ಅಂಕಣಗಳು

Subscribe


 

ಅಭಿನಯ ಭಾರತೀ- ವಿನಾಯಕವಿಜಯ

Posted On: Wednesday, April 1st, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ.ಆರ್.ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ ಮೊದಲ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150 ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯ ಗುಚ್ಛವನ್ನು ಒಂದೊಂದಾಗಿ ನೂಪುರ ಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯ ವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ.  ಮೊದಲ ಕಂತು ವಿನಾಯಕವಂದನೆಯೊಂದಿಗೆ ವಿನಾಯಕ ವಿಜಯ ಎಂಬ ನೃತ್ಯರೂಪಕದ ಮೂಲಕ ಆರಂಭವಾಗುತ್ತಿದೆ. ಈ ರೂಪಕ ಸಾಹಿತ್ಯದಲ್ಲೇ ಅಭಿನಯಪದಗಳಿಗೆ ಪ್ರತ್ಯೇಕವಾಗಿ ಒಪ್ಪುವಂತ ವಿನಾಯಕ ವಂದನೆ, ನಾಯಿಕಾಪದಗಳೂ ಸಮಾರೋಹವಾಗಿವೆ. ಕಲಾವಿದರು ಸದುಪಯೋಗಪಡಿಸಿಕೊಳ್ಳಿರೆಂದು ಪ್ರಾರ್ಥನೆ. 

(ನಾಂದೀ- ಆರಭಿರಾಗ)

ನವರಸನಾಥಜಾತನ್, ಅಮಲಾಷ್ಟಸುಸಿಧಿಕರಂ, ಸಮಸ್ತಸ-

ಪ್ತವಿಭವ ಲೋಕವಂದ್ಯನ್, ಉರುಷಡ್ಗುಣಗಣ್ಯನ್, ಅಮೇಯನಾವಗಂ |

ಪ್ರವಿಹಿತಪಂಚಭೂತಪತಿ, ವೇದಚತುಷ್ಟಯರೂಪಕಂ, ತ್ರಿಕಾ-

ಲ ವಿಜಯಿ, ಮಾರ್ಗಯುಗ್ಮಗತಿ, ಅದ್ವಯತತ್ತ್ವನವಂ ವಿನಾಯಕಂ ||

 

(ಹಿನ್ನೆಲೆ- ವಜ್ರದಂತ ( ಮೂಷಕಾಸುರ) ನ ಪ್ರವೇಶ. ಬ್ರಹ್ಮನನ್ನು ಸ್ತುತಿಸಿ ತಪಸ್ಸು ಮಾಡುತ್ತಾನೆ; ಮೋಹನರಾಗ)

ವಿಧಿಯಿಂ ವರಮಂ ಪಡೆಯಲ್

ಸುಧಾಶರಿಪು ವಜ್ರದಂತನೀತಂ ತಪಮಂ |

ವಿಧಿವಿಹಿತವನಾಚರಿಸು-

-ತ್ತಧರ್ಮಫಲಕಾಮಿಯಾಗಿ ಮೆರೆಯುತಲಿರ್ಪಂ ||

 

(ರಾಗ ಸಾಮ) ವಜ್ರದಂತ ಕುಳಿತು, ನಿಂತು, ಪಂಚಾಗ್ನಿ ಮಧ್ಯದಲ್ಲಿ ಏಕಪಾದನಾಗಿ ತಪಸ್ಸು ನಡೆಸುವನು.

ಚತುರಂ ಚತುರಾಸ್ಯಂ ತಾಂ ಪದ್ಮಜಂ ಪದ್ಮಸಂಸ್ಥಿತಂ |

ಧಾತಾರಂ ಸರ್ವದಾತಾರಂ ಬ್ರಹ್ಮದೇವಂ ದಯಾಮಯಂ ||

 

ಬ್ರಹ್ಮಸಾಕ್ಷಾತ್ಕಾರನಾಗಿ (ರಾಗ ಬಿಲಹರಿ)

