ಅಂಕಣಗಳು

Subscribe


 

6ನೇ ವರುಷದ ಹೊಸಿಲಲ್ಲಿ ನಿಂತು…

Posted On: Saturday, February 25th, 2012
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಕಳೆದ ವರುಷ ನೃತ್ಯ ಮಾರ್ಗ ಮುಕುರ ಅನಾವರಣಗೊಂಡು ಶ್ರೇಷ್ಠ ನೃತ್ಯ ವಿಮರ್ಶೆ ಪ್ರಶಸ್ತಿಗೆ ನಾಂದಿ ಹಾಡಿದ್ದು ನೆನಪಿಸಿಕೊಳ್ಳುತ್ತಿರುವಾಗಲೇ ವರುಷವೊಂದು ಸಂದು ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಎಂಬಂತ ಸಂಶೋಧನಾ ಕಾರ್ಯಕ್ರಮಕ್ಕೆ ಅಣಿಯಾಗಿದ್ದೇವೆ. ನೂಪುರ ಭ್ರಮರಿ ಪತ್ರಿಕೆಯಾಗಿ ಆರಂಭವಾದಾಗಿನಿಂದಲೂ ಕಳೆದ ೫ ವರುಷದಲ್ಲಿ ಶಿವರಾತ್ರಿಯ ಆಸುಪಾಸಿಗೆ ತನ್ನ ವಾರ್ಷಿಕ ಸಂಭ್ರಮವನ್ನು ಆಚರಿಸಿಕೊಂಡು ಬರುತ್ತಿರುವುದೇ ಒಂದು ಧನ್ಯತೆ. ಅದರೊಳಗೂ ಐದರಿಂದ ಆರನೇ ವರುಷಕ್ಕೆ ಕಾಲಿಡುವ ಸಂಭ್ರಮಕ್ಕೆ ಈ ಸಲ ಫೆಬ್ರವರಿ ೨೦ರ ಮಹಾಶಿವರಾತ್ರಿಯೂ ದೈವಪ್ರೇರಣೆಯೋ ಎಂಬಂತೆ ನಮಗೊದಗಿದ್ದು; ನೃತ್ಯ ಸಂಶೋಧಕರ ಒಕ್ಕೂಟದ ಆರಂಭ; ಆ ಮೂಲಕ ಹಿರಿಯ ವಿದ್ವನ್ಮಣಿಗಳ ಒಡನಾಟ, ಸಮಾನಮನಸ್ಕ ಸನ್ಮಿತ್ರರ ಒತ್ತಾಸೆ, ಕರ್ನಾಟಕದಲ್ಲೇ ಮೊದಲ ಬಾರಿಗೆ ನೃತ್ಯದ ಕುರಿತಾದ ಸಂಶೋಧನೆಗಳನ್ನು ಸಂಗ್ರಹಿಸಿ ವಿವರ ದಾಖಲಿಸುವ ಪ್ರಯತ್ನ ಫಲ ಪಡೆದುಕೊಂಡಿರುವುದು, ಅದರೊಂದಿಗೆ ನೃತ್ಯದ ಕುರಿತ ಗ್ರಂಥಗಳು-ಪತ್ರಿಕೆಗಳು ಹಾಗೂ ಕಾದಂಬರಿಗಳ ವಿವರಗಳನ್ನು ದಾಖಲಿಸುವ ಹೆಜ್ಜೆ, ನೃತ್ಯವಿಮರ್ಶಾ ಕ್ಷೇತ್ರಕ್ಕೆ ಪ್ರಶಸ್ತಿ ಮಾತ್ರವಲ್ಲದೆ ಆ ಕ್ಷೇತ್ರದ ಆಳ-ಅಗಲಗಳನ್ನು, ಶೈಲಿ ಸಾಧ್ಯತೆಗಳನ್ನು ಅರಿಯುವಲ್ಲಿ ನಿರಂತರ ನಡೆ, ಸಂಚಿಕೆಯ ತುಂಬಾ ಸಮೃದ್ಧವೆನಿಸುವ ಬರೆಹಗಳು,…. ಜೊತೆಗೆ ಮತ್ತೊಮ್ಮೆ ಮಗದೊಮ್ಮೆ ನಮ್ಮ ಹೆಜ್ಜೆಗಳನ್ನು ನೋಡಿಕೊಳ್ಳುವುದರ ಹಿಂದೆ ಬೆರಗು, ಸಂತಸಗಳ ಬೊಗಸೆ ಅಕ್ಷಯವಾಗುತ್ತಿದೆ. ಒಳಿತಿನ ಆಸ್ಥೆ, ಕಳಕಳಿಗಳು ಹೆಮ್ಮೆ, ಒತ್ತಾಸೆಯ ಆಸರೆಯನ್ನೂ, ಹಿತಾಶ್ರಯವನ್ನೂ ನಿಧಾನವಾದರೂ ಪ್ರಧಾನವಾಗಿಯೇ ಕೊಡುತ್ತವೆ ಎಂಬುದನ್ನು ಮನಸಿಗೆ ತಂದುಕೊಳ್ಳುವುದು ಈಗೀಗ ಸುಲಭವೆನಿಸುತ್ತಿದೆ.

