ಅಂಕಣಗಳು

Subscribe


 

ನಾಯಿಕಾ ನಾಯಕ ಕಂದಪದ್ಯಗಳು ( ಭಾಗ 1 )

Posted On: Friday, November 20th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 110ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಈ ಕಂದಪದ್ಯಗಳು ( ಭಾಗ 1 )ನಾಯಿಕೆಯರ ವಿವಿಧಾವಸ್ಥೆಗಳನ್ನು ಗಣಿಸಿ ಅಭಿನಯಕ್ಕೆ ಚೆನ್ನಾಗಿ ಒದಗುವಂತೆ ಸಂಕ್ಷಿಪ್ತವಾಗಿ, ಸ್ವತಂತ್ರವಾಗಿ ರಚಿತವಾದ ವಿತಾಲಬಂಧದ ಕಂದಪದ್ಯಗಳು. ಅಮರುಶತಕ, ಗಾಥಾಸಪ್ತಶತಿಯ ಕೆಲವು ಪದ್ಯಗಳ ಭಾವಗಳು ಇಲ್ಲಿ ಸೇರಿದ್ದು ಕೆಲವೊಂದು ಅವಧಾನದಲ್ಲಿ  ರಾ.ಗಣೇಶರು ಆಶುವಾಗಿ ಹೇಳಿದ ಪದ್ಯಗಳೂ ಇಲ್ಲಿ ಸೇರಿವೆ.  ಈ ಬಗೆಯ ರಚನೆ ಕನ್ನಡದಲ್ಲಿ ಇದೇ ಮೊದಲೆಂಬಂತೆ ಪ್ರಯುಕ್ತಿಯಾಗಿದೆ. ನೃತ್ಯಪ್ರಸ್ತುತಿಯ ನಡುವೆ ಅಥವಾ ಬಿಡಿಬಿಡಿಯಾಗಿಯೇ ಪುಟ್ಟದಾದ ಸಂಚಾರಿಯೊಂದಿಗೆ ಅಭಿನಯಿಸಲು ಇವು ತಕ್ಕುದಾಗಿರುತ್ತವೆ.  

(ಧೀರಾ ನಾಯಿಕೆ– ಕೇದಾರ)  ತಡೆದಿಲ್ಲಂ ಬರವಂ, ಬಿರು-

   ನುಡಿದಿಲ್ಲಂ ಮೊಗವ ಮುರಿದು ತಿರುಪಿದುದಿಲ್ಲಂ |

   ಮಿಡುಕುತೆ ಬಂದಿನಿಯನನಾ

   ಮಡದಿ ಬರಿಯ ಲೋಗರೆಂಬವೊಲ್ ಕಂಡಳಲಾ ||

 

(ಸಂಭೋಗಶೃಂಗಾರ – ಮಾಂಡ್)  ಪುಸಿನಾಚಿಕೆ ಪುಸಿನಿದ್ದೆಯ-

   ನಸದೃಶಚಾತುರ್ಯದಿಂದೆ ನಟಿಸುತಲಿರ್ದಾ |

   ಪೊಸಮಡದಿಯನಿನಿಯಂ ತ-

   ತ್ಸುಸಮಯಕೊಪ್ಪಿರ್ಪ ಚರ್ಯೆಯಿಂದಂ ಕಳೆವಂ ||

 

(ವಾಸಕಸಜ್ಜೆ– ಕಲ್ಯಾಣಿ) ಎಲ್ಲಿಗೆ ಮುಗುದೆಯೆ ! ಪಯಣಂ

    ಝಲ್ಲೆನುವೀ ರಾತ್ರಿಯಲ್ಲಿ ಮೇಣೊಂಟಿಯಲಾ !

    ತಲ್ಲಣಮೇತಕೊ ರಸಿಕನೆ !

    ಫುಲ್ಲಸುಮಾಸ್ತ್ರಂ ಸಹಾಯನಿರೆ ಬೆಂಬಳಿಯೊಳ್ ||

 

(ಧೀರಾ ನಾಯಿಕೆ – ಕಾಪಿ) ಕಿಡಿಗಣ್, ಬಿರುನುಡಿ, ಮೊಗದೊಳ್

    ಗಡಸುತನಂ, ಸಲ್ವುದೆಲ್ಲ ಸಿದ್ಧತೆ; ಮಿಗಿಲಾ |

    ಮೃಡಧೈರ್ಯಂ ದಂಡಿಸಲಿನ-

    ನೆಡೆಯಂ; ಮೇಣಿರ್ಕೆ ಜಯಮೊ ದೈವಾಧೀನಂ ||

 

(ಕಾತರ ಕಾಮಿನಿ ನಾಯಿಕೆ – ದೇಶ್) ಬಿಗಿಮಾಡಿದೆ ನೀ ಮನಮಂ

    ನಿಗಳಿಸಿದೆಂ ಚಂಚಲೇಂದ್ರಿಯಂಗಳನೆಲ್ಲಂ |

    ವಿಗಡಿಸದೆಂದೆಣಿಸಿರ್ಪೆಂ

    ಜಗುಳದುಳಿವುದೇಂ ಬರಲ್ಕವಂ? ಸಖಿ! ನುಡಿಯೌ ||

 

(ನಿರೀಕ್ಷಣ ನಾಯಿಕೆ  -ಹಿಂದೋಳ) “ಸಿಡಿಯಲಿ ಹೃದಯಂ, ಕಾಮಂ

    ಜಡಿಯಲಿ ಮನಮಂ, ಶರೀರಮಿದು ಮೇಣ್ ಚಲದಿಂ-

    ದುಡಿಯಲಿ; ನೋಡೆಂ ನಾನಾ

    ಜಡನ”ನೆನುತ್ತವನ ದಿಕ್ಕಿನೊಳೆ ದಿಟ್ಟಿಸುವಳ್ ||

 

