ಅಂಕಣಗಳು

Subscribe


 

ನೃತ್ಯಪರೀಕ್ಷೆಗಳ ಅಧ್ವಾನ – ಒಂದು ನೋಟ

Posted On: Thursday, November 6th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


– ‘ಮನೂ’ ಬನ

ನೃತ್ಯ ವಿದ್ಯಾರ್ಥಿನಿಯರು :

‘ದಶವಿಧ ಅಡವು…?ಹಾಗಂದ್ರೆ..? ಪರೀಕ್ಷೆಗೆ ೧೫ ದಿವ್ಸ ಉಳಿದಿದೆ.. ಅಷ್ಟರಲ್ಲಿ ಇವನ್ನೆಲ್ಲಾ ಕಲಿಯೋಕಾಗುತ್ತಾ..? ಏನೋ ಒಂದಷ್ಟು ಅಡವು ಮಾಡಿದ್ದಾರೆ. ಹೆಸರೂ ಒಂದಷ್ಟು ಗೊತ್ತಿದೆ. ಆದ್ರೆ ದಶವಿಧ ಅಡವೂ…..ಏನೋಪ್ಪ…ಟೀಚರ್ ಪಾಸ್ ಮಾಡಿಸ್ತೀನಿ ಅಂತ ಹೇಳಿದ್ದಾರೆ. ಈಗ ನೀವು ಹೇಳೋದು ನೋಡಿದ್ರೆ ನಂಗೆ ಹೆದ್ರಿಕೆ ಆಗುತ್ತೆ…ಅಂದ ಹಾಗೆ ದುಡ್ಡು ಕೊಟ್ಟು ಪಾಸ್ ಮಾಡಿಸ್ಲಿಕ್ಕಾಗುತ್ತಾ?

* * *

೯ ಗಂಟೆಗೇ ಸ್ಟಾರ್ಟ್ ಆಗ್ಬೇಕಿದ್ದ ಪರೀಕ್ಷೆ ಇನ್ನೂ ಆಗಿಲ್ಲನೋಡಿ..ಎಕ್ಸಾಮಿನರ್ಸ್ ಇನ್ನೂ ಬಂದಿಲ್ವಂತೆ! ಯಾರನ್ನೋ ಬೋರ್ಡ್‌ನವರು ಹಾಕಿದ್ರೂ ಅವ್ರ ಪತ್ತೇನೇ ಇಲ್ಲ. ಕಾದು ಕಾದು ಸುಸ್ತಾಗಿ ಹೋದ್ವಿ. ಹೀಗಾದ್ರೆ ಡ್ಯಾನ್ಸ್ ಮಾಡೋಕೇ ಮೂಡ್ ಆದ್ರೂ ಎಲ್ಲಿಂದ ಬರ್ಬೇಕು? ಹೀಗೆ ಎಕ್ಸಾಮ್ ಲೇಟ್ ಆದ್ರೆ ಕ್ವಶ್ಚನ್ ಪೇಪರ್ ಲೀಕ್ ಆಗಲ್ವಾ..?

* * *

ಪೋಷಕರು :

ಅವ್ರ ಮಗ್ಳು ಎಕ್ಸಾಂ ತೆಗೊಂಡೇ ಇಲ್ವಂತೆ! ನೀವೇನೇ ಹೇಳಿ, ಅವ್ಳು ಎಷ್ಟೇ ಪ್ರೋಗ್ರಾಂ ಕೊಡ್ಲಿ, ಒಂದ್ ಪರೀಕ್ಷೆ ಪಾಸ್ ಮಾಡ್ಕೋಬೇಕು. ಜೊತೆಗೆ ರಂಗಪ್ರವೇಶ ಒಂದ್ ಆಗ್ಬಿಟ್ರೆ ಇನ್ನೂ ಒಳ್ಳೇದು..ಹಾಗಾಗಿ ಸೀನಿಯರ್ ಎಕ್ಸಾಂಗೆ ಟೀಚರ್‌ಗೆ ಅಂತ ೪೦ ಸಾವಿರ ಕೊಟ್ಟೆ ನೋಡಿ.. ೨ ತಿಂಗ್ಳ ಕ್ಲಾಸು… ಈಗ ನೋಡಿ… ಫಸ್ಟ್ ಕ್ಲಾಸ್‌ನಲ್ಲಿ ಪಾಸಾಗಿದ್ದಾಳೆ.

