ಅಂಕಣಗಳು

Subscribe


 

ಫುಲೆ, ತನ್ವೀರ್, ಕಾರಂತ ಮತ್ತು ಸಮಕಾಲೀನತೆಯ ಸಾಕ್ಷಿಪ್ರಜ್ಞೆ

Posted On: Thursday, November 6th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


– ಶ್ರೀಲಕ್ಷ್ಮಿ ಎಂ. ಭಟ್

ಅದು ೧೮೭೩. ಎಲ್ಲೆಲ್ಲೂ ಸ್ವಾತಂತ್ರ ಚಳುವಳಿಯ ತೀವ್ರ ಕಾವು. ಆಂಗ್ಲರ ದುರಾಡಳಿತ, ಮೇಲ್ವರ್ಗಗಳ ದಬ್ಬಾಳಿಕೆ. ಅಜ್ಞಾನ, ಬಡತನಗಳು ಜನರನ್ನು ಹಣಿದು ಹಾಕಿದ್ದ ಸಮಯ. ಆಗ ‘ಸತ್ಯಶೋಧಕ ಸಮಾಜ ಸ್ಥಾಪಿಸಿದ್ದ ಜ್ಯೋತಿ ಬಾ ಪುಲೆ ಅವರಿಗೆ ಈ ಸಮಸ್ಯೆಗಳ ವಿರುದ್ಧ ಹೋರಾಡಲು ದಕ್ಕಿದ ಪ್ರಬಲ ಅಸ್ತ್ರ ‘ಪೋವಾಡ ಹಾಗೂ ‘ತಮಾಷಾ ಎಂಬೆರಡು ಜಾನಪದ ಕಲೆಗಳು.

ಕ್ರಾಂತಿ ಹುಟ್ಟಿದ್ದು, ಪುರಾಣದ ಕಥೆಗಳನ್ನಷ್ಟೇ ಪ್ರದರ್ಶಿಸುತ್ತಿದ್ದ ಈ ಕಲೆಗಳನ್ನು ಬ್ರಾಹ್ಮಣ ಯಾಜಮಾನ್ಯದ ಶೋಷಣೆ, ಹಾಗೂ ಶ್ರೇಣೀಕೃತ ಸಮಾಜ ವ್ಯವಸ್ಥೆಗಳ ವಿರುದ್ಧ ಹೋರಾಟಕ್ಕೆ ಮತ್ತು ರಾಷ್ಟ್ರೀಯ ಐಕ್ಯತೆಯ ಧ್ಯೇಯಕ್ಕಾಗಿ ಬಳಸಿಕೊಂಡಾಗ. ಕ್ಷತ್ರಿಯ ಶಿವಾಜಿ ಪೊವಾಡದ (ಮರಾಠಿ ಯೋಧರ ಶೌರ್ಯ, ಸಾಹಸಗಳನ್ನು ಹೊಗಳುವ ಲಾವಣಿ) ಮೂಲಕ ಕೆಳವರ್ಗಗಳ ಧೀರೋದಾತ್ತ ನಾಯಕನಾಗಿ ಬಿಂಬಿಸಲ್ಪಟ್ಟ. ಅಬ್ರಾಹ್ಮಣ ವರ್ಗದ ಆತ್ಮವಿಶ್ವಾಸ ಹೆಚ್ಚಿಸುವ, ಆವರೆಗೆ ಅನಾವರಣಗೊಂಡಿರದ ಅನೇಕ ಚಾರಿತ್ರಿಕ ಸತ್ಯಗಳು ಈ ಜನರ ನೈತಿಕ ಬೆಂಬಲಕ್ಕೆ ನಿಂತದ್ದು ಪೊವಾಡದ ಹಾಡುಗಳ ಗುಂಗಿನಿಂದಾಗಿ. ಭೂಮಾಲೀಕರ ಮನ ಕರಗಿಸಿದ್ದೂ ಇವುಗಳೇ!

ಮಹಾರಾಷ್ಟ್ರಾದ ವಿವಿಧೆಡೆಗಳಿಂದ ಆರಿಸಿದ ಜನರನ್ನು ತಮಾಷಾ ತಂಡಗಳಲ್ಲಿ ಸೇರಿಸಿ ಪ್ರದರ್ಶನಗಳಲ್ಲಿ ತೊಡಗಿಸಲಾಯಿತು. ತಮಾಷಾದ ಆಕೃತಿಯನ್ನು ಹಾಗೇ ಉಳಿಸಿಕೊಂಡು ವಸ್ತುವಿನಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಾಯಿತು. ಕೆಳವರ್ಗಗಳ ಜನರ ಇತಿಹಾಸ, ಸಂಸ್ಕೃತಿಗಳ ಪುನರ್‌ಶೋಧ ಸಾಧ್ಯವಾಯಿತು. ತಮಾಷಾ, ಪೊವಾಡಾಗಳು ಹೊಸ ಮೆರುಗು ಪಡೆದು ಜನಪ್ರಿಯವಾದದ್ದಷ್ಟೇ ಅಲ್ಲ, ಜನರ ನಿತ್ಯದ ಬದುಕಿನ ಭಾಗಗಳಾದವು. ಮುಂದೆ ಬಂಗಾಲದಲ್ಲಿ ಉತ್ಪಲ್‌ದತ್ ೬೦-೭೦ರ ದಶಕದ ಹೊತ್ತಿಗೆ ಜಾತ್ರಾವನ್ನು ಇದೇ ಮಾದರಿಯಲ್ಲಿ ಬಳಸಿಕೊಂಡರು.

