ಅಂಕಣಗಳು

Subscribe


 

ಜತಿಸ್ವರ

Posted On: Thursday, November 6th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


– ವೈಷ್ಣವಿ . ಎನ್

ಭರತನಾಟ್ಯ ಕಾರ್ಯಕ್ರಮದಲ್ಲಿ ಪ್ರೇಕ್ಷಕರು ನೋಡುವ ಎರಡನೆಯ ಅಂಗವೇ ಜತಿಸ್ವರ. ಇದಕ್ಕೆ ಕರ್ಣಾಟಕ ಸಂಗೀತ ಸಂಪ್ರದಾಯದಲ್ಲಿ ಬರುವ ಸ್ವರಜತಿ ಎಂಬುದು ಆಧಾರ. ಸಂಗೀತ ವಿದ್ವಾಂಸರು ವಿದ್ಯಾರ್ಥಿಗಳಿಗೆ ಬೋಧನಾ ಸೌಕರ್ಯಕ್ಕಾಗಿ ರಚಿಸಿರುವ ಐದನೆಯ ಹಂತವೇ ಸ್ವರಜತಿ. ಇಲ್ಲಿ ಒಂದು ರಾಗದ ಆರೋಹಣ, ಅವರೋಹಣವನ್ನು ಅನುಸರಿಸಿ ಆ ರಾಗದ ಸ್ವರಗಳನ್ನು ಗುಂಪು-ಗುಂಪುಗಳಾಗಿ ವಿಂಗಡಿಸಿ ನಿರ್ದಿಷ್ಟ ರಾಗದ ಸೂಕ್ಷ್ಮ ಪರಿಚಯವನ್ನು ಮಾಡಿಕೊಡಲಾಗುತ್ತದೆ. ಸಂಗೀತಗಾರರು ಸ್ವರಗಳನ್ನು ಪ್ರಧಾನವಾಗಿ ಗಮನಿಸುವುದರಿಂದ ಮತ್ತು ವರ್ಣಕ್ಕೆ ತಳಹದಿಯಾಗಿ ರೂಪಿಸಿರುವ ರಚನೆಯಾದ್ದರಿಂದ ಸ್ವರಜತಿ ಎನಿಸಿಕೊಂಡಿದೆ. ಈ ಸ್ವರಜತಿಗಳನ್ನೇ ನೃತ್ಯ ಜೋಡಣೆಗೆ ಬಳಸಿಕೊಂಡಾಗ, ಅವುಗಳಿಗೆ ಜತಿಗಳಿಂದ ಕೂಡಿದ ಅಡವುಗಳನ್ನು ಸೇರಿಸುವುದರಿಂದ ಅದಕ್ಕೆ ಜತಿಸ್ವರ ಎಂಬ ಹೆಸರು ಬಂತೆನ್ನಲಾಗಿದೆ. ಅಂಗಾಂಗಗಳ ವಿಕ್ಷೇಪಣೆಯಿಂದ ನರ್ತಿಸುವ ಜತಿಸ್ವರ ಮೈಯಲ್ಲಿ ಲವಲವಿಕೆಯನ್ನು ತಂದು, ಪ್ರೇಕ್ಷಕರಿಗೆ ನೃತ್ತದ ವಿವಿಧ ರೀತಿಯ ಸುಂದರ ವಿನ್ಯಾಸಗಳನ್ನು ತೋರಿಸುತ್ತದೆ.

ಗಾನಕ್ಕೆ ಮುಖ್ಯವಾದದ್ದು ಸ್ವರ ಸ್ಥಾನ. ನೃತ್ತಕ್ಕೆ ಮುಖ್ಯವಾದದ್ದು ಲಯ ಸ್ಥಾನ. ಸಂಗೀತದಲ್ಲಿ ಸ್ವರ ಪ್ರಧಾನ; ಜತಿಗೌಣ. ಅದೇ ನೃತ್ತದಲ್ಲಿ ಜತಿ ಪ್ರಧಾನ; ಸ್ವರಗೌಣ. ಹಾಗಾಗಿ ಸ್ವರಜತಿ ಮತ್ತು ಜತಿಸ್ವರ ಎಂಬುದು ಒಂದರಿಂದ ಹುಟ್ಟಿದ ಇನ್ನೊಂದು ಪೂರಕ ಮತ್ತು ವಿಭಿನ್ನ ಭಾಗಗಳು. ಜತಿಸ್ವರವು ಸಾಹಿತ್ಯ ರಹಿತವಾದದು, ಶುದ್ಧ ನ್ಲತ್ತಜಾತಿಯದು, ಮಧ್ಯಲಯ ವೇಗವುಳ್ಳದ್ದಾಗಿದ್ದು, ಬೆರಳೆಣಿಸುವಷ್ಟು ವಿಳಂಬ ಕಾಲದಲ್ಲಿರುತ್ತದೆ.

