ಅಂಕಣಗಳು

Subscribe


 

5ನೇ ವರುಷದ ಹೊಸಿಲಲ್ಲಿ ನಿಂತು…

Posted On: Tuesday, February 15th, 2011
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಐದನೇ ಸಂವತ್ಸರಕ್ಕೆ ಅಡಿಯಿಡುವ ಈ ಹೊತ್ತು ನಿಜಕ್ಕೂ ನಾವು ಮೊದಲೆಂದೂ ಊಹಿಸದ ಸಂಭ್ರಮದ ಕ್ಷಣ. ಸಂತಸದ ಘಳಿಗೆಗಳನ್ನು ಪಡೆಯಬೇಕಿದ್ದರೆ ಒಂದಷ್ಟೂ ಸವಾಲು, ಸಂಕಟ, ಸಂಕಷ್ಟಗಳನ್ನೂ ಅನುಭವಿಸಬೇಕಾದ್ದು ಅನಿವಾರ್ಯ. ಅಷ್ಟಕ್ಕೂ ಸಂತಸ, ಸುಖದ ಧನ್ಯತೆ ಅರಿವಾಗುವುದು ಒಂದಷ್ಟು ತಲ್ಲಣ, ಆತಂಕ, ದುಃಖ, ಬೇಸರದ ಮೆಟ್ಟಿಲುಗಳನ್ನು ಹತ್ತುತ್ತಾ ಬಂದಾಗಲೇ. ಒಂದೇ ಓಟಕ್ಕೆ ಶಿಖರ ತಲುಪುವುದಕ್ಕಿಂತಲೂ ಹಂತಹಂತವಾಗಿ ಏರಿದಾಗಲೇ ಬದುಕಿನ ಓಟಕ್ಕೆ ಮೌಲ್ಯ ಬರುವುದು.

ಹಾಗೆಂದು ಶಿಖರ ತಲುಪಿದಲ್ಲಿಗೆ ಪೂರ್ಣ ವಿರಮಿಸುವುದೆಂದರೆ ಆ ಪಯಣಕ್ಕೆ ಏನಿದೆ ಅರ್ಥ? ಗುರಿ ಸಮಾಪ್ತಿಯಾದರೆ ಜೀವನದೊಡಲೊಳಗಿರುವ ರಸದೃಷ್ಟಿ ತನ್ನಿಂತಾನೇ ಖಾಲಿಯಾಗತೊಡಗುತ್ತದೆ. ಬೆಟ್ಟಕ್ಕಿಂತ ಬೆಟ್ಟ ದೊಡ್ಡದು ಎಂಬಂತೆ ಕಣ್ಣು ಹಾಯಿಸಿದಷ್ಟೂ ಮುಗಿಯದ ಅನಂತ ಅವಕಾಶ, ಕ್ಷಿತಿಜವನ್ನು ತಲುಪುವ ಹಣಾಹಣಿ, ಹಪಹಪಿಕೆಯು ಆಗಾಗ್ಗೆ ಅಲ್ಪವಿರಾಮಗಳೊಂದಿಗೆ ಮುಂದುವರಿದಾಗಲಷ್ಟೇ ಅನುಭವಗಳ ಘನೀಕರಣಕ್ಕೆ ಅರ್ಥ ಬರುತ್ತದೆ; ಸಲಿಲದ ಸೆಲೆ, ಹರಿವಿನಲ್ಲಿ ನಿರಂತರತೆಯಿರುತ್ತದೆ. ಈ ಹಿನ್ನಲೆಯಲ್ಲಿ ಬೆಳವಣಿಗೆ ಎನ್ನುವ ಕ್ರಮಿಸಿದಷ್ಟೂ ಮುಗಿಯದ ಹಾದಿಯಲ್ಲಿ ದೇಹದ ಕಸುವು ಇರುವಷ್ಟೂ ದಿನ ನಡೆಯುವ ಹಂಬಲ ನಮ್ಮದು. ಹೀಗಾಗಿ ಕಳೆದ ನಾಲ್ಕು ವರ್ಷಗಳಿಂದಲೂ ಪ್ರಯಾಸಪಡುತ್ತಾ ಬಂದರೂ ಒಂದು ಬಗೆಯ ಪ್ರವಾಸದಂತೆ ನರ್ತನರಂಗದ, ಬರಹಲೋಕದ ಅನುಭವಗಳನ್ನು ಅಂತರಂಗಕ್ಕೆ ತಂದುಕೊಳ್ಳುತ್ತಾ ಪರಿಭ್ರಮಿಸುತ್ತಿದ್ದೇವೆ.

