ಅಂಕಣಗಳು

Subscribe


 

ಯಕ್ಷಗಾನ ಶಿಕ್ಷಣ-ವಾದ ಸರಣಿ

Posted On: Monday, June 8th, 2009
1 Star2 Stars3 Stars4 Stars5 Stars (No Ratings Yet)
Loading...

Author: ಶಿಕ್ಷಕರ ಯಕ್ಷಗಾನ ಒಕ್ಕೂಟ, ಸುಳ್ಯ, ದ.ಕ

ಶಿಕ್ಷಣದಲ್ಲಿ ಯಕ್ಷಗಾನವನ್ನು ಸಂಯೋಜಿಸುವ ಸದುದ್ದೇಶದ ಪಠ್ಯ ವಿಷಯ ಕರಡುಪ್ರತಿ ತಯಾರಿ ಕಾರ್ಯಾಗಾರ ಎರಡು ಹಂತಗಳಲ್ಲಿ ಸುಳ್ಯದಲ್ಲಿ ನಡೆದದ್ದು ತೆರೆದಿಟ್ಟ ಪುಸ್ತಕದಷ್ಟೇ ಸತ್ಯ. ಈ ಪ್ರಕ್ರಿಯೆ ಒಂದೇ ಕಾರ್ಯಾಗಾರದಲ್ಲಿ ಮುಗಿದು ಹೋಗುತ್ತದೆಯೆಂದು ಯಕ್ಷಗಾನ ಅಕಾಡೆಮಿಯಾಗಲಿ ಅಥವಾ ಸಹಭಾಗಿತ್ವ ವಹಿಸಿದ್ದ ಸುಳ್ಯ ತಾಲೂಕು ಶಿಕ್ಷಕರ ಯಕ್ಷಗಾನ ಒಕ್ಕೂಟವಾಗಲಿ ಭಾವಿಸುವಷ್ಟು ಹುಂಬತನವನ್ನು ಹೊಂದಿಲ್ಲ. ಸದ್ಯಕ್ಕೆ ಪಠ್ಯ ವಿಷಯದ ಕರಡು ಪ್ರತಿ ಮಾತ್ರ ಸಿದ್ಧವಾಗಿದೆ. ಪಠ್ಯ ಪುಸ್ತಕ ರಚನೆಯಾಗಿಲ್ಲ. ಪಠ್ಯ ಪುಸ್ತಕ ರಚನಾ ಕಾರ್ಯಾಗಾರದ ವ್ಯಾಪ್ತಿ ವಿಸ್ತೃತವಾಗಿರುತ್ತದೆಯೆಂದು ನಮಗೂ ಗೊತ್ತಿದೆ.
ಸಮಾಜ ಶಾಸ್ತ್ರ ಉಪನ್ಯಾಸಕ ಮತ್ತು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆ ಈ ಕಾರ್ಯಾಗಾರದಲ್ಲಿ ತಾವು ಉಳಿದಿದೆಯೆಂದು ಭಾವಿಸಿರುವ ಅರೆ ತಿಳುವಳಿಕೆಯ ಕೆಲ ಪ್ರಶ್ನೆಗಳಿಗೆ ಉತ್ತರಿಸುವ ರೀತಿಯ ಪ್ರತಿಕ್ರಿಯೆಯೊಂದನ್ನು ಕಳೆದ ಸಂಚಿಕೆಂಲ್ಲಿ ಪ್ರಕಟಿಸಿದ್ದಾರೆ. ಮುಖ್ಯವಾಗಿ ದಾಮ್ಲೆಯವರು ನಡೆದು ಹೊದ ಕಾರ್ಯಾಗಾರದಲ್ಲಿ ಭಾಗವಹಿಸಿದ ವಿಷಯ ತಜ್ಞರ ಮತ್ತು ಕಾರ್ಯಾಗಾರದ ವಿಧಾನದ ಬಗ್ಗೆ ಪ್ರಶೆಗಳನ್ನು ಎತ್ತಿದ್ದಾರೆ. ಜೊತೆಗೆ ಪರೋಕ್ಷವಾಗಿ ಈ ಕಾರ್ಯಾಗರದಲ್ಲಿ ‘ತಾನು’ ಕೇಂದ್ರಿತವಾಗದೇ ಹೋದುದರ ಕುರಿತಂತೆ ಹತಾಷೆಯನ್ನು ವ್ಯಕ್ತಪಡಿಸಿದ್ದಾರೆ. ಹಾಗೆ ನೋಡಿದರೆ ಕಾರ್ಯಾಗಾರದ ಪೂರ್ವಭಾವಿ ಸಭೆಗಳಲ್ಲಿ ದಾಮ್ಲೆಯವರು ಕೂಡಾ ಆಹ್ವಾನಿತರೇ ಆಗಿದ್ದರು. ಆದರೆ ಅವರು ಭಾಗವಹಿಸಿಲ್ಲ ಯಾಕೆ? ಎನ್ನುವ ಪ್ರಶ್ನೆಗೆ ದಾಮ್ಲೆ ಉತ್ತರಿಸುವುದಿಲ್ಲ. ಜೊತೆಗೆ ಈ ಕಾರ್ಯಾಗಾರದಲ್ಲಿ ಆಹ್ವಾನಿತ ಸಂಪನ್ಮೂಲ ವ್ಯಕ್ತಿಯಾಗಿಯೂ ಅರೆಬರೆ ಭಾಗಿಯಾಗಿದ್ದರು ಎನ್ನುವುದು ಗಮನಾಹ‌. ಈಗ‌ ಯಕ್ಷಗಾನದ ಸಂದರ್ಭದಲ್ಲಿ ತೆರೆದುಕೊಳ್ಳುತ್ತಿರುವ ಹೊಸ ಆಯಾಮವೊಂದಕ್ಕೆ ವಿಘ್ನಕಾರರಾಗಿ ಪರಿಣಮಿಸುತ್ತಿದ್ದಾರೆಂದು ಹೇಳದೆ ಇನ್ನು ವಿಧಿಯಿಲ್ಲ.
ಸುಮಾರು ಅರುವತ್ತು ಜನ ಮೂಡಲಪಾಯ ಮತ್ತು ಪಡುವಲಪಾಯ ಯಕ್ಷಗಾನಗಳ ತಜ್ಞರು ಭಾಗವಹಿಸಿದ್ದ ಕಾರ್ಯಾಗಾರದ ಆರಂಭದಲ್ಲಿಯೇ ರಾಜ್ಯ ಮಟ್ಟದ ಹಲವಾರು ಪಠ್ಯ ಪುಸ್ತಕ ರಚನೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿರುವ ಪ್ರಕಾಶ್ ಮೂಡಿತ್ತಾಯರು ಕರಡುಪ್ರತಿ ತಯಾರಿಯ ರೂಪುರೇಷೆಗಳ ಕುರಿತಂತೆ ಸಮಗ್ರ ಮಾಹಿತಿಯನ್ನು ನೀಡಿದ್ದರು. ಭಾಗವಹಿಸಿದ್ದ ತಜ್ಞರೂ ಅದರ ಪ್ರಕಾರವೇ ಚಿಂತನೆ ನಡೆಸಿದ್ದರು. ಕಾರ್ಯಾಗಾರದ ದಿನ ಮಕ್ಕಳ ಮತ್ತು ಹಿರಿಯ ಕಲಾವಿದರಿಂದ ನಡೆದ ಪ್ರತ್ಯೇಕ ಯಕ್ಷಗಾನ ಪ್ರದರ್ಶನಗಳು ಪ್ರಾತ್ಯಕ್ಷಿಕೆಗಳಾಗಿರದೆ, ಕಾರ್ಯಗಾರದ ಅಂಗಭಾಗವಾಗಿ ಮನೋರಂಜನೆಗಾಗಿ ನಡೆದವುಗಳಾಗಿದ್ದವು.
ನಂತರ ಎರಡನೇಯ ಹಂತದ ಕಾರ್ಯಾಗಾರದಲ್ಲಿ ಪಠ್ಯ ವಿಷಯದ ಸಿದ್ಧ ಕರಡುಪ್ರತಿಯನ್ನು ಮೊದಲು ಕಾರ್ಯಾಗಾರದಲ್ಲಿ ಚರ್ಚಿಸಿದ ವಿಷಯದ ಆಧಾರದಲ್ಲಿಯೇ ಸಿದ್ಧಗೊಳಿಸಲಾಗಿತ್ತು. ದಾಮ್ಲೆಯವರು ಪೂರ್ವಾಗ್ರಹ ಪೀಡಿತರಾಗದೇ ಇರುತ್ತಿದ್ದರೆ, ಅದರ ರೂಪುರೇಷೆ ವಿಧಾನಗಳನ್ನು ಅರ್ಥೈಸಲು ಸಾಧ್ಯವಾಗುತ್ತಿತ್ತು. ಅವರು ಕಾರ್ಯಾಗಾರದಲ್ಲಿದ್ದುಕೊಂಡೇ ತಮ್ಮ ಜ್ಞಾನ, ಅನುಭವಗಳನ್ನು ಧಾರೆಯೆರೆದಿದ್ದರೆ ಸಲ್ಲಿಸಬೇಕಾದ ನ್ಯಾಯಕ್ಕೆ ಗೌರವ ಸಲ್ಲಿಸುವಂತಾಗುತ್ತಿತ್ತು !
