ಅಂಕಣಗಳು

Subscribe


 

ವರುಷವೊಂದು ಪೂರ್ಣಗೊಳ್ಳುತ್ತಾ…

Posted On: Wednesday, November 5th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


ಆತ್ಮೀಯರೇ,

ಒಂದೇ ಕ್ಷೇತ್ರದಲ್ಲಿರುವ ವ್ಯಕ್ತಿತ್ವಗಳ ನಡುವೆ ಆರೋಗ್ಯಕರ ಪೈಪೋಟಿ ನಿಜಕ್ಕೂ ಸ್ವಾಗತಾರ್ಹ. ಆದರೆ ಬರಬರುತ್ತಾ ನಮ್ಮಲ್ಲಿನ ಮನಸ್ಸು ಎಷ್ಟು ಪೂರ್ವಾಗ್ರಹಪೀಡಿತವಾಗಿಬಿಟ್ಟಿದೆ ಎಂದರೆ, ತಮ್ಮದೇ ಕ್ಷೇತ್ರದಲ್ಲಿರುವವರನ್ನು ಒಂದು ವೇಳೆ ಪ್ರೋತ್ಸಾಹಿಸಿದರೆ ಎಲ್ಲಿ ತಮ್ಮ ಮೌಲ್ಯ, ಕೀರ್ತಿಗೆ ಭಂಗ ಬರಬಹುದೋ ಎಂಬ ಅಂಜಿಕೆ, ಆತಂಕ, ಕೀಳರಿಮೆ ಮತ್ತು ತಮ್ಮ ಪ್ರತಿಭೆ-ಸಾಮರ್ಥ್ಯದ ಬಗೆಗಿನ ಅಹಂ !

ಆದ್ದರಿಂದಲೋ ಏನೋ ತಮ್ಮದೇ ವೃತ್ತಿ-ಪ್ರವೃತ್ತಿಯವರ ನಿಲುವು, ಕಲೆಗಳ ಕುರಿತು ಕನಿಷ್ಟಪಕ್ಷ ಸೌಜನ್ಯ, ಗೌರವ ನೀಡುವುದನ್ನು ಮರೆಯುತ್ತೇವೆ ; ವಿಮರ್ಶೆ ಎಂಬ ಹೆಸರಲ್ಲಿ ಮಾನವೀಯತೆಯೇ ಮರೆತಂತೆ ಏನಾದರೊಂದು ಕೊರತೆ ಕಂಡು ಹಿಡಿದು ಎದುರಿಗೆ ಹಲ್ಲು ಕಿಸಿದು, ಬೆನ್ನ ಹಿಂದೆ ಮೂಗು ಮುರಿಯುವಂತೆ ಟೀಕಿಸುತ್ತೇವೆ ; ಒಳ್ಳೆಯದನ್ನು ವಿಶ್ವದ ಎಲ್ಲೆಡೆಯಿಂದಲೂ ಸ್ವೀಕರಿಸಬಹುದು ಎನ್ನುವುದನ್ನು ಪುಸ್ತಕದ ಬದನೆಕಾಯಿ ಮಾಡುತ್ತೇವೆ ; ನಮ್ಮ ಚಿಂತನೆ-ಯೋಚನೆ-ಮುಕ್ತ ಅಭಿಪ್ರಾಯಗಳನ್ನಿತ್ತರೆ ಎಲ್ಲಿ ತಮ್ಮ ವಿಚಾರಗಳನ್ನೇ ಹಿಂದಿಕ್ಕಿ ಮುನ್ನಡೆದಾರೋ ಎಂಬ ಆತಂಕಕ್ಕೆ ನಾಲಿಗೆಯಂಚಿಗೆ ಬಂದ ಅನಿಸಿಕೆಯನ್ನು ಬಲವಂತವಾಗಿ ಹಿಂದಕ್ಕೆ ನೂಕಿ ಮುಖಸ್ತುತಿ ಮಾಡುತ್ತೇವೆ; ಎಷ್ಟೇ ಉತ್ತಮವಾಗಿರಲಿ, ಅದನ್ನು ಅಸಡ್ಡೆ ಮಾಡಿದ ತುಟಿಯಂಚು ಓರೆನಗೆ ಬೀರುತ್ತದೆ; ಅಂಜಿಕೆಯ ಮನಸ್ಸು ನಾಲಿಗೆಯನ್ನು ತೆಪ್ಪಗಿರಿಸುತ್ತದೆ.