ಸಂಗೀತರತ್ನಾಕರ ಮತ್ತು ದೇವೇಂದ್ರನ ಸಂಗೀತಮುಕ್ತಾವಳಿ ಗ್ರಂಥಗಳಲ್ಲಿ ವಿವರಿಸುವ ಯತಿನೃತ್ತ ಅಥವಾ ರಾಗಾನುರಾಗ ಅಥವಾ ರಾಗಾನುರಾಗತಿನೃತ್ತ ಎಂಬ ನೃತ್ತಗಳೇ ಇಂದಿನ ಜತಿಸ್ವರ ಎಂಬ ಅಭಿಪ್ರಾಯ ಕೆಲವರದದ್ದಾದರೆ, ಇನ್ನೂ ಕೆಲವು ವಿದ್ವಾಂಸರು ಸಾದಿರ್ ಸಮಯದಲ್ಲಿಯೇ ಜತಿಸ್ವರದ ರಚನೆಯಾಗಿದೆ ಎನುತ್ತಾರೆ. ಯತಿ ಎಂಬುದು ಜತಿಯ ಹಳೆಯ ಹೆಸರು. ಹಲವು ನಿರ್ದಿಷ್ಟವಾದ ಚಲನೆಗಳು ಜತಿಸ್ವರವನ್ನು ಗುರುತಿಸುತ್ತದೆ ಎನ್ನಲಾಗಿದೆ. ಉದಾಹರಣೆಗೆ:

ಸ್ವರ: ಸಾ ನಿಸರಿಸಾ ನಿದಪದ ನೀ ದಪಮಗಾ ಮಪದನಿ

ಜತಿ: ತಾಕುಜಣಂತರಿ ತತಕುಜಣಂತರಿ ತಕಿಟಝಂ ತಕಿಝಂಝಂತ

ಈ ರೀತಿ ಅನೇಕ ವಿಧವಾಗಿ ಜತಿಗಳನ್ನು ನೃತ್ತದಲ್ಲಿ ಅಳವಡಿಸುವುದು ಸಂಪ್ರದಾಯವಾಗಿ ರೂಢಿಗೆ ಬಂದಿದೆ. ಜತಿ, ಜೊತೆ, ಜೋಡಿ, ಗುಂಪು-ಇವೆಲ್ಲವೂ ಸಮಾನಾರ್ಥಕ ಪದಗಳು.ಸ್ವರಜಾತಿಗಳಲ್ಲಿ ಮೊದಲನೆಯ ಸ್ವರಗುಚ್ಛಕ್ಕೆ ಪಲ್ಲವಿ ಎಂದೂ ಅನಂತರದಲ್ಲಿ ಬರುವ ಸ್ವರ ಸಂಚಾರಕ್ಕೆ ಅನುಪಲ್ಲವಿ, ಚರಣಗಳೆಂದು ಹೆಸರು.

ಸ್ವರಜತಿಗಳನ್ನೂ ನೃತ್ತಕ್ಕೆ ಅಳವಡಿಸುವ ಪುರಾತನ ಪದ್ಧತಿ ಈಗ ಅಪರೂಪವಾಗುತ್ತಿದೆ. ಈಗ ಪ್ರಚಲಿತದಲ್ಲಿರುವ ನೃತ್ಯಕ್ಕೆ ಅಳವಡಿಸಲಾದ ಸ್ವರಜತಿಗಳ ಪೈಕಿ ಬಿಲಹರಿರಾಗ, ಆದಿತಾಳದ ಸಾರಿಗಾಪದಾಸನೀದ (ರಾರವೇಣುಗೋಪಾಲ) ಪ್ರಮುಖವಾದುದು.

