ಅಂಕಣಗಳು

Subscribe


 

ಗೀತ-ನೃತ್ಯ-ನಾಟಕಗಳ ಸಾಂಗತ್ಯ : ಗೀತನಾಟಕ

Posted On: Thursday, November 6th, 2008
1 Star2 Stars3 Stars4 Stars5 Stars (1 votes, average: 3.00 out of 5)
Loading...

Author: ಮನೋರಮಾ. ಬಿ.ಎನ್


– “ವಿಪ್ರಭಾ”

ಕನ್ನಡ ಸಾಹಿತ್ಯ ಲೋಕಕ್ಕೆ ಒಳ್ಳೆಯ ನೆನಪುಗಳನ್ನಿತ್ತ ಕವಿ-ಸಾಹಿತಿಗಳು ಏಕಕಾಲಕ್ಕೆ ನೃತ್ಯ ರಂಗಭೂಮಿಗೂ ಮರೆಯಲಾರದ ಕೊಡುಗೆಗಳನಿತ್ತಿದ್ದಾರೆ. ಅಚ್ಚುಕಟ್ಟಾದ ಲಯವುಳ್ಳ ಸ್ವರ, ಸಾಹಿತ್ಯಗಳ ರಚನೆಗಳು ನೃತ್ಯರೂಪಕ-ನಾಟಕಗಳನ್ನು ಅಭಿನಯಿಸುವ ಕಲಾವಿದರಿಗೆ ನಿಜಕ್ಕೂ ನಿಧಿಯಿದ್ದಂತೆ! ಇದರಿಂದ ಸಂಗೀತ ನೃತ್ಯ ಮತ್ತು ಹಿನ್ನಲೆ ಕಲಾವಿದರು ನೃತ್ಯದ ವ್ಯಾಪ್ತಿಯನ್ನು ಎಷ್ಟರ ಮಟ್ಟಿಗೆ ವಿಸ್ತರಿಸಬಲ್ಲುರು ಎಂಬುದನ್ನು ಪರಿಣಾಮಕಾರಿಯಾಗಿ ಕಂಡುಕೊಳ್ಳಬಹುದು. ಅಂತಹ ಅವಿಸ್ಮರಣಿಯರಲಿ ದಿವಂಗತ ಪು.ತಿ.ನ ಅವರೂ ಒಬ್ಬರು.

ಪು.ತಿ.ನ ಅವರ ಅಹಲ್ಯೆ, ಗೋಕುಲ ನಿರ್ಗiನ ಕೃತಿಗಳೆಲ್ಲಾ ನವೀನ ನೃತ್ಯ ಆವಿಷ್ಕಾರಕ್ಕೆ ತೆರೆದುಕೊಂಡವುಗಳು. ಬಿ. ವಿ. ಕಾರಂತರು ಗೋಕುಲ ನಿರ್ಗಮನಕ್ಕೆ ನೀಡಿದ ಸಂಗೀತ ಸ್ಪರ್ಶ ಫ್ಯೂಷನ್‌ಗೆ ಉತ್ತಮ ಉದಾಹರಣೆ. ಗೋಕುಲ ನಿರ್ಗಮನದ ಸಂಗೀತ ನೃತ್ಯ ಸಾಧ್ಯತೆಗಳು ಸೃಜನಶೀಲ ವಾತಾವರಣವನ್ನೇ ನಿರ್ಮಿಸಿತ್ತು. ಇಂತಹ ನೃತ್ಯನಾಟಕಗಳ ಮತ್ತೊಂದು ಸಂಕಲನ ಹಂಸ ದಮಯಂತಿ ಮತ್ತು ಇತರ ಗೀತನಾಟಕಗಳು. ಪು.ತಿ.ನ ಅವರ ಲೇಖನಿಯಿಂದ ಹರಿದ ಹರಿಣಾಭಿಸರಣ, ವಸಂತಚಂದನ, ವರ್ಷ-ಹರ್ಷ, ಶರದ್ವಿಲಾಸ, ದೀಪಲಕ್ಷ್ಮಿ, ರಾಮೋದಯಂ, ಸೀತಾಪರಿಣಯ ಮುಂತಾದ ಗೀತನಾಟಕಗಳು ನೃತ್ಯಮಾಧ್ಯಮದ ಒಂದು ಆಸ್ತಿಯೇ ಸರಿ!

