ಅಂಕಣಗಳು

Subscribe


 

ಸಂವತ್ಸರಾಭಿನಂದನ-ಪಂಚಮದ ಪಲುಕಿಗೆ ಶ್ರುತಿಯಾಗಿ… ಮಾರ್ಗಕ್ಕೆ ಮುಕುರವಾಗಿ..

Posted On: Monday, February 14th, 2011
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

೧೩ ಫೆಬ್ರವರಿ ೨೦೧೧ ರಂದು ನಯನ ಸಭಾಂಗಣ’ , ಕನ್ನಡ ಭವನ, ಜೆ.ಸಿ ರಸ್ತೆ , ಬೆಂಗಳೂರು.

ನೂಪುರ ಭ್ರಮರಿ ಐದರ ಹೆಜ್ಜೆಗಳಿಗೆ ಅಡಿಯಿಡುವ ಸಂವತ್ಸರಾಭಿನಂದನ ಸಂಭ್ರಮ ನಿಜಕ್ಕೂ ಒಂದು ಆಪ್ತ ಮತ್ತು ಅಷ್ಟೇ ಆಕಸ್ಮಿಕವೂ ಕೂಡಾ. ಹಾಗೆ ನೊಡಿದರೆ ಬೆಂಗಳೂರಿನಂತಹ ಮಹಾ ಸಮುದ್ರದಲ್ಲಿ ಕಾರ್ಯಕ್ರಮ ಸಂಘಟಿಸುವ ಇರಾದೆ, ಧೈರ್ಯ ಮೊದಲು ಅಷ್ಟಾಗಿ ಇರಲಿಲ್ಲ. ಆದರೆ ಮನದೊಳಡಗಿದ್ದ ಸಂಭ್ರಮವನ್ನು ಹಂಚಿಕೊಳ್ಳುವ ಕಂಡೂ ಕಾಣದಂತಿದ್ದ ಅಭೀಪ್ಸೆಗೆ ಇಂಬನ್ನಿತ್ತವರು ದೈವಬಲ, ಹಿರಿಯರ ಆಶೀರ್ವಾದ, ನಿಕಟವರ್ತಿ ಗೆಳೆಯರು. ಜೊತೆಗೆ ನೃತ್ಯ ಸಂವೇದನೆಗಳಿಗೆ ಹೊಸ ಆಯಾಮವನ್ನು ನಮ್ಮಿಂದಾದಷ್ಟೂ ನೀಡಬೇಕೆಂಬ ತುಡಿತ. ಪರಿಣಾಮ, ಕರ್ನಾಟಕದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ನೃತ್ಯ/ನಾಟ್ಯ ವಿಮರ್ಶಕರನ್ನು ಗುರುತಿಸಿ ವರ್ಷದ ವಿಮರ್ಶೆ ಪ್ರಶಸ್ತಿಯನ್ನು ನೀಡಬೇಕೆಂಬ ಚಿಂತನೆ; ಭರತನಾಟ್ಯದ ಕಪೋಲಕಲ್ಪಿತ ನಂಬಿಕೆಗಳನ್ನು ಆಧಾರಸಹಿತವಾಗಿ ನಿರೂಪಿಸುವ ಛಲದ ಪ್ರತಿರೂಪವಾಗಿ ಮಾರ್ಗ ಮುಕುರ ಅನಾವರಣವು ನೂಪುರದ ಪಾಲಿಗೆ ಅತ್ಯಪೂರ್ವ ಕ್ಷಣವೆಂದೇ ಹೇಳಬಹುದು.

