ಅಂಕಣಗಳು

Subscribe


 

ಪಾರ್ವತೀಕಲ್ಯಾಣ

Posted On: Friday, April 24th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 11ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150 ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯ ಗುಚ್ಛವನ್ನು ಒಂದೊಂದಾಗಿ ನೂಪುರ ಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯ ವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ಪ್ರಕೃತ ಕಂತಿನಲ್ಲಿ ‘ಪಾರ್ವತೀಕಲ್ಯಾಣ’ ವೆಂಬ ರಾಗಮಾಲಿಕೆ, ತಾಳಮಾಲಿಕೆಯ ಕನ್ನಡ ನೃತ್ಯರೂಪಕದ ಸಾಹಿತ್ಯವನ್ನು ಪ್ರಕಟಿಸಲಾಗುತ್ತಿದೆ. ನಗರ, ಅರ್ಣವ, ಶೈಲ, ಋತು, ಸೂರ್ಯೋದಯ,ಸೂರ್ಯಾಸ್ತ, ವನವಿಹಾರ, ಜಲಕ್ರೀಡೆ, ವಿವಾಹ, ವಿಯೋಗ, ಪುತ್ರೋತ್ಸವ, ಮಂತ್ರ, ದೂತ, ಪ್ರಯಾಣ, ಯುದ್ಧ, ನಾಯಕಾಭ್ಯುದಯ, ಮೃಗಯಾ, ಕಲಾವಿನೋದ ಮೊದಲಾದ ಹದಿನೆಂಟು ವರ್ಣನೆಗಳೂ ಬರುವ ವಿಶಿಷ್ಟ ಬಗೆಯ ಕೃತಿಯಿದು. ಆ 18 ವರ್ಣನೆಗಳನ್ನು ಸಾಲು-ಸಾಲುಗಳ ಅಂತರದಲ್ಲಿಯೇ  ಗುರುತಿಸಬಹುದಾಗಿದ್ದು; ಅವನ್ನು ಸಾಲುಗಳ ಅಂತ್ಯಕ್ಕೆ ಸೂಚಿಸಲಾಗಿದೆ( ಆದರೆ ಅವು ಮೇಲಿನ ಪಟ್ಟಿಗೆ ಅನುಕ್ರಮವಾದದ್ದಲ್ಲ). ನೃತ್ಯಕ್ಕೆ ಬೇಕಾದ ದೃಶ್ಯ ಸಂಯೋಜನೆಯ ಸಂಚಾರಿಗಳಿಗೆ ಅಪಾರವಾದ ಅವಕಾಶವನ್ನು ನೋಡಿ ಕಲ್ಪಿಸಿಕೊಳ್ಳಬಹುದಾಗಿದೆ. ಅಂತ್ಯಕ್ಕೆ ಸುಮನೋಹರವಾದ ಶಿವ-ಶಿವೆಯರ ಶೃಂಗಾರ ಚಿತ್ರಣ ಮತ್ತು ಸಂವಾದಿಯಾದ ನೃತ್ಯವನ್ನು ಯೋಜಿಸಿಕೊಳ್ಳುವಂತೆ ಸಾಲುಗಳಿವೆ.

 

ಖಂಡಗತಿ

ತಲೆಯೆತ್ತಿ ನಿಂತಿಹುದು ತುಹಿನಾಚಲ ನಲಿವೀ ಜಗಜ್ಜಯದ ವಿಜಯಧ್ವಜ |1

ಇದರ ತಪ್ಪಲಿನಲ್ಲಿ ದಟ್ಟಕಾಡುಗಳಲ್ಲಿ ಮದವೇರ್ದ ಜಂತುಗಳ ಮಧ್ಯದಲ್ಲಿ |2|

 

ಚತುರಶ್ರ

ಬೇಡರ ಪಡೆಗಳ ಬೇಟೆಯ ನಡೆಗಳ |3|

ಬೇಡಿತಿಯರ ಜಲಕೇಳಿಯ ಕೊಳಗಳ |4|

ರುದ್ರರಮಣೀಯಲೀಲೆ ಸದ್ರಸೋನ್ಮಾದಶಾಲೆ ||

 

ಖಂಡಗತಿ

ಗಿರಿರಾಜ ಹಿಮವಂತನಿಗೆ ಜಗನ್ಮಾತೆ

ಕರುಣದಿ ಸುತೆಯಾಗಿ ಜನಿಸಿದಳು ಪೂತೆ

ಆಟದಲಿ ಪಾಠದಲಿ ಬೆಳೆದಳೀ ಮಗಳು

ಪಾಟವದ ಪುಣ್ಯನಿಧಿ ಪರಮಾರ್ಥಪ್ರದಳು |5|

 

ತಾರಕಾಸುರಬಾಧೆ ಸುರರನ್ನು ಕಾಡಿಸೆ

ಪಾರುಗೈದಪವನು ಶಿವಸುತನೆಂದು ತಿಳಿಯೆ |6|

ಹರನಿಗೆ ತಪೋಭಂಗ ಮಾಡಿಸಲಿಕೆಂದು

ಸುರಪತಿಯು ಮನ್ಮಥನ ಬೇಡೆ ಬಂದು |7|

ಸ್ಮರನು ಸಮರಕ್ಕೆ ಸಜ್ಜಾದ- ಘ-|

ಸ್ಮರನ ಕೆರಳಿಸಲು ಮುಂದಾದ |8|

 

