ಅಂಕಣಗಳು

Subscribe


 

ಮಕ್ಕಳ ರಂಗಭೂಮಿಯ ಕುರಿತು…

Posted On: Wednesday, October 28th, 2015
1 Star2 Stars3 Stars4 Stars5 Stars (No Ratings Yet)
Loading...

Author: - ಮೂರ್ತಿ ದೇರಾಜೆ, ವಿಟ್ಲ

 

ನಾನು ರಂಗಭೂಮಿ ತಜ್ಞ ಅಲ್ಲ. ಲೇಖಕನೂ ಅಲ್ಲ, ವಿಮರ್ಶಕನೂ ಅಲ್ಲ. ಆದರೂ, ನನ್ನಲ್ಲಿ ಕೆಲವು ಜನ ಆಗಾಗ ಕೇಳುತ್ತಿರುವ ಮತ್ತು ನನ್ನಲ್ಲೇ ಹುಟ್ಟಿಕೊಳ್ಳುವ ಕೆಲವು ಪ್ರಶ್ನೆಗಳಿವೆ. ಕಳೆದ ಕೆಲವು ವರ್ಷಗಳ ಮಕ್ಕಳೊಂದಿಗಿನ ನನ್ನ ಒಡನಾಟದಲ್ಲಿ, ನಾನು ಕಂಡುಕೊಂಡದ್ದನ್ನು ‘ಇಂದಿಗೆ ಹೀಗೆ….’ ಎಂದು ಹೇಳುವ ಪ್ರಯತ್ನ ಇದು.

 

ನಾಟಕ ಎಂದರೆ ಏನು?

ಹೌದು, ಏನು? ಏನು ಅಂತ ಹೇಳುವುದು……! ನಾಟಕ ಎಂದರೆ ಒಂದು ಕಲೆ, ನಾಟಕ ಎಂದರೆ ಒಂದು ಭಾಷೆ, ನಾಟಕ ಎಂದರೆ ಶಿಕ್ಷಣ, ನಾಟಕ ಎಂದರೆ ವ್ಯಕ್ತಿತ್ವ ವಿಕಸನ, ನಾಟಕ ಎಂದರೆ ಬದುಕು, ನಾಟಕ ಎಂದರೆ ಅಧ್ಯಾತ್ಮ….ಹೀಗೆ ಏನು ಹೇಳಿದರೂ, ಪೂರ್ತಿ ಹೇಳಿದ ಹಾಗೆ ಆಗುವುದಿಲ್ಲವೋ ಏನೋ !

 

ಮಕ್ಕಳ ನಾಟಕ, ಹಿರಿಯರ ನಾಟಕಕ್ಕಿಂತ ಭಿನ್ನವೇ ?

ಭಿನ್ನ, ಹೌದು; ‘ಮಕ್ಕಳು ಏನು ಮಾಡಿದರೂ ಚೆಂದ, ಅವರು ಅವರಷ್ಟಕ್ಕೇ ನಾಟಕ ಮಾಡಿಕೊಂಡಿರಲಿ’ ಎನ್ನುವ ಕಾರಣಕ್ಕಾಗಿ ಅಲ್ಲ. ಈ ಮಾತು ಹೆಚ್ಚಿನ ಸಂದರ್ಭಗಳಲ್ಲಿ ತೀರಾ ಅಪಕ್ವವಾದದ್ದು. ಮಕ್ಕಳ ನಾಟಕವೆಂದರೆ ಹಗುರವಾದ ತೇಲಿಬಿಡುವ ವಿಷಯ ಅಲ್ಲ. ಮಕ್ಕಳ ನಾಟಕವು ‘ಪ್ರಕ್ರಿಯೆ’ ಹಾಗೂ ‘ಪ್ರದರ್ಶನ’- ಎರಡರಲ್ಲೂ ಹಿರಿಯರ ನಾಟಕದ ನಕಲು ಅಲ್ಲ. ಮಕ್ಕಳ ನಾಟಕದ ಮಾತುಗಳು, ಚಲನೆ, ದೃಶ್ಯ ಯಾವುದೂ ‘ರೆಡಿಮೇಡ್’ ಆಗಿರಬಾರದು. ಅದು ‘ರಂಗನಾಟಕ ’. ರಂಗದಲ್ಲೇ ಹುಟ್ಟಬೇಕು, ರಂಗದಲ್ಲೇ ಬೆಳೆಯಬೇಕು. ರಸಭಾವವನ್ನು ಉಂಟುಮಾಡಬೇಕಾದದ್ದು ಅಪೇಕ್ಷಣೀಯ. ಕುತೂಹಲ, ಬೆರಗು, ಮುಗ್ಧತೆ, ತುಂಟತನ, ಸಂಭ್ರಮಗಳೇ ಮಕ್ಕಳ ನಾಟಕದ ಜೀವಾಳ.

 

ಮಕ್ಕಳಿಗೆ ನಾಟಕ ಯಾಕೆ ?

ನಾಟಕವನ್ನು ಒಂದು ‘ಪ್ರದರ್ಶನ’ವಾಗಿ ಮಾತ್ರ ನೋಡಿದಾಗ ಇಂತಹ ಪ್ರಶ್ನೆ ಹುಟ್ಟಬಹುದೋ ಏನೋ ! ಆದರೆ ಅದು ಹಾಗಲ್ಲ. ಇಲ್ಲಿ ‘ಫಲಿತಾಂಶ’ಕ್ಕಿಂತ ‘ಪ್ರಕ್ರಿಯೆ’ ಮುಖ್ಯವಾಗುತ್ತದೆ. ಅಂದರೆ ನಾಟಕ ಪ್ರದರ್ಶನಕ್ಕಿಂತ, ನಾಟಕದ ತಯಾರಿ ಹೇಗೆ ನಡೆಯಿತು ಎನ್ನುವುದು ಮುಖ್ಯ. ಪ್ರಕ್ರಿಯೆ ಸುಂದರವಾಗಿದ್ದರೆ, ಫಲಿತಾಂಶವೂ ಸುಂದರವಾಗಿರುತ್ತದೆ ಎನ್ನುವುದು ಸರಳವಾದ ಸತ್ಯ. ನಾಟಕವು ಮಕ್ಕಳ ಸೃಷ್ಟಿಶೀಲ ಚಟುವಟಿಕೆಗಳಿಗೆ ಪ್ರೇರಣೆ, ಅವಕಾಶ ನೀಡುವ, ಪ್ರೋತ್ಸಾಹಿಸುವ, ಬೆಳೆಸುವ, ಆತ್ಮವಿಶ್ವಾಸವನ್ನು ಹೆಚ್ಚಿಸುವ ಕ್ಷೇತ್ರ; ಕ್ಷೇತ್ರ ಎನ್ನಬಹುದು.

 

ನಾಟಕಕ್ಕಿಂತ ಶಾಸ್ತ್ರೀಯವಾದ ನೃತ್ಯ, ಸಂಗೀತ, ಯಕ್ಷಗಾನಗಳ ತರಬೇತಿಗಳು ಮಕ್ಕಳ ಬೆಳವಣಿಗೆಗೆ ಸಹಕಾರಿಯಲ್ಲವೇ?

ಇಂತಹ ತರಬೇತಿ ಬೇಡವೆಂದಲ್ಲ. ಆದರೆ ಅವೆಲ್ಲಾ ಮಕ್ಕಳ ಅಭಿವ್ಯಕ್ತಿ ಮಾಧ್ಯಮ ಎಂದು ನನಗನಿಸುವುದಿಲ್ಲ. ಮಕ್ಕಳಿಗೇ ಆಸಕ್ತಿ ಇದ್ದಲ್ಲಿ ಹತ್ತು, ಹನ್ನೆರಡನೇ ವಯಸ್ಸಿನ ನಂತರ ಸಾಕೋ ಏನೋ ! ಹಿರಿಯರು ತಮ್ಮ ಪ್ರತಿಷ್ಠೆ, ಚಪಲಕ್ಕಾಗಿ ಆಸಕ್ತಿಯನ್ನು ಮಕ್ಕಳ ಮೇಲೆ ಹೇರುವುದು ಎಷ್ಟು ಸರಿ ? ಆ ವಿಷಯಗಳನ್ನೂ, ಪರೀಕ್ಷೆ ಗುರಿಯಾಗಿಸಿಕೊಂಡು ಕಲಿಸುವುದು ಸರಿಯಾದೀತೇ?

