ಅಂಕಣಗಳು

Subscribe


 

ಶ್ರಾವ್ಯಸುಖ+ ವರಪ್ರದಾಯಕ + ಮೇಳಪರಿಪೋಷಕ = ಅನನ್ಯ ನೃತ್ಯ ಸಂಗೀತ ಸರಣಿ

Posted On: Sunday, October 13th, 2013
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಹೆಚ್ಚುತ್ತಿರುವ ಹಿಮ್ಮೇಳವೆಚ್ಚವನ್ನು ಭರಿಸುವುದು ನೃತ್ಯ ಕಲಾವಿದರ ಬಹುದೊಡ್ಡ ಸವಾಲು. ಈ ಸವಾಲನ್ನು ಸಾಧ್ಯತೆಯಾಗಿ ಕೈಗೆಟುಕುವಂತೆ ಸಿಡಿ ರೂಪದಲ್ಲಿ ಕಲಾಕ್ಷೇತ್ರದ ಸಹೃದಯರೆಲ್ಲರಿಗೂ ಒದಗಿಸಿಕೊಡುತ್ತಿರುವ ಬೆಂಗಳೂರಿನ ಅನನ್ಯ ಸಂಸ್ಥೆಯು ತನ್ನ ಗುರುತರ ಹೊಣೆಯೆಂಬಂತೆ ಹೊತ್ತು ಪೂರೈಸುತ್ತಿದೆ. ಒಂದರ್ಥದಲ್ಲಿ ಬಡ ಮತ್ತು ಮಧ್ಯಮ ವರ್ಗದ ಕಲಾವಿದರಿಗೆ ನಿಜಕ್ಕೂ ಇದು ವರಪ್ರದಾಯಕ. ಇನ್ನೇನು, ದೃಶ್ಯಕಾವ್ಯವನ್ನು ಪೋಣಿಸುವುದಷ್ಟೇ ಬಾಕಿ ಎಂಬಷ್ಟರಮಟ್ಟಿಗೆ ಲಲಿತಮನೋಹರವಾದ ಶ್ರಾವ್ಯಸುಖವನ್ನು ಕೊಡುತ್ತದೆ ಈ ನೃತ್ಯ ಸಂಗೀತ ಸಂಪುಟ ಸರಣಿಗಳು. ಪ್ರತೀ ಸಿ.ಡಿಯ ಬೆಲೆ ೫೦೦ ರೂ ಗಳು.

ವಿದ್ವಾನ್‌ರಾದ ಡಿ.ವಿ.ಪ್ರಸನ್ನ ಕುಮಾರ್ ನಟುವಾಂಗದಲ್ಲಿ, ಡಾ.ಎಸ್.ನಟರಾಜಮೂರ್ತಿ ಮತ್ತು ಸಿ.ಮಧುಸೂದನ ವಯೋಲಿನ್‌ನಲ್ಲಿ, ಪಿ. ಲಿಂಗರಾಜು ಮೃದಂಗದಲ್ಲಿ, ಕೆ.ಎಸ್.ಜಯರಾಂ, ವಿವೇಕ್ ಕೃಷ್ಣ ಕೊಳಲಿನಲ್ಲಿ, ಕಾರ್ತಿಕ್ ದಾತಾರ್ ಮತ್ತು ಪ್ರದ್ಯುಮ್ನ ರಿದಂಪ್ಯಾಡ್‌ನಲ್ಲಿ ಪ್ರಧಾನವಾಗಿ ಸಹಕರಿಸಿದ್ದಾರೆ.