ಉದ್ದೇಶ ಒಳ್ಳೆಯದಾದಷ್ಟೂ ಅದರ ಸತ್ತ್ವನಿರೂಪಣೆಗೆ ಪರೀಕ್ಷೆಗಳು ಸಾವಿರಾರು. ಕಾರ್ಯಕ್ರಮ ಸಂಘಟಿಸುವ ಪ್ರಾಥಮಿಕ ಹಂತದಿಂದಲೇ ಒಂದಲ್ಲ ಒಂದು ವಿಘ್ನಗಳು ಬಾಧಿಸಿ ಧೃತಿಗೆಡಿಸಿದ್ದು ಸುಳ್ಳಲ್ಲ. ವಿಘ್ನಸಂತೋಷಿಗಳು, ಕುತ್ಸಿತರು, ಕುಟುಕಿ-ಮೆಟ್ಟುವವರು, ಸ್ವಹಿತಾಸಕ್ತಿಪೀಡಿತರ ಸಂಖ್ಯೆ ಕಡಿಮೆಯೇನಲ್ಲ. ಆದರೇನಾಯಿತು? ಸಂಕಲ್ಪದ ಮುಂದೆ ಸಾವೂ ಹಿಮ್ಮೆಟ್ಟುವಂತೆ ಫಲಾಫಲಗಳನ್ನು ಅಮೂರ್ತಕ್ಕೆ ಬಿಟ್ಟು ನಿರ್ಲಿಪ್ತವಾಗಿಯೇ ಹೆಜ್ಜೆಗಳನ್ನು ಮುಂದಿರಿಸಿದೆವು. ಕೊನೆಗೂ ನಿರೀಕ್ಷೆಗಳು ಹುಸಿಯಾಗಲಿಲ್ಲ. ನಯನ ಸಭಾಂಗಣ ಕಿಕ್ಕಿರಿದು ತುಂಬಿತ್ತು. ಸಂಜೆ ೪.೩೦ ಯಿಂದ ರಾತ್ರಿ ೯ ಗಂಟೆಯ ವರೆಗೂ ೨ ಪುಸ್ತಕ, ೨ ವಿಶೇಷ ಸಂಚಿಕೆ ಅನಾವರಣ, ಆರು ಮಂದಿ ಗಣ್ಯರ ನಲ್ನುಡಿಗಳು, ವಿಮರ್ಶಾ ಪ್ರಶಸ್ತಿ ಪ್ರದಾನ, ಕಥಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ, ೪ ಮಂದಿಗೆ ಸನ್ಮಾನ ಸಮಾರಂಭ, ಅವರ ಮನದಾಳದ ಅನಿಸಿಕೆಗಳು, ಬಳಗದ ಹೆಮ್ಮೆಯ ಸಾಧಕರಿಗೆ ಮತ್ತು ಶ್ರಮಿಕರಿಗೆ ಅಭಿವಂದನೆ, ಡಿವಿಜಿಯವರ ಅಂತಃಪುರ ಗೀತೆಗಳಿಗೆ ನೃತ್ಯ…ಒಟ್ಟಿನಲ್ಲಿ ಕಾರ್ಯಕ್ರಮದ ಯಶಸ್ಸು ಧನ್ಯತೆಯ ಹನಿಗಳನ್ನು ಕಣ್ಣಂಚಿನಲ್ಲಿ ತರಿಸಿದ್ದು ಎಂದೆಂದಿಗೂ ಸ್ಮೃತಿಪಟಲದಲ್ಲಿ ಅನುಭವವಾಗಿ, ನೆನಪಾಗಿ ಜೊತೆಗಿರುತ್ತದೆ.

ಅಂದು ನಮ್ಮೊಂದಿಗೆ ವೇದಿಕೆಯಲ್ಲಿ ಒಂದಲ್ಲ ಎರಡಲ್ಲ, ಪ್ರೀತಿ, ವಿಶ್ವಾಸಗಳ ಒರತೆಯನ್ನೇ ನಂಬುವ ಐವರು ಘನತೆವೆತ್ತ ಹಿರಿಯರು ಬಗಲಿಗಿದ್ದರು. ಶತಾವಧಾನಿ ಡಾ. ಆರ್. ಗಣೇಶ್ ಅವರ ಅನಾರೋಗ್ಯದಿಂದಾಗಿ ಅನುಪಸ್ಥಿತಿಯ ಬೇಸರವನ್ನು ತೋರಿಸಿತ್ತಾದರೂ ಅವರ ಆಶೀರ್ವಾದ, ಬೆಂಬಲ ನಮ್ಮನ್ನು ಕೈಬಿಟ್ಟಿರಲಿಲ್ಲ. ಕರ್ನಾಟಕ ಅನುವಾದ ಅಕಾಡೆಮಿ ಅಧ್ಯಕ್ಷರಾಗಿದ್ದ ಪ್ರಸ್ತುತ ಕುವೆಂಪು ಭಾಷಾ ಭಾರತಿಯ ಅಧ್ಯಕ್ಷರಾದ ಪ್ರಧಾನ್ ಗುರುದತ್ ಅತ್ಯಲ್ಪ ಕ್ಷಣದಲೇ ನಮ್ಮ ಕರೆಗೆ ಓಗೊಟ್ಟು ಬಂದು ಸಮಾರಂಭದ ಅಧ್ಯಕ್ಷರಾಗಿ ಬೆನ್ನು ತಟ್ಟಿದ್ದರು. ಶತಾವಧಾನಿ ಗಣೇಶ್‌ರ ಶಿಷ್ಯ, ಮನಶಾಸ್ತ್ರಜ್ಞ ಮತ್ತು ಸ್ವತಃ ಚಿತ್ರಕಾವ್ಯ ಪರಿಣತರು, ಪೃಚ್ಛಕರೂ, ಅಷ್ಟಾವಧಾನಿಗಳೂ ಆದ ಡಾ. ಆರ್. ಶಂಕರ್‌ರ ಪರಿಚಯ ಹೊಸತಾದರೂ ಅಷ್ಟೂ ರೂಪುರೇಷೆಗಳನ್ನು ಪ್ರೀತಿಯಿಂದ ಆಲಿಸಿ ಕಾರ್ಯಕ್ರಮದುದ್ದಕ್ಕೂ ಜೊತೆಗಿದ್ದರು. ನೂಪುರದ ಬೆಳವಣಿಗೆಯನ್ನು ಬಹಳಷ್ಟು ವರ್ಷಗಳಿಂದ ನೋಡುತ್ತಾ, ಗಮನಿಸುತ್ತಾ, ಪ್ರತಿಕ್ರಿಯಿಸುತ್ತಾ ಬಂದಿರುವ ವಿಮರ್ಶಕರೂ, ಪ್ರಾಧ್ಯಾಪಕರೂ ಆದ ಡಾ||ಜಿ.ಬಿ. ಹರೀಶ್ ಭರವಸೆಯ ನುಡಿಗಳನ್ನಾಡಿದ್ದರು. ಧಾರವಾಢದ ಯಕ್ಷಗಾನ ಸಾಹಿತಿ ಮತ್ತು ಸನ್ಮಿತ್ರ್ರರೂ ಕವಿಗಳೂ ಆದ ದಿವಾಕರ ಹೆಗಡೆ ಮನೆಮಂದಿಯಲ್ಲೊಬ್ಬರಾಗಿ ಆತ್ಮೀಯವಾಗಿ ಬೆರೆತು ಸಂವಾದ ನಡೆಸಿದರೆ; ಕರವಾಣಿಯ ಕರೆಗೂ ಪ್ರೀತಿ ಸೂಚಿಸಿ ತಮ್ಮ ೮೬ರ ಇಳಿವಯಸ್ಸಿನಲ್ಲೂ, ಅನಾರೋಗ್ಯದ ನಡುವೆಯೂ ದೂರದ ಮಂಗಳೂರಿನಿಂದ ಹಿರಿಯ ನಾಟ್ಯಾಚಾರ್ಯ ಕೆ. ಮುರಳೀಧರ್ ರಾವ್ ಅವರು ಬಂದದ್ದು ನಿಜಕ್ಕೂ ಮತ್ತೊಂದು ಧನ್ಯತೆಯ ಕ್ಷಣ.


