ಅಂಕಣಗಳು

Subscribe


 

ಕಪಿತ್ಥ ಹಸ್ತ

Posted On: Saturday, September 20th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಲಕ್ಷಣ: ಶಿಖರಹಸ್ತದಲ್ಲಿ ಹೆಬ್ಬೆರಳ ತುದಿಯ ಮೇಲೆ ತೋರುಬೆರಳನ್ನು ಬಾಗಿಸಿ ಹಿಡಿದರೆ ಕಪಿತ್ಥ ಹಸ್ತ. ಕಪಿತ್ಥ ಅಂದರೆ ಬೇಲದ ಕಾಯಿ ಎಂದರ್ಥ. ಕೆಲವೊಮ್ಮೆ ಹಸ್ತದ ಅಂದಕ್ಕೋಸ್ಕರ ಕಿರುಬೆರಳನ್ನು ಮಡಿಸಿ ತೋರಿಸುವ ಪದ್ಧತಿ ಇದೆ. ಸಮುದ್ತ್ರಮಥನದಲ್ಲಿ ವಿಷ್ಣು ಮಂದರ ಪರ್ವತವನ್ನು ಸೆಳೆದದ್ದು ಈ ಬಗೆಯ ಹಸ್ತ ಶೈಲಿಯಿಂದ ಎನ್ನಲಾಗಿದೆ. ಇದರ ಬಣ್ಣ ಬಿಳಿ. ಋಷಿ ಜಾತಿ, ನಾರದ ಋಷಿಸ್ಥಾನ, ಪದ್ಮಗರ್ಭ ವಿಷ್ಣು ಆರಾಧನಾ ದೇವತೆ. ಒಡಿಸ್ಸಿ ನೃತ್ಯ ಪದ್ಧತಿಯಲ್ಲಿ ಇದಕ್ಕೆ ಅಂಕುಶ ಹಸ್ತವೆಂದು ಹೆಸರು. ನಿತ್ಯಜೀವನದಲ್ಲಿ ಈ ಹಸ್ತವನ್ನು ಬರೆಯುವುದನ್ನು ಸೂಚಿಸಲು ಬಳಸುತ್ತಾರೆ.

ವಿನಿಯೋಗ: ಲಕ್ಷ್ಮಿ, ಸರಸ್ವತಿ, ವಸ್ತ್ರವನ್ನು ಸೂಚಿಸುವುದು, ತಾಳವನ್ನು ಹಾಕುವುದು, ಹಾಲು ಹಿಂಡುವುದು, ಕಾಡಿಗೆ ಇಟ್ಟುಕೊಳ್ಳುವುದು, ಸರಸದಿಂದ ಪುಷ್ಪ ಹಿಡಿದುಕೊಳ್ಳುವುದು, ಸೆರಗು ಎಳೆಯುವುದು, ಮುಸುಕು ಹಾಕಿಕೊಳ್ಳುವುದು, ಧೂಪ-ದೀಪಾರ್ಚನೆ ಮಾಡುವುದು.

ಇತರೆ ವಿನಿಯೋಗ: ಬಿಡಿಹೂ ಮುಡಿದುಕೊಳ್ಳುವುದು, ಚಕ್ರ, ಬಿಲ್ಲು, ಸಿಡಿಲು, ಗದಾದಿ ಆಯುಧಗಳು, ಕವಡೆ ಬಿಡುವುದು, ಜಪಮಾಲೆ, ಬೋಧನೆ, ಕಡೆಗೋಲನ್ನು ಹಿಡಿದು ಕಡೆಯುವುದು, ಹಲ್ಲುಜ್ಜುವುದು, ಹಣ್ಣನ್ನು ಸ್ವಾದಿಸುವುದು, ತಾಂಬೂಲ ಸ್ವೀಕಾರ, ನೀರು ಸೇದುವುದು, ಬತ್ತಳಿಕೆಯಿಂದ ಬಾಣ ಎಳೆಯುವುದು, ಧೈರ್ಯ, ಸಮಯ, ಆಕರ್ಷಣೆ, ವರುಣ, ಬಾಣ, ಸತ್ಯ-ಉಚಿತವಾದ ಕಾರ್ಯಗಳು, ಆರತಿ, ಬರೆಯುವ ಕಡ್ಡಿಯನ್ನು ಮೊನೆಗೊಳಿಸು, ಬಿಲ್ಲಿನ ಹಗ್ಗ, ಬಾಣ, ತಕ್ಕಡಿ ಹಿಡಿವುದು, ಪಿತೃಗಳಿಗೆ ಪಿಂಡ, ರಾಟೆಯಿಂದ ನೂಲುಸುತ್ತು, ಬುಗುರಿಗೆ ನೂಲುಸುತ್ತು, ಕವಣೆ ಬೀಸುವುದು, ಮಣಿಸುರಿಯುವುದು, ಹುಲ್ಲು ಕಡ್ಡಿ ಹಿಡಿಯುವುದು, ಕುತ್ತುವುದು, ಕಡಿಯುವುದು, ಕಚ್ಚುವುದು, ನದೀಸ್ನಾನ, ವೀಳ್ಯ, ಯಶಸ್ಸು.