ಭರತನಾಟ್ಯ, ಒಡಿಸ್ಸಿ, ಮೋಹಿನಿಯಾಟ್ಟಂ, ಕೂಚಿಪುಡಿಯಷ್ಟೇ ಅಲ್ಲದೆ ಕೊರವಂಜಿಯಂತಹ ದೇಶೀ ನೃತ್ಯಗಳಿಗೂ ಅಂತಃಪುರ ಗೀತೆಯನ್ನು ಬಳಸಿಕೊಳ್ಳಲು ಅವಕಾಶವಿರುವಂತೆ ಗೀತೆಗಳಿಗೆ ಸಂಗೀತ, ವಾದ್ಯವೃಂದ ಸಂಯೋಜಿಸಿದ್ದು ಅನನ್ಯ ನೃತ್ಯಸಂಗೀತದ ನಾಲ್ಕನೇ ಸಂಪುಟದ ಸಿ.ಡಿಯ ಹೆಗ್ಗಳಿಕೆ. ಡಿವಿಜಿಯವರ ಅನ್ತಃಪುರಗೀತೆಗಳ ಗುಚ್ಛದಿಂದಾಯ್ದ ೭ ಕೃತಿಗಳಿಗೆ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮರ ಸಂಗೀತ ನಿರ್ದೇಶನಕ್ಕೆ ಎಂ.ಎಸ್.ಶೀಲಾ ದನಿಗೂಡಿಸಿದ್ದು; ಪುಲಿಕೇಶಿ, ಪ್ರಸನ್ನಕುಮಾರ್ ಅವರ ದನಿಯಲ್ಲಿ ಸೊಲ್ಕಟ್ಟುಗಳು ಸೊಗಸನ್ನು ಕಾಯ್ದುಕೊಂಡಿವೆ.

ಏಳನೇ ಆವೃತ್ತಿ- ಶಿವಸಂಪುಟ. ವಿದ್ವಾನ್ ಜಿ.ಗುರುಮೂರ್ತಿ ಅವರ ರಚನೆ, ಲಯ ಸಂಯೋಜನೆ ಮತ್ತು ಮೃದಂಗ ಸಹಕಾರದಲ್ಲಿ ಮೂಡಿಬಂದಿದ್ದು; ಕರ್ಣಾನಂದಕರವಾದ ಬಾಲಸುಬ್ರಹ್ಮಣ್ಯ ಶರ್ಮ ಅವರ ಗಾಯನ ಪುಷ್ಪಾಂಜಲಿಯಲ್ಲೇ ಕೇಳುಗರನ್ನು ಸೆರೆಹಿಡಿದು ಪೂರ್ತಿ ಸಂಪುಟವನ್ನು ಆಲಿಸಿ ಆನಂದಿಸುವಂತೆ ಮಾಡುತ್ತದೆ. ಷಣ್ಮುಖಪ್ರಿಯ ರಾಗ, ಖಂಡಗತಿ ಆದಿತಾಳದ ಸುಬ್ರಹ್ಮಣ್ಯ ಕವಿತ್ವವು ಸೊಲ್ಕಟ್ಟು ಸಾಹಿತ್ಯಮಿಶ್ರಿತವಾಗಿ ಗಂಭೀರ-ದ್ರುತಗತಿಯನ್ನು ಕಾಪಿಟ್ಟುಕೊಂಡರೂ ರಚನೆಯಲ್ಲಿ ಕೌತ್ವದ ಮೂಲ ನಿಯಮಲಕ್ಷಣವನ್ನು ಲಕ್ಷಿಸಿದ್ದರೆ ಇನ್ನೂ ಭೂಷಣಪ್ರಾಯವಾಗುತ್ತಿತ್ತೆನಿಸುತ್ತದೆ. ಅನನ್ಯ ಸಂಸ್ಥೆಯವರು ಹೊರತಂದ ಉಳಿದ ನೃತ್ಯಸಂಗೀತದ ಸಿಡಿಗಳ ಕೌತ್ವಕ್ಕೂ ಇದೇ ಸಲಹೆ ಅನ್ವಯವಾಗುತ್ತದೆ. ಅಂತೆಯೇ ತೋಡಿರಾಗದ ವರ್ಣ ಆನಂದ ತಾಂಡವ ನಟಶೇಖರ ನರ್ತನಸಂಬಂಧಿಯಾದರೂ, ಪ್ರಥಮಾರ್ಧ (ಮುಖ್ಯವಾಗಿ ತ್ರಿಕಾಲ ಜತಿ) ಕೊಂಚ ದೀರ್ಘವೆನಿಸುವುದರಿಂದ ಕಲಾವಿದರ ಶ್ರಮವನ್ನು, ಕೇಳುಗರ ಮತ್ತು ಪ್ರೇಕ್ಷಕರ ತಾಳ್ಮೆಯನ್ನು, ರಸಾರ್ದ್ರವಾದ ಸ್ಥಾಯಿಪೋಷಣೆಯನ್ನು ತುಸು ಹೆಚ್ಚಾಗಿಯೇ ಪರೀಕ್ಷಿಸುತ್ತದೆಯೆನ್ನಿಸಿದರೆ ತಪ್ಪಲ್ಲ. ನಂತರದಲ್ಲಿ ನಂದಿ ಸೊಲ್ಕಟ್ಟಿನ ಜತಿಕ್ರಮ ಆಕರ್ಷಕವೆನಿಸುತ್ತದೆ. ಆದಾಗ್ಯೂ ವರ್ಣವು ದೀರ್ಘವಾಗಿ ಲಂಬಿಸುವ ಪರಿಣಾಮ ಎಷ್ಟೋ ಸಲ ಪ್ರೇಕ್ಷಕಪ್ರಭುಗಳು ಪರಂಪರೆಯ ಕಟ್ಟುಪಾಡಿಗೆ ಒಳಪಟ್ಟು ಕುಳಿತುಕೊಳ್ಳುವಂತೆ ಮಾಡುತ್ತಾ ಆಸ್ವಾದನೆಯ ಅಂಕಗಳನ್ನು ಕಡಿತಗೊಳಿಸುವುದೇ ಹೆಚ್ಚು. ಈ ನಿಟ್ಟಿನಲ್ಲಿ ಚಿಕ್ಕ, ಚೊಕ್ಕ ವರ್ಣದ ಸಂಯೋಜನೆ ಮಾಡಿದಲ್ಲಿ ಕಲಾವಿದರಿಗೂ ಅಳವಡಿಸಿಕೊಳ್ಳಲು ಹೆಚ್ಚು ಆಪ್ತವಾಗಿ ತೋರುತ್ತದೆ.

