ಅಂಕಣಗಳು

Subscribe


 

ನೃತ್ಯ ರೂಪಕಗಳ ರಂಗ ಸಾಧ್ಯತೆಗಳಿಗೆ ಕನ್ನಡಿ : ‘ಅಂಬೆ’

Posted On: Sunday, February 15th, 2009
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಪಾಂಚಾಲೀ, ಉಪನಿಷದುದ್ಯಾನಂ ಎಂಬ ಸಾರ್ಥಕ ರಂಗಪ್ರಯೋಗಗಳ ಹುಟ್ಟಿಗೆ ಕಾರಣರಾದ ಉಡುಪಿಯ ಉದ್ಯಾವರ ಮಾಧವ ಆಚಾರ್ಯ ಅವರ ಮತ್ತೊಂದು ಕಾವ್ಯ ಕನ್ನಿಕೆಗೆ ಜೀವ ಬಂದಿದೆ. ಡಾ| ವಸುಂಧರಾ ದೊರೈಸ್ವಾಮಿಯವರಂತಹ ಕಲಾವಿದೆಯ ಅಭಿವ್ಯಕ್ತಿಯಲ್ಲಿ ಅದು ಮತ್ತಷ್ಟು ಮೂರ್ತ ರೂಪ ತಳೆದಿದೆ. ಅದೇ ‘ಅಂಬೆ’.

ಮಹಾಭಾರತದ ಆದಿಯಲ್ಲಿ ಕಾಣಸಿಗುವ ಕಥೆಯೊಂದನ್ನು ತುಸು ತಾತ್ವಿಕ ನೋಟದಿಂದ ಪ್ರತಿಭಟನೆಯ ಸ್ತ್ರೀ ಧ್ವನಿಯಾಗಿ ರೂಪಿಸಿರುವ ಶ್ರಮ ಶ್ಲಾಘನೀಯ. ವ್ಯಾಸರ ಮಹಾಭಾರತದಲ್ಲಿ ಸಂದರ್ಭದ ಕೈಯೊಳಗಿನ ಪಾಶಕ್ಕೆ ನಲುಗುವ ಹೆಣ್ಣಾಗಿ ಅಂಬೆ ಚಿತ್ರಿತವಾದರೂ, ಸಮಕಾಲೀನ ವ್ಯವಸ್ಥೆಯನ್ನು ಧ್ವನಿಸುವಂತೆ ಮಾಡಲು ಕಥೆಯನ್ನು ರೂಪಿಸಲಾಗಿದ್ದು, ಸ್ತ್ರೀಯ ಅಂತಃಕರಣದಲ್ಲಿ ಅಡಗಿರುವ ಸುಪ್ತ ಶಕ್ತಿಯನ್ನು, ಸ್ವತಂತ್ರ ಮನೋಭಾವವನ್ನು ಸಮರ್ಥವಾಗಿ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ ಈ ಏಕವ್ಯಕ್ತಿ ರಂಗಪ್ರಯೋಗ.

ಈಗಾಗಲೇ ಹಲವು ಪ್ರಯೋಗಗಳ ಸಾಧ್ಯತೆಗಳನ್ನು ಬಗಲಿಗಿರಿಸಿಕೊಂಡು ಮುನ್ನಡೆಯುತ್ತಿರುವ ಕಲಾಸಕ್ತರ ಅನೌಪಚಾರಿಕ ಸಂಘಟನೆ ‘ಸಮೂಹ’ವು ಇತ್ತೀಚಿಗೆ ಉಡುಪಿಯ ಎಂ.ಜಿ.ಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಅಂಬೆಯ ದ್ವಿತೀಯ ಪ್ರದರ್ಶನವನ್ನು ಆಯೋಜನೆಗೊಳಿಸಿತ್ತು. ಕಲಾವಿದರನ್ನು ಪುರಸ್ಕರಿಸುವ ಮೂಲಕ ಆರಂಭಗೊಂಡ ಕಾರ್ಯಕ್ರಮವು ಕಲಾಸಕ್ತ ಬಂಧುಗಳನ್ನು ಆಕರ್ಷಿಸುವಲ್ಲಿ ಸಫಲವಾದದ್ದು ಸುಳ್ಳಲ್ಲ.

