ಅಂಕಣಗಳು

Subscribe


 

ಸಾಯಿ ನೃತ್ಯೋತ್ಸವ : ಯುವ ಕಲಾವಿದರ ಭರವಸೆಯ ಕಾರ್ಯಕ್ರಮ

Posted On: Thursday, December 15th, 2011
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಡಿಸೆಂಬರ್ ೧ ಸ್ಥಳ : ಮಲ್ಲೇಶ್ವರಂ ಸೇವಾಸದನ

ಬೆಂಗಳೂರಿನ ಹಿರಿಯ ಸಂಘಟಕರೂ, ಕಲಾವಿದರಲ್ಲೊಬ್ಬರಾದ ಸಾಯಿವೆಂಕಟೇಶ್ ಅವರ ಸಾರಥ್ಯದ ಸಾಯಿ ನೃತ್ಯೋತ್ಸವ ಯುವ ನೃತ್ಯಾಕ್ಷಾಂಕ್ಷಿಗಳಿಗೆ ನಿಜಕ್ಕೂ ಒಂದು ಸದಭಿರುಚಿಯ, ಪೋಷಕವಾತಾವರಣ ಕಲ್ಪಿಸಿಕೊಡುವ ನೃತ್ಯ ಕಾರ್ಯಕ್ರಮ. ಕಳೆದೆರಡು ವರ್ಷಗಳ ಹಿಂದೆ ಸಂಘಟನೆಯಾದ ಈ ನೃತ್ಯೋತ್ಸವ ಪ್ರತೀ ತಿಂಗಳಿನ ಒಂದನೆ ತಾರೀಕಿನಂದು ಮಲ್ಲೇಶ್ವರಂನ ಸೇವಾಸದನದಲ್ಲಿ ಆಯೋಜನೆಯಾಗುತ್ತಾ ಬಂದು ಇದುವರೆಗೆ ಸುಮಾರು ೩೦ ಕಂತುಗಳನ್ನು ಯಶಸ್ವಿಯಾಗಿ ಪೂರೈಸಿದೆ. ಭಾರತದ ಯುವ ನೃತ್ಯಕಲಾವಿದರಿಗೆ ವೇದಿಕೆಯನ್ನೂ, ಅಂತೆಯೇ ಉತ್ತಮ ಪ್ರೇಕ್ಷಕರನ್ನೂ ಒದಗಿಸಿಕೊಡುತ್ತಿರುವ ಈ ಉತ್ಸವ ಅಂತರ್‌ರಾಜ್ಯ ಮಟ್ಟದಲ್ಲೂ ಆಯೋಜನೆಗೊಂಡು ಹೆಸರು ಗಳಿಸಿದೆ.

ಸಾಯಿ ವೆಂಕಟೇಶ್ ಅವರೇ ಹೇಳಿಕೊಳ್ಳುವಂತೆ ಚೆನ್ನೈನಂತಹ ಕಲಾಜಗತ್ತಿನಲ್ಲೂ ಸಿಗದ ಸಹೃದಯ ವಾತಾವರಣ ಬೆಂಗಳೂರಿನಲ್ಲಿ ಹೇರಳವಾಗಿ ಲಭ್ಯವಾಗುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ನೃತ್ಯಪ್ರಸ್ತುತಿಗೆ ಕಲಾವಿದರು ದೇಶದ ಹಲವು ನೆಲೆಗಳ ಕಲಾವಿದರು ಉತ್ಸುಕರಾಗುತ್ತಿರುವುದು ನಿಜಕ್ಕೂ ಒಂದು ಹೆಮ್ಮೆಯ ವಿಚಾರ. ಇದಕ್ಕೆ ಉದಾಹರಣೆಯೆಂಬಂತೆ ಇದುವರೆಗೆ ಸುಮಾರು ೩೦೦ಕ್ಕೂ ಮಿಕ್ಕಿ ಯುವ ಕಲಾವಿದರಿಗೆ ಮುಕ್ತ ವೇದಿಕೆಯನ್ನು ಕಲ್ಪಿಸಿಕೊಟ್ಟ ಕೀರ್ತಿ ಮತ್ತು ಸುಮಾರು ೪೦೦ರವರೆಗೆ ಆಸಕ್ತ ಕಲಾವಿದರ ಅರ್ಜಿಗಳ waiting listನ ಹೆಗ್ಗಳಿಕೆ ಸಾಯಿ ನೃತ್ಯೋತ್ಸವದ್ದು.

