ಅಂಕಣಗಳು

Subscribe


 

ಜಾನಪದ ಮನಸ್ಸು

Posted On: Thursday, November 6th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


– ಶ್ರೀಲಕ್ಷ್ಮಿ ಎಂ. ಭಟ್

ಕಲೆ ಮನುಷ್ಯನ ಜೀವಂತಿಕೆಯ ಉತ್ಕೃಷ್ಟ ಸಂಕೇತ. ಜಾನಪದ ಜನಪದದ, ಸಮುದಾಯಗಳ ಜೀವಂತಿಕೆಯ ಶ್ರೇಷ್ಠ ಪ್ರತಿಫಲನ. ಶಾಸ್ತ್ರೀಯ ಪರಂಪರೆಗಳಿಗಿಂತ ಭಿನ್ನವಾಗಿ ಜನಪದ ರಂಗ ಸಮುದಾಯಕ್ಕೆ ಒಂದು ವಿಧದ ಸಮಷ್ಟಿ ಪ್ರಜ್ಞೆ (ಯುನಿವರ್ಸಾಲಿಟಿ) ವ್ಯಾಪಕತೆ ಇದೆ. ಜನಪದ ಕಲೆಗಳಿಗೆ ವರ್ಗ ಧರ್ಮಗಳ ತಾರತಮ್ಯವಿಲ್ಲ.

ಜಾನಪದ ಹಾಗೂ ಶಾಸ್ತ್ರೀಯ ಕಲಾಪ್ರಕಾರಗಳ ನಡುವಣ ಸಂಬಂಧ ಸಂಕೀರ್ಣವಾದದು. ಅವು ಒಂದು ಇನ್ನೊಂದರ antithesis ಅಲ್ಲ. ಬದಲಿಗೆ ಇದು ಕೊಡುಕೊಳ್ಳುವಿಕೆಯ ಸಂಬಂಧ. ಜಾನಪದ ಕಲೆಗಳ ಶಾಸ್ತ್ರೀಯ ಪ್ರಕಾರಗಳ ಉಗಮಕ್ಕೆ ಮೂಲ. ಅಂತೆಯೇ ಇಂದಿನ ಜಾನಪದ ಕಲೆಗಳಿಗೆ ಶಾಸ್ತ್ರೀಯದ ಪ್ರೇರಣೆಯೂ ಮಹತ್ವದ್ದು. ಗ್ರೀಕ್ ಟ್ರಾಜಿಡಿ ಹಾಗೂ ಕಾಮಿಡಿಗಳ ಮೂಲವೇ ಅಲ್ಲಿನ ಫಲವತ್ತತೆ ಕುರಿತಾದ ಆಚರಣೆಗಳು (fertility rituals) ಹಾಗೂ ಗ್ರಾಮ್ಯ ದೈವಗಳು. ಭಾರತೀಯ ಶಾಸ್ತ್ರೀಯ ರಂಗಭೂಮಿ ಬೆಳೆದದ್ದು ಕೂಡ ಇಲ್ಲಿನ ಜಾನಪದ ಉತ್ಸವ ಆಚರಣೆಗಳ ಅಂಶಗಳಿಂದಲೇ. ಆದರೆ ಗ್ರಾಮೀಣ ಭಾಗದಲ್ಲಿ ಇವತ್ತು ಪ್ರಚಲಿತವಿರುವ ರಂಗ ಕಲೆಗಳು ಕೇವಲ ನಾಲ್ಕಾರು ಶತಮಾನಗಳಷ್ಟು ಹಿಂದಿನವು. ಜಾನಪದ ಎಂದಿಗೂ ನಿಂತ ನೀರಲ್ಲ. ಈ ಬದಲಾವಣೆ ಜಾನಪದ ಚಲನಶೀಲತೆಗೆ ಸಾಕ್ಷಿ.

