ಅಂಕಣಗಳು

Subscribe


 

ರೂಪಕ, ರಸಪ್ರಕರಣಗಳ ಅವಲೋಕ : ದಶರೂಪಕ

Posted On: Monday, February 15th, 2010
1 Star2 Stars3 Stars4 Stars5 Stars (No Ratings Yet)
Loading...

Author: 'ಮನೂ' ಬನ

ಸಂಸ್ಕೃತದ ನಾಟ್ಯಶಾಸ್ತ್ರಗ್ರಂಥಗಳಲ್ಲಿ ರೂಪಕ, ರಸಪ್ರಕರಣಗಳ ಬಗ್ಗೆ ವಿಷದವಾಗಿ ನಿರೂಪಣೆ ನೀಡಿರುವ ಶ್ರೇಷ್ಟವೆನಿಸುವ ಗ್ರಂಥಗಳ ಪೈಕಿ ದಶರೂಪಕವೂ ಒಂದು. ೧೦-೧೧ ಶತಮಾನದಲ್ಲಿ ಜೀವಿಸಿದ್ದೆನ್ನಲಾದ ಧನಂಜಯನೆಂಬ ಕವಿಯಿಂದ ರಚಿತಗೊಂಡ ಈ ಗ್ರಂಥ ಧನಿಕ ಎಂಬ ಧನಂಜಯನ ಸಹೋದರನೆಂದು ಕರೆಯಲಾದವನಿಂದ ಬರೆಯಲ್ಪಟ್ಟ ದಶರೂಪಾವಲೋಕವ್ಯಾಖ್ಯೆಯನ್ನು ಹೊಂದಿದೆ.

ಮುಂಜರಾಜ ಎಂಬ ರಾಜನ ಆಸ್ಥಾನದಲ್ಲಿದ್ದ ಧನಂಜಯನು ವೈದಿಕ ಸಂಪ್ರದಾಯವನ್ನಿಟ್ಟ್ಟುಕೊಂಡಿದ್ದ ವಿಷ್ಣು ಎಂಬವನ ಪುತ್ರನೆಂದು ಹೇಳಿಕೊಂಡಿದ್ದಾನೆ. ಧನಿಕನು ಈ ರಾಜನನ್ನು ವಾಕ್ಪತಿರಾಜನೆಂದು ಉಲ್ಲೇಖಿಸಿದ್ದಾನೆ. ಈ ರಾಜನು ಮಾಳವ ದೇಶದಲ್ಲಿ ಆಳುತ್ತಿದ್ದ ಉಪೇಂದ್ರನ ಅನಂತರದಲ್ಲಿ ಬಂದ ಪರಮಾರ ವಂಶದನೆಂದು ಗುರುತಿಸಲಾಗಿದೆ. ಇವನಿಗೆ ಉತ್ಪಲರಾಜ, ಅಮೋಘವರ್ಷ, ಪೃಥ್ವೀವಲ್ಲಭ, ಶ್ರೀವಲ್ಲಭನೆಂಬ ಹೆಸರುಗಳು ಇದ್ದವೆನ್ನಲಾಗಿದ್ದು ಇತರೇ ಸಂಗೀತ-ನಾಟ್ಯದ ಗ್ರಂಥಗಳಲ್ಲೂ ಇವನ ಹೆಸರುಗಳುಳ್ಳ ಪದ್ಯಗಳು ಕಂಡುಬಂದಿದೆ. ಇದರಿಂದ ದೊರೆ ಕವಿಯಾಗಿದ್ದನೆಂಬ ಸೂಚನೆಯೂ ದೊರೆಯುತ್ತದೆ.

