ಅಂಕಣಗಳು

Subscribe


 

ರಂಗ ಸಂಪ್ರದಾಯದ ವಿಶ್ವಕೋಶ

Posted On: Thursday, November 6th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


– ಮನೂ ‘ಬನ

ಭಾರತದ ರಂಗಸಂಪ್ರದಾಯಗಳೆಲ್ಲದಕ್ಕೂ ಆಧಾರ ಗ್ರಂಥವೆಂದು ನಾವು ಪರಿಗಣಿಸುವುದಾದರೆ ಪ್ರಥಮ ಸ್ಥಾನ ಭರತಮು ವಿರಚಿತ ನಾಟ್ಯಶಾಸ್ತ್ರಕ್ಕೆ. ಜಗತ್ತಿನಲ್ಲಿ ಮೊತ್ತಮೊದಲ ಬಾರಿಗೆ ರಂಗ ಮಾಧ್ಯಮವನ್ನು ಶಾಸ್ತ್ರೀಯವಾಗಿ ತಿಳಿಸಿದ ಹಲವು ಕಲಾಪ್ರಕಾರಗಳಕ್ಕೇ ಇರುವ ವಿಶ್ವಕೋಶವಿದು. ಇದು ಕೇವಲ ಭರತನಾಟ್ಯಕ್ಕಷ್ಟೇ ಅಲ್ಲದೆ ಭಾರತದ ಎಲ್ಲಾ ರಂಗಕಲೆಗಳಿಗೂ ಆಕರ ಗ್ರಂಥ.

ಕ್ರಿಸ್ತಪೂರ್ವ ೨ ಮತ್ತು ಕ್ರಿಸ್ತ ಶಕ ೨ ಶತಮಾನಗಳ ನಡುವೆ ರಚಿತವಾಯಿತೆನ್ನಲಾದ ಈ ಗ್ರಂಥದ ರಚನೆ ರಾಮಾಯಣ-ಮಹಾಭಾರತದ ಪೂರ್ವದ್ದೋ ಅಥವಾ ನಂತರದ್ದೋ ಎಂಬುದಕ್ಕೆ ನಿಗದಿತ ಆಧಾರಗಳೂ ಕಂಡುಬಂದಿಲ್ಲ. ಕೆಲವರ ಹೇಳಿಕೆಯಂತೆ ಈ ಗ್ರಂಥದ ಗದ್ಯದ ಶೈಲಿ ತೀರಾ ಪ್ರಾಚೀನವಾದುದೇನಲ್ಲ.

ಇದರ ಕರ್ತೃ ಭರತನೆನ್ನೆಲಾಗಿದ್ದರೂ, ಭರತನೆನ್ನುವ ವ್ಯಕ್ತಿಗಳು ಭಾರತದಲ್ಲಿ ಹಲವಾರು ಜನ ಆಗಿಹೋಗಿದ್ದಾರೆ. ಅವರ ಪೈಕಿ ಇಂತವನೇ ಇದನ್ನು ಬರೆದಾತ ಎಂಬ ಖಚಿತ ಅಭಿಪ್ರಾಯವಿಲ್ಲ. ಏಕೆಂದರೆ ಹಿಂದೂ ಪರಂಪರೆಯಲ್ಲಿ ಭರತಮುನಿ ಎಂಬ ಹೆಸರಿರುವರು ಎಲ್ಲಿಯೂ ಕಂಡು ಬರುವುದಿಲ್ಲ. ನಮಗೆ ಗೊತ್ತಿರುವ ದುಷ್ಯಂತನ ಮಗ ಭರತ ಭಾರತದ ಸೃಷ್ಟಿಕರ್ತನೆನ್ನಲಾಗುತ್ತಿದೆ. ಆದರೂ ಭರತನೆನ್ನುವವನು ಮುನಿಯೇ ಆಗಿರಬಹುದೆಂದು ಅಂದಾಜಿಸಲಾಗಿದ್ದು, ಈ ಪ್ರತೀತಿ ಪರಂಪರೆಯಿಂದ ಬಂದಂತದ್ದು. ಕಾಳಿದಾಸನೂ ತನ್ನ ವಿಕ್ರಮೋರ್ವಶೀಯ ನಾಟಕದಲ್ಲಿ ಈತನ ಹೆಸರನ್ನು ಸೂಚಿಸಿದ್ದಾನೆ.

