ಅಂಕಣಗಳು

Subscribe


 

ಅಭಿನಯಭಾರತೀ- ಮೇಘದೂತ

Posted On: Sunday, May 3rd, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 13ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150 ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ಪ್ರಕೃತ ಕಂತಿನಲ್ಲಿ  ಕನ್ನಡದಲ್ಲಿ ರಚಿಸಲಾದ ’ಮೇಘದೂತ/ಮೇಘಸಂದೇಶ’ ಎಂಬ ನೃತ್ಯರೂಪಕದ ಸಾಹಿತ್ಯವನ್ನು ಪ್ರಕಟಿಸುತ್ತಿದ್ದೇವೆ. ಕಾಳಿದಾಸನ ಮೇಘದೂತದ ಪರಿಚಯ ಯಾರಿಗಿಲ್ಲ? ಸಂಸ್ಕೃತ ಋತುಸಂಬಂಧಿ ಕಾವ್ಯಗಳ ಪೈಕಿ ಮೇಘದೂತವನ್ನು ಸರಿಗಟ್ಟುವರಾರು? ೧೧೧ ಪಾದಗಳಲ್ಲಿ ಬರೆಯಲಾದ ಖಂಡಕಾವ್ಯವಿದು. ಸಂಸ್ಕೃತ ಕಾವ್ಯಗಳನ್ನು ಮೂಲರೂಪದಲ್ಲೇ ಓದುವ ಅನುಕೂಲವಿದ್ದವರಿಗೆ ಇಂತಹ ರಸಾರ್ದ್ರ ಕಾವ್ಯಗಳ ಆಸ್ವಾದನೆ ಎಂಬುದು ಸ್ವರ್ಗಸಮಾನ. ಅದರಲ್ಲೂ ಭಾರತಜಾತವಾದ ಋತುವಿವರಣೆಗಳು, ಪ್ರಾದೇಶಿಕ ವೈವಿಧ್ಯ, ರಮಣೀಯತೆಯು ಧ್ವನಿಮಾರ್ಗದಿಂದ ಸುಕೋಮಲ ರಸರಾಜ ಶೃಂಗಾರವನ್ನು ಪೋಷಿಸಿದ ಬಗೆ ಅಸಾಧಾರಣ. ಹೀಗೆ ದೃಶ್ಯಾವಹವಾದ ಕಾವ್ಯವನ್ನು ಭಾರತೀಯ ನೃತ್ಯ-ನಾಟಕ ಪರಂಪರೆಯೂ ಬಹಳ ಆದರಿಸಿ ಬೆಳೆದಿದೆ. ಕನ್ನಡಸಹಿತ ಅನೇಕ ಭಾಷೆಗಳಿಗೆ ಭಾಷಾನುವಾದ ಕೂಡ ಮಾಡಲಾಗಿದೆ. ಕನ್ನಡದಲ್ಲಿ ದ.ರಾ.ಬೇಂದ್ರೆ, ಎಸ್.ವಿ.ಪರಮೇಶ್ವರಭಟ್ಟ, ಅ.ರಾ.ಮಿತ್ರರ ಸಹಿತ ಮತ್ತೂ ಎಂಟು ವಿದ್ವಾಂಸ ಕವಿವರ್ಯರು ವಿವಿಧ ಛಂದಸ್ಸುಗಳಲ್ಲಿ ಸೊಗಸಾಗಿ ಪದ್ಯಾನುವಾದಗಳನ್ನು ಮಾಡಿದ್ದರೆ; ಹೊಸ್ತೋಟ ಮಂಜುನಾಥ ಭಾಗವತರೂ, ವಿದ್ವಾನ್ ಮೇಲುಕೋಟೆ ಉಮಾಕಾಂತಭಟ್ಟರು ಯಕ್ಷಗಾನ ಮಾಧ್ಯಮಕ್ಕೂ ಅಳವಡಿಸಿದ್ದಾರೆ. ಇನ್ನು ಕಾಳಿದಾಸನ ಆರಾಧಕರೂ, ಆತನ ಕಾವ್ಯಗಳಲ್ಲಿ ಕರತಲಾಮಲಕರೂ ಆದ ಶತಾವಧಾನಿ ಡಾ.ರಾ.ಗಣೇಶರೇ ಮೇಘದೂತದ ಅನುಕರಣವಾಗಿ  ಬರೆದ ’ಧೂಮಧೂತ’ ಎಂಬ ವಿಡಂಬನಕಾವ್ಯವು ಪ್ರಖ್ಯಾತವಾಗಿದೆ. ಆದರೆ ನೃತ್ಯಮಾಧ್ಯಮಕ್ಕೆ ಒಪ್ಪುವಂತೆ ನೃತ್ಯ ಕಲಾವಿದರಿಗೆ ಆಪ್ತವಾಗಿ, ಸುಲಭ ಸಂವಹನಶೀಲವಾಗಿ ಮೇಘದೂತದ ಪುನರ್ ನಿರ್ಮಾಣ ಕನ್ನಡದಲ್ಲಿ ಆದದ್ದೆಂದು ಇಲ್ಲ. ಅದನ್ನು ಸ್ವತಃ ಸಂಗೀತ-ನೃತ್ಯಗಳಲ್ಲಿ ಅಪಾರ ವಿದ್ವತ್ತು ಇರುವ ರಾ.ಗಣೇಶರಲ್ಲದೆ ಬೇರಾರು ಮೂಲದ ಸೌಂದರ್ಯವನ್ನು ದರ್ಶಿಸುವಂತೆ ಕನ್ನಡ ಭಾಷೆಯಲ್ಲಿ ಕಟ್ಟಿಕೊಡಲು ಸಾಧ್ಯ?

