ಅಂಕಣಗಳು

Subscribe


 

ತಿಲ್ಲಾನ

Posted On: Monday, October 20th, 2008
1 Star2 Stars3 Stars4 Stars5 Stars (3 votes, average: 4.33 out of 5)
Loading...

Author: ಮನೋರಮಾ. ಬಿ.ಎನ್

ಸಾಮಾನ್ಯವಾಗಿ ಭರತನೃತ್ಯ ಕಾರ್ಯಕ್ರಮದಲ್ಲಿ ಸಹೃದಯರಿಗೆ ಹೆಚ್ಚು ಪರಿಚಿತವಿರುವ, ಪ್ರೇಕ್ಷ್ಶಕರು ಹೆಚ್ಚು ಕಾಯುವ, ಆನಂದಿಸುವ, ಮೆಚ್ಚುಗೆ ನೀಡುವ ನೃತ್ತಬಂಧವೆಂದರೆ ಯಾವುದು?- ಉತ್ತರ ತಿಲ್ಲಾನ. ಹೌದು ತಾನೇ ! ತಿಲ್ಲಾನದ ವೈಶಿಷ್ಟ್ಯವೇ ಅಂತಹುದು. ಅವು ಹರ್ಷವನ್ನು ಉಂಟುಮಾಡುವ ಆನಂದದಾಯಕ, ಆಹ್ಲಾದಕರ, ಉತ್ಸಾಹಭರಿತ, ಚುರುಕಾದ ಚಲನೆಗಳು. ನೃತ್ಯ ಮತ್ತು ಕರ್ಣಾಟಕ ಸಂಗೀತ ಕಛೇರಿಗಳೆರಡರಲ್ಲೂ ಕಂಡುಬರುವ ಈ ತಿಲ್ಲಾನಗಳನ್ನು ಆನಂದಿಸಲು ವೀಕ್ಷಕರು ಎಂದೆಂದಿಗೂ ಉತ್ಸುಕರಾಗಿರುತ್ತಾರೆ.

ತಿಲ್ಲಾನವೆಂದರೆ ನಾದ ಲಯಗಳಿಂದ ಕೂಡಿದ ಸಂಗೀತಕ್ಕೆ ಸುಂದರವಾದ ಶಿಲ್ಪಭಂಗಿಗಳನ್ನು ಮತ್ತು ಶೊಲ್ಕಟ್ಟುಗಳನ್ನು ಅಳವಡಿಸಿ; ಶೀಘ್ರಗತಿಯಲ್ಲಿ ರೂಪಿಸಿರುವ ರಚನೆ. ’ಮನಸ್ಸಿನ ಅಲೆದಾಟ ಬಡಿದಾಟಗಳೆಲ್ಲವೂ ಕಳೆದು ಭಯ ಚಿಂತಾದಿಗಳಿಲ್ಲದ ಮನಸ್ಸಿನ ಸ್ಥಿತಿಯನ್ನು, ಹಾಗೂ ಅದರಿಂದ ದೊರೆತ ಸುಖವನ್ನು ಮತ್ತು ಏಕಾಕರವಾಗಿ ಹರಡಿರುವ ಆನಂದವನ್ನು ತನ್ನ ವಿನ್ಯಾಸಗಳಿಂದ ಪ್ರದರ್ಶಿಸುವ ಕಲಾವಿದೆಯು ತನ್ನ ವಿದ್ಯಾ ಸಂಪೂರ್ಣತೆಯ ಪರಿಪೂರ್ಣತೆಯನ್ನು ಸೂಚಿಸುವ ಸಲುವಾಗಿ ಆಯ್ದುಕೊಂಡ, ಅಂತಿಮವಾಗಿ ಶಾಂತಿ ರಸಕ್ಕೆ ತುಡಿಯುವ ನೃತ್ತಬಂಧ’ ಎನ್ನುವುದು ನೃತ್ಯ ವಿದ್ವಾಂಸ ವಿ. ಎಸ್. ಕೌಶಿಕ್ ಅವರ ನುಡಿ.

