ಅಂಕಣಗಳು

Subscribe


 

ಆಶಯ – ಅನುಗ್ರಹ

Posted On: Thursday, June 25th, 2009
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಭ್ರಮರಿಯ ಬಳಗಕ್ಕೆ ಪ್ರತೀಸಲ ಬರೆಯಬೇಕಾದಾಗಲೂ ಕಾಣುತ್ತಿದ್ದದ್ದು ನೃತ್ಯಕ್ಕೆ ಸಂಬಂಧಿಸಿದಂತೆ ಭಾವನೆಗಳನ್ನು, ವಿಚಾರಗಳನ್ನು ಹಂಚಿಕೊಳ್ಳಲು ಸೂಕ್ತವಾದ ವೇದಿಕೆಯ ಕೊರತೆ; ಜೊತೆಗೆ ಇತರ ಪತ್ರಿಕೆಗಳಲ್ಲೂ ನೃತ್ಯಮಾಧ್ಯಮದ ಕುರಿತಂತೆ ಸಂವಾದ, ಚರ್ಚೆಗಳು, ವಸ್ತುನಿಷ್ಟ ವಿಮರ್ಶೆಗಳು ವಿರಳವಾಗುತ್ತಿದ್ದದ್ದು. ನೃತ್ಯಕ್ಕೆ, ಅದರಲ್ಲೂ ಭರತನಾಟ್ಯಕ್ಕೆ ಸಂಬಂಧಿಸಿದಂತೆ ಕೆಲವು ಪತ್ರಿಕೆಗಳು ಇವೆಯಾದರೂ ಸಾಮಾನ್ಯ ಜನಜೀವನಕ್ಕೆ ತಲುಪುವ ಸಾಧ್ಯತೆ ಇತ್ತೀಚೆಗೆ ಬಹಳ ಕಡಿಮೆಯಾಗುತ್ತ ಹೋಗಿದೆ. ಜೊತೆಗೆ ನೃತ್ಯದ ಕೇವಲ ಶಾಸ್ತ್ರೀಯತೆಯನ್ನಷ್ಟೇ ಅವಲೋಕಿಸದೇ, ಅದರ ಪ್ರಸ್ತುತ ನೆಲೆಗಟ್ಟು, ಸ್ಥಿತಿಗತಿ, ಪರ-ವಿರೋಧ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿಕ್ಕೆ ಪತ್ರಿಕೆ ಬೇಕೆನ್ನಿಸಿದ್ದು ಹೌದು. ಕೇವಲ ಸಾಮಾಜಿಕ-ಸಾಮುದಾಯಿಕ ವಿಷಯಗಳಷ್ಟಕ್ಕೇ ಬೆಳಕು ಚೆಲ್ಲದೆ, ಸಾಂಸ್ಕೃತಿಕವಾಗಿಯೂ ಗಟ್ಟಿಗೊಳ್ಳುವಲ್ಲಿ ಮತ್ತು ವಿರಳವಾಗುತ್ತಿರುವ ಸಾಂಸ್ಕೃತಿಕ ಪತ್ರಿಕೋದ್ಯಮಕ್ಕೊಂದು ಸಣ್ಣಮಟ್ಟಿನ ಉಡುಗೊರೆ ನೀಡುವಲ್ಲಿ ಕರ್ತವ್ಯವಿದೆ ಎಂದೆನಿಸಿತು. ಹಾಗಾಗಿ ಪತ್ರಿಕೋದ್ಯಮದ ಆಶಯಗಳನ್ನು ಜೊತೆಗಿಟ್ಟುಕೊಂಡು, ಸಾಂಸ್ಕೃತಿಕ ಅಡಿಪಾಯದಲ್ಲಿ ನೃತ್ಯದ ವಿವಿಧ ಆಯಾಮಗಳತ್ತ ಬೆಳಕು ಚೆಲ್ಲುವ ಪುಟ್ಟ ಪ್ರಯತ್ನ ಎಂಬ ನಂಬುಗೆಯಲ್ಲಿ ಕಣ್ಬಿಡುತ್ತಿರುವ ಹಸುಗೂಸು ನೂಪುರಭ್ರಮರಿ.