ನಿನ್ನೀ ತಪಕಾಂ ಮೆಚ್ಚಿದೆನ್,

ಇನ್ನೇನಂ ಬಯಸಿಬಂದೆ? ಅದನಿದೊ ಕುಡುವೆಂ |

ಸನ್ನುತ ! ಕೇಳ್ ! ಸರ್ವಂ ಸಂ-

ಪನ್ನಂ ತಾನಲ್ತೆ ನಿಯಮಸಾಧನದಿಂದಂ ||

 

(ರಾಗ: ಕೇದಾರ) ವಜ್ರದಂತ

ವಿಘ್ನವೆಂಬುದದು ಕಂಟಕಂ ಸರ್ವಜನಕೆ

ನಿಘ್ನಮಾರ್ಗವದಕಿಲ್ಲವೆನ್ನುವರು ವಿದರು |

ವಿಘ್ನಮಂ ಸದಾ ವಶವರ್ತಿಯಾಗಿ ಎನ್ನೊಳ್

ನಿಘ್ನಮಿರದಂತೆ ಸಲ್ಲಿಸಲ್ ತೃಪ್ತನಪ್ಪೆಂ ||

 

ಬ್ರಹ್ಮ : ತಥಾಸ್ತು (ಅಂತರ್ಧಾನ)

 

(ವಜ್ರದಂತ ಹರ್ಷದಿಂದ ಹಾಡಿ ತ್ರಿಲೋಕಹಿಂಸೆಗೆ ತೊಡಗುವನು – ರಾಗ ಅಠಾಣ)

ಕಾಮ್ಯವಿಂದು ಸಂಸಿದ್ಧಿಯಾದುದು

ನಮ್ಯರಾದರಸುರಾರಿಗಳ್ ||ಪ||

ತ್ರಿಲೋಕದೊಡೆತನವಲೀಕವಪ್ಪುದೆ?

ಸಮೀಲಮಿದೊ ವಿಜಯಂ || ಅ.ಪ||

 

ಅಷ್ಟದಿಕ್ಪತಿಗಳಿಷ್ಟದಾಸರೆನ-

-ಲಷ್ಟಸಿದ್ಧಿಗಳು ದೂರವೇ? |

ಸ್ಪಷ್ಟವಲ್ತೆ ಸರ್ವಗ್ರಹಾಳಿಗುಪ-

ದಿಷ್ಟಮೆಮ್ಮ ಘನಶಾಸನಂ ||೧ ||

 

ಮೌನಿವೃಂದಸವನಾಗ್ನಿಗಿಂದು ಸಂ-

ಮಾನಮಲ್ತೆ ರುಧಿರಾಂಬುವಿಂ |

ಕಾನನಧ್ವನಿತ ವೇದನಾದಕಂ

ಮೌನದೀಕ್ಷೆ ಬಲುಬೇಗದಿಂ ||೨ ||

 

ಗರ್ಭದಾಸಿ ಗಡ ವಜ್ರದಂತ ಸಂ-

ದರ್ಭದಲ್ಲಿ ನಿಯತಿಸ್ಥಿತಿ |

ಅರ್ಭಕಾಭರಿವರೆಲ್ಲ ರಿಪುಗಳಿ-

ನ್ನಾರ್ಭಟಂ ಬರಿಯ ತೋರ್ಕೆಯೇ ? || ||

 

(ವಜ್ರದಂತನ ಹಿಂಸೆ ತಾಳದೆ ದೇವತೆಗಳು ಗಣೇಶನನ್ನು ಪ್ರಾರ್ಥಿಸುವುದು -ರಾಗ: ಹಿಂದೋಳ)

ಪಾಹಿ ! ಪಾಹಿ ! ಗಣನಾಯಕಾ !

ತ್ರಾಹಿ ! ತ್ರಾಹಿ ! ಗುಣದಾಯಕಾ !! || ಪ||

 

ವಜ್ರದಂತಖಲಹಿಂಸೆಯೀ

ವಜ್ರಘಾತವಿದೆ ನೀಗೆಯಾ ? ||ಅ.ಪ||

 

ಪಾರ್ವತೀಸುತಾ ! ಸಾರ್ವಕಾಲಿಕಾ !

ಶರ್ವಸತ್ಕೃತಾ ! ಖೇಲಕಾ !