ಈ ಶತಮಾನದ ೫೦ರ ದಶಕ ಮಧ್ಯಪ್ರದೇಶದ ಛತ್ತೀಸ್‌ಘರ್‌ನಲ್ಲಿ ಆರಂಭಗೊಂಡಿದ್ದು ಜನಪದ ನೃತ್ಯ ‘ನಚ್ಚಾದ ಪುನರ್ಜನ್ಮದೊಂದಿಗೆ. ಅದರ ಕಾರಣಕರ್ತ ರಾಯ್‌ಪುರ್ ಎಂಬ ಚಿಕ್ಕ ಊರಿನ ಮಧ್ಯಮ ವರ್ಗದ ಉತ್ಸಾಹಿ ಯುವಕ ಹಬೀಬ್ ತನ್ವೀರ್. ಹಬೀಬ್ ರಂಗಶಿಕ್ಷಣ ಪಡೆದದ್ದು ಯುರೋಪಿನ ರಾಯಲ್ ಅಕಾಡೆಮಿ ಆಫ್ ಡ್ರಾಮ್ಯಾಟಿಕ್ ಆರ್ಟ್ಸ್ ಹಾಗೂ ಬ್ರಿಸ್ಟಲ್ ಓಲ್ಡ್‌ವಿಕ್ ಥಿಯೇಟರ್‌ಗಳಲ್ಲಿ.

ಹಬೀಬ್ ತನ್ವೀರ್ ವೃತ್ತಿ ಬದುಕನ್ನು ಆರಂಭಿಸಿದಾಗಿನ್ನೂ ಜಾನಪದ ಕಲೆಗಳು ಸಮಕಾಲೀನ ರಂಗಭೂಮಿ ಚಟುವಟಿಕೆಗಳ ಭಾಗವಾಗಿ ಪ್ರಾಮುಖ್ಯತೆ ಪಡೆದಿರಲಿಲ್ಲ. ಶಿಕ್ಷಣ ಮುಗಿಸಿ ಭಾರತಕ್ಕೆ ಮರಳುವ ಹೊತ್ತಿಗೆ ಅರಿವಾದದ್ದು, ‘ಪಶ್ಚಿಮದಿಂದ ಆಮದು ಮಾಡಿಕೊಂಡ ರಂಗಪ್ರಕಾರಗಳು ನಮ್ಮ ಸಮಾಜದ ಆಶೋತ್ತರಗಳು, ಜೀವನ ವಿಧಾನ, ಸಾಂಸ್ಕೃತಿಕ ಸ್ವರೂಪಗಳು ಹಾಗೂ ಮೂಲಭೂತ ಸಮಸ್ಯೆಗಳನ್ನು ಸಮರ್ಥವಾಗಿ ಮಂಡಿಸಲು ಅಶಕ್ತವಾದವು ಎಂದು! ಹಾಗೆಂದು ಛತ್ತೀಸಘರ್‌ನ ಜಾನಪದ ನೃತ್ಯ ನಚ್ಚಾದಲ್ಲಿ ಸಮಕಾಲೀನ ಪರಿಕಲ್ಪನೆಗಳನ್ನು ಪರಿಚಯಿಸಿದರು. ಇದು ಜನಪ್ರಿಯವಾಗಿ ತನ್ವೀರರೇ ಸ್ಥಾಪಿಸಿದ ನಯಾ ಥಿಯೇಟರ್ನ ಉತ್ಕರ್ಷಕ್ಕೆ ಕಾರಣವಾಯಿತು. ಜಾನಪದ ಕಲಾವಿದರನ್ನು ಅವರ ಕಲೆಗೆ ಕುಂದು ಬರದಂತೆ ಹಾಗೂ ರಂಗಭೂಮಿಗೆ ಹೊಂದಿಕೊಳ್ಳುವಂತೆ ಸಕ್ರಿಯವಾಗಿ ತೊಡಗಿಸಿಕೊಂಡರು. ಜಾನಪದ ಕಲೆಗಳ ಕುರಿತಾಗಿ ಹಲವೆಡೆ ದೊಡ್ಡ ಮಟ್ಟದ ಕಾರ್ಯಾಗಾರಗಳಾದವು. ಈ ದಿಶೆಯಲ್ಲಿ ವಿನೂತನ ಪ್ರಯೋಗವಾಗಿ ಯಶಸ್ವಿಯಾದದ್ದು ಅವರ ಮೂಲ ನಾಟಕ ‘ಆಗ್ರಾ ಬಜಾರ್. ೧೯೬೩ ರಲ್ಲಿ ರಾಜಾಸ್ತಾನೀ ಜಾನಪದ ಕಥೆಯೊಂದರ ಸ್ಫೂರ್ತಿಯಿಂದ ನಿರ್ಮಿಸಿದ ಚರಣ್‌ದಾಸ್ ಚೋರ್ ಜನಪದ ಪ್ರಚಾರದಲ್ಲಿ ಆಧುನಿಕ ವಸ್ತುವಿನ ಕ್ರಿಯಾಶೀಲ ಪ್ರಯೋಗಕ್ಕೆ ಇನ್ನೊಂದು ಅತ್ಯುತ್ತಮ ಉದಾಹರಣೆ. ದೇಶಾದ್ಯಂತ ಇಂದಿಗೂ ಜನಪ್ರಿಯತೆ ಕಾಯ್ದುಕೊಂಡಿರುವುದು ಈ ನಾಟಕದ ಗಟ್ಟಿತನಕ್ಕೆ ಸಾಕ್ಷಿ.