ನೃತ್ಯ ಮಾರ್ಗ ಮುಕುರ ಮತ್ತು ನೂಪುರ ಭ್ರಮರಿ ವಿಶೇಷ ಸಂಚಿಕೆ ಅನಾವರಣ


ಮನೋರಮಾ ಬಿ.ಎನ್ ಅವರ ನೃತ್ಯ ಸಂಬಂಧಿತ ಹಸ್ತಮುದ್ರೆಗಳ ಕುರಿತ ಸಂಶೋಧನಾ ಕೃತಿ ಮುದ್ರಾರ್ಣವದ ನಂತರ ರಚಿತಗೊಂಡ ಎರಡನೇಯ ಕೃತಿ ಇದಾಗಿದೆ.

ನಾಟ್ಯಾಚಾರ್ಯ ಮುರಳೀಧರ ರಾಯರಿಗೆ ಗೌರವಾರ್ಪಣೆ

ರಸನಿರೂಪಣೆಯೇ ಕಲೆಯ ಅತ್ಯುನ್ನತ ಸಾಧನೆ ಎನ್ನುವ ಸಾರಾಂಶವನ್ನು ಹೇಳುವ ಈ ಕೃತಿ, ಭರತನಾಟ್ಯದ ಸಮಕಾಲೀನ ಬದಲಾವಣೆ, ಬೆಳವಣಿಗೆ, ವ್ಯತ್ಯಾಸ, ಲೋಪದೋಷ, ಗುಣಾವಗುಣಗಳನ್ನೂ ಸಾಕ್ಷ್ಯಸಮೇತ ವಿಶ್ಲೇಷಿಸಿದೆ. ಪುಷ್ಪಾಂಜಲಿ, ಅಲಾರಿಪ್ಪು ಮುಂತಾದ ನರ್ತನಪ್ರಕಾರಗಳಿಂದ ಮೊದಲ್ಗೊಂಡು ತಮಿಳ್ನಾಡು ಮತ್ತು ಮೈಸೂರು ಪರಂಪರೆಗಳಲ್ಲಿ ಬೆಳೆದುಬಂದ ವಿವಿಧ ನೃತ್ಯಾಂಗಗಳನ್ನೂ ಸೂಕ್ತ ದಾಖಲೆ, ಹಿನ್ನಲೆಗಳೊಂದಿಗೆ ಮೆಟ್ಟಿಲಿನೋಪಾದಿಯಲ್ಲಿ ಚರ್ಚಿಸಿದೆ. ನೃತ್ಯಕ್ಷೇತ್ರದ ಹಿರಿಯರ ಸಂದರ್ಶನ, ಗ್ರಂಥ ಪರಾಮರ್ಶನ, ಅವಲೋಕನ, ಕ್ಷೇತ್ರಕಾರ್ಯಾಧಾರಿತ ಸಂಶೋಧನೆಯಿಂದ ನೃತ್ಯಮಾರ್ಗ ಮುಕುರದ ವಿಷಯ ವಿಶ್ಲೇಷಣೆ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಇಂದಿನ ಭರತನಾಟ್ಯಕ್ಷೇತ್ರದ ಅಗತ್ಯ, ಅನಿವಾರ್ಯತೆ, ಸಮಸ್ಯೆಗಳಿಗೆ ಕನ್ನಡಿ ಹಿಡಿದಿರುವ ಈ ಪುಸ್ತಕ ನೃತ್ಯಕ್ಷೇತ್ರದ ಒಂದು ಕೊಡುಗೆ ಮತ್ತು ನಿಜಕ್ಕೂ ಮಾರ್ಗ ಮುಕುರವೆಂಬ ಹೆಸರಿಗೆ ಅನ್ವರ್ಥ.- ಎಂದಿದ್ದಾರೆ ಪುಸ್ತಕಕ್ಕೆ ವಿಶ್ಲೇಷಣೆಯನ್ನಿತ್ತ ಅಷ್ಟಾವಧಾನಿಗಳು, ಚಿತ್ರಕಾವ್ಯ ಪರಿಣತರು, ಪೃಚ್ಛಕರೂ ಆದ ಡಾ. ಆರ್. ಶಂಕರ್.