ಗಂಗಾ ತೀರದ ವನವಿಹಾರದಲ್ಲಿರುವಾಗ ಅಂಬೆಗೆ ಸೌಭದೇಶದ ಅರಸ ಸಾಲ್ವ ಆಕರ್ಷಣೆಯ ಕೇಂದ್ರಬಿಂದುವಾಗುತ್ತಾನೆ. ಅವನನ್ನೇ ವರಿಸಬೇಕೆಂಬ ಹಂಬಲ ಅವಳದು. ಆದರೆ ಅಂಬೆಯ ತಂದೆ ಕಾಶೀರಾಜ ಭಯ ಭದ್ರ್ರತೆಯ ರಾಜಕೀಯ ಕಾರಣಕ್ಕೆ ಶೌರ್ಯವನ್ನು ಪಣವಾಗಿಸಿ ತನ್ನ ಮೂವರು ಮಕ್ಕಳಾದ ಅಂಬೆ, ಅಂಬಿಕೆ, ಅಂಬಾಲಿಕೆಯರ ಸ್ವಯವರವನ್ನು ನಿರ್ಧರಿಸುತ್ತಾನೆ. ಆದರೆ ಅಂಬೆಗಾದ ಈ ಆಘಾತ ಮತ್ತಷ್ಟು ತೀವ್ರಗೊಳ್ಳುತ್ತದೆ ಹಸ್ತಿನಾವತಿಯ ಭೀಷ್ಮ ಸ್ವಯಂವರಕ್ಕೆ ಆಗಮಿಸಿ ಎಲ್ಲರನ್ನೂ ಗೆದ್ದಾಗ. ಒಲ್ಲದ ಮನಸ್ಸಿನಿಂದ ರಥವೇರಿದ ಅಂಬೆಗೆ ಹೊಂದಾಣಿಕೆಯ ನಿರ್ಧಾರಕ್ಕೆ ಬರುವುದು ಅನಿವಾರ್ಯವಾಗುತ್ತದೆ. ಹಾಗಾಗಿ ಶೌರ್ಯ ಪಣದಲ್ಲಿ ಗೆದ್ದು ಬಂದ ಭೀಷ್ಮನೇ ತನ್ನನ್ನು ವರಿಸಲಿ ಎಂಬುದು ಅಂಬೆಯ ಬದಲಾದ ನಿರ್ಧಾರ. ಆದರೆ ಭೀಷ್ಮನಿಗೆ ವಿವಾಹ ನಿಷಿದ್ಧ. ತಪ್ಪಿ ತಂದವ ಅವಳ ನಿವೇದನೆಗೆ ಬೆಲೆ ಕೊಡಲಾಗದೇ ಹೋದಾಗ, ಮನಸಾರೆ ಒಪ್ಪಿದ ಸಾಲ್ವನೆಡೆಗೆ ಬಳಿಸಾರುವ ತವಕ. ಆದರೆ ಸಾಲ್ವನಿಂದಲೂ ತಿರಸ್ಕಾರಕ್ಕೊಳಪಟ್ಟು ಅವಮಾನಿತಳಾದ ಅಂಬೆ, ಕೊನೆಗೆ ಪರಶುರಾಮರನ್ನೇ ಅವರ ವಿರುದ್ಧ ಯುದ್ಧಕ್ಕೆ ಅಣಿಗೊಳಿಸುತ್ತಾಳೆ. ನ್ಯಾಯ ಸಿಗಲಾರದಾಗ, ಕಾಡಿನ ಕಿರಾತ ಶಕ್ತಿಗಳನ್ನು ಹುರಿದುಂಬಿಸುತ್ತಾಳೆ. ಕೊನೆಗೆ ಆತ್ಮಾಹುತಿ ಅನಿವಾರ್ಯವಾಗಿ ಛಲದ ಶಪಥ ಹೊತ್ತು ಅಂತ್ಯವಾಗುತ್ತಾಳೆ. ಹೀಗೆ ವಿವಾಹ ರಾಜಕೀಯ ನಡೆಸಿದ ಕಾಶೀದೇಶ, ಪ್ರೇಮ ಮಾಯಾಮೃಗದ ಆಕರ್ಷಣೆ ನೀಡಿ ಕೈಬಿಟ್ಟ ಸೌಭದೇಶ, ವಂಶಾಭಿವೃದ್ಧಿಗಾಗಿ ಕ್ಷೇತ್ರಾಪಹರಣಗೈದ ಹಸ್ತಿನಾವತಿ ಎಂಬ ಮೂರು ಶಕ್ತಿಗಳ ಕೈಗೊಂಬೆಯಾಗಿ ನಲುಗುವ ಅಂಬೆಯ ಸ್ತ್ರೀ ಸಂವೇದನೆಯನ್ನು ಮನೋಜ್ಞವಾಗಿ ದುಡಿಸಿಕೊಂಡಿದ್ದಾರೆ ವಸುಂಧರಾ ಮತ್ತು ಅವರ ಬಳಗ.vasundhara

