ಅಂಕಣಗಳು

Subscribe


 

‘ಅಗರಿಶೈಲಿ’ಯ ಅಗ್ರಪುರುಷ : ಅಗರಿ ರಘುರಾಮ ಭಾಗವತರು

Posted On: Sunday, February 10th, 2019
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

(ಫೆಬ್ರವರಿ ೦೭, ೧೯೩೫ – ಜನವರಿ ೨೭, ೨೦೧೯)

ಗರಿ ಶೈಲಿ ಎಂದರೇನೇ ತೆಂಕುತಿಟ್ಟು ಯಕ್ಷಗಾನದಲ್ಲಿ ಒಂದು ‘ಬ್ರಾಂಡ್’. ಹೀಗಿದ್ದೂ ತಮ್ಮ ಪರಂಪರೆಯ ಹಾಡುಗಳನ್ನು ಧ್ವನಿಮುದ್ರಿಸಿ ಇಡುವುದರಲ್ಲಿ ಮೋಹ ಇಲ್ಲದಿದ್ದ ಕಲಾವಿದ ಅಗರಿ ರಘುರಾಮ ಭಾಗವತರು. ‘ಯಾರಿಗೆ ಬೇಕು ಪರಂಪರೆ? ಪರಂಪರೆ ಎಂದರೆ ಏನು ? ನಮ್ಮ ತಂದೆಯ ಹಿಂದೆ ಇದು ಯಾರಲ್ಲಿ ಇತ್ತು? ಯಕ್ಷಗಾನ ಪರಂಪರೆ, ಅಲ್ಲಿನ ದೈನೇಸಿ ಬದುಕು ನಮಗಷ್ಟೇ ಸಾಕು.’ ಎಂಬ ತರ್ಕಬದ್ಧ ಪ್ರತಿಪಾದನೆ ಮಾಡುತ್ತಿದ್ದರಂತೆ. ಆದಾಗ್ಯೂ ಜೀವಿತದ ಕೊನೆಯ ದಿನಗಳ ವರೆಗೂ ಅಧ್ಯಯನದ ಅಪೇಕ್ಷೆಯಿಂದ ಬಂದವರಿಗೆ ಉಪಯೋಗವಾಗಲೆಂದು ಪೂರ್ಣ ಸಹಕಾರ ಕೊಟ್ಟು ಕಂಠಸ್ಥವಾಗಿದ್ದ ಬಹುತೇಕ ಹಾಡುಗಳಿಗೆ ದನಿಯಾಗಿ ಧ್ವನಿಮುದ್ರಿಸಲು ಅನುಕೂಲ ಮಾಡಿಕೊಟ್ಟರು.

ಆದಾಗ್ಯೂ ಯಕ್ಷಗಾನ ಕ್ಷೇತ್ರಕ್ಕೆ ಅವರ ಪಾದಾರ್ಪಣೆಗೆ ಮುಖ್ಯಕಾರಣವೇ ಕಲೆಯ ಮೇಲಿನ ಆಸಕ್ತಿ ಮತ್ತು ಪ್ರೀತಿ. ಅದರಲ್ಲೂ ಕಲಾವಿದನಾಗಿ ಜೀವನ ಮಾಡುವುದಕ್ಕೆ, ಮೇಳನಿರ್ವಹಣೆಗೆ ಬಹಳ ಕಷ್ಟವಿದ್ದ, ಈಗಿನಂತೆ ಸೌಲಭ್ಯಗಳಿಲ್ಲದ, ಹಲವು ಭಾಗವತರ ಸಹಕಾರಗಳಿಲ್ಲದೆ ಒಬ್ಬನೇ ಭಾಗವತ ರಾತ್ರೆಯಿಂದ ಬೆಳಗಿನವರೆಗೆ ಕೂತು ಹಾಡುವ ಕಾಲದಲ್ಲಿ !