ತಿಲ್ಲಾನವು ಭರತನಾಟ್ಯ ಪ್ರದರ್ಶನಕ್ಕೆ ಯೋಗ್ಯ ಅಂತ್ಯವನ್ನು ಒದಗಿಸುವಂತದ್ದು. ಅಲಾರಿಪು ನಾಂದಿಯಾದರೆ ತಿಲ್ಲಾನ ಮಂಗಲಪ್ರದವಾದ ಮುಕ್ತಾಯ ನೀಡುವ ನೃತ್ತಬಂಧ. ಭಾವಾಭಿನಯದ ನಿಧಾನಗತಿಯ ಪದ-ಜಾವಳಿ-ದೇವರನಾಮ-ಅಷ್ಟಪದಿ ಅಭಿನಯಗಳ ಆನಂತರ ಭಾವುಕರ ಮನಸ್ಸು ಮತ್ತಷ್ಟು ಭಾವಪೂರ್ಣವಾಗಿ ಇಡುವ ಸಾಹಿತ್ಯದಿಂದೊಡಗೂಡಿದ ಚೈತನ್ಯದಾಯಕ ನೃತ್ತ. ಪಾಠಿ ಲಕ್ಷಣದ ವಿದ್ವತ್ಪೂರ್ಣ ರಚನೆಗಳಾದ ಇವು, ಹಿಂದೂಸ್ಥಾನಿ ಸಂಗೀತದಲ್ಲಿ ಹಾಡುವ ತರಾನಾ ಎಂಬ ಶಬ್ದದಿಂದ ಉತ್ಪತ್ತಿಯಾಗಿದೆ ಎಂಬ ಅಭಿಪ್ರಾಯ ಕೆಲವರದ್ದಾದರೆ, ಸಾವಿರಾರು ವರ್ಷಗಳ ಹಿಂದೆ ಕೈವಾರ (ಅವನದ್ಧ ವಾದ್ಯ(ಚರ್ಮವಾದ್ಯ)ಗಳಿಂದ ಉದ್ಭವವಾಗುವ ಪಾಠಾಕ್ಷರಗಳು) ವೆಂಬ ಹೆಸರಿನಲ್ಲಿ ಸಂಗೀತ ಪ್ರಬಂಧದಿಂದ ಉಂಟಾದ ರಚನೆಯೆನ್ನುವುದು ಇನ್ನೂ ಕೆಲವರ ಅಭಿಮತ. ತಿರಿತಿಲ್ಲಾನ ಎಂಬ ದೇಸೀ ಪ್ರಬಂಧದಿಂದ ಇದು ಹುಟ್ಟಿದೆ ಎನ್ನುವುದು ಮತ್ತೊಂದು ನಂಬಿಕೆ. ತಿಲ್ಲಾನದ ’ತಾನತಂದಾನ’ ರೂಪ ಜನಪದ ಹಾಡುಗಳಲ್ಲಿಯೂ ಕಂಡುಬರುತ್ತದೆ ಎನ್ನುವುದು ಇನ್ನೊಂದು ವೈಶಿಷ್ಟ್ಯ.

ಪ್ರಪ್ರಥಮವಾಗಿ ತಿಲ್ಲಾನವು ತಂಜಾವೂರಿನ ವೀರಭದ್ರಯ್ಯ ಅವರಿಂದ ರಚಿಸಲ್ಪಟ್ಟಿತು. ನಂತರ ತಂಜಾವೂರು ಸಹೋದರಿಂದ ಇವುಗಳು ಸಾಂಪ್ರದಾಯಿಕ ನೃತ್ಯ ಪ್ರದರ್ಶನಕ್ಕೆ ಅಳವಡಿಸಲ್ಪಟ್ಟವು. ಕಾಲಕ್ರಮದಲ್ಲಿ ಸ್ವಾತಿ ತಿರುನಾಳ್, ಮಹಾ ವೈದ್ಯನಾಥ ಅಯ್ಯರ್, ರಾಮನಾಡು ಶ್ರೀನಿವಾಸ ಅಯ್ಯಂಗಾರ್, ಲಾಲ್‌ಗುಡಿ ಜಯರಾಮನ್, ಡಾ| ಬಾಲಮುರಳೀ ಕೃಷ್ಣ, ಕೃಷ್ಣಸ್ವಾಮಿ ಅಯ್ಯ, ಕನ್ನುಸ್ವಾಮಿ, ಊತ್ತುಕಾಡು ವೆಂಕಟಸುಬ್ಬಯ್ಯರ್, ಪಟ್ನಂ ಸುಬ್ರಹ್ಮಣ್ಯ ಅಯ್ಯರ್, ಮಧುರೈ ಕೃಷ್ಣನ್, ಕುನ್ರಕುಡಿ ಕೃಷ್ಣ ಅಯ್ಯರ್, ಮಹಾರಾಜಪುರಂ ಸಂತಾನಂ ಅವರ ತಿಲ್ಲಾನಗಳೂ ಜನಪ್ರಿಯವೆನಿಸಿದವು. ಮೈಸೂರು ರಾಜರುಗಳ ಕಾಲದಲ್ಲಿ ಕನ್ನಡದಲ್ಲೂ ತುಂಬಾ ತಿಲ್ಲಾನಗಳು ರಚನೆಯಾಯಿತು. ಮೈಸೂರು ಸದಾಶಿವರಾವ್, ಮೈಸೂರು ವಾಸುದೇವಾಚಾರ್ಯ, ಮೈಸೂರು ವೆಂಕಟಗಿರಿಯಪ್ಪ, ಮುತ್ತಯ್ಯ ಭಾಗವತರ್, ವೀಣೆ ಶೇಷಣ್ಣ, ಪಿಟೀಲು ಚೌಡಯ್ಯನವರು, ಡಾ| ದೊರೆಸ್ವಾಮಿ ಅಯ್ಯಂಗಾರ್ ಅವರಂತಹ ಶ್ರೇಷ್ಠ ರಚನೆಕಾರರು ತಿಲ್ಲಾನಗಳು ಗುರುತಿಸಲ್ಪಟ್ಟವು. ಅಷ್ಟೇ ಅಲ್ಲದೆ, ಇಂದಿನ ಪ್ರತಿಭಾನ್ವಿತ ರಚನೆಕಾರರಾದ ಲಲಿತ ನವಿಲೆ, ದ್ವಾರಕಿ ಕೃಷ್ಣಸ್ವಾಮಿ, ಆರ್. ಕೆ. ಸೂರ್ಯನಾರಾಯಣ್ ಅವರು ಬರೆದ ತಿಲ್ಲಾನಗಳು ಬಳಕೆಯಲ್ಲಿವೆ.

