ಅಂಕಣಗಳು

Subscribe


 

ಎ.ಪಿ.ಮಾಲತಿ ರಚಿಸಿದ ‘ನೂಪುರಗಾನ’ ಕಾದಂಬರಿ

Posted On: Monday, December 2nd, 2013
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಶಿವರಾಮ ಕಾರಂತರ ಒಂಟಿದನಿ ಅಥವಾ ಮ.ನ.ಮೂರ್ತಿ ಅವರ ಅತಿಕಾಮಿಯಂತಹ ವಸ್ತು ಅಥವಾ ಶೈಲಿ ಇಲ್ಲಿನದ್ದಲ್ಲ. ಹಾಗಾಗಿ ಇಲ್ಲಿ ವಸ್ತುವನ್ನು ಹೆಚ್ಚಿನ ಉತ್ಪ್ರೇಕ್ಷೆಯೆಂಬಂತೆಯೋ ಅಥವಾ ಕೇವಲ ಘಟನೆಯೆಂಬಂತೆಯೋ ಬಳಸಿಕೊಂಡಿಲ್ಲ. ಬದಲಾಗಿ ವಸ್ತುವನ್ನು ಗಮನಾರ್ಹವಾಗಿ, ಸಹಜವಾಗಿ ದುಡಿಸಿಕೊಂಡ ಕಾದಂಬರಿಯಾಗಿದ್ದು; ಇಂದಿನ ದಿನಗಳಲ್ಲೂ ನರ್ತಕಿ/ಕಲಾವಿದೆಯರು ಅನುಭವಿಸುವ ಸಾಂಸಾರಿಕ ತೊಳಲಾಟ, ಕಲಾವಿದೆಯರ ಮೇಲಿನ ಕೌಟುಂಬಿಕ ಸರಪಳಿಯನ್ನು ಸಿನಿಮೀಯವೆನಿಸಿದರೂ ವಿಷದವಾಗಿ, ಸಾಂದರ್ಭಿಕವಾದ ಅಲಂಕಾರ, ರೂಪಕ, ಧ್ವನಿಗಳ ಹದವಾದ ಮಿಶ್ರಣದೊಂದಿಗೆ ಚರ್ಚಿಸುತ್ತಾ ಸಾಗುತ್ತದೆ.

ಕಾದಂಬರಿಯು ಕರ್ನಾಟಕದ ದಕ್ಷಿಣಕನ್ನಡ, ಉಡುಪಿ, ಬೆಂಗಳೂರು, ಧಾರವಾಢ, ಮಂಡ್ಯ, ಮೈಸೂರು ಇತ್ಯಾದಿಯಾಗಿ ಹಲವು ಜಿಲ್ಲೆಗಳ ಸಾಂಸ್ಕೃತಿಕ ಪದರಗಳನ್ನು ಸ್ಪರ್ಶ ಮಾಡಿದೆ. ಹಾಗಾಗಿ ಹಿಂದಿನ ದಶಕಗಳಿಗೆ ಹೋಲಿಸಿದರೆ ೮೦ ರದಶಕದಲ್ಲಿ ನೃತ್ಯಕ್ಷೇತ್ರದ ಒಳಹುಳುಕುಗಳನ್ನು, ಸಾಮಾಜಿಕ ನೆಲೆಯನ್ನು ಪ್ರೌಢಮಟ್ಟದಲ್ಲಿ ಗುರುತಿಸುವ, ಸಮಸ್ಯೆಗಳಿಂದ ಪಲಾಯನ ಮಾಡದೆ ಅಥವಾ ನಾಟಕೀಯವೆಂಬಂತೆ ಕಾಣಿಸದೆ ಇತ್ಯಾತ್ಮಕವಾಗಿ ಪರಿಹರಿಸಿಕೊಳ್ಳುವ ನೆಲೆಯನ್ನು ಚಿಂತಿಸುವ ಪ್ರಯತ್ನವಾಗಿದೆಯೆಂದು ಹೇಳಬಹುದು.