ಜತಿಸ್ವರದಲ್ಲಿನ ನಟುವಾಂಗ ಅಲರಿಪುವಿನಂತಿರದೆ ಸ್ವಲ್ಪ ಭಿನ್ನವಾಗಿರುತ್ತದೆ. ಸ್ವರಗಳ ಶಬ್ಢೋಚ್ಚಾರಣೆಯು ನಾಲ್ಕು ಮಾತ್ರ ಕಾಲದಲ್ಲಿದ್ದರೂ ಜತಿಗಳು ಚತುರಶ್ರ, ತಿಶ್ರ, ಖಂಡ, ಮಿಶ್ರ, ಸಂಕೀರ್ಣ, ಇತ್ಯಾದಿ ನಡೆಗಳಿಂದ ಕೂಡಿದ್ದು ಪಾದಗತಿಗಳನ್ನು ನಟುವಾಂಗವು ಸೂಚಿಸುತ್ತದೆ. ಯಾವ ತಾಳ, ರಾಗದಲ್ಲಾದರೂ ಇರುವ ಸ್ವರಜತಿಗಳನ್ನು ಆರಿಸಿಕೊಳ್ಳಬಹುದು. ಆಯಾ ರಾಗದ ಸ್ವರಗಳ ಜೋಡಣೆ ಪೂರಕವಾಗಿರುವಂತೆ ಜತಿಸ್ವರದ ನೃತ್ತವನ್ನು ಹೊಂದಿಸಲಾಗುತ್ತದೆ. ಆದರೆ ಒಂದೇ ತಾಳದ ಬೇರೆ ಬೇರೆ ರಾಗದ ಜತಿಸ್ವರಕ್ಕೆ ಒಂದೇ ರೀತಿಯ ನೃತ್ತವನ್ನು ಹೊಂದಿಸುವುದು ಅಷ್ಟು ಸಮಂಜಸವಲ್ಲ. ತಾಳ ವೈವಿಧ್ಯ ಮತ್ತು ಕೈಕಾಲು ಚಲನೆಗಳಿಂದ ಕೂಡಿದ ಇದು ಅಲರಿಪುವಿಗಿಂತ ತುಸು ಕಷ್ಟಕರವಾದರೂ ಇದನ್ನು ನರ್ತಿಸಲು ಆಯಾಸಕರವಲ್ಲ.

ಸಾಮಾನ್ಯವಾಗಿ ಯಾವುದಾದರೂ ರಾಗದ ಸ್ವರಗಳ ಜೋಡಣೆಯನ್ನು ಆದಿತಾಳ, ರೂಪಕತಾಳ ಅಥವಾ ಮಿಶ್ರಛಾಪುತಾಳಗಳಲ್ಲಿ ಮಾಡಿ ಈ ಸ್ವರಜೋಡಣೆಯ ಆವರ್ತಗಳಿಗೆ ಸರಿಯಾಗಿ ಅಡವುಗಳನ್ನು ಪೋಣಿಸಿ ಮುಕ್ತಾಯ ಅಡವುಗಳಿಂದ ಕೊನೆಗಾಣಿಸಿದರೆ, ಅಂದರೆ ಜತಿಗಳನ್ನು ಕಲ್ಪಿಸಿದರೆ ಜತಿಸ್ವರವಾಗುತ್ತದೆ. ಇದನ್ನು ಎರಡು ಕಾಲಗಳಲ್ಲಿ ಮಾಡಬಹುದು.

