ಅಂಕಣಗಳು

Subscribe


 

ಕಾವ್ಯ ಮತ್ತು ನೃತ್ಯದ ಸಾಂಗತ್ಯ : ಲಾಸ್ಯರಂಜನ

Posted On: Thursday, November 6th, 2008
1 Star2 Stars3 Stars4 Stars5 Stars (1 votes, average: 5.00 out of 5)
Loading...

Author: ಮನೋರಮಾ. ಬಿ.ಎನ್


– ಮನೂ ‘ಬನ’

ನೃತ್ಯ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಕನ್ನಡ ಸಾಹಿತ್ಯಗ್ರಂಥಗಳು ವಿರಳವೇ ಸರಿ. ಹೀಗಿರುವಾಗ ಛಂದಸ್ಸಿನಲ್ಲಿರುವ ನೃತ್ಯ ಶಾಸ್ತ್ರ ಲಕ್ಷಣವನ್ನು ವಿವರಿಸುವ ಕನ್ನಡ ಗ್ರಂಥಗಳಲ್ಲಿ ಪ್ರಥಮ ಗ್ರಂಥ ಎಂದು ಹೆಸರಿಸಬಹುದಾದಲ್ಲಿ ಸಿಂಹಭೂಪಾಲನ ಲಾಸ್ಯರಂಜನ ಎಂದರೆ ತಪ್ಪಾಗಲಾರದು.

ಇದರ ಕರ್ತೃ ಸಿಂಹಣ. ಒಟ್ಟು ೮ ಪ್ರಕರಣಗಳನ್ನು, ೮೬೪ ಪದ್ಯಗಳನ್ನೂ ಹೊಂದಿದ ಗ್ರಂಥವು, ಗದ್ಯ ಮತ್ತು ಪದ್ಯ ಭಾಗಗಳೆರಡನ್ನೂ ಹೊಂದಿರುವುದರಿಂದ ಚಂಪೂ ಗ್ರಂಥವೆಂದೇ ಕರೆಯಬಹುದು. ಆದರೂ ಪದ್ಯ ಭಾಗವೇ ಅದಿಕ. ಕಂದಪದ್ಯ, ವೃತ್ತ ಮತ್ತು ಛಂದಸ್ಸುಗಳನ್ನೊಳಗೊಂಡ ಇದರ ಮಧ್ಯೆ ಕೆಲವು ಸಣ್ಣ ವಚನಗಳನ್ನೂ ಕಾಣಬಹುದು. ನಾಟ್ಯೋತ್ಪತ್ತಿ, ಬೆಳವಣಿಗೆ, ತಾಂಡವ-ಲಾಸ್ಯ, ಅಂಗ-ಪ್ರತ್ಯಂಗ-ಉಪಾಂಗ-ಕರಣ-ಅಂಗಾಹಾರ-ಚಾರಿ-ಕರಣ-ಸ್ಥಾನಕ-ಮಂಡಲ ಮುಂತಾದ ನೃತ್ಯಲಕ್ಷಣಗಳನ್ನು ತಿಳಿಸಲಾಗಿದೆ. ಆದರೆ ನೃತ್ತ ಲಕ್ಷಣವನ್ನು ಮಾತ್ರ ಪ್ರತಿಪಾದಿಸುವ ಇದರಲ್ಲಿ ವಿನಿಯೋಗಗಳ ಬಗ್ಗೆ ತಿಳಿಸಿಲ್ಲ.