ಒಂದು ಹಾಡನ್ನು ಮಾಡುವ ಮೊದಲು ಸಂಗೀತದ ಮಟ್ಟನ್ನು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು ಅನಂತರ ಅದಕ್ಕೆ ಹೊಂದುವ ಸಾಹಿತ್ಯವನ್ನು ಕಲ್ಪಿಸುತ್ತೇನೆ. ಆದ್ದರಿಂದಲೇ ಕೇವಲ ಸಾಹಿತ್ಯಕೃತಿಯಾಗಿ ಮಾತ್ರವಲ್ಲ, ಸಂಗೀತ ಕೃತಿಯಾಗಿಯೂ ಉಳಿದುಕೊಳ್ಳುತ್ತದೆ. ಎನ್ನುವುದು ಪು.ತಿ.ನ ಅವರ ಅನುಭವಜನ್ಯ ಮಾತು. ಧಾತು ಮಾತುಗಳ ಪರಸ್ಪರ ಅವಿನಾಭಾವ ಭವಿಸುವಿಕೆ ಗೀತಗಳ ಸೃಷ್ಟಿಗೆ ಒಳ್ಳೆಯ ವೇಗ ಮತ್ತು ಓಘವನ್ನು ಕೊಡಬಹುದು ಎನ್ನುವುದನ್ನು ಇಲ್ಲಿ ಕಾಣಬಹುದು.

ಗೀತಗಳ ರಚನೆಯಲ್ಲಿ ಇಷ್ಟು ಮಾತ್ರವಲ್ಲ, ಮತ್ತಷ್ಟು ಹೊಸತಿನ ಸೃಷ್ಟಿಗೆ ಕಾರಣರಾಗಿದ್ದಾರೆ ಪು.ತಿ.ನ. ಇವರ ಸ್ವತಂತ್ರವಾದ ಕಲ್ಪನಾಪ್ರವಾಹಕ್ಕೆ ಸಾಕ್ಷಿಯೇ ವಾಸಂತಿ, ಗಾಂಧಾರಲೋಲ, ಋಷಭವಿಲಾಸ, ಸಂಜೀವಿನಿ, ಹರಿಣಿ ಮುಂತಾದ ಅವರೇ ಕಂಡುಹಿಡಿದ ನೂತನ ರಾಗಗಳು! ಋತುವಿಲಾಸದಂತಹ ಹಿಂದೂಸ್ತಾನೀ ರಾಗಗಳೂ, ಜೊತೆಗೆ ಅಪೂರ್ವವೆನಿಸುವ ರಾಗಗಳು, ಜನಪ್ರಿಯ ರಾಗಗಳನ್ನೂ ಸೇರಿಸಿದಂತೆ ಒಟ್ಟು ೭೬ ರಾಗಗಳನ್ನು ಬಳಸಿದ್ದಾರೆ. ಗೀತ ನಾಟಕಗಳೆಲ್ಲಾ ಸ್ವರಸಹಿತ ರಾಗ, ತಾಳಬದ್ಧವಾಗಿದ್ದು ಕೇವಲ ಶಾಸ್ತ್ರೀಯ ಧಾಟಿಯಲ್ಲಷ್ಟೇ ಅಲ್ಲದೆ, ವೃಂದಗಾನ, ಲಘುಗೀತ, ಸುಗಮಸಂಗೀತ, ಜಾನಪದ..ಹೀಗೆ ಸಂಗೀತದ ಪ್ರತೀ ಪ್ರಕಾರಕ್ಕೆ ಪೂರಕವಾಗುವ ಧಾಟಿಗಳ ಮಿಶ್ರಣವೂ ಇದೆ! ಹಾಗಾಗಿ ಈ ಗೀತನಟಕಗಳು ಶಾಸ್ತ್ರೋಚಿತವು ಹೌದು, ಸೃಜನಶೀಲವೂ ಹೌದು !

