ಅಂಕಣಗಳು

Subscribe


 

ಎರಡನೇ ವರುಷಕ್ಕೆ ಕಾಲಿಡುವ ಹೊತ್ತಿನ ಹೊನಲು

Posted On: Wednesday, November 5th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


ಆತ್ಮೀಯರೇ,

ವರುಷದ ಹಿಂದೆ ಫೆಬ್ರವರಿಯ ಶಿವರಾತ್ರಿಗೆ ಆತಂಕ, ಬೆರಗಿನಿಂದಲೇ ನರ್ತನ ಲೋಕದೆಡೆಗೆ ಕಣ್ಣು ಹಾಯಿಸಿದ ನಮ್ಮ ಭ್ರಮರಿಗೆ ಇದೀಗ ಹುಟ್ಟುಹಬ್ಬದ ಸಂಭ್ರಮ. ಇವಳೀಗ ಅಂಬೆಗಾಲಿಟ್ಟು ತನ್ನ ಹೆಜ್ಜೆಗಳನ್ನೇ ಹಿಂದಿಕ್ಕುತ್ತಿರುವ ಒಂದು ವರುಷದ ಪೋರಿ. ಬಹಳಷ್ಟು ಆರೈಕೆ ಬೇಡುತ್ತಿರುವ ಕೂಸಿಗೆ, ಇರುವ ತುತ್ತನ್ನು ಪ್ರೀತಿಯಿಂದ ತಿನ್ನಿಸುವ ಬಳಗ, ಪುಟ್ಟ ಗೂಡಿನೊಳಗೆ ಬೆಚ್ಚಗಿನ ಹೆಜ್ಜೆ ಕಲಿಸುತ್ತಿದೆ. ಏಕಕಾಲಕ್ಕೇ ಹಿರಿಯ ತಲೆಮಾರನ್ನು, ಕಿರಿಯ ಚಿಣ್ಣರನ್ನು, ಸಮಕಾಲೀನ ಮನಸ್ಸುಗಳನ್ನು, ಅಭ್ಯಾಸಿ ಆತ್ಮೀಯರನ್ನೂ ತಲುಪಬೇಕೆಂಬ ಹಂಬಲ ನೂಪುರ ಭ್ರಮರಿಯ ನಿತ್ಯ ಒಲವು. ಆದರಿಂದಲೇ ಪುಟ್ಟ ಕಿಟಕಿಯಿಂದ ದಿಟ್ಟಿಸುತ್ತಾ, ಬದಲಾವಣೆಯ ಗಾಳಿಗೆ, ಘಳಿಗೆಗಳಿಗೆ ಮೈಯ್ಯೊಡ್ಡುತ್ತಾ ವಿಶಾಲವಾದ, ವೈವಿಧ್ಯಮಯ ಜಗತ್ತನ್ನು ಪ್ರತೀಸಲವೂ ತನ್ನ ಪುಟ್ಟ ಬೊಗಸೆ ಕೈಗಳಲ್ಲಿ ತುಂಬಿಕೊಳ್ಳುವ ಪ್ರಯತ್ನ ಭ್ರಮರಿಯದ್ದು.

