಯಲ್ಲಿ ಚತುರಹಸ್ತವನ್ನು ಬಲಗೈಯಲ್ಲಿ ಹಂಸಾಸ್ಯ ಹಸ್ತವನ್ನು ಎದೆಯ ಮುಂದೆ ಇರಿಸಿದರೆ ಅದು ಬ್ರಹ್ಮಹಸ್ತ. ಎಡಗೈಯ್ಯಲ್ಲಿ ಹಂಸಾಸ್ಯ ಹಸ್ತ ಮತ್ತು ಬಲಗೈಯ್ಯಲ್ಲಿ ಸೂಚೀಹಸ್ತವನ್ನು ಹಿಡಿಯುವುದು ಸರಸ್ವತೀ ಹಸ್ತ. ಎರಡೂ ಕೈಗಳಲ್ಲಿ ಹಂಸಾಸ್ಯ ಹಸ್ತ ಹಿಡಿದು ಎದೆಯ ಮುಂದೆ ಇರಿಸುವುದು ಬುದ್ಧಾವತಾರ ಹಸ್ತ. ಭರತಾರ್ಣವ ಹೇಳುವ ಶಿವನ ಪಂಚ ಮುಖಗಳ ಪೈಕಿ ಮೊದಲನೇಯ ಮುಖ ಸದ್ಯೋಜಾತ ಮೂರ್ತಿಯ ಸಂಕೇತ ಹಂಸಾಸ್ಯ ಹಸ್ತಗಳನ್ನು ಕಿವಿಯ ಬಳಿ ಹಿಡಿಯುವುದು.
ಜಾತಿ ಹಸ್ತಗಳಲ್ಲೊಂದೆನಿಸಿದ ವೈಶ್ಯ ಹಸ್ತದ ಸಂಕೇತ ಎಡಗೈಯಿಂದ ಹಂಸಾಸ್ಯವನ್ನೂ, ಬಲಗೈಯಿಂದ ಕಟಕಾಮುಖವನ್ನು ಹಿಡಿದು ತೂಗುವಂತೆ ಮಾಡುವುದು ಅಥವಾ ಎಡ ಮತ್ತು ಬಲ ಕೈಗಳು ಕ್ರಮವಾಗಿ ಹಂಸಾಸ್ಯ ಮತ್ತು ಸಂದಂಶವನ್ನು ಹಿಡಿಯುವುದು. ಬಾಂಧವ್ಯ ಹಸ್ತವಾದ ಭಾರ್ಯಾ ಹಸ್ತ (ಪತ್ನಿ)ಕ್ಕೆ ಎಡಗೈಯ್ಯಲ್ಲಿ ಹಂಸಾಸ್ಯ ಹಸ್ತವನ್ನು ಕಂಠದ ಬಳಿ ಹಿಡಿದು ಸಂದಂಶವನ್ನು ಹೊಕ್ಕುಳ ಬಳಿ ಹಿಡಿಯಬೇಕು. ಅಂತೇಯೇ ಭರ್ತೃ ಹಸ್ತ (ಗಂಡ) ಸೂಚನೆಗೆ ಕಂಠದ ಹತ್ತಿರ ಹಂಸಾಸ್ಯ ಹಸ್ತ ಹಿಡಿದು, ಬಲಕೈನಲ್ಲಿ ಶಿಖರ ಹಸ್ತ ಮಾಡಬೇಕು. ಹಂಸಾಸ್ಯ ಹಸ್ತದ ಬಳಕೆ ಶ್ವಶ್ರೂ ಹಸ್ತ (ಅತ್ತೆ) ಸೂಚನೆಗೆ,ಭರತಾರ್ಣವ ತಿಳಿಸುವ ಸಮಯಸೂಚೀ ಹಸ್ತಗಳ ಪೈಕಿ ಯಾಮ (ಅಂದರೆ ೩ ಗಂಟೆ) ಎನ್ನಲು, ನದೀ ಹಸ್ತಗಳ ಪೈಕಿ ತುಂಗಭದ್ರಾ ಮತ್ತು ಪಕ್ಷಿ ಹಸ್ತಗಳ ಪೈಕಿ ಹಂಸ ಎನ್ನಲು ಬಳಸಲಾಗುವುದು.
ಯಕ್ಷಗಾನದಲ್ಲಿ ವಿವಾಹ, ಮಾಲೆ, ಮನ್ಮಥ, ಸೌಂದರ್ಯ, ಮುತ್ತು, ಸತಿ, ಮಾತನಾಡುವುದು ಎಂಬ ಅರ್ಥಗಳಿಗಾಗಿ ಬಳಸುತ್ತಾರೆ.
ನಿತ್ಯಜೀವನದಲ್ಲಿ ಬರೆಯುವುದು ಎಂದು ಸೂಚಿಸಲು, ಹಣೆಗೆ ಬೊಟ್ಟಿಡಲು, ಕಿವಿಯ ಆಭರಣ ಹಾಕಿಕೊಳ್ಳುವಾಗ, ಚಿವುಟಲು, ಕೀಳಲು ಮುಂತಾದವುಗಳ ಸಂವಹನಕ್ಕೆ ಬಳಸುತ್ತಾರೆ.