ನಾಟ್ಯದ ಉಗಮದಿಂದ ಆರಂಭಿಸಿ ಅದರ ಉಪಯೋಗ ಮತ್ತು ರಂಗದ ಹಲವು ಆಯಾಮಗಳನ್ನು ಸಮಗ್ರವಾಗಿ ವಿವರಿಸುವ ನಾಟ್ಯಶಾಸ್ತ್ರದಲ್ಲಿ ೩೬೬ ಅಧ್ಯಾಯಗಳಿವೆ.

ರಂಗದ ಸ್ವರೂಪ, ನಿರ್ಮಾಣದಿಂದ ಹಿಡಿದು ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನು ಇದರಲ್ಲಿ ಸಿದ್ಧಾಂತೀಕರಿಸಲಾಗಿದೆ. ಛಂದಸ್ಸು-ಸಂಗೀತ-ಕಾವ್ಯ ಮೀಮಾಂಸೆ ಮೊದಲಾದ ಸಂಬಂಧಿತ ಕ್ಷೇತ್ರಗಳ ಬಗ್ಗೆ ಮಾಹಿತಿ ನೀಡುವ ನಾಟ್ಯಶಾಸ್ತ್ರ ಗ್ರಂಥ ಭಾಷೆ ಸಂಸ್ಕೃತ. ನಿರೂಪಣೆಯು ಶ್ಲೋಕ, ಗದ್ಯಗಳನ್ನು ಒಳಗೊಂಡಿದ್ದು, ಪಾತ್ರ ಸಂಭೋಧನೆ, ಛಂದಸ್ಸು ಹೋಲಿಕೆಗಳನ್ನು ಕಾಣಬಹುದು. ಋಷಿ ಮುನಿವರೇಣ್ಯರು ಬ್ರಹ್ಮನಲ್ಲಿಗೆ ತೆರಳಿ ನಾಟ್ಯೋತ್ಪತ್ತಿಗೆ ನಿವೇದಿಸಿರುವುದು ನಾಟ್ಯಶಾಸ್ತ್ರದ ಪ್ರಥಮ ಅಧ್ಯಾಯ.

ಸಂಸ್ಕೃತದಲ್ಲಿರುವ ಈ ಕೃತಿಯ ಭಾಷಾನುವಾದವನ್ನು ಭಾರತದ ವಿವಿಧ ಭಾಷೆಗಳಲ್ಲಿ ಕಾಣಬಹುದು. ಕನ್ನಡದಲ್ಲಿ ಸಾಗರದ ಹೆಗ್ಗೋಡು ಪ್ರಕಾಶನದಿಂದ ಹೊರತರಲಾಗಿದ್ದು, ಆದ್ಯ ರಂಗಾಚಾರ್ಯ ವಿಮರ್ಶಾತ್ಮಕ ಟಿಪ್ಪಣಿ ಹಾಗೂ ಅನುಬಂಧಗಳೊಂದಿಗೆ ಈ ಅನುವಾದವನ್ನು ಮಾಡಿದ್ದಾರೆ. ಇಂಗ್ಲೀಷ್ ಅವತರಣಿಕೆಯನ್ನು ಶ್ರೀರಂಗ, ಡಾ| ಮನಮೋಹನ್ ಘೋಷ್, ಬಡೋದೆ ಆವೃತ್ತಿ, ನಿರ್ಣಯಸಾಗರ ಆವೃತ್ತಿ ಮೊದಲಾದವರ ಹೆಸರಿನಲ್ಲಿ ಕಾಣಬಹುದಾಗಿದೆ. ಹಿಂದಿಯಲ್ಲಿ ದಿಲ್ಲಿ ವಿಶ್ವವಿದ್ಯಾನಿಲಯವು ಬರೀ ೬ ಅಧ್ಯಾಯಗಳುಳ್ಳ ಅಭಿನವ ಭಾರತೀ ಎಂಬ ಭಾಷಾನುವಾದವನ್ನು ಹೊರತಂದಿದ್ದರೆ, ಮರಾಠಿಯಲ್ಲಿ ಗೋದಾವರೀ ಕೇತಕರು ಈ ಕಾರ್ಯ ಮಾಡಿದ್ದಾರೆ.