ಈ ಕನ್ನಡ ಮೇಘದೂತದ ನೃತ್ಯಸಂಯೋಜನೆಗೆ ಲಯವಿನ್ಯಾಸವನ್ನೂ ಸ್ವತಃ ಕವಿ ಗಣೇಶರೇ ನೀಡಿದ್ದಾರೆ. ರಾಗಸಂಯೋಜನೆಯಲ್ಲಿ ಮಾರ್ದವತೆಗೋಸ್ಕರ ಅಲ್ಲಲ್ಲಿ ವಿದುಷಿ ಕಾಂಚನ ರೋಹಿಣಿ ಸುಬ್ಬರತ್ನಂ ಅವರು ಸೂಚಿಸಿದ ನಿರ್ದೇಶನಗಳ ಸಹಿತ ರಾಗಸಂಯೋಜನೆ ಸೂಚನೆಯನ್ನೂ ಲಗತ್ತಿಸಲಾಗಿದೆ. ಯುಗಳ ನೃತ್ಯ ಸಂಯೋಜನೆಗೆ ಒದಗುವಂತೆ ಇರುವ ಈ ಸಾಹಿತ್ಯಕ್ಕೆ ಮೊದಲು ಮನೋಹರವಾದ ನರ್ತನ ಮಾಡಿದವರು ಕೀರ್ತಿಶೇಷ ಸುಂದರೀ ಸಂತಾನಂ ಅವರ ಶಿಷ್ಯೆಯರು ( ಡಾ. ನಯನ ಮತ್ತು ಡಾ. ದೀಕ್ಷಾ). ಮೊದಲು ಗಾಯನ ಮಾಡಿದವರು ವಿದುಷಿ ಕಾಂಚನಾ ಶ್ರೀರಂಜಿನಿ. ಭಾರತೀಯ ವಿದ್ಯಾಭವನ, ಬೆಂಗಳೂರಿನಲ್ಲಿ ಸಂಪನ್ನವಾಗಿದ್ದ ಈ ನೃತ್ಯರೂಪಕವು ವಿಶೇಷವಾಗಿ ರಾ. ಗಣೇಶರ ರಚಯಿತ ಮೇಘಗಳ ಕುರಿತ ಪದ್ಯಗಳನ್ನೇ ಆಧರಿಸಿತ್ತು. ಎರಡನೇಯ ಭಾಗದಲ್ಲಿ ಡಾ. ಶೋಭಾ ಶೈಕುಮಾರ್ ಅವರು ರಾ.ಗಣೇಶರಿಂದ ರಚಿತ ಮಳೆ-ಮುಗಿಲುಗಳ ಕುರಿತ ಮುಕ್ತಕಗಳನ್ನು ವಾಕ್ಯಾರ್ಥಾಭಿನಯಕ್ಕೆ ಅಳವಡಿಸಿ ನರ್ತಿಸಿದ್ದರು.