ಪರ್ವಕಾರಕಾ ! ಸರ್ವಕಾಮದಾ !

ಶರ್ವರೀಶಹಾ ! ಸಾಮದಾ ! || ||

 

ದೇವತಾಗ್ರಣೀ ! ಜೀವಸಂಘೃಣೀ

ಭಾವುಕೋನ್ಮಣೀ ! ಭಾಮಣೀ !

ಕಾವುದೋ ಗುಣೀ ! ದೇವನಾಸೃಣೀ

ಭಾವಕಿಂಕಿಣೀ ! ಕಾರುಣೀ || ||

(ಜೀವಸಂಘೃಣೀ- ಜೀವರಲ್ಲಿ ದಯೆಯಿರುವವನು; ಭಾವುಕೋನ್ಮಣೀ – ಭಕ್ತರಿಗೆ ರತ್ನನಾದವನು ; ಭಾಮಣೀ – ಕಾಂತಿಯುಕ್ತರತ್ನದಂತಿರುವವನು;

ದೇವನಾಸೃಣೀ- ದುಃಖಕ್ಕೆ ಅಂಕುಶದಂತಿರುವವನು ; ಭಾವಕಿಂಕಿಣೀ -ಭಾವರಸಗಳಿಗೆ ನೂಪುರಪ್ರಾಯನಾದವನು; ಕಾರುಣೀ – ಕರುಣಾಪೂರ್ಣ)

 

ವಿನಾಯಕ : (ರಾಗ : ಅಭೇರಿ)

ಅರಿತೆ ನಿಮ್ಮಯ ನೋವಿನಾಳವನ್,

ಅರಿತೆನೆನ್ನಯ ಕಾರ್ಯಭಾರವನ್,

ಅರಿಯನಿವನಂ ಪರಿಹರಿಸೆ ತಪವಾದ್ಯಸಾಧನವು|

ಪರಮಪಾವನ ತಪನೆಯಿಂ ಖರ-

ಕರಣನಾತನ ಸಾವು ಸಹಜ-

ಸ್ಫುರಣೆಯಲ ! ಸಂಗ್ರಾಮವದು ಮಿಷಮಾತ್ರ ಬಳಿಕ ಅವನೊಳ್ ||

(ದೇವತೆಗಳು ಕೃತಾರ್ಥರಾಗಿ ತೆರಳುವರು)

 

(ಹಿನ್ನೆಲೆ : ಗಣೇಶನು ತಪಸ್ಸಿನಲ್ಲಿರುವಾಗ ತಪಃಪರೀಕ್ಷೆಗಾಗಿ ಅಪ್ಸರೋಗಣಪ್ರೇಷಣ ಮತ್ತು ನಾಟ್ಯ – ರಾಗ: ದೇಶ್)

ಮಾರವೈರಿಯ ಸುತನ ದೀಕ್ಷಾಪರೀಕ್ಷೆಗೆಂ-

ದಾರಣ್ಯಕದೆ ಶಕ್ರನಪ್ಸರೆಯರಂ |

ಸ್ವೈರಲೀಲೆಯ ಲಾಸ್ಯಸಂಗೀತನೀತಿಯ

ಪ್ರೇರಣಾಸ್ಪದೆಯರಂ ನಿಯಮಿಸಿರ್ದಂ ||

 

(ಅಪ್ಸರೆಯರ ನಾಟ್ಯ – ರಾಗ : ಬೇಹಾಗ್)

ಮಾತಾಡೆ ಬಿಗುಮಾನವೇ ? ಮನೋಹರ !

ಕಾತರ್ಯವಿನಿತಿಲ್ಲವೆ? ||ಪ||

 

ಚೈತ್ರೋತ್ಸವದೊಳಿಂದು ಮೈತ್ರೀವಿಲಾಸಕೆ

ನೇತ್ರಂಗಳನು ತೆರೆದು ನೀಂ ||ಅ.ಪ||

 

ಮತ್ತೇಭಮುಖ ನೀನು ಮನಸಾರೆ ಸಾರೋ

ಮತ್ತೆಭಗಾಮಿನಿಯರಂ -ಕಾಮಿನಿಯರಂ |

ಚಿತ್ತಾಪಹಾರಕ ! ಚಿತ್ತಾಪಹಾರಕ !