ಇನ್ನು, ಕಲಿಯುತ್ತಿರುವಾಗಲೇ ಪ್ರದರ್ಶನ ಸರಿಯಲ್ಲ. ಶಾಸ್ತ್ರೀಯ ಕಲೆಯ ಪ್ರದರ್ಶನಕ್ಕೆ ಅನೇಕ ವರ್ಷಗಳ ಅಧ್ಯಯನ-ತಯಾರಿ ಬೇಕಾಗುತ್ತದೆ. ಪ್ರದರ್ಶನಕ್ಕೆ ಅವಸರ ಮಾಡಿದಲ್ಲಿ ಪ್ರದರ್ಶನ ಚಪಲ, ಹೊಗಳಿಕೆಯ ಬಯಕೆ ಹೆಚ್ಚುತ್ತಾ ಹೋಗಿ ಕಲಿಕೆ, ಬೆಳವಣಿಗೆ ನಿಂತುಬಿಡುತ್ತದೆ. ಆದರೆ ಪ್ರದರ್ಶನದೊಂದಿಗೇ ಬೆಳೆಯುವ ಕಲೆ- ನಾಟಕ ಮಾತ್ರ. ನಾಟಕದಲ್ಲಿ ಇರುವುದು ಸಮೂಹ ಚಟುವಟಿಕೆ; ವೈಯುಕ್ತಿಕ ಪ್ರತಿಭೆಯ ವೈಭವೀಕರಣ ಅಲ್ಲ. ಇಲ್ಲಿ ನಾನು ಹೇಳುತ್ತಿರುವುದು ರಂಗ ನಾಟಕದ ಕುರಿತೇ ವಿನಾ ಪ್ರದರ್ಶನವೇ ಗುರಿಯಾಗಿರುವ ನಾಟಕದ ಬಗ್ಗೆ ಅಲ್ಲ.

 

ನಾಟಕಕ್ಕಿಂತ ಕತೆ-ಕವನ ರಚನೆಯಂತಹ ಸಾಹಿತ್ಯ ಚಟುವಟಿಕೆ; ಮಕ್ಕಳ ಸಾಹಿತ್ಯಸಮ್ಮೇಳನ- ಇವೆಲ್ಲ ಮಕ್ಕಳ ಬೆಳವಣಿಗೆಗೆ ಪೂರಕ ಅಲ್ಲವೇ?

ಸಾಮಾನ್ಯವಾಗಿ ಇಲ್ಲೆಲ್ಲಾ ಹಿರಿಯರ ಚಪಲಗಳೇ ಹೆಚ್ಚಾಗಿ ಕೆಲಸ ಮಾಡುವಂತೆ ಕಂಡು ಬರುತ್ತದೆ. ಮಕ್ಕಳದ್ದೇ ಕಲ್ಪನೆ, ಮಕ್ಕಳದ್ದೇ ಚಿಂತನೆ, ಮಕ್ಕಳದ್ದೇ ಭಾವನೆ, ಮಕ್ಕಳದ್ದೇ ಭಾಷೆ ಅಲ್ಲಿದ್ದರೆ ಚಂದವೇ ಹೊರತು, ಹಿರಿಯರು ಬರೆದುಕೊಟ್ಟದ್ದನ್ನು ಉರು ಹೊಡೆದು, ವೇದಿಕೆಯಲ್ಲಿ ಭಾಷಣ ಬಿಗಿಯುವ ಮಕ್ಕಳನ್ನು ಕಂಡು ಧನ್ಯರಾಗುವುದೆಂದರೆ ಏನಿದೆ ಪುರುಷಾರ್ಥ? ಕತೆ, ಕವನ ರಚನೆಯು ಮಕ್ಕಳಲ್ಲಿ ಪ್ರಕಟಣೆಯ, ಪ್ರದರ್ಶನದ ಹುಚ್ಚನ್ನು ಬೆಳೆಸುವಂತಿರಬಾರದು. ಎಷ್ಟೋಸಾರಿ, ‘ಇದು ಮಕ್ಕಳ ಕಲ್ಪನೆ ’ ಎಂದು ನಾವು ಬೀಗುವುದು ನಮ್ಮ ಸಮರ್ಥನೆಗಾಗಿ, ನಮ್ಮ ಲಾಭಕ್ಕಾಗಿ.

 

ಹಾಗಾದರೆ, ಮಕ್ಕಳ ಬೆಳವಣಿಗೆಗೆ ನಾಟಕ ಮಾತ್ರ ಸಾಕೇ? ಬೇರೆ ಯಾವುದೂ ಬೇಕಾಗಿಲ್ಲವೇ?

ಮಕ್ಕಳ ಬೆಳವಣಿಗೆಗೆ ನಾಟಕ ಮುಖ್ಯ ಎಂದರೆ, ಉಳಿದ ಯಾವುದೂ ಬೇಡ ಎಂಬ ಅರ್ಥವಲ್ಲ. ನಾಟಕ ಮನುಷ್ಯನ ಮೂಲಭೂತ ಪ್ರವೃತ್ತಿ, ಹುಟ್ಟಿನೊಂದಿಗೇ ಇದೆ. ನಾಟಕದಲ್ಲಿ ಎಲ್ಲವೂ ಸೇರಿಕೊಂಡಿದೆ. ಪ್ರಾಯಃ ‘ನಾಟಕ’ ಎನ್ನುವುದಕ್ಕಿಂತ ‘ರಂಗಭೂಮಿ’ ಎಂದರೆ ಇನ್ನಷ್ಟು ಸ್ಪಷ್ಟವಾದೀತೋ ಏನೋ! ರಂಗಭೂಮಿ ಚಟುವಟಿಕೆಯಲ್ಲಿ-ಸಾಹಿತ್ಯ, ಸಂಗೀತ, ನೃತ್ಯ, ಚಿತ, ಆಟ, ಪಾಠ, ಹುಡುಕಾಟ ಎಲ್ಲಾ ಇರುತ್ತದೆ. ಶಾಸ್ತ್ರೀಯವಾದದ್ದು, ಅಶಾಸ್ತ್ರೀಯವಾದದ್ದು ಎರಡೂ ಇದೆ. ಇದರಿಂದ ಮನಸ್ಸು ಸೃಷ್ಟಿಶೀಲವಾಗುತ್ತದೆ.