ಇದೀಗ ಮೇಘದೂತವೆಂಬ ಈ ಸುಂದರ ಕಾವ್ಯ ಸಹೃದಯಾಸ್ವಾದಕ್ಕೆ ಮುಕ್ತವಾಗುತ್ತಿದೆ. ಕಲಾವಿದರು ಆನಂದಿಸುವುದರೊಂದಿಗೆ ರಮ್ಯಾದ್ಭುತ ರಂಗಪ್ರದರ್ಶನವನ್ನು ನೀಡುವಲ್ಲಿ ಉಪಯೋಗಿಸಿಕೊಳ್ಳಬಹುದು. 

 

 

ಚತುರಶ್ರ

ಧನಪತಿ ಕುಬೇರ ಅಲಕಾವತಿವಿಭು

ಅವನ ಸೇವಕನೆ ಯಕ್ಷ

ವನದ ಪಾಲಕನು ದಕ್ಷ ||

ಯಕ್ಷನ ನಲ್ಲೆಯು ಫುಲ್ಲಲೋಚನೆಯು

ಯಕ್ಷಿ ನಿರ್ಮಲಪ್ರೇಮಧುನಿ

ಅಕ್ಷೀಣಸುಧಾಮಧುರವನಿ||

 

ಮಿಶ್ರ

ಒಮ್ಮೆ ಯಕ್ಷನು ತನ್ನ ಕಾಂತೆಯ

ಸಮ್ಮುದದೊಳಿರೆ ಲೀಲೆಯಿಂ |

ಹೊಮ್ಮಿಸುತ್ತಲಿ ಹೂಮಳೆಯನೇ

ಚಿಮ್ಮಿಸುತ್ತಲಿ ಚೆಲ್ವನು ||

 

ಖಂಡ

ಐರಾವತವು ಬಂದು ಆ ಕುಬೇರನ ವನವ

ಚೂರುಚೂರಾಗಿಸಿತು ಮತ್ತವಾಗಿ |

ಘೋರವಾರ್ತೆಯನಿದನು ಕೇಳಿ ಧನಸತಿ ಮುನಿದು

ಭೀರುಯಕ್ಷನಿಗೆ ಶಾಪವನಿತ್ತನು ||

 

ವಿತಾಳ

ಎಲೆ! ಯಕ್ಷ! ನಿನ್ನ ನಲ್ಲೆಗೆ ಸೋತು ನೀನಿಂದು

ಕೆಲಸವನ್ನೇ ಮರೆತು ಮಲೆತೆಯಲ್ತೇ

ಇನ್ನೊಂದು ವರ್ಷವೀ ಲೋಕದಿಂ ದೂರಾಗಿ

ಬನ್ನಬಡು ಭಾರತದಿ ವಿರಹಿಯಾಗಿ ||

 

ಕಲ್ಯಾಣವಸಂತ- ರೂಪಕ

ತನ್ನಯದೈವೀಶಕ್ತಿಯ ಕಳೆದುಕೊಂಡು ಯಕ್ಷ

ಇನ್ನಿರಲಾಗದೆ ಬಂದನು ರಾಮಗಿರಿಗೆ ಮರುಗಿ

ಪ್ರಿಯಪತ್ನಿಯ ವಿರಹದಲ್ಲಿ ಬೆಂದುಹೋದನು

ಜಯವಿಲ್ಲದೆ ಜಸವಿಲ್ಲದೆ ನೊಂದು ನವೆದನು ||

 