* * *

ನೋಡ್ರೀ.. ಒಬ್ರೇ ಎಕ್ಸಾಮಿನರ್ ಬಂದಿರೋದು..! ಅಟ್‌ಲೀಸ್ಟ್ ಇಬ್ರಾದ್ರೂ ಬೇಕಲ್ವಾ? ಅವ್ರೇ ಅಷ್ಟು ಸ್ಟೂಡೆಂಟ್ಸ್‌ಗಳನ್ನ ಡ್ಯಾನ್ಸ್ ನೋಡಿ ಜಡ್ಜ್ ಮಾಡ್ತಾರೆ..ಅದ್ಕೇ ನೋಡಿ.. ಆ ಊರಲ್ಲಿ ಲೋಕಲ್ ಡ್ಯಾನ್ಸ್ ಟೀಚರ್ಸನ್ನೇ ಕರ್ದು ತಂದು ಎಕ್ಸಾಮಿನರ್ ಅಂತ ಕೂರ್ಸಿದ್ದಾರೆ. ಇನ್ನೊಂದು ಪ್ರಾಬ್ಲಂ ಅಂದ್ರೆ ಆ ಸೆಂಟರ್‌ಗೆ ಎಕ್ಸಾಮಿನರ್ ಆಗಿ ಬೋರ್ಡ್ಂದ ಹಾಕಿಸ್ಕೊಂಡು ಬಂದವ್ರೂ ಅದೇ ಊರಿನವ್ರೇ…! ಅವ್ರ ಸ್ಟೂಡೆಂಟ್ಸೂ ಎಕ್ಸಾಮ್ ಕಟ್ಟಿದ್ದಾರೆ..ಪಾರ್ಷಿಯಾಲಿಟಿ ನಡೆಯೋದಿಲ್ಲ ಅಂತ ಏನು ಗ್ಯಾರಂಟಿ? ನಿಮಗ್ಗೊತ್ತಾ… ಕಳೆದ ಸಲ ಬಂದವ್ರು ದುಡ್ಡು ಕೂಡಾ ಇಸ್ಕೊಂಡಿದ್ರಂತೆ.. ಬೋರ್ಡ್‌ಗೆ ಕಂಪ್ಲೇಂಟ್ ಕೊಟ್ವಿ… ಆದ್ರೆ ಬೆಂಗ್ಳೂರು, ಮೈಸೂರಿಂದ ದೂರ ಇರೋ ಈ ಊರಿಗೆಲ್ಲಾ ಯಾರ್ ಬಂದು ಚೆಕ್ ಮಾಡ್ತಾರೆ..? ಮಾಡಿದ್ರೂ ಯಾರ್ ಸಾಕ್ಷ್ಯ ಹೇಳ್ತಾರೆ..? ಒಟ್ನಲ್ಲಿ ಇದು ಪ್ರತೀವರ್ಷದ ಹಣೆಬರಾಃ…!

* * *

ನೃತ್ಯ ಶಿಕ್ಷಕರು :

ಪರ್ವಾಗಿಲ್ಲ… ಗೊತ್ತಿರೋರೇ ಎಕ್ಸಾಮಿನರ್ಸ್… ಊಟ, ಕಾಫಿ..ಅದೂ,…ಇದೂ…. ಅಂತ ಸರಿಯಾಗಿ ನೋಡ್ಕ್ಂಡ್ರಾಯ್ತು.. ಹೇಗೂ ಸೆಂಟರ್‌ನವ್ರು, ಬೋರ್ಡ್‌ನವ್ರೂ ವ್ಯವಸ್ಥೆ ಮಾಡಿರೋಲ್ಲ. ಅಷ್ಟಕ್ಕೂ ಅವ್ರು ಜೂನಿಯರ್ ಎಕ್ಸಾಂ ಕಟ್ಟಿರೋವ್ರನ್ನ ಫೇಲ್ ಮಾಡೋ ಹಾಗಿಲ್ಲ. ಮತ್ತೆ ಪರಿಚಯದವ್ರಿಗೆ ಸ್ವಲ್ಪ ಕನ್ಸೇಷನ್ ಇರುತ್ತೆ ಬಿಡಿ.. ಅಷ್ಟಕ್ಕೂ ಬರೋ ಎಕ್ಸಾಮಿನರ್ಸ್‌ಗೆ ಎಷ್ಟೋ ಸಲ ರಾಗ-ತಾಳಾನೇ ಸರಿಯಾಗಿ ಗೊತ್ತಿರೋಲ್ಲ..