ಹತ್ತನೆಯ ಶತಮಾನದ ಬಳಿಕೆ ಸಂಸ್ಕೃತದ ಪ್ರಾಬಲ್ಯ ಕಡಿಮೆಯಾಗಿ ದೇಸೀ ಭಾಷೆಗಳು ಬಲಗೊಂಡಾಗ ಸಂಸ್ಕೃತ ರಂಗ ಭೂಮಿ ಕೆಲಕಾಲ ಜಡಗೊಂಡಿತ್ತು. ಆಗ ಜಾನಪದ, ಪುರಾಣ ಕಥೆಗಳು, ದಂತ ಕಥೆಗಳು ಪ್ರದರ್ಶನಗಳು ಆ ಕೊರತೆಯನ್ನು ತುಂಬಿದವು. ಅಲ್ಲದೇ ಪುರಾಣ ಹಾಗೂ ಸಂಸ್ಕೃತ ನಾಟಕಗಳ ಕಥೆಗಳು ಜಾನಪದದ ಮೂಲಕವೇ ಜನಪ್ರಿಯತೆ ಗಳಿಸಿದವು. ಇಂದಿಗೂ ಸಂಸ್ಕೃತದ ಸೂತ್ರಧಾರ ಜಾನಪದದಲ್ಲಿ ರಂಗಣ್ಣ, ಭಾಗವತನಾಗಿ ಬಂದರೆ, ಅಲ್ಲಿನ ವಿದೂಷಕ ಹನುಮನಾಯಕ, ಕೋಡಂಗಿ, ಕೋಮಾಲಿ, ಜೂತಾನ್-ಮಿಯಾನ್ ಆಗಿ ಪ್ರತಿನಿಧಿಸಲ್ಪಡುತ್ತಾನೆ. ಇದು ಜಾನಪದ-ಶಾಸ್ತ್ರೀಯ ಕೊಡುಕೊಳ್ಳುವಿಕೆಗೆ ಸಾಕ್ಷಿ.

ಜಾನಪದವು ಸಮಾಜದ ಜನರ ದೈನಂದಿನ ಚಟುವಟಿಕೆಗಳಿಗೆ ಹೆಚ್ಚು ಹತ್ತಿರವಾದದ್ದು. ಆದ್ದರಿಂದಲೇ ಎಲ್ಲ ವರ್ಗದ ಜನಗಳಿಗೂ ಸಮಾನವಾಗಿ ಆತ್ಮೀಯವೆನ್ನಿಸುತ್ತದೆ. ಅವು ಮನುಷ್ಯನ (ಅವನ ಎಲ್ಲ ವೈರುಧ್ಯ ಹಾಗೂ ವೈವಿಧ್ಯಮಯ ಕ್ರಿಯೆಗಳನ್ನೊಳಗೊಂಡಂತೆ), ಸಹಜ ಅಸ್ತಿತ್ವವನ್ನು ಚಿತ್ರಿಸುತ್ತವೆ.

ಮಹಾರಾಷ್ಟ್ರದ ಕಲಾ ಪ್ರದರ್ಶನಗಳನ್ನು ಗಮನಿಸಿದರೆ ಅಂದಿನ ಪೇಶ್ವಾ-ಮರಾಠರ ಹೀರೋಯಿಸಮ್, ಸಂಗೀತ ಮೋಹಪೂರ್ವಕ ಆಶಾವಾದ, ಛಲ, ಪೌರುಷತ್ವ, ಸ್ತ್ರೀ ಚಿತ್ರಗಳ ಬಗ್ಗೆ ತಿಳಿಯುತ್ತದೆ. ಉತ್ತರದ ಬೃಹತ್ ಕಣಿವೆ ಸಂಸ್ಕೃತಿ, ತತ್ವಶಾಸ್ತ್ರ, ಪರಂಪರಾಗತ ನೈತಿಕತೆ, ರಾಮಲೀಲಾ ಕೃಷ್ಣಲೀಲಾಗಳಲ್ಲಿ ಪ್ರತಿಬಿಂಬಿತವಾಗುತ್ತದೆ. ಬಂಗಾಲದ ಜಾತ್ರಾ ತೀವ್ರ ದೇಶಭಕ್ತಿ, ರಂಗಪರಂಪರೆಯ ಸಭ್ಯತೆ, ಕೌಶಲ್ಯ ಮತ್ತು ವೈಷ್ಣವ ಪಂಥದ ಪ್ರಭಾವಗಳನ್ನು ಅಭಿವ್ಯಕ್ತಪಡಿಸುತ್ತದೆ. ನಮ್ಮ ಯಕ್ಷಗಾನ, ಇಲ್ಲಿನ ದೇವಾಲಯ ಸಂಸ್ಕೃತಿ, ಆಚರಣೆಗಳು, ಸಾಮಾಜಿಕ ಜೀವನವಿಧಾನದ ಹೊಳಹುಗಳನ್ನು ಸಾದರಪಡಿಸುತ್ತದೆ.