ರೂಪಕ ಮತ್ತು ಆದಿತಾಳಗಳಲ್ಲಿ ಹೆಚ್ಚಿನ ತಿಲ್ಲಾನಗಳು ರಚನೆಯಾಗಿದ್ದರೂ, ಕೆಲವೊಮ್ಮೆ ವಿಶೇಷ ತಾಳಗಳಲ್ಲಿಯೂ ತಿಲ್ಲಾನಗಳಿರುವುದನ್ನು ಕಾಣಬಹುದು. ಧೀಂ ತನದಿರನಾ, ನಾದರ್ ಧೀಂ, ಉದನಧೀ ದಿರದಿರದಾನಿ, ಧೀತಿಲ್ಲಾನ ಮುಂತಾದ ಶಬ್ದಗಳನ್ನು ನಟುವನ್ನಾರ್(ನೃತ್ಯದ ನಟುವಾಂಗ ಮಾಡುವವರು) ಹಾಡುತ್ತಾರೆ.

ತಿಲ್ಲಾನಕ್ಕೆ ಪಲ್ಲವಿ, ಅನುಪಲ್ಲವಿ, ಚರಣಗಳೆಂಬ ಪ್ರಧಾನ ೩ ಅಂಗಗಳಿವೆ. ಪಲ್ಲವಿಯಲ್ಲಿ ಪಾಠಾಕ್ಷರ, ಅನುಪಲ್ಲವಿಯಲ್ಲಿ ಸ್ವರಸಹಿತ ಜತಿ, ಚರಣಗಳಲ್ಲಿ ಅಭಿನಯಕ್ಕೆ ತಕ್ಕುದಾದ ಸಾಹಿತ್ಯ ಮತ್ತು ಸೊಲ್ಕಟ್ಟು ಇದರ ಲಕ್ಷಣ. ಸೊಲ್ಕಟ್ಟುಗಳಿಂದಲೇ ಪ್ರಾರಂಭವಾಗಿ ಸೊಲ್ಕಟ್ಟುಗಳಿಂದಲೇ ಕೊನೆಗೊಳ್ಳುವ ಇವುಗಳದ್ದು ಲಾಲಿತ್ಯಪೂರ್ಣ ವಿನ್ಯಾಸ. ಅನುಪಲ್ಲವಿ ಮತ್ತು ಚರಣದ ಮಧ್ಯೆ ರಾಜರನ್ನೋ ಅಥವಾ ದೇವರನ್ನೋ ಹೊಗಳುವ ಚಿಕ್ಕದಾದ ಸಾಹಿತ್ಯವಿರುತ್ತದೆ. ಕೆಲವೊಮ್ಮೆ ರಚನಕಾರರ ಅಂಕಿತನಾಮ ಇಲ್ಲವೇ ರಾಗ ಅಂಕಿತ ಅಂದರೆ ರಾಗದ ಹೆಸರುಗಳಿರುತ್ತವೆ. ದ್ವಿಖಂಡ ತಿಲ್ಲಾನಗಳೆಂಬ ಪ್ರಕಾರಗಳಲ್ಲಿ ಕೊನೆಯಲ್ಲಿ ಸಾಹಿತ್ಯವಿರುವುದಿಲ್ಲ.

