ಅಂಕಣಗಳು

Subscribe


 

ಶ್ಲೋಕ

Posted On: Thursday, November 6th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


– ವೈಷ್ಣವಿ . ಎನ್

ನಾವ್ ಸಣ್ಣ ಮಕ್ಳಾಗಿದ್ದಾಗ ಬೆಳಿಗ್ಗೆ ಅಥ್ವಾ ಸಂಜೆ ದೇವರ ಪೀಠದ ಹತ್ರ ಕೂರಿಸಿ, ತುಪ್ಪದ ದೀಪ ಹಚ್ಚಿ ಅಪ್ಪನೋ, ಅಮ್ಮನೋ, ಅಥವಾ ಅಜ್ಜ ಅಜ್ಜಿಯೋ ಭಜನೆ, ಸ್ತೋತ್ರ, ಶ್ಲೋಕ, ಋತು-ಮಾಸ-ಸಂವತ್ಸರ-ನಕ್ಷತ್ರಗಳನ್ನು ಹೇಳಿಸಿ ಭಗವನ್ನಾಮ ಸ್ಮರಣೆ ಮಾಡ್ಸೋದು ರೂಢಿ. ಇವೆಲ್ಲಾ ಎಷ್ಟು ನೆನಪಲ್ಲಿದೆ ಅಂದ್ರೆ, ಮುಂದೆ ಶಾಲೆ-ಕಾಲೇಜಿನಲ್ಲಿ ಎಷ್ಟೋ ಪಾಠಗಳನ್ನು ಕಲಿತು ಮರೆತರೂ‌ಇವು ಮಾತ್ರ ಇಂದಿಗೂ ನೆನಪಲ್ಲುಳ್ದಿದೆ. ಆದ್ರೆ ಇಂದಿನ ಮಕ್ಳಿಗೆ ಈ ಸಂಸ್ಕಾರ ಎಲ್ಲಿದೆ? ಟೈಮ್ ಎಲ್ಲಿದೆ? ಮನೆಗೆ ಸರಿಯಾಗಿ ಬಂದ್ರೆ ಸಾಕು ಅನ್ನೋ ಹಾಗಾಗಿದೆ. ಸಂಜೆಯಾದ್ರೆ ಸಾಕು, ಮಕ್ಳದ್ದು ಹೋಂವರ್ಕ್ ಪರದಾಟ, ಇಲ್ದಿದ್ರೆ ಟಿ.ವಿ, ಧಾರಾವಾಹಿ, ಸಿನಿಮಾಗಳ ಹೋರಾಟ; ಇಲ್ದಿದ್ರೆ ಶಾಪಿಂಗ್, ಚಾಟಿಂಗ್, ಈಟಿಂಗ್ ! ಅಷ್ಟಕ್ಕೂ ಒಳ್ಳೆಯ ಸಂಸ್ಕಾರ ಕಲಿಸಿಕೊಡಬೇಕಾದ ಅವ್ರವ್ರ ಅಪ್ಪ ಅಮ್ಮಂದಿರಾದ್ರೂ ಸಂಜೆ ಹೊತ್ತಿಗೆ ಮನೆಯಲ್ಲಿ ಎಲ್ಲಿರ್ತಾರೆ? ಎಂದು ನಮ್ಮ ಹಿರಿಯರು ತಮ್ಮ ಗತವೈಭವವನ್ನು ನೆನಪಿಸಿಕೊಳ್ಳುತ್ತ, ಮತ್ತೊಮ್ಮೆ ಈಗಿನ ಬದಲಾದ ಕಾಲಗುಣವನ್ನು ಹಳಿಯುತ್ತ ಗುಣುಗುಣಿಸುವುದನ್ನು ಆಗೊಮ್ಮೆ ಈಗೊಮ್ಮೆ ಕೇಳಿರಬಹುದು. ಅವರ ಹಪಹಪಿಕೆಯಲ್ಲೂ ಅರ್ಥವಿದೆ ಅನ್ನಿಸೋದಿಲ್ವಾ?

