ಅಂಕಣಗಳು

Subscribe


 

ಜಾವಳಿ

Posted On: Thursday, November 6th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


– ವೈಷ್ಣವಿ . ಎನ್

ರೂಢಿಯಲ್ಲಿರುವ ಆಡುಭಾಷೆಯ ಮಾತುಗಳನ್ನು ಅರ್ಥೈಸಿಕೊಳ್ಳುವುದು ಸುಲಭ. ಅದಕ್ಕೆ ಉದಾಹರಣೆ ಸಾಂಪ್ರದಾಯಿಕ ಭರತನಾಟ್ಯದಲ್ಲಿನ ನಾದ ಮಾಧುರ್ಯ, ಶೃಂಗಾರ ಭಾವ, ಚುರುಕು ನಡೆ, ಆಹ್ಲಾದಕರ ಸನ್ನಿವೇಶದ ಪ್ರತಿರೂಪವಾದ ನೃತ್ಯಬಂಧ- ಜಾವಳಿ. ಇದರ ನಡೆಗಳು ಜನರನ್ನು ಸುಲಭವಾಗಿ ಆಕರ್ಷಿಸಬಲ್ಲವಾಗಿದ್ದು, ನೋಡಲು, ಕೇಳಲು ರಂಜಕವೂ ಕೂಡ ! ಸುಲಭ ಶೈಲಿ ಮತ್ತು ಲಯ, ಮಧ್ಯಮ ಕಾಲದ ಹಾಡುಗಾರಿಕೆಯ ಜಾವಳಿಗಳ ಮೂಲಕ ಮಾನವನ ಸಹಜ ಭವನೆಗಳ ಏರಿಳಿತ ಸ್ಪಷ್ಟವಾಗುತ್ತವೆ. ದ್ರಾವಿಡ ಭಾಷೆಗಳಲ್ಲಿ ಸುಲಲಿತವಾಗಿ, ಸರಳವಾಗಿ ನಿರೂಪಿತಗೊಂಡ ಈ ಅಭಿನಯ ಭಾಗ ನೃತ್ಯಕ್ಷೇತ್ರಕ್ಕೆ ಕರ್ನಾಟಕದ ಕೊಡುಗೆ ಎಂದರೂ ತಪ್ಪೇನಿಲ್ಲ. ಅದರಲ್ಲೂ ಜಾವಳಿಗೂ ಮೈಸೂರಿಗೂ ಅವಿನಾಭಾವ ಸಂಬಂಧ! ಸರ್ವರಿಗೂ ಪ್ರಿಯವಾಗುವ ಸಂಗೀತಮಯ, ರಂಜನೀಯ ರಚನೆಗಳು ಪ್ರಾರಂಭದಲ್ಲಿ ಮುಮ್ಮುಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಕಂಡುಬಂದಿತ್ತು.