ಅಷ್ಟಕ್ಕೂ ಯಾವುದೇ ಪತ್ರಿಕೆಯನ್ನು ಅಥವಾ ಕಲಾ, ಸಾಹಿತ್ಯ ನಿಯತಕಾಲಿಕೆಯನ್ನು ನಡೆಸುವ ಹಿಂದೆ ಆರ್ಥಿಕ ಲಾಭಕ್ಕಿಂತಲೂ ಬದ್ಧತೆ, ಸಾಮಾಜಿಕ ಕಳಕಳಿ, ಹಲವು ದಿಕ್ಕುಗಳ ಸಮನ್ವಯ, ಒಂದಷ್ಟೂ ಕಲಾ ಹಿತಾಸಕ್ತಿಗಳನ್ನಿಟ್ಟುಕೊಂಡು ಮುನ್ನಡೆದರೆ ಅದು ಆರ್ಥಿಕವಾಗಿ ಲಾಭದಾಯಕವೆನಿಸದಿದ್ದರೂ ಮಾನಸಿಕವಾಗಿ ಬೌದ್ಧಿಕವಾಗಿ ಸಂತಸವನ್ನೂ, ತೃಪ್ತಿಯನ್ನೂ ತಂದು ಕೊಡುತ್ತಲೇ ಇರುತ್ತದೆ. ಆ ಮೂಲಕವಾಗಿ ಅಂತಹ ಪ್ರಯತ್ನಗಳು ದಾಖಲಾರ್ಹ ಸ್ವರೂಪವನ್ನು ಪಡೆಯುತ್ತವೆ ಎಂಬ ಮಾತು ಮನಸ್ಸಿನೊಳಗೆ ಗಟ್ಟಿಗೊಳ್ಳುತ್ತಲೇ ಸಾಗಿ ಹೊರಪ್ರಪಂಚದಲ್ಲಿ ಅದಕ್ಕೆ ಬೇಕಾದ ಹಂತಗಳನ್ನು ಸಿದ್ಧಪಡಿಸಿಕೊಳ್ಳುವ ಯೋಜನೆ, ಮಾರ್ಗ, ಕ್ರಮಗಳು ರೂಪ ತಾಳುತ್ತಿವೆ. ಎಲ್ಲದಕ್ಕೂ ಕಾಲ ಮತ್ತು ಅರಿವಿನ ಪಕ್ವತೆಗೆ ಕಾಯಬೇಕು. ಆ ಮೂಲಕ ನಮ್ಮೊಳಗಿನ ಸಂಸ್ಕಾರ, ಸಂಸ್ಕೃತಿ, ಎದೆಗಾರಿಕೆ ಮತ್ತಷ್ಟು ಗಟ್ಟಿಗೊಳ್ಳುತ್ತಾ ಸಾಗಬೇಕು.