ಚತುರಶ್ರ

ಆ ಲತಾಂಗಿಯನು ಲತೆಯಲಿ ಕಾಣದೆ

ಆ ಸುಮಹಸಿತೆಯ ಹೋಲಿಸಲಾಗದೆ

ಆ ಶಶಿಮುಖಿಯನು ದರ್ಶಿಸಲಾಗದೆ

ಆ ಹರಿಣಾಕ್ಷಿಯ ವೀಕ್ಷಿಸಲಾಗದೆ ||

ಆ ಹಂಸಗತಿಯ ಕಾಣಿಸಲಾಗದೆ

ಆ ಶುಕವಾಣಿಯನಾಲಿಸಲಾಗದೆ

ಯಕ್ಷನು ಬಲು ನೊಂದ;

ದಕ್ಷತೆಯೆಲ್ಲಿಂದ ??

 

ಖಂಡ

ಮಳೆಗಾಲ ಬರಲಿಹುದು ! ಬಿರುಗಾಳಿ ಬರಲಿಹುದು !

ಗುಡುಗು-ಸಿಡಿಲಿನ ಸದ್ದು ಕೇಳಲಿಹುದು !

ವಿರಹಿಣಿಯು ತಾನೆಂತು ತಾಳ್ವಳೋ ಇದನೆಂದು

ಮರುಮರುಗಿ ಯಕ್ಷ ತುಯ್ದಾಡುತಿರಲು ||

 

ತ್ರಿಶ್ರ

ಆಟವಾಡುವಾನೆಮರಿಯ ಹಾಗೆ ಮೂಡಿತಾಗಲೇ

ಬೆಟ್ಟದಂಚಿನಲ್ಲಿ ಮೋಡವೊಂದು ಮಿಂಚುನಗೆಯಲೇ |

ಒಡನೆ ಯಕ್ಷ ನಲಿದನಿದೇ ತನ್ನ ದೂತನೆನ್ನುತ

ಬಡವಿ ಯಕ್ಷಿಯೆಡೆಗೆ ಕಳುಹಿ ತಿಳುಹೆ ಕುಶಲವೆನ್ನುತ ||

 

ಚತುರಶ್ರ

ವನಸುಮಗಳ ಪುಷ್ಪಾಂಜಲಿಯೀಯುತ

ವಿನಮಿಸಿ ಯಕ್ಷನು ಬೇಡಿದನು

ಘನಜೀಮೂತವ ದೌತ್ಯಕ್ಕೆನುತಲಿ

ವಿನಯಿ; ಹಾದಿಯನು ಹಾಡಿದನು ||

 

ನೇಗಿಲಯೋಗಿಗೆ ನೀನೇ ಗತಿಯು

ಬೇಗೆಯ ಭೂಮಿಗೆ ನೀನೇ ಬದುಕು |

ತರುಲತೆಗಳಿಗೆ ಸದಾ ನೀ ಉಸುರು

ತೊರೆಝರಿಗಳಿಗೆ ನೀ ಸೊಗಸು ||

 

ಎಲೆ! ಎಲೆ ! ಮುಗಿಲೇ! ಭರವಸೆಹಗಲೇ !

ಎನ್ನ ಸಂದೇಶ ಕೊಂಡೊಯ್ಯೋ !

ಬನ್ನಬಡುವ ಮಡದಿಯನುಳಿಸೋ !

ಖಿನ್ನಯಾಕೆಯನು ಸಂತಯ್ಸೋ !

 

ಖಂಡ- ಬಾಗೇಶ್ರೀ

ಶಿವನ ತಾಂಡವಲೀಲೆಯಲ್ಲಿ ಬೆಳಗುತ್ತಿರುವ

ನವಕುಬೇರನ ಪುರಿಗೆ ನೀ ಹೋಗಬೇಕು |

ದೇವಗಂಗೆಯು ಹರಿವ, ಪಾವನತೆಯೇ ಪೊರೆವ

ಭಾವಭೂಮಿಗೆ ನೀನು ಸಾಗಬೇಕು ||

 

ಗೌರೀಮನೋಹರಿ/ಆಂದೋಳಿಕಾ/ಸಿಂಧುಭೈರವಿ- ಚತುರಶ್ರ (ತಕಿಟ ಧೀಂತಕಿಟ- ೮ಮಾತ್ರೆಯ ತಾಳ)

ಹೋಗಿ ಬರುವೆನೆಂದಪ್ಪಿಕೊಳ್ಳೊ ಈ ರಾಮಗಿರಿಯ ಗೆಳೆಯ !