ಚಿತ್ತಜನೊತ್ತದಕೆಣೆಯಾರೊ ಧೀರಾ ? ||೧ ||

 

ತಾರುಣ್ಯವಿದು ಶುಷ್ಕ ಕಾರುಣ್ಯಕೇನೋ

ಸಾರಲ್ಕೆ ಕಾರ್ಪಣ್ಯವೇ -ಸಂಸಾರಕೆ |

ಆರಣ್ಯಕೋಚಿತಚಾರಣ್ಯವೇನಿದು?

ಬಾರನ್ಯಶಂಕೆಯ ಜಾರಿಸುತ ಸಾರ ! ||೨ ||

 

(ಹಿನ್ನೆಲೆ : ಆ ಸಮಯದಲ್ಲಿ ಅಲ್ಲಿ ಬೆಳೆದ ಕಂಟಕಮುಖೀಲತೆಯ ಮುಳ್ಳುಗಳು ಚುಚ್ಚಿ ಎಕ್ಕದ ಹೂಗಳ ಗಿಡಗಳ ಅಂಟು ಹತ್ತಿ ಅಪ್ಸರೆಯರು ನೃತ್ಯ ಮಾಡಲಾಗದೆ ನಿರಾಶರಾಗಿ ಹೊರಡುತ್ತಾರೆ . –ರಾಗ : ಆನಂದಭೈರವಿ)

ಕಂಟಕರಾಜಿಯುಮರ್ಕದ

ಕಂಟಕಮುಂ ದೇವಕಾಂತೆಯರ ನರ್ತನದೊಳ್ |

ಕಂಟವಾಗಲ್ ; ಸೋಲ್ತೀ

ಕಂಟಕೆಯರ್ ತಪಕೆ, ದೂರಸಾಗಿದರಾಗಳ್ ||

 

(ತಪಸ್ಸನ್ನು ಮುಗಿಸಿ ಗಣೇಶನೇಳುವನು – ರಾಗ : ಬೇಗಡೆ)

ಸಿದ್ಧಿಯಾದುದು ನನ್ನ ತಪನೆಗಿನ್ನಾ ದೈತ್ಯ-

ನುದ್ಧತಂ ಗತಿಸುವುದು ಸಿದ್ಧಮಲ್ತೆ |

ಸದ್ಧರ್ಮವಿದರೊಳ್ ಆನಿರಲು ಸಹಕರಿಸಿದವ-

ರುದ್ಧಾರಗೊಳ್ಳುವುದು ಯುಕ್ತಿಯುಕ್ತಂ ||

 

(ಕಂಟಕಮುಖಿ ಮತ್ತು ಅರ್ಕೆಯರ ಶಾಪನಿವಾರಣೆ – ರಾಗ : ವಲಚಿ)

ಹೇ ! ಕಂಟಕಮುಖಿಲತೆಯೇ !

ಹೇ! ಕುತ್ಸಿತರೂಪೆ ! ಅರ್ಕೆ ! ನೀಮಿರ್ವರುಮೀ ! |

ಭೂಕುಟಜರೂಪಮಂತೊರೆ

ದಾ ಕಮನೀಯ ಸ್ವರೂಪವಯ್ದಿಂ ನಲವಿಂ ||

 

(ಇಬ್ಬರೂ ಪ್ರಾರ್ಥಿಸುತ್ತಾ – ರಾಗ : ಕಲ್ಯಾಣಿ)

ಶಾಪಮುಕ್ತೆಯರಾವಿಂದು ಶ್ರೀ ಪರಾತ್ಮರ ! ಸಂತತಂ |

ರೂಪಿನಿಂದಿದರಿಂ ಸಲ್ಲುತಿರ್ಪೆವಯ್ ನಿನ್ನ ಪರ್ವದೊಳ್ ||

 

ಗಣೇಶ-ವಜ್ರದಂತರ ಯುದ್ಧ (ರಾಗಮಾಲಿಕೆ)

ವಿನಾಯಕ : ವಿಘ್ನವಂ ವಶವರ್ತಿ ಮಾಡಿಕೊಂಡಸುರನೇ !

