ಅಂಕಣಗಳು

Subscribe


 

ಅರಾಳ(ಲ) ಹಸ್ತ

Posted On: Wednesday, November 5th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಲಕ್ಷಣ: ಪತಾಕಹಸ್ತದಲ್ಲಿನ ತೋರುಬೆರಳನ್ನು ಬಾಗಿಸಿದರೆ ಅರಾಳ ಹಸ್ತ. ಅರಾಳ ಅಂದರೆ ಡೊಂಕು ಎಂದರ್ಥ. ಸಿಂಹ ಭೂಪಾಲನ ಲಾಸ್ಯರಂಜನ ಗ್ರಂಥದ ಪ್ರಕಾರ ತೋರುಬೆರಳನ್ನು ಧನುಸ್ಸಿನಂತೆ ಬಗ್ಗಿಸಿ ಅದರ ಹಿಂದೆ ಮಧ್ಯ, ಉಂಗುರ ಮತ್ತು ಕಿರುಬೆರಳನ್ನು ಒಂದರ ಹಿಂದೆ ಮತ್ತೊಂದಿರುವಂತೆ ಸ್ವಲ್ಪ ಬಗ್ಗಿಸಿ ಹೆಬ್ಬೆರಳನ್ನು ಬಗ್ಗಿಸುವುದು. ಕಥಕ್ಕಳಿ ನರ್ತನ ಪ್ರಕಾರದಲ್ಲಿ ಭ್ರಮರವೆಂದೂ, ಒಡಿಸ್ಸಿಯಲ್ಲಿ ಧ್ಯಾನವೆಂದೂ ಈ ಹಸ್ತವನ್ನು ಗುರುತಿಸುತ್ತಾರೆ.

ಅಭಿನಯದರ್ಪಣದಲ್ಲಿ ಕಂಡುಬರುವ ವಿನಿಯೋಗ: ವಿಷ-ಅಮೃತವನ್ನು ಕುಡಿಯುವುದು, ವಿಪರೀತಗಾಳಿ, ಬಿರುಗಾಳಿ, ಚಂಡಮಾರುತ, ಧ್ವಂಸಮಾಡುವಿಕೆ, ನೀರು ಕುಡಿಯುವುದು.

ಇತರೆ ನೃತ್ಯ ಗ್ರಂಥಗಳಲ್ಲಿನ ವಿನಿಯೋಗಗಳು: ಧೈರ್ಯ-ಶೌರ್ಯ, ಸೌಂದರ್ಯ, ಆಶೀರ್ವಾದ, ಸ್ತ್ರೀಯರ ಸಂದರ್ಭದಲ್ಲಿ ಕೂದಲನ್ನು ನೇವರಿಸುವುದು, ಉತ್ಕರ್ಷ, ಸರ್ವಾಂಗ, ಸ್ವಂತದ ಬಗ್ಗೆ ಮೆಚ್ಚುಗೆ ಸೂಚಿಸುವುದು; ಬೆವರು ಒರೆಸಿಕೊಳ್ಳುವುದು, ಆಪೋಶನ, ದೇವಲೋಕ, ಕುಚಾಗ್ರ, ನವಿಲು ನೃತ್ಯ, ಆಶೀರ್ವಾದ, ಹೆಂಗಸರು ತಲೆಯ ಕೂದಲನ್ನು ಗಂಟು ಹಾಕುವುದು ಮತ್ತು ತುರುಬು ಬಿಚ್ಚುವುದು, ಜನರ ಗುಂಪು, ಕರೆಯುವುದು, ಮದುವೆ, ಮದುವೆಯಲ್ಲಿ ಅಗ್ನಿ ಪ್ರದಕ್ಷಿಣೆ, ದೇವರ ಪ್ರದಕ್ಷಿಣೆ, ನೀನು ಯಾರು? ನಾನು ಯಾರು? ಸಂಬಂಧವೇನು… ಇವೇ ಮೊದಲಾದ ದೈವಿಕ ವಸ್ತುಗಳು, ಕಾರ್ಯ, ಅಭಿಮಾನ, ತೃಪ್ತಿ, ಗಾಂಭೀರ್ಯ, ಶುಭಕಾರ್ಯ, ಅಂಗಾಂಗಗಳ ಸೂಕ್ಷ್ಮ ಅವಲೋಕನ, ವಿವಾಹದ ಪೂರ್ವ ವಿಧಿಯಂತೆ ವರನಿಗೆ ವಧು ಪ್ರದಕ್ಷಿಣೆ ಬರುವುದು, ನೆಲದಲ್ಲಿನ ಹೂರಂಗವಲ್ಲಿ, ಬಲಿವಿಧಿ, ಜಾಗ್ರತೆ ಹೇಳುವುದು, ಅಧಿಕಮಾತು, ಗದರಿಸುವುದು, ಅಸಂಬದ್ಧ ಭಾಷಣ, ಚಕ್ರವಾಕ ಪಕ್ಷಿಗಳು, ಅಮಾವಾಸ್ಯೆ, ಕಾಂತಿ, ಚಾಡಿ ಹೇಳುವುದು, ನೀರಿನ ಸುಳಿ, ಹಣೆಯ ಬೆವರೊರೆಸುವುದು ಮುಂತಾದುವುಗಳನ್ನು ಸಂವಹಿಸುತ್ತದೆ.