ನೂಪುರ ಭ್ರಮರಿ ಪತ್ರಿಕೆ ಸ್ಥಾಪನೆಯಾಗುವ ಹಿನ್ನೆಲೆಗೆ ಇದ್ದಿದ್ದು ಒಂದಷ್ಟು ಬರೆವಣಿಗೆಗಳಿಗೆ, ಗುಣಮಟ್ಟದ ವಿಮರ್ಶೆಗೆ, ನೃತ್ಯ ಸಂಬಂಧೀ ವಿಚಾರಗಳ ಮಂಥನಕ್ಕೆ ಆ ಮೂಲಕವಾಗಿ ನಮ್ಮೆಲ್ಲರ ಬೌದ್ಧಿಕ ಮಾನಸಿಕ ಏಳಿಗೆಗೆ ಸಹಕಾರಿಯಾಗಲಿ ಎಂಬ ಉದ್ದೇಶ. ನಂತರ ಪ್ರತಿಷ್ಠಾನವಾಗಿ ನೋಂದಣಿಗೊಂಡು ಹತ್ತು ಹಲವು ಸಹೃದಯರನ್ನು ಜೊತೆಗಿಟ್ಟುಕೊಂಡು ಕೈ ಕೈ ಬೆಸೆದು ಮುನ್ನಡೆಯುವ ಹಂತಗಳನ್ನು ರೂಪಿಸುವಾಗ ಮೊದಲು ಸ್ಥಾನ ಕಂಡುಕೊಂಡದ್ದು ಸಾನ್ನಿಧ್ಯ ಪ್ರಕಾಶನ ಮತ್ತು ಆ ಮೂಲಕವಾಗಿ ಮೂರು ವಿಭಿನ್ನ ನೆಲೆಯ ಅಪೂರ್ವವೆನಿಸುವ ಕೃತಿಗಳ ಲೋಕಾರ್ಪಣ. ಅಂತೆಯೇ ಇದೀಗ ಸಂಶೋಧನಾ ಜಗತ್ತಿಗೆ ಕಾಲಿಡಲು ಅಪೇಕ್ಷೆ ಪಡುವ, ನಮ್ಮಂತೆಯೇ ವೇದಿಕೆಗಳ ಅಲಭ್ಯತೆಯಲ್ಲಿ ಕೊರಗುವ ಅದೆಷ್ಟೋ ಮಂದಿಗೆ ನಮ್ಮ ಜೊತೆಯಲ್ಲಿ ನಡೆಯುವ, ನಡೆಸುವ ಆಶಯವಾಗಿ ನೃತ್ಯ ಸಂಶೋಧಕರ ಒಕ್ಕೂಟ. ಒಟ್ಟಿನಲ್ಲಿ ಎಂದಿನ ನೃತ್ಯ ನೆಪಗಳು, ಶಾಲೆಗಳೆಂಬ ತುತ್ತಿನ, ಗತ್ತಿನ ಚೀಲಗಳಿಂದ ಒಂದಿಷ್ಟು ವಿಭಿನ್ನವೆನಿಸುವ ವಿನೂತನ ಹಾದಿಯಲ್ಲಿ ತಲಸ್ಪರ್ಶಿಯಾಗಿ ಸಾಗುವ ಹುಮ್ಮಸ್ಸು; ಮಾರ್ಗದರ್ಶನಕ್ಕೆ ಹಿರಿಯ ಸಾರಸ್ವತ ಲೋಕದ ಹಲವು ಸರದಾರರು.