ಸರಕಾರಿ ನೌಕರರಾದರೂ ಮೇಳದ ಪೂರ್ಣಕಾಲಿಕ ತಿರುಗಾಟದ ಭಾಗವತರಾದುದು ಒಂದು ಆಕಸ್ಮಿಕ ಘಟನೆಯಿಂದ. ೧೯೬೫-೬೬ರಲ್ಲಿ ರಘುರಾಮರ ತಂದೆ ಅಗರಿ ಶ್ರೀನಿವಾಸ ಭಾಗವತರು ಕಸ್ತೂರಿ ಪೈ ಸಹೋದರರ ಸುರತ್ಕಲ್ ಮೇಳದ ಪ್ರಧಾನ ಭಾಗವತರಾಗಿದ್ದ ಸಮಯ. ಮೇಳಗಳ ಪೈಪೋಟಿಯಿಂದಾಗಿ ಸುರತ್ಕಲ್ ಮೇಳಕ್ಕೂ ತುಳು ಪ್ರಸಂಗಗಳಿಗೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಯಿತು. ಆದರೆ ಪ್ರಧಾನ ಭಾಗವತರಾದ ಅಗರಿಯವರು ತಾವು ತುಳು ಪ್ರಸಂಗಗಳಿಗೆ ಭಾಗವತಿಕೆ ಮಾಡಲಾರೆ ಎಂಬ ನಿಯಮಕ್ಕೆ ಅಂಟಿಕೊಂಡಿದ್ದವರು. ಮೇಳದ ನಿರ್ವಾಹಕರಿಗೆ ಪೀಕಲಾಟಕ್ಕಿಟ್ಟುಕೊಂಡಿತು. ಶ್ರೀನಿವಾಸ ಭಾಗವತರು ಹಾಡದಿದ್ದರೆ ಕಲೆಕ್ಷನ್‌ಗೆ ತೊಂದರೆ, ಹಾಗೆಂದು ತುಳು ಪ್ರಸಂಗ ಆಡಿಸದಿದ್ದರೆ ಆಟ ಕಳೆದುಕೊಳ್ಳುವ ಬಿಕ್ಕಟ್ಟು. ಕೊನೆಗೆ ಶ್ರೀನಿವಾಸ ಭಾಗವತರ ಸಲಹೆ- ಪೌರಾಣಿಕ ಪ್ರಸಂಗಗಳಿಗೆ ತಾನೇ ಭಾಗವತಿಕೆ ಮಾಡುವುದು, ತುಳು ಪ್ರಸಂಗಗಳು ಇದ್ದ ದಿನ ತನ್ನ ಮಗನಾದ ಅಗರಿ ರಘುರಾಮ ಭಾಗವತರನ್ನು ಕಳಿಸಿಕೊಡುವುದು.

ರಘುರಾಮ ಭಾಗವತರು ತಮ್ಮ ತಂದೆಯವರಂತೆಯೇ ಆಶು ಕವಿಗಳು. ಹೆಚ್ಚಿನ ಎಲ್ಲಾ ಪ್ರಸಂಗಗಳ ಪದ್ಯವೂ ಕಂಠಪಾಟ. ಹೀಗೆ ಆರು ತಿಂಗಳ ಕಾಲ ರಘುರಾಮರು ವೃತ್ತಿಗೆ ರಜೆ ಹಾಕಿ ಸುರತ್ಕಲ್ ಮೇಳದ ತಿರುಗಾಟ ನಡೆಸಿದರು. ಮುಂದಿನ ವರ್ಷ ತಂದೆಯವರು ಕೂಡ್ಲು ಮೇಳ ಸೇರಿದಾಗ, ರಘುರಾಮ ಭಾಗವತರು ಯಜಮಾನ ಪೈಗಳ ಒತ್ತಾಯಕ್ಕೆ ಮಣಿದು, ಭಾಗವತಿಕೆಯ ಹುದ್ದೆಗಾಗಿ ಎಸ್ಸೆಸೆಲ್ಸಿ ನಂತರ ಎಫ್‌ಎ ತನಕ ಓದಿ ಶಿಕ್ಷಣ ಇಲಾಖೆಯ ಸರಕಾರಿ ನೌಕರಿಗೆ ರಾಜೀನಾಮೆ ಕೊಡಬೇಕಲ್ಲ ಎಂಬ ತಾಕಲಾಟ ! ಹಾಗೆಂದು ‘ಯಕ್ಷಗಾನ ತನ್ನನ್ನು ಪೂರ್ಣವಾಗಿ ಸಾಕೀತು’ ಎಂಬ ನಂಬಿಕೆ ಬಾರದೆ ರಘುರಾಮರಾಯರು ೬ ತಿಂಗಳು ಆರೋಗ್ಯ ಕಾರಣಕ್ಕೆ ರಜೆ ಹಾಕಿ ಒಂದು ತಿರುಗಾಟಕ್ಕೆ ಒಪ್ಪಿಕೊಂಡು ಮೇಳಕ್ಕೆ ಬಂದರು. ನಂತರ ಮೇಳದವರು ಭಾಗವತರನ್ನು ಬಿಡಲೊಪ್ಪದ ಕಾರಣ ನೌಕರಿಗೆ ತಿಲಾಂಜಲಿ ಕೊಟ್ಟರು.