ಮುಂದೆ ಸಿಗಲಿಹುದು ಆಮ್ರಕೂಟ ; ಮತ್ತೊಂದು ನಲ್ಮೆ ಇಳೆಯಾ !

ಕಾಡುಗಿಚ್ಚಿನಲಿ ನೊಂದ ಆ ಗಿರಿಗೆ ನೀನು ಗೈದ ಉಪಕಾರ

ಮರೆಯಲಳವೆ? ನಿನ್ನನ್ನು ಹೊರುವನೋ ತಲೆಯ ಮೇಲೆ ಅವನು !

 

ಹರಿಕಾಂಭೋಜಿ

ಹಾದಿಯಲ್ಲಿ ನಿನ್ನನ್ನು ಕಂಡು ಮಲೆನವಿಲುಗುಂಪು ನಲವಿಂ

ಕುಣಿದು ಮಣಿದು ನಿನಗೀವುದಲ್ತೆ ನಲ್ಬರವು; ಗೆಳೆಯ ಮುಗಿಲೇ !

ಕೃಷಿಕವನಿತೆಯರು ನಿನ್ನ ಕಂಡು ಆನಂದಭಾಷ್ಪ ಸುರಿಸಿ

ಕೈಯಮುಗಿವರಯ್ ! ಸರಳಹೃದಯರಯ್ ! ಹರಸಿ ಹೋಗು ಹದುಳ !

 

ಖರಹರಪ್ರಿಯ-ಮಿಶ್ರ

ನದಿಯೆ ನಾಯಿಕೆ, ನೀನು ನಾಯಕ; ಕಾಲವೇ ಸುಮಸಾಯಕ

ಸೊರಗದೀ ತೊರೆ ವಿರಹಪೀಡಿತೆ; ನಿನ್ನ ಕರುಣೆಗೆ ಪಾತ್ರಳು |

ತುಂಬುತಿರೆನೀನವಳಿಗಂದವನಂತೆ ಆನಂದವನು ಕೇಳ್ !

ಅಲೆಯ ಹುಬ್ಬನು ಹಾರಿಸುವಳಯ್ ! ಖಂಡಿತೆಯ ತಾನೆನಿಪಳಯ್ !

 

ಖಂಡ

ಬಾನಲ್ಲಿ ನೀ ಸಾಗುತಿರಲು ; ಸಿದ್ಧ-ಗಂಧರ್ವ-ಚಾರಣರು ಬರಲು

ಹಾಡುತ್ತ ಕುಣಿಯುತ್ತ,ವಾದ್ಯಗಳ ನುಡಿಸುತ್ತ|

ಓಡುತ್ತ,ನಲಿಯುತ್ತ ವಸ್ತ್ರಗಳ ಮೆರೆಸುತ್ತ |

ನಿನಗಾಗಿಯೇ ಹಾದಿ ಬಿಡುವರ್ ; ನಿನ್ನ ಮಳೆಗಂಜಿ ಮೇಲಕ್ಕೆ ನೆಗೆವರ್ ||

 

ಶಂಕರಾಭರಣ- ತ್ರಿಶ್ರ ( ಯುರೋಪಿಯನ್ ಶೈಲಿಯ ಹಾಡಿಕೆ)

ನಿನ್ನ ಮಿಂಚುನಲ್ಲೆಯೊಡನೆ ನೀನು ಕೇಳಿಯಾಡುತ

ನಿನ್ನ ಬಿಲ್ಲಬಣ್ಣದೊಡನೆ ಚಿತ್ರವನ್ನು ರಚಿಸುತ|

ಬಾನಿಗೇರ್ವ ಬೆಳ್ಳಕ್ಕಿಗಳೊಡನೆ ಮೈತ್ರಿ ಮಾಡುತ

ಉತ್ತರಕ್ಕೆ, ಎತ್ತರಕ್ಕೆ ಸಾಗು ! ಸಾಗು ! ಬೇಗನೆ !!

