ಅಂಕಣಗಳು

Subscribe


 

2ನೇ ಸಂಚಿಕೆಯ ಹೆಜ್ಜೆಯಲ್ಲಿ…

Posted On: Wednesday, November 5th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


ಪ್ರಿಯರೇ,

ನೂಪುರ ಭ್ರಮರಿಯ ಪ್ರಥಮ ಸಂಚಿಕೆಗೇ ನಿಮ್ಮ ಪ್ರೋತ್ಸಾಹಗಳು ನಮ್ಮ ಬೆನ್ನು ತಟ್ಟಿವೆ. ಪುಟ್ಟ ಪತ್ರಿಕೆಯಾದರೂ ಅದರ ಆಶಯಗಳ ಕುರಿತು ಆಸಕ್ತಿ ತೋರಿ, ತಮ್ಮ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಪ್ರಥಮ ಸಂಚಿಕೆಯೇ ರಾಜ್ಯಾದ್ಯಂತ ಸುಮಾರು ೨೪೦ ಪ್ರಸಾರವನ್ನು ಕಂಡಿವೆ. ನಿಮ್ಮ ಈ ನಿರಂತರ ಪ್ರೋತ್ಸಾಹ, ಕಾಳಜಿ ನೂಪುರ ಭ್ರಮರಿಯ ದೀರ್ಘ ಪಯಣದುದ್ದಕ್ಕೂ ಕೈಹಿಡಿದು ಮುನ್ನಡೆಸಲಿ ಎನ್ನುವುದು ನಮ್ಮ ಆಶಯ.

ನೂಪುರ ಭ್ರಮರಿಯ ಪ್ರಥಮ ಸಂಚಿಕೆ ಅನಾವರಣಗೊಂಡದ್ದು ಮಡಿಕೇರಿಯಲ್ಲಿ ಶಿವರಾತ್ರಿ ಅಂಗವಾಗಿ ನೃತ್ಯ ಮಂಟಪ ಟ್ರಸ್ಟ್ ಆಯೋಜಿಸಿದ ನಟರಾಜೋತ್ಸವದಲ್ಲಿ. ಅತಿಥಿಗಳಾಗಿ ಆಗಮಿಸಿದ್ದ ಶಕ್ತಿ ದೈನಿಕದ ಸಹಸಂಪಾದಕ ಶ್ರೀಯುತ ಬಿ. ಜಿ. ಅನಂತಶಯನ, ಆಯುರ್ವೇದ ವೈದ್ಯ, ಕವಿ, ಬರಹಗಾರ ನಡೀಬೈಲು ಉದಯಶಂಕರ, ಹಾಗೂ ಗುರು ಶ್ರೀಮತಿ ರೂಪಾ ಶ್ರೀಕೃಷ್ಣ ಉಪಾಧ್ಯ ಅವರು ಪತ್ರಿಕೆಯನ್ನು ಮೊದಲು ತೆರೆದಿಟ್ಟವರು. ಒಂದು ಶುಭ ಸಂದರ್ಭದಲ್ಲಿ ಶುಭಾಂಸನೆ ಪಡೆದುಕೊಂಡ ನೂಪುರ ಭ್ರಮರಿಯ ಯಾತ್ರೆ ನಿರಂತರವಾಗಿ ನಡೆಯಬೇಕೆಂಬುದು ನಮ್ಮೆಲ್ಲರ ಕನಸು.

ಈಗಾಗಲೇ ಪತ್ರಿಕೆ ವಿಚಾರಮಂಥನಕ್ಕೆ, ಅನುಭವಗಳ ಹೊಳಹಿಗೆ, ಹೊಳಪಿಗೆ ವೇದಿಕೆಯಾಗಿ ರೂಪುಗೊಂಡಿದೆ. ಪತ್ರಿಕೆ ಪ್ರ್ರಯೋಗಶೀಲವಾಗಿರಬೇಕು. ಈ ನಿಟ್ಟಿನಲ್ಲಿ ಓದುಗರ ಅಭಿಪ್ರಾಯವನ್ನು ಮನ್ನಿಸಿ ಪತ್ರಿಕಾ ವಿನ್ಯಾಸದಲ್ಲಿ ಬದಲಾವಣೆ ಮಾಡಿಕೊಂಡಿದ್ದೇವೆ. ಜೊತೆಗೆ ಈ ಬಾರಿಯ ಸಂಚಿಕೆಯಲ್ಲಿ ಕಲಾವಿದೆ, ಬರಹಗಾರ್ತಿ, ಗೆಳತಿ ಶ್ರೀಲಕ್ಷ್ಮಿ ಎಂ. ಭಟ್ ಜಾನಪದ ನೃತ್ಯ ಸೊಬಗಿನ ಆದ್ಯಂತ ವಿಚಾರಗಳನ್ನು ಲೋಕಭ್ರಮರಿಯೆಂಬ ಅಂಕಣದ ಮೂಲಕ ಇನ್ನು ಮುಂದೆ ಹಂಚಿಕೊಳ್ಳಲಿದ್ದಾರೆ. ಚಿಂತನೆಗಳ ಚಾವಡಿಯಾಗಿ ಅಂಗಳದ ಮಾತು- ತಿಂಗಳ ಚರ್ಚೆ ನಿಮ್ಮದಾಗಲಿದೆ. ಉಳಿದಂತೆ ತಿಳಿವಳಿಕೆಯ ಮಂಥನಕ್ಕೆ ಒಂದಷ್ಟು ಲೇಖನ ಸಂವಾದಗಳಿವೆ. ಇಷ್ಟವಾದೀತೆಂದು ಅನಿಸಿಕೆ. ಓದಿ ಪ್ರೋತ್ಸಾಹಿಸಿ, ಪ್ರತಿಕ್ರಿಯಿಸುವಿರಾಗಿ ನಂಬುಗೆ.