ಈ ಗ್ರಂಥವನ್ನು ನಾಲ್ಕು ‘ಪ್ರಕಾಶ’ವಾಗಿ ವಿಂಗಡಿಸಲಾಗಿದೆ. ಪ್ರಾರಂಭದಲ್ಲಿ ಗಣಪತಿ, ಸರಸ್ವತಿ, ವಿಷ್ಣು ಸ್ತುತಿಗಳಿವೆ. ವಿಷ್ಣುವೇ ಧನಂಜಯನ ಇಷ್ಟದೈವವೆನ್ನುವುದು ನಿರೂಪಿತವಾಗಿದೆ. ಗ್ರಂಥದ ಪ್ರಥಮ ಪ್ರಕಾಶದಲ್ಲಿ ವಸ್ತುವನ್ನು (ಅರ್ಥಪ್ರಕೃತಿಗಳು, ಅವಸ್ಥೆಗಳು, ಸಂಧಿಗಳು, ಅರ್ಥೋಪಕ್ಷೇಪಗಳು, ಶ್ರವ್ಯಾಶ್ರವ್ಯಗಳು) ; ದ್ವಿತೀಯ ಪ್ರಕಾಶದಲ್ಲಿ ನಾಯಕಾದಿ ವಿಷಯವನ್ನು (ನಾಯಕ-ನಾಯಿಕಾಬೇಧಗಳು, ಸ್ತ್ರೀ ಸತ್ತ್ವಜ ಅಲಂಕಾರಗಳು, ವೃತ್ತಿಗಳು, ನಾಟ್ಯಪ್ರವೃತ್ತಿ, ಸಂಬೋಧನೆಗಳು, ಸರ್ವಪಾತ್ರಗಳ ವಿಶೇಷ ಬೇಧ) ; ಚತುರ್ಥ ಪ್ರಕಾಶದಲ್ಲಿ ರಸವಿಷಯವನ್ನು (ವಿಭಾವಾನುಭಾವಗಳು, ವ್ಯಭಿಚಾರಿಭಾವಗಳು, ಸ್ಥಾಯಿಭಾವಗಳು, ರಸಪ್ರಕರಣ) ವಿವರಿಸಲಾಗಿದೆ. ಈ ಮೂರು ಅಂಶಗಳ ಆಧಾರದ ಮೇಲೆ ಕಲ್ಪಿತವಾಗುವ ರೂಪಕದ ಹತ್ತು ಮುಖ್ಯಬೇಧಗಳನ್ನು (ನಾಟಕ, ಆಮುಖ, ವೀಥಿ, ಇತಿವೃತ್ತ-ಆರಂಭ ಯೋಜನೆ, ಅಂಕಲಕ್ಷಣ, ರಸ, ಅನಿರ್ದೇಶ್ಯಗಳು, ಅಂಕರಚನೆ, ಪ್ರಕರಣ ಲಕ್ಷಣ, ನಾಟಿಕಾ-ಭಾಣ-ಪ್ರಹಸನ-ಡಿಮ-ವ್ಯಾಯೋಗ, ಸಮವಕಾರ-ವೀಥೀ-ಉತ್ಸೃಷ್ಟಿಕಾಂಕ-ಈಹಾಮೃಗ ಲಕ್ಷಣ, ಲಾಸ್ಯಾಂಗಗಳು) ತೃತೀಯ ಪ್ರಕಾಶದಲ್ಲಿ ಹೇಳಲಾಗಿದೆ.

ರಸನಿಷ್ಪತ್ತಿಯಲ್ಲಿ ಶಾಂತರಸವನ್ನು ಧನಿಕನು ಖಂಡಿಸುತ್ತಾ ಈರ್ವರೂ ಎಂಟೇ ರಸಗಳು ಇವೆಯೆಂಬುದನ್ನು ಸ್ಪಷ್ಟೀಕರಿಸುತ್ತಾರೆ. ಇವೆಲ್ಲಾ ಇದ್ದರೂ, ಧನಿಕನ ಕೆಲವೇ ಕೆಲವು ಮಾತುಗಳಲ್ಲಿ ವ್ಯಾಖ್ಯಾನಸಹಜ ನಿರೂಪಣೆಯನ್ನಿತ್ತು ಸುಲಲಿತ ಮಾಡಿದ ಅವಲೋಕವೇ ಧನಂಜಯನ ದಶರೂಪಕಕ್ಕೆ ಪೂರ್ಣತ್ವ ಕೊಟ್ಟಿದೆಯೆಂಬುದು ಇಲ್ಲಿನ ಮತ್ತೊಂದು ಮಹತ್ವದ ಸಂಗತಿ. ಶ್ಲೋಕಗಳು ಸಂಸ್ಕೃತ, ಪ್ರಾಕೃತಭಾಷೆಯಲ್ಲಿದ್ದು ಗ್ರಂಥದ ಬಹುಭಾಗವೂ ಅನುಷ್ಟುಪ್ ಛಂದಸ್ಸಿನಲ್ಲಿದೆ.

