ಅಂಕಣಗಳು

Subscribe


 

ಪುರುಷ ಸಂಶಯೆ

Posted On: Thursday, July 23rd, 2020
1 Star2 Stars3 Stars4 Stars5 Stars (1 votes, average: 5.00 out of 5)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 68ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ : ನಾಯಕನ ಜೊತೆಗಿನ ಅನುಭವಗಳನ್ನೇ ಸಾರ್ವರ್ತೀಕರಣಗೊಳಿಸುತ್ತಾ, ಆ ಮೂಲಕ ನಾಯಕನ ಸಹಿತ ಪುರುಷರ ವರ್ತನೆ, ಸ್ವಭಾವಗಳನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸುವ ನಾಯಿಕೆಯಿವಳು. ಇಲ್ಲವೇ ತನ್ನ ಸ್ಥೂಲವಾದ ಅನುಭವದಲ್ಲಿ ಕಂಡುಬಂದ ಪುರುಷರ ನಡತೆಯನ್ನೇ ಸಂಶಯಿಸುವ ನಾಯಿಕೆಯಂತೆಯೂ ಅಭಿನಯಿಸಬಹುದು. ಇಲ್ಲಿ ಪುರುಷರನ್ನು ಪಳಗಿಸಬಲ್ಲ, ಅಂತಹ ಯಾರ ಕೈಗೂ ದೊರಕದ ನಿರಂಕುಶರನ್ನೂ ಆಳಬಲ್ಲ ಶಕ್ತಿ ನಾರಿಯರದೆಂದು ಹೆಮ್ಮೆಯ ಮಾತನಾಡಿದ್ದಾಳೆ ನಾಯಿಕೆ. ಪ್ರಣಯದಲ್ಲಿ  ನಟನೆಯು ಪುರುಷರದೆಂದು, ತಮ್ಮ ಕೆಲಸವಾದ ಬಳಿಕ  *ವೀಟಿ = ವೀಳೆಯದೆಲೆ; ಅದರ ತೊಟ್ಟನ್ನು ಕಿತ್ತು ಬಿಸುಡುವ ಭಾವದ ಇಂಗಿತವನ್ನು ವ್ಯಕ್ತಪಡಿಸಿದ್ದಾಳೆ. ಪುರುಷರ ವಿಮುಖತೆ, ಸುಮುಖತೆಯ ಭಾವಗಳಲ್ಲಿ ಅವರ ವರ್ತನೆಯನ್ನು ವಿಮರ್ಶಿಸಿದ್ದಾಳೆ. ಜೊತೆಗೆ ಹಿರಿಯರಲ್ಲಿ, ಮಿತ್ರವರ್ಗದವರಲ್ಲಿ, ಸತಿಯರಲ್ಲಿ ಅಷ್ಟೇಕೆ ತಮ್ಮಂಥ ನಲ್ಲೆಯರಲ್ಲಿ ಅವರ ವರ್ತನೆಗಳು ಹೇಗೆ ಭಿನ್ನವಾಗಿರುತ್ತವೆಯೆಂಬುದನ್ನು ಗುರುತಿಸುತ್ತಾ, ಇಂಥವರನ್ನು ನಂಬಿದ ತಮ್ಮಂಥ ನಲ್ಲೆಯರು ಕೆಟ್ಟೆವು ಎಂದು ನಾಯಿಕೆಯು ತನ್ನ ಅನುಭವವನ್ನೇ ಸಾರ್ವರ್ತಿಕವೆಂಬಂತೆ ತೋರಿ ನಾಯಕನನ್ನು ಒಳಗೊಂಡಂತೆ ಪುರುಷಸಮಾಜವನ್ನೇ ಖಂಡಿಸಿದ್ದಾಳೆ. ಮನಸ್ಸಿನಾಳದಲ್ಲಿ ಹುದುಗಿರುವ ವಿಪ್ರಲಬ್ಧೆಯ ಹೆಪ್ಪುಗಟ್ಟಿದ ಲಕ್ಷಣಗಳು ನಾಯಕನಲ್ಲಿ ನೇರವಾಗಿ ತೋರಿಕೊಳ್ಳದೆ ಗೆಳತಿಯರೆಂಬ  ಅನ್ಯಂತರ ಮಾರ್ಗದಿಂದ ಪ್ರಕಟಗೊಂಡ ಖಂಡಿತಾ ನಾಯಿಕಾ ಭಾವವಿದು.

ಪುರುಷ ಸಂಶಯೆ

ರಾಗ: ಸಾರಮತಿ ; ತಾಳ : ತ್ರ್ಯಶ್ರಗತಿ ಆದಿ

ಪುರುಷರನ್ನು ಪಳಗಿಸಿದ ಘನತೆ ಯಾರದೇ ?

