ಅಂಕಣಗಳು

Subscribe


 

ಮರ್ಮಕೋಪನೆ

Posted On: Tuesday, June 9th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 37ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ : ಸ್ವತಃ ಕವಿಯೇ ನಾಯಿಕೆಯ ಗುಣ-ಸಂದರ್ಭವಿಶೇಷಗಳನ್ನು ವಿವರಿಸುವಲ್ಲಿಗೆ ಇದು ಕವಿನಿಬದ್ಧ ಪ್ರೌಢೋಕ್ತಿಯೆಂಬ ಅಭಿವ್ಯಕ್ತಿಗೆ ಸಲ್ಲುವ ಪದ್ಯವಿದು. ಈ ನಾಯಿಕೆಯೋ ಯಾವುದು-ಎಷ್ಟು-ಎಲ್ಲಿ ಪ್ರಮಾಣದಲ್ಲಿತ್ತರೆ ಹೇಗೆ ಒದಗಬಹುದು ಎಂಬ ಲೆಕ್ಕಾಚಾರವನ್ನು ಹೊಂದಿರುವ ಜಾಣೆ. ಮದನಕದನದ ಹದವನ್ನು ಬಲ್ಲ ಚತುರೆ, ಚಾಣಾಕ್ಷೆ. ತನ್ನ ಕರ್ತವ್ಯದಂತಿರುವ ಯಾವುದರಲ್ಲೂ ಕೊರೆ ಇಲ್ಲದಂತೆ ಲೋಕದ ಕಣ್ಣಿಗೆ ಸಿಹಿಯಾಗಿ ಕಾಣುವ ಈಕೆಯ ವರ್ತನೆಯೇ ಗಂಡನಿಗೆ ರತಿಚೇಷ್ಟೆಗೆ ಒದಗದಂತೆ ಇದೆ.  ಗಂಡನು ಬಂದಾಗ ಎದ್ದು ನಿಂತು ಆತನನ್ನು ಸ್ವಾಗತಿಸುವ ಕ್ರಮದಲ್ಲೇ ತನ್ನಿಂದ ಅಂತರವಿರುವಂತೆ ನೋಡಿಕೊಂಡಿದ್ದಾಳೆ.  ತಾಂಬೂಲಸೇವನವೇ ಆಗಿರಲಿ, ಪತಿಗೆ ಚಾಮರ ಬೀಸುವುದೇ ಆಗಿರಲಿ- ಎಲ್ಲದರಲ್ಲೂ ಪ್ರಣಯೋಪಚಾರಕ್ಕೆ ಮಾತ್ರ ಆ ಕ್ಷಣಕ್ಕೆ ಒದಗದಂತೆ ಅಂತರವನ್ನು ಸೃಷ್ಟಿಸಿಕೊಂಡಿದ್ದಾಳೆ. ದಾಸಿಯರನ್ನು ಸೇವೆಗೆ ನಿಯಮಿಸಿ ದೊರಕಿಯೂ ದೊರಕದಂತೆ ಕುತೂಹಲವನ್ನು ಉಳಿಸಿಕೊಂಡಿದ್ದಾಳೆ. ನರ್ತನಗಾಯನಾದಿ ಕಲೆಗಳೆಲ್ಲವನ್ನು ಆಚರಿಸುವ ಮೂಲಕ ಕಾಂತನನ್ನು ರಂಜಿಸಿದರೂ ಏಕಾಂತಕ್ಕೆ ಎಡೆ ನೀಡದಂತೆ ಅಂತರ ಕಾಯ್ದುಕೊಳ್ಳುವ ಜಾಣ್ಮೆ ಇದೆ. ಒಂದರ್ಥದಲ್ಲಿ ಗಂಡನಿಗೆ ತೋರಿಸುವ ಸಿಹಿಯಾದ ಕೋಪವೇ ಇದು. ಈ ಚಾತುರ್ಯ, ಕೋಪದ ಪ್ರಕಟಣೆಯ ರೀತಿ ಖಂಡಿತೆಯ ವೈವಿಧ್ಯವನ್ನೂ ತೋರಿಸುತ್ತದೆ. ಒಟ್ಟಿನಲ್ಲಿ ಯಾವುದೆಲ್ಲಾ ಶೃಂಗಾರೋಪಮ್ಯವಾದವೋ ಅವೆಲ್ಲವನ್ನೂ ತಾನಾಗಿಯೇ ಕೊಟ್ಟೂ ಕೊಡದಂತೆ, ಕಂಡೂ ಕಾಣಿಸದಂತೆ ಇರಿಸಿಕೊಂಬ ಆಕೆಯ ಮರ್ಮವೇ ಅಸಾಧಾರಣವೆನಿಸಿದೆ. ಹಾಗೆಂದೇ ಈಕೆ ಪ್ರಗಲ್ಭೆ, ಧೀರೆ.

ಮರ್ಮಕೋಪನೆ

ರಾಗ : ಹಮೀರಕಲ್ಯಾಣಿ ; ತಾಳ : ರೂಪಕ

ಚದುರೆ ಈಕೆ ಹದವ ಬಲ್ಲಳು

ಮದನಕದನವೆಸಗಬಲ್ಲಳು ||ಪ||

 

ಜನರಿಗೆ ತಾ ನಮ್ಯೆಯೆನಿಸಿ |

ಇನಿಯನಿಗೆ ಅಗಮ್ಯೆಯೆನಿಪ ||ಅ.ಪ||

 

ರಮಣನು ಬರಲೆದ್ದು ನಿಂತು ಕ್ರಮದಿಂ ಸ್ವಾಗತಿಪ ನೆವದಿ |

ಕಮನೀಯೈಕಾಸನ ಸೌಕರ್ಯವೀಯಳು || ೧||

 

ತಾಂಬೂಲಾಹರಣಕತದಿ ಅಂಬಿನವೋಲೊಳಗೆ ಸರಿದು |

ಬಿಂಬಾಧರಮಾಧುರ್ಯವ ಸವಿಯಲೀಯಳು || ೨||

 

ಚಾಮರಸೇವಾಛಲದಿಂ ಸ್ವಾಮಿಗೆ ದೂರದಿ ನಿಂತೇ |

ಪ್ರೇಮಾಲಿಂಗನಸಂಗಕ್ಕೆಡೆಯನೀಯಳು ||೩ ||

 

ದಾಸಿಯರನು ಪರಿಚರ್ಯೆಗೆ ಶಾಸಿಪ ಮಿಷೆಯಿಂ ನಲ್ಲಗೆ

ಹಾಸೋಕ್ತಿಗಳುಪಹಾರವನಿನಿಸುಮೀಯಳು || ೪||

 

ನರ್ತನಗಾಯನಗೋಷ್ಠಿಯ ವರ್ತನಕತದಿಂ ಕಾಂತನ

ಕೂರ್ತವಳಿವಳೇಕಾಂತಕ್ಕೆಡೆಯನೀಯಳು ||೫ ||

*******************

 

Leave a Reply

*

code