ಅದರಲ್ಲೂ ಶಾಸ್ತ್ರವನ್ನು ಕಲಿತು ಅದನ್ನು ಮೀರುವ ಗುಣ ನಾಟಕದ ಒಡಲಲ್ಲೇ ಇದೆ. ನಾಟಕ ಅನೇಕ ವಿಷಯಗಳಿಗೆ ಮುಖಾಮುಖಿ ಆಗುವುದರಿಂದ ಆಯ್ಕೆಗೆ ಅವಕಾಶ ಹೆಚ್ಚು ಇರುತ್ತದೆ, ಆಸಕ್ತಿಯನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಗುತ್ತದೆ. ನಾಟಕವು ಒಂದು ಆಟವಾಗುವುದರಿಂದ ಆನಂದದಾಯಕವಾಗಿರುತ್ತದೆ. ಕಲಿಕೆಯೆಂಬುದು iಕ್ಕಳ ಅರಿವಿಗೆ ಬಾರದಂತೆ ನಡೆದಿರುತ್ತದೆ. ಇಲ್ಲಿ ಕಲಿಸುವುದು ಅಲ್ಲ, ಕಲಿಯುವಂತೆ ಮಾಡುವುದು, ಕಲಿಕೆಯ ಪರಿಸರ-ಸಾಮಾಗ್ರಿ ಒದಗಿಸುವುದು ಮುಖ್ಯ. ಇನ್ನೂ ಸರಳವಾಗಿ ಹೇಳುವುದಿದ್ದರೆ ರಂಗಭೂಮಿ ಚಟುವಟಿಕೆಯಲ್ಲಿ ಮಕ್ಕಳನ್ನು ‘ನಟ’ರನ್ನಾಗಿ ಮಾಡುವುದೇ ಉದ್ದೇಶ ಅಲ್ಲ. ಮಕ್ಕಳ ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡಿ, ಮಕ್ಕಳು ತಮ್ಮ ದಾರಿಯನ್ನು ತಾವೇ ಕಂಡುಕೊಳ್ಳುವಂತೆ ರೂಪಿಸುವುದು ಇಲ್ಲಿನ ಉದ್ದೇಶ. ರಂಗತರಬೇತಿ ಎನ್ನುವುದು ಎಲ್ಲದಕ್ಕೂ ಅಡಿಪಾಯ ಇದ್ದಂತೆ. ಮಕ್ಕಳು ನಿಧಾನವಾಗಿ ತಮ್ಮ ದಾರಿಯನ್ನು ಕಂಡುಕೊಳ್ಳುತ್ತಾರೆ. ಬಂದದ್ದನ್ನು ಎದುರಿಸುವ ಛಲ ಬೆಳೆಯುತ್ತದೆ. ತಮ್ಮ ಆಸಕ್ತಿಯ ದಾರಿಯಲ್ಲಿ, ಸಹಜವಾಗಿ ಏಕಾಗ್ರತೆ ಮೂಡಿ, ಯಾವುದೇ ಸಾಧನೆಗೆ ನೆರವಾಗುತ್ತದೆ. ಹಾಗಾಗಿ ಶಿಕ್ಷಣ ರಂಗಭೂಮಿಯ ಮೂಲಕ ಆಗಬೇಕು ಎಂದು ಭಾವಿಸಿದ್ದೇನೆ.

 

‘ಶಿಕ್ಷಣ- ರಂಗಭೂಮಿಯ ಮೂಲಕ ನಡೆಯಬೇಕು-ಎಂದಾದಲ್ಲಿ ಮಕ್ಕಳಿಗೂ, ಶಿಕ್ಷಕರಿಗೂ ಅನಾವಶ್ಯಕ ಹೊರೆ ಅಲ್ಲವೇ?

ಆಲಸೀ ಶಿಕ್ಷಕರಿಗೆ ಹೊರೆ ಎಂದು ಅನಿಸಲೂಬಹುದು. ಆದರೆ ಮಕ್ಕಳಿಗೆ ಖಂಡಿತಾ ಹೊರೆಯಲ್ಲ. ಹಾಗೆ ನೋಡಿದರೆ ಮಕ್ಕಳು ಭಾರ ಇಳಿದು ಹಗುರವಾಗುತ್ತಾರೆ. ಒತ್ತಡಗಳು ಇರುವುದಿಲ್ಲ. ಹೊರೆ ಎಂದು ಅನಿಸುವುದೇ, ‘ಇದು ನೀನು ಕಲಿಯಬೇಕಾದ್ದು’ ಎಂದು ಗೊತ್ತುಮಾಡಿದಾಗ. ಆದರೆ ಕಲಿಕೆಯೆಂಬುದು ಗೊತ್ತಿಲ್ಲದೇ ನಡೆದರೆ ಅದು ಆನಂದ. ಆನಂದದಾಯಕವಾದ್ದರಿಂದ ಕಲಿತದ್ದು ನೆನಪಲ್ಲಿ ಉಳಿಯುತ್ತದೆ. ಮಕ್ಕಳ ಜೊತೆ ಸೃಜನಶೀಲ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಶಿಕ್ಷಕನೂ ಬೆಳೆಯುತ್ತಾನೆ. ಒಬ್ಬ ಒಳ್ಳೆಯ ಶಿಕ್ಷಕನ ಪಾಠಕ್ರಮದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ರಂಗಭೂಮಿ ಚಟುವಟಿಕೆ ಸೇರಿಕೊಂಡೇ ಇರುತ್ತದೆ. ಆದರೆ ‘ತಾನು ಬೆಳೆದಾಗಿದೆ’ ಎಂದು ತಿಳಿದಿರುವವನನ್ನು ಏನು ಮಾಡಲೂ ಸಾಧ್ಯವಿಲ್ಲ.

 

ಮಕ್ಕಳ ನಾಟಕವನ್ನು ‘ಶಿಕ್ಷಣ ಎಂದು ಮಾತ್ರ ತಿಳಿಯಬೇಕೇ? ಅಥವಾ ಒಂದು ಕಲೆಯಾಗಿ ನೋಡಬಹುದೇ?

ಮಕ್ಕಳ ನಾಟಕವನ್ನು ಕಲಾಪ್ರಕಾರದಿಂದ ಹೊರಗಿಡುವುದು ಸರಿಯಲ್ಲ. ಮಕ್ಕಳ ನಾಟಕದಲ್ಲಿ ಪ್ರಕ್ರಿಯೆ ಒಂದು ಶಿಕ್ಷಣವಾಗಬೇಕು; ಪ್ರದರ್ಶನ ಒಂದು ಕಲೆಯಾಗಬೇಕು. ಪ್ರದರ್ಶನವೇ ಇದ್ದಲ್ಲಿ ಪ್ರಕ್ರಿಯೆಯನ್ನು ಅದಕ್ಕಾಗಿ ಹೊಂದಿಸಿಕೊಳ್ಳಬೇಕು. ಅಲ್ಲಿಯೂ ಕಲಿಕೆ ಇದೆ. ರಸಗ್ರಹಣಶಕ್ತಿ ಬೆಳೆಯುತ್ತದೆ. ಸೌಂದರ್ಯ ಪ್ರಜ್ಞೆ, ನಡಿಗೆಯ ಲಯ, ಮಾತಿನ ಏರಿಳಿತ, ಪಾತ್ರದ ಸ್ವಭಾವ ಇತ್ಯಾದಿ ತಿಳಿಯುತ್ತಾ ಬರುತ್ತದೆ. ಮಕ್ಕಳ ಮಾತು, ಚಲನೆ ಎಲ್ಲಾ ಸಹಜವಾಗಿರುವಂತೆ ಅವರನ್ನು ಪ್ರೇರೇಪಿಸಿ ಅಭ್ಯಾಸ ನಡೆಸಿದರೆ, ‘ರಸ’ಸೃಷ್ಟಿಯಾಗಿ, ಪ್ರದರ್ಶನವು ಕಲೆಯ ರೂಪ ಪಡೆಯಲು ಸಾಧ್ಯ.

 

ಮಕ್ಕಳ ನಾಟಕ ಪ್ರದರ್ಶನ ಹೇಗಿರಬೇಕು?