ಪುಟಾಣಿ ಪತ್ರಿಕೆಯಾದರೂ, ಇದು ಮೌಲ್ಯಯುತವಾದುದನ್ನಷ್ಟೇ ಹಂಚಿಕೊಳ್ಳುತ್ತದೆ ಎಂಬ ಆಶ್ವಾಸನೆಯನ್ನು ಮೊದಲಿಗೆ ನೀಡಲಿಚ್ಚಿಸುತ್ತೇವೆ. ಜೊತೆಗೆ ಇದರ ಹಿಂದೆ ಯಾವುದೇ ಲಾಭದ ಉದ್ದೇಶವೂ ಇದರ ಹಿಂದಿಲ್ಲ ಎಂಬುದನ್ನು ಸ್ವಷ್ಟಪಡಿಸಲು ಇಚ್ಛಿಸುತ್ತೇವೆ. ಇದು ನಮ್ಮನ್ನು ನಾವು ಕಂಡುಕೊಳ್ಳುವ, ಅರಿಯುವ, ಅರ್ಥೈಸುವ, ಅರಿವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಮುಕ್ತವೇದಿಕೆ ರೂಪುಗೊಳ್ಳಬೇಕೆಂಬ ಸಣ್ಣ ಮಟ್ಟಿನ ಸ್ವಾರ್ಥ.ಅಷ್ಟಕ್ಕೂ ಭ್ರಮರಿ ಯಾವುದೋ ಒಂದು ನೃತ್ಯಪ್ರಕಾರಕ್ಕೆ ಮಾತ್ರ ಮೀಸಲಾದ ಪತ್ರಿಕೆಯಲ್ಲ. ಸಮಗ್ರ ನೋಟ, ವಿಶಾಲ ದೃಷ್ಟಿಯತ್ತ ಹೊರಳಿಕೊಳ್ಳುವ ಗುರಿ ಇದರದ್ದು.
ಪತ್ರಿಕೋದ್ಯಮ ಎನ್ನುವ ಕೃಷಿಯಲ್ಲಿ ನೂಪುರ ಭ್ರಮರಿ ಇನ್ನೂ ಚಿಗುರೊಡೆಯುವ ಸಸಿ. ಅದನ್ನು ಭವಿಷ್ಯದ ಹೆಮ್ಮರವಾಗಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದು. ನೃತ್ಯದ ಕುರಿತಾಗಿ ಬರುವ ಕ್ಲೀಷೆಯೆನಿಸಿಕೊಂಡ ಮಾಮೂಲಿ ವಿಮರ್ಶೆಗಳ ಸಾಧ್ಯತೆಯನ್ನು ಆದಷ್ಟೂ ಕಡಿಮೆ ಮಾಡುವುದು ಪತ್ರಿಕೆಯ ಆಶಯಗಳಲ್ಲೊಂದು. ಹಾಗಂತ ಆವರಣವಿಲ್ಲವೆಂದಲ್ಲ. ಆವರಣವಿಲ್ಲದ ಕೃಷಿ ಕಾಡಾಗಿ, ಮುಳ್ಳು ಕಂಟಿಗಳ ಸ್ಥಾನವಾಗಿ ಹೋಗುತ್ತದೆ. ಆದರೆ ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳುವ ಪರಿಪಾಠ ಮುಂದುವರಿಯದಂತೆ ನೋಡಿಕೊಳ್ಳಬೇಕೆಂಬ ಆಸೆಯಿದೆ.
ಪತ್ರಿಕೆ ಹುಟ್ಟುಹಾಕುವುದೇನೋ ಸುಲಭ. ಆದರೆ ಅದರ ಸಮರ್ಥ ರೂಪಿಸುವಿಕೆ, ಬೆಳೆಸುವಿಕೆ ಕಷ್ಟಸಾಧ್ಯ. ಹಲವಾರು ಸವಾಲುಗಳನ್ನು ಬೇಡುವ ರಂಗವಿದು. ಸಾಂಸ್ಕೃತಿಕ ರಂಗದ ಬಗ್ಗೆ ಅದರಲ್ಲೂ ನೃತ್ಯದ ಕುರಿತಾಗಿ ಸೀಮಿತ ಅಭಿಪ್ರಾಯಗಳು, ಸೀಮಿತ ಓದುಗರು, ಓದುವ ಮತ್ತು ಬರೆಯುವ ನಿಟ್ಟಿನಲ್ಲೂ ಸೀಮಿತ ಸಾಧ್ಯತೆಗಳಿವೆ. ಆದರೆ ಪತ್ರಿಕೆಯನ್ನು ಕೇವಲ ನೃತ್ಯ-ನಾಟ್ಯರಂಗದ ಕಲಾವಿದರಿಗೆ, ಗುರುಗಳಿಗೆ ಸೀಮಿತವಾಗಿರಿಸದೆ ಸಾಮಾನ್ಯ ವೀಕ್ಷಕ, ಓದುಗರಿಗೂ ಮುಟ್ಟಬೇಕು, ಸದಭಿರುಚಿಯ ಎಲ್ಲರಿಗೂ ತಲುಪುವಂತಾಗಬೇಕು ಎಂಬ ಆಶಯ ನಮ್ಮದು. ನೃತ್ಯದ ಕುರಿತಾಗಿ ಚಿಂತನೆಗಳು ಎಲ್ಲಾ ಕಡೆಯಿಂದಲೂ ಹರಿದು ಬಂದು ನೃತ್ಯದ ಆಯಾಮಗಳತ್ತ ಜಾಗೃತಿ, ಅರಿವು ಮೂಡಬೇಕೆಂಬ ಹಂಬಲ ನಮ್ಮದು .
ಸೀಮಿತ ವರ್ಗಕ್ಕೆ ಮಾತ್ರ ಎಂಬ ಅಪವಾದವನ್ನು ಬದಿಗಿರಿಸಿ ನರ್ತನ ಜಗತ್ತಿನ ಹಲವು ಒಳತೋಟಿಗಳನ್ನು ಅರ್ಥವಾಗುವಂತೆ ವಿವರಿಸುವ ಪ್ರಯತ್ನ ಜೊತೆಗಿನದು. ಪ್ರಾಂತೀಯ ಪ್ರಾಮುಖ್ಯತೆಯನ್ನು ಗಮನದಲ್ಲಿರಿಸಿಕೊಂಡು ಭರತನಾಟ್ಯಕ್ಕೆ ಹೆಚ್ಚಿನ ಅವಕಾಶ ಕೊಡುವ ಉದ್ದೇಶವಿದೆಯಾದರೂ, ಇತರ ನೃತ್ಯಪ್ರಕಾರಗಳ ಕುರಿತು ಸಾದ್ಯಂತವಾಗಿ ವಿಚಾರ ವಿಮರ್ಶೆಗಳನ್ನು ಹಂಚಿಕೊಳ್ಳುವ ಕನಸಿದೆ. ಪತ್ರಿಕೆಯ ಪ್ರೋತ್ಸಾಹಕರಾಗಿ ಗೆಳೆಯರ ಬಳಗವಿದ್ದರೂ ಏಕಸಂಪಾದಕತ್ವ ಮತ್ತು ಪ್ರಕಾಶನದಲ್ಲಿ ಮುನ್ನಡೆಯಬೇಕಾಗಿದೆ. ತಾವೆಲ್ಲರೂ ನೂಪುರ ಭ್ರಮರಿಯ ಜೊತೆಗಿರುತ್ತೀರಿ ಎಂಬ ನಂಬಿಕೆಯನ್ನು ಬಗಲಿಗಿಟ್ಟು ಮುನ್ನಡೆಯುತ್ತೇವೆ
ಭ್ರಮರಿಯ ಸೃಜನಶೀಲತೆಯನ್ನು ಕೆಲವರು ತಮ್ಮದೇ ಸ್ವಂತ ಎಂಬ ರೀತಿಯಲ್ಲಿ ಬಳಸಿಕೊಳ್ಳುವುದನ್ನು ನಾವು ಗಮನಿಸಿದ್ದೇವೆ! ಇದು ಕೇವಲ ಅವರು ಉಳಿಸಿಕೊಳ್ಳಬೇಕಾದ ನಂಬಿಕೆಯ ಪ್ರಶ್ನೆಯಷ್ಟೇ ಅಲ್ಲ, ಬದಲಾಗಿ ಅವರಿಗಿರಬೇಕಾದ ಮನಃಸ್ಸಾಕ್ಷಿಯ ಪ್ರಶ್ನೆಯೂ ಕೂಡಾ! ಒಂದು ವೇಳೆ ಅಂತಹ ಸೃಜನಶೀಲತೆಯನ್ನು ಬಳಸಿಕೊಳ್ಳುವುದೇ ಆದಲ್ಲಿ, ಸೌಜನ್ಯದ ಸಂಭೋಧನೆಗಳಿರಬೇಕಾದದ್ದು ಒಳ್ಳೆಯದು ತಾನೇ?