ಎರಡೂ ಕೈಗಳ ಬೆರಳ ತುದಿಗಳಿಂದ ಸ್ವಸ್ತಿಕ ಮಾಡಿ, ಪ್ರದಕ್ಷಿಣೆ ಹಾಕುತ್ತಾ ವಿವಾಹವನ್ನು, ಜನಸಮೂಹವನ್ನು, ನೆಲದ ಮೇಲಿಟ್ಟ ದ್ರವ್ಯವನ್ನು ಸೂಚಿಸಬಹುದು. ಒಂದು ಬೆರಳನ್ನು ಕೆಳಗೆ ಮಾಡಿ ಹತ್ತಿರ ಕರೆಯುವುದನ್ನು, ಮೇಲೆ ಮಾಡಿ ನಿವಾರಿಸುವುದನ್ನು, ಶ್ರಮ ಪರಿಹಾರವನ್ನು, ವಾಸನೆ ನೋಡುವುದನ್ನು ಸೂಚಿಸಬಹುದು. ತ್ರಿಪತಾಕ ಹಸ್ತದ ಸಂದರ್ಭದಲ್ಲಿ ಹೇಳಿದ ಹಸ್ತಾಭಿನಯಗಳನ್ನು ಸ್ತ್ರೀಯರು ಅರಾಳ ಮುದ್ರೆಯಲ್ಲಿ ಮಾಡಬಹುದು.

ಸಂಕರಹಸ್ತಗಳ ವಿಭಾಗದಲ್ಲಿ ಅರಾಳಹಸ್ತವನ್ನು ಹಣೆಯ ಸಮೀಪದಲ್ಲಿ ಸೇರಿಸುವುದರಿಂದ ಕಣ್ಣಿನ ಹುಬ್ಬು ಎಂಬ ಅರ್ಥದಲ್ಲಿಯೂ, ಬಾಯಿಗೆ ಅಭಿಮುಖವಾಗಿ ಹಿಡಿದಲ್ಲಿ ತುಟಿ ಎಂಬರ್ಥದಲ್ಲೂ ವಿನಿಯೋಗಿಸಬಹುದು.

