ಅಂಕಣಗಳು

Subscribe


 

ಯಕ್ಷಗಾನ ಕಾರ್ಯಗಾರ ಮತ್ತು ಪಾಠಪಟ್ಟಿ

Posted On: Wednesday, April 15th, 2009
1 Star2 Stars3 Stars4 Stars5 Stars (No Ratings Yet)
Loading...

Author: ಡಾ. ಚಂದ್ರಶೇಖರ ದಾಮ್ಲೆ, ಯಕ್ಷಗಾನ ಕಲಾವಿದರು, ಉಪನ್ಯಾಸಕರು, ಸುಳ್ಯ, ದ.ಕ.

(ಕಳೆದ ಸಂಚಿಕೆಯಲ್ಲಿ ಸುಳ್ಯದಲ್ಲಿ ನಡೆದ ಯಕ್ಷಗಾನ ಕಾರ್ಯಾಗಾರದ ಬಗ್ಗೆ ವಿವರಣಾತ್ಮಕ ಲೇಖನ ಪ್ರಕಟಗೊಂಡಿತ್ತು. ಮತ್ತು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಮೂಲಕ ನಡೆಸಲಾಗುವ ಸಂಗೀತ, ನೃತ್ಯ ಪರೀಕ್ಷೆಗಳ ಮಾದರಿಯಲ್ಲೇ ಯಕ್ಷಗಾನದ ಏಳಿಗೆಗೂ ಪರೀಕ್ಷೆಗಳನ್ನು ನಡೆಸುವ ಮತ್ತು ಅದಕ್ಕೆ ಅಗತ್ಯವಿರುವ ಪರೀಕ್ಷಾ ಪಠ್ಯ ತಯಾರಿಕೆಯ ಕುರಿತಂತೆ ಚರ್ಚೆಗಳಿಗೆ ಆಹ್ವಾನ ನೀಡಲಾಗಿತ್ತು. ಆ ಪೈಕಿ ಬಂದ ಪ್ರತಿಕ್ರಿಯೆಗಳನ್ನು ಈ ಸಂಚಿಕೆಯಿಂದ ಪ್ರಕಟಿಸಲಾಗುತ್ತಿದೆ. ಭವಿಷ್ಯದ ಸಂಚಿಕೆಗಳಲ್ಲೂ ಈ ಕುರಿತಂತೆ ಮುಕ್ತ ಸಂವಾದಕ್ಕೆ, ವಾದ-ಪ್ರತಿವಾದಗಳಿಗೆ ಓದುಗರಿಗೆ ಅವಕಾಶವಿದೆ. ನಿಮ್ಮ ಅನಿಸಿಕೆ, ಅಭಿಪ್ರಾಯಗಳು ವಿಚಾರಗಳನ್ನು ಮಂಥಿಸಲಿ.)