ಹಾಗೆಂದು ಅಪ್ಪ ಎದುರಿಗೆ ಕುಳ್ಳಿರಿಸಿ ಮಗನಿಗೆ ಹಾಡು ಹೇಳಿಕೊಟ್ಟದ್ದಿಲ್ಲ. ಅಪ್ಪ ಹಾಡುವುದನ್ನು ಕೇಳಿಯೇ ಕಲಿತವರು ರಘುರಾಮರು. ರಂಗದಲ್ಲೇ ತಿದ್ದುತ್ತಿದ್ದದ್ದೂ ಇತ್ತು. ಉದಾಹರಣೆಗೆ : ಭೀಮನು ‘ಕೌರವಾದ್ಯರ ಕೊಲ್ಲಲಾರೆ’ ಎಂದು ಹೇಳುವ ವಿಷಾದ ಪದ್ಯ- ಕೃಷ್ಣ ಸಂಧಾನ ಪ್ರಸಂಗದಲ್ಲಿ. ತನಗೆ ಜೀವನದಲ್ಲಿ ಕಷ್ಟ ಕಾರ್ಪಣ್ಯಕ್ಕೆ ಬೆಂದು ಸಾಕಾಗಿದೆ. ಮತ್ತೆ ಯುದ್ಧ ವಿಚಾರವೆತ್ತದಿರು. ವನವಾಸದಲಿ ಒಂದು ದಿನವೂ ಹೊಟ್ಟೆ ತುಂಬ ಉಣದೆ ಇದ್ದಿದ್ದಾಯಿತು. ಎಲ್ಲರೂ ಒಪ್ಪಿದರೆ, ಸಂಧಾನವಾದರೆ ಏನು ಸಮಸ್ಯೆ ಎಂದು ನುಡಿಯುವ ಭೀಮ, ಅದಕ್ಕೆ ಸಿಟ್ಟಿಗೇಳುವ ದ್ರೌಪದಿಯ ಎದುರು ವಿಷಾದದಲ್ಲಿ ತನ್ನ ಭಾವನೆಯನ್ನು ನುಡಿಯುವ ಸನ್ನಿವೇಶ ಅದು. ಹಾಡಿನ ಭಾವವೇ ಹಾಗೆಂದು ಯುವಕ ಅಗರಿ ರಘುರಾಮ ಭಾಗವತರು ವಿಷಾದದ ಛಾಯೆಯಲ್ಲಿ ಹಾಡುತ್ತಿದ್ದರು. ಮಗನ ಹಾಡುವ ಶೈಲಿಗೆ ಅಲ್ಲಿಯೇ ಸ್ವತಃ ಭೀಮನ ಪಾತ್ರಧಾರಿಯಾಗಿದ್ದ ತಂದೆ ಅಗರಿ ಶ್ರೀನಿವಾಸ ಭಾಗವತರಿಗೇ ಸಿಟ್ಟು ಬಂದಿತು.