ಇದು ಸಹಜವೋ ಎಂಬಂತೆ ಕಲೆ, ಪತ್ರಿಕೋದ್ಯಮ, ವಾಣಿಜ್ಯ, ಶಿಕ್ಷಣ, ವೈದಿಕ… ಹೀಗೆ ನಮ್ಮ ನಿಮ್ಮನ್ನು ಸೇರಿಸಿದಂತೆ ಎಲ್ಲಾ ಕ್ಷೇತ್ರಗಳನ್ನು, ಹಿರಿಕಿರಿಯರೆನ್ನದೆ ಬಹಳ ಹಿಂದಿನಿಂದಲೂ ಆವರಿಸಿಕೊಂಡಿದೆ. ಒಂದೇ ವೃತ್ತಿಯವರು ಪರಸ್ಪರ ಇನ್ನೊಬ್ಬರ ಏಳಿಗೆ, ವಿದ್ವತ್ತನ್ನು ಪೋಷಿಸುವುದು ಬಹಳ ವಿರಳ ಎಂಬ ಅನಿಸಿಕೆ ಸಾರ್ವಕಾಲಿಕ.

ಆದರೆ ಈ ಸಂಚಿಕೆ ಕೈಗಿಡುವ ಹೊತ್ತಿಗೆ ಬಹಳಷ್ಟು ಸಂದರ್ಭದಲ್ಲಿ‌ಈ ಮೇಲಿನ ವರ್ತನೆ, ಅಭಿಪ್ರಾಯಗಳು ಅಪವಾದವೇನೋ ಎಂದೆನಿಸಿತು. ಕಾರಣ, ಕೆಲ ಪತ್ರಕರ್ತರ, ಪತ್ರಿಕೆಗಳ ಪ್ರೋತ್ಸಾಹ, ಗುರು ಕಲಾವಿದರ ಆಶೀರ್ವಾದ ; ‘ಕಲಾಸಕ್ತರಿಗೆ ಹೊಸತಾದ ಜ್ಞಾನವನ್ನು ನೀಡುವ ನೆಲೆಯಲ್ಲಿರುವ ‘ನೂಪುರ ಭ್ರಮರಿಯ ಬರಹಗಳು ಒಂದಕ್ಕೊಂದು ಪ್ರತಿಸ್ಪರ್ಧಿಯಂತೆ ರೂಪುಗೊಳ್ಳುತ್ತಿವೆ. ಸಾಂಸ್ಕೃತಿಕ ಕ್ಷೇತ್ರದ ಬಗೆಗೆ ಬೆಳಕು ಚೆಲ್ಲುವ ಭ್ರಮರಿಯಲ್ಲಿ, ನೃತ್ಯದ ಕುರಿತಾದ ಚಿಂತನೆಗಳು ಎಲ್ಲರಲ್ಲಿಯೂ ಜಾಗೃತಿ, ಅರಿವು ಮೂಡಿಸುತ್ತದೆ. ಪ್ರಬುದ್ಧ ವಿಚಾರಗಳನ್ನು ಅಭಿವ್ಯಕ್ತಿಸುವ ಹೊಸ ದೃಷ್ಠಿಕೋನದ, ಸಾಧನೆಯ ಪ್ರಯತ್ನವಿದು.ಎಂಬ ಹೊಸದಿಗಂತ ದೈನಿಕದ ವಿಶೇಷ ಲೇಖನದ ಪ್ರಶಂಸೆಯ ನುಡಿಗಳು ಹೊಸ ಹುರುಪನ್ನು ತಂದಿತ್ತಿವೆ. ಹರಕೆ-ಹಾರೈಕೆಗಳ ಈ ಹುರುಪು ನೂಪುರ ಭ್ರಮರಿಯನ್ನು ನೂರ್ಕಾಲ ಹರಸಲಿ, ಮುನ್ನಡೆಸಲಿ. ಜೊತೆಗೆ ಗುರು ಬಿ. ಕೆ. ವಸಂತಲಕ್ಷ್ಮಿ, ಶಕ್ತಿ ಪತ್ರಿಕೆಯ ಸಹ ಸಂಪಾದಕ ಬಿ. ಜಿ. ಅನಂತಶಯನ ಆಶೀರ್ವಾದಪೂರ್ವಕವಾಗಿ ಸಹಾಯಧನ ನೀಡಿ ಸಂಚಿಕೆಯ ವೆಚ್ಚಕ್ಕೆ ಕೈಜೋಡಿಸಿದರೆ, ಪ್ರೋತ್ಸಾಹಿಸಿದ ಮಂಡ್ಯ ರಮೇಶ್ ಮತ್ತು ‘ನಟನದ ರಂಗ ಕಲಾವಿದರು, ‘ಅಸೀಮಾಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಮಹೇಶ್ ಪ್ರಭು, ಸಾಹಿತಿ-ವಿಮರ್ಶಕ ಮುರಳೀಧರ ಉಪಾಧ್ಯ ಹಿರಿಯಡ್ಕ, ಬೆಂಗಳೂರಿನ ಮೃದಂಗ ವಿದ್ವಾನ್ ಲಿಂಗರಾಜು, ಪುತ್ತೂರಿನ ನೃತ್ಯ ಗುರು ಕುದ್ಕಾಡಿ ವಿಶ್ವನಾಥ ರೈ, ಮುಂಬೈಯ ವೆಂಕಟೇಶ್ ಪೈ, ನೃತ್ಯಾಸಕ್ತ ಸನ್ಮಿತ್ರರಾದ ಯಾಹ್ಯಾ ಅಬ್ಬಾಸ್, ಶಂಶೀರ್ ಬುಡೋಳಿ, ಪ್ರೀತಮ್ ಕುಮಾರ್ ಕೆಮ್ಮಾಯಿ, ವೀಣಾ ಡಿಸೋಜಾ, ರಾಧಾಕೃಷ್ಣ ಹೊಳ್ಳ ಎಸ್. ಎಲ್, ರಮೇಶ್ ಯಾದವ್,… ಎಲ್ಲರಿಗೂ ಸಾದರಾಭಿಮಾನದ ನಮನಗಳು.