ಬಲಕೈಯಲ್ಲಿ ಅರಾಳಹಸ್ತವನ್ನು ಎಡಗೈಯ ಪತಾಕದೊಂದಿಗೆ ಸೇರಿಸುವುದರಿಂದ ಅರಾಲ-ಪತಾಕಹಸ್ತ ಎನ್ನುವ ಉಪಹಸ್ತದ ಸೃಷ್ಟಿಯಾಗುತ್ತದೆ.ನೆಲ್ಲುವಿನ ಹಕ್ಕಿ (ಕೋಯಷ್ಟಿತ)ಯನ್ನು ತೋರಿಸುವಲ್ಲಿ ಇದನ್ನು ಬಳಸಬಹುದು. ಉರಃಪಾರ್ಶ್ವಾರ್ಧ ಮಂಡಲ ಎನ್ನುವ ನೃತ್ತ ಹಸ್ತದ ಸಂದರ್ಭದಲ್ಲೂ ಒಂದು ಕೈಯಲ್ಲಿ ಅಲಪಲ್ಲವ, ಮತ್ತೊಂದು ಕೈಯಲ್ಲಿ ಅರಾಳಹಸ್ತಗಳನ್ನು ಎದೆಯ ಬಳಿ ಮತ್ತು ಪಾರ್ಶ್ವದಲ್ಲಿ ಏಕಕಾಲಕ್ಕೆ ಸುತ್ತಿಸುತ್ತಾ ತಿರುಗಿಸುವುದು ಕಾಣುತ್ತೇವೆ.

ಅರಾಳ ಹಸ್ತವನ್ನು ಕಂಪಿಸುವುದು ಸಂಗೀತ ಸ್ವರದಲ್ಲೊಂದಾದ ಪಂಚಮಗತಿಯನ್ನು ತೋರಿಸಿದರೆ, ಈ ಹಸ್ತವನ್ನು ಅಲ್ಲಾಡಿಸುವುದು ಕೋಕಿಲ ಪಕ್ಷಿಯ ಸೂಚಕವೂ ಹೌದು. ಸಾಧಾರಣವಾಗಿ ನದಿಗಳ ಸೂಚನೆಗಾಗಿ ನೃತ್ಯದಲ್ಲಿ ಪತಾಕ ಹಸ್ತವನ್ನು ಬಳಸಿದರೂ, ಶಾಸ್ತ್ರ ರೀತ್ಯಾ ಇರುವ ಮತ್ತು ಈಗ ಅಷ್ಟಾಗಿ ಬಳಕೆ ಮಾಡದ ನದೀ ಸೂಚಕ ಪ್ರತ್ಯೇಕ ಹಸ್ತಗಳ ಪೈಕಿ, ಅರಾಳ ಹಸ್ತವನ್ನು ಭೀಮರಥಿ ನದಿಯನ್ನು ಸೂಚಿಸಲು ಉಪಯೋಗಿಸಲಾಗುತ್ತದೆ. ಅರಾಳ ಹಸ್ತವನ್ನು ಅಧೋಮುಖವಾಗಿ ಬಲಹಸ್ತದಲ್ಲಿ ಹಿಡಿದು, ಎಡಹಸ್ತದಲ್ಲಿ ಅರ್ಧಪತಾಕವನ್ನು ಎದೆಯ ಮುಂದೆ ನೇರ ಇರಿಸಿ, ಬಲಹಸ್ತವನ್ನು ಲಘುವಾದ ಕಂಪನದೊಂದಿಗೆ ಎಡದಿಂದ ಬಲಕ್ಕೆ ಚಲಿಸುವುದರಿಂದ ಅದು ದೇವತಾ ಹಸ್ತಗಳಲ್ಲೊಂದಾದ ವಾಯುಹಸ್ತವೆನಿಸಿಕೊಳ್ಳುತ್ತದೆ.

ದಿನನಿತ್ಯದ ಜೀವನದಲ್ಲಿ ಅರಾಳ ಹಸ್ತದ ಬಳಕೆ ಅಷ್ಟು ಜನಪ್ರಿಯವಾಗಿಲ್ಲ. ಆದರೂ ದೇವಸ್ಥಾನದಲ್ಲಿ ತೀರ್ಥ ತೆಗೆದುಕೊಳ್ಳುವಾಗ, ಧ್ಯಾನಿಸುವಾಗ ಇದರ ಬಳಕೆಯಾಗುತ್ತದೆ.

Leave a Reply

*

code