೫ ವರುಷಗಳ ಹಿಂದೆ ಹೀಗೊಂದು ಕನಸು ಅಂತರಂಗದೊಳಗೆ ಸುಪ್ತವಾಗಿತ್ತೇ? ಇದ್ದಿರಬಹುದೇನೋ? ಅಥವಾ ವೈಯಕ್ತಿಕ ತೆವಲು, ಅವಸರದ, ಅಪ್ರಬುದ್ಧ, ಅತೀ ಬೇಗನೆ ಬಿದ್ದು ಹೋಗುವ ಗುರಿಯಿಲ್ಲದ ನಿರ್ಧಾರ, ಕಷ್ಟಕರ ನಷ್ಟದಾಯಕ ನಡೆ ಎಂದು ಚಾಳಿಸಿದವರೂ ಒಮ್ಮೆ ಕತ್ತೆತ್ತಿ ನೋಡಬೇಕು ಎಂಬ ಹಟಕ್ಕೆ ಬಿದ್ದದ್ದಕ್ಕೋ? ಹಾಗಂತ ರಾತ್ರೆ ಬೆಳಗಾಗುವುದರೊಳಗಾಗಿ ಬೆಳೆದದ್ದಲ್ಲ ನೂಪುರ ಭ್ರಮರಿ; ಮತ್ತು ಹಾಗೆ ಏಕಾ‌ಏಕಿ ಬೆಳೆಯುವುದರಲ್ಲಿ ಬೆಳವಣಿಗೆಯ ಅರ್ಥವೂ ಇಲ್ಲ; ಸ್ವಾರಸ್ಯವೂ ಇಲ್ಲ; ದೈತ್ಯರಾಗಬೇಕಾದ್ದೂ ಇಲ್ಲ. ಪ್ರತಿಯೊಂದು ಹೆಜ್ಜೆಯೂ ಪರಿಪೂರ್ಣವೆನಿಸಿದರೆ ಬದುಕುವ ಬಗೆಗೆ ಬಣ್ಣಗಳು ಸಿಗುವುದಿಲ್ಲ; ಪ್ರಯತ್ನಗಳಿಗೆ ಮಾನವತೆಯ ಸಹಜ ಸ್ಪರ್ಶವೇ ಇರುವುದಿಲ್ಲ…..

ಆದ್ದರಿಂದಲೇ ನೂಪುರ ಭ್ರಮರಿಯದ್ದು ಇಂದಿಗೂ ತಪ್ಪು ಹೆಜ್ಜೆಗಳನ್ನಿಡುತ್ತಲೇ ಸರಿಯಾದ ಹಾದಿಯನ್ನು ಹುಡುಕಿಕೊಳ್ಳುವ ಚಿಣ್ಣರ ಮನಸ್ಸು. ವಯಸ್ಸು ಬಲಿಯಬೇಕು; ಪ್ರಬುದ್ಧತೆ, ಬೆಳವಣಿಗೆ ಯಾವಾಗಲೂ ಹಂತಹಂತವಾಗಿಯೇ ಒದಗಬೇಕು. ಆ ಮೂಲಕ ನಮ್ಮ ಅರಿವು, ತಿಳಿವು, ನೆಲೆ, ಹಿನ್ನೆಲೆ, ದಾರಿ, ಯೋಚನೆಗಳನ್ನು ಗಟ್ಟಿಗೊಳಿಸಿಕೊಂಡು ನಮ್ಮನ್ನು ನಮ್ಮ ನಡಿಗೆಯನ್ನು ಸ್ಪಷ್ಟ ಮಾಡಿಕೊಳ್ಳುತ್ತಾ ಸಾಗಬೇಕು. ಆಗಲೇ ಗುರಿಯೆಂಬ ಹಾದಿ ಸಾಕಷ್ಟು ಸವಾಲು, ಸಮಸ್ಯೆಗಳಿದ್ದಾಗ್ಯೂ ಚೇತೋಹಾರಿ ಪಯಣವನ್ನೀಯುತ್ತದೆ. ಬೆಳವಣಿಗೆಯ ಪ್ರತೀ ನಡೆಯ ತುಂಬಾ ಹೆಮ್ಮೆ, ಸಂತಸ ಆವರಿಸಿಕೊಳ್ಳುತ್ತದೆ. ವೈಯಕ್ತಿಕ ಆಸಕ್ತಿಗಳೂ ಕೂಡಾ ಸಮಾಜ ಮುಖಿಯಾಗಿ, ಸಾಂಸ್ಕೃತಿಕವಾಗಿ ಪುಟ್ಟ ಪುಟ್ಟ ಕ್ರಾಂತಿಯ ಹನಿಗಳನ್ನು ಸೇರಿಸುವುದನ್ನು ಅವಲೋಕಿಸಿದಾಗ ನಮ್ಮೊಳಗಿನ ವ್ಯಕ್ತಿತ್ವದ ಸಾಧ್ಯತೆಗಳನ್ನು ನೆನೆದು ರೋಮಾಂಚನವಾಗುತ್ತದೆ.