* * *

ಯಾವ ಎಕ್ಸಾಮಿನರ್ಸೋ..? ದೃಶ್ಯಜ್ಞಾನ ಪರೀಕ್ಷೆ ಅರ್ಧ ಗಂಟೆ ಮಾಡಿಸ್ಬೇಕಾದವ್ರು ೧೦ ನಿಮಿಷ ಕೂಡ ಮಾಡೋಲ್ವಲ್ರೀ.. ಅಯ್ಯೋ… ನಮ್ ಸ್ಟೂಡೆಂಟ್ಸ್ ಹೆದ್ರಿ ಹೋಗಿದ್ದಾರೆ..ಪ್ರಾಕ್ಟಿಕಲ್‌ನಲ್ಲಿ ಏನೇನೋ ಕ್ರಾಸ್ ಕ್ವಶ್ಚನ್ ಮಾಡಿ, ಸರೀ ಮಾಡಿದ್ರೂ ಮಕ್ಳನ್ನ ಕನ್ ಪ್ಯೂಸ್ ಮಾಡ್ಸಿ ಕಣೀ ರು ಬರ್ಸೋದಾ..? ಪಾಪ.. ಮಕ್ಳು ಸರೀ ಆನ್ಸರ್ ಗೊತ್ತಿದ್ರೂ ಹೇಳೋಕೇ ಹೆದರ್ತಾರೆ.. ಅಂದಹಾಗೆ, ಎಕ್ಸಾಂ ಸೆಂಟರ್‌ಗೆ ೩ ದಿನ ಕಳೆದ್ರೂ ಮಾರ್ಕ್ಸ್ ಲಿಸ್ಟ್ ಕೊಟ್ಟಿಲ್ಲ. ಹೆಚ್ಚು ಹೇಳ್ಬೇಕಂದ್ರೆ ಮಾರ್ಕ್ಸ್ ಲಿಸ್ಟನ್ನ ಫಿಲ್ ಮಾಡೋಕೇ ಬರಲ್ಲ…

* * *

ಪರೀಕ್ಷಕರು :

ಇಲ್ಲಿ ಎಕ್ಸಾಂ ಸೆಂಟರ್‌ನಲ್ಲಿ ಯಾವ್ದೇ ವ್ಯವಸ್ಥೆ ಮಾಡೋಲ್ಲ. ಬೋರ್ಡ್‌ನವ್ರೂ ಊಟ-ತಿಂಡಿ-ಉಳ್ಕೊಳ್ಳೋಕೇ ಅಂತ ಸರಿಯಾಗಿ ಏನೂ ಕೊಡೋಲ್ಲ. ಸ್ಟೂಡೆಂಟ್ಸ್ ಹೆಚ್ಚಾಗಿದ್ರೆ ೧೦ ದಿನ ಎಕ್ಸಾಂ ಮಾಡೋವಷ್ಟ್ರಲ್ಲಿ ಜೀವ ಬಾಯಿಗೆ ಬರುತ್ತೆ..ಬೋರ್ ಹಿಡ್ದು ಕೊನೇಗೇ ಮಾಡಿಸ್ಬೇಕಲ್ಲಾ ಅಂತ ಮಾಡಿಸ್ಬೇಕಷ್ಟೇ..! ಹಾಗಾಗಿ ಈ ಸಲ ನಾನು ನನ್ ಹತ್ತಿರದ ಊರಿಗೇ ಹಾಕಿಸ್ಕೊಂಡು ಎಕ್ಸಾಮಿನರ್ ಆಗಿ ಬಂದ್ಬಿಟ್ಟೆ.. ಆ ಸೆಂಟರ್ ದೂರ ಆಗುತ್ತೆ…ಈ ಸಲ ಅಲ್ಲಿಗೆ ಯಾರೂ ಹೋಗ್ದೇ ಇದ್ರೆ ಕೊನೆಗೆ ಲೋಕಲ್ ಡ್ಯಾನ್ಸ್ ಟೀಚರ್‌ನ್ನೇ ಎಕ್ಸಾಮಿನರ್ ಆಗಿ ತೆಗೊಂಡಾರು..