ಸಖಿ, ಸಹೋದರಿಯರೊಂದಿ ಗೊಡಗೂಡಿ ಗಂಗಾತೀರದ ವಿಹಾರಕ್ಕೆ ಹೋಗುವ ಚಿತ್ರಣ ಮೊದಲಿನರ್ಧ ಭಾಗವಾಗಿದ್ದು ಪರಿಸರ, ವನ್ಯ ಮೃಗ-ಪಕ್ಷಿಗಳ ಚಿತ್ರಣವನ್ನು ವಸುಂಧರಾ ಅವರ ಅಭಿನಯವು ಚೆನ್ನಾಗಿ ದುಡಿಸಿಕೊಂಡಿದೆ. ಗಂಗಾ ತೀರದ ವಿಹಾರ ಮತ್ತು ಸ್ವಯಂವರದ ಆಯೋಜನೆಯ ನಂತರವಷ್ಟೇ ಸಾಲ್ವನ ಪಾತ್ರವನ್ನು ಕೈಗೆತ್ತಿಕೊಳ್ಳ ಲಾಗಿದ್ದು, ಇದು ಪ್ರಯೋಗವನ್ನು ಎರಡು ಭಾಗಗಳಾಗಿ ಶ್ರೇಣೀಕರಿಸಿದಂತೆನಿಸುತ್ತದೆ. ಹಾಗಾಗಿ ಪ್ರಯೋಗದ ಬಹು ಸಮಯವನ್ನು ಪ್ರಕೃತಿ ವರ್ಣನೆಯ ಭಾಗ ಕಬಳಿಸುತ್ತದೆ ಎಂಬ ಭಾಸ ಉಂಟಾಗುವುದು ಸಹಜ. ಇದರಿಂದ ಪ್ರಕೃತಿ ಚಿತ್ರಣದಲ್ಲಿ ನಿಧಾನಗೊಳ್ಳುವ ಪ್ರಯೋಗ ಕಥಾ ವಿಸ್ತರಣೆಯಲ್ಲಿ ತೀವ್ರಗತಿಯನ್ನು ಕಾಣುತ್ತದೆ. ಹಾಗಾಗಿ ಮೊದಲರ್ಧ ಭಾಗದ ಪರಿಸರ ಮತ್ತು ಸ್ವಯಂವರದ ಭವ್ಯತೆಗೆ ಹೋಲಿಸಿದಾಗ ಅಂಬೆಗೆ ಸಾಲ್ವ, ಸ್ವಯಂವರ ಮತ್ತು ಭೀಷ್ಮನ ಕುರಿತಾದ ಮನೋಧರ್ಮ, ಭೀಷ್ಮನ ಭಾವಾನುಭಾವ-ಅಂತಃಕರಣವನ್ನು ಪರಿಭವಿಸುವಲ್ಲಿ ಕೊಂಚ ಹಿಂದೆ ಬೀಳುತ್ತದೆ.