ಒಳಾಂಗಣ ಪ್ರೇಕ್ಷಾಂಗಣದ ಕಲ್ಪನೆ ನಮ್ಮಲ್ಲಿಗೆ ಹೊರಗಿನಿಂದ ಬಂದದ್ದು. ಬ್ರಿಟಿಷರು ತಮ್ಮೊಡನೆ ಚಾತ್ರದ ಚೌಕಟ್ಟಿನಂತಹ ರಂಗ ಭೂಮಿಯ (Picture frame stage) ಅಥವಾ ಒಳಾಂಗಣ ರಂಗ ವ್ಯವಸ್ಥೆಯ ಕಲ್ಪನೆಯನ್ನು ತಂದರು. ಭಾರತದ ಮಹಾನಗರಗಳಲ್ಲಿ ಇಂತಹ ಥಿಯೇಟರಿನ ವ್ಯವಸ್ಥೆಗಳನ್ನು ಮಾಡಲಾಯಿತು.

ಆದರೆ ಇಂದಿಗೂ ಇಲ್ಲಿನ ಏಳುನೂರು ಸಾವಿರ ಹಳ್ಳಿಗಳಲ್ಲಿ ಜಾನಪದ ಕಲೆಗಳು ಹೊರಾಂಗಣ ಪ್ರದರ್ಶನದಿಂದಲೇ ಪ್ರೇಕ್ಷಕರನ್ನು ರಂಜಿಸುತ್ತಿವೆ. ಇದು ಹಾಡು, ನೃತ್ಯ, ಸಂಭಾಷಣೆ, ಅಭಿನಯ, ಆಕ್ಷನ್ ಹೀಗೆ ಬಹುಪ್ರಕಾರಗಳನ್ನು ಒಟ್ಟಿಗೇ ಒಂದೇ ಪ್ರದರ್ಶನದಲ್ಲಿ ಪ್ರೇಕ್ಷಕರಿಗೆ ನೀಡಬಲ್ಲ ಜಾನಪದ ಕಲೆಗಳ ಶಕ್ತಿಯನ್ನು ಹೆಚ್ಚಿಸಿದೆ. ಹೊರಾಂಗಣ ಪ್ರೇಕ್ಷಾಂಗಣ, ಅವುಗಳ ರಂಗ ಕಲ್ಪನೆಯ ಕ್ರಿಯಾಶೀಲತೆಗೆ ಹೊಸ ಆಯಾಮಗಳನ್ನು ಒದಗಿಸಿದೆ. ಇಂಥ ಜಾನಪದ ಹಾಗೂ ಇತರೆ ಪ್ರಕಾರದ ನೃತ್ಯ ಸಂಗೀತ ಪ್ರದರ್ಶನಗಳ ಮಹತ್ವವನ್ನು ಪುನರ್ ಶೋಧಿಸಿವುದು ಈ ಲೇಖನ ಮಾಲಿಕೆಯ ಉದ್ದೇಶ.

Leave a Reply

*

code