ಎಂಟನೇ ಸಂಪುಟ ಮಾರ್ಗೋತ್ತರಾರ್ಧ ಕೃತಿಗಳ ಬಗ್ಗೆ ಹೆಚ್ಚು ಆಸಕ್ತಿ ತೋರಿದ್ದು; ವಿದ್ವಾನ್ ಡಿ.ವಿ.ಪ್ರಸನ್ನ ಕುಮಾರ್ ಅವರ ರಚನೆ ಮತ್ತು ನಟುವಾಂಗದಲ್ಲಿ ಹಾಗೂ ವಿದ್ವಾನ್ ಡಿ.ಎಸ್.ಶ್ರೀವತ್ಸ ಮತ್ತು ಬಾಲಸುಬ್ರಹ್ಮಣ್ಯ ಶರ್ಮ ಅವರ ಸಂಗೀತ ಸಂಯೋಜನೆ ಮತ್ತು ಹಾಡುಗಾರಿಕೆಯಲ್ಲಿ ಸುಮಧುರವಾಗಿ ಮೇಳೈಸಿದೆ. ವಿಭಿನ್ನ ನಾಯಿಕಾ ಭಾವದ ೪ ಜಾವಳಿಗಳು ಪ್ರಧಾನವಾಗಿದ್ದು; ಕೆ.ಎಸ್.ಜಯರಾಂ ಅವರ ಸಂಗೀತ ಸಂಯೋಜನೆಯಲ್ಲಿ ಗಣಪತಿಯನ್ನು ಕುರಿತ ತಿಲ್ಲಾನ (ಲವಂಗಿ ರಾಗ) ಆದಿಪೂಜಿತನನ್ನು ನೃತ್ಯಾಂತ್ಯಕ್ಕೂ ಪೂಜಿತನನ್ನಾಗಿಸಿದೆ. ನೃತ್ಯಸಂಗೀತದದ ೯ನೇ ಸಂಪುಟ ಕೃತಿ-ದೇವರನಾಮಗಳಿಗೆ ಮೀಸಲಾಗಿದ್ದು; ವಿದುಷಿ ಪಿ.ರಮಾ ಅವರ ಗಾಯನ ಮತ್ತು ಸಂಗೀತ ನಿರ್ದೇಶನದಲ್ಲಿದೆ. ತೆಲುಗಿನ ಹೆಸರಾಂತ ಬ್ರಹ್ಮ ಒಕಟೇಗೀತೆಯ ಮಾದರಿಯಲ್ಲೇ ಹೆಳವನಕಟ್ಟೆ ಗಿರಿಯಮ್ಮಳ ಕೃತಿಯೊಂದಕ್ಕೆ ರಾಗ ಸಂಯೋಜಿಸಿದ್ದು; ಚೇತೋಹಾರಿಯಾಗಿದೆ. ಜೊತೆಗೆ ತಮಿಳಿನ ಕಾಪಿ ರಾಗದ ಹೆಸರಾಂತ ರಚನೆ ಎನ್ನ ತವಂ ಸೈದಳೈ, ಮಹಾವೈದ್ಯನಾಥ ಅಯ್ಯರರ ಪಾಹಿಮಾಂಶ್ರೀ ರಾಜರಾಜೇಶ್ವರಿ ಕೃತಿ, ಪುರಂದರದಾಸರ ರಾಮ-ಹನುಮ ಸಂಭಾಷಣೆಯ ದೇವರನಾಮ ಇಲ್ಲಿನ ಹೈಲೈಟ್ಗಳು.