ಹಂಸಾಸ್ಯ ಹಸ್ತದ ಉಂಗುರ ಬೆರಳನ್ನು ಜೊತೆಗೆ ಕೂಡಿಸಿದರೆ ಖಡ್ಗಾಸ್ಯ ಎನ್ನುವ ಹಸ್ತವೇರ್ಪಡುತ್ತದೆ. ಹಂಸಾಸ್ಯದಲ್ಲಿ ಹೆಬ್ಬೆರಳು ಪಕ್ಕಕ್ಕೆ ಚಾಚಿಕೊಂಡರೆ ರಣಗೃಧ್ರ ಹಸ್ತ. ಇವೆರಡೂ ನರ್ತನ ನಿರ್ಣಯದಲ್ಲಿ ಉಲ್ಲೇಖಿತ. ವಿನಿಯೋಗಗಳು ಕಂಡುಬಂದಿಲ್ಲ.
ಕಥಕಳಿಯಲ್ಲಿ ಹಂಸಾಸ್ಯಕ್ಕೆ ಮುದ್ರಾಖ್ಯವೆಂದು ಹೆಸರು. ವಿನಿಯೋಗ : ವರ್ಧನೆ, ಚಲನೆ, ಸ್ವರ್ಗ, ಸಮುದ್ರ, ಸಾಂದ್ರತೆ, ವಿಜ್ಞಾಪನೆ, ವಸ್ತು, ಮರಣ, ಧ್ಯಾನ, ಪರಿಭವ, ಪ್ರಾಣ, ಭವಿಷ್ಯ, ಜ್ಞಾನ, ನೆನಪು, ಆಸೆ, ಇಚ್ಛೆ, ‘ತಾನು’‘ಎಲ್ಲ’ ಎನ್ನಲು, ಚಿಂತೆ, ಚಿತ್ತ, ನೇರ, ಯಜ್ಞೋಪವೀತ. ಇದು ಕಥಕಳಿಯಲ್ಲಿ ಅಸಂಯುತ ಹಸ್ತವಷ್ಟೇ ಅಲ್ಲದೆ ಕಥಕಳಿ ತಿಳಿಸುವ ಮಿಶ್ರ ಹಸ್ತಗಳಲ್ಲೂ ಪ್ರತ್ಯೇಕ ಮತ್ತು ಸಂಯೋಗ ನೆಲೆಗಳಲ್ಲಿ ಸ್ಥಾನ ಪಡೆದಿದೆ. ಪ್ರತ್ಯೇಕ ನೆಲೆಯಲ್ಲಿ ಮುದ್ರಾಖ್ಯವು ಸಾಧನ, ನಿಷೇಧ, ಖಾದ್ಯ, ಸರಪಳಿ, ಸರ, ಒಳ್ಳೆಯ ಭವಿಷ್ಯ ಅಥವಾ ಗುಣ, ಕಾರ್ಯ, ಧರ್ಮ, ಇಷ್ಟ, ಪ್ರಣಯವನ್ನು ಸಂವಹಿಸುತ್ತದೆ.
ಒಡಿಸ್ಸಿಯಲ್ಲಿ ಹಂಸಾಸ್ಯವನ್ನು ಮೃಗಾಸ್ಯ(ಖ್ಯ)ವೆನ್ನುತ್ತಾರೆ. ಒಡಿಸ್ಸಿಯ ಭಂಗಿಗಳಲ್ಲೊಂದಾದ ಲಾಖಿ ಭಂಗಿಗೆ ಧ್ವಜ ಮತ್ತು ಮೃಗಾಖ್ಯ ಹಸ್ತಗಳ ನೆರವು ಬೇಕು.
ಮಣಿಪುರಿಯಲ್ಲಿ ಈ ಹಸ್ತವನ್ನು ಸಂದಂಶವೆಂದು ಹೇಳಲಾಗಿದೆ. ಕಥಕಳಿ ಮತ್ತು ಮಣಿಪುರಿಯಲ್ಲಿ ಕಟಕಾಮುಖ ಹಸ್ತವನ್ನು ಹಂಸಾಸ್ಯವೆಂದು ಸಂಬೋಧಿಸುತ್ತಾರೆ.
ಕಥಕ್ ನೃತ್ಯಪದ್ಧತಿಯ ಪ್ರಕಾರ ಈ ಹಸ್ತವು ಪ್ರಾಥಮಿಕವಾದ ‘ಸ್ವಾಭಾವಿಕ’ ಹಸ್ತ ಪ್ರಕಾರಕ್ಕೆ ಸೇರಿದ್ದು ; ವಿಭಿನ್ನ ಗತಿಗಳ ಪೈಕಿ ಮೆಹಬೂಬಾ ಗತಿಯಲ್ಲಿ ಹಂಸಾಸ್ಯ ಬಳಕೆ ಪ್ರಧಾನವಾಗಿ ಕಾಣಸಿಗುತ್ತದೆ.
********

Leave a Reply

*

code