 

ಕವಿ ದಿವಾಕರ ಹೆಗಡೆಯವರಿಗೆ ಗೌರವಾರ್ಪಣೆ

ಭರತನಾಟ್ಯ-ಭರತನ ನಾಟ್ಯಶಾಸ್ತ್ರ ಪ್ರಸ್ತುತ ಸಂದರ್ಭದಲ್ಲಿ ಗೊಂದಲವನ್ನು ಸೃಷ್ಟಿಸಿಕೊಂಡ ಪಾರಿಭಾಷಿಕ ಪದಗಳಾಗಿ ಮಾರ್ಪಟ್ಟಿವೆ. ಇಂದಿನ ಭರತನಾಟ್ಯ ಎಂಬ ನೃತ್ಯಪದ್ಧತಿಗೂಅಂದಿನ ಭರತನ ನಾಟ್ಯಶಾಸ್ತ್ರಗ್ರಂಥಕ್ಕೂ ಇರುವ ಸಂಬಂಧಗಳ ಬಗ್ಗೆ ಗಹನವಾದ ಚರ್ಚೆಗಳು ನಡೆಯುತ್ತಿದ್ದರೂ ತಾರ್ಕಿಕ, ತಲಸ್ಪರ್ಶಿಯಾದ ಅಧ್ಯಯನಗಳಾಗಿರುವುದು ಬೆರಳೆಣಿಕೆಯಷ್ಟು. ಈ ನಿಟ್ಟಿನಲ್ಲಿ ನೃತ್ಯ ಮಾರ್ಗ ಮುಕುರ ಭರತನಾಟ್ಯ ನೃತ್ಯಮಾರ್ಗಕ್ಕೆ ಹಿಡಿದ ಕೈಗನ್ನಡಿಯೇ ಆಗಿರುವುದು ಅಭಿನಂದನೀಯ.- ಎಂದಿದ್ದಾರೆ ಪುಸ್ತಕಕ್ಕೆ ನಲ್ನುಡಿಯನ್ನಿತ್ತ ಕಲಾ-ಇತಿಹಾಸ ಸಂಶೋಧಕಿ ಡಾ. ಕರುಣಾ ವಿಜಯೇಂದ್ರ.

 