* * *

ಅಷ್ಟಕ್ಕೂ ಎಷ್ಟೋ ಟೀಚರ್ಸ್, ಸ್ಟೂಡೆಂಟ್ಸ್‌ಗಳಿಗೆ ಎಕ್ಸಾಂ ಅಂದ್ರೆ ಪಾಸ್ ಮಾಡ್ಕೊಳ್ಳೋದು, ಅಷ್ಟೇ…ಶುದ್ಧವಾಗಿ ಕಲಿತು ಮಾಡೋವ್ರು ಇದ್ದಾರೆ ಅಂತೀರಾ..? ಉಹುಂ…ಸುಮ್ನೆ ಮಾರ್ಕ್ಸ್ ಹಾಕ್ಬೇಕಷ್ಟೇ!.. ಮಾರ್ಕ್ಸ್ ಹಾಕೋಕಾದ್ರೂ ಏನಿದೆ..? ಈಗ ನಂಗಾದ್ರೂ ಈ ಹೊಸ ಸಿಲೆಬಸ್ ಮಾಡೋಕ್ ಬರುತ್ತಾ?.. ಏನೋ ಒಂದು ಮಾಡ್ತಿದ್ದೀನಿ..

* * *

ಸಾರ್ವಜನಿಕರು :

….ಇಷ್ಟೆಲ್ಲಾ ಹಂಗಾಮ ಇರೋ ಪರೀಕ್ಷೆಗಳಿಗೆ ಯಾಕ್ರೀ ಮಕ್ಳನ್ನ ಕಟ್ಟಿಸ್ಬೇಕು..? SSಐ‌ಅ ಬೋರ್ಡ್‌ನವ್ರಲ್ವಾ ಎಕ್ಸಾಂ ಕಂಡಕ್ಟ್ ಮಾಡೋದು..? SSಐ‌ಅಗೆಲ್ಲಾ ಅಷ್ಟು ಸ್ಟ್ರಿಕ್ಟ್ ಮಾಡೋವ್ರು ಇದನ್ನ ಯಾಕಾದ್ರೂ ಇಷ್ಟೊಂದ್ ಬೇಜಾವಾಬ್ದಾರಿಯಿಂದ ಮಾಡ್ತಾರೋ…? …………!

….ಅಯ್ಯೋ… ಎಕ್ಸಾಂ ಬೋರ್ಡ್‌ನವ್ರನ್ನ ಬೈಯ್ಯೋದ್ರಲ್ಲಿ ಏನೂ ಆಗಲ್ಲ.. ಎಕ್ಸಾಂ ಸೆಂಟರ್‌ನವ್ರದ್ದೂ ತಪ್ಪಿರುತ್ತೆ.. ಎಕ್ಸಾಮಿನರ್ಸ್ ಯಾರು ಅಂತ ಮೊದ್ಲೇ ಕನ್‌ಫರ್ಮ್ ಮಾಡ್ಕೋಳ್ದೇ ಕಡೇಗಾಲಕ್ಕೆ ಫೋನ್ ಮಾಡಿ ದೂರಿದ್ರೆ ಏನ್ ಪ್ರಯೋಜನ..? ಅಷ್ಟಕ್ಕೂ ಇದು ಆರ್ಟ್ ಫೀಲ್ಡ್.. ಎಕ್ಸಾಮಿನರ್ಸ್ ಅಂತ ಟ್ರೈನ್ಡ್ ಆಗಿರೋರು ಸಿಗೋದು ಅಷ್ಟು ಸುಲ್ಭಾನಾ..?