ಒಟ್ಟಿನಲ್ಲಿ ವರುಷ ವರುಷಕ್ಕೂ ನೂಪುರ ಭ್ರಮರಿಯ ಮಜಲಿನಾಕಾಕೃತಿಯ ಬೆಳವಣಿಗೆಗಳನ್ನು ಗಮನಿಸಿದರೆ ಸಾರ್ಥಕ್ಯದ ಭಾವ ವರುಷದಿಂದ ವರುಷಕ್ಕೆ ಇಮ್ಮಡಿಗೊಳ್ಳುತ್ತಾ ಸಾಗಿದೆ. ಇಂದೀಗ ಹತ್ತು ಹಲವು ಅಭೀಪ್ಸೆಗಳಿಗೆ, ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಕಳಕಳಿಯ ಕಾರ್ಯಗಳಿಗೆ, ಗುಣಮಟ್ಟವನ್ನು ತೂಗಿ ಅವಕಾಶ ಕಲ್ಪಿಸುವ ವೇದಿಕೆಯಾಗಿ ಸಂಸ್ಥೆಯಾಗಿ ಬೆಳೆಯುತ್ತಿರುವುದಕ್ಕೆ ಧನ್ಯತೆಯೊಂದು ಮನೆ ಮಾಡಿದೆ. ಹಿರಿ-ಕಿರಿಯ ಕಲಾವಿದರು, ಸಂಶೋಧಕರು, ಗುರುಗಳು ಜೊತೆಯಾಗಿ ನಿಂತು ಹರಸಿ ಬೆನ್ನು ತಟ್ಟುವಾಗ ಹಮ್ಮಿಕೊಂಡ ಯೋಜನೆಗಳ, ಆಶಯಗಳ ಸ್ಪಷ್ಟತೆ, ನಿಯಮ, ಬದ್ಧತೆಯ ಬಗ್ಗೆ ನೆನೆದು ಮತ್ತಷ್ಟು ಹುಮ್ಮಸ್ಸು ಪುಟಿದೇಳುತ್ತಿದೆ. ಈ ಮಟ್ಟಿಗೆ ನಮ್ಮೊಳಗಿನ ಚೈತ್ಯನ್ಯವನ್ನು ಕಂಡುಕೊಳ್ಳುವ, ವ್ಯಕ್ತಿತ್ವಕ್ಕೆ ವೈಶಾಲ್ಯದ ಸ್ಪರ್ಶವನ್ನೀಯುವ ಸವಾಲುಗಳನ್ನು ಎದುರಿಸಿ ಜೀವನದ ರಸಘಟ್ಟಗಳನ್ನು ತಲುಪುವಲ್ಲಿಗೆ ಪ್ರಯತ್ನಿಸುವಂತಾಗಿದ್ದಕ್ಕೆ ನೂಪುರ ಭ್ರಮರಿಯೆಂಬ ಕರ್ತವ್ಯಕ್ಕೆ ಸದಾ ಋಣಿ.