ಜತಿಸ್ವರದ ಪಲ್ಲವಿಗೆ ಒಂದು ರಾಗ ನಿಯೋಜಿಸಿ ಆ ಛಂದೋಗತಿಯ ತರಂಗಕ್ಕೆ ತಾಳಗತಿಯ ಚಲನೆ ನೀಡುತ್ತಾರೆ. ಜತಿಯ ನಡೆಯ ವೇಗಕ್ಕೆ ಒಂದು ಗತಿಯನ್ನು ಪ್ರೇರಕ ವಾಗಿಟ್ಟಿರುತ್ತಾರೆ. ಅಡವುಗಳ ರೀತಿ ಮತ್ತು ಹೊಂದಾಣಿಕೆಯಲ್ಲಿ ಕಲಾತಂತ್ರ ಆವಶ್ಯಕ. ಸಾಧಾರಣವಾಗಿ ಒಂದು ಜತಿಯನ್ನು ಮತ್ತು ೨ ಅಥವಾ ೨ಕ್ಕಿಂತ ಹೆಚ್ಚಿನ ಕೋರ್ವೆಗಳನ್ನು, (ಕೋರ್ವೆಯೆಂದರೆ ಜತಿಗಳಂತೆ ಬಾಯಲ್ಲಿ ಪಾಠಾಕ್ಷರಗಳನ್ನು ಹೇಳದೆ ಸ್ವರಗಳಿಗೆ ಸಂಯೋಜಿಸಿದ ಅಡವುಗಳ ಸರಣಿಯನ್ನು ನರ್ತಿಸುವ ಕ್ರಮ) ಅಳವಡಿಸಲಾಗುತ್ತದೆ. ತದನಂತರ ಅನುಪಲ್ಲವಿ, ಚರಣಗಳಿಗೆ ನರ್ತಿಸಲಾಗುತ್ತದೆ. ವಿವಿಧ ಅಡವುಗಳ ಜೋಡಣೆ, ಮತ್ತು ಮುಕ್ತಾಯವಿರುವ ಜತಿಸ್ವರದಲ್ಲಿ ಕೋರ್ವೆಗಳನ್ನು ಪಲ್ಲವಿಯ ಹಾಡುಗಾರಿಕೆಗೆ ಸಂಯೋಜಿಸಲಾಗುತ್ತದೆ. ಇದು ಸಂಯೋಜಕರ ಜಾಣ್ಮೆ, ಸಾಮರ್ಥ್ಯ ಕೌಶಲ್ಯ, ಊಹೆಗೆ ದ್ಯೋತಕವಾಗಿರುತ್ತದೆ. ಜತಿಸ್ವರದ ನಡೆಗಳು ಮತ್ತು ಸಂಗೀತದ ಸ್ವರಗಳಲ್ಲಿ ಮನಸ್ಸಿನ ಭಾವಕ್ಕೆ ಮಿಡಿಯುವ ಹೊಂದಾಣಿಕೆ ಕಲಾವಿದೆಯ ಯೋಗ್ಯತೆಯನ್ನು ತಿಳಿಸುತ್ತದೆ.

ಜತಿಗಳು ಪ್ರಾರಂಭದಲ್ಲಿ ಸಾಮಾನ್ಯವಾಗಿ ಕಂಡರೂ, ಮುಂದೆ ಸಂಕೀರ್ಣತೆ ಹೊಂದಿ ಜಟಿಲಗೊಳ್ಳುತ್ತದೆ. ತಾಂಡವ ಮತ್ತು ಲಾಸ್ಯ ಶೈಲಿಯಲ್ಲಿ ಅಡವುಗಳನ್ನು ಉಪಯೋಗಿಸಬಹುದೆನ್ನಲಾಗಿದ್ದು, ನರ್ತನದ ಸೌಷ್ಟವಕ್ಕೆ ಸರಿಯಾಗಿ ಬಲ ಮತ್ತು ಎಡ ಪಾರ್ಶ್ವಗಳ ಚಲನೆ ಅಡವಿನಲ್ಲಿ ಏಕ ಪ್ರಕಾರತೆಯಿರುತ್ತದೆ. ಸ್ವರಗಳ ಜೋಡಣೆಯೂ ಇದನ್ನು ಅನುಸರಿಸುತ್ತವೆ. ನಡು ನಡುವೆ ಸ್ವರಗಳ ಹೊಂದಾಣಿಕೆಯಲ್ಲಿ ಗತಿಯವೇಗ, ಸ್ವರಗಳ ನಡುವಿನ ದೂರ ಇತ್ಯಾದಿಗಳನ್ನು ಸಮನಾಗಿ ಹಂಚಿ ಹೇಳುವಾಗ ನರ್ತಕಿಯೂ ಇದೇ ಜಾಡನ್ನು ಅನುಸರಿಸತಕ್ಕದ್ದು. ಜತಿಗಳನ್ನು ಹಲಪ್ರಕಾರವಾಗಿ ಮಾಡಿದರೂ, ಅನುಪಲ್ಲವಿ ಮತ್ತು ಚರಣಸ್ವರಗಳಲ್ಲಿ ನರ್ತನವು, ಸ್ವರದ ಭಾವ ಮತ್ತು ನಡೆಯನ್ನು ಅನುಸರಿಸಬೇಕು. ದೇಹವನ್ನು ಬಗ್ಗಿಸುವಲ್ಲಿ ಉತ್ಪ್ಲವನ, ಭ್ರಮರಿಗಳು, ಕೈಚಲನೆ, ಗ್ರೀವಾರೇಚಕಗಳು, ಕಾಲುಗಳ ಚಾರಿಗಳು ನಡೆಗಳು, ಎಲ್ಲವೂ ರಾಗದ ಗಮಕಗಳಿಗೆ ತಾಳದ ಅಕ್ಷರ ಕಾಲಗಳಗೆ ತಕ್ಕಂತಿರಬೇಕು.