ದೃಷ್ಟಿ ಚಲನೆಯಿಂದ, ಮೈಯ್ಯಡವಿನಿಂದ ಪ್ರಾರಂಭವಾಗುವ ತಿಲ್ಲಾನವು ಪಂಚ ನಡೆಗಳಿಂದ ಕೂಡಿ ಚಾರಿ, ಕರಣ, ಅಂಗಾಹಾರಗಳಿಂದ ವಿನ್ಯಾಸಗೊಳ್ಳುತ್ತವೆ. ಪಲ್ಲವಿಯನ್ನು ಅನೇಕ ಸಲ ಹಾಡಿ ನೃತ್ತದ ವಿನ್ಯಾಸವನ್ನು ಹಲವು ರೀತಿಯಲ್ಲಿ ನರ್ತಿಸಿ, ಕೆಲವೊಮ್ಮೆ ಮೃದಂಗದ ಪಾಠಾಕ್ಷರಗಳಿಗೆ ಕಾಲ್ಚಲನೆಯಲ್ಲಿ ಪ್ರತಿಭೆ ತೋರುವ ಲವಲವಿಕೆ ಇಲ್ಲಿನದ್ದು. ಕಣ್ಣು, ಹುಬ್ಬು, ಕತ್ತು, ಮೈ ಚಲನೆಗಳು, ವಿವಿಧ ಮಂಡಲ, ಆಕರ್ಷಕ ಶಿಲಾಭಂಗಿಗಳು, ಉತ್ಲ್ಪವನ-ಭ್ರಮರಿ- ರಂಗಾಕ್ರಮಣ ಮುಂತಾಗಿ ಕ್ಲಿಷ್ಟ ಗತಿಯ-ವೈವಿಧ್ಯಮಯ ಅಡವುಗಳನ್ನೊಳಗೊಂಡ ಜತಿಗಳು, ಕೋರ್ವೆಗಳು, ಅರುಧಿಗಳು, ಚಮತ್ಕಾರಪೂರ್ಣವಾದ ತೀರ್ಮಾನಗಳು..ಹೀಗೆ ಪ್ರತೀ ಕೋನದಲ್ಲೂ ತನ್ನದೇ ಆದ ಜೀವಂತಿಕೆಯ ಸೃಷ್ಟಿ.

ಕೆಲವು ಬಾರಿ ಆರಂಭದಲ್ಲಿ ಸ್ವಲ್ಪ ವಿಳಂಬ ಕಾಲದಲ್ಲಿ ಪ್ರಾರಂಭಿಸಿ ಕ್ರಮೇಣ ಲಯ ಹೆಚ್ಚಿಸುತ್ತಾ ಅತಿ ವೇಗದಿಂದ ಮುಕ್ತಾಯ ಮಾಡುವ ಕ್ರಮವಿದೆ. ಇದು ತಪ್ಪು ಎಂಬ ಅಭಿಪ್ರಾಯ ಕೆಲವರದ್ದಾದರೆ, ತಿಲ್ಲಾನದಂತಹ ವಿಶಿಷ್ಟ ನೃತ್ತದಲ್ಲಿ ತಾಳ, ಕಾಲ್ಚಲನೆಗಳು ವಿಶಿಷ್ಟವಾಗಿರುವುದರಿಂದ ಲಯವನ್ನು ಹೆಚ್ಚಿಸುವುದು ತಪ್ಪಿಲ್ಲ; ಇದರಿಂದ ಕಲಾವಿದರ ಪ್ರೌಢಿಮೆ, ಸಂಯೋಜನಾ ಶಕ್ತಿ ತಿಳಿದುಕೊಳ್ಳಬಹುದು ಎನ್ನುವುದೂ ಇನ್ನೂ ಹಲವರ ವಾದ. ಉತ್ತಮ ವಿದ್ಯಾರ್ಥಿಯು ಶ್ರೇಷ್ಠ ಗುರುಗಳಿಂದ ಕಲಿತು ಖಚಿತವಾಗಿ ನರ್ತಿಸಿದಲ್ಲಿ ತಿಲ್ಲಾನ ಮನೋರಂಜಕವಾಗುವುದರಲ್ಲಿ ಸಂಶಯವಿಲ್ಲ.

1 Response to ತಿಲ್ಲಾನ

  1. Rohini Subbarathnam Kanchana

    ಮಾಹಿತಿಯುಕ್ತ ಸುಂದರ ಶೈಲಿಯ ಬರಹ

Leave a Reply

*

code