( ಸಂಭೋಗ ಶೃಂಗಾರ –  ಮೋಹನ)  ಗುರುಜನರಿರ್ಪ ತರುಣದೊಳ-

    ಮುರುಚಾತುರಿಯಿಂದೆ ಪುರ್ಬಿನೊರ್ ತೆನೆಬಳುಕಿಂ |

    ದರಕಂಪಿತಾಧರಪುಟ-

    ಸ್ಫುರಣೆಗಳಿಂದೀರ್ವರೆಂತು ಸಂವದಿಪರಲಾ! ||

 

( ನವೋಢಾ – ಪಹಾಡೀ)  ಆ ಬಾಲಿಕೆ ನೂತನವಧು-

   -ವಾ ಬಲ್ಲಿದನಲ್ಲನೆಸಗಿದಾದಿಮಮಿರ್ದುಂ |

    ಸೋಬತಿಯೆನಿಸಿದ ದೋಷ-

    ಕ್ಕೀ ಬಿಡುಗಂಬದೆಡೆ ಸಾರಿ ಕಂಬನಿಸಿರ್ಪಳ್ ||

 

( ಪ್ರೋಷಿತಪತಿಕಾ -ಅಭೇರಿ) ಕಾಂತಂ ಬರಲಿರುವವಧಿಯ-

    ನೆಂತೋ ಗೆರೆಯೆಳೆದು ಗುರುತುಗೆಯ್ದೀ ಸತಿಯಾ-

    ದ್ಯಂತಂ ಗೆರೆಗಳನೆಣಿಸ-

    ಲ್ಕಂತಶ್ಚೈತನ್ಯಮಿರದೆ ಕಂಪಿಸಿ ನವೆವಳ್ ||

 

( ವಿಷಣ್ಣೆ –  ಹಮೀರ್‌ಕಲ್ಯಾಣಿ) ಅವನವನೇ; ಇರುಳಿರುಳೇ

    ನವವನಮಧುವದುವೆ ; ಬೀಸುವೆಲರೆಲರದುವೇ |

    ತವೆ ತಿಂಗಳದುವೆ; ಇಂತಿ-

    ರ್ಪ ವಿಧಿಯೊಳೊಂದೊಂದು ಬಾರಿಗುಮದೇಂ ಮಿಡುಕೋ ||

 

( ಧೀರಲಲಿತ ನಾಯಕ -ಶುದ್ಧಸಾವೇರಿ)  ತರುಣಿಯರ ಗುರುಕುಚಂಗಳ

    ಪರಿಣತರಮಣೀಯರೂಪದೊಳೆ ನೆಟ್ಟಿರ್ಪಾ |

    ಚಿರತೃಷಿತವೀಕ್ಷಣೆಗಳಂ

    ಭರದಿಂ ಕೀಳಲ್ಕೆ ತಲೆಯನೊಲೆಯಿಪರೊ ಯುವರ್ ? ||

 

(ಕಾಂತಾಸ್ವೀಯ ನಾಯಕ-  ತಿಲಂಗ್)  ಏಕಾಸನದೊಳೆ ಸತಿಯರ್

    ಸಾಕಾಂಕ್ಷಂ ಸಂದಿರಲ್ಕೆ ಕಂಡೀರ್ವರನಾ |

    ಶ್ರೀಕಂ ಕಣ್ಮುಚ್ಚುತೆ ಮೇ-

   -ಣೀಕೆಯ ನಿನ್ನಾಕೆಯನ್ನು ಮುದ್ದಿಸಿ ಗೆಲ್ವಂ ||

 

( ತೃಪ್ತೆ -ಖಮಾಚ್)  ಅರೆಮನದೊಳೆ ನೀನಿತ್ತೀ

    ಸ್ಮರಸುಖಸಂತೋಷಮಿಂತನರ್ಘಮೆನಿಸಿರ-

    ಲ್ಕುರುಸಂಮತಿಯಿಂದೀಯ್ವಾ

    ಪರಿಪೂರ್ಣರತಂಗಳೆಂತೊ? ನಾನರಿಯೆ ಸಖಾ ! ||

    

(ವಿಶ್ಲೇಷಕಿ -ಅಠಾಣ) ರುಚಿಭೇದವರಿತು ಮದ್ರತಿ-

    -ರುಚಿರಶ್ರೀಯೆಂತು ಮಧುರಮರ್ಘಮೆನುತ್ತುಂ |

    ಖಚಿತತೆಯಿಂ ತಿಳಿಯಲ್ಕಿ-

    ನ್ನುಚಿತಜ್ಞಪ್ರಿಯನಿಗಕ್ಕೆ ಪೆರರೊಳ್ ಪ್ರೇಮಂ ||

 

( ಅಧೀರಸ್ವೀಯೆ – ಮುಖಾರಿ) ತುಂಬುಗುಟುಂಬದ ಕೋಟಲೆ-

    ಯಂ ಬಣ್ಣಿಪುದೆಂತು? ಕದ್ದು ಕೂಡುವುದಕ್ಕುಂ |

    ಬೆಂಬಿಡದ ಜನಂ, ಕಜ್ಜಂ

    ಡಂಬರಮಾಯ್ತಲ್ತೆ ಮದುವೆ; ಬೆಂದೆಂ ಕೆಳದೀ ||   

Leave a Reply

*

code