ವರ್ಷದ ಶ್ರೇಷ್ಥ ನೃತ್ಯ ವಿಮರ್ಶೆಗಾಗಿ ಪ್ರಿಯಾ ರಾಮನ್ ಅವರಿಗೆ ಪ್ರಶಸ್ತಿ

ದಿನದಿಂದ ದಿನಕ್ಕೆ ಸಾಂಸ್ಕೃತಿಕ ರಂಗದ ಅದರಲ್ಲೂ ನರ್ತನ ಕ್ಷೇತ್ರದ ವಿಮರ್ಶಾಪರಂಪರೆ ಕುಸಿಯುತ್ತಿರುವಾಗ ವಿಮರ್ಶಕರನ್ನು ಗುರುತಿಸಿ, ಗೌರವಿಸುವ ದೃಷ್ಟಿಯಿಂದಷ್ಟೇ ಅಲ್ಲದೆ, ಈ ಕ್ಷೇತ್ರದ ಜವಾಬ್ದಾರಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿವರ್ಷದ ಶ್ರೇಷ್ಠ ನೃತ್ಯ ವಿಮರ್ಶೆ ಪ್ರಶಸಿಯನ್ನು ಕರ್ನಾಟಕದಲ್ಲೇ ಮೊತ್ತ ಮೊದಲಬಾರಿಗೆ ನೂಪುರ ಭ್ರಮರಿ ಆರಂಭಿಸಿದ್ದು ನಿಜಕ್ಕೂ ಒಂದು ಹೆಗ್ಗಳಿಕೆ. ಕರ್ನಾಟಕದ ಉದ್ದಗಲಕ್ಕೂ ಇದ್ದ ವಿಮರ್ಶಕರು, ಬರೆಹಗಾರರು ತಮ್ಮ ವಿಮರ್ಶೆಗಳನ್ನು ಕಳಿಸಿಕೊಟ್ಟು ಸ್ಪರ್ಧೆಯ ಆರಂಭಿಕ ವರ್ಷಕ್ಕೆ ಉತ್ತಮ ಮುನ್ನುಡಿ ಹಾಕಿದ್ದರು. ಶತಾವಧಾನಿ ಡಾ. ಆರ್. ಗಣೇಶ್ ಅವರ ಬೆಂಬಲ, ಸಾಂತ್ವನಗಳು ಸ್ಪರ್ಧೆಯ ಮೌಲ್ಯವನ್ನು ಮತ್ತಷ್ಟೂ ಹೆಚ್ಚಿಸಿದ್ದವು. ಹೀಗೆ, ಹೊಸ ಹುರುಪಿನ ನಡಿಗೆಗೆ ಸಾಕ್ಷಿಯಾಗಿ ಈ ಪ್ರಶಸ್ತಿಗೆ ಮೊದಲು ಭಾಜನರಾದವರು ಪ್ರಸ್ತುತ ಹೈದರಾಬಾದಿನಲ್ಲಿ ನೆಲೆಸಿರುವ ಕರ್ನಾಟಕದವರೇ ಆದ ಯುವ ಬರಹಗಾರ್ತಿ ಶ್ರೀಮತಿ ಪ್ರಿಯಾ ರಾಮನ್. ತೀರ್ಪುಗಾರಿಕೆಗೆ ಸಹಕರಿಸಿದ ನೃತ್ಯಕ್ಷೇತ್ರದ ಅನುಭವೀ, ಹಿರಿಯವಿದ್ವನ್ಮಣಿಗಳಿಗೆ ಈ ನಿಟ್ಟಿನಲ್ಲಿ ಸಾದರ ಕೃತಜ್ಞತೆ ಸಲ್ಲಲೇಬೇಕು.


.

ಅಂದಿನದು ಒಂದು ಬಗೆಯ ಜಂಟಿ ಸಮಾರಂಭ. ಸೋದರೀ ಪತ್ರಿಕೆಗಳಾದ ನೂಪುರ ಭ್ರಮರಿ, ಚೈತ್ರರಶ್ಮಿ ಪರಸ್ಪರ ಜೊತೆಗೂಡಿದ್ದವು. ಚೈತ್ರರಶ್ಮಿ ಪ್ರತಿಕೆ ತನ್ನ ೬ನೇ ವರ್ಷದ ಸಂಭ್ರಮಕ್ಕಾಗಿ ರಾಜ್ಯಮಟ್ಟದ ಕಥಾಸ್ಪರ್ಧೆಯನ್ನು ಹಮ್ಮಿಕೊಂಡಿತ್ತು. ೫೦ ಮಂದಿ ಗ್ರಾಮೀಣ, ಹೊಸ ಕಥೆಗಾರರ ಅನ್ವೇಷಣೆಯಲ್ಲಿ ಐವತ್ತು ಮಂದಿ ಕಥೆಗಾರರ ನಡುವೆ ಸ್ಪರ್ಧೆಯಿತ್ತು. ಫಲವಾಗಿ ೧೦ ಮಂದಿ ವಿಜೇತ ಸ್ಪರ್ಧಿಗಳ ಕಥಾಸಂಕಲನ ಕನ್ನಡಿ ಬಿಂಬದ ನೆರಳು ಅನಾವರಣವನ್ನೂ ಒಳಗೊಂಡಿತ್ತು. ವಿಕಲಚೇತನ ಈಜು ಕ್ರೀಡಾಪಟು ಏಕಲವ್ಯ ಪ್ರಶಸ್ತಿ ವಿಜೇತ ರಾಘವೇಂದ್ರ ಅಣ್ವೇಕರ್ ಮತ್ತು ಸಾಮಾಜಿಕ ಕಾರ್ಯಕರ್ತ ನಾಗರಾಜ ನಾವುಂದ ಅವರಿಗೆ ಸನ್ಮಾನಿಸುವಾಗಲಂತೂ ಅವರ ಕೆಚ್ಚೆದೆಯ ಹೋರಾಟ ಮತ್ತು ಸಾಧನೆಯ ತುಡಿತವನ್ನು ಕಂಡು ಕಣ್ಣಲ್ಲಿ ನೀರು ಜಿನುಗಿದ್ದು ಸುಳ್ಳಲ್ಲ. ನಿಜಕ್ಕೂ ಅದು ಉತ್ಸಾಹದ ಸೆಲೆಯನ್ನು ಜೀವಂತವಾಗಿಸುವ, ಜೀವನ ಚೈತನ್ಯ ಕೊಡುವ ಕ್ಷಣ.