ಕಿರಿದಾದ ಆಸೆಗಳಿಂದ ವಿಸ್ತಾರಗೊಳ್ಳುವ ಕನಸುಗಳು ವಿಶಾಲವಾದಷ್ಟೂ ನಮ್ಮ ಕಿಟಕಿಗಳ ಹರಹು ದೊಡ್ಡದಾಗುತ್ತಾ ಅನಂತ ಆಕಾಶದ ನೋಟ ಸುಂದರವೆನಿಸುತ್ತದೆ. ಈ ದೃಷ್ಟಿಯಲ್ಲಿ ಯೋಚಿಸಿದಾಗ ನೂಪುರದ ಸೃಷ್ಟಿ ದಕ್ಕಿದ ಪುಟ್ಟ ಪುಟ್ಟ ಬೊಗಸೆಗಳಿಂದ ಆರಂಭವಾದರೂ, ಪತ್ರಿಕೆಯಾಗಿ, ಅರಿವಿನ ಅವಕಾಶವಾಗಿ ಅದು ತುಂಬಿಸಿಕೊಡುತ್ತಿರುವುದು ಬೊಗಸೆ ಹಿಡಿದಷ್ಟೂ ಮುಗಿಯದ ಮಳೆ. ಹೊಸ ಹೊಸ ಚಿಗುರುಗಳನ್ನು ಬೆಳೆಸುವ ಧನ್ಯತೆಯಿದೆಯಲ್ಲಾ; ಅದು ನಮ್ಮ ಬದುಕನ್ನು ಮತ್ತಷ್ಟು ಸಾರ್ಥಕ್ಯಗೊಳಿಸುವ, ಸ್ಫೂರ್ತಿಯನ್ನು ಇಮ್ಮಡಿ ಮಾಡುವ, ಸಂತೃಪ್ತಿಯ ಮೂಟೆಯನ್ನೀಡುವ ಅಪರಿಮಿತ ಆನಂದ.

ಮೊದಮೊದಲಿನ ಹೆಜ್ಜೆಗಳಲ್ಲಿ ಅಳುಕು, ಅಭದ್ರತೆ, ಆತ್ಮನಿಂದನೆ, ಹಿಂಜರಿಕೆ, ಆರಂಭಶೂರತ್ವವೆಂಬ ಮೂದಲಿಕೆಗಳು, ಸ್ಪರ್ಧಾತ್ಮಕ ಜಗತ್ತಿಗೆ ಸಡ್ಡು ಹೊಡೆಯುವಲ್ಲಿ ನೋವುಗಳು ತೀರಾ ಕಾಡಿದರೂ ಕ್ಷಣಕಾಲ ಮಿಂಚುವ ಮಿಂಚಿಗಿಂತಲೂ ನಿಧಾನವಾಗಿ ನೆಲದ ಒಡಲನ್ನು ತುಂಬಿಸುವ ವರ್ಷಧಾರೆಯೇ ಸತ್ತ್ವಯುತವಾದದ್ದು ಎಂದು ಕಂಡದ್ದೇ ಅದರ ಹನಿಗಳತ್ತ ನಮ್ಮ ಹೆಜ್ಜೆಗಳು ತಳವೂರಿದವು. ಆರ್ಥಿಕ ಶಕ್ತಿಯಿಲ್ಲದಿದ್ದರೂ, ಇಚ್ಛಾಶಕ್ತಿಯೊಂದಷ್ಟೇ ನಮ್ಮನ್ನು ಈವರೆಗೆ ಮುನ್ನಡಿಯಿಡುವಂತೆ ಮಾಡಿದವು. ಜಡಿಗುಡುವ ಮಳೆಯನ್ನು ಸುರಿಸುವ ಅಸಾಮಾನ್ಯ ಬಲವಲ್ಲದಿದ್ದರೂ, ಕಾದು ಕೆಂಪಡರಿದ ನೆಲದ ಬಾಯಾರಿಕೆಯನ್ನು ನೀಗಿಸುವಷ್ಟರ ಮಟ್ಟಿಗೆ ಹನಿಗೂಡಿಸುವ ಶಕ್ತಿಯನ್ನು ನೀಡು ಎನ್ನುವ ಕೋರಿಕೆ ಕಾಣದ ಕೈಗಳಿಗೆ ನಿತ್ಯ ನಿವೇದನೆಗೊಳ್ಳುತ್ತದೆ.