ನಾಟ್ಯಶಾಸ್ತ್ರಕ್ಕಿಂತಲೂ ಮುಂಚೆ ಶಿಲಾಲಿನ್, ಕೃಶಾಶ್ವರ ನಟಸೂತ್ರಗಳನ್ನು ಕಾಣಬಹುದಾದರೂ ಇವರೆಲ್ಲರ ಅಭಿಪ್ರಾಯಗಳನ್ನು ಒಂದೆಡೆ ಸೇರಿಸಿ ಸಮಗ್ರವಾಗಿ ಕೊಟ್ಟದ್ದು ನಾಟ್ಯಶಾಸ್ತ್ರವೇ ಆಗಿದೆ. ಏಕೆಂದರೆ ವೇದ, ಬ್ರಾಹ್ಮಣ, ಉಪಷತ್ತುಗಳ ತರುವಾಯ ಗೋಚರಿಸುವ ಶಾಸ್ತ್ರಗಳಿಗೂ ಮುಂಚೆ ಸೂತ್ರಗಳ ಬಳಕೆಯಿತ್ತು ಎನ್ನುವುದು ಸುಸ್ಪಷ್ಟ. ಆದರೆ ಎಲ್ಲ ಆಖ್ಯಾನ, ತತ್ವಜ್ಞಾನಗಳನ್ನು ಕಲೆಹಾಕಿ ಸಮಗ್ರವಾಗಿ ಇಂದಿನವರೆವಿಗೂ ಸೈದ್ಧಾಂತಿಕ ನೆಲೆಗಟ್ಟಿನ ಅಡಿಪಾಯ ಹಾಕಲು ಸಹಕರಿಸಿದುದು ನಾಟ್ಯಶಾಸ್ತ್ರ ಎಂಬುದರಲ್ಲಿ ಅನುಮಾನವಿಲ್ಲ. ಅಷ್ಟಕ್ಕೂ ಗ್ರಂಥಕ್ಕೆ ಪ್ರಾಧಾನ್ಯತೆ ದೊರಕಲಿ ಎಂಬ ಕಾರಣಕ್ಕೇ ನಾಟ್ಯಶಾಸ್ತ್ರವೆಂಬುದು ಬ್ರಹ್ಮನ ಮೂಲ ಗ್ರಂಥದ ಸಂಕುಚಿತ ಆವೃತ್ತಿ, ಐದನೇಯ ವೇದ ಎಂದು ಹೇಳಿಕೊಂಡಿರುವ ಸಾಧ್ಯತೆಯಿದೆ ಎನ್ನಲಾಗಿದೆ. ನಾಟ್ಯವು ಪಂಚಮವೇದ, ಬ್ರಹ್ಮನೇ ಅದರ ಸೃಷ್ಟಿಕರ್ತ ಎನ್ನುವುದರ ಹಿಂದಿನ ಅರ್ಥ ರಂಗಭೂಮಿ ಮತ್ತು ಅದರಲ್ಲಿನ ಆಸಕ್ತಿ ಅನಾದಿ ಎಂಬುದು. ಇಂಥ ಹಲವು ಸಂಕೇತಗಳನ್ನು ಮತ್ತು ಅಷ್ಟೇ ವಿರೋಧಾಭಾಸಗಳನ್ನು ನಾವು ಕಾಣುತ್ತೇವೆ. ಅಷ್ಟಕ್ಕೂ ನಾಟ್ಯಶಾಸ್ತ್ರದ ಕಾಲ, ಕರ್ತೃವಿನ ಕುರಿತಾದ ವಿಚಾರಗಳು ಮೊದಲಿನಿಂದಲೇ ಚರ್ಚಾಸ್ಪದ. ಹತ್ತು ಶತಮಾನಗಳಿಗೂ ಮೊದಲೇ ಉದ್ಭಟ, ಲೋಲ್ಲಟ, ಶಂಕುಕ, ಕೀರ್ತಿಧರ, ಅಭಿನವಗುಪ್ತ್ತ ಮುಂತಾದ ಟೀಕಾಕಾರರು ನಾಟ್ಯಶಾಸ್ತ್ರದ ಬಗ್ಗೆ ಭಾಷ್ಯಗಳನ್ನು ಬರೆದಿದ್ದಾರೆ. ಆದರೂ ‘ಬರೆದವನು ಮುನಿ, ಮೂಲದಲ್ಲಿ ವೇದ, ಈಗ ಶಾಸ್ತ್ರ ಎಂಬ ಭಾವನೆ ಉಳಿದುಕೊಂಡಿದೆ.