ವಿಮರ್ಶೆ, ಪತ್ರಿಕಾ ನೀತಿ, ಕಲಾವಿದರ ಕುಟಿಲತೆಗಳ ವೈಭವಕ್ಕೆ ಇಲ್ಲಿ ಅಷ್ಟಾಗಿ ಅವಕಾಶವಿಲ್ಲ. ಆದರೆ ವಸ್ತು, ವಿಷಯ, ನೃತ್ಯದ ಕುರಿತು ಹೇಳುವ ಭರಕ್ಕೆ ವರದಿಯಾಗಿಯೋ, ವ್ಯಾಖ್ಯಾನವಾಗಿಯೋ, ಚರ್ಚೆಯಾಗಿಯೋ ಅಥವಾ ಬಾಯಿಮಾತಿಗೋ ಹಾರಿಹೋಗಬಹುದಾಗಿದ್ದ ಎಷ್ಟೋ ಸಂಗತಿಗಳನ್ನು ಒಂದಿಷ್ಟೂ ಘಾಸಿಗೊಳಿಸದೆ, ವಿಚ್ಛೇದ ಮಾಡದೆ ಸಮಗ್ರವಾದ ಭಾವನೆ, ಆಸ್ವಾದ ಉಳಿಸುವ ಕೆಲಸ ಈ ಕಾದಂಬರಿಯಲ್ಲಿ ನಡೆದಿದೆ. ನೃತ್ಯವನ್ನೂ, ಕಲಾವಿದರ ವೈಯಕ್ತಿಕ ಸಾಂಸಾರಿಕ ಬದುಕಿನ ಏಳುಬೀಳುಗಳನ್ನು ಹೊಂದಿಸಿ ನೋಡುವುದು ಇಲ್ಲಿ ಸಾಧ್ಯವಾಗಿದೆ. ಆದ್ದರಿಂದ ಯಾವುದೇ ಪಾತ್ರವಾದರೂ ಎಲ್ಲದಕ್ಕೂ ಪೂರ್ಣ ಪೋಷಣೆ ಇಲ್ಲಿ ಲಭ್ಯವಾದ ಭಾವ ಒದಗಿದ್ದು ಈ ಹಿಂದಿನ ಎರಡು ಕಾದಂಬರಿಗಳಲ್ಲಾದ ಅಪಾಯಗಳನ್ನು ಮೀರುವ ಕಾರ್ಯ ಇಲ್ಲಿ ನಡೆದಿದೆ.

ಕಾದಂಬರಿಯ ನಾಯಕಿ ಗಾಯತ್ರಿ ನಾಟ್ಯ ಕ್ಷೇತ್ರದಲ್ಲಿ ಹೆಚ್ಚಿನ ಅರಿವು, ಪ್ರತಿಭೆ ಪಡೆದವಳು. ಈಕೆ ಅತಿಕಾಮಿಯೂ ಅಲ್ಲ; ಒಂಟಿದನಿಯ ಪ್ರತಿಷ್ಠಾಪ್ರೇಮಿಯೂ ಅಲ್ಲ. ನಾಟ್ಯವೇ ತನ್ನ ಜೀವನದ ಉಸಿರು; ಅದಿಲ್ಲದೆ ತಾನಿರಲಾರೆ- ಎಂದು ಹಂಬಲಿಸಿ ಅದಕ್ಕಾಗಿ ಜೀವ ತೇಯ್ವ ಉದಾತ್ತ ಮನಸ್ಸಿನವಳು. ಆದರೆ ಅವಳ ನಾಟ್ಯಕಲೆಗೆ ಉಸಿರು ತುಂಬುತ್ತಿದ್ದ ಪತಿ ಕ್ರಮೇಣ ತನ್ನ ಈರ್ಷ್ಯೆ, ಸ್ವಾರ್ಥ, ಸಂಕುಚಿತ ದೃಷ್ಟಿಗಳಿಂದ ಆಕೆಯ ಪ್ರತಿಭೆಯ ಅಭಿವ್ಯಕ್ತಿಗೆ ಉಪಾಯವಾಗಿ ತಡೆಯೊಡ್ಡಲು ಪ್ರಯತ್ನಿಸಿದಾಗ, ಆತನನ್ನು ವಿರೋಧಿಸಿ, ತಿರಸ್ಕೃತಳಾಗಿ ತನ್ನ ಮಕ್ಕಳನ್ನೂ ಅಗಲಿರಬೇಕಾದ ಪರಿಸ್ಥಿತಿ ಒದಗುತ್ತದೆ. ಒಂದೆಡೆ ಕಲಾಜಗತ್ತು, ಮತ್ತೊಂದೆಡೆ ಸಂಸಾರಜೀವನ ಕೈಬೀಸಿ ಕರೆಯುವಾಗ ಒಂದನ್ನು ಆರಿಸಿದರೆ ಇನ್ನೊಂದು ಅವಳ ಪಾಲಿಗಿಲ್ಲ ಎಂಬ ಚಿತ್ರಣ. ಈ ಸಂದರ್ಭದಲ್ಲಿ ಆಕೆ ತೆಗೆದುಕೊಳ್ಳುವ ನಿರ್ಧಾರ, ನೃತ್ಯದೆಡೆಗಿನ ಶ್ರದ್ಧೆ-ಪ್ರೀತಿ, ಸಾತ್ತ್ವಿಕ ಮನಸ್ಸು, ಮಾನಸಿಕ ತಳಮಳವನ್ನು ಮೆಟ್ಟಿ ನಿಂತು ಸಾಧಿಸುವ ಯತ್ನ, ರಾಜಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಕಾದಂಬರಿಯ ಪ್ರಧಾನ ವಸ್ತು.