* * *

ಇದ್ಯಾವುದೂ ಕಲ್ಪನೆಯಿಂದ ಹುಟ್ಟಿದ ಮಾತುಗಳ ಸರಣಿಯಲ್ಲ. ಬದಲಾಗಿ ಪ್ರತೀ ವರ್ಷದ ಸಂಪ್ರದಾಯವೇನೋ ಎಂಬಂತೆ ಈ ಬಾರಿಯೂ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ನೃತ್ಯ ಪರೀಕ್ಷೆಗಳಲ್ಲಿ ಕಂಡುಬಂದ ವಾಸ್ತವ, ಹೊರಬರುವ ಸತ್ಯ… ಬಹಳ ಸಲ ವಿವಾದಗಳಾದ ಸಂದರ್ಭಗಳೂ ಇವೆ. ಇವಿಷ್ಟೂ ಸಾಕು.., ನೃತ್ಯ ಪರೀಕ್ಷೆಗಳ ತಿರುಳನ್ನು ಅರಿಯಲಿಕ್ಕೆ…!

ವಿದ್ವಾಂಸರೊಬ್ಬರು ವಿಷಾದದಿಂದ ನುಡಿದದ್ದು… ಕೆಲವು ಹೆಜ್ಜೆ, ನೃತ್ಯ ಕಲಿತು ಕೆಲವು ಪರೀಕ್ಷೆಗಳನ್ನ ಪಾಸ್ ಮಾಡಿಕೊಂಡಾಕ್ಷಣ ಕಲಾವಿದರೆಂದು ಬೀಗುವ ಕಾಲ ಇದು..ಸತ್ಯಕ್ಕೆ ದೂರವಾದ ಮಾತೇನೂ ಅಲ್ಲ. ಪ್ರತಿಭೆ, ಅರ್ಹತೆಗಳನ್ನ ಅಳೆಯಲು ಮಾನದಂಡವಾಗಬೇಕಿದ್ದ ಪರೀಕ್ಷೆಗಳು ಇಂದು ಎಷ್ಟರ ಮಟ್ಟಿಗೆ ತನ್ನಲ್ಲಿ ತಿರುಳನ್ನು ಉಳಿಸಿಕೊಂಡಿದೆ ಎಂಬುದೇ ಈಗಿನ ದೊಡ್ಡ ಪ್ರಶ್ನೆ ಮತ್ತು ಜೊತೆಗಿರುವ ಆತಂಕ. ಹಾಗಾದರೆ ತಪ್ಪು ಯಾರದ್ದು..? ವಿದ್ಯಾರ್ಥಿಗಳದ್ದೇ? ಪರೀಕ್ಷಕರದ್ದೇ? ನೃತ್ಯ ಶಿಕ್ಷಕರದ್ದೇ? ಪೋಷಕರದ್ದೇ? ಅಥವಾ ಪರೀಕ್ಷಾ ಮಂಡಳಿಯದ್ದೇ?

…ಒಟ್ಟಿನಲ್ಲಿ ಯಾರದ್ದೂ ಅಲ್ಲ… ಮತ್ತು ಎಲ್ಲರದ್ದೂ ಕೂಡಾ…

ಕೇರಳದ ಹಿರಿಯ ಸಂಗೀತ ಕಲಾವಿದೆಯೋರ್ವರು ಒಮ್ಮೆ ಹೇಳಿದ್ದು ನೆನಪಿದೆ. ನಿಮ್ಮ ಕರ್ನಾಟಕದಲ್ಲಿ ಈ ಜೂನಿಯರ್, ಸೀನಿಯರ್, ವಿದ್ವತ್ ಪರೀಕ್ಷೆ ಅಂತ ಕಲೆಯನ್ನು ರಿಸ್ಟ್ರಿಕ್ಟ್ ಮಾಡ್ತಾರೆ. ಆ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಕಟ್ಟಿಸಿ, ಪಾಸ್ ಆದ್ರೆ ಅದು ಪ್ರತಿಷ್ಟೆಗೆ, ಸರ್ಟಿಫಿಕೇಟಿಗೆ, ಯಾವ್ದಾಕ್ಕಾದ್ರೂ ಅಪ್ಲಿಕೇಶನ್ ಹಾಕೋಕೆ ಅಥವಾ ಹೇಳ್ಕೊಂಡ್ ಬರೋಕೆ..ಅಷ್ಟೇ..! ಪ್ರತಿಭೆ, ಅರ್ಹತೆಗೆ ಎಷ್ಟು ಬೆಲೆಯಿದೆ..? ಪರೀಕ್ಷೆ ಪಾಸ್ ಮಾಡಿಕೊಂಡವ್ರಲ್ಲಿ ಎಷ್ಟೋ ಮಂದಿಗೆ ತಾಳ, ಮೇಳ, ಲಯದ ಪರಿಚಯವೇ ಸರಿಯಾಗಿ ಇಲ್ಲದಿರುವುದನ್ನು ಕಂಡಿದ್ದೇನೆ. ಸಿಲೆಬಸ್‌ಗೆ ಅಂತ ಕಲಿತು ಹೋಗಿ ಪರೀಕ್ಷೆ ಬರೆದಾಕ್ಷಣ ಕಚೇರಿ, ಕಾರ್ಯಕ್ರಮ ಕೊಡಲು ಬಾರದೇ ಇರೋವ್ರೂ ಬೇಕಾದಷ್ಟಿದ್ದಾರೆ..!