ಕಲೆಯ ಮೇಲಿನ ಪ್ರೀತಿ ಜೀವನ ಪ್ರೀತಿಯನ್ನು ಸದಾ ಪೋಷಿಸುವಂತದ್ದು. ಆ ಜೀವನ ಪ್ರೀತಿಯನ್ನು ನಿರಂತರ ಕಾಯ್ದುಕೊಳ್ಳಲು ನಮ್ಮನ್ನು ಜಾಗೃತ ಸ್ಥಿತಿಯಲ್ಲಿಟ್ಟುಕೊಳ್ಳಬೇಕಾದದ್ದು ಇಂದಿನ ಕಾಲಕ್ಕೆ ಅನಿವಾರ್ಯ. ಕಲೆಯ ಪ್ರತಿಯೊಂದೂ ಪ್ರಬೇಧ ತನ್ನ ಸಾಂಪ್ರದಾಯಿಕ ನೆಲೆಗಟ್ಟನ್ನು ಸಮರ್ಥವಾಗಿ ಬಿಂಬಿಸುವುದಷ್ಟೇ ಅಲ್ಲದೆ, ಸಾಮಾಜಿಕ ಅಗತ್ಯಗಳನ್ನೂ ಪೂರೈಸಬಲ್ಲುದು. ಈ ಮೂಲಕ ಕಾಲಕಾಲಕ್ಕೂ ಪ್ರಸ್ತುತವೆನಿಸಿಕೊಂಡು ಜೀವನಮುಖಿಯಾಗುವ ಸಾಮರ್ಥ್ಯ ಪಡೆದಿರುತ್ತದೆ. ಆದರೆ ಬದಲಾದ ಕಾಲಘಟ್ಟಕ್ಕೆ ಕಲೆಯೊಂದು ಸಮಂಜಸವಾದ ಬದಲಾವಣೆಗಳನ್ನನುಸರಿಸಿ ಆಯಾಯ ಕಾಲದ ಅಗತ್ಯಗಳನ್ನು ಪೂರೈಸುವುದು ಅಷ್ಟು ಸುಲಭವೇನಲ್ಲ. ಕಲೆ ಮತ್ತು ಅದರ ಮೂಲಕ ಜೀವನಪ್ರೀತಿಯನ್ನು ನವೀಕರಿಸಿಕೊಳ್ಳುವ, ಗುರುತಿಸುವ ದೃಷ್ಟಿ ಸದಾ ನಮಗಿರಬೇಕು. ಟೀಕೆ-ಟಿಪ್ಪಣಿ, ತರ್ಕ- ವಿತರ್ಕ, ವಾದ-ವಿವಾದಗಳು ಜೊತೆಗಿದ್ದಾಗ್ಯೂ, ಸಾಕಷ್ಟು ತಯಾರಿ, ಸೃಜನಶೀಲ ಆಯಾಮ, ಪೂರಕ ಸನ್ನಿವೇಶ, ಪ್ರೋತ್ಸಾಹವಿದ್ದರೂ ಆಯಾ ಕಲೆಯ ಯಶಸ್ಸಿಗೆ ಅದರ ಬದಲಾವಣೆಗಳನ್ನು ಒಪ್ಪಿಕೊಳ್ಳುವ ಮನಃಸ್ಥಿತಿ, ಚಲನಶೀಲತೆಯೊಂಬುದು ಬೇಕು. ಅದನ್ನು ಪರಾಮರ್ಶಿಸುವಲ್ಲಿ, ನೆನಪಿಗೆ ತರುವಲ್ಲಿ, ಅಧ್ಯಯನ ನಡೆಸುವಲ್ಲಿ ಮಾಧ್ಯಮವೊಂದರ ವಿಮರ್ಶೆ, ವಿಚಾರ, ಸಂವಾದಗಳ ನಿರಂತರ ಸ್ಪರ್ಶ, ಆಸಕ್ತ ತುಡಿತವೂ ಅಗತ್ಯ.. ಇಂತಹ ಸಂಗತಿಗಳು ಕೇವಲ ಪ್ರದರ್ಶನ ಮತ್ತು ಕಲಾವಿದರ ಟೀಕೆ-ಹೊಗಳಿಕೆ-ಚರ್ಚೆಗಳಿಗೆ ಮಾತ್ರ ಸೀಮಿತವಾಗದೆ ಕಲೆಯೊಂದರ ವಿವಿಧ ಆಯಾಮಗಳತ್ತಲೂ ಹೊರಳಿಕೊಳ್ಳುವಂತಾಗಬೇಕು. ನಮ್ಮ ಕಲಾ ಪ್ರಜ್ಞೆಯನ್ನು ಎಚ್ಚರಿಸುತ್ತಿರಬೇಕು. ಈ ನಿಟ್ಟಿನಲ್ಲಿ ನಮ್ಮ ಹೆಜ್ಜೆಯಾದದ್ದು ನೂಪುರ ಭ್ರಮರಿ.