ಇವುಗಳ ನಡುವೆ ಉಪಕಥೆಗಳಂತೆ ನೃತ್ಯಕ್ಷೇತ್ರದ ಅಪ್ರಬುದ್ಧ ಕಲಾವಿದರ ನಡವಳಿಕೆ, ಪ್ರತಿಷ್ಠೆ-ಹಣಕ್ಕಾಗಿ ಬಳಸಿಕೊಳ್ಳುವವರ ನಡವಳಿಕೆ, ಕಲಾಪೋಷಕರ ಪ್ರೋತ್ಸಾಹದ ಮಜಲುಗಳು, ಹಿನ್ನೆಲೆಗಾಯನ ಮತ್ತು ಪಕ್ಕವಾದ್ಯದವರ ನಿರೀಕ್ಷೆಗಳು, ಪ್ರೇಕ್ಷಕರ ನಿಲುವು, ಮಧ್ಯಮವರ್ಗದ ಕಲಾವಿದರ ಸುಖ-ದುಃಖ-ನಿರೀಕ್ಷೆ-ಪರೀಕ್ಷೆ-ನಿರ್ಧಾರ-ಅಸಹಾಯಕತೆ-ತೊಳಲಾಟ- ಧರ್ಮ-ಕರ್ಮ ಇತ್ಯಾದಿ ಬದುಕಿನ ಘಟ್ಟಗಳು, ಕಲಾಸಂಘಗಳ ಚಟುವಟಿಕೆಯ ಕ್ರಮಗಳು, ನಾಟ್ಯ-ನೃತ್ಯದ ಕಲಿಕಾ ಮಾದರಿಗಳು, ಅರ್ಧಂಬರ್ಧ ಕಲಿತು ಕಲಿಸುವವರ ಅಪಾಯಗಳು, ಕಲಾವಿದರಿಗಿರಬೇಕಾದ ನಡವಳಿಕೆಗಳು, ನೃತ್ಯ ಪ್ರದರ್ಶನಕ್ಕೆ ಅಗತ್ಯವಾದ ಪ್ರತಿಭಾ ವಿಸ್ತಾರ, ಲಕ್ಷಣ ಮತ್ತು ಚಾಕಚಕ್ಯತೆಗಳು, ನಾಟ್ಯಾಚಾರ್ಯರ, ಸರ್ಕಾರ ಮತ್ತು ಸಂಘಟಕರ ರೀತಿನೀತಿಗಳನ್ನು, ಕಲಾವಿದರ ಪ್ರಯಾಣ-ಆತಿಥ್ಯಾದಿ ವಿಶೇಷಗಳನ್ನು, ನೃತ್ಯಕ್ಷೇತ್ರದ ಅಪೇಕ್ಷಿತ-ಅನಪೇಕ್ಷಿತ ಗುಣಗಳನ್ನು, ಅದರೊಂದಿಗಿನ ಸಮಾಜದ ನೋಟವನ್ನು ದೃಷ್ಟಿಸುವ ಸಂದರ್ಭಗಳು ಕಾದಂಬರಿಯುದ್ದಕ್ಕೂ ಸರಾಗವಾಗಿ ಲಭ್ಯವಾಗುತ್ತದೆ.