ಮಕ್ಕಳ ನಾಟಕವು ಅವರು ವಯೋಮಾನಕ್ಕೆ ಅನುಗುಣವಾಗಿ ಅವರು ಬೆಳೆದ ಊರು, ಪರಿಸರಕ್ಕೆ ಅನುಗುಣವಾಗಿ ಇರಬೇಕಾಗುತ್ತದೆ. ಹೆಚ್ಚು ಮಕ್ಕಳು ಭಾಗವಹಿಸುವಂತಿದ್ದರೆ ಒಳ್ಳೆಯದು. ಮಕ್ಕಳ ಕುತೂಹಲ, ಬೆರಗು, ಮುಗ್ಧತೆ, ತುಂಟತನ- ಇವೆಲ್ಲಾ ಸಹಜವಾಗಿ ಪ್ರಕಟವಾಗಿ ರಸಸೃಷ್ಟಿಯಾಗಬೇಕು. ಮೇಲ್ನೋಟಕ್ಕಂತೂ ಸರಳವಾಗಿಯೇ ಇರಬೇಕು; ಆದರೆ ಹಿರಿಯರ ಯೋಚನೆಯನ್ನು ಕೆದಕುವ ಧ್ವನಿ ಅದರಲ್ಲಿದ್ದರೆ ಅದು ಪ್ಲಸ್‌ಪಾಯಿಂಟ್. ಸಂಭಾಷಣೆಯ ಭಾಷೆಯೂ ಅವರು ದಿನನಿತ್ಯ ಬಳಸುವ ಶೈಲಿಯೇ ಚಂದ; ಕಾವ್ಯಮಯವಾಗಿಸುವ ಚಪಲ ಸರಿಯಲ್ಲ. ನಾಟಕದಲ್ಲಿ ಹಾಡು, ಕುಣಿತಕ್ಕೆ ಅವಕಾಶ ಇರಬೇಕು, ವರ್ಣಮಯವಾಗಿರಬೇಕು. ಮುಖವಾಡ, ಮೇಕಪ್ಪು, ವೇಷಭೂಷಣಗಳು ಮಕ್ಕಳಿಗೆ ಹೊರೆ ಆಗಬಾರದು; ಮಕ್ಕಳ ಮುಖ ಸರಿಯಾಗಿ ಕಾಣಿಸುವಂತಿರಬೇಕು. ಸಾಂಪ್ರದಾಯಿಕ ವೇದಿಕೆಯ ಜೊತೆ ಮರಗಿಡಗಳ ನಡುವೆ, ಏರುತಗ್ಗುಗಳ ನಡುವೆ ಮಕ್ಕಳು ನಾಟಕವಾಡುವ ಖುಷಿಯೇ ಬೇರೆ. ಒಟ್ಟಿನಲ್ಲಿ ಮಕ್ಕಳ ನಾಟಕ ಹಬ್ಬ ಆಗಬೇಕು, ಸಂಭ್ರಮ ಆಗಬೇಕು ಎನ್ನುವುದು ನನ್ನ ಅನಿಸಿಕೆ.

 

ಮಕ್ಕಳ ನಾಟಕದಲ್ಲಿ ನೀತಿ, ಸಂದೇಶ ಬೇಕೇ? ಬೇಡವೇ ?

ಎಲ್ಲಾ ನಾಟಕಗಳಲ್ಲೂ ಏನಾದರೂ ಒಂದು ಸಂದೇಶ ಇದ್ದೇ ಇರುತ್ತದಲ್ಲ ! ನೀತಿ, ಸಂದೇಶ ಹೇಳಿಸುವುದೇ ಮಕ್ಕಳನಾಟಕದ ಗುರಿಯಲ್ಲ. ಎಷ್ಟೋಕಡೆ ನಾಟಕ ಚೆನ್ನಾಗಿ ಸಂವಹನ ಸಾಧಿಸಿದ್ದರೂ ‘ಕೊನೆಯಲ್ಲಿ ನೀತಿ ಏನೆಂದು ಹೇಳಿಲ್ಲ’ ಎನ್ನುವ ಕಾರಣ ಮುಂದಿಟ್ಟು ಅಂಕ ಕಳೆಯುವ ತೀರ್ಪುಗಾರರೂ ಇರುತ್ತಾರೆ.

 

ಮಕ್ಕಳಿಗೆ ಅಭಿನಯ ಕಲಿಸಿ ಕೊಡಬೇಕೇ? ಬೇಡವೇ ?

ಸಾಮಾನ್ಯವಾಗಿ ಎಲ್ಲಾ ಕಡೆ, ಒಂದು ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡೇ ನಾಟಕ ತಯಾರಿ ನಡೆಯೋದು. ಅಂತಹ ಸಂದರ್ಭಗಳಲ್ಲಿ ಮಕ್ಕಳಿಗೆ ಅಭಿನಯವನ್ನು ಕಲಿಸಿಕೊಡಬೇಕಾಗುತ್ತದೆ. ಮಕ್ಕಳು ತಮ್ಮದನ್ನೂ ಅಭಿನಯಿಸುತ್ತಾರೆ, ತಮ್ಮದಲ್ಲದ್ದನ್ನೂ ಅಭಿನಯಿಸುತ್ತಾರೆ, ಅನುಕರಣೆಯನ್ನೂ ಮಾಡ್ತಾರೆ. ಯಾಕೆಂದರೆ, ಇವತ್ತು ಮಕ್ಕಳಿಗೆ ಮಾದರಿಗಳಿರುವುದು ಕೆಟ್ಟದಾದ ಸಿನಿಮಾಗಳು, ಸಿನಿಮಾ ಮಾದರಿಯ ನಾಟಕಗಳು, ಅಭಿನಯದ ಹೆಸರಿನಲ್ಲಿ ವಿಕಾರ ಅಂಗಚೇಷ್ಟೆಗಳನ್ನು ಪ್ರದರ್ಶಿಸುವ ಹಿರಿಯರ ನಾಟಕಗಳು, ಕೆಟ್ಟದಾದ ಟಿ.ವಿ. ಧಾರಾವಾಹಿಗಳು, ಟಿ.ವಿ. ಕಾರ್ಯಕ್ರಮ ನಿರ್ವಾಹಕರು, ಆರ್ಕೆಸ್ಟ್ರಾ ನಿರ್ವಾಹಕರು ಇತ್ಯಾದಿ. ‘ಇದೇ ಅಭಿನಯ’ ಎಂದು ತಿಳಿದ ಮಕ್ಕಳಿಗೆ, ‘ಇದು ನಿಮ್ಮದಲ್ಲಾ, ನಿಮ್ಮ ಅಭಿನಯ ಬೇರೆ’ ಎಂದು ತಿಳಿಯದವರಿಗೆ ಕಲಿಸಿಕೊಡಬೇಕಾಗುತ್ತದೆ.

ಮಕ್ಕಳನ್ನು ಬೇಗ ದೊಡ್ಡವರನ್ನಾಗಿಸುವ ಭರದಲ್ಲಿ, ಮಕ್ಕಳ ಬಾಲ್ಯವನ್ನು ನಾವೇ ಹೊಸಕಿ ಹಾಕುತ್ತಿದ್ದೇವೆ. ಮಕ್ಕಳ ಸಹಜತೆ ಕೊನೇಪಕ್ಷ ನಾಟಕದಲ್ಲಿಯಾದರೂ ಕಾಣಲಿ ಎನ್ನುವ ಕಾರಣಕ್ಕಾಗಿಯಾದರೂ, ಅಭಿನಯವನ್ನು ಕಲಿಸಿಕೊಡುವುದು ಒಳ್ಳೆಯದು. ಮಕ್ಕಳ ಸಹಜ ಅಭಿನಯವನ್ನು ಹೊರಗೆಳೆಯಬೇಕಾದ್ದು ನಿರ್ದೇಶಕನ ಹೊಣೆ. ಆದರೆ, ನಾಟಕ ‘ಪ್ರದರ್ಶನ’ದ್ದಲ್ಲ; ದಿನನಿತ್ಯದ ಪ್ರಕ್ರಿಯೆ ಎಂದಾದರೆ, ಅಭಿನಯವನ್ನು ನೇರವಾಗಿ ಕಲಿಸಬೇಕಿಲ್ಲ. ಕೊರತೆಗಳನ್ನು ಎತ್ತಿ ತೋರಿಸದೇ, ‘ಚೆನ್ನಾಗಿದೆ’ ಎಂದು ಬೆನ್ನು ತಟ್ಟುತ್ತಾ, ಮಕ್ಕಳೇ ಯೋಚಿಸಿ ಕಲಿಯುವಂತೆ ಮಾಡಬೇಕಾದ್ದು ನಿರ್ದೇಶಕನ ಜವಾಬ್ದಾರಿ. ನಿರ್ದೇಶಕ ಎಲ್ಲವನ್ನೂ ಸೂಕ್ಶ್ಮವಾಗಿ ಗಮನಿಸುತ್ತಾ, ಮಕ್ಕಳು ತನ್ನ ಕೈಗೂಸುಗಳಾಗದಂತೆ ಎಚ್ಚರ ವಹಿಸಬೇಕು. ಮಕ್ಕಳ ಕಲ್ಪನೆಗಳಿಗೆ ಅವಕಾಶ ನೀಡಿ, ಅವರ ಸಾಮರ್ಥ್ಯವನ್ನು ಬೆಳೆಸಬೇಕು. ಶಾಲೆಗಳಲ್ಲಿ ದಿನನಿತ್ಯ ನಡೆಯಬೇಕಾದ್ದು ಹೀಗೆ. ಆಗ ‘ಫಲಿತಾಂಶ ಮುಖ್ಯ’ ಎನ್ನುವ ಭ್ರಮೆ ಹೋಗಿ, ‘ಪ್ರಕ್ರಿಯೆ ಮುಖ್ಯ’ ಎನ್ನುವ ಅರಿವು ಹಿರಿಯರಲ್ಲೂ ಮೂಡುತ್ತದೆ.