ಹಾಗಂದಾಕ್ಷಣ ಒಂದು ವರುಷದ ಹಾದಿ ಹೂವಿನ ಹಾಸಿಗೆಯೇನಲ್ಲ. ತನಗಿರುವ ಆರ್ಥಿಕ ಚೌಕಟ್ಟಿನೊಳಗಡೆಯೇ ಜೆರಾಕ್ಸ್ ಪ್ರತಿಯಾಗಿ ಪ್ರಾರಂಭಗೊಂಡ ಪತ್ರಿಕೆ ತನ್ನ ವಿನ್ಯಾಸ, ಬರೆಹ, ಶೈಲಿಯಲ್ಲಿ ಬದಲಾವಣೆಗಳನ್ನು ಕಾಣುತ್ತಾ ನಿಧಾನವಾಗಿ ಕಂಪ್ಯೂಟರ್ ಫಿಡಿ‌ಎಫ್ ಪ್ರತಿಯಾಗಿ, ಮುದ್ರಿತ ಸಂಚಿಕೆಯಾಗಿ ತನ್ನ ವ್ಯಾಪ್ತಿಯೊಳಗೇ ಸಾಧ್ಯತೆಗಳನ್ನು ವಿಸ್ತರಿಸಿಕೊಳ್ಳುತ್ತಾ ಸಾಗಿದೆ. ಒಮ್ಮೊಮ್ಮೆ ತಪ್ಪಾಗಿ ಎಡವಿದ್ದಿದೆ, ಹಲವರು ಉಪೇಕ್ಷೆ ಮಾಡಿದ್ದಿದೆ, ಕೆಲವು ಬಾರಿ ನೋವಾಗಿದೆ, ಗಾಯವಾಗಿದೆ, ಆಗಾಗ ತಂಪಾದ ನೆರಳೂ ಸಿಕ್ಕಿದೆ, ದಣಿದ ಮನಸ್ಸಿಗೆ ಪ್ರೀತಿ-ಒಲವಿನ ಆಸರೆಯೂ ದೊರೆತಿದೆ, ದೊರೆಯುತ್ತಿದೆ ಕೂಡಾ! ಹಿರಿಯರು ಪ್ರೀತಿಯಿಂದ ಬೆನ್ನು ತಟ್ಟುತ್ತಿದ್ದರೆ, ಹಿತೈಷಿಗಳು ಶುಭ ಹಾರೈಸುತ್ತಿದ್ದಾರೆ; ಸಹೃದಯರು ಸದಾಶಿಸಿದರೆ ಸ್ನೇಹಿತರು ಕೈಜೋಡಿಸಿ ನಡೆಯುತ್ತಿದ್ದಾರೆ. ಅವರೆಲ್ಲರೂ ಸ್ಮರಣೀಯರು.

ಕೇವಲ ಭರತನಾಟ್ಯ ಅಥವಾ ಶಾಸ್ತ್ರೀಯ ಕಲೆಗಳಿಗೆ ಮಾತ್ರ ಸೀಮಿತವಾಗದೆ ಪೂರಕ ಕಲೆಗಳು, ಕಲಾಸಾಹಿತ್ಯ, ಜಾನಪದ, ರಂಗಭೂಮಿಯ ಚಟುವಟಿಕೆಗಳನ್ನು ತನ್ನ ಹೂರಣದೊಳಗೆ ಸೇರಿಸಿಕೊಂಡು ಆವರಣವನ್ನು ಪರಿಣಾಮಕಾರಿಯಾಗಿ ಹಿಗ್ಗಿಸಿಕೊಳ್ಳುವತ್ತ ಪತ್ರಿಕೆ ಪ್ರಯತ್ನಿಸುತ್ತಿದೆ. ಆದರೊಂದಿಗೆ ಪ್ರತೀ ಹೆಜ್ಜೆಗೂ ಹೊಸತನ್ನು ನೋಡುವ, ಹಳತೆನಿಸುವ ಕ್ಲೀಷೆಗಳಿಂದ ಹೊರಬಂದು ಪರಂಪರೆಯ ಜೊತೆಗೆ ಸೃಜನಶೀಲ ಸ್ಪರ್ಶವನ್ನು ಪಡೆಯುವ, ವಿನೂತನವಾದ ನಡೆಯನ್ನು ನೀಡುವ, ಹಮ್ಮು ಬಿಮ್ಮಿಲ್ಲದೆ ಮುಕ್ತವಾಗಿ ಮಾತನಾಡುವ, ಮಾತನಾಡಿಸುವ, ತಿದ್ದಿಕೊಳ್ಳುವ ಹಂಬಲ ನಿರಂತರ !

