ಅಂಕಣಗಳು

Subscribe


 

ಗೀತೆಗಳ ಅನ್ತಃಪುರವಿದು !

Posted On: Monday, October 20th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

~ಮನೋರಮಾ.ಬಿ.ಎನ್

ಏನೀ ಮಹಾನಂದವೇ…

ಮಂಕುತಿಮ್ಮನ ಕಗ್ಗ, ಮರುಳ ಮುನಿಯನ ಕಗ್ಗ ಮುಂತಾದ ಜನಮಾನಸದಲ್ಲಿ ನಲಿದಾಡುವ ವಿಶಿಷ್ಟ ಕಾವ್ಯ್ಯವನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ಕೊಟ್ಟ ಹಿರಿಯ ಕವಿ ಡಿ.ವಿ.ಜಿ ಬೇಲೂರಿನ ವಿಶ್ವವಿಖ್ಯಾತ ಶಿಲ್ಪ ಸೌಂದರ್ಯದ ಭಾವಾನಂದವನ್ನೂ ಉಣಬಡಿಸಿದ್ದಾರೆ. ಅಲ್ಲಿನ ಮದನಿಕೆಯರ ಶೃಂಗಾರ, ಲಾವಣ್ಯ, ಮಾಧುರ್ಯ ಕಾವ್ಯದ ಮೂಲಕ ಅಷ್ಟೆ ಸೊಗಸಾಗಿ ಮತ್ತೊಮ್ಮೆ ಅರಳಿ ನಿಂತಿದೆ. ಅದೇ ಅನ್ತಃಪುರ ಗೀತೆ.

ನಟನವಾಡಿದಳ್ ತರುಣಿ…

ನಾಂದಿಯ ನಂತರ ಮೊದಲ್ಗೊಳ್ಳುವ ಸೌಂದರ್ಯ ತತ್ವಂ ಮೊದಲ ಗೀತೆ. ಶ್ರೀ ಚೆನ್ನಕೇಶವ, ತತ್ವ ಸೌಂದರ್ಯ, ಧನ್ಯ ಮೂರ್ಧನ್ಯ, ಮುಕುರ ಮುಗ್ಧೆ, ಶುಕಭಾಷಿಣಿ, ವಾಸಂತೀ, ಕೀರವಾಣಿ, ಕಪಿ ಕುಪಿತೆ, ಲೀಲಾ ಕಿರಾತಿ, ಮಂಜುಕಬರೀ, ಮುರಜಾಮೋದೆ, ಕಪಟ ಭೈರವಿ, ತಾಂಡವೇಶ್ವರಿ, ಮುರಳೀಧರೆ, ಗಾನಜೀವನೆ, ಜಗನ್ಮೋಹಿನಿ, ವೀಣಾಪಾಣಿ, ಕುಟಿಲ ಕುಂತಲೆ, ರಸಿಕ ಶಬರಿ, ವೀರಯೋಷಿತೆ, ಪುಂ ವಿಡಂಬಿನಿ, ನಾಟ್ಯ ನಿಪುಣೆ, ರಾಗ ಯೋಗಿ, ಸ್ವರ್ಗ ಹಸ್ತೆ, ಕೃತಕ ಶೂಲಿ, ಜಯ ನಿಷಾದಿ, ನಾಟ್ಯ ಸುಂದರಿ, ಭಸ್ಮ ಮೋಹಿನಿ, ನೀಲಾಂಬರೆ, ಹಾವ ಸುಂದರಿ, ಶಕುನ ಶಾರದೆ, ವೀಟಿ ಧರೆ, ನಾಗವೈಣಿಕೆ, ಭೂಷಣಪ್ರಿಯೆ, ಕೇಳೀನಿರತೆ, ಕೊರವಂಜಿ, ಕೀಶರುಷ್ಟೆ, ಪಾದಾಂಗುಳೀಯೆ, ವಿಕಟ ನರ್ತಿನಿ, ಗಾಂಧರ್ವದೇವಿ, ಲಾಸೋತ್ಸವೆ, ಶುಕ ಸಖಿ, ಉಲ್ಲಾಸಿನಿ, ಭಾವದೇವಿ, ವೇಣಿ ಸಂಹಾರೆ, ನೃತ್ಯ ಸರಸ್ವತಿ, ನೃತ್ತೋನ್ಮತ್ತೆ, ವಿರಹಾರ್ತೆ, ಚಾರುಹಾಸಿನಿ, ಪ್ರಣಯವಂಚಿತೆ, ಕಲಾಹಾಂತರಿತೆ, ವಿಲಾಸಿಕೆ, ನೃತ್ತಹಾಸಿನಿ, ಚಕ್ರವಾಕಿ, ಪ್ರಣಯ ಕುಪಿತೆ, ಲತಾಂಗಿ, ಸುಮಬಾಣ, ರತಿ ಮನ್ಮಥ, ಜಯ ವಿಶ್ವಮೋಹನ, ಮನ್ಮಥಂ, ಮಂಗಳಂ, ಸೌಂದರ್ಯ ವಿಜಯಂ… ಮುಂತಾಗಿ ಸುಮಧುರ ಹೆಸರುಗಳ ೬೦ ಮಧುರ ಗೀತೆಗಳಿವೆ.