“ಎಂಥದಯ್ಯ ನಿನ್ನ ಚಪ್ಪೆ ಹಾಡು. ಭೀಮನ ವಿಷಾದದಲ್ಲೂ ಒಂದಿಷ್ಟು ವೀರ ರಸ ಇರಬೇಕು. ಸಾಮಾನ್ಯರ ಅಳು ಬೇರೆ. ಭೀಮನ ವಿಷಾದವೇ ಬೇರೆ’ ಎಂದು ಎಲ್ಲರ ಎದುರೇ ಮಗನಿಗೆ ಅಲ್ಲೇ ತಿದ್ದಿ ಬೈದರು. ಪಾತ್ರದ ಭಾವನೆಯನ್ನೂ ಭಾಗವತ ಮೊದಲು ಪದ್ಯದಲ್ಲಿ ನಿರೂಪಿಸಿದರೇನೇ ಅದನ್ನು ಪಾತ್ರಧಾರಿ ಸಮರ್ಥವಾಗಿ ಮುಂದುವರಿಸಲಾದೀತು ಎಂಬುದನ್ನು ಕಲಿತದ್ದು ಅಲ್ಲಿಂದಲೇ ಎಂದಿದ್ದರು ರಘುರಾಮರು.

ಮೇಳ ತಿರುಗಾಟದ ಸಂದರ್ಭ ಭಾಗವತಿಕೆಯ ಜತೆಗೆ ಅವರಿಗೆ ಮೇಳದ ನಿವಾರ್ಹಕನ ಜವಾಬ್ದಾರಿಯೂ ಪ್ರಿಯವಾಗಿತ್ತು. ಆಟ ಆರಂಭ ಆಗುವ ಮೊದಲು ಗಲ್ಲಾಪೆಟ್ಟಿಗೆಯಲ್ಲಿ ಕುಳಿತು ಟಿಕಿಟ್ ಕೊಡುವುದು ಅವರಿಗೆ ಇಷ್ಟದ ಕೆಲಸ. ಇದೇ ಅವರಿಗೆ ಯಕ್ಷಜೀವನದಿಂದ ನಿವೃತ್ತರಾಗಿ ಬಜಪೆ ಸಮೀಪ ಎಡಪದವಿನಲ್ಲಿ ಒಂದು ಅಂಗಡಿ ಹಾಕಿಕೊಂಡು ಅದರ ಗಲ್ಲಾಪೆಟ್ಟಿಗೆಯಲ್ಲಿ ಕುಳಿತು ವ್ಯಾಪಾರ ಮಾಡುವಾಗ ನೆರವಾದದ್ದು ! ಒಟ್ಟಿನಲ್ಲಿ ಕಲಾವಿದನಾದವನು ಜೀವನಜಾತ್ರೆಯನ್ನು ತೂಗಿಸಿಕೊಂಡು ಹೋಗಲು ಕಲೆಯ ಬಗ್ಗೆ, ತನ್ನ ಪರಂಪರೆಯ ಬಗ್ಗೆ ವಾಸ್ತವ ಸತ್ಯಗಳನ್ನು ಒಪ್ಪಿಕೊಳ್ಳುವುದು ಮಾತ್ರವಲ್ಲ, ಎಲ್ಲಾ ಕೆಲಸಗಳ ಬಗ್ಗೆಯೂ ಅಭಿಮಾನವಿಟ್ಟುಕೊಂಡಿರಬೇಕು, ಅದಕ್ಕೆ ತಕ್ಕಂತೆ ಬದುಕು ಸರಳವಾಗಿಯೇ ಇರಬೇ. ಅದನು ಬದುಕಿ ತೋರಿದ ಅಗ್ರಮಾನ್ಯ ಭಾಗವತ ಅಗರಿ !

Leave a Reply

*

code