ಇಷ್ಟರವರೆಗೂ ನೂಪುರ ಭ್ರಮರಿ ತಾನಿತ್ತ ಭರವಸೆಗಳನ್ನು ಹುಸಿಗೊಳಿಸದೆ, ಹೊಸ ನಿರೀಕ್ಷೆಗಳನ್ನು ನನಸು ಮಾಡಿಕೊಳ್ಳುತ್ತಿದೆ ಎಂಬುದು ನಮ್ಮ ಭಾವನೆ. ಅದರಂತೆಯೇ ಮುಂದುವರಿದ ಹೆಜ್ಜೆಯಾಗಿ, ಪತ್ರಿಕೆಯ ವಿಸ್ತರಣಾರೂಪವಾಗಿ ತಿತಿತಿ.www.noopurabhramari.com ನಿಮ್ಮೆದುರು ತೆರೆದುಕೊಳ್ಳಲಿದೆ. ಜೊತೆಗೆ ಎರಡನೇ ಸಂಪುಟದ ವಿಶೇಷ ಸಂಚಿಕೆಯನ್ನು ಅಕ್ಕರೆಯಿಂದ ಎತ್ತಿಕೊಳ್ಳಲು ಫೆಬ್ರವರಿ ೧೦ಕ್ಕೆ ಕಲಾವಿದರು, ಗುರುಹಿರಿಯರು, ನೆಚ್ಚಿನ ಸ್ನೇಹಿತರು; ಸಿಹಿಸಕ್ಕರೆಯ ಸವಿಯನ್ನೀಯಲು ನೂಪುರದ ಮನೆಮಂದಿ ಮಡಿಕೇರಿಯ ಭಾರತೀಯ ವಿದ್ಯಾ ಭವನದಲ್ಲಿ ಜೊತೆಯಾಗಿ ಅಪರೂಪದ ಕ್ಷಣಗಳನ್ನು ಅನಾವರಣಗೊಳಿಸುತ್ತಿದ್ದೇವೆ. ಹರಕೆ ಹಾರೈಕೆಗಳು ಜೊತೆಗಿರಲಿ.

ನೂಪುರ ಭ್ರಮರಿಯ ಲೋಗೋ ವಿನ್ಯಾಸ ಮಾಡಿಕೊಡುವುದರೊಂದಿಗೆ ಚಿತ್ರದ ಅಭಿವ್ಯಕ್ತಿಯನ್ನಿತ್ತು ಮುಖಪುಟವನ್ನು ಆಕರ್ಷಕವಾಗಿಸಿದ ಸಹೋದರ ವಿಘ್ನರಾಜನಿಗೂ, ಗೆಳತಿ ರಾಧಿಕಾ ವಿಟ್ಲ, ಪುಟ ವಿನ್ಯಾಸ ಮಾಡಿದ ಪತ್ರಕರ್ತ ಮಿತ್ರ ಹರೀಶ್ ಆದೂರು ಮತ್ತು ಅನವರತ ನೂಪುರದ ನಿರೂಪಣೆಯಲ್ಲಿ ಕೈಜೋಡಿಸುತ್ತಿರುವ ಸಂಪಾದಕೀಯ ಬಳಗದ ವಿಷ್ಣುಪ್ರಸಾದ್ ನಿಡ್ಡಾಜೆ, ಶ್ರೀಲಕ್ಷ್ಮಿ ಎಂ.ಭಟ್, ರಾಮಚಂದ್ರ ಹೆಗಡೆ, ಮಹೇಶ್ ಎಲ್ಯಡ್ಕ ಮತ್ತು ಪ್ರೀತಿಯಿಂದ ನಮ್ಮೊಂದಿಗಿರುವ ನನ್ನೆಲ್ಲಾ ಸನ್ಮಿತ್ರರಿಗೂ ವರುಷವೊಂದನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಿರುವ ಹಂತದಲ್ಲಿ ಅಭಿವಂದನೆಗಳು ಮತ್ತು ಮುಂದಿನ ವರ್ಷಕ್ಕೂ ಶುಭ ಹಾರೈಕೆಗಳು.

ಬಹಳಷ್ಟು ಬೆಳೆಯುವ ಆಸೆ ನಮ್ಮ ಬಗಲಿಗಿದೆ. ಬೆಳೆಯುತ್ತಲೇ ಮತ್ತಷ್ಟು ಪುಟ್ಟ-ಪುಟ್ಟ ಸಸಿಗಳಿಗೆ ನೆರಳು ಕೊಡುವ, ಆಸರೆಯಾಗುವ ಆಕಾಂಕ್ಷೆ ನಮ್ಮದು. ಪ್ರೀತಿಯಿರಲಿ.

ನಲುಮೆಯಿಂದ ನಿಮ್ಮ

– ಮನೋರಮಾ ಬಿ. ಎನ್

 

Leave a Reply

*

code