ಈ ಗ್ರಂಥವನ್ನು ಮೊದಲಿಗೆ ಸಂಪಾದಿಸಿ ೧೮೬೫ರಲ್ಲಿ ಕಲ್ಕತ್ತಾದ ಬಿಬ್ಲಿಯೋಥಿಕಾ ಇಂಡಿಕಾ ಎಂಬ ಗ್ರಂಥಮಾಲಿಕೆಯಲ್ಲಿ ಪ್ರಕಟಿಸಿದವರು ಫಿಟ್ಸೆಡ್ ವರ್ಡ್ ಹಾಲ್. ಮೊದಲ ಆಂಗ್ಲಭಾಷಾನುವಾದ ಪ್ರಕಟಿಸಿದವರು ೧೯೧೨ರಲ್ಲಿ, ಜಾರ್ಜ್ ಸಿ. ಒ. ಹ್ಯೂಸ್. ಇದರೊಂದಿಗೆ ೧೮೭೮, ೧೮೯೭, ೧೯೪೨, ೧೯೫೫ರಲ್ಲಿ ಕ್ರಮವಾಗಿ ಜೀವಾನಂದ ವಿದ್ಯಾಸಾಗರ, ಕಾಶೀನಾಥ ಪಾಂಡುರಂಗ ಪರಬ್, ರಸಶಾಲಾ ಆಯುರ್ವೇದಾಶ್ರಮ್, ಚೌಖಾಂಬಾ ವಿದ್ಯಾಭವನದವರು ವಿವಿಧ ಪರಿಷ್ಕೃತ ಆವೃತ್ತಿಗಳನ್ನು ಹೊರತಂದರು. ಈಗ ಚಾಲ್ತಿಯಲ್ಲಿರುವ ಪ್ರಸ್ತುತ ಅನುವಾದ ‘ನಿರ್ಣಯ ಸಾಗರ’ದವರದ್ದು. ಮೂಲದೊಂದಿಗೆ ಕನ್ನಡ ಅನುವಾದವಿರುವ ಗ್ರಂಥವನ್ನು ೧೯೫೮ರಲ್ಲಿ ಕೆ.ವಿ ಸುಬ್ಬಣ್ಣ ಅವರ ಸಂಪಾದನೆಯಲ್ಲಿ ಅಕ್ಷರ ಪ್ರಕಾಶನದವರು ಹೊರತಂದರು.

ರಸಪ್ರಕರಣದಲ್ಲಿನ ಕೆಲವು ಭಾಗಗಳನ್ನು ಬಿಟ್ಟರೆ ದಶರೂಪಕದ ಉಳಿದ ಭಾಗ ನಾಟ್ಯಶಾಸ್ತ್ರಕ್ಕೆ ಒಂದು ಅಚ್ಚುಕಟ್ಟಾದ ಕೈಪಿಡಿಯೇ ಸರಿ ! ಆಸಕ್ತ ಸಂಶೋಧಕರಿಗೆ, ಗುರು-ವಿದ್ಯಾರ್ಥಿಗಳಿಗೆ ಅಪಾರ ಸಾಧ್ಯತೆಗಳನ್ನು ತಿಳಿಸುವ ಆಕರ ಗ್ರಂಥ.

Leave a Reply

*

code