ವಿಘ್ನೇಶನಾಂ ಬಂದೆ ; ಕಾದಿ ಮಡಿಯಯ್ !

 

ವಜ್ರದಂತ : ಅಂಬಿಕೆಯ ಕೈಯಲ್ಲಿ ಮಣ್ಣಾಗಿ ಮಲೆತವನೆ !

ಡಂಬರಗಳನ್ನಿಲ್ಲಿ ತೋರಲೇಕೆ?

 

ವಿನಾಯಕ : ಮಣ್ಣಿಂದೆ ಮೂಡಿದವನಿರಲಿ ನಾಂ ನಿನ್ನನ್ನು

ಮಣ್ಣಾಗಿಸುವೆನೀಗ ಮಾಂದ್ಯಮುಗ್ಧ !

 

ವಜ್ರದಂತ : ವಜ್ರದಂತನೆನಲ್ಕೆ ನಿನ್ನೆಲ್ಲ ತಂತ್ರಕ್ಕೆ

ವಜ್ರಪಾತಂ ದಿಟಂ ! ವಕ್ರತುಂಡ !

 

ವಿನಾಯಕ : ವಜ್ರವಂ ವಜ್ರದಿಂದಲೆ ಭೇದಿಸುವರಲ್ತೆ ;

ವಜ್ರಿವಂದ್ಯಂ ನಾನು ಬಿಲವಿಲಾಸಿ !

 

ವಜ್ರದಂತ : ಮೂಷಿಕಾಸುರನಲ್ತೆ ನಾಂ ತೋಡಿ ನಿನ್ನಿರವ-

ನೀಷದವಧಿಯೊಳೆ ನಾಶಿಸುವೆ ! ನೋಡಾ !

 

ವಿನಾಯಕ : ಪಾಶಧರ ನಾಂ ! ನಾಗಪಾಶವಿನ್ನಿರಲಾಗಿ

ನಾಶ ನಿನ್ನದು ನಿಶ್ಚಿತಂ ನೃಶಂಸ !

 

(ಗಣೇಶನ ದಂತಾಘಾತದಿಂದ ನೊಂದು ನರಳಿ ಮೂಷಕನು ಶರಣಾಗುತ್ತಾ ಪ್ರಾರ್ಥಿಸುತ್ತಾನೆ. ರಾಗ : ಕಾನಡಾ)

ರಕ್ಷ ! ರಕ್ಷ ! ಪ್ರಭೋ ! ಲಕ್ಷ್ಮೀಪತಿಪ್ರೀತ !

ಶಿಕ್ಷಿತಂ ನಾನೀಗ ; ನಿನಗೆ ವಶ್ಯಂ ||

 

(ಆಗ ವಜ್ರದಂತನ ಪತ್ನಿ ಧವಳೆ ಧಾವಿಸಿ ಬಂದು ಬೇಡಿಕೊಳ್ಳುತ್ತಾಳೆ. ರಾಗ : ಸಿಂಹೇಂದ್ರಮಧ್ಯಮ)

ಸರ್ವಮಂಗಳೆಯ ವರದಿಂದೆ ಮಾಂಗಲ್ಯವಂ

ಸರ್ವದಾ ರಕ್ಷಿಸಿಕೊಳುತ್ತಲಿರ್ಪೆ

ಶರ್ವಸುತ ! ಕಾವುದಯ್ ! ಪತಿಭಿಕ್ಷೆಯೀವುದಯ್ !

ಪರ್ವಕರ ! ನಾಮಿರ್ವರಿನ್ನು ದಾಸರ್ ||

 

(ವಿನಾಯಕನು ಧವಳೆ- ಮೂಷಕನನ್ನು ಕುರಿತು; ರಾಗ : ಶುದ್ಧಸಾವೇರಿ )