ರೂಪಕ/ತ್ರಿಶ್ರ

ರತಿಯ ಕೂಡಿ ಗಿಳಿಯಮೇಲೆ ಸಾಗಿದನಾ ಮದನನು |

ಹಿತಸಹಾಯನಿರೆ ವಸಂತ ಮಲಯಮರುತನೊಲಿದನು ||

ಉಲಿದವು ಕೋಗಿಲೆಗಳು ನಲಿದವು ಗಿರಿನವಿಲ್ಗಳು |

ಲಲಿತಕುಸುಮ –ಚಲಿತಮಧುಪ ಚಾತುರ್ಯಗಳೆಸೆದುವು |9|

 

ಆದಿ/ಏಕತಾಳ

ಉಮೆಯಾಗಮಿಸುವ ಹದವನು ನೋಡಿ

ಸುಮಬಾಣವ ಶಿವನೆಡೆ ಬಿಸುಟ |

 

ತಪೋಭಂಗದಿಂ ಕೆರಳ್ದಾ ಹರಂ

ಕೃಪಾಹೀನ ಸ್ಮರನಂ ಸುಟ್ಟಂ |10|

ಧ್ಯಾನಶೀಲತೆಗೆ ಶೈಲಪುತ್ರಿಯೇ

ಹಾನಿಯೆಂದೊರೆದು ದೂರಾದಂ||

 

ಮಿಶ್ರಗತಿ

ಬೂದಿಯಾಗಿಹ ಬಾಳಗೆಳೆಯನ ಕಂಡು ರತಿ ಕಂಗೆಟ್ಟಳು |

ಖೇದಗೊಂಡಾ ಗೌರಿಯು ತಪಕೆಂದು ನೋಂತಳು ದಿಟ್ಟಳು |11|

 

ತ್ರಿಶ್ರಗತಿ

ಅವಳ ತಪಕೆ ಮುದವನಾಂತು ಒಲಿದುಬಂದ ಶಂಕರ |

ಜವದಿ ಕೈಯ ಹಿಡಿಯಲೆಂದು ನಲಿದನು ಅಭಯಂಕರ ||

 

ಏಕತಾಳ

ಗಿರಿಜಾಶಂಕರವಿವಾಹ ವೈಭವ

ಸುರನರಲೋಕದ ಸಂತೋಷ |12|

 

ರೂಪಕತಾಳ

ಶಿವಶಿವೆಯರು ಮೂಜಗದೊಳು ವಿಹರಿಸೆ ತೆರಳಿದರು

ರವಿಯುದಯಿಸೆ ಕಮಲದ ಮೊಗ ನಗುವರಳಿಸೆ ನಲವಿಂ |13|

 

ತ್ರಿಶ್ರಗತಿ

ಅರುಣಕಾಂತಿ ಆರತಿಯನ್ನೆತ್ತುತವರಿಗೊಲವಿಂ

ಸುಪ್ರಭಾತ ಪಕ್ಷಿಗೀತ ವಿಪ್ರವಾಕ್ಯವಾಗಿರೆ

ಬಿರಿವೂಗಳ ತಿರಿದು ಗೌರಿ ಮುಡಿಗೇರಿಸೆ ಶಂಕರ

ಸುಪ್ರಸನ್ನೆ ಶಿವೆ ಬನದೊಳು ವಿಹರಿಸಿದಳು ಮೋದದಿ |14|

 

ಚತುರಶ್ರ

ಮುಗಿಲೊಳು ತೇಲುತಲಾ ಶಿವಶಿವೆಯರು

ನಗುವ ಸಾಗರವ ನೋಡಿದರು |

ಅಲೆಗಳ ಕುಣಿತಕೆ ದಿಗ್ದೇವತೆಗಳು

ನಲಿದು ತಾಳವನು ಹಾಕಿದರು |15|

 

ಕಡಲಿನೊಡಲಿನಿಂ ಕನ್ನಡಿಯಂದದಿ

ಪಡಿಮೂಡಿದುದಾ ಶಶಿಬಿಂಬ |

ಅದರೊಳಿಣಿಕೆ ಮೊಗ ನೋಡೆನುತಲಿ ಹರ

ಸದರದಿ ಚದುರನ್ನಾಡಿದನು |16|

 

ನಾಚಿದ ಪಾವತಿ ವೀಣೆಯ ನುಡಿಸಲು

ಚಾಚಿರೆ ಕರವನು ಹರ ತಾನು |

ವಿಪಂಚಿಯಂದದಿ ತೋಳನು ತೋರಿ

ಪ್ರಪಂಚಿಸಿದನದೊ ಲಾಸ್ಯವನು |17|

 

ಶಿವ-ಶಿವೆಯರ ಕಮನೀಯನರ್ತನದೆ

ಭುವನತ್ರಯವೇ ನಲಿದಿತ್ತು ;

ಕುಮಾರಸಂಭವವಾಗಿತ್ತು- ಅ-

ಕ್ರಮಿ ತಾರಕವಧೆ ಸಾಗಿತ್ತು |18|

Leave a Reply

*

code