 

ವಿತಾಳ

ಮಾನಸ ಸರೋವರಕೆ ವಲಸೆ ಹೋಗುತ್ತಲಿಹ

ರಾಜಹಂಸಗಳಲ್ತೆ;ನಿನ್ನ ಹಾದಿಗೆ ಜೊತೆ

ತಾವರೆಯ ದಂಟುಗಳ ಬುತ್ತಿ ಗಂಟನು ಕಟ್ಟಿ

ಹಾರುವೀ ಹಂಸಗಳೆ ನಿನಗಾಗಿ ನುಡಿಯೆ ಕಥೆ ||

 

ಚತುರಶ್ರ

ಬಾಯಾರಿರೆ ನೀ ಹೀರು ನದಿಗಳನು

ಹಗುರಾಗಿರೆ ನೀ ಮಿಗೆ ಹಾರು |

ಭಾರವೆನಿಸೆ ಮೈ; ಮಲೆಗಳ ಮೇಗಡೆ

ನಿಂತು ಕೂತು ಮೆಲ್ಲನೆ ಸಾರು ||

 

ಚತುರಶ್ರ (ತಕಿಟ ತಕತಕಿಟ ಶೈಲಿ-೮ ಅಕ್ಷರಕಾಲ)

ಬಳಸುದಾರಿ ಎನಿಸಿದ್ದರೂ ಸರಿಯೆ; ಉಜ್ಜಯಿನಿಯ ಸೇರು!

ದೇವಲೋಕವನೆ ಕಸಿದು ತಂದರೋ ಎಂಬ ಹಾಗಿಹುದದು|

ಅಲ್ಲಿ ಸಂಜೆ ಹೊತ್ತಲ್ಲಿ ದೇಗುಲದೆ ಮಹಾಕಾಲನೆದುರು

ದೇವದಾಸಿಯರು ಮಾಳ್ಪ ನರ್ತನವ ನೋಡಿ ನಲಿಯಲಿಹುದು ||

 

ಮಧ್ಯಮಾವತಿ/ಶ್ರೀರಾಗ- ಖಂಡ

ಆರತಿಯ ಹೊತ್ತಿಗಾ ದೇವದೇವನ ಮುಂದೆ

ನೀ ಮೊಳಗುತಿರೆ ನಗಾರಿಗಳ ಹಾಗೆ |

ಉತ್ಸಾಹವುಕ್ಕೇರೆ ಕುಣಿದಾನು ದೇವನೂ

ಸಂಜೆಯಲ್ಲವೆ; ಮಹಾನಟನವಲಾ !!

 

ಯದುಕುಲಕಾಂಭೋಜಿ-ಮಿಶ್ರ

ಇರುಳು ಕವಿದಿರೆ; ನಲ್ಲರಲ್ಲಿಗೆ ಸಾಗಲಭಿಸಾರಿಕೆಯರು

ಗುಡುಗಿ ಸುರಿಯದೆ ನೀನು ಸುಮ್ಮನೆ ಮಿಂಚಿ ಹಾದಿಯ ತೋರಿಸೋ |

ಸೌಧಶಿಖರದ ಸೂರಿನಲ್ಲಿಯೆ ಪಾರಿವಗಳೆಡೆ ನಿದ್ರಿಸಿ

ನಸುಕಿನಲ್ಲಿಯೆ ತೆರಳು ಬೇಗನೆ ; ಮಿತ್ರಕಾರ್ಯವ ಮರೆಯದೆ ||

 

ರೂಪಕ

ನಿನ್ನಯ ಹಾದಿಯೊಳಿರುವರು ದೇವತೆಗಳು ಹರಸುತ

ಸ್ಕಂದನು ನಿಂತಿರುವನಲ್ತೆ ದೇವಗಿರಿಯ ಮೇಗಡೆ|

ಯಮುನಾನದಿಯಂಚಿನೊಳೇ ರಾಸಲೀಲೆಯಾಡುತ

ಮುರಳೀಧರನಿರುವನದೋ; ವಂದಿಸಿ ಮುಂದೇಗು ನೀ ||

 

ಚತುರಶ್ರ

ಅದೋ! ಅಲ್ಲಿ ಕಂಡಿದೆ ಕೈಲಾಸ!