ಇಂತಹ ಪುಟ್ಟ ವಿಷಯಗಳನ್ನು ತಮ್ಮಲ್ಲಿ ಅರಿಕೆ ಮಾಡಿಕೊಂಡರಷ್ಟೇ ಓದುಗ ಸಹೃದಯರು ಅರ್ಥ ಮಾಡಿಕೊಂಡಾರು ಎನ್ನುವ ಧಾರ್ಷ್ಟ್ಯ ನಮ್ಮದಲ್ಲ. ಬದಲಾಗಿ ಪತ್ರಿಕೆಯ ಇತಿಮಿತಿಗಳನ್ನು ತಿಳಿಸುವುದು ಕರ್ತವ್ಯವೆಂಬುದು ನಮ್ಮ ಭಾವನೆ. ನಿಮ್ಮ ಹೃದಯ ಶ್ರೀಮಂತಿಕೆಯ ಮುಂದೆ ನಮ್ಮ ಪ್ರಯತ್ನಗಳು ಫಲ ಕೊಡಬೇಕೆನ್ನಿಸುವುದಷ್ಟೇ ನಮ್ಮ ಆಶಯ. ಪತ್ರಿಕೆಯ ನಿರೂಪಣೆಯ ಹಿಂದೆ ನಮ್ಮಷ್ಟೇ ಜವಾಬ್ದಾರಿ ನಿಮಗೂ ಇದೆ. ಸಾಂಸ್ಕೃತಿಕ ಪತ್ರಿಕೆಗಳ ಸಾಲಿನಲ್ಲಿ ನೂಪುರ ಭ್ರಮರಿ ಮೈಲಿಗಲ್ಲಾದರೆ ಅದರ ಯಶಸ್ಸು ನಿಮಗೆ ಸೇರಬೇಕಾದದ್ದು ಅನ್ನುವುದೂ ನೆನಪಿರಲಿ.
ಈ ಭ್ರಮರಿ ನಿಮ್ಮದು, ನಮ್ಮೆಲ್ಲರದು, ಗುರು-ಕಲಾವಿದರನ್ನು ಒಳಗೊಂಡಂತೆ ಸಾಮಾನ್ಯ ಜನರೂ ನೃತ್ಯ ಕ್ಷೇತ್ರದ ಕುರಿತಂತೆ ಸಂವಾದದಲ್ಲಿ ಪಾಲ್ಗೊಳ್ಳಬೇಕು, ನೃತ್ಯವೆಂಬುದು ಸೀಮಿತ ಕ್ಷೇತ್ರವಾಗದೇ ಮುಕ್ತ ಅವಕಾಶ ಅನುಭವಗಳನ್ನು ಕಲ್ಪಿಸಬೇಕು. ನೃತ್ಯದ ಬಗ್ಗೆ ಎಲ್ಲಾ ರೀತಿಯ ಪರ-ವಿರೋಧವನ್ನು ಒಳಗೊಂಡಂತೆ ಅಭಿಪ್ರಾಯಗಳು ಹರಿದು ಬರಬೇಕು, ಗುಣಾತ್ಮಕ ಚಿಂತನೆಗೆ ಅವಕಾಶಬೇಕು, ಬರಿಯ ಶಾಸ್ತ್ರೀಯ, ಪಾರಂಪರಿಕ ಜ್ಞಾನವನ್ನಷ್ಟೆ ಮುಂದಿಡುವುದಲ್ಲ, ಬದಲಾಗಿ ಪ್ರಚಲಿತ ಸ್ಥಿತಿಗಳತ್ತಲೂ ದೃಷ್ಟಿ ಹೊರಳಿಸಬೇಕೆಂದು ನಮ್ಮ ನಿಲುವು.ಇದರ ಬೆಳವಣಿಗೆಗೆ ನಿಮ್ಮ ಕೊಡುಗೆ, ಸಹಕಾರ ಅತ್ಯಗತ್ಯ ಮತ್ತು ಅಮೂಲ್ಯ. ಹಾಗಾಗಿ ನಮ್ಮೆಲ್ಲರ ಕ್ಷಿತಿಜವನ್ನು ವಿಸ್ತರಿಸಿಕೊಳ್ಳಲು ನಿಮ್ಮ ಲೇಖನಿಯಿಂದ ವಿಚಾರಗಳು ಹರಿದುಬರಲಿ. ನಮ್ಮೆಲ್ಲರನ್ನೂ ಮಂಥಿಸಲಿ.
ಹಾಗಾದರೆ ಬರೆಯುತ್ತೀರಿ ತಾನೇ?.. ಕ್ಲೀಷೆ, ಸಾಮಾನ್ಯ ವಿಮರ್ಶೆಗಳನ್ನು ಬದಿಗಿಟ್ಟು.. ಮನವನ್ನು ಮುಕ್ತವಾಗಿ ತೆರೆದಿಟ್ಟು ನಮ್ಮ ಹೆಜ್ಜೆಯ ಜೊತೆಯಲ್ಲಿ ಹೆಜ್ಜೆಯಿಟ್ಟು !

Leave a Reply

*

code