ಅಷ್ಟೇ ಅಲ್ಲ, ನಾಟ್ಯಶಾಸ್ತ್ರವೇ ನಿಜವಾದ ಶಾಸ್ತ್ರ; ಅದನ್ನು ಮೀರಿಹೋಗಬಾರದು ಅನ್ನುವ ನೃತ್ಯಗುರುಗಳ ತರ್ಕವೂ ಜೊತೆಗಿದೆ. ಹಾಗೆ ನೋಡಿದರೆ ಸ್ವತಃ ಭರತಮುನಿಯೇ ‘ನಾಟ್ಯಶಾಸ್ತ್ರದಲ್ಲಿ ಹೇಳಿದಂತೆಯೇ ಮಾಡಬೇಕೆಂದೇನೂ ಇಲ್ಲ. ವೇಷ-ಭಾಷೆಗಳು ಪ್ರೇಕ್ಷಕರ ಪ್ರದೇಶದ್ದಾಗಿದ್ದು, ಜನರ ನಡೆ-ನುಡಿಗಳನ್ನು ಗಮನಿಸಿ ನಟನೆಯನ್ನು ಅನುಸರಿಸಬೇಕು. ಕಾಕ್ಕನುಗುಣವಾಗಿ ಸರಿಯೆನಿಸಿದ್ದನ್ನು ಅಳವಡಿಸಿಕೊಳ್ಳಬಹುದು ಎಂದಿದ್ದಾನೆ. ಆದರೆ ಇದನ್ನು ಸರಿಯಾಗಿ ಅನುಸರಿಸಿದವರು ಅಥವಾ ಹೊಸತೆನಿಸುವ ರೀತಿಯಲ್ಲಿ ಮಾಡಿ ಎಡವಿ ಬಿದ್ದ-ಹೀಗೆ ಎರಡೂ ಸಂದರ್ಭಗಳನ್ನೂ ಕಾಣುತ್ತೇವೆ. ಆದರೆ ವಿಷಾದದ ಸಂಗತಿ ಏನೆಂದರೆ ನಮ್ಮನ್ನೂ ಒಳಗೊಂಡಂತೆ ನಾಟ್ಯಶಾಸ್ತ್ರವನ್ನು ಆದ್ಯಂತವಾಗಿ ಸಂಪೂರ್ಣವಾಗಿ ಓದಿದವರು ಬಹಳ ವಿರಳ. ಅಷ್ಟೇಕೆ, ಎಷ್ಟೋ ನೃತ್ಯಗುರುಗಳ ಶಾಲೆಯಲ್ಲಿ ನಾಟ್ಯಶಾಸ್ತ್ರದ ಒಂದು ಪ್ರತಿಯೂ ಇಲ್ಲದಿರುವುದಿದೆ. ನೃತ್ಯ ರಂಗಭೂಮಿ ಇಂದಿಗೂ ಎಷ್ಟೋ ಬಾರಿ ಕೆಸರಿನಲ್ಲೇ ಕಾಲು ತೊಳೆಯುತ್ತಿರುವುದಕ್ಕೆ ಅಧ್ಯಯನದ ಕೊರತೆ, ಅನಾಸಕ್ತಿಯೇ ಮುಖ್ಯ ಕಾರಣ.

Leave a Reply

*

code