ಅಂಕಣಗಳು

Subscribe


 

ವೈಯರ್ಥ್ಯಕಥನೆ

Posted On: Wednesday, August 12th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 79ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ :  ತಾನು ನಾಯಕನ ಪ್ರೀತಿ ಸಂಪಾದನೆಗಾಗಿ ಗೈದ ಕಾರ್ಯದ ಕಥೆಗಳನ್ನು ಸಖಿಯಲ್ಲಿ ಹೇಳುತ್ತಾ, ಇಷ್ಟೆಲ್ಲಾ ಮಾಡಿದ ಬಳಿಕವೂ ಆತನ ಒಲವು ದಕ್ಕಲಿಲ್ಲವೆನ್ನುವುದನ್ನು ಅರಿತು ಕಣ್ಣೀರಾಗಿದ್ದಾಳೆ ಈ ವಿಪ್ರಲಬ್ಧಾ ನಾಯಿಕೆ. ಅಂತೆಯೇ ತನ್ನ ಯಾವ ನಡವಳಿಕೆಯಲ್ಲಿ ಊನವಿತ್ತೆಂದು ಪ್ರಶ್ನಿಸಿ ದುಃಖಿಸಿದ್ದಾಳೆ. ಅಂತೆಯೇ ನಲ್ಲನ ನಲವಿಗಾಗಿ ನಾಯಿಕೆಯು ತಳಮಳಿಸಿ ಮಾಡಿದ ಬಗೆಬಗೆಯಾದ ನಿರೀಕ್ಷೆ, ವ್ರತ ಉಪಚಾರದ ರೀತಿಗಳನ್ನು ಹೇಳಿಕೊಂಡಿದ್ದಾಳೆ.

ವೈಯರ್ಥ್ಯಕಥನೆ

ರಾಗ: ವಸಂತ ಭೈರವಿ ; ತಾಳ: ಮಿಶ್ರ ಛಾಪು

ಏನೇನನಾಂ ಗೆಯ್ದೆನೇ – ಸಖೀಮಣಿ !

ಆ ನೀರನಂ ನೋನುತುಂ    ||ಪ||

 

ಮಾನ-ಮರ್ಯಾದೆಯಂ ಮತಿಯಸಂಮತಿಗಳಂ

ಊನಗೆಯ್ದೇನಾದೆನೇ ! ಬಾಲಾಮಣಿ !    ||ಅ.ಪ||

 

ಒಲಿದಾನೇನೆನಗೆಂದು ಬಲಿದು ಕೇಳಿದ ಕಾಣ್ಕೆ-

ಯುಲಿಗಳ್ಗೆ ಕೊನೆಯಲ್ಲಿ ಕಲ್ಯಾಣಿ !

ಗಿಳಿಯ ಶಕುನಕೆಂದು ಕೊರವಂಜಿ ಕಣಿಗೆಂದು

ತಳಮಳಿಸಿದ ಪರಿಗೆಣೆಯೆಲ್ಲಿ? ||೧ ||

 

ಚಳಿಗಾಳಿ – ಮಳೆಯಲ್ಲಿ ಕವಿವ ಕತ್ತಲೆಯಲಿ

ಮುಳುಗೆದ್ದ ಕೊಳಗಳ್ಗೆ ಮಿತಿಯೆಲ್ಲಿ ?

ಬೆಳಗಿಸಿ ಕಾಪಿಟ್ಟ ದೀಪಮಾಲೆಗಳ ಸಂ-

ಕಲೆಗಳ್ಗೆ ಲೆಕ್ಕ-ಪಕ್ಕಗಳೆಲ್ಲಿ?    ||೨ ||

 

ಮಂದಿರ-ಮಠಗಳ ಮುಂದೆ ಸಾಲ್ನಿಂದುದು

ನೊಂದು ನವೆದು ವ್ರತವೆಸಗಿದ್ದು |

ಬೆಂದು ಬಿಸಿಲಿನಲ್ಲಿ ಮರಗಳ ಸುತ್ತಿದ್ದು

ಒಂದೂ ಫಲಿಸದಾಯಿತೇ?    ||೩ ||

Leave a Reply

*

code