ಶ್ಲೋಕ-ಚೂರ್ಣಿಕೆ-ಸ್ತೋತ್ರಗಳನ್ನು ಹೇಳುವ, ಹೇಳಿಸುವ ಪದ್ಧತಿ ಮಾಯವಾಗುತ್ತಿದೆ -ನಿಜ !

ಸದ್ಯದ ಮಟ್ಟಿಗೆ ಇಂತವು ಉಳಿದಿದ್ದರೆ ಶಾಸ್ತ್ರೀಯವೆನ್ನಿಸುವ ಕ್ಷೇತ್ರಗಳಲ್ಲಿ ಮಾತ್ರ. ಅಂದರೆ ಪೂಜೆ-ಪುನಸ್ಕಾರ-ಸತ್ಸಂಗ-ಸಂಗೀತ-ನೃತ್ಯ!

ಹಾಗಾದರೆ ಶ್ಲೋಕವೆಂದರೆ ಏನು? ಅದನ್ನು ನೃತ್ಯದಲ್ಲಿ ಹೇಗೆ ಬಳಸಿಕೊಳ್ಳುತ್ತಾರೆ? ಅದರ ಲಕ್ಷಣಗಳೇನು? ತಿಳಿಯೋಣ ಬನ್ನಿ.

ನಿರ್ದಿಷ್ಟ ಛಂದೋಬಂಧವುಳ್ಳ ಒಂದು ಸಂಸ್ಕೃತ ವೃತ್ತವೇ ಶ್ಲೋಕ. ಭಾವಕ್ಕೆ ತಕ್ಕಂತೆ ರಾಗಕ್ಕೆ ಹೊಂದಿಸಿ ಹಾಡುವುದು ಪರಿಪಾಠ. ಇದರಲ್ಲಿ ತಾಳವಿರುವುದಿಲ್ಲ. ಸಂಸ್ಕೃತ ಭಾಷೆಯ ಮೇಲಿನ ಆದಾರಾಭಿಮಾನ, ಪ್ರೋತ್ಸಾಹದಿಂದಾಗಿ ಹೆಚ್ಚಾಗಿ ಸಂಸ್ಕೃತ ಭಾಷೆಯಲ್ಲಿ ಶ್ಲೋಕಗಳು ರಚಿತವಾಗಿವೆ ಮತ್ತು ಇಂದಿಗೂ ತನ್ನ ವಿವಿಧ ಬಗೆಯ ಅಕ್ಷರ-ಅರ್ಥವ್ಯತ್ಯಾಸಗಳ ಬಹುಮುಖಿ ಕೋನದಿಂದಾಗಿ ಪೂಜನೀಯವೆನಿಸಿವೆ. ಶ್ಲೋಕದ ಸಾಹಿತ್ಯ ಸಾಮಾನ್ಯವಾಗಿ ದೇವತಾಸ್ತುತಿ, ಪಾರ್ಥನೆ, ವರ್ಣನೆ, ಲೀಲಾವೈಭವ..ಹೀಗೆ ಬಹುರೂಪಿ.

ಶ್ಲೋಕಗಳಲ್ಲಿ ಎರಡು ಅಥವಾ ನಾಲ್ಕು ಪಾದಗಳಿರುವುದು ರೂಢಿ. ಪ್ರತಿಯೊಂದು ಪಾದದಲ್ಲಿಯೂ ನಿಯಮಿತವಾದ ಅಂಶಗಣ ಅಥವಾ ಮಾತ್ರಾಗಣವಿರುತ್ತದೆ. ಇದರಿಂದ ಆಯಾಯ ಶ್ಲೋಕದ ಲಕ್ಷಣವು ಉಂಟಾಗುತ್ತದೆ. ನಾಲ್ಕು ಪಾದಗಳಿಗೂ ಒಂದೇ ರೀತಿಯ ಲಕ್ಷಣವಿದ್ದರೆ ಅದು ಸಮಪಾದ. ೧-೩, ೨-೪ ಪಾದಗಳು ಸಮನಾಗಿದ್ದರೆ ಅದು ವಿಷಮಪಾದ ಶ್ಲೋಕವೆನಿಸಿಕೊಳ್ಳುತ್ತದೆ.

