ಅಂಕಣಗಳು

Subscribe


 

ರಾಸರಾಸಿಕ್ಯ (100 ನೇ ಕಂತು)

Posted On: Wednesday, November 4th, 2020
1 Star2 Stars3 Stars4 Stars5 Stars (1 votes, average: 2.00 out of 5)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 100ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಕೃಷ್ಣನ ರಾಸನೃತ್ಯದ ಉಲ್ಲಾಸ ಲೀಲೆಯನ್ನು ಸಾದೃಶ್ಯಪಡಿಸುವ ಸಾಹಿತ್ಯವಿದು. ಯಕ್ಷಗಾನ ಮತ್ತು ನೃತ್ಯಮಾಧ್ಯಮಕ್ಕೆ ಒಗ್ಗುವಂಥ ಸರಳ, ಸಲಿಲ-ಮನೋಹರವಾದ ರಚನೆ.

ರಾಸರಾಸಿಕ್ಯ

ಬೇಹಾಗ್- ಅಷ್ಟತಾಳ

ಬಂತು ಶರತ್ಕಾಲ-ಲೋಲ-ಸುಶೀಲ

ಕಂತುವಿನಂತೆ ವಿಶಾಲ-ಸಲೀಲ

ಬಿಳಿಯ ಮುಗಿಲಿನ ಬಾನು ಬೆಳಗಿರೆ

ತಿಳಿಯ ನೀರಿನ ತೊರೆಯು ತೊಳಗಿರೆ

ಚೆಲುವಿನಿಂ ಮೈದುಂಬೆ ಶಾದ್ವಲ

ನಲಿಯುತಿರೆ ತಾನಿಲ್ಲಿ ಗೋಕುಲ

 

ಅರಳಿದ ಕಮಲಗಳಲ್ಲಿ-ನೋಡಲ್ಲಿ !

ಹೊರಳಿವೆ ತುಂಬಿ ಮೈಚೆಲ್ಲಿ, ಇಲ್ಲಿ !

ಬಳುಕಿ ಬಾಗುವ ಹಂಸಗತಿಗಳು

ತುಳುಕಿ ತೇಲುವ ರಸಿಕಮತಿಗಳು

ಬೆಳೆದಿವೆ -ಬಗೆ ಸೆಳೆದಿವೆ-ತಿರೆ

ತೊಳಗಿರೆ- ಕರೆ ಕರೆದಿವೆ ||೨||

 

ಕಾನಡಾ-ಏಕತಾಳ

ಎಲ್ಲಿಯದೆಲ್ಲಿಯದೇ-ಸಖಿ !

ಮೆಲ್ಲುಲಿ ಮುರಳಿಯದೇ?

ಪಲ್ಲವಿಸುತಲಿದೆ ಪಂಕಜನಾಭನ

ಸಲ್ಲಲಿತ ಶ್ರುತಿಮೋಹನ ಶೋಭನ ! ||೩||

 

ಕಾನಡಾ- ಮಟ್ಟೆತಾಳ

ತಿಳಿಯಿತೀಗ ಮುರಳಿಮಾಯೆ

ಸುಳಿವಳಿನ್ನು ಸಕಲಗೇಯೆ

ಬನ್ನಿ ಬನ್ನಿ ಯಮುನಾತಟಿಯತ್ತಲಿತ್ತಲೇ !

ತನ್ನಿ ತನ್ನಿ ಮಮತಾಚ್ಯುತಮತಿಯನತ್ತಲೇ ! ||೪||

 

ದುರ್ಗಾರಾಗ-ಅಷ್ಟತಾಳ

ಸಜ್ಜಾಗಿರೆಲ್ಲರು ಮಜ್ಜಿಗೆಯೊಳು ತೇಲ್ವ

ಹೃಜ್ಜಾತನವನೀತದಂತೆ !

ಹಾರ -ಕೇಯೂರ -ನೂಪುರದ ಸಿಂಗಾರವ

ಮೀರಿಕೆ ರಸಿಕಾಹಂತೆ ||೫||

 

ಇಂತು ಸಾಗಿದ ಗೋಪಿಯರು ಶ್ರೀ-

ಕಾಂತನೆಡೆ ನಡೆದಿದ್ದರು

ಶಾಂತರಸಸಂಸಿದ್ಧರು-ವಿ-

ಶ್ರಾಂತಮೋಕ್ಷರು ಗೆದ್ದರು ||೬||

 

ಹಂಸಾನಂದಿ-ಏಕತಾಳ

ರಾಸಲೀಲೆ-ಉಲ್ಲಾಸಹೇಲೆ-ಸು

ಪ್ರಾಸ ಮಾಲೆ ಮೇಲೆ

ಹಾಸಲೋಲೆ-ಹೃದ್ಭಾಸಶೀಲೆ-ಕೈ –

ಲಾಸಖೇಲೆ ಸೋಲೆ ||೭||

 

ಲೇಸದಾಯ್ತು ಮಿಗೆ ಮಾಸದಾಯ್ತು ಚಿ-

ದ್ಭಾಸವಾಯ್ತು ಬಗೆಯೆ

ತ್ರಾಸವಿಲ್ಲ ಬಗೆಮೋಸವಿಲ್ಲ ವಿ-

ಶ್ವಾಸವೆಲ್ಲ ನಲಿಯೆ ||೮||

 

 

 

 

 

 

 

 

 

 

 

 

 

 

 

Leave a Reply

*

code