ನಿರಂಕುಶರನಾಳಬಲ್ಲ ಬಲವದಾರದೇ? || ||

 

ಕೂಟದಲ್ಲಿ ಕೂರ್ಮೆ ನಟಿಸಿ, ಅಂದು ಸಂದು ಮೈ-

-ಮಾಟವಿರ್ಪ ವನಿತೆಯೇ ಸ್ವಪ್ರಾಣವೆಂಬರು |

ಬೇಟದಲ್ಲಿ ಚಾಟುವಾಕ್ಯಕೋಟಿಯಾಡಿ ಮೇಣ್-

*ವೀಟಿಯ ತೊಟ್ಟಂತೆ ಕಳೆವರನ್ಯಮೋಹದೊಳ್ ||೧ ||

 

ತಮಗೆ ವಿಮುಖತೆಯದು ಬರಲು ನೂರು ನೆವಗಳ-

ನ್ನಮಮ! ಸಮನಿಸುವರು ಚಾರುನಟನಶೀಲರು |

ತಮಗೆ ಸುಮುಖತೆಯದು ಬರಲು ನೂರು ನಡೆಗಳಿಂ

ಕ್ರಮಿಸಿ ಬೇಡಿ ಕಾಡಿ ಕೂಡಿ ಬಳಿಕ ಮರೆವರು ! ||೨ ||

 

ಹಿರಿಯರೊಳ್ ವಿನೀತಿಯಂತೆ ! ಮಿತ್ರವರ್ಗದೊಳ್

ಸರಳರೀತಿಯಂತೆ ; ಸತಿಯರಲ್ಲಿ ಸಂತತಂ

ಸರಸತಾದಾಕ್ಷಿಣ್ಯವಂತೆ ! ಕಡೆಗೆ ನಮ್ಮೊಳೇಂ

ಪರಿಚಿತಿಪ್ರಣಯಗಳಯ್ಯೋ! ನಂಬಿ ಕೆಟ್ಟೆವು ! || ||

 

1 Response to ಪುರುಷ ಸಂಶಯೆ

  1. Harish Athreya

    ಕೂಟದಲ್ಲಿ ಕೂರ್ಮೆ ನಟಿಸಿ – ಸೇರುವಾಗ ಪ್ರೀತಿವಾಕ್ಯಗಳಿಂದ ಪ್ರಣಯಕೇಳಿಗೆ ತೊಡಗಿಸುವರು ಆದರೆ ಅದು ನಟನೆ… ತಮಗೆ ಬೇಕಾದ್ದನ್ನು ಪಡೆದುಕೊಳ್ಳಲು ನಟಿಸುತ್ತಾರೆ. ಇಂತಹ ಮೈಮಾಟವಿರ್ಪ ಹೆಣ್ಣೇ ನಿಜವಾದ ಹೆಣ್ಣೆಂಬ ಹುಸಿನುಡಿಗಳನ್ನಾಡುವರು, ಈ ಬಗೆಯಲ್ಲಿ ಅನೇಕ ಕೋಟಿಕೋಟಿ ವಾಕ್ಯಗಳನ್ನಾಡುವ ಇವರು ಕೆಲಸವಾದ ಬಳಿಕ ವೀಳ್ಯದೆಲೆಯ ತೊಟ್ಟನ್ನು ತೆಗೆದುಬಿಸುಟುವಂತೆ ಬಿಸುಟುತ್ತಾರೆ.
    ಇಲ್ಲಿ ಪುರುಷನ ಸ್ವಭಾವನ್ನು ಹೇಳುವ ನಾಯಿಕೆ ಮನುಷ್ಯರ ಸ್ವಭಾವವನ್ನೂ ಹೇಳುವಂತಿದೆ. ಹಿರಿಯರಲ್ಲಿ ವಿನೀತ ಭಾವ, ಕಪಟನಾಟಕವನ್ನಾಡುವ, ಮಿತ್ರವರ್ಗದಲ್ಲಿ ತಾನು ಮಹಾ ಸುಭಗನೆಂಬ ರೂಪತೋರುವ, ಕೈಹಿಡಿದ ಸತಿಯಲ್ಲಿ ಸತ್ಯಸಂಧರಂತೆ ತೋರುವ ಇವರು ,ಕಡೆಗೆ ನಮ್ಮಂತಹವ ಜೊತೆಗೂ ಸುಳ್ಳಾಡುವರಲ್ಲ…ಆಹ್! ಅದ್ಭುತ ಪದ್ಯ..
    ತಾವು ಬಯಸಿದಾಗ ಅವರಿಗೆ ವಿಮುಖತೆಯಿದ್ದಾಗ ನೂರಾರು ನೆಪಗಳು, ಅದೇ ಅವರಿಗೆ ಸುಮುಖತೆಯಿದ್ದಾಗ ಪ್ರಣಯ ಭಿಕ್ಷೆ… ಅವಕಾಶವಾದಿಗಳು, ಸ್ವಾರ್ಥಿಗಳು ಎನ್ನುವುದನ್ನು ತೋರಿಸಿದೆ…
    ಹರೀಶ್ ಆತ್ರೇಯ

Leave a Reply

*

code