ಗ್ರಂಥ ಪ್ರಾರಂಭಕ್ಕೆ ಇಷ್ಟದೇವತಾ ಸ್ತುತಿ ಅಥವಾ ಕವಿಕಾವ್ಯ ಸ್ತುತಿಗಳು ಕಂಡುಬಂದಿಲ್ಲ. ಬದಲಾಗಿ ನೃತ್ಯ ಲಕ್ಷಣಗಳನ್ನು ಹೇಳುವ ಪ್ರತಿಜ್ಞಾವಾಕ್ಯವಿದೆ. ಆದರೂ ಒಂದನೇಯ ಪ್ರಕರಣದ ೧೯ನೇಯ ಪದ್ಯದಲ್ಲಿ ನಾಟ್ಯದ ಅಧಿದೇವತೆಯಾದ ಈಶ್ವರನನ್ನು ಸ್ತುತಿಸಿದ್ದಾನೆ. ಲಾಸ್ಯ ರಂಜನವು ಕವಿಯ ಸ್ವತಂತ್ರ ಗ್ರಂಥವೇ ಅಥವಾ ಇತರ ಆಧಾರ ಗ್ರಂಥಗಳಿಂದ ರಚಿತವಾದದ್ದೇ ಎಂಬುದಕ್ಕೆ ಪುಷ್ಟಿ ನೀಡುವಂತೆಹ ಯಾವುದೇ ವಿಚಾರ ಎಲ್ಲಿಯೂ ಕಂಡುಬರುವುದಿಲ್ಲ. ಆದರೂ ಕೆಲವೆಡೆ ಕವಿಯು ಭರತಮತದಿಂ ಪೇಳ್ವೆಂ ಎಂದಿರುವುದರಿಂದ ಲಾಸ್ಯರಂಜನಕ್ಕೆ ಭರತನ ನಾಟ್ಯಶಾಸ್ತ್ರ ಆಕರ ಎಂದು ಹೇಳಬಹುದಾದರೂ ಪೂರ್ಣವಾಗಿ ಈ ಗ್ರಂಥ ನಾಟ್ಯಶಾಸ್ತ್ರವನ್ನೂ ಅವಲಂಬಿಸಿಲ್ಲ. ಬಹುಷ: ಈ ರೀತಿ ಉಲ್ಲೇಖಿಸುವುದರಿಂದ ಗ್ರಂಥಕ್ಕೆ ಪ್ರೌಢಿಮೆ ಸಿಗಬಹುದು ಎಂಬುದು ಆತನ ಉದ್ದೇಶವಾಗಿರಬುದು ಎಂಬುದು ವಿಮರ್ಶಕರ ಊಹೆ. ಕೆಲವೊಂದು ನಾಟ್ಯಾಂಗ ಲಕ್ಷಣಗಳಲ್ಲಿ ಶಾರ್ಙ್ಗಧರನ ಸಂಗೀತ ರತ್ನಾಕರವನ್ನು ಈ ಗ್ರಂಥ ಹೋಲುತ್ತದೆ ಎಂಬುದು ಗ್ರಂಥ ಸಂಪಾದಿತರ ಅಭಿಪ್ರಾಯ.

ಕವಿಯೇ ತಿಳಿಸಿರುವಂತೆ ಈ ಗ್ರಂಥದ ರಚನೆಗೆ ಆತನ ಮಡದಿಯ ಇಚ್ಛೆಯೇ ಸ್ಫೂರ್ತಿ! ಹಾಗಾಗಿ ಪ್ರಶ್ನೋತ್ತರ ರೂಪದಲ್ಲಿರುವ ಈ ಗ್ರಂಥದಲ್ಲಿ ಪತಿ-ಪತ್ನಿಯರ ಪರಸ್ಪರ ಸಂಭೋಧನೆಗಳು ಇದ್ದು, ರೂಪಕ-ಉಪಮೆಗಳು ಇದಕ್ಕೆ ಅಲಂಕಾರವನ್ನಿತ್ತಿವೆ. ನಾಟ್ಯರಂಜನೆ ಸ್ತ್ರೀಯರಿಂದಲೇ ಅಧಿಕ ಎಂಬುದನ್ನು ಮನಗಂಡಿದ್ದಾನೇನೋ ! ಆದ್ದರಿಂದಲೇ ಇವೆಲ್ಲದಕ್ಕೆ ಪೂರಕವಾಗಿ ಗ್ರಂಥಕ್ಕೆ ಲಾಸ್ಯ ರಂಜನ ಎಂಬ ಹೆಸರನ್ನು ಇಟ್ಟಿರಬಹುದು.