ನೂಪುರ ಭ್ರಮರಿ ಸದಾಶಯದ ಆಸಕ್ತಿಯಲ್ಲಿ ಹುಟ್ಟಿಕೊಂಡದ್ದು. ನಿಮ್ಮ ಒಂದಿನಿತು ಅಭಿಪ್ರಾಯ, ಪತ್ರಿಕೆಯನ್ನು ಕಾಲಾನುಕೂಲ ತರಿಸಬೇಕೇ, ಬೇಡವೇ ಎಂಬುದನ್ನು ಹೇಳಿದರೆ ಸಹಾಯವಾಗುತ್ತದೆ. ಪತ್ರಿಕೆಯ ಎಲ್ಲಾ ಖರ್ಚುಗಳು ವೈಯಕ್ತಿಕ ವೆಚ್ಚದಪರಿಮಿತಿಯೊಳಗೇ ನಡೆಯಬೇಕಾದ್ದರಿಂದ ನೀವು ಹೇಳಿದಲ್ಲಿ ನಿಮ್ಮನ್ನು ತಲುಪಲು, ಪತ್ರಿಕೆಯನ್ನು ಕಳಿಸಿಕೊಡಲು ಅನುಕೂಲವಾಗುತ್ತದೆ.

ಮೊದಲನೇ ಸಂಚಿಕೆಯಲ್ಲಿ ಹೇಳಿದ ಆಶಯಗಳನ್ನು ಮತ್ತೊಮ್ಮೆ ನೆನಪು ಮಾಡಿಕೊಳ್ಳಲಿಚ್ಚಿಸುತ್ತೇವೆ. ಈ ಭ್ರಮರಿ ನಿಮ್ಮದು, ನಮ್ಮೆಲ್ಲರದು, ಗುರು-ಕಲಾವಿದರನ್ನು ಒಳಗೊಂಡಂತೆ ಸಾಮಾನ್ಯ ಜನರೂ ನೃತ್ಯ ಕ್ಷೇತ್ರದ ಕುರಿತಂತೆ ಸಂವಾದದಲ್ಲಿ ಪಾಲ್ಗೊಳ್ಳಬೇಕು, ನೃತ್ಯವೆಂಬುದು ಸೀಮಿತ ಕ್ಷೇತ್ರವಾಗದೇ ಮುಕ್ತ ಅವಕಾಶ ಅನುಭವಗಳನ್ನು ಕಲ್ಪಿಸಬೇಕು. ನೃತ್ಯದ ಬಗ್ಗೆ ಎಲ್ಲಾ ರೀತಿಯ ಪರ-ವಿರೋಧವನ್ನು ಒಳಗೊಂಡಂತೆ ಅಭಿಪ್ರಾಯಗಳು ಹರಿದು ಬರಬೇಕು, ಗುಣಾತ್ಮಕ ಚಿಂತನೆಗೆ ಅವಕಾಶಬೇಕು, ಬರಿಯ ಶಾಸ್ತ್ರೀಯ, ಪಾರಂಪರಿಕ ಜ್ಞಾನವನ್ನಷ್ಟೆ ಮುಂದಿಡುವುದಲ್ಲ, ಬದಲಾಗಿ ಪ್ರಚಲಿತ ಸ್ಥಿತಿಗಳತ್ತಲೂ ದೃಷ್ಟಿ ಹೊರಳಿಸಬೇಕೆಂದು ಆರಂಭಗೊಂಡ ಏಕ ಸಂಪಾದಕತ್ವದ, ಏಕ ಪ್ರಕಾಶನದಲ್ಲಿ ಮುನ್ನಡೆಯುತ್ತಿರುವ ಖಾಸಗಿ ಪತ್ರಿಕೆ. ಇದರ ಬೆಳವಣಿಗೆಗೆ ನಿಮ್ಮ ಕೊಡುಗೆ, ಸಹಕಾರ ಅತ್ಯಗತ್ಯ ಮತ್ತು ಅಮೂಲ್ಯ. ಹಾಗಾಗಿ ನಮ್ಮೆಲ್ಲರ ಕ್ಷಿತಿಜವನ್ನು ವಿಸ್ತರಿಸಿಕೊಳ್ಳಲು ನಿಮ್ಮ ಲೇಖನಿಯಿಚಿದ ವಿಚಾರಗಳು ಹರಿದುಬರಲಿ. ನಮ್ಮೆಲ್ಲರನ್ನೂ ಮಂಥಿಸಲಿ.

ಪ್ರೀತಿಯಿಂದ ನಿಮ್ಮ

ಮನೋರಮಾ ಬಿ. ಎನ್

 

Leave a Reply

*

code