ಈ ತೀವ್ರ ಗತಿಯ ಮುನ್ನಡೆಯ ಪರಿಣಾಮವೋ ಎಂಬಂತೆ ಪರಶುರಾಮ, ಕಿರಾತ ಶಕ್ತಿಗಳನ್ನು ಯುದ್ಧಕ್ಕೆ ಅಣಿಗೊಳಿಸುವ ಸಂದರ್ಭ ಮತ್ತು ಅದರ ಫಲಶ್ರುತಿಯನ್ನು ಹೇಳುವ ಸಂದರ್ಭದಲ್ಲೂ ಪ್ರಯೋಗ ಒಂದಷ್ಟು ಬಳಲುತ್ತದೆ. ಈ ಎರಡೂ ಪಾತ್ರಪೋಷಣೆಯನ್ನು ಒಂದಷ್ಟು ಗಮನಾರ್ಹವಾಗಿ ರೂ[ಪಿಸಿದಿದ್ದರೆ, ಪಾತ್ರಗಳ ಅಭಿವ್ಯಕ್ತಿ, ನಿರ್ಗಮನ ಮತ್ತಷ್ಟು ಸ್ಪಷ್ಟ ಮತ್ತು ಮಹತ್ವದ್ದಾಗಿರುತ್ತಿತ್ತು. ಪಾತ್ರ ಪೋಷಣೆಯಲ್ಲಿ ಸಾಲ್ವನಷ್ಟೇ ಪ್ರಮುಖವಾಗಿದ್ದರೂ ವಿವಾಹ ಬೇಡವೆನ್ನುವ, ಪರಶುರಾಮರನ್ನು ಸಂಧಾನಕ್ಕೆಳೆಸುವ ಭೀಷ್ಮನ ಪಾತ್ರ ಇದೇ ಸೊರಗಿದ ಅನುಭವವನ್ನು ಕೊಡುತ್ತದೆ. ಅಷ್ಟೇ ಅಲ್ಲದೆ ಅಂತಿಮ ಘಟ್ಟದಲ್ಲೂ ಆತ್ಮಾಹುತಿ ನಿರ್ಧಾರ ತೆಗೆದುಕೊಳ್ಳುವ ಛಲ ಹೊತ್ತ ಅಂಬೆಯ ಪಾತ್ರ ಒಮ್ಮಿಂದೊಮ್ಮೆಗೇ ಬಿರುಸಾಗಿ ಕೊನೆಗೆ ಇಳಿದಂತೆನಿಸಿ ಕೊಂಚ ಬಳಲಿದಂತೆ ಕಂಡು ಬರುತ್ತದೆ. ಅದರಲ್ಲೂ ಪರಶುರಾಮ ಮತ್ತು ಕಿರಾತರನ್ನು ಯುದ್ಧಕ್ಕೆ ಹುರಿದಂಬಿಸುವ ಸಂದರ್ಭದಲ್ಲಿ ಪಥ ಸಂಚಲನದ ಮಾದರಿಯ ಹಿನ್ನಲೆ ಸಂಗೀತ, ಅಂಬೆಗೆ ನ್ಯಾಯ ಸಿಗದೇ ಹೋದಾಗ ಮತ್ತೆ ಭೀಷ್ಮನನ್ನು ಪರಿಪರಿಯಾಗಿ ಬೇಡಿಕೊಳ್ಳುವುದು ಮತ್ತು ಉತ್ತರಾರ್ಧ ಭಾಗದ ಒಂದು ತೀವ್ರಗತಿಯ ಜತಿ ನಿರೂಪಣೆಯಲ್ಲಿ ತಪ್ಪಿದ ತೀರ್ಮಾನ ಸರಣಿ, ಪಾದಘಾತಗಳಲ್ಲಿ ಅಲ್ಲಲ್ಲಿ ಕಂಡುಬಂದ ಸ್ಪಷ್ಟತೆಯ ಅಭಾವ ನೋಡುಗರಲ್ಲಿ ಇರಿಸುಮುರಿಸಿಗೆ ಕಾರಣವಾದದ್ದಿದೆ.

ಆದರೆ ವಸುಂಧರಾ ಅವರ ಅಭಿನಯ ಉತ್ಕೃಷ್ಟ ಮಟ್ಟದಲ್ಲಿದ್ದು ರಂಗ ಪ್ರಯೋಗದ ಕೊರತೆಗಳನ್ನು ಮರೆಮಾಚಿ ಪ್ರೇಕ್ಷಕರನ್ನು ನೋಡುವಂತೆ ಮಾಡುತ್ತದೆ ; ಮಾತ್ರವಲ್ಲ, ಕಾವ್ಯ ರಸಾನುಭೂತಿಗೇ ಹೆಚ್ಚು ಹತ್ತಿರವಾಗುವ ಸಾಧ್ಯತೆಗಳಿರುವ ರಚನೆಯನ್ನು ನೃತ್ಯ ರಸಾನುಭೂತಿ ಪಡೆದುಕೊಳ್ಳುವಂತೆ ಮಾಡಿಕೊಟ್ಟಿರುವುದು ವಸುಂಧರಾ ಅವರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ.