ಶಿಶುವಾಗಿ ಹುಟ್ಟಿದ ನೂಪುರ ಭ್ರಮರಿ ಈಗ ೫ ವರುಷ ದಾಟಿದ ಆರರ ಕಿಶೋರಿ. ಈವರೆಗಿನ ಬಾಲ್ಯದಲ್ಲೇ ಈಕೆಯನ್ನು ಸಾಕಷ್ಟು ಮಂದಿ ಅಗಲಿದ್ದಾರೆ; ನಗೆಯಾಡಿದವರಿದ್ದಾರೆ; ಸ್ವಗತ ಹೇಳಿದವರಿದ್ದಾರೆ; ಸಮಸ್ಯೆ ತೋಡಿಕೊಂಡವರಿದ್ದಾರೆ; ಕೈಜೋಡಿಸಿದವರಿದ್ದಾರೆ; ಪಥದೊಳಗೆ ಒಂದಾಗಿರುವವರಿದ್ದಾರೆ; ಮರುಗಿದ್ದಾರೆ; ಮರೆತವರಿದ್ದಾರೆ.. ಹೀಗೆ ಪತ್ರಿಕೆಯನ್ನು ಬೆಳೆಸಿ ಉಳಿಸುವ ಹಿನ್ನೆಲೆಯಲ್ಲಿ ಬದುಕಿನ ಬವಣೆಯ, ಭಿನ್ನತೆಯ, ಭರವಸೆಯ, ಬೆಳಕಿನ ಪರಿಚಯ ಆಗಿದೆ ಮತ್ತು ಆಗುತ್ತಲೇ ಇದೆ. ಎಲ್ಲರನ್ನೂ, ಎಲ್ಲವನ್ನೂ ಓಲೈಸಲು, ನಂಬಿಸಲು, ಒಪ್ಪಿಸಲು ಸಾಧ್ಯವಿಲ್ಲ. ಸಮಾಜಕ್ಕೆ ಹಲವು ಮುಖಗಳಿರುವಂತೆ ನಮ್ಮ ಪ್ರಯತ್ನಗಳನ್ನು, ಕಾರ್ಯಕ್ರಮಗಳನ್ನು ನೋಡುವವರ ದೃಷ್ಟಿಯೂ ಬಗೆ ಬಗೆಯದು; ಕಂಡುಕೊಳ್ಳುವ ದಾರಿಯೂ ಹಲ ತೆರನದು.ಲೋಕೋಭಿನ್ನ ರುಚಿಃ.

ಬಾರೆನೆಂಬುದರ ಬಿಡು, ಹರುಷಕ್ಕಿದೆ ದಾರಿ ಎಂಬ ಕವಿವಾಣಿಯ ಮರ್ಮವನ್ನನುಸರಿಸಿ ಮುನ್ನಡೆಯುತ್ತಲಿದ್ದೇವೆ. ನಮ್ಮ ಈ ಕಿರು ಪ್ರಯತ್ನಗಳಿಗೆ ನೀವೂ ಕೈಜೋಡಿಸುವಂತಾಗಲಿ. ಈ ಪುಟ್ಟ ಹೆಜ್ಜೆಗಳು ಸಾವಿರ ಸಾವಿರವಾಗಿ ಬೆಳೆಯಲಿ ಎಂದು ಹರಸುತ್ತಿರಲ್ವಾ?

ಅವಕಾಶಗಳ ಕೊರತೆಯಿದ್ದಾಗಲೇ ಕರೆಯೊಂದು ಮೊಳಗೀತು; ಕಿವಿಗೊಟ್ಟು ಕೇಳೀತು; ಗೊಡವೆಗಳ ಸರಿಸಿ ಕಣಕಣವೂ ಮೈಕೊಡವಿ ಎದ್ದೀತು. ಕರವಿಡಿದು ನಡೆದೀತು. ಕರಿಕೊಳಚೆ ಕಳೆದೀತು, ಕಸವು ರಸವಾದೀತು…

ಪ್ರೀತಿಯಿಂದ

ಸಂಪಾದಕರು

Leave a Reply

*

code