ನೃತ್ಯದಲ್ಲಿ ಶ್ಲೋಕವು ವಿವಿಧ ಭಾವಾಭಿವ್ಯಕ್ತಿ ಇರುವ, ಲಾಸ್ಯವೇ ಪ್ರಮುಖವಾಗಿರುವ ನೃತ್ಯಬಂಧ. ನಿತ್ಯಪಠಣ ಮಾಡುವ ಶ್ಲೋಕಗಳನ್ನು ಸಂಗೀತ -ನೃತ್ಯದಲ್ಲಿ ಬಳಸುತ್ತಾರಾದರೂ ಅವುಗಳ ಸಂಖ್ಯೆ ಕಡಿಮೆ. ಬದಲಾಗಿ ಸಾಂಪ್ರದಾಯಿಕವಾಗಿ ಬಳಕೆಯಾಗುತ್ತಲೇ ಬಂದಿರುವ ಶ್ಲೋಕಗಳೇ ನೃತ್ಯದಲ್ಲಿ ಜನಪ್ರಿಯ. ದೇವರ ಅಥವ ನಾಯಕನ ಗುಣ-ಮಹಿಮೆಯನ್ನು ತಿಳಿಯುವ, ರೂಪವನ್ನು ವರ್ಣಿಸುವ, ಪೂಜೆಯನ್ನು ನೆರವೇರಿಸುವ, ದಾಸ್ಯ ಭಾವದ ನಮ್ರ ಸೇವೆಯನ್ನು ಮಾಡುವ, ಆತ್ಮನಿವೇದನೆಯ, ವಾತ್ಸಲ್ಯ, ತನ್ಮಯತೆ, ಸಖ್ಯ, ಸ್ನೇಹಪರತೆ, ಮುಂತಾದ ಭಕ್ತಿ, ಆಸಕ್ತಿಗಳ ಸಮ್ಮಿಲನ ರೂಪವನ್ನು ಶ್ಲೋಕದಲ್ಲಿ ಕಾಣುತ್ತೇವೆ.

ಕನ್ನಡದಲ್ಲಿ ಶ್ಲೋಕಗಳಿಗೆ ಸಮನಾಗಿ ದಾಸಶ್ರೇಷ್ಟರಿಂದ ರಚಿತವಾದ ಉಗಾಭೋಗಗಳನ್ನು ಹೆಸರಿಸಬಹುದು. ಉಗಾಭೋಗಗಳು ಪದ-ದೇವರನಾಮಗಳಿಗೆ ಪೂರ್ವಭಾವಿಯಾಗಿ ಬರುವ, ದೇವರನಾಮಗಳ ಸಾಹಿತ್ಯ ಉದ್ದೇಶವನ್ನು ಸೂಕ್ಷ್ಮವಾಗಿ ಸ್ಪಷ್ಟಪಡಿಸುವ ಸಾಹಿತ್ಯ ವಿಭಾಗ. ಕೆಲವೊಂದು ಬಾರಿ ಉಗಾಭೋಗಗಳನ್ನಷ್ಟೇ ಅಭಿನಯಿಸುವ ಪದ್ಧತಿಯೂ ಜನಪ್ರಿಯ. ಆದರೂ ಶ್ಲೋಕದಷ್ಟು ಅಭಿನಯ ವಿಸ್ತರಣವನ್ನು ಉಗಾಭೋಗಗಳು ನೀಡಲಾರವು ಎಂಬುದೊಂದು ಅನಿಸಿಕೆ.

