ಅಂಕಣಗಳು

Subscribe


 

ಉಪಾಲಂಭಕ

Posted On: Monday, December 21st, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 129ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಪ್ರಕೃತ, ನಾಯಿಕೆಯರಿಗೆ ಸಮದಂಡಿಯೋ ಎಂಬಂತೆ ಬರೆಯಲಾದ ನಾಯಕಾವಸ್ಥೆಗಳ ಪದ್ಯಗಳು ಪ್ರಕಟವಾಗುತ್ತಿದೆ. ಅಷ್ಟನಾಯಿಕೆಯರಿಗೆ ಪ್ರತಿಸ್ಪಂದಿಯಾಗುವ ಅಷ್ಟಾವಸ್ಥೆಗಳ ನಾಯಕರ ಶ್ರೇಣಿ ಶ್ರೀಯುತ ಗಣೇಶರದ್ದೇ ಕೊಡುಗೆ. ಆ ಲಕ್ಷಣಗಳ ಜೊತೆಜೊತೆಗೆ ಆ ನಾಯಕರ ಸ್ವಾರಸ್ಯವನ್ನು ಬಣ್ಣಿಸುವಂತೆ ನೃತ್ಯಾನುಕೂಲಿಯಾದ ಅನೇಕ ರಚನೆಗಳನ್ನು ಮಾಡಿದ್ದಾರೆ. 

ಇಂದಿನ ನಾಯಕಾಭಿವ್ಯಕ್ತಿ : ವಿಟ ಪ್ರಭೇಧಕ್ಕೆ ಸೇರುವ ಈ  ನಾಯಕನು ನಾಯಿಕೆಯ ಉಪೇಕ್ಷೆಯನ್ನು ಸೈರಿಸದೆ, ಆಕೆಯ ಬಳಿ ತನ್ನ ಜಂಭ ಕೊಚ್ಚಿಕೊಂಡು, ಪ್ರಶ್ನಿಸಿದ್ದಾನೆ. ಆತನ ಕಣ್ಣ ಸನ್ನೆಗೆ, ಆಗಮನಕ್ಕೇ ಹಲವು ಸ್ತ್ರೀಯರು ಮೋಹಿತರಾಗಿರುವಾಗ, ತನ್ನನ್ನು ರವಷ್ಟೂ ಪರಿಗಣಿಸದ ನಾಯಿಕೆಯ ಬಿಂಕವನ್ನು ತನ್ನ ಹೆಚ್ಚುಗಾರಿಕೆಯ ಹಿನ್ನೆಲೆಯಲ್ಲಿ ದೂಷಿಸಿದ್ದಾನೆ. ತನಗೆಂದೇ  ಕೂರ್ಮೆಯಕಪ್ಪ ಅಂದರೆ ಪ್ರೇಮೋಪಹಾರ ನೀಡಲು ಹಲವು ಕನ್ಯೆಯರು ಸಿದ್ಧರಿರುವಾಗ, ಏನೋ ಬಾಲ್ಯದ ಗೆಳತಿಯೆಂದು ನಾಯಿಕೆಯ ಬಳಿ ಬಂದರೆ ಆಕೆಯ ತಿರಸ್ಕಾರ ಅವನಿಗೆ ಕಸಿವಿಸಿಯುಂಟುಮಾಡಿದೆ.  ಸಾಮಾನ್ಯ/ಸಾಧಾರಣ ನಾಯಿಕೆಯರಿಗೆ ಸಮದಂಡಿಯೆನಿಸುವ ನಾಯಕನಿವನು.

ಉಪಾಲಂಭಕ

ರಾಗ : ಬಿಲಹರಿ ; ತಾಳ : ರೂಪಕ/ತ್ರ್ಯಶ್ರತ್ರಿಪುಟ

ನನ್ನ ಕಣ್ಣಸನ್ನೆಯಲ್ಲಿ ಕುಣಿವ ಕಾಂತೆಯರೋ ಕೋಟಿ ಕೋಟಿ !

ಇನ್ನು ನಿನ್ನ ಬಿಂಕವೇಕೆ? ತಣ್ಣಗೆ ದೂರಾಗಿ ಸಾಗೆ ಚಲ್ಲಗಾರ್ತಿ ||ಪ||

 

ಏರಿಯತ್ತ ಸಾಗಿ ಬಂದರೊಮ್ಮೆ ಸಾಕು ನಾ-

ನೇರಿ ಬರುವರಲ್ತೆ ನೂರು ನೂರು ನೀರೆಯರ್ |

ಮೇರೆ ಮೀರಿ ನೀರನುಳಿದು ಸೀರೆಯಂಕೆಯಂ

ದೂರವಿರಿಸಿ ಚಾರುಚರ್ಯಾಸ್ಮೇರಮುಖಿಯರು ||೧ ||

 

ಸಂಜೆ ತೋಟದತ್ತಲೊಮ್ಮೆ ಸುಳಿದೆನಾದರೆ-

ನ್ನಂ ಜಯಿಪ್ಪ ಜಾಣ್ಮೆಯಿಂದ ಲಕ್ಷಲಲನೆಯರ್ |

ಮುಂಜೆರಗಿನ ಪರದೆ ಸರಿಸಿ ನೋಡಿ ಬೇಡುತ

ಕಂಜಕರಗಳಲ್ಲಿ ಕೂರ್ಮೆಗಪ್ಪವೀವರು ||೨ || 

 

(ತ್ರ್ಯಶ್ರತ್ರಿಪುಟ) ಏನೋ ಬಾಲ್ಯದ ಕೆಳದಿಯೆಂದು

ಸ್ವಾನುಭೂತಿಯ ಬಲ್ಲೆಯೆಂದು |

ಮಾನಿತೆಯ ಸಂಮಾನವೀಯಲಿ-

ಕಾನುಕರೆಯೆ ತಿರಸ್ಕಾರವೆ ? || ೩||

Leave a Reply

*

code