ಧವಳೆ ! ತದೀಯ ಚರ್ಯೆ ಧವಳಂ ! ದಿಟಮಂತೆಯೆ ಮೂಷಕಾಸುರಂ

ಸ್ವವಿಕಲವೃತ್ತಿಯಂ ತೊರೆದನಲ್ತೆ ಮದೀಯಸುವಾಹಮಾಗುತಿ-

ನ್ನವಿರತಮಿರ್ಕೆ ನೀನುಮವನಂತೆಯೆ ನಿತ್ಯಮುದಗ್ರಸತ್ತ್ವದಿಂ

ಧವಳಮಯಾತಪತ್ರಮೆನೆ ರಾಜಿಸಿರೆನ್ನಯ ಸನ್ನಿಧಾನದೊಳ್

 

ಈರ್ವರೂ : ಕೃತಾರ್ಥರಾದೆವಯ್ ದೇವ ! ಹಿತಾರ್ಥಸಂದುದೆಂದಿಗಂ ||

 

(ಗಣೇಶನಿಗೆ ದೇವತೆಗಳಿಂದ ಗಣಾಧ್ಯಕ್ಷ ಪಟ್ಟಾಭಿಷೇಕ . ರಾಗ : ಕಾಂಬೋಧಿ)

ಬ್ರಹ್ಮ : ಗಣನಾಯಕನೆನಿಸು ವಿಭೋ !

ಗುಣನಾಯಕ ನೀಂ ! ವಿನಾಯಕ ! ನಯಪ್ರಮುಖಾ !

ಕ್ಷಣದಾಚರಹರ ! ತಾರಕ !

ಕಣಮಾತ್ರಂ ಗೌರವಂ ಗಡಿದು ; ಜನಸುಮುಖಾ !

 

(ತತ್ತ್ವಗಣಪತಿಯನ್ನು ಕುರಿತು ಎಲ್ಲರಿಂದ ಸ್ತುತಿ.  ರಾಗ : ಹಂಸಧ್ವನಿ ; ತಾಳ : ಆದಿ)

ತತ್ತ್ವಾರ್ಥಾಸಂಜ್ಞಾಪಕ  – ವಿನಾಯಕ !

ಸತ್ತ್ವೋಕ್ತಿಚಿನ್ಮಾತೃಕಾ ಶಿವೈಕ ! ||ಪ||

 

ರಮಣೀಯಗಜವದನ ಸ್ಮರಣೀಯಗುಣಸದನ !

ನಮಿತಾನುಕಂಪನ ಘನವಾಮನ !

ವಿಮಲೋದರೌದಾರ್ಯ ಕ್ರಮಜಾಗೃತಾಹಾರ್ಯ !

ಸುಮಸಾಯಕಹತಿಜಿತಚೇತನ ! ||೧||

 

ಪಶುತಾನಿಬಂಧನ ವಶಿತಾಂಶುಕುಶಾಯನ !

ಬಿಸಜಾತರಸಹಾಸಕರಮೋದಕ !

ಕುಶಲಪ್ರದಾಚರಣ ಚಲತಾಖುಸಂಚರಣ !

ಲಸದಗ್ರಪೂಜನ ಗರಿಮಾತ್ಮಕ ! ||೨||

 

ಆದಿಮಾಶ್ರಮಾದಿಮೂಲಮೋಹನ !

ವೇದವ್ಯಾಸವಾಗ್ವಿಲಾಸಲೇಖನ !

ಮೇದೋಮೇದುರ ಬಂಧುರ !

ಭೇದೋಚ್ಛೇದನ ಸುಂದರ ! ||೩||

 

ಸದಾಶಿವಮುದಾssಹವ !

ಸುಧಾಕರಸುಧಾssಹರ !!

ತುಹಿನೆಗಹನಶಿಖರಸುತಾ-

ವಿಹಿತಮಹಿತವರಸುತಾ !! ||೪||

 

(ಮಂಗಳ   ರಾಗ : ಸೌರಾಷ್ಟ್ರ)

ಮಂಗಳಮೀ ವಿಘ್ನೇಶ್ವರ

ತುಂಗಜಯಂ ಮೂಷಕಾಸುರಮದಾಹರಣಂ !

ಸಾಂಗಂ ಚಾಕ್ಷುಷಯಾಗೋ –

ಪಾಂಗಂ ತಾಂ ಸಮ್ದುದಲ್ತೆ ಪರಮಾನಂದಂ ||

*********

 

 

Leave a Reply

*

code