ಅಂಕಣಗಳು

Subscribe


 

ನಾಟ್ಯಸರಸ್ವತಿ

Posted On: Saturday, February 25th, 2012
1 Star2 Stars3 Stars4 Stars5 Stars (No Ratings Yet)
Loading...

Author: ವಿದ್ವಾನ್ ಮೇಲುಕೋಟೆ ಉಮಾಕಾಂತ ಭಟ್, ಸಂಸ್ಕೃತ ವಿದ್ವಾಂಸರು, ಯಕ್ಷಗಾನ ಅರ್ಥಧಾರಿಗಳು, ಮಂಡ್ಯ


(ಶ್ಲೋಕ ರಚನೆ ಮತ್ತು ತಾತ್ಪರ್ಯ)

ವಿದ್ವಾನ್ ಉಮಾಕಾಂತ ಭಟ್, ಮೇಲುಕೋಟೆ

ರಾಗತಾಲಸಮಾಲೀಢಾ ರಸಭಾವಮುಜ್ವಲಾ
ಪ್ರಸನ್ನ ಪದವಿನ್ಯಾಸಾ ಪಾಯಾನ್ನಾಟ್ಯ ಸರಸ್ವತೀ

ನಾಟ್ಯಸರಸ್ವತಿ ನಾಟ್ಯಾಭಿಮಾನಿ ದೇವತೆ. ನಾಟ್ಯ ಅವಳ ತನು, ನಟನ ಅವಳ ಮನ. ವಿಶ್ವಸೃಷ್ಟಿಯ ಜೊತೆಗೆ ನಾಟ್ಯ ಮೈದಳೆದಾಗ ಅದಕ್ಕೆ ಋಷಿಗಳಿಟ್ಟ ಹೆಸರು ಸರಸ್ವತಿ. ಅವಳು ತನಗಾಗಿ ನಾಟ್ಯವಾಡುತ್ತಾಳೆ. ಸರ್ಜನಕ್ಕೆ ಸಲ್ಲುವ ಉತ್ಸಾಹ ಉತ್ಸವದ ರೂಪ ಪಡೆದಿದೆ. ಅವಳು ಸಮಾಲೀಢ ಸ್ಥಾನಕವನ್ನು ಪಡೆದುಕೊಂಡಿದ್ದಾಳೆ. ಆಧಾರವಾದ ಎಡಗಾಲು ರಾಗವಾದರೆ ಮುಂದಿಟ್ಟ ಬಲಗಾಲು ತಾಳ. ರಾಗ-ತಾಳಗಳನ್ನು ಅರೆಗುಡಿದು ಮೈಗೂಡಿಸಿಕೊಂಡವಳು ಅವಳು. ಆದುದರಿಂದ ರಸಭಾವಗಳಿಂದ ಬೆಳಗುತ್ತಿದ್ದಾಳೆ. ಭವದ ಸಾರ ಭಾವ. ಭಾವದ ನೆಲೆ ರಸ. ರಸಭಾವಗಳಿಲ್ಲದಿರೆ ಭವನಿಗೂ ವಿಭವವಿಲ್ಲ. ರಸವೇ ಭವವೈಭವ. ರಸ ಅಭಿನೇಯ ಅಲ್ಲದಿರಬಹುದು. ಆದರೆ ಅದರ ಪ್ರಕೃತಿಯಾದ ಭಾವ ಅಭಿನಯ ಯೋಗ್ಯ. ರಸಕ್ಕಾಗಿ- ರಸಶೃಂಗವನ್ನು ಆರೋಹಿಸುವ ಸಲುವಾಗಿ ಭಾವವನ್ನು ಬೆಳಗಿಸುತ್ತಿರುವವಳು ಆಕೆ. ಭಾವಗಳಿಂದ ಬೆಳಗುತ್ತಿರುವವಳೂ ಅವಳೆ.

ಬೆಳಕು ಮೂರ್ತವಾದಾಗ, ಪ್ರಕಾಶ ಆಕೃತಿಯನ್ನು ಪಡೆದಾಗ ಅಲ್ಲಿ ಹುಟ್ಟುವ ಕ್ರಿಯೆಗಳು ಸ್ಫುಟವಾಗುತ್ತವೆ. ಅಂತರಂಗದಲ್ಲಿ ರಸಮುಖಿಯಾದ ಭಾವಗಳು ಬುದ್ಭುದಿಸಲಾರಂಭಿಸಿದಾಗ ಮೈ ಮಣಿಯುತ್ತದೆ, ಕೈ ಏರುತ್ತದೆ, ಕಾಲು ಕುಣಿಯುತ್ತದೆ, ಹುಬ್ಬು ಮುರಿಯುತ್ತದೆ, ರೆಪ್ಪೆಗಳು ಅರಳುತ್ತವೆ, ಕಣ್ಣುಗಳು ಕೊನೆಯುತ್ತವೆ, ನಖಶಿಖಾಂತವಾಗಿ ದೇಹ ಸ್ಪಂದಿಸಲು ತೊಡಗುತ್ತದೆ. ಆಗ ದೇಹ ಇಡುವ ಅಡಿ ಭಾವದ ಅಡಿ. ಅದು ಅಂತರಂಗದ ಪ್ರಸನ್ನತೆಯ ಪಾದ ವಿನ್ಯಾಸ. ನೋಟಕರ ಪ್ರಸನ್ನತೆಗೂ ಅದೇ ಕಾರಣ. ಸರಸ್ವತಿಯ ಪದವಿನ್ಯಾಸ ವಿಶ್ವಪ್ರಸನ್ನತೆಯ ಹೆಜ್ಜೆಗುರುತು. ಆತ್ಮಾಭಿವ್ಯಕ್ತಿಯ ಪಾದನ್ಯಾಸ. ಅಚೇತನದ ಕಸದ ರಾಶಿಯಿಂದ ಚೈತನ್ಯದ ರಸಶೃಂಗಕ್ಕೆ ಯಾತ್ರೆ ಮಾಡಿಸುವ ಸೇತು ತಾಯಿ ನಾಟ್ಯಸರಸ್ವತಿ. ಅವಳು ನಮ್ಮೆಲ್ಲರನ್ನೂ ಕಾಪಾಡಲಿ. ಇಹದಿಂದ ಪರದ ವರೆಗೂ ಕರಾವಲಂಬನ ನೀಡಿ ಕರೆದೊಯ್ಯಲಿ.

(ರಚನಕಾರರು ಹಿರಿಯ ಸಂಸ್ಕೃತ ವಿದ್ವಾಂಸರು, ಪ್ರಾಧ್ಯಾಪಕರು, ಯಕ್ಷಗಾನ ತಾಳಮದ್ದಳೆ ಅರ್ಥಧಾರಿ.)

Leave a Reply

*

code