ರಂಗ ಪ್ರಯೋಗವನ್ನು ಸಹ್ಯ ಮಾಡುವಲ್ಲಿ ಹಾಡುಗಾರಿಕೆಯಷ್ಟೇ ಅಲ್ಲದೆ ಉದ್ಯಾವರ ಮಾಧವ ಆಚಾರ್ಯರ ಸಮಯೋಚಿತ ವಾಚಿಕ ನಿರೂಪಣೆಯು ಅಂಬೆಯ ಭಾವಾಭಿವ್ಯಕ್ತಿಗೆ ಪೂರಕವಾಗಿ ಸ್ಪಂದಿಸಿದೆ. ಆದರೆ ಶೃಂಗಾರ, ಶಾಂತ, ಕರುಣ, ಬೇಸರ, ಅದ್ಭುತ ಮುಂತಾದ ರಸ ಪ್ರತಿಪಾದನೆಯಲ್ಲಿ ನಿರೂಪಣೆಯು ರಸಕ್ಕೆ ತಕ್ಕಂತೆ ಆರ್ಭಟವಿಲ್ಲದೆ ಒಂದಷ್ಟು ಹೊಂದಿಕೊಂಡಿದ್ದರೆ, ಇನ್ನಷ್ಟು ಸಮರ್ಥವಾಗಿ ಪ್ರೇಕ್ಷಕರನ್ನು ರೂಪಕದ ಒಳಗೆ ತೊಡಗಿಸಿಕೊಳ್ಳುವಂತೆ ಮಾಡಬಲ್ಲುದು. ರೂಪಕಕ್ಕೆ ಅಳವಡಿಸಿಕೊಳ್ಳಲಾದ ಜತಿಗಳು ಉತ್ಕೃಷ್ಟ ಮಟ್ಟದಲ್ಲಿದ್ದರೂ ವಸುಂಧರಾ ಅವರ ಮಟ್ಟಕ್ಕೆ ಜತಿಗಳು ಇನ್ನಷ್ಟು ಸವಾಲೆನಿಸುವ ಕೋರ್ವೆ, ಅಡವುಗಳ ಸಂಯೋಜನೆಯನ್ನು ಪಡೆದುಕೊಂಡಿದ್ದರೆ ಆಹ್ಲಾದಕರವಾಗಿರುತ್ತಿತ್ತು.

ವಿದುಷಿ ಪಿ. ರಮಾ, ಬೆಂಗಳೂರು ಅವರ ಸಂಗೀತ ಸಂಯೋಜನೆ ಮತ್ತು ಹಾಡುಗಾರಿಕೆ ಇಡೀ ರಂಗಪ್ರಯೋಗದ ಒಟ್ಟಾರೆ ಯಶಸ್ಸಿಗೆ ಕಾರಣ. ಮೈಸೂರಿನ ಸಂದೇಶ ಭಾರ್ಗವ ಅವರ ಸಮರ್ಥ ನಟುವಾಂಗ ಕಾರ್ಯಕ್ರಮದ ಹೈಲೈಟ್ ! ಇನ್ನುಳಿದಂತೆ ನಾರಾಯಣ್ ಮೈಸೂರು ಅವರ ವಯೋಲಿನ್ ವಾದನ, ಜಯಪ್ರಕಾಶ್ ಕಣ್ಣೂರು ಅವರ ಇನಿದನಿಯ ಕೊಳಲು, ಪಾಠಾಕ್ಷರಗಳಲ್ಲಿ ಅಚ್ಚುಕಟ್ಟುತನ ಹೊಂದಿದ ಪಯ್ಯನೂರು ಸುಶಿಲ್ ಕುಮಾರ್ ಅವರ ಮೃದಂಗ, ಮಂಜುನಾಥ್ ಬೆಂಗಳೂರು ಇವರ ರಿದಂಪ್ಯಾಡ್ ರಂಗ ಪ್ರಸ್ತುತಿಗೆ ಪೂರಕವಾಗಿ ಧ್ವನಿಸಿತ್ತು.

 

Leave a Reply

*

code