ಅಲರಿಪು ಆದಕೂಡಲೇ ನರ್ತಿಸುವ ಈ ನೃತ್ತಬಂಧಕ್ಕೆ ಯಾವ ಅರ್ಥವೂ ಇಲ್ಲ ಎನ್ನುವುದು ಕೆಲವು ನರ್ತಕರ ಅನಿಸಿಕೆ. ಆದರೆ ನರ್ತಕರು ಕೊಡುತ್ತಿರುವ ವಿವರಣೆಯಲ್ಲಿ ನಿಶ್ಚಿತಾಭಿಪ್ರಾಯ ಕಂಡುಬರುವುದಿಲ್ಲವೆಂದು ವಿಮರ್ಶಕರು ತರ್ಕಿಸುತ್ತಾರೆ. ಉದಾಹರಣೆಗೆ: ಜತಿಸ್ವರದಲ್ಲಿ ನಿರ್ದಿಷ್ಟವಾದ ವಸ್ತು ಇಲ್ಲ. ಇದು ಭಾವನಾಪೂರ್ಣವಾದ ಭಂಗಿಗಳನ್ನು ಒಳಗೊಂಡ ತಾಳಾನುಗುಣವಾದ ಚಲನೆ. ತಾಳದ ವಿವಿಧರೂಪಗಳು ಇದರಲ್ಲಿ ಪ್ರದರ್ಶಿಸುತ್ತವೆ ಎಂದು ಹೊಸ ತಲೆಮಾರಿನವರು ವ್ಯಾಖ್ಯಾನಿಸುತ್ತಾರೆ. ಆದರೆ ವಿಮರ್ಶಕರು ಈ ಪ್ರಶ್ನೆಗಳನ್ನು ಮುಂದಿಡುತ್ತಾರೆ.

೧. ನಿರ್ದಿಷ್ಟವಾದ ವಸ್ತು ಇರುವುದಿಲ್ಲ ಎಂದ ಮೇಲೆ ಒಂದು ಕ್ರಮವನ್ನು ಅನುಸರಿಸಲು ಸಾಧ್ಯವೇ?

೨. ಪ್ರಾರಂಭಿಸಿದ ನೃತ್ತವು ಪೂರ್ಣವಾಗಲು ಯಾವುದಾದರೊಂದು ಆಧಾರವಿಲ್ಲದಿದ್ದಲ್ಲಿ ಇದನ್ನು ರೂಪಿಸಲು ಹೇಗೆ ಸಾಧ್ಯ?

೩. ಯಾವ ಉದ್ದೇಶಕ್ಕೂ ಕಟ್ಟುಪಾಡಿಗೂ ಒಳಪಡದ ಶಿಕ್ಷಣವನ್ನು ಶಾಸ್ತ್ರೀಯವೆನ್ನಲಾದೀತೇ?

೪. ಭಾವನಾಪೂರ್ಣವಾದ ಭಂಗಿಗಳನ್ನೊಳಗೊಂಡ ತಾಳಾನುಗುಣವಾದ ಚಲನೆ ಎಂದಾದಲ್ಲಿ ಒಂದು ಭಂಗಿಯು ಭಾವಪೂರ್ಣವಾಗಬೇಕಾದಲ್ಲಿ ಆ ಭಾವಕ್ಕೆ ಪೂರ್ವಸಂದರ್ಭಗಳೇನು? ಮತ್ತು ಯಾವ ಭಾವ?