ಜಾವಳಿಗಳಲ್ಲಿ ಶೃಂಗಾರಕ್ಕೆ ಪ್ರಾಧಾನ್ಯ. ಪ್ರಾರಂಭದಲ್ಲಿ ವಿರಕ್ತಭಾವದಿಂದ ಕೂಡಿದ್ದರೂ ಕಾಲಕ್ರಮೇಣ ಸಂಪೂರ್ಣವಾಗಿ ಶೃಂಗಾರಭಾವಕ್ಕೆ ಅರ್ಪಿಸಿಕೊಂಡ ಜಾವಳಿಗಳು ಪ್ರೇಮವನ್ನು ಸಾಮಾನ್ಯ ರೀತಿಯಿಂದ ಕಾಣಿಸುವ ಪದರಚನೆಯೆನಿಸಿಕೊಂಡಿವೆ. ಇವುಗಳಲ್ಲಿರುವ ಸಾಹಿತ್ಯ ವಿಷಯ ಐಹಿಕ ಸಂಬಂಧಿಯಾಗಿರುವುದರಿಂದ ಸಾಹಿತ್ಯವು ಪದಂಗಳಂತೆ ಗಂಭೀರ ಮಟ್ಟದಲ್ಲಿದೆಯಲ್ಲಿಲ್ಲವೆನಿಸಿಕೊಂಡಿವೆ. ಪದಂಗಳಲ್ಲಿ ಕಾಣಸಿಗುವ ಮಧುರ, ಉನ್ನತ ಪಾರಮಾರ್ಥಿಕ ಭಾವಗಳಿಗೆ ವ್ಯತಿರಿಕ್ತವಾಗಿ ಲೌಕಿಕ ಪ್ರೇಮ-ಕಾಮಗಳನ್ನು ದೃಷ್ಟಿಯಲ್ಲಿರಿಸಿದ ಉಲ್ಲಾಸಭರಿತ, ರಸಯುಕ್ತ ಆಕರ್ಷಕ ರಚನೆಗಳು ಇವುಗಳದ್ದು. ನಾಯಿಕಾ-ನಾಯಕ ಭಾವಗಳ ನಡುವಿನ ಬಾಂಧವ್ಯದಲ್ಲಿ ಉನ್ನತ ಮಟ್ಟ ಪ್ರೇಮ, ಗಾಂಭೀರ್ಯ, ಗೌರವದ ಅಂಶಗಳು ಗೌಣ. ಪದಗಳಲ್ಲಿರುವಂತೆ ನಾಯಕನನ್ನು ಪರಮಾತ್ಮನೆಂದು ಭಾವಿಸಿ, ಆತ್ಮಲೀನವಾಗುವುದರ ಬದಲಿಗೆ, ಜಾವಳಿಗಳಲ್ಲಿ ಲೌಕಿಕ ಅನುರಾಗ, ಸಾಮಾನ್ಯ ಪ್ರೇಮದ ಛಾಯೆ ಹೆಚ್ಚು. ನಾಯಕನಿದಿರು ನಾಯಕಿಯು ನಿಸ್ಸಂಕೋಚವಾಗಿ ತನ್ನ ಮನಸ್ಸಿನ ಭಾವ, ಅವಸ್ಥೆಗಳನ್ನು ಅಭಿವ್ಯಕ್ತಿಸಬಲ್ಲವಳು. ಸಾಮಾನ್ಯವಾಗಿ ಹಿಂದಿನ ಕಾಲದಲ್ಲಿ ವೇಶ್ಯೆಯರು ತಮ್ಮ ಪ್ರೇಮ ಪೋಷಕರ ಬಗೆಗೆ ಪ್ರದರ್ಶಿಸುತ್ತಿದ್ದ ಪ್ರೇಮ-ಕಾಮ-ಸಿಟ್ಟು-ಸೆಡವು ಮುಂತಾದ ಸಂಗತಿಗಳು ಜಾವಳಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿವೆ. ಹಾಗಾಗಿ ಇಲ್ಲಿ ನಾಯಕಿಯು ಸಾಮಾನ್ಯೆ ಅಥವಾ ವೇಶ್ಯೆ.!

೧೫ನೇ ಶತಮಾನದಲ್ಲಿ ಬಳಸಲಾಗುತ್ತಿದ್ದ ಚಾವಡಿ ಇಲ್ಲವೇ ಜಾವಡಿ ಎಂಬ ಶಬ್ದಗಳಿಂದ ಜಾವಳಿ ಎಂಬುದು ಉತ್ಪತ್ತಿಯಾಗಿದೆಯೆನ್ನಲಾಗಿದ್ದು, ಮರಾಠಿಯಲ್ಲಿ ಕಂಡು ಬರುವ ಜವಲಿಯೆಂಬ ಶಬ್ದವು ಕಣ್ಣಿನಲ್ಲಿ ಪ್ರಣಯ ಸಂಕೇತ ಬೀರುವ ಕ್ರಿಯೆಯೆಂಬ ಅರ್ಥವನ್ನೂ ಸೂಚಿಸಿ ಜಾವಳಿಗಳ ಇತಿಹಾಸಕ್ಕೆ ತನ್ನ ಕೊಡುಗೆಯನ್ನು ಸ್ಪಷ್ಟಪಡಿಸುತ್ತದೆ. ಮರಾಠಿಗರಿಗೆ ತುಂಬಾ ಪ್ರಿಯವಾದ ಪ್ರೇಮಗೀತಗಳು, ಹಿಂದೂಸ್ತಾನಿ ದೇಶೀ-ಉಲ್ಲಸಿತ ರಾಗಗಳ ಪ್ರಭಾವದಿಂದ ಹುಟ್ಟಿತೆನ್ನಲಾಗಿದ್ದು, ತಂಜಾವೂರಿನ ರಾಜ, ನಾಯಕ, ಜಮೀನ್ದಾರರ ಮನ್ನಣೆ ಗಳಿಸಿದವು. ಇವುಗಳಿಗೆ ಆಗಿನ ಕಾಲದಲ್ಲಿ ಬಂದು ನೆಲೆಸಿದ್ದ ಹಿಂದೂಸ್ತಾನಿ ಸಂಗೀತತಜ್ಞರ ಸ್ಫೂರ್ತಿಯೂ ಇತ್ತೆನ್ನಲಾಗಿದೆ. ಹಾಗಾಗಿ ಮರೆಯಲ್ಲಿ ಜಾವಳಿಗಳು ಹಿಂದೂಸ್ತಾನಿ ಸಂಗೀತದ ಗಜಲ್‌ಗಳನ್ನು ಹೋಲುತ್ತವೆ.