ಶ್ಲೋಕವನ್ನು ಪುಷ್ಪಾಂಜಲಿ, ದೇವರನಾಮ ಅಥವಾ ಕೀರ್ತನೆಗಳಿಗಿಂತ ಮುಂಚೆ ಅಥವಾ ಅವುಗಳಿಗೆ ಪೂರಕವಾಗಿ ಅಭಿನಯಿಸುವ ಪದ್ಧತಿ ಚಾಲ್ತಿಯಲ್ಲಿದೆ. ಆದರೆ ಸಾಂಪ್ರದಾಯಿಕವಾಗಿ ತಿಲ್ಲಾನದ ನಂತರ ಶಾಂತಿ, ಸಮಸ್ಥಿತಿಯನ್ನು ಕಂಡುಕೊಳ್ಳಲು ಅಥವಾ ಮಂಗಳ ಹಾಡಲು ಅಭಿನಯಿಸಲಾಗುತ್ತದೆ. ವಿಳಂಬ ರೀತಿಯ ಹಾಡುಗಾರಿಕೆ ಇದಕ್ಕೆ ಒಪ್ಪುವಂತದ್ದು. ಮಧ್ಯಮಾವತಿ, ಶ್ರೀರಾಗ, ಸುರುಟಿ ಇಂತಹ ರಾಗಗಳನ್ನು ಮುಕ್ತಾಯದ ಸಮಯದಲ್ಲಿ ಬಳಸಿ ಮಂಗಳ ಹಾಡುವುದು ಕ್ರಮ. ಮೊದಮೊದಲಿಗೆ ಆರಭಿ ರಾಗವನ್ನು ಶ್ಲೋಕಗಳಿಗೆ ಬಳಸಲಾಗುತ್ತಿತ್ತಾದರೂ, ಇತ್ತೀಚೆಗೆ ರಾಗಮಾಲಿಕೆ ರಾಗಗಳಲ್ಲಿ ಹಾಡುವ ಕ್ರಮ ಬೆಳೆದುಬಂದಿದೆ.

ಕೆಲವೊಂದು ವಿಮರ್ಶಕರು ದೇವತಾಸ್ತುತಿ ನೃತ್ಯ ಶ್ಲೋಕಾಭಿನಯಕ್ಕೆ ಸೂಕ್ತವಲ್ಲ ಎನ್ನುವುದಿದೆ. ಕಾರಣಗಳೂ ಆಯಾಯ ಸಂಪ್ರದಾಯ ಮತ್ತು ಅವರವರ ಮನೋಭಾವಕ್ಕನುಗುಣವಾಗಿ ಸಾಕಷ್ಟಿರುತ್ತವೆ. ಕೆಲವೊಮ್ಮೆ ಪರೀಕ್ಷೆಗಳ ದೃಷ್ಟಿಯಿಂದಲೀ ನಿರ್ಧಾರವಾಗುವುದಿದೆ. ಆದರೆ ಇಂತಹ ಸಮಯದಲ್ಲಿ ಶ್ಲೋಕಗಳಲ್ಲಿ ಉತ್ಕೃಷ್ಟ ಮಟ್ಟದ ನಾಯಿಕಾ-ನಾಯಕಾ ಭಾವಗಳನ್ನು ಅಪೇಕ್ಷಿಸಲಾಗುತ್ತದೆ. ಇದರಲ್ಲೂ ಶೃಂಗಾರಪೂರಿತವಾದುವು, ಭಕ್ತಿಪೂರಿತವಾದವು, ವರ್ಣನಾಪೂರಿತವಾದುವು ಎಂಬ ಮೂರು ವಿಧಗಳಿವೆ. ಶೃಂಗಾರ ಪ್ರಧಾನವಾದವುಗಳಲ್ಲಿ ನಾಯಕಾ-ನಾಯಿಕಾ ಭಾವ ಯಥೇಚ್ಛವಾಗಿದ್ದು; ವಿರಹತಾಪ, ಭಯ, ಶೋಕ, ಆನಂದ ಹೀಗೆ..ನಾನಾ ಭಾವಗಳೊಂದಿಗೆ ನರ್ತಕಿಯ ಜೀವಾತ್ಮವು ಪರಮಾತ್ಮನಲ್ಲಿ ಐಕ್ಯವಾಗುವುದೇ ಧ್ಯೇಯವಾಗಿರುತ್ತದೆ.