 

ಕನ್ನಡದಲ್ಲಿ ಮಕ್ಕಳ ನಾಟಕ ಪಠ್ಯದ ಕೊರತೆ ಇದೆ ಎನ್ನುತ್ತಾರಲ್ಲ ?

ನನಗಂತೂ ಹಾಗನಿಸಿಲ್ಲ. ಅಷ್ಟಕ್ಕೂ ಮಕ್ಕಳ ನಾಟಕಕ್ಕೆ ‘ರೆಡಿಮೇಡ್ ಸ್ಕ್ರಿಪ್ಟ್’ ಯಾಕೆ ? ಎಷ್ಟೋ ವರ್ಷಗಳಿಂದ ಬರುತ್ತಿರುವ ‘ಚಂದಮಾಮ’ ಇದೆ, ‘ಪಂಚತಂತ್ರ’ ಇದೆ, ಅನೇಕ ಮಕ್ಕಳ ಕತೆಪುಸ್ತಕಗಳಿವೆ. ಇದಲ್ಲದೇ ಮಕ್ಕಳ ಬಾಯಿ ಬಿಡಿಸಿದರೆ ಅದ್ಭುತವೆನಿಸುವ ಕತೆಗಳೂ ಹುಟ್ಟಿಕೊಳ್ಳುತ್ತವೆ. ಮಕ್ಕಳಿಗೆ ಎಂದೂ ನಾಟಕದ ಕೊರತೆ ಕಂಡುಬರುವುದಿಲ್ಲ. ಮಕ್ಕಳ ಮೂಲಕ ಸಂಭಾಷಣೆ ಬೆಳೆದಾಗಲೇ, ಅದು ಮಕ್ಕಳ ನಾಟಕ ಆಗೋದು ಎನ್ನುವುದು ನನ್ನ ನಂಬಿಕೆ. ‘ಪೌರಾಣಿಕ, ಐತಿಹಾಸಿಕ ನಾಟಕಗಳು, ನೀತಿಯುತವಾದ ನಾಟಕಗಳು ಮಾತ್ರ ಮಕ್ಕಳ ನಾಟಕಗಳು’, ‘ಮಕ್ಕಳ ನಾಟಕದಲ್ಲಿ ಅದ್ಭುತರಮ್ಯಕಲ್ಪನೆಗಳು ಇರಬಾರದು, ವಾಸ್ತವತೆಯ ಅರಿವು ಮೂಡಿಸುವ ಕೆಲಸ ಆಗಬೇಕು…..’- ಇಂತಹ ಭ್ರಮೆಗಳನ್ನು ಬಿಟ್ಟು, ಮಕ್ಕಳ ನೆಲೆಯಲ್ಲಿಯೇ ಯೋಚಿಸಿದಾಗ ಮಕ್ಕಳ ನಾಟಕಪಠ್ಯದ ಕೊರತೆ ಕಂಡುಬರಲಾರದು.

 

ನಾಟಕದ ಸಂಭಾಷಣೆ ಮಕ್ಕಳೇ ರಚಿಸಿಕೊಂಡರೆ ಅದು ಸರಿಯಾದೀತೇ ? ರಸ ಸೃಷ್ಟಿಯಾದೀತೇ ?

“ಮಕ್ಕಳೇ” ಅಲ್ಲ, “ಮಕ್ಕಳ ಮೂಲಕ” ಸಂಭಾಷಣೆ- ಅಂದರೆ ನಿರ್ದೇಶಕ ಅಥವಾ ನಾಟಕಕಾರ ಆಯಾಯ ಮಗುವಿನ ಸಾಮರ್ಥ್ಯಕ್ಕೆ ಅನುಗುಣವಾಗಿ, ಮಗುವಿನ ಅರಿವಿಗೆ ನಿಲುಕುವಂತಾ ಮಾತುಗಳನ್ನು ಕಟ್ಟುತ್ತಾ ಸಂಭಾಷಣೆ ಬೆಳೆಸುವುದು ಮುಖ್ಯ. ಆಗ ‘ಈ ಮಾತು ತನ್ನದೇ ಸ್ವಂತದ್ದು’ ಎಂದು ಮಗು ನಂಬುವಂತಾಗುತ್ತದೆ, ಮಗುವಿಗೆ ಪಾತ್ರದೊಳಗೆ ಪ್ರವೇಶ ಸುಲಭವಾಗುತ್ತದೆ. ನಿರ್ದಿಷ್ಟ ಭಾವ ಮನಸ್ಸಿನಲ್ಲಿ ಮೂಡಿ, ಮಾತು ಸಹಜವಾಗುತ್ತದೆ.

ನಾಟಕದ ವಸ್ತು, ಮಾತುಗಳು ಮಕ್ಕಳ ಮಟ್ಟದಲ್ಲೇ ಇದ್ದು ಅವರಿಗೆ ಅದರ ಭಾವ ಅರ್ಥವಾದರೆ ಮಾತ್ರ ಮಕ್ಕಳ ಮಾತು ಸಹಜವಾಗಿದ್ದೀತೇ ಹೊರತು; ಯಾರೋ ಬರೆದ ಮಾತುಗಳನ್ನು ಮಕ್ಕಳಿಂದ ಹೇಳಿಸಿ ನಾಟಕ ಮಾಡಿಸಿದರೆ ಮಾತು ಕೃತಕವಾಗಿಯೇ ಉಳಿದೀತು. ಮಕ್ಕಳ ಮಾತು ಸಹಜವಾಗದೇ ರಸಾಸ್ವಾದನೆ ಸಾಧ್ಯವಾಗಲಾರದು. ಎಷ್ಟೇ ಸರಳವಾದ ಮತ್ತು ಚುಟುಕಾದ ಸಂಭಾಷಣೆಯಿಂದ ಕೂಡಿದ ನಾಟಕವಾದರೂ ಒಮ್ಮೆ ಮಕ್ಕಳು ಅದನ್ನು ಕಂಠಪಾಠ ಮಾಡಿದರೆಂದಾದರೆ ಸಾಮಾನ್ಯವಾಗಿ ಮಕ್ಕಳು ಸಹಜತೆಯಿಂದ ದೂರವೇ ಉಳಿದು ಬಿಡುತ್ತಾರೆ. ಅವರದ್ದೇ ಆದ ಭಾವನೆಯ ಅಭಿವ್ಯಕ್ತಿ ಸಾಧವಾಗುವುದಿಲ್ಲ. ಹಾಗೆಂದು ಒಂದು ನಾಟಕ ಆಡುವಾಗ ‘ಮಕ್ಕಳದ್ದೇ ಮಾತು ಇರಲಿ’ ಎಂದರೆ, ಮಾತುಗಳನ್ನು ಪೋಣಿಸುವ ಕಲೆ ಮಕ್ಕಳಿಂದ ಸಾಧ್ಯವಾಗಲಾರದು. ಆಗ ಮಾತು ಸಹಜವೂ, ಸತ್ವಯುತವೂ ಆಗುವುದು ಕಷ್ಟ. ‘ಮಕ್ಕಳು ತನ್ನ ಕೈಗೊಂಬೆಗಳಲ್ಲ….’ ಎಂದು ದೃಡವಾಗಿ ನಂಬಿದ ನಿರ್ದೇಶಕರು ಮಾತ್ರ, ಮಕ್ಕಳ ಮೂಲಕ ಮಾತುಗಳನ್ನು ಹೆಣೆಯುತ್ತಾ ನಾಟಕವನ್ನು ಕಟ್ಟಬಲ್ಲರು.