ಗಿರಿರಾಜ, ಸೋಮಕವಿ ಮುಂತಾದವರು ತಮ್ಮ ಪೋಷಕರನ್ನು ಹೊಗಳಿ ಬರೆದ ಸಾಹಿತ್ಯಗಳೇ ಜಾವಳಿಗಳ ರಚನೆಗೆ ಕಾರಣವಾಯಿತೆನ್ನಬಹುದು. ೧೮೨೦ ರ ಅಂದಾಜಿನಲ್ಲಿದ್ದ ಸುಬ್ಬರಾಮಯ್ಯ, ಪಟ್ಟಾಭಿರಾಮಯ್ಯ, ಪಟ್ಣಮ್ ಸುಬ್ರಹ್ಮಣ್ಯ ಅಯ್ಯರ್, ತಿರುಪತಿ ನಾರಾಯಣಸ್ವಾಮಿ, ಚಿನ್ನಯ್ಯ, ಶಾಲ್ಯಂ ನರಸಯ್ಯ, ವೆಂಕಟರಮಣಯ್ಯ, ಧರ್ಮಪುರಿ ಸುಬ್ರಾಯರು ಮತ್ತಿತರರು ಜಾವಳಿಗಳ ರಚನಾಕಾರರಲ್ಲಿ ಮುಖ್ಯರು. ಇತ್ತೀಚಿನ ದಿನಗಳಲ್ಲೂ ಎಲ್ಲಾ ಭಾಷೆಗಳಲ್ಲಿಯೂ ಜಾವಳಿಗಳು ರಚನೆಗೊಂಡಿವೆ.

ಪಲ್ಲವಿ, ಅನುಪಲ್ಲವಿ, ಚರಣಗಳಿಂದ ಕೂಡಿರುವ ಜಾವಳಿಗಳಲ್ಲಿ ಕೆಲವು ರಚನೆಗಳು ಚಿಟ್ಟೆಸ್ವರಗಳನ್ನೂ ಹೊಂದಿರುತ್ತವೆ. ಹಿಂದಿನ ಕಾಲದಲ್ಲಿ ನರ್ತಕಿಯರೇ ಹಾಡಿಕೊಂಡು ಅಭಿನಯಿಸುವುದು ಪದ್ಧತಿಯಾಗಿತ್ತು. ಮೈಸೂರು ಪದ್ಧತಿಯ ಭರತನಾಟ್ಯ ಶೈಲಿಯಲ್ಲಿ ಜಾವಳಿಗಳ ನಾಯಿಕೆಯನ್ನು ಪ್ರತಿಪಾದಿಸುವ ಕಂದಪದ್ಯಗಳನ್ನು ಜಾವಳಿಗೆ ಪೀಠಿಕೆಯಾಗಿ ಅಭಿನಯಿಸಲಾಗುತ್ತಿತ್ತು. ಬೇಹಾಗ್, ಕಾಫಿ, ಆನಂದಭೈರವಿ, ಕಾಮಾಚ್, ಸುರುಟಿ, ಪರಸ್, ಕಲ್ಯಾಣಿ, ಜಂಜೂಟಿ ಮುಂತಾದ ರಕ್ತಿ ಹಾಗೂ ದೇಶೀರಾಗಳ ಬಳಕೆ ಇದರಲ್ಲಿ ಹೆಚ್ಚು. ಸಂಗೀತದ ಶೋಭೆಯನ್ನು ವರ್ಧಿಸುವ ಇವನ್ನು ಸಂಗೀತ ಕಚೇರಿಗಳ ಕೊನೆಯಲ್ಲೂ ಹಾಡುವ ಕ್ರಮವಿದೆ.

Leave a Reply

*

code