ಏನೇ ಶುಕಭಾಷಿಣಿ…

ಇವುಗಳಿಗೆ ವಿದ್ವಾನ್ ಎಲ್. ರಾಜಾರಾವ್ ಅವರ ಮಾರ್ಗದರ್ಶನದಲ್ಲಿ ಆರಭಿ, ಶಂಕರಾಭರಣ, ಗೌಳಿಪಂತು, ಕೇದಾರ, ಬೇಹಾಗ್, ವಸಂತ, ಕೀರವಾಣಿ, ಕಾಪಿ, ಕೇದಾರಗೌಳ, ನಾಟಕುರಂಜಿ, ಅಠಾಣ, ಭೈರವಿ, ಮಧ್ಯಮಾವತಿ, ಯದುಕುಲಕಾಂಭೋಜಿ, ರೀತಿಗೌಳ, ಜಗನ್ಮೋಹಿನಿ, ಕಲ್ಯಾಣಿ, ಕಾಂಭೋಜಿ, ಸಾವೇರಿ, ಮಾಯಮಾಳವಗೌಳ, ನಾಟ, ಕಾನಡಾ, ಸಾಂಗತ್ಯ-ಲಾವಣಿ, ಬೇಗಡೆ, ರಾಗಮಾಲಿಕೆ, ನೀಲಾಂಬರಿ, ಕಮಾಚ್, ಆನಂದಭೈರವಿ, ಫರಜು, ಬಿಲಹರಿ, ಸಿಂಹೇದ್ರ ಮಧ್ಯಮ, ಹುಸೇನಿ, ಹಿಂದೋಳ, ಮಣಿರಂಗು, ಶಹನ, ಹಂಸಧ್ವನಿ, ಸಾರಂಗ, ಪೂರ್ವೀಕಲ್ಯಾಣಿ, ದರ್ಬಾರ್, ಪುನ್ನಗವರಾಳಿ,ಖರಹರಪ್ರಿಯ, ಅಸಾವೇರಿ, ನಾದನಾಮಕ್ರಿಯೆ, ಮುಖಾರಿ, ಶ್ರೀರಂಜಿನಿ,ಚಕ್ರವಾಕ, ಉದಯರವಿ ಚಂದ್ರಿಕೆ, ಲತಾಂಗಿ, ಜಂಜೂಟಿ, ನಾಟಕುರುಂಜಿ ಮುಂತಾದ ರಾಗಗಳನ್ನು ನಿರ್ದೇಶಿಸಲಾಗಿದ್ದರೂ, ಹಾಡುವವರು ತಮ್ಮ ಅಭಿರುಚಿಗೆ ತಕ್ಕಂತೆ ರಾಗ-ತಾಳ ಸಂಯೋಜಿಸಬಹುದು. ಇಲ್ಲಿನ ೬೦ ಗೀತೆಗಳ ಪೈಕಿ ೫೦ ಮಧ್ಯಮ ಕಾಲಗತಿಗೆ ಒಪ್ಪುವಂತಾದರೆ, ಮೊದಲಿನ ಮತ್ತು ಕೊನೆಯ ತಲಾ ೨ ಗೀತೆಗಳು ವಿಳಂಬಗತಿಗೆ ಸೂಕ್ತ. ನವಿರಾದ ನೆಮ್ಮದಿಯ ಸಂಗೀತ ಇಲ್ಲಿನದು.