ಹೊಸ ಹುರುಪಿನಿಂದ ಮುನ್ನುಗ್ಗುವ ಈ ಹಂತದಲ್ಲಿ ‘ಲಲಿತ ಲಹರಿ- ಎಂಬ ಹೊಸತು, ಕಾವ್ಯ ಗುಚ್ಛವನ್ನು ನಿಮ್ಮ ಮುಂದಿಡುತ್ತಿದ್ದೇವೆ. ಈಗಾಗಲೇ ಕಂಪ್ಯೂಟರ್‌ನಲ್ಲಿ ಪತ್ರಿಕೆಯನ್ನು ಓದುವ ಸುಮಾರು ೪೦೦ಕ್ಕೂ ಹೆಚ್ಚು ಆಸಕ್ತರಿಗೆ ಪಿಡಿ‌ಎಫ್ ಪ್ರತಿಯನ್ನು ಮೊದಲ ಸಂಚಿಕೆಯಿಂದಲೂ ಕಳಿಸುತ್ತಿರುವ ಕುರಿತು ಅಭಿನಂದನೆಗಳು ಸಂದಿವೆ. ಇನ್ನೇನು ಸ್ವಲ್ಪ ದಿನಗಳಲ್ಲಿ ಮತ್ತೊಂದು ಅಚ್ಚರಿಯ ಹೊಸತಿನ ಕ್ಷಣ ತೆರೆದುಕೊಳ್ಳಲಿದೆ. ನೂಪುರ ಭ್ರಮರಿಯ ಬಳಗ ಶೀಘ್ರದಲ್ಲೇ ಅದನ್ನು ನಿಮ್ಮೆದುರಿಗೆ ಅನಾವರಣಗೊಳಿಸಲಿದೆ. ಕಾತುರವೇ? ನಿರೀಕ್ಷಿಸಿ.

ಪ್ರೀತಿಯಿಂದ ನಿಮ್ಮ

ಮನೋರಮಾ ಬಿ. ಎನ್

Leave a Reply

*

code