ವಿಶಾಲ ಮನಸ್ಸಿನಿಂದ ಮದುವೆಯಾದರೂ ಕ್ರಮೇಣ ಸಂಕುಚಿತ ದೃಷ್ಟಿಯೊಳಗೆ ತನ್ನ ನೃತ್ಯಗಾತಿ ಹೆಂಡತಿಯನ್ನು ಬೇರೆಬೇರೆ ದಾರಿಗಳಿಂದ ನಲುಗಿಸುತ್ತಾ ಕೊನೆಗೆ ಮಕ್ಕಳ ಮಾನಸಿಕಸ್ಥಿತಿಯನ್ನು ನೋಡಿ ಬದಲಾಗುವ ರಜೋಗುಣದ ಗಂಡ ದಯಾನಂದ; ಅಮ್ಮನ ಪ್ರತಿಭೆಯ ಬಗ್ಗೆ ಅರಿವಿದ್ದೂತಿ ಪ್ರೀತಿಗಾಗಿ ಹಪಹಪಿಸಿ ಆರೋಗ್ಯ ಕಳೆದುಕೊಂಡು ನಲುಗುವ ಮಕ್ಕಳು ಸುರೇಖಾ, ಸ್ವಪ್ನ; ಸೊಸೆಯ ಪ್ರತಿಭೆಗೆ ಮೆಚ್ಚುಗೆ ಇದ್ದರೂ ಸಾಂಸಾರಿಕ ಜವಾಬ್ದಾರಿಗಳನ್ನು ನಿರ್ವಹಿಸಬೇಕೆನ್ನುತ್ತ್ತಾ ಗಾಯತ್ರಿಯ ಹಟಕ್ಕೆ, ಮಗನ ತಾತ್ಸಾರ ಪ್ರವೃತ್ತಿಗೆ ಮೂಕಪ್ರೇಕ್ಷಕಳಾಗುತ್ತಲೇ ತಮ್ಮ ವಯೋಸಹಜ ಅಗತ್ಯಗಳಿಗೆ ಹಪಹಪಿಸುವ, ಮನೆಯ ಗೌರವಕ್ಕೆ, ಅಗತ್ಯಕ್ಕೆ ನಿಲ್ಲುವ ಅತ್ತೆ ವೆಂಕಮ್ಮ; ಸಂಸಾರದ ಸುಖ, ಜವಾಬ್ದಾರಿಯ ನಡುವೆ ನೃತ್ಯದ ಕುರಿತ ಗಾಯತ್ರಿಯ ಆಸಕ್ತಿ, ಹಟಗಳು ಯೋಗ್ಯವಲ್ಲ ಎಂದು ಮಗಳ, ಮೊಮ್ಮಕ್ಕಳ ಸಾಂಸಾರಿಕ ಸುಖವನ್ನೇ ಬಯಸುವ ತಾಯಿ ತಂದೆ ರಾಮಕೃಷ್ಣಯ್ಯ-ಕೋಮಲಮ್ಮ; ಗಾಯತ್ರಿ ಪ್ರೀತಿಯಿಂದ ಕಟ್ಟಿಸಿದ ಕಲಾಕುಂಜಕ್ಕೆ, ಬದುಕಿಗೆ ಒತ್ತಾಸೆಯಾಗಿ ಪೋಷಕರಾಗಿ ನಿಲ್ಲುವ ಗೆಳತಿ ಪ್ರಭಾ ಮತ್ತವಳ ಗಂಡ ವಾಮನ ಪೈ; ನೃತ್ಯದ ಬಗ್ಗೆ ತಿಳಿದುಕೊಂಡರೂ ಉಡಾಫೆಯ, ಆಧುನಿಕ ಮನೋಧರ್ಮಕ್ಕೆ ಹೆಚ್ಚು ಆತುಕೊಳ್ಳುವ, ಪ್ರತಿಷ್ಠೆಗಾಗಿ ಪದವಿ ನಿರೀಕ್ಷೆ ಮಾಡುತ್ತಲೇ ಸದಭಿರುಚಿಯ ನಡೆಗಳಿಗೆ ತೆರೆದುಕೊಳ್ಳುವ, ಸಂಸ್ಕೃತಿಯ ಉತ್ಕೃಷ್ಟತೆಯ ಅರಿವುಳ್ಳ ಸತ್ಯಭಾಮಾ; ಭವಿಷ್ಯದ ಮದುವೆ ಯೋಗಕ್ಕೆ ಕಾದು ಕುಳಿತು ಸಮಯಹರಣಕ್ಕಾಗಿ ನೃತ್ಯ ಕಲಿತವಳಂತೆ ವರ್ತಿಸುತ್ತಾ ನಿಧಾನವಾಗಿ ಮಾಗುವ ಮಣಿರೇಖ; ವಯಸ್ಸಾದರೂ ನೃತ್ಯಾಸಕ್ತಿ ಇರುವ, ಪ್ರತಿಭೆ ಹೊಂದಿಯೂ ಕಲಿಕೆಯೆಡೆಗೆ ತಾಳ್ಮೆ ಇಲ್ಲದೆ ತತ್‌ಕ್ಷಣದ ಪ್ರಸಿದ್ಧಿ, ಹಣ ಮಾಡಿಕೊಳ್ಳುವ ಇರಾದೆಗೆ ಬಲಿಯಾಗುವ ಮನೋಹರಿ; ಹೆಂಡತಿ ನೃತ್ಯ ಕಲಿಯಲು ವಿರೋಧವಿದ್ದರೂ ನೃತ್ಯವನ್ನು ಬಳಸಿ ಹಣಸಂಪಾದನೆ ಮಾಡಲು ಹೊರಟಾಗ ಇಂಬು ಕೊಡುವ ಮನೋಹರಿಯ ಗಂಡ; ತಾನು ಕಲಿತ ಕೂಚಿಪುಡಿ ಕಲೆಯ ಕುರಿತು ಮನುಷ್ಯಸಹಜವೆಂಬಂತ ಅಗಾಧ ಒಲವನ್ನು, ಇತರೆ ನೃತ್ಯಕಲೆಗಳೆಡೆಗೆ ಓರೆನೋಟವನ್ನು ಬೀರುವ, ಅಪಘಾತದಲ್ಲಿ ಕಾಲು ಮುರಿದುಕೊಂಡರೂ ನೃತ್ಯೋತ್ಸಾಹ ಕುಗ್ಗದ ಸುಸಂಸ್ಕೃತ ಹಿರಿಯ ಕಲಾವಿದೆ ನಾಟ್ಯರಾಣಿ ಅರುಂಧತಿದೇವಿ; ಮದುವೆಯಾಗಲು ಆಸಕ್ತಿಯಿದ್ದಾಗ್ಯೂ ಮುಂದೂಡುತ್ತಲೇ ಬರುವ ತಾಯಿ ಅರುಂಧತಿಯ ಗುಣವನ್ನು ವಿರೋಧಿಸದೆ ನರ್ತನಾದಿ ಕಲೆಗಳ ಮೇಲೆ ಅಪಾರ ಗೌರವವಿಟ್ಟುಕೊಂಡು ಗಾಯತ್ರಿಯ ಕಲೆಯನ್ನು, ನಡವಳಿಕೆಯನ್ನು ಅರಿತು ಆರಾಧಿಸುತ್ತಾ, ಅವಳೇ ಆಯ್ಕೆ ಮಾಡಿದ ಮಣಿರೇಖಾಳನ್ನು ಮದುವೆಯಾಗಲೊಪ್ಪುವ ಸಹೃದಯಿ, ಸಂಘಟನಾ ಚತುರ ಸುಧೀರ್ ಕುಮಾರ್ ಕಾದಂಬರಿಯ ಪ್ರಧಾನ ಪಾತ್ರಗಳು. ನೃತ್ಯ ಕಲೆಯೊಂದಿಗೆ ಬೆಸೆದ ಈ ಎಲ್ಲಾ ಪಾತ್ರಗಳು ಇಂದಿನ ಸಮಾಜದಲ್ಲಿನ ಹಲವು ವ್ಯಕ್ತಿತ್ವಗಳ ಉದಾಹರಣೆಯೆಂಬಂತೆ ಕಾಣಿಸಿಕೊಳ್ಳುವುದು ಕಾದಂಬರಿಯಲ್ಲಡಗಿರುವ ಗಟ್ಟಿತನಕ್ಕೆ ಉದಾಹರಣೆ.