ದೇಹದ ಎಲ್ಲಾ ಅಶುದ್ಧ ರಕ್ತವನ್ನು ನಿತ್ಯ ಶುದ್ಧ ಮಾಡುವ ಹೃದಯ ಶರೀರದ ಪುಟ್ಟ ಘಟಕ. ಅಲ್ಲಿ ನಡೆಯುವ ಕೆಲಸ-ಕರ್ತವ್ಯ ಇಡೀ ಜೀವಮಾನದ ಶಕ್ತಿ. ಅಂತೆಯೇ ಸಮಾಜದಲ್ಲಿ ನಡೆಯುವ ಪುಟ್ಟ ಪುಟ್ಟ ಘಟಕಗಳ ಕಾರ್ಯಗಳೇ ಸಮಾಜವನ್ನು ಜೀವಂತವಾಗಿರಿಸುತ್ತವೆ. ವಿಪರ್ಯಾಸವೆಂದರೆ ಜನರು ಸಾಮಾನ್ಯವಾಗಿ ಸಮುದ್ರವನ್ನೇ ಗುರುತಿಸುತ್ತಾರೆಯೇ ವಿನಾ ನದಿ ತೊರೆಗಳನ್ನಲ್ಲ. ಎಲ್ಲರಿಗೂ ಸ್ಥೂಲವಾಗಿ ಕಾಣುವುದು, ದೊಡ್ಡದೆನಿಸಿಕೊಂಡದ್ದು ಮಾತ್ರ ನೆನಪಾಗುವುದು, ಆಪ್ತವಾಗುವುದು ಇಂದಿನ ದುರಂತ. ಆದರೆ ಸಂಸ್ಕೃತಿಗೆ ತೊಡಕುಗಳು ಬಂದಾಗ ಇಂತಹ ಘಟಕಗಳೇ ಸೆಟೆದು ನಿಂತು ಸೂಕ್ಷ್ಮ ರೂಪದಲ್ಲಿ ಹೋರಾಡುತ್ತವೆ. ಈ ನಿಟ್ಟಿನಲ್ಲಿ ನೂಪುರ ಭ್ರಮರಿಯದ್ದು ನಿಜಕ್ಕೂ ಅಂತಹ ಒಂದು ಅತ್ಯಪೂರ್ವ ಕೆಲಸ. ಸಾಹಿತ್ಯದ ಚಳುವಳಿಗಿಂತ ಉಳಿದ ಕಲಾಪ್ರಕಾರದ ಚಳುವಳಿಗೆ ಹೆಚ್ಚಿನ ಅವಕಾಶಗಳಿರುವ ಕಾಲಕ್ಕೆ ನೂಪುರ ಮಾಡುತ್ತಿರುವುದು ಆತ್ಮೀಯತೆಂii ಕೆಲಸ. ವೈಭವಕ್ಕಿಂತಲೂ ಈ ಪತ್ರಿಕೆ ನೆಚ್ಚಿಕೊಂಡದ್ದು ನಿಧಾನವಾದರೂ ಪ್ರಧಾನವೆಂಬಂತನೀಟುಗಾರಿಕೆಯ, ಅಚ್ಚುಕಟ್ಟುತನದ ಕೆಲಸವನ್ನು. ಇಂತಹ ಕೆಲಸ ಇಂದಿನ ಕಾಲಕ್ಕೆ ಅಗತ್ಯವಾಗಿ ಹೆಚ್ಚಾಗಬೇಕು. ಸಾಮಾಜಿಕ, ಸಾಹಿತ್ಯಿಕ ಕಾರ್ಯಗಳನ್ನು ಒಟ್ಟಿಗೆ ನಿಂತು ಮಾಡುವ ಕೆಲಸವೂ ನೂಪುರ ಭ್ರಮರಿಯಿಂದಾಗುತ್ತಿದ್ದು ಇದರ ಧ್ಯೇಯಕ್ಕೆ ಮತ್ತಷ್ಟು ಸಹಕಾರ ಸಿಗಲಿ ಎಂದು ಆಶಿಸಿದವರು ಡಾ. ಜಿ.ಬಿ.ಹರೀಶ್.