ಲೀಲಾಶುಕ ಕವಿಯ ಶ್ರೀಕೃಷ್ಣಕರ್ಣಾಮೃತ ಶ್ಲೋಕಗಳು ಬಹಳ ಜನಪ್ರಿಯ. ಈ ಶ್ಲೋಕಗಳಲ್ಲಿ ಶೃಂಗಾರ, ಭಕ್ತಿ, ವರ್ಣನೆ- ಎಲ್ಲವೂ ಇದೆ. ಗೀತಗೋವಿಂದ, ಅಮರಶತಕ, ಸೌಂದರ್ಯಲಹರಿ, ಮುಕುಂದಮಾಲಾ ಸ್ತೋತ್ರ ಮುಂತಾದ ಕಾವ್ಯಗಳಿಂದ, ಮುಕ್ತಕಗಳಿಂದಲೂ ಶ್ಲೋಕವನ್ನು ಹಾಡಲಾಗುತ್ತದೆ.

ಶ್ಲೋಕಗಳ ಸಾಲುಗಳನ್ನು ಹಾಡುವಾಗ ಪುನರಾವರ್ತಿಸಿ ಹಾಡಲಾಗುತ್ತದೆ. ಇದರಿಂದ ರಾಗದ ಸುಂದರ ನಿರೂಪಣೆ ಇಲ್ಲಿ ಸಾಧ್ಯ.. ಜೊತೆಗೆ ಸಾಹಿತ್ಯವನ್ನು, ಸಂಬಂಧಪಟ್ಟ ಭಾವಗಳನ್ನು ಅಭಿನಯದ ಮುಖಾಂತರ ಕಲಾವಿದರು ವಿವರವಾಗಿ ವಿಸ್ತರಿಸುತ್ತಾರೆ. ಆದ್ದರಿಂದ ಇಂತಹ ಸಂಚಾರಿ ಭಾವಗಳಿಗೆ ಪ್ರಾಮುಖ್ಯತೆ ಹೆಚ್ಚು. ದೇಹಕ್ಕೆ ಹೆಚ್ಚಿನ ಶ್ರಮ ಕೊಡದೇ ಅಭಿನಯವನ್ನೇ ಜೀವಾಳವಾಗಿರಿಸಿಕೊಂಡು ಕೈಯ್ಯ ಮುದ್ರೆ, ಅಂಗವಿನ್ಯಾಸ, ಭಂಗಿ, ಕಾಲ್ಚಲನೆ, ಮುಖಭಾವಗಳಿಂದ ಮಾಡುವ ನಿಂದಾಸ್ತುತಿಗಳ ಸುಂದರ ನೃತ್ಯಬಂಧವಿದು. ಹಾಗಾಗಿ ಅಭಿನಯಿಸುವ ಕಲಾವಿದನ ಪರಿಪೂರ್ಣತೆಯನ್ನು ಒರೆಗೆ ಹಚ್ಚುವುದಷ್ಟೇ ಅಲ್ಲದೆ, ಗಾಯಕನಲ್ಲಿರುವ ಪ್ರತಿಭೆಗೂ ಕನ್ನಡಿ ಹಿಡಿವ, ಕವಿಹೃದಯಗಳಿಗೆ ರಂಜನೆಯುಂಟುಮಾಡುವ ಸಾಹಿತ್ಯಪ್ರಕಾರ. ನುರಿತ ಕಲಾವಿದರಷ್ಟೇ ಭಾವಪೂರ್ಣರಾಗಿ ಶ್ಲೋಕಗಳನ್ನು ಅಭಿನಯಿಸಿಯಾರು.

Leave a Reply

*

code