ದೀಪ್ತಿ ಶ್ರೀನಾಥ್ ಅವರ ಕಂಠಸಿರಿಯಲ್ಲಿ ಮೂಡಿಬಂದ ನೃತ್ಯಸಂಗೀತದ ೧೦ನೇ ಸಂಪುಟ ಭಜನ್, ದೇವರನಾಮ, ಕೃತಿಗಳ ಸಂಗ್ರಹವನ್ನು ಹೊಂದಿದೆ. ಆದರೆ ವಾದಿರಾಜರ ಕುಣಿದಾಡೋ ರಂಗ, ಪುರಂದರದಾಸರ ಕರುಣಿಸೋ ಕೃಷ್ಣ ಸಾಹಿತ್ಯದ ಸ್ಥಾಯಿಗೆ ಅಷ್ಟಾಗಿ ಹೊಂದದ ಸಂಗೀತ, ರಾಗವೈಲಕ್ಷಣ್ಯ, ದ್ರುತಗತಿ ಮತ್ತು ಸೊಲ್ಕಟ್ಟು ಕೊಂಚ ಮಟ್ಟಿಗೆ ಭಾವದೀಪ್ತಿಯನ್ನು ಕಂಡುಕೊಳ್ಳುವಲ್ಲಿ ಹಿಂದೇಟು ಹಾಕುತ್ತವೆ.

ಈ ಹಿಂದೆಯೇ ಮೂರು ಮುಖ್ಯ ಸಂಪುಟವನ್ನೂ ಅದರಲ್ಲೂ ಪುರುಷನರ್ತಕರಿಗೂ, ಕಥಕ್ ಕಲಾವಿದರಿಗೂ ಅನುಕೂಲವಾಗುವಂತಹ ಇನ್ನೆರಡು ಸಿಡಿಗಳನ್ನು ಹೊರತಂದಿದ್ದ ಅನನ್ಯ ಸಂಸ್ಥೆ ಈ ಸರಣಿಯನ್ನು ಮುಂದುವರೆಸಿದ್ದು ನಿಜಕ್ಕೂ ಕಲಾಕ್ಷೇತ್ರಕ್ಕೆ ದಕ್ಕಿದ ಬಹುದೊಡ್ಡ ಕೊಡುಗೆ.

Leave a Reply

*

code