 

ಮಕ್ಕಳ ರಂಗಭೂಮಿ ಎಂದರೆ, ಹಿರಿಯರು ಮಕ್ಕಳಿಗಾಗಿ ಅಭಿನಯಿಸುವಂತಾದ್ದು; ಮಕ್ಕಳೇ ಅಭಿನಯಿಸುವುದು ಅಲ್ಲ, ಮಕ್ಕಳೇ ಅಭಿನಯಿಸಿದರೆ ಅದು ಸೃಜನಾತ್ಮಕ ರಂಗಭೂಮಿ ಎನ್ನುವ ವಾದ ಇದೆಯಲ್ಲ ?

ವಾದ ಇಲ್ಲದೇ ಇರುವುದು ಯಾವುದಕ್ಕೆ ? ವಾದದ ಜೊತೆಗೇ ಪ್ರತಿವಾದವೂ ಹುಟ್ಟಿಕೊಳ್ಳುತ್ತದಲ್ಲ ! ಇರಲಿ ಬಿಡಿ. ಸೃಜನಾತ್ಮಕ ರಂಗಭೂಮಿ ಅಂದರೆ ತಪ್ಪಲ್ಲ; ಆದರೆ ನಿಜವಾಗಿ ಸೃಜನಶೀಲತೆ ಮಕ್ಕಳಲ್ಲೇ ಹೆಚ್ಚಲ್ಲವೇ ! ದೊಡ್ಡವರಾದಂತೆ ನಮ್ಮಲ್ಲಿರುವ ಖಚಿತ ನಂಬಿಕೆಗಳೇ ನಮ್ಮ ಸೃಜನಶೀಲತೆಗೆ ಅಡ್ಡಿಯಾಗುತ್ತದಲ್ಲ ! ಒಟ್ಟಿನಲ್ಲಿ ಹೆಸರು ಏನು ಬೇಕಾದರೂ ಕೊಡಲಿ, ಮಕ್ಕಳು ನಾಟಕ ಮಾಡುತ್ತಾ ಇರಲಿ.

 

ಹಾಗಲ್ಲ.., ಈಗ ಮಕ್ಕಳ ಸಾಹಿತ್ಯ ಎಂದರೆ ಮಕ್ಕಳಿಗಾಗಿ ಅನೇಕ ಹಿರಿಯರು ಬರೆದ ಸಾಹಿತ್ಯ. ಮಕ್ಕಳೇ ಬರೆದದ್ದನ್ನು ಮಕ್ಕಳ ಸಾಹಿತ್ಯ ಎನ್ನಲು ಸಾಧ್ಯವೇ ?

ವಾದ ಚೆನ್ನಾಗಿದೆ. ಆದರೆ ದಯವಿಟ್ಟು ಇನ್ನೊಮ್ಮೆ ಗಮನಿಸಬೇಕು. ಸಾಹಿತ್ಯವನ್ನೂ, ನಾಟಕವನ್ನೂ ಹೋಲಿಸಿ ಹೇಳುವುದು ಸರಿಯೇ? ಊಟ, ನಿದ್ರೆ, ಆಟದಂತೆ ನಾಟಕ ಎನ್ನುವುದೂ ಮಕ್ಕಳ ಮೂಲಭೂತ ಪ್ರವೃತ್ತಿ. ಆದರೆ ಸಾಹಿತ್ಯ ಹಾಗೆ ಅಲ್ಲವಲ್ಲಾ! ಒಟ್ಟಿನಲ್ಲಿ ಯಾವುದೇ ನಿಲುವನ್ನು ಇನ್ನೊಮ್ಮೆ ಪರಿಶೀಲಿಸಬೇಕು ಎನ್ನುವುದಷ್ಟೇ ನನ್ನ ಕೇಳಿಕೆ.

 

ಒಂದು ಮಕ್ಕಳನಾಟಕ ಎಂದರೆ ತುಂಬಾ ಖರ್ಚು ಬರುವುದಿಲ್ಲವೇ ? ಎಲ್ಲರಿಗೂ ಹೇಗೆ ಸಾಧ್ಯವಾದೀತು ?

ಈ ಅಭಿಪ್ರಾಯ ಹುಟ್ಟಿಸಿದ್ದು ನಮ್ಮ ದೊಡ್ಡ ದೊಡ್ಡ ರಂಗಕರ್ಮಿಗಳೇ ಇರಬಹುದೇನೋ ! ಸೆಟ್ಟಿಂಗ್, ಪ್ರಾಪರ್ಟಿ, ಕಾಸ್ಟ್ಯೂಮ್, ಮೇಕಪ್, ಮ್ಯೂಸಿಕ್, ಲೈಟಿಂಗ್ ಅಂತ ವಿಪರೀತ ಖರ್ಚು ಮಾಡಿಸಬೇಕೆಂದೇ ಇಲ್ಲ್ಲ. ಮಕ್ಕಳಿಂದಲೇ ಬಟ್ಟೆಬರೆಗಳನ್ನೂ, ಇನ್ನಿತರ ಸಾಮಾಗ್ರಿಗಳನ್ನೂ ಹೊಂದಿಸಿಕೊಂಡು ಸುಂದರವಾಗಿ ನಾಟಕ ಆಡಿಸಬಹುದು. ಮಕ್ಕಳ ಸಹಜ ಅಭಿನಯವೇ ಮುಖ್ಯ. ಉಳಿದುದೆಲ್ಲ ಪೂರಕ ಅಷ್ಟೆ. ದೃಶ್ಯವೈಭವ ಮುಖ್ಯವಾದರೆ ಮಾತ್ರ ಸ್ವಲ್ಪಮಟ್ಟಿನ ಖರ್ಚು ಅನಿವಾರ್ಯ. ಮಕ್ಕಳ ನಾಟಕದ ಗಂಭೀರತೆಯ ಅರಿವು ಎಲ್ಲರಲ್ಲೂ ಮೂಡಿದರೆ ಈ ಖರ್ಚು ದೊಡ್ಡ ಸಮಸ್ಯೆಯಾಗಲಾರದು.

 

ಮಕ್ಕಳ ನಾಟಕ ಸಂಗೀತ ಹೇಗಿರಬೇಕು?