ಸುಳ್ಯದಲ್ಲಿ ಯಕ್ಷಗಾನ ಅಕಾಡೆಮಿಯ ವತಿಯಿಂದ ಶಿಕ್ಷಣದಲ್ಲಿ ಯಕ್ಷಗಾನವನ್ನು ಸಂಯೋಜಿಸುವ ಉದ್ದೇಶದ ಕಾರ್ಯಗಾರ ನಡೆದಿದೆ. ಈ ನಡುವೆ ಯಕ್ಷಗಾನ ಪಾಠಪಟ್ಟಿಯ ಕರಡುಪ್ರತಿಯೂ ಸಿದ್ಧವಾಗಿ ಅದು ಅಧ್ಯಕ್ಷರ ಕೈ ಸೇರಿದೆ. ನಂತರ ಎರಡು ದಿನಗಳಲ್ಲಿ (ಮಾರ್ಚ್ ೯ ಮತ್ತು ೧ಂ) ಅದು ತಜ್ಞ ಕಲಾವಿದರಿಂದ ಪರಿಷ್ಕರಣೆಗೊಂಡಿದೆ ಎಂಬುದಾಗಿಯೂ ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ಕುರಿತಂತೆ ಒಂದಷ್ಟು ಪ್ರಶ್ನೆಗಳೂ ಉಳಿದಿದೆ.
ಮುಖ್ಯವಾಗಿ ಭಾಗವಹಿಸಿದ ಆ ತಜ್ಞರು ಯಾರು ಎಂಬುದು ಪ್ರಕಟವಾಗಿಲ್ಲ. ಮತ್ತು ಭಾಗವಹಿಸಿದ ಸಂಪನ್ಮೂಲ ವ್ಯಕ್ತಿಗಳಲ್ಲಿ ಯಕ್ಷಗಾನದ ಆಳ-ವಿಸ್ತಾರಗಳನ್ನು ಅನುಭವದಿಂದ ತಿಳಿದ ಕಲಾವಿದರು ಎಷ್ಟಿದ್ದರೋ ಅದೂ ಗೊತ್ತಿಲ್ಲ. ಪ್ರಾತ್ಯಕ್ಷಿಕೆ ಮತ್ತು ಪ್ರಯೋಗಗಳನ್ನು ಮಾಡಿ ವಿಮರ್ಶಿಸದೆ ಕೇವಲ ಒಂದು ದಿನದ ಚರ್ಚೆಯಲ್ಲಿ ಪಾಠಪಟ್ಟಿಯ ಕರಡನ್ನು ಸಿದ್ಧಪಡಿಸುವುದೂ ಸಾಧ್ಯವಿಲ್ಲ. ( ಎರಡು ದಿನಗಳಲ್ಲಿ ಅರ್ಧ ದಿನ ಉದ್ಘಾಟನೆಗೆ ಹಾಗೂ ಅರ್ಧ ದಿನ ಸಮಾರೋಪಕ್ಕೆ ಹೋಗಿದೆ ಎಂಬುದು ನನ್ನ ಅಭಿಪ್ರಾಯ.)
ಅಂದು ‘ಪ್ರಯೋಗ’ ವೆಂಬ ಹೆಸರಿನಲ್ಲಿ ಪ್ರದರ್ಶಿಸಿದ ಯಕ್ಷಗಾನವೂ ಮಕ್ಕಳ ಹಾಗೂ ಹವ್ಯಾಸಿಗಳ ಪ್ರದರ್ಶನವಾಗಿತ್ತೇ ಹೊರತು ಯಕ್ಷಗಾನದ ವಿವಿಧ ಅಂಗಗಳ ಶಾಸ್ತ್ರೀಯತೆಯನ್ನು ಪರಿಚಯಿಸುವ ಪ್ರಯತ್ನ ನಡೆಯಲಿಲ್ಲ ಮತ್ತು ಅನೇಕ ಮಂದಿ ಸಂಪನ್ಮೂಲ ವ್ಯಕ್ತಿಗಳು ಅದನ್ನು ನೋಡಲೂ ಇಲ್ಲ ಎಂಬುದು ನಾನು ಕಂಡುಕೊಂಡ ವಿಚಾರ. ಇನ್ನೀಗ ಶಿಕ್ಷಣ ಇಲಾಖೆಯೊಳಗೆ ಇದೇ ಪಾಠಪಟ್ಟಿಯನ್ನು ತುರುಕಿಸಿ ಯಕ್ಷಗಾನದಲ್ಲಿ ಪರೀಕ್ಷೆಗಳನ್ನು ನಡೆಸಿ ಸರ್ಟಿಫಿಕೇಟನ್ನು ಕೊಡುವ ಹಾಗೂ ಅದಕ್ಕೊಂದು ಘಟಿಕೋತ್ಸವವನ್ನು ಮಾಡುವ ಕಾರ್ಯವೂ ನಡೆದೀತು.  ಆದರೆ ಈ ಬಗ್ಗೆ ಸರಕಾರವೂ ಯಕ್ಷಗಾನ ಅಕಾಡೆಮಿಯೂ ಎಚ್ಚರ ವಹಿಸಬೇಕು.