ಹಾಗೆಂದು ಈಗಲೂ ನಾವು ಬಲಿಷ್ಠರಲ್ಲ. ಜೊತೆಗೆ, ಪೈಪೋಟಿಯನ್ನೇ ಗುರಿಯಾಗಿಸಿದ ನಿಲುವೂ ನಮ್ಮಲ್ಲಿಲ್ಲ್ಲ. ಬೆನ್ನು ಬಿಡದ ಬೇತಾಳದಂತೆ ಬೇಡಿಕೆಯಿಡುವ, ಹೊಸ ಆಸೆಗಳನ್ನು ಹುಟ್ಟಿಸುವ, ಒಂದು ಹಾದಿಯಿಂದ ಮತ್ತೊಂದೆಡೆಗೆ ಆಗಾಗ್ಗೆ ಲಂಘಿಸುವ ವಿಷಯಗಳಲ್ಲಿ ನಂಬಿಕೆಯಿಲ್ಲ. ಪತ್ರಿಕೆಯನ್ನು ಬಿಟ್ಟು ಬದುಕು ಕಟ್ಟಿಕೊಳ್ಳಬೇಕಾದ ಅವಸರಗಳು ಇಲ್ಲ. ಅರಿವಿನ ಲಾಭದ ಹೆಚ್ಚುಗಾರಿಕೆಯೇ ಕಾಣಿಸುವಾಗ ಆರ್ಥಿಕ ಲಾಭಕ್ಕಾಗಿ ಗೌರವವನ್ನು ಪಣವಿಡುವ ಒಳದಾರಿಗಳು, ಓಲೈಸುವಿಕೆಯು ನಮ್ಮಿಂದ ಸಾಧ್ಯವಿಲ್ಲ. ಹಾದಿಗೆ ಅನುಕ್ರಮವಾದ, ಅನುಸರಿಸಬೇಕಾದ ರೀತಿಯಲ್ಲಿ ಅಗತ್ಯ ಬದಲಾವಣೆಗಳನ್ನನುಸರಿಸಿ ನಮ್ಮ ನಡೆಯೇ ಹೊರತು; ವ್ಯಕ್ತಿ, ವೈಯಕ್ತಿಕಗಳೊಂದಿಗಲ್ಲ. ಬಹುಷಃ ನೂಪುರದಂತಹ ಆತ್ಮಬಂಧು ನಮ್ಮ ಪಾಲಿಗೆ ಬೇರಾವುದೂ ಇಲ್ಲ.

ಎಲ್ಲರನ್ನೂ ತಲುಪುವ ಬಯಕೆಯಿದೆ; ಆದರೆ ನಮ್ಮ ಮಿತಿಗಳ ಆವರಣದ ಪರಿಚಯವೂ ಇದೆ. ಪ್ರಯಾಣದ ಬೇಸರ ತಣಿಸಲು ಬಾಂಧವ್ಯಗಳು ಜೊತೆಯಾದರೆ ಸಂತೋಷ. ಆದರೆ ಅದೇನೆ ಪ್ರಶ್ನೆಗಳು, ಅಸಮಂಜಸ ಪ್ರಸಂಗಗಳು, ರಗಳೆಗಳು, ಸಮಸ್ಯೆಗಳು, ಶರಣಾಗತಿಗಳು, ಬೇಡಿಕೆಗಳು, ಮನಸ್ತಾಪಗಳು, ಅನ್ಯಮನಸ್ಕತೆ, ಮರೀಚಿಕೆಗಳು, ಆಗ್ರಹಗಳು, ಆಸೆಗಳು ಎದುರಾದರೂ; ಸಾಧ್ಯತೆಗಳ ಅಪಾರ ಮುನ್ನೋಟವನ್ನು, ಬೆಂಬಲವನ್ನೂ ಈಯುತ್ತಿರುವ ನೂಪುರವನ್ನು ಬಿಟ್ಟು ಕೊಟ್ಟ ಹೊಸ ರಾಜಿಸೂತ್ರ, ಮಮಕಾರಗಳು ನಮಗೆ ಒಗ್ಗದ ವಿಷಯ. ಆದರೆ ನಿಧಾನವಾದರೂ ಪ್ರಧಾನವೆನಿಸುವಂತೆ ಕ್ರಮಿಸಿದಷ್ಟೂ ಕಾಲ ಸತ್ತ್ವಯುತವಾದುದನ್ನಷ್ಟೇ ಹಂಚಿಕೊಳ್ಳುವ, ಕಾಣ್ಕೆಯನ್ನೀಯುವ, ಸಾತ್ತ್ವಿಕರನ್ನೇ ಸಮೂಹವಾಗಿ ಬಯಸುವ ಅಭೀಪ್ಸೆ ಮಾತ್ರ ನಮ್ಮದು. ಸಾರ್ಥವೆಂದು ಹೊರಟ ಮೇಲೆ ಸ್ವಾರ್ಥವಿರದೆ ಯಾತ್ರೆ ಮಾಡಿದರೇನೆ ಅದು ಸಾರ್ಥಕ.