ಹಬೀಬ್ ತನ್ವೀರ್‌ರ ಹೆಚ್ಚಿನ ಎಲ್ಲ ಪ್ರಯೋಗಗಳೂ ಜಾನಪದ ಕಲೆಗಳನ್ನು ಸಮಕಾಲೀನಗೊಳಿಸಿ ಆ ಮೂಲಕ ಪ್ರಸಕ್ತ ಸಮಸ್ಯೆಗಳನ್ನು ಚರ್ಚಿಸಿದವು. ಬರಹವೊಂದು ಹೇಳುವ ಹಾಗೆ ‘ತನ್ವೀರ್‌ರ ಜನಪದದೆಡೆಗಿನ ಆಸಕ್ತಿ ಕೇವಲ ಕ್ರಾಂತಿಕಾರೀ ಅಥವಾ ಪ್ರಾಚೀನವಾದೀ ತುಡಿತಗಳಿಂದ ಹುಟ್ಟಿದ್ದಲ್ಲ. ಬದಲಾಗಿ ಅದು ಈ ಪ್ರಕಾರಗಳಲ್ಲಿ ಹುದುಗಿರುವ ಅದ್ಭುತ ಸೃಜನಶೀಲ ಸಾಧ್ಯತೆಗಳು ಹಾಗೂ ಇದರ ಕಲಾತ್ಮಕ ಶಕ್ತಿಯ ಅರಿವಿನಿಂದ ಬಂದಿದ್ದು!


ಕರ್ನಾಟಕದಲ್ಲಿ ಇಂಥಹ ಪ್ರಯತ್ನಗಳು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸುವಷ್ಟು ಆಗಿದೆಯಾದರೂ (ಕಂಬಾರರು, ದೇವನೂರು) ಪ್ರದರ್ಶನ ಕಲೆಗಳ ಮಟ್ಟಿಗೆ ವಿರಳ. ಶಿವರಾಮ ಕಾರಂತ, ಬಿ. ವಿ. ಕಾರಂತರ ರಂಗ ಪ್ರಯೋಗಗಳು ಒಂದೆರಡು ಉದಾಹರಣೆಗಳು. ಆದರೆ ಒಂದು ಚಳುವಳಿಯಾಗಿ ಅಥವಾ ಜನಪದ ಪ್ರಕಾರವೊಂದರ ಪುನರುಜ್ಜೀವನ ಕ್ರಿಯೆಯಾಗಿ ಈ ಕೆಲಸ ಇನ್ನೂ ಆಗಿಲ್ಲ. ಹಾಗೆ ನೋಡಿದರೆ ಸಮಕಾಲೀನ ಪ್ರಸ್ತುತತೆ ಜಾನಪದ ಕಲೆಗಳ ಅಂತರ್ಗತ ಸ್ವಭಾವವೇ ಹೌದು. ಪುರಾಣವನ್ನು ಸಮಕಾಲೀನವೂ ಹೌದೆಂಬಂತೆ ಬಿಂಬಿಸುವ, ಕಾಲದ ಎಲ್ಲ ಪರಿಮಿತಿಗಳನ್ನು ದಾಟಿ ನಿತ್ಯ ಸತ್ಯವೊಂದನ್ನು ಸಂವಹಿಸುವ ಶಕ್ತಿ ಅವಕ್ಕಿದೆ. ಆದರೆ ಈ ಪ್ರಕ್ರಿಯೆ ಇನ್ನಷ್ಟು ಮೂರ್ತವಾಗಿ, ದೈನಂದಿನ ಭಾವಲೋಕವನ್ನು ಮತ್ತಷ್ಟು ಹತ್ತಿರವಾಗಿ ಪ್ರತಿನಿಧಿಸಿದರೆ ಚೆನ್ನ. ಜಾನಪದದ ಒಂದಾನೊಂದು ಕಾಲ, ದೇಶಗಳು ನಮ್ಮ ಇಂದಿನ ಕಾಲ ದೇಶಗಳೇ ಆದಲ್ಲಿ ಜಾನಪದ ಹೆಚ್ಚು ಪರಿಣಾಮಕಾರಿಯಾಗುತ್ತದೆ.

Leave a Reply

*

code