ಈ ವರ್ಷದ ಕೊನೆಯ ಮತ್ತು ೩೧ನೇ ಕಂತು ಡಿಸೆಂಬರ್ ೧ರಂದು ಏರ್ಪಾಡಾಗಿತ್ತು. ಪ್ರತೀ ಕಲಾವಿದರಿಗೂ ಅರ್ಧ ಗಂಟೆಯಂತೆ ಮೀಸಲಿಟ್ಟ ಕಾರ್ಯಕ್ರಮದಲ್ಲಿ ಮೊದಲಿಗೆ ನೃತ್ಯಪ್ರಸ್ತುತಪಡಿಸಿದ ಭೋಪಾಲ್‌ನ (ರಾಯ್‌ಘರ್ ಘರಾನಾ) ಅನುರಾಧಾ ಸಿಂಗ್ ತುಸು ಹೆಚ್ಚೇ ಸಮಯವನ್ನು ಉಪಯೋಗಿಸಿಕೊಂಡರಾದರೂ ಆಯ್ದುಕೊಂಡ ಶಾರದಾಸ್ತುತಿ, ತೀನ್ ತಾಲ್‌ನ ಪಾದಕ್ರಿಯಾ, ತರಾನಾ, ಠುಮ್ರಿ, ಮತ್ತು ಅಮಿರ್ ಖುಸ್ರು ರಚನೆಗಳು ಪ್ರೇಕ್ಷಕರ ಗಮನವನ್ನು ಕಾಯ್ದುಕೊಂಡವು. ಆದರೆ ಭಾವಸ್ತರದ ಬೆಳವಣಿಗೆ, ಬಿಗುವೆನಿಸುವ ನೃತ್ತ ಸಂಯೋಜನೆ, ಚಕ್ಕರ್( ಭ್ರಮರಿ)ನ ಸಮಯೋಚಿತ ಬಳಕೆ ಮತ್ತು ದೃಢತೆಯು ಕಲಾವಿದೆಗೆ ಸುಸಜ್ಜಿತ ಪ್ರಾಯೋಗಿಕ ನೆಲೆಯನ್ನು ತಂದುಕೊಡುತ್ತದೆ.

ನಂತರ ಪ್ರಸ್ತುತವಾದ ಭರತನಾಟ್ಯದಲ್ಲಿ ತೇಜಸ್ವಿನಿ ಪುತ್ತೂರು ಅವರ ಭಾವ ತನ್ಮಯತೆ, ನೃತ್ತಾಸ್ವಾದನೆ ನಿಜಕ್ಕೂ ಅಭಿನಂದನಾರ್ಹ. ದೇಹಸೌಷ್ಟವವನ್ನು ಮತ್ತಷ್ಟು ಹಿಗ್ಗಿಸಿಕೊಂಡರೆ ನಾಡಿಗೆ ಪ್ರಬುದ್ಧ ಕಲಾವಿದೆಯಾಗಿ ಬೆಳಗಬಲ್ಲ ಸೂಚನೆಗಳು ಗಾಢವಾಗಿ ಗೋಚರಿಸಿತು. ಅದರಲ್ಲೂ ಖಂಡಿತಾ ನಾಯಿಕೆಯನ್ನು ಬಿಂಬಿಸುವ ಪ್ರಸಿದ್ಧ ಪದ ಇಂದೆಂದು ವಚ್ಚಿತಿವಿರಾಗೆ ತೇಜಸ್ವಿನಿಯ ಮುಖಜಾಭಿನಯ ಮತ್ತು ನೃತ್ಯದ ಭಾವದೊಳಗೊಂದಾಗುವ ಅಂತರ್ದೃಷ್ಟಿ ರಸಾನುಭವಕ್ಕೆ ಸಾಕ್ಷಿಯಾದ ಕ್ಷಣಗಳಲ್ಲೊಂದು. ಉಳಿದಂತೆ ಪುಷ್ಪಾಂಜಲಿ, ಗಣೇಶವಂದನ, ನಟರಾಜವೈಭವ ನೃತ್ಯಗಳು ಆಕೆಯ ಪ್ರತಿಭಾ ಕ್ಷಿತಿಜದ ದೃಷ್ಟಾಂತಗಳೆಂಬಂತೆ ಬೆಳಗಿದವು. ಈ ಹಿನ್ನಲೆಯಲ್ಲಿ ಶಿಷ್ಯೆಯ ನೃತ್ಯ ನಿರೂಪಣೆ ಗುರು ದೀಪಕ್ ಕುಮಾರ್ ಅವರ ನೃತ್ಯ ಸಂಯೋಜನೆಯ ಶೈಲಿಗೆ ಒಳ್ಳೆಯ ಉದಾಹರಣೆಯಾಗಿದ್ದೂ ಶ್ಲಾಘನೀಯ.

ಮೈಸೂರು ನಾಗರಾಜ್ ಅವರ ಶಿಷ್ಯರ ಸಮೂಹ ನೃತ್ಯಪ್ರಸ್ತುತಿಗಳೆಲ್ಲವೂ ವೈಭವವೆನಿಸುವ ಸಂಯೋಜನೆ ಮತ್ತು ಸಂಗೀತ ಹಿನ್ನಲೆಗಳಿಂದ ಪ್ರೇಕ್ಷಕರನ್ನು ದೃಶ್ಯಾತ್ಮಕವಾಗಿ ಕಣ್ತುಂಬಿಸಿದರೆ ; ಬೆಂಗಳೂರಿನ ವಿದುಷಿ ಸೌಂದರ್ಯ ಶ್ರೀವತ್ಸ ಅವರ ಶಿಷ್ಯೆ ಅಪೂರ್ವ ಕೇಶವ್ ಮತ್ತು ಹಾಸನದ ವಿದುಷಿ ಅಂಬಳೆ ರಾಜೇಶ್ವರಿ (ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ) ಅವರ ಶಿಷ್ಯ ಉನ್ನತ್ ಜೈನ್ ಅವರ ನೃತ್ಯಪ್ರಸ್ತುತಿಗೆ ಭಾವಾನುಭವದ ನೈಜ ಒತ್ತಾಸೆ ಮತ್ತಷ್ಟು ಮಾಗಿದ ಅಭಿನಯವನ್ನು ಇತ್ತಾವು.

Leave a Reply

*

code