ನಾಟಕ ನಿರ್ದೇಶಕನಿಗೆ ಲಯ-ಶೃತಿಗಳ ಅರಿವು ಸ್ವಲ್ಪವಾದರೂ ಇದ್ದಲ್ಲಿ, ಮಕ್ಕಳ ನಡೆ-ನುಡಿಗಳಲ್ಲಿ ಲಯವನ್ನು ಉಳಿಸಿಕೊಳ್ಳಬಹುದು. ಇಲ್ಲವಾದರೆ ಸಂಗೀತ ನಾಟಕಕ್ಕಿಂತ ಬೇರೆ ಉಳಿದು ಬಿಡುತ್ತದೆ. ಸಂಗೀತ ಹೀಗೆಯೇ ಇರಬೇಕೆಂದು ಹೇಳುವುದು ಕಷ್ಟ. ಇನ್ನು ‘ಮಕ್ಕಳ ನಾಟಕಕ್ಕೆ ಮಕ್ಕಳಿಂದಲೇ ಸಂಗೀತ ಮಾಡಿಸಬೇಕು’ ಎನ್ನುವ ಹಠ ಇದ್ದರೆ, ನಾಟಕ ಒಂದು ಸಂತೆಯಾಗದಂತೆ, ಕಲೆಯ ಚೌಕಟ್ಟನ್ನು ಮೀರದಂತೆ ನೋಡಿಕೊಳ್ಳಲೇಬೇಕು. ಇಲ್ಲವಾದಲ್ಲಿ ಪ್ರೇಕ್ಷಕರಿಗೆ ದೊಡ್ಡ ಹಿಂಸೆಯೇ ಸರಿ. ಮಕ್ಕಳಿಗೆ ‘ಓ, ತಾನೂ ಸಂಗೀತ ನೀಡಬಲ್ಲೆ…’ ಎನ್ನುವ ವಿಶ್ವಾಸ ಮೂಡುತ್ತದೆ ಎನ್ನುತ್ತಾರೆ ಬಿ.ವಿ.ಕಾರಂತರು. ಅದಕ್ಕಾಗಿ ನಾಟಕ ಅಭ್ಯಾಸದ ಸಂದರ್ಭದಲ್ಲಿ, ಮಕ್ಕಳೇ ತಮ್ಮ ಕೈಗೆ ಸಿಕ್ಕಿದ ಅವಾದ್ಯಗಳಿಂದ ಸಂಗೀತ ನೀಡುವಂತೆ ಪ್ರೇರೇಪಿಸಬಹುದು ಮತ್ತು ಅದು ಒಳ್ಳೆಯದು ಕೂಡಾ. ನಾಟಕದ ನಿರ್ದೇಶಕರಿಗೆ, ಸಂಗೀತ ವಿನ್ಯಾಸಕಾರರಿಗೆ ಧ್ವನಿವರ್ಧಕವನ್ನು ಬಳಸಿಕೊಳ್ಳುವ ಕುಶಲತೆ ಇರಲೇಬೇಕು. ಇಲ್ಲವಾದರೆ ಕೋಮಲವಾಗಿರಬೇಕಾದ ಸಂಗೀತ ರೌದ್ರವಾಗುವ ಅಪಾಯ ಇದೆ.

 

ಮಕ್ಕಳಿಗೆ ರಜೆಯಲ್ಲೂ ಏನಾದರೂ ಕೆಲಸ ಕೊಡಬೇಕು, ಕಡ್ಡಾಯವಾಗಿ ಬೇಸಿಗೆ ಶಿಬಿರಗಳಿಗೆ ಕಳುಹಿಸಬೇಕು, ಹೆಚ್ಚು ಹೆಚ್ಚು ವಿಷಯಗಳನ್ನು ಕಲಿಸಬೇಕು ಎನ್ನುವುದು ಸರಿಯೇ?

ಖಂಡಿತಾ ಸರಿಯಲ್ಲ ಎಂದು ಕಾಣುತ್ತಿದೆ. ಇವತ್ತು ರಜಾ ಶಿಬಿರಗಳು ಒಂದು ದಂಧೆಯಾಗಿದೆ. ಹೆತ್ತವರಿಗೂ ಭ್ರಮೆ. ಹಾಗೆ ನೋಡಿದರೆ ಬೇಸಿಗೆಶಿಬಿರದಲ್ಲೂ ಮಕ್ಕಳು ಹೆಚ್ಚು ಖುಷಿಯಲ್ಲಿರುವುದು ಶಿಬಿರ ನಿರ್ದೇಶಕನ ಸೂತ್ರವಿಲ್ಲದೇ ಇದ್ದಾಗ ಅಂದರೆ ಅವರಷ್ಟಕ್ಕೇ ಅವರಿದ್ದಾಗ ! ಕಟ್ಟು ಪಾಡಿನ ಶಿಬಿರಗಳಿಗಿಂತ ರಜದಲ್ಲಿ ಮಕ್ಕಳು ಅವರಿಷ್ಟ ಬಂದಂತೆ ಅಜ್ಜಿಮನೆ, ಆಟೋಟ ಪ್ರವಾಸ ಎಂದೆಲ್ಲಾ ತಿರುಗಾಡುವುದು ಒಳ್ಳೆಯದು.

ಪ್ರಕೃತಿಯನ್ನು ನೋಡಿ ಮಕ್ಕಳು ತುಂಬಾ ಕಲಿಯುತ್ತಾರೆ, ಆ ಕಲಿಕೆ ಬಹು ಕಾಲ ಉಳಿದೂ ಉಳಿಯುತ್ತದೆ. ಪುಕುವೊಕಾನ ಸಹಜ ಕೃಷಿಯ ತತ್ವವೇ ಇಲ್ಲೂ ಸರಿ ಎಂದು ಅನಿಸುವುದಿಲ್ಲವೇ? ಅದರಲ್ಲೂ ಶಾಲೆಗಳಲ್ಲಿ ನಿಜವಾದ ಅರ್ಥದಲ್ಲಿ ಶಿಕ್ಷಣ ನಡೆದರೆ ರಜೆಯಲ್ಲಿ ಮಕ್ಕಳನ್ನು ಗೋಳು ಹೊಯ್ದುಕೊಳ್ಳುವುದನ್ನು ತಪ್ಪಿಸಬಹುದು.

 

ಹೆತ್ತವರು ಮಕ್ಕಳೊಂದಿಗೆ ಹೆಚ್ಚು ಸಮಯವನ್ನು ಕಳೆಯಬೇಕು ಎನ್ನುವುದು ನಿಜ ತಾನೇ ?

ನಿಜ, ಅಲ್ಲವೆಂದಲ್ಲ. ಆದರೆ ಆ ಸಿದ್ಧಾಂತವೂ ಸ್ವಲ್ಪ ಅತಿ ಆಯ್ತೇನೋ ಎಂದು ಕಾಣುತ್ತಾ ಇದೆ. ‘ನಿನ್ನ ಒಂದು ದಿನದ ಸಂಬಳ ನನ್ನ ಪಾಕೆಟ್ ಮನಿಯಿಂದ ಕೊಡುತ್ತೇನೆ, ನಿನ್ನ ಒಂದು ದಿನ ನನಗೆ ಕೊಡುತ್ತಿಯಾ ಅಪ್ಪಾ’ ಎಂದು ಮಗು ಕೇಳುವ ಜಾಹೀರಾತು ಚೆನ್ನಾಗಿದೆ ನಿಜ. ಆದರೆ ಅದೂ ಕೂಡಾ ಸ್ವಲ್ಪ ಮಟ್ಟಿನ ಮೆಲೋಡ್ರಾಮಾ ಎಂದೂ ಅನಿಸುವುದಿಲ್ಲವೇ ? ಅಂಥಾ ಚಿಂತನೆ ‘ಮಕ್ಕಳದ್ದೇ’ ಎನ್ನಲು ಸಾಧ್ಯವೇ ? ಈ ಸಮಸ್ಯೆ ಅವಿಭಕ್ತಕುಟುಂಬದ ಮನೆಯಲ್ಲಿ, ಆರ್ಥಿಕವಾಗಿ ಕೆಳಸ್ತರದಲ್ಲಿರುವ ಮನೆಗಳಲ್ಲಿ ಇದೆಯೇ ? ಹಾಗೆ ನೋಡಿದರೆ ಎಷ್ಟೋ ಸಾರಿ ‘ಇದು ಮಕ್ಕಳ ಚಿಂತನೆ, ಮಕ್ಕಳ ಯೋಚನೆ’ ಎಂದು ನಮಗೆ ನಾವೇ ಮೋಸ ಮಾಡಿಕೊಳ್ಳುವುದಿದೆ. ಮಗುವಿಗೆ ಆಟ ಬೇಕು; ‘ಆಟಕ್ಕೆ ಜನ ಸಿಕ್ಕಿದರೆ ಮಕ್ಕಳಿಗೆ ಅಪ್ಪ ಅಮ್ಮನೂ ಬೇಡ, ಏನೂ ಬೇಡ;- ತನ್ನ ವಯಸ್ಸಿನ ಗೆಳೆಯರ ಒಡನಾಟ ಮಗುವಿಗೆ ಸದಾ ಸಿಗುವಂತಾ ವಾತಾವರಣವನ್ನು ಗಮನಿಸಿದರೆ ಇದು ಸ್ವಲ್ಪ ಸ್ಪಷ್ಟವಾದೀತು.