ಸಾನ್ನಿಧ್ಯ ಪ್ರಕಾಶನದ ಅಧ್ಯಕ್ಷ ಬಿ.ಜಿ. ನಾರಾಯಣ ಭಟ್, ನೃತ್ಯ ಸಂಶೋಧಕಿ ಡಾ. ಶೋಭಾ ಶಶಿಕುಮಾರ್, ಅಂತರ್ರಾಷ್ಟ್ರೀಯ ಈ-ಕವಿ ಸಂಘಟನೆಯ ಅಧ್ಯಕ್ಷ ವಿ. ಎಂ. ಕುಮಾರಸ್ವಾಮಿ, ಹಿರಿಯ ಕಲಾವಿದೆ, ಬರಹಗಾರ್ತಿ ವೇದಪುಷ್ಪ, ಸಂಗೀತ ವಿದುಷಿ ಡಾ. ಅರ್ಚನಾ ಭಟ್, ಹವ್ಯಕ ಪತ್ರಿಕೆಯ ಸಂಪಾದಕ ಶ್ರೀಕಾಂತ ಹೆಗಡೆ, ಕರ್ನಾಟಕ ಸಾಂಸ್ಕೃತಿಕ ವೇದಿಕೆಯ ಪಂಜಾಜೆ ಸಹೋದರರು, ಅಂಕಣಕಾರ ರಾಕೇಶ್ ಕುಮಾರ್ ಕಮ್ಮಜೆ.. ಹೀಗೆ ಕಾರ್ಯಕ್ರಮದ ಒಟ್ಟು ಅಂದಕ್ಕೆ ಮೆರುಗು ನೀಡಿದವರು ನೂರಾರು ಮಂದಿ. ಈ ಎಲ್ಲಾ ಹಂತದಲ್ಲಿ ನೂಪುರದ ಗೆಳೆಯಬಳಗ ಚೈತ್ರರಶ್ಮಿ ಸಂಪಾದಕ ರಾಮಚಂದ್ರ ಹೆಗಡೆ, ರಾಜೀವ ಹೆಗಡೆ, ಎನ್. ವಿ. ವೈದ್ಯ, ಮೇಧಾ ನಾಗರಾಜ್, ನಮ್ರತಾಪ್ರಸಾದ್, ಶ್ರೀನಿಧಿ ಅಡಿಗ, ಹರ್ಷ ಕಮ್ಮಜೆ, ಕಾರ್ತಿಕ್ ಪರಾಡ್ಕರ್.. ಅವರ ಸಹಕಾರ ಮರೆಯಲಸಾಧ್ಯ.

ನೂಪುರದ ಬಳಗದಿಂದ ಗುರು ಮುರಳೀಧರ ರಾವ್, ದಿವಾಕರ ಹೆಗಡೆ, ಧ್ಯೇಯ ಸಾಫ್ಟ್ವೇರ್ ಸೊಲ್ಯೂಷನ್ಸ್‌ನ ಮಹೇಶ್ ಎಳ್ಯಡ್ಕ, ಅವರನ್ನು ಸನ್ಮಾನಿಸಿ ಅಭಿವಂದಿಸಲಾಯಿತು. ಡಾ. ಪ್ರಧಾನ್ ಗುರುದತ್ ಮತ್ತು ದಿವಾಕರ ಹೆಗಡೆಯವರು ನೂಪುರದ ಧ್ಯೇಯೋದ್ದೇಶಗಳನ್ನು ಮನದುಂಬಿ ಶ್ಲಾಘಿಸಿದರು. ಮಿತ್ರ ರಾಧೇ ವೇದಿಕೆಗಿಂತಲೂ ತೆರೆಯ ಮರೆಯಲ್ಲೇ ಪ್ರಸರಣಾಧಿಕಾರಿ ವಿಷ್ಣುಪ್ರಸಾದ್‌ರಿಂದ ನೆನಪಿನ ಕಾಣಿಕೆ ಸ್ವೀಕರಿಸಬೇಕೆಂಬ ಪಟ್ಟು ಹಿಡಿದರು. ಸುನಿಲ್ ಕುಲಕರ್ಣಿ, ರಾಮ ಭಟ್ ಅವರ ಅನುಪಸ್ಥಿತಿ ಅವರಿತ್ತ ಸಹಕಾರವನ್ನು ಮತ್ತಷ್ಟು ಸ್ಮರಿಸಿತು. ಎಫ್‌ಎಂ ರೈನ್‌ಬೋ ನಿರೂಪಕಿ ರೇವತಿ ಶೆಟ್ಟಿಯವರ ಅಸ್ಖಲಿತ ನಿರೂಪಣೆ ಕಾರ್ಯಕ್ರಮದ ಔಪಚಾರಿಕತೆಯ ಬಿಗಿಯನ್ನು ಕಳಚಿ ಸ್ನೇಹಪೂರ್ವಕ ಸಮ್ಮಿಲನವಾಗಿಸಿತು. ದೂರದರ್ಶನ ಕಲಾವಿದೆ ವಿದುಷಿ ಶ್ರೀಮತಿ ಐಶ್ವರ್ಯಾ ನಿತ್ಯಾನಂದ ಅವರಿಂದ ಡಿ.ವಿ.ಜಿ. ಅಂತಃಪುರ ಗೀತೆಗಳ ಕುರಿತ ಸೊಗಸಾದ ಭರತನಾಟ್ಯ ನೆರೆದವರ ಕಣ್ಣಿಗೆ ಮತ್ತೊಂದು ಹಬ್ಬ

ಮೊದಲ ಹೆಜ್ಜೆ ಮಡಿಕೇರಿಯಲ್ಲಿ, ಎರಡನೇಯದು ಮಂಗಳೂರಿನಲ್ಲಿ, ಮೂರನೇಯದಕ್ಕೆ ಮುದ್ರಾರ್ಣವದ ಮೇಘಮಲ್ಹಾರ ಉಜಿರೆಯಲ್ಲಿ, ನಾಲ್ಕನೇಯದಕ್ಕೆ ಬೆಂಗಳೂರಿನಲ್ಲಿ ಮಾರ್ಗ ಮುಕುರವಾಗಿ.. ಮುಂದಿನದು? ನಿಮ್ಮ ನಿರಂತರ ಆಶೀರ್ವಾದ, ನಮ್ಮ ನಿರೀಕ್ಷೆ. ಒಟ್ಟಿನಲ್ಲಿ ಕರ್ತವ್ಯ ಜಾರಿಯಲ್ಲಿರಬೇಕು. ಕೈಜೋಡಿಸಿ ಮುಂದುವರಿಯಬೇಕು, ಫಲಾಫಲಗಳನ್ನು ಅನಂತಕ್ಕೆ ಬಿಟ್ಟು, ಧ್ಯೇಯವೊಂದನ್ನೇ ಜೊತೆಗಿಟ್ಟು.

ನಮ್ಮೊಂದಿಗೆ ಇರುತ್ತೀರಲ್ವಾ?

ಒರತೆ ನದಿಯಾಗುತ್ತಲಿದೆ…ಕನಸುಗಳು ಹಲವಿವೆ, ಹಿರಿದಿವೆ… ಗುರಿಯೆಡೆಗಿನ ಪಯಣ ನಿರಂತರ.

——————-

A calling for social responsibility!

-Mrs. Priya Raman, Awardee, Best Dance Criticism-2010

Everytime I sit to pen something, a strange feeling of nostalgia crosses over, something that reminds me of this new found immense passion. But at the threshold that I stand today, it is no longer new, now that I carry a lot of responsibility what with an award showered on me for my writing!

As I humbly accept that this is a beautiful recognition for hard work, what I more deeply acknowledge and value is the very thought of giving an award to this field, the commendable service being done by ‘Noopura Bhramari’ under Smt. Manorama B.N and her team in Bangalore for treading a path which others dare not. It makes it all the more special that the organization just started off as a mere idea in complete meagerness in the corridors of a University has only flowered to greater, respectable heights.

The team’s gesture of throwing light on the work of writers of dance, encouraging educative content and publishing a magazine of art most sincerely at near negligible costs is something only people with untiring devotion could muster. Noopura Bhramari spelt a strong message of art carrying a great degree of accountability to the society at large.

Noopura Bhramari’s annual function celebrating the completion of four years was a vivid picture of experiences and commitment. An early Sunday evening with eight speakers talk on exploration and furthering of arts is not a small fete. Add to his an auditorium filled in its capacity is definitely a sign to show a job very well done.

ಸಮಾಜ ಸೇವಕ ಸೃಷ್ಟಿ ಸಂಘಟನೆಯ ನಾಗರಾಜ ನಾವುಂದ ಅವರಿಗೆ ಸನ್ಮಾನ( ಕಾರ್ಯಕ್ರಮದ ಹಿಂದಿನ ಬ್ಯಾನರ್ ಮಾಡಿಕೊಟ್ಟವರೂ ಇವರೇ..)

The function was also a healthy collaboration of another like minded organization – Chaitra Rashmi providing a platform for rural population to come to the fore and motivating them to achieve. Some extraordinary achievers were felicitated for their contributions to Karnataka. Mr. Raghavendra Anvekar with his spirited approach to life (being polio attacked) received a standing ovation for his success in water sports and social worker Nagaraj Navunda called for a strong will power to make a good society.

The speakers ranging from Dr. G.B Harish, noted critic and Professor of Tumkur V.V who expressed concern about the diminishing educative research mentality among the urban population, to Shri Pradhan Gurudutt who lauded the efforts of such organizations, the function in totality voiced social responsibility and knowledged decision making . Ashtavadhani Dr. R Shankar, Senior Guru Muralidhar Rao, Yakshagana and Bharathanatyam Lyricist Divakara  Hegde’s words also memorable.

ನೂಪುರದ ಬಳಗದವರಿಗೆ ಸನ್ಮಾನ

The programme had a cultural end with a pleasing Bharatanatyam recital by Ms. Aishwarya Nityananda and the attendees went home heavy with a plethora of thoughts to kindle them. On a more personal note, this would go down deep in memory lane for the encouragement received and with a larger role to play in future. (I shall also try my skills at Kannada writing, but it may take a while before that, with due apologies!)

ಡಾ. ಆರ್. ಶಂಕರ್ ಅವರೊಂದಿಗೆ ಮನೋರಮಾ ವಿಷ್ಣುಪ್ರಸಾದ್

———

Leave a Reply

*

code