ಅಂಕಣಗಳು

Subscribe


 

ಅಭಿನಯ ಭಾರತೀ- ನರ್ಮನಿವೇದಕ

Posted On: Friday, December 11th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 125ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಪ್ರಕೃತ, ನಾಯಿಕೆಯರಿಗೆ ಸಮದಂಡಿಯೋ ಎಂಬಂತೆ ಬರೆಯಲಾದ ನಾಯಕಾವಸ್ಥೆಗಳ ಪದ್ಯಗಳು ಪ್ರಕಟವಾಗುತ್ತಿದೆ. ಅಷ್ಟನಾಯಿಕೆಯರಿಗೆ ಪ್ರತಿಸ್ಪಂದಿಯಾಗುವ ಅಷ್ಟಾವಸ್ಥೆಗಳ ನಾಯಕರ ಶ್ರೇಣಿ ಶ್ರೀಯುತ ಗಣೇಶರದ್ದೇ ಕೊಡುಗೆ. ಆ ಲಕ್ಷಣಗಳ ಜೊತೆಜೊತೆಗೆ ಆ ನಾಯಕರ ಸ್ವಾರಸ್ಯವನ್ನು ಬಣ್ಣಿಸುವಂತೆ ನೃತ್ಯಾನುಕೂಲಿಯಾದ ಅನೇಕ ರಚನೆಗಳನ್ನು ಮಾಡಿದ್ದಾರೆ. 

ಇಂದಿನ ನಾಯಕಾಭಿವ್ಯಕ್ತಿ :  ಮನ್ಮಥನನ್ನು ಸಖನೆಂಬಂತೆ ಗ್ರಹಿಸುತ್ತಾ ತನ್ನ ಇಚ್ಛೆಯಂತೆ ನಾಯಿಕೆ ತನ್ನವಳಾಗಬೇಕೆಂದು ಬೇಡಿಕೊಳ್ಳುವ ಈ ನಾಯಕನು, ಸಂಭೋಗಶೃಂಗಾರಕ್ಕೆ ಹಾತೊರೆಯುತ್ತಿರುವ ವಿಪ್ರಲಂಭ ನಾಯಕ.  ಅಷ್ಟಕ್ಕೂ ರತಿಯ ಈಡೇರಿಕೆಗೆ ಮನ್ಮಥನಲ್ಲದೆ ಇನ್ನಾರು ಸೂಕ್ತ ದೇವನಿದ್ದಾನು? ಹಾಗೆಂದೇ ಸುಮಸಾಯಕನಾದ ಕಾಮಣ್ಣನಿಗೆ ಬಗೆಬಗೆಯಾದ ಪ್ರಾರ್ಥನೆಯನ್ನು ನೆರವೇರಿಸುತ್ತಾ ತನ್ನ ಒಂದೊಂದೇ ಇಚ್ಛಾಪೂರ್ತಿಗಾಗಿ ಬಗೆಬಗೆಯ ಹರಕೆಗಳನ್ನು ಶ್ರೇಣಿಯ ಪ್ರಕಾರ ಹೊತ್ತುಕೊಂಡಿದ್ದಾನೆ ಈ ಮನ್ಮಥಾರಾಧಕ.

ನರ್ಮನಿವೇದಕ

ರಾಗ ಶುದ್ಧಸಾವೇರಿ ; ತಾಳ : ಮಿಶ್ರಛಾಪು

ಸುಮಸಾಯಕಾ ! ನರ್ಮರತಿದಾಯಕಾ ! ಎನ್ನ |

ಸಮನಿಸೊ ಆ ಬಾಲೆಯೊಳು ಕೇಳಿಯ ||ಪ||

 

ಇಂದುವದನೆಯಾಕೆ ಸಂದರ್ಶನವನೀಯ-

ಲೊಂದೇ ಮನದೆ ಬಂದು ಸಂದರ್ಶಿಪೆ |

ಕುಂದರದನೆಯಾಕೆ ಮಂದಹಾಸವ ತೋರ-

ಲಿಂದೇ ವಂದಿಪೆ ನಿನ್ನಂ ನೂರುಬಾರಿ || ೧||

 

ಕಮಲಾಕ್ಷಿ ಕುಡಿನೋಟಬೇಟ ಬೀರಿದರಿನ್ನು

ಕಮಲಮಾಲಿಕೆಯನ್ನು ನಿನಗರ್ಪಿಪೆ |

ವಿಮಲಬಿಂಬಾಧರೆ ಸುಧೆಯ ಸಲ್ಲಿಸಿದೊಡೆ

ಕಮನೀಯಬಿಂಬವ ನಾಂ ಕಲ್ಪಿಪೆ || ೨||

 

ಕಲಕೀರಭಾಷಿಣಿ ಮೆಲುಮಾತು ನುಡಿದರೆ

ಸಲಿಸುವೆ ಶುಕವಾಹನದ ಸೇವೆಯ |

ಲಲಿತಮೃಣಾಲಭುಜೆಯು ಬಳಸಿದೊಡೆನ್ನಂ

ಕಲಧೌತಕವಚವನಾಂ ನಿರ್ಮಿಪೆ ||೩ ||

 

ಕನಕಪಯೋಧರೆಯುರದಿ ಪವ್ವಳಿಸಲು

ಕನಕಕಲಶದೊಳು ಮಜ್ಜನಿಪೆ |

ವನಿತಾವರೇಣ್ಯೆಯು ನಿಧುವನಕೊಪ್ಪಲು

ವಿನುತ ! ನಾ ನಿನ್ನಯ ದಾಸನಪ್ಪೆ ! || ೪||

Leave a Reply

*

code