ನೃತ್ಯ ಸಂಗೀತದ ಗುರು ಪರಂಪರೆ, ಗುರುಕುಲ ಪದ್ಧತಿ ನಿಧಾನವಾಗಿ ಕಳಚಿಕೊಂಡು ಕೇವಲ ಸರ್ಟಿಫಿಕೇಟಿಗೆ ಮೀಸಲಾಗುವ ಸಂದರ್ಭಕ್ಕೆ ಮೇಲ್ಕಂಡ ಮಾತುಗಳೇ ಉದಾಹರಣೆ..

ಹಾಗಂದ ಮಾತ್ರಕ್ಕೆ ಎಲ್ಲಾ ವಿದ್ಯಾರ್ಥಿ, ಗುರು, ಪೋಷಕರು, ಗುರು, ಪರೀಕ್ಷಕರದ್ದೆಲ್ಲಾ ಇದೇ ಪಾಡೇ?…

ಇಲ್ಲ… ಈ ಪರಿಸ್ಥಿತಿಯ ವ್ಯಂಗ್ಯಕ್ಕೆ ಅಪವಾದವೆನಿಸುವ ಶಿಷ್ಯರು, ಗುರು, ಪರೀಕ್ಷಕ, ಪೋಷಕ ವೃಂದವಿದೆಯಾದರೂ, ಅವರ ಸಂಖ್ಯೆ ಬಹಳ ವಿರಳ. ಆದರೆ ಕೊಳೆತ ಮಾವಿನ ಹಣ್ಣಿನೊಂದಿಗೆ ಬುಟ್ಟಿಯಲ್ಲಿರುವ ಮಾವಿನ ಹಣ್ಣುಗಳು ಕೊಳೆಯುವ ಸಂಭವಗಳು ಇರುವ ಹಾಗಾಗಿದೆ ಪರಿಸ್ಥಿತಿ…!

ನಮ್ಮನ್ನು ನಾವು ಕೇಳಿಕೊಳ್ಳಬೇಕಾಗಿದೆ… ಪ್ರತಿಭೆಯನ್ನು ಅಳೆಯಲು ಪರೀಕ್ಷೆಗಳು ಅವಶ್ಯವೇ? ಹೀಗೆಯೀ ಮುಂದುವರಿದರೆ ಸಂಗೀತ ನೃತ್ಯಾದಿ ಕಲೆಗಳು ತಮ್ಮ ಭವ್ಯ ಅಸ್ತಿತ್ವವನ್ನು ಉಳಿಸಿಕೊಂಡಾವೇ? ಅಥವಾ ಉಳಿಸಿಕೊಳ್ಳುವ ಭರದಲ್ಲಿ ಕೈಗೊಳ್ಳುವ ಪರೀಕ್ಷೆಯಂತಹ ಪ್ರಯತ್ನಗಳು ಪ್ರಬುದ್ಧ ಕಲೆ ಮತ್ತು ಕಲಾವಿದರನ್ನೇ ಮರೆಸಿ ಅವಮಾನ ಎಸಗಿಯಾವೇ?

ನಮಗೆ ಬೇಕಿರುವುದಾದರೂ ಏನು? ಪ್ರತಿಭೆ, ಅರ್ಹತೆಗಳೇ? ಅಥವಾ ಪರೀಕ್ಷೆಗಳನ್ನು ಪಾಸು ಮಾಡಿಕೊಂಡ ಪಟ್ಟವೇ?

Leave a Reply

*

code