ಇನ್ನೊಂದು ಮುಖ್ಯ ವಿಚಾರವೆಂದರೆ ಯಕ್ಷಗಾನವು ಒಂದು ಸಮಗ್ರ ಕಲೆ. ಇದನ್ನು ವಿಭಜಿಸಿ ಐದು ಗುಂಪುಗಳಲ್ಲಿ ಚರ್ಚೆ ನಡೆಸಿದ ಶಿಕ್ಷಕರ ತರಬೇತಿಯ ಟೆಕ್ನಿಕ್ ಆಕರ್ಷಕವೆನ್ನಿಸಿರಬಹುದು. ಆದರೆ ಅದು ಯಕ್ಷಗಾನದ ಪಾಠಪಟ್ಟಿಯ ತಯಾರಿಗೆ ಅಪಾಯಕಾರಿಯಾದೀತೆಂಬುದು ನನ್ನ ಅನಿಸಿಕೆ. ಏಕೆಂದರೆ ಪ್ರಸಂಗ ಒಂದು ಕಡೆ, ನಾಟ್ಯ ಇನ್ನೊಂದು ಕಡೆ, ಅರ್ಥಗಾರಿಕೆ ಮತ್ತೊಂದು ಕಡೆ, ಹಿಮ್ಮೇಳ ಮಗುದೊಂದು ಕಡೆ ಹೀಗೆ ಚರ್ಚೆಯಾದರೆ ಅದು ವಿಭಜನಾತ್ಮಕ ಚಿಂತನೆಯಾಗುತ್ತದಷ್ಟೇ ಅಲ್ಲದೆ ಸಮಗ್ರ ಚರ್ಚೆಗೆ ತಡೆಗಳನ್ನು ನಿರ್ಮಿಸಿದಂತಾಗುವುದಿಲ್ಲವೇ?
ಯಕ್ಷಗಾನ ಪಾಠಪಟ್ಟಿಯ ತಯಾರಿಗೆ ಸಮಗ್ರ ಚಿಂತನೆಯ ಸಮೀಪನದೊಂದಿಗೆ ಕೆಲವು ರಾತ್ರೆಗಳಲ್ಲಿ  ತಜ್ಞ ಕಲಾವಿದರು ಕುಳಿತು ಪ್ರಾತ್ಯಕ್ಷಿಕೆ-ಪ್ರಯೋಗಗಳೊಂದಿಗೆ ದೊಡ್ಡ ಕಾರ್ಯಗಾರವೇ ನಡೆಯಬೇಕಾಗಿದೆ. ಅದನ್ನು ಏರ್ಪಡಿಸಲು ಯಕ್ಷಗಾನದ ಅನುಭವವಿದ್ದ ಶಿಬಿರ ಸಂಯೋಜಕರು ಇರಬೇಕು ಎಂಬುದು ನನ್ನ ಅಭಿಪ್ರಾಯ.
ಬಾಲ್ಯದಿಂದಲೂ ಯಕ್ಷಗಾನವನ್ನೇ ಉಸಿರಾಡಿದ ಶ್ರೀ ಬಲಿಪ ಭಾಗವತರು, ಕೋಳ್ಯೂರು ರಾಮಚಂದ್ರ ರಾಯರು, ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು, ಗೋಪಾಲಕೃಷ್ಣ ಕುರುಪ್‌ರವರು, ಪದ್ಯಾಣ ಶಂಕರನಾರಾಯಣ ಭಟ್ಟರು, ಪದ್ಯಾಣ ಗಣಪತಿ ಭಟ್ಟರು ಇನ್ನೂ ಮುಂತಾಗಿ ಅನೇಕ ಹಿರಿಯ ಕಲಾವಿದರು ಪಠ್ಯರಚನೆಗೆ ಮಾರ್ಗದರ್ಶನ ಕೊಡಬಲ್ಲವರಿದ್ದಾರೆ. ಇವರಲ್ಲದೆ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಅನೇಕ ರಾತ್ರೆಗಳನ್ನು ಹಗಲು ಮಾಡಿದ ಡಾ. ಎಂ ಪ್ರಭಾಕರ ಜೋಶಿ, ಹಿಮ್ಮೇಳ ಮುಮ್ಮೇಳ ಹಾಗೂ ನೇಪಥ್ಯಗಳ ಪೂರ್ಣ ಅನುಭವವಿರುವ ಡಾ. ರಾಘವ ನಂಬಿಯಾರ್ ಮುಂತಾದವರು ಅಕಾಡೆಮಿಕ್ ಆಗಿದ್ದುಕೊಂಡು ಕಲಾವಿದರ ನೇರ ಸಂವಹನವುಳ್ಳವರು. ಅವರು ಈಗಾಗಲೇ ನಡೆಸಿದ ಅಧ್ಯಯನಗಳು ಪ್ರಕಟವಾಗಿದೆ. ಅಲ್ಲದೆ ಪದ್ಯ ಆಕರ ಗ್ರಂಥಗಳಾಗಿ ಲಭ್ಯವಿರುವ ಅನೇಕ ಕೃತಿಗಳನ್ನು ಹಿರಿಯ ಕಲಾವಿದರು ಬರೆದಿದ್ದಾರೆ. ನನ್ನಲ್ಲೇ ಅನೇಕ ಪುಸ್ತಕಗಳಿವೆ. ಹೀಗೆ ಕಲಾವಿದ ವಿಮರ್ಶಕರನ್ನೂ ಒಳಗೊಂಡು ಆಕರ ಗ್ರಂಥಗಳನ್ನೊದಗಿಸಿಯೇ ಪಾಠಪಟ್ಟಿಯನ್ನು ರಚಿಸಬೇಕಾದದ್ದು ಅಗತ್ಯ.


(ಲೇಖಕರು ಸಮಾಜಶಾಸ್ತ್ರ ಉಪನ್ಯಾಸಕರು ಮತ್ತು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು.,ಸುಳ್ಯ)

Leave a Reply

*

code