ಹೊಸತು, ಹಳತಿನ ಸಂಘರ್ಷದ ಸಂಧಿಕಾಲದ ಮನೋಧರ್ಮವನ್ನು ಚೆನ್ನಾಗಿ ಅರಿತುಕೊಂಡವರು ಪು.ತಿ.ನ. ಹಾಗಾಗಿ, ಸಾಂಪ್ರದಾಯಿಕ ಸ್ವರಗಳಿಗೆ ಹೊಸ ಭಾವವನ್ನೂ, ಹಳೆಯ ಶಬ್ದಗಳಿಗೆ ಹೊಸ ಅರ್ಥವನ್ನೂ ನೀಡಿದಾರೆ. ಜೊತೆಗೆ ಹೊಸ ದಾರಿಯ ನಡಿಗೆಗೆ ಹಳೆಯ ಸಂಪ್ರದಾಯವನ್ನೂ ಒಗ್ಗಿಸಿಕೊಂಡಿದ್ದಾರೆ. ಆದ್ದರಿಂದಲೇ ರಸಾನುಭವದಲ್ಲಿ ಅಗ್ಗವಿಲ್ಲ.,ಕುಗ್ಗಿಲ್ಲ!

ಹರಿಣಾಭಿಸರಣಕ್ಕೆ ಆರ್.ಕೆ. ಶ್ರೀಕಂಠನ್, ವಸಂತಚಂದನಕ್ಕೆ ಎ. ವಿ. ಕೃಷ್ಣಮಾಚಾರ್ಯರು ಮತ್ತು ಅವರ ತಂಡ…ಹೀಗೆ, ವಿವಿಧ ವಿದ್ವಾಂಸರು ಇಲ್ಲಿನ ಗೀತನಾಟಕಗಳಿಗೆ ಸ್ವರ ನಿರ್ದೇಶನವನ್ನೂ ಮಾಡಿ, ಆಗಿನ ಕಾಲದಲ್ಲೇ ಆಕಾಶವಾಣಿಯಲ್ಲಿ ಪ್ರಸ್ತುತಪಡಿಸಿದ್ದಾರೆ. ಇಂದಿಗೂ ನೀನಾಸಂ, ರಂಗಾಯಣ ಗೋಕುಲ ನಿರ್ಗಮನದಂತಹ ಪ್ರದರ್ಶನದಿಂದ ಇಂದಿಗೂ ಅದರ ಭವ್ಯ ಸಾಧ್ಯತೆಗಳನ್ನು ತೋರಿಸಿಕೊಡುತ್ತಿದ್ದಾರೆ. ಅಂತೆಯೇ ಹಲವು ನೃತ್ಯ ನಿರ್ದೇಶಕರು ಈ ಗೀತನಾಟಕಗಳ ಕುರಿತಂತೆ ತಮ್ಮ ಕಲ್ಪನೆಯನ್ನು ಪ್ರದರ್ಶನಗಳಲ್ಲಿ ಮತ್ತಷ್ಟು ಸಾಕ್ಷೀಕರಿಸುತ್ತಿದ್ದಾರೆ.

ಗೀತಗಳ ಸೃಷ್ಟಿಯಲ್ಲಿ ಗಾಂಭೀರ್ಯವಿದೆ, ಬಿಗಿಯಿದೆ, ಕುಶಲತೆಯಿದೆ, ಕಲಾಪರಿಪೂರ್ಣತೆಯಿದೆ, ಯಾವುದೇ ಗೀತರೂಪಕವನ್ನು ತೆಗೆದುಕೊಂಡರೂ ಆರಂಭದಿಂದ ಅಂತ್ಯದ ವರೆಗೂ ಶ್ರೋತೃಗಳ ಮನಸ್ಸನ್ನು ಸೆರೆಹಿಡಿದು ನಿಲ್ಲಿಸುತ್ತದೆ. ಕಾರಣ, ಗೀತಗಳಲ್ಲಿರುವ ವೈವಿಧ್ಯ. ಯಾವ ಹಾಡಿನಲ್ಲಿಯೂ ಅನುಕರಣವಿಲ್ಲ. ಒಂದೊಂದು ಸ್ವತಂತ್ರ ಕಲ್ಪನೆಯಿಂದ ಮೂರ್ತಿವೆತ್ತ ರಚನೆ. ಹೀಗಂದವರು ವಿ. ದೊರೆಸ್ವಾಮಿ ಅಯ್ಯಂಗಾರ್., ನೃತ್ಯ ನಾಟಕಗಳ ಮತ್ತೋರ್ವ ಸಂಗೀತ ಸಂಯೋಜಕರು !

Leave a Reply

*

code