ಕಾರ್ಯಾಗಾರವು ಯಕ್ಷಗಾನದ ಪ್ರಧಾನ ೫ ಅಂಗಭಾಗಗಳನ್ನು ವಿಭಾಗ ಮಾಡಿ ಅವುಗಳಲ್ಲಿ ಪಠ್ಯ ವಿಷಯವಾಗಿ ೩ ಹಂತದ ವಯೋಮಾನದ ವಿದ್ಯಾರ್ಥಿಗಳನ್ನು(ಜೂನಿಯರ್,ಸೀನಿಯರ್,ವಿದ್ವತ್) ಗಮನದಲ್ಲಿಟ್ಟುಕೊಂಡು ಚರ್ಚಿಸಲಾಗಿತ್ತು. ಆಯಾಯ ಅಂಗಭಾಗಗಳಲ್ಲಿ ಪರಿಣತ ವಿದ್ವಾಂಸರು ನಡೆಸಿದ ಚಿಂತನೆಗಳನ್ನು ಸಂಯೋಜನಾತ್ಮಕವಾಗಿ ಪುನರ್ರಚಿಸಿ ತಯಾರಿಸಿದ ಕರಡು ಪ್ರತಿ ‘ಯಕ್ಷಗಾನ ಶಿಕ್ಷಣ’ ಎನ್ನುವ ವಿಷಯ ಅತ್ಯಂತ ಸೂಕ್ಷ್ಮವಾಗಿದೆ. ಕಾರ್ಯಾಗಾರದ ಉದ್ದೇಶ ಯಕ್ಷಗಾನದ ಮೂಲಭೂತ ಸಂಗತಿಗಳನ್ನು ಎಷ್ಟರ ಮಟ್ಟಿಗೆ ಕಲಿಯಬೇಕು ಎನ್ನುವುದಷ್ಟನ್ನು ಮಾತ್ರ ಚಿಂತಿಸುವುದಾಗಿತ್ತೇ ಹೊರತು ಯಕ್ಷಗಾನದ ಪರಿಷ್ಕಾರಗಳಿಗೆ ಸಂಬಂಧಿಸಿದುದಾಗಿರಲಿಲ್ಲ. ಬಹುಷಃ ದಾಮ್ಲೆಯವರು ತಮ್ಮ ಪ್ರತಿಕ್ರಿಂ‌ೆಯಲ್ಲಿ ನೀಡಿದ ಸಲಹೆಗಳು ಯಕ್ಷಗಾನದ ಪರಿಷ್ಕಾರ ಕಾರ್ಯಾಗಾರಕ್ಕೆ ಅನ್ವಯವಾಗಬಹುದೇನೋ?
ಶಿಕ್ಷಣ ತಜ್ಞರೆಂದು ಗುರುತಿಸಿಕೊಳ್ಳುವ ದಾಮ್ಲೆಯವರು ತಮ್ಮ ಪ್ರತಿಕ್ರಿಯೆಯಲ್ಲಿ ಈ ಕಾರ್ಯಾಗಾರದಲ್ಲಿ ಭಾಗವಹಿಸಿದ ವಿಶೇಷಜ್ಞರ ಪಟ್ಟಿ ಮಾಡುವುದಿಲ್ಲವೇಕೆ? ಹೊಸ್ತೋಟ ಮಂಜುನಾಥ ಭಾಗವತರು, ಕೆ.ಗೋವಿಂದ ಭಟ್, ಸದಾನಂದ ಐತಾಳ, ಕರ್ಗಲ್ಲು ವಿಶ್ವೇಶ್ವರ ಭಟ್, ಮಾಂಬಾಡಿ ಸುಬ್ರಹ್ಮಣ್ಯ ಭಟ್, ಪೆರುವಡಿ ನಾರಾಯಣ ಭಟ್, ಸಬ್ಬಣ್ಣಕೋಡಿ ರಾಮಭಟ್ ಹೀಗೆ ತೆಂಕುತಿಟ್ಟು ಮಾತ್ರವಲ್ಲದೆ ಬಡಗುತಿಟ್ಟು, ದೊಡ್ಡಾಟ, ಸಣ್ಣಾಟ, ಶ್ರೀಕೃಷ್ಣ ಪಾರಿಜಾತ, ರಾಧನಾಟ, ಗೊಂಬೆಯಾಟ, ಮುಂತಾಗಿ ವಿವಿಧ ತಿಟ್ಟುಗಳ ಯಕ್ಷಗಾನದ ಹಿಮ್ಮೇಳ, ಮುಮ್ಮೇಳ, ನೇಪಥ್ಯ ಇತ್ಯಾದಿ ಹೊರ-ಒಳಗನ್ನು ಬಲ್ಲ, ಅಷ್ಟೇ ಅಲ್ಲದೆ ಶಿಕ್ಷಣ ಮತ್ತು ಯಕ್ಷಗಾನದಲ್ಲಿ ಪರಿಣತರಾದ ಎಂ.