ಆದ್ದರಿಂದಲೇ ಹೆಮ್ಮೆಯಿದೆ, ಪ್ರೀತಿಯಿದೆ, ಅಕ್ಕರೆಯಿದೆ, ಗೌರವವಿದೆ, ಕಳಕಳಿಯಿದೆ, ಆಳವಾದ ನಂಟು ಬೆಸೆದಿದೆ..ನೂಪುರ ಭ್ರಮರಿಯೊಂದಿಗೆ, ಅದರ ಸಮಾನಶೀಲ ಮನಸ್ಸುಗಳೊಂದಿಗೆ. ಶಿಕ್ಷಣ, ವಿಚಾರಗಳ ಮನನ, ಮೌಲಿಕ ಚಿಂತನ, ಅರಿವಿನ ಮಂಥನ, ಸತ್ತ್ವದ ಪೂರಣ, ಸೃಷ್ಟಿಶೀಲ ಪ್ರಕಾಶನ, ಸಂಸ್ಕಾರದ ಉದ್ದೀಪನ, ಅವಕಾಶದ ವಿಕರ್ಷಣ, ಒಳಿತಿನ ಪ್ರಜ್ವಾಲನ, ವಿವೇಚನಾಸಹಿತ ದರ್ಶನ, ಸಹಕಾರದ ನಿರೀಕ್ಷಣ, ಅಧ್ಯಯನ, ಪುನರಾವರ್ತನ, ಪ್ರತಿಫಲನ, ಪರಿವರ್ತನ, ಪ್ರಸರಣ, ಸಂವಹನ ..ಒಟ್ಟಿನಲ್ಲಿ ಎಲ್ಲವನ್ನೂ ಒಡಗೂಡಿದ ನರ್ತನ ಜಗತ್ತಿಗೊಂದು ಪರಿಭ್ರಮಣ ನಮ್ಮ ಕರ್ತವ್ಯದ ಕರಣ, ಕಾರಣ.

ನಮ್ಮೊಳಗಿನ ಹುಡುಕಾಟಕ್ಕೆ ತೆರೆದುಕೊಂಡ ಹೊಸ ದಾರಿ ನೂಪುರ ಭ್ರಮರಿ. ಆದರೆ ನೂಪುರವನ್ನು ರೂಪಿಸಿದ್ದಕ್ಕಿಂತಲೂ ಅದು ನಮ್ಮನ್ನು ರೂಪಿಸಿದ್ದು ಹೆಚ್ಚು. ಈ ದಾರಿಯಲ್ಲಿ ಶಕ್ತಿಯನ್ನೂ ಮೀರಿದ ಭಕ್ತಿಯನ್ನು ಕೊಟ್ಟ ಬಳಗದವರೊಂದಿಗೆ ನೆನಪುಗಳನ್ನು ಹಂಚಿಕೊಳ್ಳುತ್ತಲಿದ್ದೇವೆ. ನಿಮ್ಮ ಹರಕೆ, ಹಾರೈಕೆಗಳು ನಮ್ಮನ್ನು ಅನಂತ ಸಲಹಲಿ.

ಪ್ರೀತಿಯಿಂದ

ಸಂಪಾದಕರು

Leave a Reply

*

code