ಕಪಿತ್ಥ ಹಸ್ತದ ತರ್ಜನೀ ಬೆರಳಿನಿಂದ ಹೆಬ್ಬೆರಳನ್ನು ಎರಡು ಅಂಗುಲದಷ್ಟು ದೂರ ಸರಿಸುವುದು ಕುಟಿಲಹಸ್ತವೆನಿಸಿಕೊಳ್ಳುತ್ತದೆ. ಕುಟಿಲ ಅಂದರೆ ಡೊಂಕು ಎಂದರ್ಥ. ಇದು ರಣಗೃಧ್ರವೆಂಬ ಹಸ್ತಕ್ಕೆ ಸಾಮ್ಯತೆ ಹೊಂದಿದೆ. ಅಂಕುಶ, ಅನ್ಯೋನ್ಯಕಲಹ, ಮನಸ್ಸಿನಲ್ಲಿ ಕುಟಿಲತೆ, ಚಿಕ್ಕ ಕುಡುಗೋಲು, ವೀಳೆಯದೆಲೆಯನ್ನು ಬಿಡಿಸುವುದು. ಮೀನು ಹಿಡಿಯುವ ಗಾಳ, ಗೌಳಿ ನುಡಿದಾಗ ತದ್ದೋಷ ಪರಿಹಾರಾರ್ಥವಾಗಿ ನೆಲವನ್ನು ಕುಟ್ಟುವುದು, ಹದ್ದು ಮತ್ತು ಕೊಕ್ಕರೆಯ ಕೊಕ್ಕುಗಳು ಎಂಬದನ್ನು ಹೇಳಲು ಇದನ್ನು ಬಳಸುತ್ತಾರೆ.

ಕಪಿತ್ಥದಲ್ಲಿ ಹೆಬ್ಬೆರಳು ತೋರು ಬೆರಳನ್ನು ಬೇರೆ ಬೇರೆ ಮಾಡುವುದನ್ನು ಕಾಕತುಂಡ ಹಸ್ತವೆನ್ನುತ್ತಾರೆ. ಕುಟಿಲ ಹಸ್ತದಂತೆ ಈ ಹಸ್ತ ತೋರುತ್ತದೆ. ನರ್ತನ ನಿರ್ಣಯದಲ್ಲಿ ಉಲ್ಲೇಖಿತವಾದ ಹಸ್ತವಿದು.

ದೇವತಾ ಹಸ್ತಗಳಲ್ಲಿ ವಿಘ್ನ ನಿವಾರಕ ವಿನಾಯಕನನ್ನು ಸೂಚಿಸಲು ಎದೆಯ ಕೆಳಗೆ ಕಪಿತ್ಥ ಹಸ್ತಗಳನ್ನು ಹಿಡಿಯುವುದು ಲಕ್ಷಣ. ಎರಡೂ ಕೈಗಳಲ್ಲಿ ಕಪಿತ್ಥ ಹಸ್ತ ಹಿಡಿದು ಎದಿರು ಅಲುಗಾಡಿಸುವುದು ಶಿಬಿ ಚಕ್ರವರ್ತಿಯ ಸಂಕೇತ. ಎರಡು ಭುಜಗಳ ಬಳಿ ಅಲಪದ್ಮ ಮತ್ತು ಕಪಿತ್ಥಹಸ್ತಗಳನ್ನು ಹಿಡಿಯುವುದು ಸೂರ್ಯಹಸ್ತ.

Leave a Reply

*

code