ಎಲ್ ಸಾಮಗರಂತಹ ಅನೇಕರು ಕರ್ನಾಟಕದ ವಿವಿಧ ಭಾಗಗಳಿಂದ ಬಂದು ಭಾಗಿಯಾಗಿದ್ದ ಸಂಗತಿ ದಾಮ್ಲೆಯವರ ದೃಷ್ಠಿಯಲ್ಲಿ ನಿರರ್ಥಕ ಎಂದು ಕಂಡಿತೇ? ಯಕ್ಷರಂಗದ ಕಲಾವಿದರನ್ನು ದಾಮ್ಲೆಯವರು ವಿಭಾಗಿಸುವಂತಹ ಕ್ರಮವೇ ಕ್ಷೇತ್ರಕ್ಕೆ ಧಕ್ಕೆ ತರುವಂತದ್ದಾಗಿದೆ. ಡಾ. ಪ್ರಭಾಕರ ಜೋಷಿ, ಡಾ.ರಾಘವ ನಂಬಿಯಾರ್, ಪದ್ಯಾಣ, ಕೋಳ್ಯೂರು, ಚಿಪ್ಪಾರು ಮುಂತಾದವರನ್ನೂ ನಾವು ಆಹ್ವಾನಿಸಿದ್ದೆವು. ಅವರ ಅನನುಕೂಲತೆ ಕಾರ್ಯಾಗಾರದಲ್ಲಿ ಅವರನ್ನು ಭಾಗವಹಿಸದಂತೆ ಮಾಡಿರುವಾಗ ಅದನ್ನು ಸಂಘಟಕರ ಔದಾಸೀನದಿಂದಾದ ಕೊರತೆಯೆಂದು ಉಲ್ಲೇಖಿಸುವಲ್ಲಿ ದಾಮ್ಲೆ ಸಿನೀಕರಾಗಿ ಯೋಚಿಸುತ್ತಾರೆನ್ನುವುದನ್ನು ಸೂಚಿಸುವುದಿಲ್ಲವೇ? ಹಾಗಾದರೆ ಹೊಸದಾಗಿ ಚಿಂತಿಸುವವರು ಅವರಿಗೆ ಬೇಕಿಲ್ಲವೇ?
ಪಠ್ಯ ಪುಸ್ತಕ ರಚನೆಯ ಸಂದರ್ಭದಲ್ಲಿ ವಿದ್ವತ್ಪೂರ್ಣ ಅಧ್ಯಯನಗಳು, ರಚನೆಗಳು ಆಕರ ಸಾಮಾಗ್ರಿಗಳಾತ್ತವೆಯೆನ್ನುವುದು ಸಂಘಟಕರಿಗೆ ಗೊತ್ತಿಲ್ಲದ ವಿಷಯವೇನಲ್ಲ. ಆದರೆ ದಾಮ್ಲೆಯವರು ಅವೆಲ್ಲವೂ ನನ್ನಲ್ಲಿ ಲಭ್ಯವೆಂದು ತೋರಿಸುವ ಉದಾರತೆಯಲ್ಲಿ ತಾನು ಯಕ್ಷಗಾನಕ್ಕೆ ಅಧಿಕೃತವೆಂದು ದಾಖಲಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಪಠ್ಯ ವಿಷಯದ ಕರಡು ಪ್ರತಿ ತಯಾರಿಯಲ್ಲಿ ಪಾಲ್ಗೊಂಡ ಸಂಪನ್ಮೂಲ ವ್ಯಕ್ತಿಗಳು ಯಕ್ಷಗಾನದ ಒಳ-ಹೊರಗನ್ನು ಬಲ್ಲವರು, ಕಲಾವಿದರು, ಕಲಾವಿಮರ್ಶಕರು, ಗುರುಗಳು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪಳಗಿದವರು ಆಗಿದ್ದರು. ಈ ದೃಷ್ಠಿಯಿಂದ ಕರಡುಪ್ರತಿ ಸಮಗ್ರತೆಯ ಪರಿಕಲ್ಪನೆಯಲ್ಲಿಯೇ ತಯಾರಾಗಿದೆ. ಹಾಗಾಗಿಯೇ ಬೇರೆ ಯಾರೂ ವಿಘ್ನ ಸಂತೋಷಿಗಳಾಗಿ ಅಪಸ್ವರ ಎತ್ತದೆ ಯಕ್ಷಗಾನದ ಕುರಿತ ತಮ್ಮ ಕಾಳಜಿಯನ್ನು ಮೆರೆದಿದ್ದಾರೆ. ಹಾಗಾಗಿ ಡಾ. ದಾಮ್ಲೆಯವರಿಗೆ ಹುಟ್ಟಿಕೊಂಡ ಅನುಮಾನಗಳು ಮತ್ತು ಪ್ರಶ್ನೆಗಳು ತೀರಾ ವೈಯಕ್ತಿವಷ್ಟೇ ವಿನಃ ಸಮಷ್ಠಿಯಾದವುಗಳಲ್ಲ.
ಬಹುಷಃ ದಾಮ್ಲೆಯವರೇ ಸಂಪನ್ಮೂಲ ವ್ಯಕ್ತಿಯಾಗಿ ಕೇಂದ್ರ ನೆಲೆಯಲ್ಲಿರುತ್ತಿದರೆ ಅವರಿಗೆ ಯಾವ ಪ್ರಶ್ನೆಗಳೂ ಉಳಿಕೆಗಳಾಗಿ ಕಾಣುತ್ತಿರಲಿಲ್ಲ. ಡಾ. ಸುಂದರ ಕೇನಾಜೆ ಅಕಾಡೆಮಿ ಸದಸ್ಯರಾದ ಕಾರಣದಿಂದಾಗಿಯೇ ಸುಳ್ಯದಲ್ಲಿ ಕಾರ್ಯಾಗಾರ ನಡೆಯುವಂತಾಗಿತ್ತು. ಆದರೆ ಯಕ್ಷಗಾನ ಅಕಾಡೆಮಿಯ ಸದಸ್ಯನಾಗುವ ರಾಜಕೀಯ ಓಟದ ಸ್ಪರ್ಧೆಯಲ್ಲಾದ ಸೋಲನ್ನು ಒಪ್ಪಿಕೊಳ್ಳಲಾಗದ ಹತಾಶೆಯೇ ದಾಮ್ಲೆಯವರ ಈ ವರ್ತನೆಗೆ ಕಾರಣವಾಗಿದೆ ಎಂಬುದು ಇತರ ವೇದಿಕೆಗಳಲ್ಲೂ ಸ್ಪಷ್ಟವಾಗಿದೆ. ಅಷ್ಟಕ್ಕೂ ಅವರ ತೆಂಕುತಿಟ್ಟು ಹಿತರಕ್ಷಣಾ ವೇದಿಕೆಗೆ ಶಿಕ್ಷಕರ ಯಕ್ಷಗಾನ ಒಕ್ಕೂಟ ಪರ್ಯಾಯವಲ್ಲ. ದಾಮ್ಲೆಯವರೂ ಕೂಡಾ ಶಿಕ್ಷಕರ ಒಕ್ಕೂಟದಲ್ಲಿ ಬಣ್ಣ ಹಾಕುವವರೇ ! ಎರಡು ವೇದಿಕೆಗಳೂ ಕೂಡಾ ಪರಸ್ಪರವಾಗಿವೆ.
ನಡೆದು ಹೋದ ಕಾರ್ಯಾಗಾರದಲ್ಲಿ ಲೋಪಗಳಿರಬಹುದು. ಆದರೆ ಯಕ್ಷಗಾನದ ಕುರಿತಂತೆ ಒಂದಷ್ಟು ಅರಿವು ಇರುವ ದಾಮ್ಲೆಯವರು, ಹೊಸ ಆಯಾಮಗಳಿಗೆ ತೆರೆದುಕೊಳ್ಳಬೇಕಾದ ಜರೂರಿನಲ್ಲಿರುವ ಯಕ್ಷಗಾನ ಪ್ರಕಾರಕ್ಕೆ ಪೂರಕವಾಗಿ ವರ್ತಿಸುವುದು ಅವರಿಗೆ ಶೋಭೆ ಎನ್ನುವುದು ಸುಳ್ಯ ತಾಲೂಕು ಶಿಕ್ಷಕರ ಒಕ್ಕೂಟದ ಸ್ಪಷ್ಟ ಗ್ರಹಿಕೆ.

Leave a Reply

*

code