ಕಾವ್ಯ ಮಧ್ಯದಲ್ಲಿರುವ ಚಂಡಭುಜ ಸಿಂಹ ಧರಣೀಮಂಡಲಪತಿ, ಸಿಂಹಭೂಪತಿ ಮುಂತಾದ ಸಂಬೋಧನೆಗಳಿಂದ ಈತ ಕವಿ ಮಾತ್ರವಲ್ಲ, ರಾಜನೂ ಹೌದು ಎಂಬುದು ದೃಢಪಡುತ್ತದೆ. ಪ್ರತೀ ಪ್ರಕರಣದ ಕೊನೆಯಲ್ಲಿ ವೀರಭದ್ರನೃಪವಾರ್ಧಿಚಂದ್ರ ಎಂದು ಕವಿಯ ಸಂಬೋಧನೆಯಿರುವುದರಿಂದ ಈತ ವೀರಭದ್ರನೃಪನ ವಂಶಜ, ಕನ್ನಡ ಮತ್ತು ಸಂಸ್ಕೃತ ಭಾಷೆಗಳೆರಡರಲ್ಲೂ ಪಂಡಿತನೆಂದೂ ತಿಳಿಯುತ್ತದೆ. ಕೆಲವರು ಈತನು ವೀರಭದ್ರ ವಿಜಯದ ಕರ್ತೃ ವೀರಭದ್ರ ರಾಜನ ಮಗನು ಹೌದೋ ಅಲ್ಲವೋ ಎಂಬ ಸಂಶಯವನ್ನು ತಾಳಿದರೆ, ಕೆಲವರು ಈತನು ಆಂಧ್ರ ಮೂಲದವನಾಗಿರಬಹುದು, ಆಂಧ್ರದವನಾದರೂ ಕನ್ನಡದಲ್ಲಿ ಕೃತಿ ರಚಿಸಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಕವಿಯ ಕಾಲವನ್ನು ಖಚಿತಪಡಿಸುವಂತಹ ಉಲ್ಲೇಖ ಎಲ್ಲಿಯೂ ಕಂಡುಬಂದಿಲ್ಲ. ಆದರೂ ಈ ಗ್ರಂಥರಚನೆಯ ಉತ್ತರಕಾಲಾವಧಿ ಕ್ರಿ.ಶ. ೧೫೮೩ ಅಂದರೆ ೧೩ನೇ ಶತಮಾನದ ಮಧ್ಯಭಾಗದಿಂದ ಹದಿನಾರನೇಯ ಶತಮಾನದ ಮಧ್ಯಭಾಗದೊಳಗೆ ರಚಿತವಾಗಿರಬಹುದೆಂದು ನಿರ್ಣಯಿಸಲಾಗಿದೆ. ಗ್ರಂಥಶೈಲಿಯನ್ನು ಗಮನಿಸಿದರೆ ಇದರ ಕಾಲ ಸುಮಾರು ಹದಿನಾರನೇಯ ಶತಮಾನ.

ಈ ಗ್ರಂಥವನ್ನು ಮೈಸೂರು ಅರಮನೆ ಸರಸ್ವತೀ ಗ್ರಂಥ ಭಂಡಾರದಲ್ಲಿರುವ ೧೬೦೨ನೇ ಕ್ರಮಾಂಕದ ಓಲೆಯ ಪ್ರತಿಯಿಂದ ಪಡೆಯಲಾಯಿತು. ಈ ಓಲೆಯ ಕಟ್ಟಿನಲ್ಲಿ ಒಟ್ಟು ೧೩೨ ಪತ್ರಗಳಿದ್ದು, ಮೊದಲಿನ ೬೪ ಪತ್ರಗಳಲ್ಲಿ ಲಾಸ್ಯ ರಂಜನವೆಂಬ ಗ್ರಂಥ ಕಂಡುಬಂದಿದೆ. ಆದರೂ ಮೂಲಪ್ರತಿಯ ಎಷ್ಟೋ ಪದ್ಯಗಳು ಲುಪ್ತವಾಗಿವೆ. ಮೈಸೂರು ವಿಶ್ವ್ವವಿದ್ಯಾನಿಲಯ ಪ್ರಾಚ್ಯ ವಿದ್ಯಾ ಸಂಶೋಧನಾಲಯವು ಇದನ್ನು ಪುಸ್ತಕರೂಪದಲ್ಲಿ ಮುದ್ರಿಸಿದ್ದು, ಇಂಗ್ಲೀಷ್ ಭಾಷಾಂತರ ಕೂಡಾ ಲಭ್ಯವಿದೆ. ಕನ್ನಡ ಗದ್ಯಾನುವಾದ ಮತ್ತು ಟಿಪ್ಫಣಿಯನ್ನೂ, ಪೂರಕ ಛಾಯಾಚಿತ್ರಗಳನ್ನೂ ಕೊಡಲಾಗಿದೆ.

ನರ್ತನ ಕಲೆಗೆ ಸಂಬಂಧಿಸಿದಂತೆ ಸಂಸ್ಕೃತ ಭಾಷೆಯಲ್ಲಿರುವಷ್ಟು ಗ್ರಂಥಗಳು ಉಳಿದ ಭಾಷೆಗಳಲ್ಲಿಲ್ಲ. ಅದರಲ್ಲೂ ನೃತ್ಯಶಾಸ್ತ್ರವನ್ನು ವಿವರಿಸುವ ಗ್ರಂಥಗಳು ಕವಿಗಳಿಗಾಗಲೀ, ಅಥವಾ ಅಂಥಹ ಗ್ರಂಥಗಳ ಪ್ರಸ್ತಾಪ ಕವಿ ಚರಿತೆಯಲ್ಲಾಗಲೀ ವಿರಳ. ಇಂತಹ ಸಂದರ್ಭದಲ್ಲಿ ಕನ್ನಡ ಭಾಷೆಯಲ್ಲಿ ಇಂತಹದ್ದೊಂದು ಪ್ರಯತ್ನ ನಡೆದಿರುವುದು ನಿಜಕ್ಕೂ ಹೆಮ್ಮೆ

Leave a Reply

*

code