 

ಹೆಚ್ಚು ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಮಕ್ಕಳನ್ನು ಚುರುಕಾಗಿಸಿ ಪ್ರತಿಭೆಗಳನ್ನು ಬೆಳಕಿಗೆ ತರಬಹುದಲ್ಲ ?

ಸರಿಯಲ್ಲ. ಎಲ್ಲಾ ಅಶಾಂತಿಗೂ ಸ್ಪರ್ಧೆಯೇ ಕಾರಣ. ಹಿರಿಯರಲ್ಲಿರುವ ಸ್ಪಧೆಗೆ ಮಕ್ಕಳು ಬಲಿ ಅಷ್ಟೆ. ಆಟೋಟಗಳಲ್ಲಾದರೆ ಸ್ಪಧೆ ಸರಿ. ಅಲ್ಲಿ ಸೋಲು-ಗೆಲುವು ಎಲ್ಲರಿಗೂ ನಿಚ್ಚಳವಾಗಿ ಕಾಣಿಸುತ್ತದೆ. ಸೋತ ಮಕ್ಕಳಿಗೆ ‘ತಮ್ಮದೇ ಅಸಾಮರ್ಥ್ಯದಿಂದಾದ ಸೋಲು’ ಎನ್ನುವುದು ಅರಿವಾಗಿ ಛಲ ಬೆಳೆಯುತ್ತದೆ. ಆದರೆ ಕಲೆ/ಶಿಕ್ಷಣದಲ್ಲಿ ತಮ್ಮ ಸೋಲಿಗೆ ಕಾರಣ ತಿಳಿಯದೇ, ಕೀಳರಿಮೆ ಉಂಟಾದೀತೇ ಹೊರತು ಬೆಳವಣಿಗೆ ಸಾಧ್ಯವಾಗಲಾರದು. ಕಲೆ, ಶಿಕ್ಷಣ ಹಾಗೂ ಬದುಕಿನಲ್ಲಿ ಸ್ಪಧೆ ಇರಬೇಕಾದ್ದು ತನ್ನಲ್ಲೇ ತನಗೆ ಹೊರತು ಇನ್ನೊಬ್ಬರಲ್ಲಿ ಅಲ್ಲ. ಇನ್ನು ‘ಸ್ಪಧೆಯ ಬದಲು ಉತ್ಸವಗಳಾಗಲಿ’ ಎಂದರೂ ಅಪಾಯ ಇದ್ದೇ ಇದೆ. ಉತ್ಸವದಲ್ಲೂ ಸ್ಪಧೆಯಿದೆಯಲ್ಲಾ ! ಇವತ್ತಿನ ಸಾರ್ವಜನಿಕ ಉತ್ಸವಗಳೇ ಮಕ್ಕಳ ಉತ್ಸವಕ್ಕೂ ಪ್ರೇರಣೆ. ಆದರೆ ಸ್ಪರ್ಧೆ ಇವತ್ತು ಅನಿವಾರ್ಯವಾಗಿರುವುದರಿಂದ, ಮಕ್ಕಳಿಗೆ ಸೋಲುವುದನ್ನು ಕಲಿಸುವುದು ಒಳ್ಳೆಯದು ಎಂದು ಕಾಣುತ್ತಾ ಇದೆ.

 

ಸಮಾರೋಪ : ಒಟ್ಟಿನಲ್ಲಿ ಮಕ್ಕಳ ನಾಟಕ ಅಂದರೆ ಏನು? ಅದು ಹೇಗಿರಬೇಕು? ಅದು ಯಾಕಿರಬೇಕು? ಮಕ್ಕಳ ನಾಟಕದಲ್ಲಿ ಬಣ್ಣ, ಸಂಗೀತ, ಹಾಡು, ಕುಣಿತ, ಆಕರ್ಷಕ ರಂಗಪರಿಕರ, ರಂಗವೇದಿಕೆ…. ಇವೆಲ್ಲಾ ಇರಬೇಕೆಂಬುದು ನಿಜವಾದರೂ, ಇವೇ ಮಕ್ಕಳ ನಾಟಕದ ಪ್ರದಾನ ಅಂಶಗಳಾಗಲು ಸಾಧ್ಯವೇ? ಇಷ್ಟೆಲ್ಲಾ ಇದ್ದೂ ಮಕ್ಕಳು ಉರು ಹೊಡೆದ ಮಾತುಗಳನ್ನು ಒಪ್ಪಿಸಿದರೆ ಅದು ಮಕ್ಕಳ ನಾಟಕ ಆಗುವುದು ಹೇಗೆ? – ಎನ್ನುವುದನ್ನು ಚಿಂತಿಸಿದರೆ ಮಾತ್ರ, ಅದರ ಗಂಭೀರತೆಯ ಅರಿವು ಮೂಡಲು ಸಾಧ್ಯ. ಇಲ್ಲವಾದರೆ ‘ಮಕ್ಕಳು ಏನು ಮಾಡಿದರೂ ಚಂದ’ ಎನ್ನುವ ಅಪ್ರಬುದ್ದ ಹೇಳಿಕೆಗೆ ಅಂಟಿಕೊಂಡುಬಿಡುತ್ತೇವೆ.

ಪ್ರದರ್ಶನಕ್ಕಿಂತ ನಾಟಕದ ಪ್ರಕ್ರಿಯೆಗೇ ಹೆಚ್ಚು ಒತ್ತುಕೊಟ್ಟು ನಾಟಕ ಆಡಿಸುವುದರಿಂದ ಮಕ್ಕಳ ಮನೋವಿಕಾಸಕ್ಕೆ ಸಹಕಾರಿಯಾಗುತ್ತದೆ, ಮಕ್ಕಳ ಆತ್ಮವಿಶ್ವಾಸ ಹೆಚ್ಚುತ್ತದೆ. ಮಕ್ಕಳ ಗಮನಿಸುವ ಶಕ್ತಿ, ಕಲ್ಪನಾ ಶಕ್ತಿ, ಏಕಾಗ್ರತೆ, ನೆನಪು ಶಕ್ತಿಗಳು ಹೆಚ್ಚುತ್ತಾ ಹೋಗುತ್ತವೆ, ಮಕ್ಕಳಲ್ಲಿರುವ ಸಹಜ ಪ್ರತಿಭೆ ಹೊರಹೊಮ್ಮುತ್ತದೆ, ಮಕ್ಕಳು ಭವಿಷ್ಯದಲ್ಲಿ ತಮ್ಮ ದಾರಿಯನ್ನು ತಾವೇ ಕಂಡುಕೊಳ್ಳಲು ಸಾಧ್ಯವಾಗುತ್ತದೆ.

Leave a Reply

*

code