ಹಿಮಾಲಯಗಿರಿಶ್ರೇಣಿಯೊಳು |

ಉತ್ತುಂಗಭಂಗೆ ರಮಣೀಯಭಂಗಿ

ದೇವಗಂಗೆ ಹರಿಯುವಳಲ್ಲಿ |

ಬೆಳ್ಳಿಯಬೆಟ್ಟದೊಳಲ್ಲಿಯೆ ಸಲ್ಲುವ

ಶಿವನು ಗೌರಿಯೊಡನಾಟದಲಿ |

ಅಲ್ಲೇಬುಡದಲ್ಲಿಹುದಲಕಾವತಿ | ಅದೇ ನಮ್ಮ ಊರು ! ಅದನ್ನೀಗ ಸಾರು !

ಆರು ಋತುಗಳೂ ನೀಡುವ ಹೂಗಳ | ಮುಡಿವರೆಮ್ಮ ಹೆಣ್ಣುಗಳು ! ತಡೆವರೆಮ್ಮ ಕಣ್ಣುಗಳೂ ||

 

ವಿತಾಳ

ಅಲ್ಲೇ ಸಮೀಪದಲ್ಲಿಹುದೆನ್ನ ಪುಟ್ಟiನೆ

ಹೂದೋಟಗಳ ನಡುವೆ ಹೂವಿನಂತೆ

ಅಲ್ಲಿಯೇ ಸಲ್ಲುವಳು ನನ್ನೆದೆಯನಾಳುವಳು

ನನ್ನಂತೆಯೇ ಸುಯ್ಯುತಿಹಳು ||

 

ಕಾಮವರ್ಧಿನಿ-ಮಿಶ್ರ

ಹೊತ್ತುಹೋಗದೆ ವಿರಹ ತೀರದೆ ವೀಣೆ ನುಡಿಸುತಲಿರುವಳೋ ?

ನನ್ನ ಹೆಸರಿನ ಹಾಡು ಹಾಡುತ ಸಂಗತಿಯನೇ ಮರೆವಳೋ ?

ತಾನೆ ಸಾಕಿದ ನವಿಲ ಕುಣಿಸುತ ಕೈಯ ತಾಳಕೆ ನಲಿವಳೋ?

ಅವಧಿದಿವಸವನೆಣಿಸುತಲಿ ಮೇಣ್ ಚಿತ್ರವನ್ನೇ ಬರೆವಳೋ ?

 

ಅಭೇರಿ- ಚತುರಶ್ರ (ತಕಿಟ ತಕತಕಿಟ ಶೈಲಿ-೮ ಅಕ್ಷರಕಾಲ)

ನೀಣು ನೋಡಬೇಕಯ್ಯ ! ಮೋಡ ! ನಿನ್ನತ್ತಿಗೆಯನು ಬೇಗ

ಚಂದ್ರಬಿಂಬವೋ, ಕಮಲ-ಕುಮುದವೋ? ಬಳ್ಳಿ-ಹೂಗಳೇನೋ ?

ಹಂಸಗತಿಗಳೋ? ಭ್ರಮರಚಿಕುರವೋ? ಹೇಗೆ ಹೇಳಬಲ್ಲೆ?

