ಅಂಕಣಗಳು

Subscribe


 

ಉದಾರಬೋಧಿನೀ

Posted On: Tuesday, May 26th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 27ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ :  ನಾಯಕನೆಡೆಗೆ ತನ್ನ ಔದಾರ್ಯವನ್ನು ಪ್ರದರ್ಶಿಸುತ್ತಾ ಬೇರೊಬಳನ್ನು ಹೋಲಿಸಿ ತನ್ನೊಂದಿಗೆ ಆತನ ಚರ್ಯೆಗಳಿರಬೇಕಾದ ರೀತಿನೀತಿಗಳನ್ನು ಬೋಧಿಸುವ ಈಕೆಯಲ್ಲಿ ನಾಯಕನು ಈಕೆಯ ಸಹನೆ, ಪ್ರೀತಿ-ವಿಶ್ವಾಸ, ಶಾಂತಿಪರತೆಯನ್ನು ಗಣಿಸಿ ನಡೆಯಬೇಕೆಂಬ ಆಶಯ ತುಂಬಿದೆ. ಈ ಹಿಂದಿನ ದಿನಗಳಲ್ಲಿ ನಾಯಕನು ತನ್ನಲ್ಲಿ ನಡೆದುಕೊಂಡ ವಿಪರೀತ ಬಗೆಯನ್ನು ವಿವರಿಸುತ್ತಾ ತನ್ನ ಕ್ಷಮಾಶೀಲ ವ್ಯಕ್ತಿತ್ವವನ್ನು ಕೊಂಡಾಡುತ್ತಾ ಅವನಿಗೆ ನಡತೆಯ ಪಾಠವನ್ನು ಸೂಕ್ಷ್ಮವಾಗಿ ಮಾಡಿರುವ ಈಕೆ ಖಂಡಿತೆಯೇ. ಆದರೆ ಧೀರಾ ಸ್ವಭಾವದವಳು.

 

ಉದಾರಬೋಧಿನೀ

ರಾಗ: ಹಿಂದೋಳ ; ತಾಳ : ಆದಿ

ನಾನುತ್ತಮೆಯಾದ ಕಾರಣ ಮನ್ನಿಸಿದೆ ;

ಮಾನಿನಿಯನ್ಯೆಯಿದಂ ಸಹಿಪಳೇ? || ||

ನೀನೇ ಚಿಂತಿಸಿ ಹೇಳೊ! ಮೋಹನ ! || ಅ.ಪ ||

 

ಅವಳೊಡನೆನ್ನನ್ನು ನೀನಾಡಿಕೊಂಡದ್ದು,

ನೆವಗಳ ನೀಡುತ್ತ ನುಡಿತಪ್ಪಿದ್ದು,

ಸವರಣೆಯಿಲ್ಲದೆ ಗುಟ್ಟನು ಬಿಟ್ಟಿದ್ದು,

ಸವೆಯುವುದೇನೀ ಪರಿ ವರ್ತಿಸಿದ್ದು? || ೧||

 

ಸಜ್ಜೆಯೊಳನ್ಯಧ್ಯಾನದಿ ಮುಳುಗಿದ್ದು,

ಮಜ್ಜನವೇಳೆಯ ಮರೆತಿದ್ದು,

ಸಜ್ಜನಿಕೆಯ ಬಿಟ್ಟು ದೂರಾಗಿದ್ದು,

ಹೆಜ್ಜೆಯ ಜಾಡಿಂತು ಜಗುಳಿದ್ದು*? || ೨|| 

 

ಸಲುಗೆಯ ಪರಿಧಿಗೆ ಸಲ್ಲುವುದೇನೀ

ಬಲು ಬಿರುಸಿನ ಚರ್ಯೆಗಳೆಲ್ಲ?

ಫಲಿಸುವುದೇ ಪ್ರಣಯದ ಪರಿಪಾಕವೀ

ನೆಲೆಯೊಳು? ನೀನಿದನಿದೊ ತಿಳಿಯೋ ! ||೩ ||

 

(*ನಡತೆ ತಪ್ಪಿದ್ದು)

 

Leave a Reply