ನೂಪುರ ಗಾನ ಕಲಾವಿದರ ಆಸಕ್ತಿ ಮತ್ತು ವಾಸ್ತವ ಬದುಕನ್ನು ಹೊಂದಿಸಿ ನೋಡುವ ಕಾದಂಬರಿಯಾಗಿದ್ದು ಕಲಾವಿದರ ಮದುವೆ, ಮಕ್ಕಳು ಮತ್ತು ಸಂಸಾರದ ಪೋಷಣೆಯನ್ನು, ಪರಸ್ಪರ ಒಂದರೊಳಗೊಂದು ಒಗ್ಗಿಕೊಳ್ಳಬೇಕಾದ ಅನಿವಾರ್ಯ ಅಗತ್ಯಗಳೊಂದಿಗೆ ತಮ್ಮತನವನ್ನು ಕಾಪಿಡಬೇಕಾದ ಒಳಸುಳಿಗಳನ್ನು ಹಲವು ಆಯಾಮಗಳಲ್ಲಿ ಬಿಚ್ಚಿಡುತ್ತಾ ಹೋಗುತ್ತದೆ. ಕಲೆಯ ಕುರಿತಾಗಿ ಮನುಷ್ಯರಲ್ಲಿರುವ ರಜೋ, ತಮೋ, ಸಾತ್ತ್ವಿಕ ಗುಣಗಳ ಹದವಾದ ಮಿಶ್ರಣವನ್ನು ಪ್ರತಿಯೊಂದು ಪಾತ್ರದ ವ್ಯಕ್ತಿತ್ವದಲ್ಲೂ ಕಾಣಬಹುದಾದ ಗುಣ ಕಾದಂಬರಿಯಲ್ಲಿದೆ. ನೃತ್ಯದ ಕುರಿತ ಮಡಿವಂತಿಕೆಯ ಶಿಸ್ತುಗಳನ್ನು, ನೃತ್ಯದ ಕುರಿತ ಗೌರವ-ಅಗೌರವದ ಭಾವನೆಗಳಲ್ಲಾಗುವ ಪಲ್ಲಟದ ದಿಕ್ಕನ್ನು, ಇವೆಲ್ಲವನ್ನೂ ಮೀರಿದ ರಸಮೀಮಾಂಸೆ, ಕಲಾಸೌಂದರ್ಯವನ್ನು ದರ್ಶಿಸುತ್ತಾ ಕಲಾವಿದರ, ಕಲೆಯ ಮತ್ತು ಸಮಾಜದ ಕುರಿತ ವಿವಿಧ ಭಾವಗಳನ್ನು ಔಚಿತ್ಯಪೂರ್ಣವಾಗಿ ಕಾಣುತ್ತಾ ಸೊಗಸಾದ ಷಡ್ರಸದ ಅಡುಗೆಯಂತೆ ಮಾಡಿ ಒಂದೇ ಬಟ್ಟಲಲ್ಲಿಟ್ಟು ಕೊಡುವ ಕೆಲಸವನ್ನು ಕಾದಂಬರಿ ಮಾಡಿದೆ. ವಿಪರ್ಯಾಸವೆಂದರೆ ಈ ಕಾದಂಬರಿಯ ಕುರಿತಾಗಿ ಯಾವುದೇ ವಿಮರ್ಶೆಗಳು ಉಳಿದ ಕಾದಂಬರಿಗಳಿಗೆ ಒದಗಿದಂತೆ ಸಮಾಜಮುಖಿಯಾಗಿ ತೆರೆದುಕೊಂಡಿಲ್ಲ.

Leave a Reply

*

code