ಆದ್ದರಿಂದ ವಿಮರ್ಶಕರು ಬೇರೆಯದೇ ನಿಟ್ಟಿನಲ್ಲಿ ತಮ್ಮ ವಾದಕ್ಕೆ ಪುಷ್ಟಿ ದೊರಕಿಸಿಕೊಡುತ್ತಾರೆ- ಅಲರಿಪು ನೃತ್ತವು ಯಾವ ಅಭಿಪ್ರಾಯದಿಂದ ಪ್ರಾರಂಭವಾಯಿತೋ ಅದೇ ರೀತಿ, ಜತಿಸ್ವರವು ಸಹ ಅದೇ ಅರ್ಥದಲ್ಲಿ ತದನುವರ್ತಿಯಾಗಬೇಕಾದದ್ದು ಯುಕ್ತ. ನಾಟ್ಯದ ಉದ್ದಿಷ್ಟ ಗುರಿಯನ್ನು ಮೆಟ್ಟಿಲಿನ ಕ್ರಮದಲ್ಲಿ ಮುಟ್ಟುವುದೇ ಸಾಂಪ್ರಾದಾಯಿಕ ಆಚಾರ್ಯರು ಮಾಡಿರುವ ಉಪಾಯ.

ಜೊತೆಗೆ ಭರತಾಚಾರ್ಯನು ತನ್ನ ಐದನೆಯ ಅಧ್ಯಾಯದಲ್ಲಿ ವಿವರಿಸಿದಂತೆ ಶಾಸ್ತ್ರೀಯ ನಾಟ್ಯದಲ್ಲಿ ಸೇರಿಕೊಂಡಿರುವ ಅಂಶಗಳು ವೇದವಿದ್ಯೆ, ಇತಿಹಾಸ, ಕರ್ಮ, ಶಿಲ್ಪ, ಯೋಗ ಇವುಗಳಲ್ಲಿ ಯಾವುದಾದರೂ ಒಂದು ಭಾಗವು ಕಂಡುಬಂದರೂ ಶಾಸ್ತ್ರೀಯವೆನ್ನಲು ಅಡ್ಡಿಯಿಲ್ಲ. ಹಾಗಲ್ಲದೇ ಹೋದಲ್ಲಿ ತಾಳ- ಲಯಬದ್ಧವಾಗಿ ಕುಣಿಯುವ ಕುಣಿತವೆಲ್ಲಾ ಭರತನಾಟ್ಯವೆಂದೂ ಶಾಸ್ತ್ರೀಯವೆಂದೂ ಹೇಳಬೇಕಾಗುತ್ತದೆ. ಆದ್ದರಿಂದ ಶಾಸ್ತ್ರದ ಯಾವುದಾದರೊಂದು ಅಂಶವು ಪ್ರಧಾನವಾಗಿಯೂ, ಉಳಿದವು ರಂಜನಾದೃಷ್ಟಿಯಿಂದ ಸೇರಿ ನೃತ್ತ-ನೃತ್ಯಗಳು ರೂಪುಗೊಂಡಲ್ಲಿ ಅದನ್ನು ಶಾಸ್ತ್ರೀಯವೆಂದು ಒಪ್ಪಿಕೊಳ್ಳಬಹುದು ಎನ್ನಲಾಗಿದೆ. ಈ ನಿಟ್ಟಿನಲ್ಲಿ ತರ್ಕಿಸಿದರೆ ಜತಿಸ್ವರದಲ್ಲಿನ ನೃತ್ತವಿನ್ಯಾಸಗಳು ಅರ್ಥಪೂರ್ಣವೂ, ನಿರ್ದಿಷ್ಟ ಅಭಿಪ್ರಾಯವನ್ನು ವ್ಯಕ್ತಪಡಿಸುವವೂ ಎಂದು ಹೇಳಬಹುದು. ಇದನ್ನು ಇಂದಿಗೂ ಪುರಾತನ ಪದ್ಧತಿ, ಸಂಪ್ರದಾಯ ನಿಷ್ಟತೆಯನ್ನು ಅನುಸರಿಸಿಕೊಂಡು ಬರುತ್ತಿರುವ ಹಳೆಂii ಕಾಲದ ಕಲಾವಿದೆಯರು ಪ್ರದರ್ಶಿಸುವ ಹಸ್ತವಿನ್ಯಾಸಗಳನ್ನು ಪರಿಶೀಲಿಸಿದಲ್ಲಿ ಪೂರ್ವಾಚಾರ್ಯರ ಅಭಿಪ್ರಾಯ ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಮಂಡಿಸುತ್ತಾರೆ ವಿಮರ್ಶಕರು.

Leave a Reply

*

code