ನೃತ್ಯ ನೈಪುಣೀ ನಿತ್ಯ ರಾಗಿಣೀ…

’ಶಬ್ದಕ್ಕೆ ಅರ್ಥ ಬರುವುದು ನಿಘಂಟಿನಿಂದ. ಭಾವಕ್ಕೆ ಸ್ವಾರಸ್ಯ ಬರುವುದು ಅಂತರಂಗದ ಅನುಭವದಿಂದ; ಅನುಭವ ಪರಿಪಾಕದಿಂದ’

ಡಿವಿಜಿಯವರೇ ನುಡಿದಂತೆ ಈ ಗೀತೆಗಳಲ್ಲಿ ಮೂರು ಬಗೆಂii ಭಾವಗಳು ಸಮ್ಮಿಳಿತವಾಗಿವೆ. ಅವು ;

  • ರೂಪ ಭಾವ- ವಿಗ್ರಹದಲ್ಲಿ ಶಿಲ್ಪಿ ಕೊರೆದಿರುವ ಅಂಗಾಂಗ ಸಂಜ್ಞೆಗಳಿಂದ ತೋರತಕ್ಕದ್ದು
  • ವಾಕ್ಯ ಭಾವ- ಅಂಗಭಂಗಿಗಳ ಇಂಗಿತವನ್ನು ಮಾತುಗಳಿಂದ ಸ್ಪಷ್ಟಪಡಿಸತಕ್ಕುದ್ದು
  • ಗಾನ ಭಾವ- ಅಕ್ಷರಗಳ ಒಳಗೂ ಹೊರಗೂ ತುಂಬಿಕೊಂಡು ರಂಜನೆಯನ್ನುಂಟು ಮಾಡುವ ರಾಗ ಪ್ರವಾಹ

ಇವುಗಳನ್ನು ಅರ್ಥೈಸಿಕೊಂಡು, ಹೊಂದಿಸಿಕೊಂಡು ಹಾಡಿದಾಗ , ನರ್ತಿಸಿದಾಗ ಮಾತ್ರ ಭಾವ-ರಸ ಅನುಪಮವೆನಿಸುತ್ತದೆ.

ಇದರಲ್ಲಿನ ಜಟಿಲ ಪದಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಡಾ| ಜಿ. ವರದರಾಜರಾಯರ ಶಬ್ದಾರ್ಥಕೋಶ ಈ ಪುಸ್ತಕದ ಜೊತೆಯಲ್ಲಿದೆ. ಬಹಳ ವರ್ಷಗಳಿಂದಲೂ ಸುಗಮ ಸಂಗೀತ, ನೃತ್ಯ, ನೃತ್ಯ ರೂಪಕ, ನಾಟಕಗಳಲ್ಲಿ ಈ ಗೀತೆಗಳನ್ನು ಹೇರಳವಾಗಿ ಬಳಸಿಕೊಳ್ಳಲಾಗುತ್ತಿದ್ದು, ಕೇಳುಗ -ನೋಡುಗ ಸಹೃದಯರಿಗೆ ರಸಾಸ್ವಾದವನ್ನು ಮಾಡುವಲ್ಲಿ ಸೃಷ್ಟಿಶೀಲವೆನಿಸಿದೆ. ಕಾವ್ಯಾಲಯ, ಮೈಸೂರು ಇವರ ಪ್ರಕಾಶನದಲ್ಲಿ ಈ ಕೃತಿಯನ್ನು ಹೊರತರಲಾಗಿದೆ

Leave a Reply

*

code