ಇಷ್ಟು ಮಾತ್ರ ದಿಟ, ಆಕೆ ಬ್ರಹ್ಮ ಮಾಡಿರುವ ಭವ್ಯಸೃಷ್ಟಿ

 

ನೀಲಾಂಬರಿ-ಖಂಡ

ಅವಳು ಮಲಗಿರೆ ನೀನು ಧಿಗ್ಗನೆಚ್ಚರಿಸದಿರು;

ನಿದ್ರೆ ನೀಗುವವರೆಗೆ ಕಾದುನಿಲ್ಲು |

ಎದ್ದೊಡನೆಯೇ ಮೆಲ್ಲಮೆಲ್ಲನೆಯ ನುಡಿಗಳಲಿ

ನನ್ನ ಸಂದೇಶವನು ನಲಿದು ಹಾಡು ||

 

ಮೇಘವು ಯಕ್ಷನ ಮಡದಿಯನ್ನುದ್ದೇಶಿಸಿ- ಕೀರವಾಣಿ-ಕಾಂಭೋಜಿ ಮಿಶ್ರ

ಎಲೆ! ಸುಮಂಗಳೇ ! ನಿನ್ನ ಕಾಂತನು ಸೌಖ್ಯವಾಗಿಹನಲ್ಲಿ ಕೇಳ್ !

ನಿನ್ನದೇ ಅನುದಿನ ಧ್ಯಾನ, ನಿನ್ನದೇ ಅನುಕ್ಷಣ ಧ್ಯಾನ!

ನಿನ್ನ ಚಿಂತೆಯೆ ಅವನ ಚಿಂತೆಯು ನಿನ್ನ ನೆನಪೇ ಜೀವನ !

ಕನಸು-ನನಸೆಂಬಲ್ಲ ಹೊತ್ತೂ ಅವಗೆ ನೀನೇ ಪಾವನ ||

ಕಾನಡಾ- ಚತುರಶ್ರ

ಸೀತಾರಾಮರಿಗೂ ಸಹ ಬಂದಿತು

ವಿರಹವೇದನೆಯ ಸಂದರ್ಭ |

ಹನೂಮಂತನವರೊಳು ಸಂದೇಶವ

ನೀಡಿದಂತೆ ನಾನಿದೊ ಬಂದೆ ||

 

ರುಕ್ಮಿಣಿ-ಕೃಷ್ಣರೊಲವಿನ ಕಥೆಗೂ

ವಿರಹವ್ಯಥೆ ತಾನಿತ್ತಲ್ಲ !

ಆಕೆಯ ಪತ್ರವನೊಯ್ದ ವಿಪ್ರನೊಲು

ಬಂದೆ ನಾನೆನುತ ನೀನರಿಯೌ ||

 

ಹಾವಿನ ಹಾಸಿಗೆಯಿಂ ಹರಿಯೇಳುವ

ಹೊತ್ತಿಗೆ ನಿನ್ನಾತನ ಮಿಲನ |

ಶಾಪ ನೀಗಿ, ಸಂತಾಪ ಹೋಗಿ

ಬಂದೇ ಬರುವನು ಅನುರಾಗಿ ||

 

ಸಿಂಧುಭೈರವಿ-ವಿತಾಳ

ಇನ್ನಿಹುದು ನಾಲ್ಕು ತಿಂಗಳು ವಿರಹದುರಿಗಾಲ;

ಆ ಬಳಿಕ ನಿಮಗಿಲ್ಲ ಯಾವುದೇ ದುರ್ಗಾಲ |

ಕಣ್ಮುಚ್ಚಿ, ತುಟಿಗಚ್ಚಿ ಸೈರಿಸೌ ಸೌಭಾಗ್ಯೆ |

ಆವರೆಗೆ, ಗೌರಿಯನು ನೀನೆನೆಯುತ||

 

ತ್ರಿಶ್ರ

ಇಂತು ಕಾಂತೆಗಿತ್ತು ಭರವಸೆಗಳ ಮಾತು ಬೇಗನೆ

ನನ್ನ ಬಳಿಗೆ ಮತ್ತೆ ಬಂದು ಹೇಳಬೇಕು ಹದುಳವ |

ಎಲೇ! ಮುಗಿಲೆ! ಬಾಳ ನವಿಲೆ ! ಎನ್ನ ಗೆಳೆಯ ! ನೇಹಿಗ !

ನಿನಗೆ ಬಾರದಿರಲಿ ವಿರಹವೆಂದೂ ಮಿಂಚಿನೊಂದಿಗೆ !!

 

Leave a Reply

*

code